ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ನಶಾ ಮುಕ್ತ ಭಾರತ ಅಭಿಯಾನದ 6ನೇ ವಾರ್ಷಿಕೋತ್ಸವದ ಅಂಗವಾಗಿ ಮಾದಕ ದ್ರವ್ಯ ಸೇವನೆ ವಿರುದ್ಧ ರಾಷ್ಟ್ರೀಯ ಪ್ರತಿಜ್ಞಾವಿಧಿ; ಈ ತಿಂಗಳ ಅಂತ್ಯದಲ್ಲಿ ಬೃಹತ್ ರಾಷ್ಟ್ರೀಯ ಕಾರ್ಯಕ್ರಮ


ನಶಾ ಮುಕ್ತ ಭಾರತ ಅಭಿಯಾನದ ಉದ್ದೇಶಗಳಿಗೆ ಅನುಗುಣವಾಗಿ ದೇಶವ್ಯಾಪಿ ಪ್ರತಿಜ್ಞಾವಿಧಿಯಲ್ಲಿ 10 ಕೋಟಿಗೂ ಹೆಚ್ಚು ನಾಗರಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಕಾರ್ಯತಂತ್ರ ಮತ್ತು ಯೋಜನೆಯ ಕುರಿತು ಚರ್ಚಿಸಿದ 3ನೇ ಉನ್ನತ ಮಟ್ಟದ ಸಮನ್ವಯ ಸಭೆ

ಎನ್ ಎಂ ಬಿ ಎ ಇ-ಪ್ರತಿಜ್ಞಾವಿಧಿ ಕೊಂಡಿ : https://nashamukt.dosje.gov.in/epledge

ಪ್ರಕಟಣಾ ದಿನಾಂಕ: 08 SEP 2026 6:22PM by PIB Bengaluru

ನಶಾ ಮುಕ್ತ ಭಾರತ ಅಭಿಯಾನದ (ಎನ್ ಎಂ ಬಿ ಎ) 6ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಈ ತಿಂಗಳ ಅಂತ್ಯದ ವೇಳೆಗೆ 10 ಕೋಟಿಗೂ ಹೆಚ್ಚು ನಾಗರಿಕರನ್ನು ವೈಯಕ್ತಿಕವಾಗಿ ಮತ್ತು ಆನ್ ಲೈನ್ ವಿಧಾನಗಳ ಮೂಲಕ ಮಾದಕ ದ್ರವ್ಯ ಸೇವನೆಯ ವಿರುದ್ಧ ರಾಷ್ಟ್ರೀಯ ಪ್ರತಿಜ್ಞಾವಿಧಿಯನ್ನು ಮಾಡಲು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.

ನಡೆಯುತ್ತಿರುವ ಸಿದ್ಧತೆಗಳ ಭಾಗವಾಗಿ, ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾದಕದ್ರವ್ಯ ತಡೆಗಟ್ಟುವಿಕೆ) ಡಾ. ಸಂದೀಪ್ ರೇವಾಜಿ ರಾಥೋಡ್ ಅವರ ಅಧ್ಯಕ್ಷತೆಯಲ್ಲಿ ಇಂದು ದೇಶದ ರಾಜಧಾನಿಯಲ್ಲಿ ಮೂರನೇ ಉನ್ನತ ಮಟ್ಟದ ಸಮನ್ವಯ ಸಭೆ ನಡೆಯಿತು. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವರಿಸಿದಂತೆ ನಶಾ ಮುಕ್ತ ಭಾರತ ಅಭಿಯಾನದ ಉದ್ದೇಶಗಳಿಗೆ ಅನುಗುಣವಾಗಿ, ರಾಷ್ಟ್ರವ್ಯಾಪಿ ಪ್ರತಿಜ್ಞೆ ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ 10 ಕೋಟಿಗೂ ಹೆಚ್ಚು ನಾಗರಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಕಾರ್ಯತಂತ್ರವನ್ನು ಯೋಜಿಸುವುದು ಮತ್ತು ರೂಪಿಸುವುದರ ಮೇಲೆ ಸಭೆ ಗಮನಹರಿಸಿತು.

