ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಸ್ವಸಹಾಯ ಗುಂಪುಗಳು- ಬ್ಯಾಂಕ್ ಜೋಡಣೆಯ ಪರಿಶೀಲನೆ; ಮಹಿಳಾ ಉದ್ಯಮಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಮಾರ್ಗಸೂಚಿ ಸಿದ್ಧ


ಮಹಿಳಾ ಉದ್ಯಮಿಗಳಿಗೆ ವೇಗವಾಗಿ, ಸಮರ್ಪಕವಾಗಿ ಮತ್ತು ಸುಲಭವಾಗಿ ಸಾಲ ಸೌಲಭ್ಯ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಮಹಿಳಾ ಸಬಲೀಕರಣ ಅತ್ಯಗತ್ಯ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

3 ಕೋಟಿಯಿಂದ 6 ಕೋಟಿ ‘ಲಕ್ಷಾಧಿಪತಿ ದೀದಿ’ಗಳ ಗುರಿ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಸಾಕಾರಕ್ಕೆ ಶ್ರೀ ಚೌಹಾಣ್ ಸಂಕಲ್ಪ

ಮುಂದಿನ ಐದು ವರ್ಷಗಳಲ್ಲಿ ಸ್ವಸಹಾಯ ಗುಂಪುಗಳಿಗೆ ₹10 ಲಕ್ಷ ಕೋಟಿ, ವೈಯಕ್ತಿಕ ಮಹಿಳಾ ಉದ್ಯಮಿಗಳಿಗೆ ₹1 ಲಕ್ಷ ಕೋಟಿ ಸಾಲ: ಶ್ರೀ ಚೌಹಾಣ್

ಕಾಲಮಿತಿಯಲ್ಲಿ ಅನುಷ್ಠಾನ ಖಚಿತಪಡಿಸಲು ತ್ರೈಮಾಸಿಕ ವರ್ಚುವಲ್ ಹಾಗೂ ಅರ್ಧವಾರ್ಷಿಕ ಭೌತಿಕ ಪರಿಶೀಲನಾ ಸಭೆಗಳು: ಶ್ರೀ ಚೌಹಾಣ್

ತರಬೇತಿ ನೀಡಿ, ಸಂವೇದನೆ ಮೂಡಿಸಿ, ಸಾಲ ಸೌಲಭ್ಯ ಕಲ್ಪಿಸಿ: ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸಾಲ ಸೌಲಭ್ಯ ಸುಧಾರಿಸಲು ಬ್ಯಾಂಕುಗಳಿಗೆ ಶ್ರೀ ಚೌಹಾಣ್ ಕರೆ

ಜಿಲ್ಲಾ ಮಟ್ಟದ ಸಮನ್ವಯ ಸಭೆಗಳಲ್ಲಿ ಖಾಸಗಿ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸುವುದನ್ನು ಖಚಿತಪಡಿಸಬೇಕು: ಶ್ರೀ ಚೌಹಾಣ್

ಪ್ರಕಟಣಾ ದಿನಾಂಕ: 03 SEP 2026 6:56PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಮುಂಬೈನಲ್ಲಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ, ದೀನದಯಾಳ್ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಅಡಿಯಲ್ಲಿ ಸ್ವಸಹಾಯ ಗುಂಪುಗಳು–ಬ್ಯಾಂಕ್ ಜೋಡಣೆ ಮತ್ತು ವೈಯಕ್ತಿಕ ಉದ್ಯಮಗಳಿಗೆ ಹಣಕಾಸು ಒದಗಿಸುವ ಪ್ರಗತಿಯನ್ನು ಪರಿಶೀಲಿಸಿದರು. ಮಹಿಳಾ ಉದ್ಯಮಿಗಳಿಗೆ ವೇಗವಾಗಿ, ಸಮರ್ಪಕವಾಗಿ ಮತ್ತು ಸುಲಭವಾಗಿ ಸಾಲ ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಲು ಸ್ಪಷ್ಟವಾದ ಮಾರ್ಗಸೂಚಿಯನ್ನು ಸಭೆಯಲ್ಲಿ ರೂಪಿಸಲಾಯಿತು. ಅಲ್ಲದೆ, ಬ್ಯಾಂಕ್ ಸಾಲ ಪಡೆಯುವ ಸಂದರ್ಭದಲ್ಲಿ ಸ್ವಸಹಾಯ ಗುಂಪಿನ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿ ಸ್ಥಾಪಿಸುವಂತೆಯೂ ಸೂಚಿಸಲಾಯಿತು. ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು, ಬ್ಯಾಂಕುಗಳ ಪ್ರತಿನಿಧಿಗಳು, ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ ಗಳ ಅಧಿಕಾರಿಗಳು, ಭಾರತೀಯ ರಿಸರ್ವ್ ಬ್ಯಾಂಕ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಹಾಗೂ ಇತರ ಸಂಬಂಧಿತ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ, ಸಾಲ ಪ್ರಕ್ರಿಯೆಯಲ್ಲಿನ ಅಡಚಣೆಗಳು, ಪ್ರಾದೇಶಿಕ ಅಸಮಾನತೆಗಳು ಹಾಗೂ ಸಾಧ್ಯವಾದ ಪರಿಹಾರಗಳ ಕುರಿತು ವಿವರವಾದ ಚರ್ಚೆ ನಡೆಸಿದರು.

