ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ನಶಾ ಮುಕ್ತ ಭಾರತ ಅಭಿಯಾನದಡಿಯಲ್ಲಿ ಆಧ್ಯಾತ್ಮಿಕ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ವಿಸ್ತರಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ


ನಾಳೆ ನವದೆಹಲಿಯಲ್ಲಿ ನಾಲ್ಕು ಆಧ್ಯಾತ್ಮಿಕ ಸಂಸ್ಥೆಗಳೊಂದಿಗೆ ತಿಳುವಳಿಕಾ ಒಪ್ಪಂದಗಳಿಗೆ ಸಹಿ

ಪ್ರಕಟಣಾ ದಿನಾಂಕ: 08 SEP 2026 6:41PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು, ಮಾದಕದ್ರವ್ಯ ಮುಕ್ತ ಭಾರತವನ್ನು ನಿರ್ಮಿಸುವ ಜಂಟಿ ದೃಷ್ಟಿಕೋನವನ್ನು ಮುನ್ನಡೆಸಲು 'ನಶಾ ಮುಕ್ತ ಭಾರತ ಅಭಿಯಾನ'ದ (ಎನ್ ಎಂ ಬಿ ಎ ) ಅಡಿಯಲ್ಲಿ ಆಧ್ಯಾತ್ಮಿಕ ಸಂಸ್ಥೆಗಳೊಂದಿಗಿನ ತನ್ನ ಸಹಯೋಗವನ್ನು ವಿಸ್ತರಿಸುತ್ತಿದೆ.

ಸಮುದಾಯಗಳಿಗೆ ಮಾರ್ಗದರ್ಶನ ನೀಡುವಲ್ಲಿ, ಶಿಸ್ತನ್ನು ಮೂಡಿಸುವಲ್ಲಿ ಮತ್ತು ಮೌಲ್ಯಾಧಾರಿತ ಜೀವನವನ್ನು ಉತ್ತೇಜಿಸುವಲ್ಲಿ ಆಧ್ಯಾತ್ಮಿಕ ಸಂಸ್ಥೆಗಳ ಪ್ರಮುಖ ಪಾತ್ರವನ್ನು ಗುರುತಿಸಿ, ಇಲಾಖೆಯು ಮಾದಕ ದ್ರವ್ಯ ಸೇವನೆಯ ವಿರುದ್ಧ ಜಾಗೃತಿ ಮತ್ತು ಪ್ರಚಾರವನ್ನು ಬಲಪಡಿಸಲು ಪ್ರಮುಖ ಆಧ್ಯಾತ್ಮಿಕ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ.

ಈ ಉಪಕ್ರಮದ ಮುಂದುವರಿದ ಭಾಗವಾಗಿ, ಇಲಾಖೆಯು ಅಧ್ಯಾತ್ಮ ವಿಜ್ಞಾನ ಸತ್ಸಂಗ ಕೇಂದ್ರ, ಚಿನ್ಮಯ ಮಿಷನ್, ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ ಮತ್ತು ಹರೇ ಕೃಷ್ಣ ಮೂವ್ ಮೆಂಟ್ ನೊಂದಿಗೆ ತಿಳುವಳಿಕಾ ಒಪ್ಪಂದಗಳಿಗೆ  ಸಹಿ ಹಾಕಲಿದೆ. ಈ ಸಹಿ ಹಾಕುವ ಸಮಾರಂಭವು ರಾಷ್ಟ್ರೀಯ ರಾಜಧಾನಿಯಲ್ಲಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ನಾಳೆ ಬುಧವಾರ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶು ಪಂತ್, ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಪೂಜ್ಯ ಆಧ್ಯಾತ್ಮಿಕ ಗುರುಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ಈ ಹಿಂದೆ, ಆರ್ಟ್ ಆಫ್ ಲಿವಿಂಗ್, ಬ್ರಹ್ಮಕುಮಾರೀಸ್, ಸಂತ ನಿರಂಕಾರಿ ಮಿಷನ್, ಇಸ್ಕಾನ್, ಶ್ರೀ ರಾಮಚಂದ್ರ ಮಿಷನ್, ಆಲ್ ವರ್ಲ್ಡ್ ಗಾಯತ್ರಿ ಪರಿವಾರ, ಸಿವಾನಂದ ಯೋಗ ವೇದಾಂತ ಧನ್ವಂತರಿ ಆಶ್ರಮ ಮತ್ತು ಪತಂಜಲಿ ವಿಶ್ವವಿದ್ಯಾಲಯಗಳೊಂದಿಗೆ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು.