ದೇಶಾದ್ಯಂತ ವಿವಿಧ ವರ್ಗದ ಜನರ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿರುವ ಮಾದಕ ದ್ರವ್ಯ ಸೇವನೆಯ ಅಪಾಯಗಳು ಮತ್ತು ಸವಾಲುಗಳ ಕುರಿತು ಸಾಮಾನ್ಯ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ಪಾಲುದಾರರನ್ನು ಸಜ್ಜುಗೊಳಿಸಲು 'ಸಂಪೂರ್ಣ ಸರ್ಕಾರ' ಮತ್ತು 'ಸಂಪೂರ್ಣ ಸಮಾಜ' ವಿಧಾನವನ್ನು ಅಳವಡಿಸಿಕೊಳ್ಳುವ ಮಹತ್ವದ ಕುರಿತು ಡಾ. ರಾಠೋಡ್ ಅವರು ಭಾಗವಹಿಸಿದವರಿಗೆ ವಿವರಿಸಿದರು.

ಈ ಸಭೆಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ (ಡಿಪಿ) ನಿರ್ದೇಶಕರಾದ ಶ್ರೀ ಆಸ್ತಿಕ್ ಕುಮಾರ್ ಪಾಂಡೆ, ಉಪ ಕಾರ್ಯದರ್ಶಿ ಶ್ರೀ ಅರುಣ್ ಕುಮಾರ್ ಕರ್ಣ್ ಸೇರಿದಂತೆ ಸಚಿವಾಲಯದ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಭೆಯು ಸಮಗ್ರ ಅನುಷ್ಠಾನ ಕಾರ್ಯತಂತ್ರಕ್ಕಾಗಿ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲಿಸಿತು. ರಾಷ್ಟ್ರವ್ಯಾಪಿ ಪ್ರತಿಜ್ಞಾವಿಧಿಗಾಗಿ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು, ಸ್ವಯಂಸೇವಕರು ಮತ್ತು ಇತರ ಪಾಲುದಾರರನ್ನು ಸಜ್ಜುಗೊಳಿಸುವಲ್ಲಿ ವಿವಿಧ ಸಂಬಂಧಪಟ್ಟ  ಸಚಿವಾಲಯಗಳು ಮತ್ತು ಇಲಾಖೆಗಳ ಪಾತ್ರದ ಕುರಿತು ಚರ್ಚಿಸಿ ಪರಿಶೀಲಿಸಲಾಯಿತು.

ರೈಲ್ವೆ, ರಕ್ಷಣೆ, ನಾಗರಿಕ ರಕ್ಷಣೆ, ಯುವಜನ ವ್ಯವಹಾರಗಳು ಮತ್ತು ಕ್ರೀಡೆ, ಶಾಲಾ ಮತ್ತು ಉನ್ನತ ಶಿಕ್ಷಣ, ಅಂಚೆ, ಪೊಲೀಸ್, ಸಿಎಪಿಎಫ್  , ಎನ್ ಸಿಸಿ, ಆಯುಷ್, ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಂದಾಯ ಇಲಾಖೆಗಳ ಜೊತೆಗೆ ಸಾಮಾಜಿಕ, ಸ್ವಯಂಸೇವಾ ಸಂಸ್ಥೆ, ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ಸಾಮಾಜಿಕ  ಮಾದ್ಯಮಗಳ ಪ್ರಭಾವಿಗಳನ್ನು  (ಸೋಷಿಯಲ್ ಇನ್- ಫ್ಲುಯನ್ಸರ್ಸ್) ಒಳಗೊಂಡಂತೆ ಎಲ್ಲಾ ಸಂಯೋಜಿತ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು   ಮತ್ತು ಕ್ಷೇತ್ರ ರಚನೆಗಳಲ್ಲಿ ಪ್ರತಿಜ್ಞಾವಿಧಿ ಸಮಾರಂಭಗಳನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಭಾಗವಹಿಸುವಿಕೆಯ ವಿವರಗಳು ಮತ್ತು ಜನಸಂಪರ್ಕ ಕಾರ್ಯಕ್ರಮಗಳನ್ನು  ಸಲ್ಲಿಸಲು 'ಏಕರೂಪ ವರದಿ ವ್ಯವಸ್ಥೆ'  ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಪವರ್ ಪಾಯಿಂಟ್ ಪ್ರಸ್ತುತಿಯ ಮೂಲಕ ಯೋಜನೆ ಮತ್ತು ಸಂಘಟಿತ ಕಾರ್ಯತಂತ್ರವನ್ನು ವಿವರವಾಗಿ ಚರ್ಚಿಸಲಾಯಿತು, ಸಂಬಂಧಪಟ್ಟ ಇಲಾಖೆಗಳು ಮತ್ತು ಸಚಿವಾಲಯಗಳ ಎಲ್ಲಾ ಪ್ರತಿನಿಧಿಗಳು ಸಕ್ರಿಯವಾಗಿ ಚರ್ಚಿಸಿದರು.