ಸ್ವಸಹಾಯ ಗುಂಪುಗಳ ಸದಸ್ಯರು ಎದುರಿಸುತ್ತಿರುವ ತಳಮಟ್ಟದ ಸಮಸ್ಯೆಗಳು, ಸಾಲ ಮಂಜೂರಾತಿಯಲ್ಲಿ ವಿಳಂಬ, ದಾಖಲೆಪತ್ರಗಳ ಪ್ರಕ್ರಿಯೆ, ಕಡಿಮೆ ಸಾಲ ಮಿತಿ ಹಾಗೂ ಶಾಖಾ ಮಟ್ಟದಲ್ಲಿ ಎದುರಾಗುತ್ತಿರುವ ತೊಂದರೆಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ದತ್ತಾಂಶಗಳ ಪರಿಶೀಲನೆಗೆ ಉನ್ನತ ಮಟ್ಟದ ಸಭೆಯಲ್ಲಿ ವಿಶೇಷ ಗಮನ ನೀಡಲಾಯಿತು.

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ, ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಶ್ರೀ ಕಮಲೇಶ್ ಪಾಸ್ವಾನ್, ಮಹಾರಾಷ್ಟ್ರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಜಯಕುಮಾರ್ ಗೋರೆ ಹಾಗೂ ರಾಜ್ಯ ಸಚಿವರಾದ ಶ್ರೀ ಯೋಗೇಶ್ ಕದಂ, ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ರೋಹಿತ್ ಕನ್ಸಲ್, ಜಂಟಿ ಕಾರ್ಯದರ್ಶಿಗಳಾದ ಶ್ರೀ ಅಮಿತ್ ಕುಮಾರ್ ಶುಕ್ಲಾ ಮತ್ತು ಶ್ರೀಮತಿ ಸ್ವಾತಿ ಶರ್ಮಾ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಹಣಕಾಸು ಸೇವೆಗಳ ಇಲಾಖೆ, ನೀತಿ ಆಯೋಗ, ಆರ್‌ ಬಿ ಐ, ನಬಾರ್ಡ್‌ ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ಅಭಿವೃದ್ಧಿ ಹೊಂದಿದ ಭಾರತದ ದೂರದೃಷ್ಟಿಗೆ ಮಹಿಳಾ ಸಬಲೀಕರಣವೇ ಕೇಂದ್ರಬಿಂದು