ಈ ಪಾಲುದಾರಿಕೆಗಳು ಸಮೂಹ ಜಾಗೃತಿ ಕಾರ್ಯಕ್ರಮಗಳು, ಸ್ವಯಂಸೇವಕರ ಸಜ್ಜುಗೊಳಿಸುವಿಕೆ ಮತ್ತು ವ್ಯಸನಮುಕ್ತಿ ಪ್ರಯತ್ನಗಳಲ್ಲಿ ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕ ಸಮಾಲೋಚನೆಗಳನ್ನು ಸಂಯೋಜಿಸಲು ಬೆಂಬಲ ನೀಡಿವೆ.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮತ್ತು

ನಶಾ ಮುಕ್ತಿ ಮಿತ್ರ ಆಗಿ ನೋಂದಾಯಿಸಿಕೊಳ್ಳಿರಿ!

ಆಧ್ಯಾತ್ಮಿಕ ಸಂಸ್ಥೆಗಳ ಭಾಗವಹಿಸುವಿಕೆಯು ನೈತಿಕ ಮಾರ್ಗದರ್ಶನವನ್ನು ನೀಡುತ್ತದೆ, ಚೇತರಿಕೆಯನ್ನು ಬೆಳೆಸುತ್ತದೆ ಮತ್ತು ತಳಮಟ್ಟದಲ್ಲಿ ಸಮುದಾಯಗಳನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ. ಆಧ್ಯಾತ್ಮಿಕ ಶಕ್ತಿಯನ್ನು ಸಾಮಾಜಿಕ ಸಜ್ಜುಗೊಳಿಸುವಿಕೆಯೊಂದಿಗೆ ಸಂಯೋಜಿಸುವ ಮೂಲಕ, ತಡೆಗಟ್ಟುವಿಕೆ ಮತ್ತು ಚೇತರಿಕೆಯ ಸಂದೇಶವು ಸಮಾಜದ ವಿವಿಧ ವರ್ಗಗಳಲ್ಲಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಎನ್ ಎಂ ಬಿ ಎ  ಶ್ರಮಿಸುತ್ತದೆ.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮತ್ತು

ಎನ್ ಎಂ ಬಿ ಎ  ಇ-ಪ್ರತಿಜ್ಞೆ ಮಾಡಿರಿ!

ಈ ಪಾಲುದಾರಿಕೆಗಳು 'ನಶೆ ಮುಕ್ತ ಭಾರತ'ದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಅಗತ್ಯವಿರುವ ಸಾಮೂಹಿಕ ಸಂಕಲ್ಪ ಮತ್ತು ಸಂಪೂರ್ಣ ಸಮಾಜದ ವಿಧಾನವನ್ನು ಬಲಪಡಿಸುತ್ತವೆ ಹಾಗೂ 'ವಿಕಸಿತ ಭಾರತ'ದತ್ತ ಪ್ರಯಾಣಿಸುವ ಹಾದಿಯಲ್ಲಿ ಆರೋಗ್ಯಕರ, ಬಲವಾದ ಮತ್ತು ಹೆಚ್ಛು ಚೇತರಿಕೆ  ಹೊಂದಿರುವ ರಾಷ್ಟ್ರಕ್ಕೆ ಕೊಡುಗೆ ನೀಡುತ್ತವೆ ಎಂದು ಸಚಿವಾಲಯ ನಂಬುತ್ತದೆ.

ಎನ್ ಎಂ ಬಿ ಎ ಆ್ಯಪ್ ಡೌನ್ ಲೋಡ್ ಮಾಡಲು

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿರಿ!

 

*****


(ಪ್ರಕಟಣೆ ಐ.ಡಿ.: 2308108) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Telugu