 ಎನ್ ಎಂ ಬಿ ಎ  ಪ್ರತಿಜ್ಞೆಯು ಮಾದಕ ದ್ರವ್ಯ ಸೇವನೆಯಿಂದ ಸಂತ್ರಸ್ತರಾದವರನ್ನು ತಲುಪಲು ಸ್ವಯಂಪ್ರೇರಿತರಾಗಿ ಕಾರ್ಯನಿರ್ವಹಿಸುವ ಒಂದು ಉಪಕ್ರಮವಾಗಿದೆ. ಮಾದಕ ದ್ರವ್ಯಗಳಿಂದ ದೂರವಿರಲು ಜನರಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸಲು, ಜವಾಬ್ದಾರಿಯುತ ನಡವಳಿಕೆಯನ್ನು ಉತ್ತೇಜಿಸಲು ಮತ್ತು ಸಾಮಾನ್ಯ ಗುರಿಯತ್ತ ಒಟ್ಟಾಗಿ ಕೆಲಸ ಮಾಡಲು ಪಾಲುದಾರರನ್ನು ಪ್ರೋತ್ಸಾಹಿಸಲು ಒಗ್ಗಟ್ಟು ಮತ್ತು ಬದ್ಧತೆಯ ಭಾವನೆಯನ್ನು ಬೆಳೆಸುವ ಗುರಿಯನ್ನು ಈ ಪ್ರತಿಜ್ಞೆಯು ಹೊಂದಿದೆ. ಮಾದಕದ್ರವ್ಯ ಮುಕ್ತ ಸಮಾಜವನ್ನು ನಿರ್ಮಿಸಲು ಸಕ್ರಿಯವಾಗಿ ಕೊಡುಗೆ ನೀಡಲು ಯುವಕರನ್ನು ಸಬಲೀಕರಣಗೊಳಿಸಲು ಈ ಪ್ರತಿಜ್ಞೆಯು ಮತ್ತಷ್ಟು ಪ್ರಯತ್ನಿಸುತ್ತದೆ.

ಎನ್ ಎಂ ಬಿ ಎ  ಇ-ಪ್ರತಿಜ್ಞಾವಿಧಿಯ (e-Pledge) : https://nashamukt.dosje.gov.in/epledge

ಸಹಾಯವಾಣಿ -14446 ರ ಮೂಲಕ ಮಾದಕದ್ರವ್ಯ ಮುಕ್ತಿ ಅಥವಾ ವ್ಯಸನಮುಕ್ತಿಯನ್ನು ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಪ್ರಮುಖ ಸಂದೇಶದ ಮೇಲೆಯೂ ಗಮನಹರಿಸಲು ಸಭೆಯು ಒತ್ತು ನೀಡಿತು.