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಚೌಹಾಣ್ ಅವರು, ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಮಹಿಳಾ ಸಬಲೀಕರಣವು ಮೂಲಭೂತ ಪೂರ್ವಾಪೇಕ್ಷಿತವಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಉಲ್ಲೇಖಿಸಿದ ಶ್ರೀ ಚೌಹಾಣ್, ಈ ವರ್ಷ ಕೆಂಪುಕೋಟೆಯಿಂದ ಪ್ರಧಾನಮಂತ್ರಿಯವರು ‘ಲಕ್ಷಾಧಿಪತಿ ದೀದಿ’ಗಳ ಸಂಖ್ಯೆಯನ್ನು ಮೂರು ಕೋಟಿಯಿಂದ ಆರು ಕೋಟಿಗೆ ಹೆಚ್ಚಿಸುವ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ ಎಂದು ಹೇಳಿದರು. ಎಲ್ಲಾ ಪಾಲುದಾರರು ವೈಯಕ್ತಿಕ ಹಿತಾಸಕ್ತಿಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಿ, ಕರ್ತವ್ಯ ಪ್ರಜ್ಞೆಯನ್ನು ತಮ್ಮ ಕೆಲಸದ ಮೂಲ ಲಕ್ಷಣವನ್ನಾಗಿಸಿಕೊಳ್ಳಬೇಕು ಎಂದು ಶ್ರೀ ಚೌಹಾಣ್ ಕರೆ ನೀಡಿದರು. “ನಾವು ಇದನ್ನು ಕೇವಲ ವೃತ್ತಿಯಾಗಿ ಅಥವಾ ಜೀವನೋಪಾಯಕ್ಕಾಗಿ ಮಾತ್ರ ಮಾಡುತ್ತಿಲ್ಲ. ನಮ್ಮ ಅಧಿಕಾರಿಗಳಾಗಲಿ ಅಥವಾ ಬ್ಯಾಂಕುಗಳಿಗೆ ಸಂಬಂಧಿಸಿದ ನಮ್ಮ ಸಹೋದ್ಯೋಗಿಗಳಾಗಲಿ, ದೇಶಕ್ಕೆ ಮತ್ತು ಜನರಿಗೆ ಸೇವೆ ಸಲ್ಲಿಸುವ ಬದ್ಧತೆ ನಮ್ಮಲ್ಲಿದೆ. ಆ ಬದ್ಧತೆಯನ್ನು ಈಡೇರಿಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ಅವರು ಹೇಳಿದರು. ನಿಗದಿಪಡಿಸಿರುವ ಗುರಿ ಸಾಧನೆಯಲ್ಲಿ ಎಲ್ಲಾ ಪಾಲುದಾರರು ಭಾವನಾತ್ಮಕವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. “ನಮ್ಮ ಸಹೋದರಿಯರ ಜೀವನವನ್ನು ಬದಲಾಯಿಸಬೇಕು ಎಂಬ ದೃಢಸಂಕಲ್ಪ, ಉತ್ಸಾಹ ಮತ್ತು ಶ್ರದ್ಧೆ ನಮ್ಮಲ್ಲಿ ಇರಬೇಕು. ನಮ್ಮ ಕೊಡುಗೆ ಹೇಗೆ ಅತ್ಯುತ್ತಮವಾಗಿರಬಹುದು ಮತ್ತು ನಾವು ಇನ್ನಷ್ಟು ಉತ್ತಮವಾಗಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ನಿರಂತರವಾಗಿ ನಮ್ಮನ್ನು ಪ್ರಶ್ನಿಸಿಕೊಳ್ಳಬೇಕು. ನಾವು ಆ ಪ್ರಯತ್ನ ಮಾಡಿದರೆ, ಗುರಿಯನ್ನು ಖಂಡಿತವಾಗಿಯೂ ಇನ್ನಷ್ಟು ವೇಗವಾಗಿ ಸಾಧಿಸಬಹುದು” ಎಂದು ಅವರು ಹೇಳಿದರು.