ಇಲಾಖೆಯ ಅಧಿಕೃತ ಜಾಲತಾಣದ ಮೂಲಕ 'ನಶೆ ಮುಕ್ತಿ ಮಿತ್ರ' ಆಗಿ ನೋಂದಾಯಿಸಿಕೊಳ್ಳುವ ಮೂಲಕ ನಾಗರಿಕರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ಬೆಳೆಯುತ್ತಿರುವ ಉತ್ಸಾಹದ ಮೇಲೆ ಸಭೆಯು ಗಮನಹರಿಸಿತು:

https://nashamukt.dosje.gov.in/nasha-mukti-mitr

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದೇಶದಲ್ಲಿ ಮಾದಕ ದ್ರವ್ಯದ ಬೇಡಿಕೆಯನ್ನು ತಡೆಯಲು 15 ಆಗಸ್ಟ್ 2020 ರಂದು 'ನಶೆ ಮುಕ್ತ ಭಾರತ ಅಭಿಯಾನ'ಕ್ಕೆ (ಎನ್ ಎಂ ಬಿ ಎ) ಚಾಲನೆ ನೀಡಿತು. ಸಾಮೂಹಿಕ ಕಾರ್ಯಾಚರಣೆಯ ತುರ್ತು ಅಗತ್ಯವನ್ನು ಗುರುತಿಸಿ, ಸಚಿವಾಲಯವು ತಡೆಗಟ್ಟುವಿಕೆ, ಮೌಲ್ಯಮಾಪನ, ಚಿಕಿತ್ಸೆ, ಪುನರ್ವಸತಿ, ನಂತರದ ಆರೈಕೆ, ಸಾರ್ವಜನಿಕ ಮಾಹಿತಿ ಪ್ರಸಾರ ಮತ್ತು ಸಮುದಾಯ ಜಾಗೃತಿ ಸೇರಿದಂತೆ ವಿವಿಧ ಉಪಕ್ರಮಗಳನ್ನು ಸಂಘಟಿಸುತ್ತದೆ.

ಸಚಿವಾಲಯವು ಮಾದಕದ್ರವ್ಯ ಬೇಡಿಕೆ ಕಡಿತದ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್ ಎಪಿಡಿಡಿಆರ್) ಅಡಿಯಲ್ಲಿ ಸಮಗ್ರ ಮತ್ತು ಸಾಕ್ಷ್ಯ ಆಧಾರಿತ ಕಾರ್ಯತಂತ್ರವನ್ನು ಅನುಷ್ಠಾನಗೊಳಿಸುತ್ತಿದೆ. ಈ ಕಾರ್ಯತಂತ್ರವು ನವದೆಹಲಿಯ ಏಮ್ಸ್ ನ ರಾಷ್ಟ್ರೀಯ ಮಾದಕದ್ರವ್ಯ ಅವಲಂಬನಾ ಚಿಕಿತ್ಸಾ ಕೇಂದ್ರ (ಎನ್ ಡಿ ಡಿ ಟಿ ಸಿ) ನಡೆಸಿದ 'ಭಾರತದಲ್ಲಿ ಮಾದಕ ದ್ರವ್ಯ ಬಳಕೆಯ ಪ್ರಮಾಣ ಮತ್ತು ಸ್ವರೂಪ' ಕುರಿತ ಮೊದಲ ರಾಷ್ಟ್ರೀಯ ಸಮೀಕ್ಷೆಯ ಸಂಶೋಧನೆಗಳನ್ನು ಆಧರಿಸಿದೆ.

ಎನ್ ಎ ಪಿ ಡಿ ಡಿ ಆರ್ ಅಡಿಯಲ್ಲಿ, ಸಚಿವಾಲಯವು ಮಾದಕ ದ್ರವ್ಯ ಬಳಕೆಯ ತಡೆಗಟ್ಟುವ ಶಿಕ್ಷಣ, ಜಾಗೃತಿ ಮೂಡಿಸುವಿಕೆ, ಸಮಾಲೋಚನೆ, ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಸ್ವಯಂಸೇವಾ ಸಂಸ್ಥೆಗಳು   ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಹಣಕಾಸಿನ ನೆರವು ನೀಡುತ್ತದೆ.

ಇಲ್ಲಿಯವರೆಗೆ, ಈ ಅಭಿಯಾನವು ದೇಶಾದ್ಯಂತ ಜಾಗೃತಿ ಚಟುವಟಿಕೆಗಳ ಮೂಲಕ 13.64 ಕೋಟಿಗೂ ಹೆಚ್ಚು ಯುವಕರು ಮತ್ತು 10.58 ಕೋಟಿ ಮಹಿಳೆಯರು ಸೇರಿದಂತೆ 34.42 ಕೋಟಿಗೂ ಹೆಚ್ಚು ನಾಗರಿಕರನ್ನು ತಲುಪಿದೆ. ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸಲು 1.65 ಲಕ್ಷಕ್ಕೂ ಹೆಚ್ಚು ನಶೆ ಮುಕ್ತಿ ಮಿತ್ರರು (ಎನ್ ಎಂ ಎಂ)  ಸಹ ಈ ಅಭಿಯಾನಕ್ಕೆ ಸೇರ್ಪಡೆಗೊಂಡಿದ್ದಾರೆ.

ಎನ್ ಎಂ ಬಿ ಎ  ಪೋರ್ಟಲ್ : https://www.dosje.gov.in/organisation/nasha-mukt-bharat-abhiyaan/

ಚಿಕಿತ್ಸಾ ಸೇವೆಗಳ ಲಭ್ಯತೆಯನ್ನು ಸುಧಾರಿಸಲು, ಸಚಿವಾಲಯವು 'ಎನ್ ಎಂ ಬಿ ಎ 2.0 ಮೊಬೈಲ್  ಆ್ಯಪ್   ಅನ್ನು ಪ್ರಾರಂಭಿಸಿದೆ, ಇದು ನಾಗರಿಕರಿಗೆ ಹತ್ತಿರದ ವ್ಯಸನಮುಕ್ತಿ ಕೇಂದ್ರವನ್ನು ಪತ್ತೆಹಚ್ಚಲು ಸಹಾಯ ಮಾಡಿಕೊಡುತ್ತದೆ.

Pledge updated Final

ಪ್ರತಿಜ್ಞಾವಿಧಿಯನ್ನು ಇತ್ತೀಚಿನ ನವೀಕರಿಸಲಾದ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಈ ಕೊಂಡಿಯ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು: https://play.google.com/store/apps/details?id=com.dosje.nmba_app&hl=en_IN

ಪುನರ್ವಸತಿ ಮೂಲಸೌಕರ್ಯವನ್ನು ವಿಸ್ತರಿಸುವುದು, ತಡೆಗಟ್ಟುವ ಮಧ್ಯಸ್ಥಿಕೆಗಳನ್ನು ಹೆಚ್ಚಿಸುವುದು, ಅನುಷ್ಠಾನದ ಪ್ರಕ್ರಿಯೆಗಳನ್ನು ಸರಳೀಕರಿಸುವುದು ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಪರಿಣಾಮಕಾರಿ ತಲುಪುವಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಮಾದಕದ್ರವ್ಯ ಮುಕ್ತ ಮತ್ತು ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಂಡ ಭಾರತದ ಕಡೆಗೆ ಸರ್ಕಾರವು ತನ್ನ ಬದ್ಧತೆಯನ್ನು ಬಲಪಡಿಸುವುದನ್ನು ಮುಂದುವರಿಸಿದೆ. ಸುಸ್ಥಿರ ಸಮುದಾಯದ ಭಾಗವಹಿಸುವಿಕೆ, ಸುಧಾರಿತ ಆಡಳಿತ ಮತ್ತು ತಂತ್ರಜ್ಞಾನ ಆಧಾರಿತ ಸೇವಾ ವಿತರಣೆಯ ಮೂಲಕ, ಸಚಿವಾಲಯವು ದುರ್ಬಲ ಸಮುದಾಯಗಳನ್ನು ರಕ್ಷಿಸಲು ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು ಬದ್ಧವಾಗಿದೆ.

 

*****


(ಪ್ರಕಟಣೆ ಐ.ಡಿ.: 2308107) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Telugu