3 ಕೋಟಿಯಿಂದ 6 ಕೋಟಿಲಕ್ಷಾಧಿಪತಿ ದೀದಿಗಳತ್ತ

ಮೊದಲ ಹಂತದಲ್ಲಿ ಮೂರು ಕೋಟಿ ‘ಲಕ್ಷಾಧಿಪತಿ ದೀದಿ’ಗಳ ಗುರಿ ಸಾಧಿಸುವುದು ತುಸು ಸುಲಭವಾಗಿತ್ತು. ಏಕೆಂದರೆ ಅನೇಕ ಮಹಿಳೆಯರು ಈಗಾಗಲೇ ₹60,000, ₹₹70,000 ಅಥವಾ ₹80,000 ಆದಾಯ ಗಳಿಸುತ್ತಿದ್ದರು ಎಂದು ಶ್ರೀ ಚೌಹಾಣ್ ಹೇಳಿದರು. “ಆದರೆ ಈಗ ನಾವು ಆರು ಕೋಟಿಯ ಗುರಿ ತಲುಪಬೇಕಿರುವುದರಿಂದ, ₹40,000, ₹50,000 ಅಥವಾ ₹₹30,000 ಆದಾಯ ಗಳಿಸುತ್ತಿರುವ ಮಹಿಳೆಯರನ್ನೂ ‘ಲಕ್ಷಾಧಿಪತಿ ದೀದಿ’ಗಳನ್ನಾಗಿ ಮಾಡಬೇಕಾಗುತ್ತದೆ” ಎಂದು ಅವರು ಹೇಳಿದರು. ಬ್ಯಾಂಕುಗಳ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಕೇಂದ್ರ ಸಚಿವರು, ಇದುವರೆಗೆ ಸಾಧಿಸಿರುವ ಪ್ರಗತಿ ಹೆಮ್ಮೆಯ ವಿಷಯವಾಗಿದೆ ಎಂದರು. “ನಾವು ಸಾಧಿಸಿರುವುದು ನಿಜಕ್ಕೂ ಹೆಮ್ಮೆ ಪಡುವಂತಹದ್ದು. ಈ ವರ್ಷ ಬಹುತೇಕ ಪ್ರತಿಯೊಂದು ಬ್ಯಾಂಕ್‌ ಕೂಡ ತನ್ನ ಗುರಿಯ ಒಂದೂವರೆ ಪಟ್ಟು ಸಾಧಿಸಿದೆ; ಕೆಲವು ಬ್ಯಾಂಕುಗಳು ಎರಡು ಪಟ್ಟು ಗುರಿಯನ್ನೂ ಸಾಧಿಸಿವೆ. ಇದಕ್ಕಾಗಿ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆದರೆ ಮುಂದಿನ ದಿನಗಳಲ್ಲಿ ಇದೇ ಉತ್ಸಾಹ ಮತ್ತು ಬದ್ಧತೆಯೊಂದಿಗೆ ನಾವು ಕಾರ್ಯನಿರ್ವಹಿಸಬೇಕಾಗಿದೆ” ಎಂದು ಅವರು ಹೇಳಿದರು.

ಬದ್ಧತೆಗಳ ಕಾಲಮಿತಿಯ ಅನುಷ್ಠಾನಕ್ಕೆ ಮೇಲ್ವಿಚಾರಣೆ

ಸಭೆಯಲ್ಲಿ ನೀಡಲಾದ ಬದ್ಧತೆಗಳನ್ನು ಪೂರ್ಣ ಸಾಮರ್ಥ್ಯದೊಂದಿಗೆ ಹಾಗೂ ನಿಗದಿತ ಕಾಲಮಿತಿಯೊಳಗೆ ಜಾರಿಗೊಳಿಸುವುದನ್ನು ಎಲ್ಲಾ ಪಾಲುದಾರರು ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀ ಚೌಹಾಣ್ ನಿರ್ದೇಶನ ನೀಡಿದರು. ನಿರಂತರತೆ ಕಾಯ್ದುಕೊಳ್ಳಲು ಮತ್ತು ಪ್ರಗತಿಯನ್ನು ಪರಿಶೀಲಿಸಲು ಪಾಲುದಾರರು ಪ್ರತಿ ಮೂರು ತಿಂಗಳಿಗೊಮ್ಮೆ ವರ್ಚುವಲ್ ಸಭೆ ಹಾಗೂ ಪ್ರತಿ ಆರು ತಿಂಗಳಿಗೊಮ್ಮೆ ಭೌತಿಕ ಸಭೆ ನಡೆಸಲಿದ್ದಾರೆ ಎಂದು ಅವರು ಪ್ರಕಟಿಸಿದರು. “ನಮ್ಮ ಸಭೆಗಳಲ್ಲಿ ನಿರಂತರತೆ ಇದ್ದರೆ, ಕಾಲಮಿತಿಗಳನ್ನು ಸಹ ನಾವು ಖಂಡಿತವಾಗಿ ಪಾಲಿಸಲು ಸಾಧ್ಯವಾಗುತ್ತದೆ” ಎಂದು ಶ್ರೀ ಚೌಹಾಣ್ ಹೇಳಿದರು.

ಬ್ಯಾಂಕ್ ಮಟ್ಟದಲ್ಲಿ ತರಬೇತಿ ಮತ್ತು ಸಂವೇದನೆ ಮೂಡಿಸುವಿಕೆ

ಬ್ಯಾಂಕುಗಳ ಮಟ್ಟದಲ್ಲಿ ಸ್ವಸಹಾಯ ಗುಂಪಿನ ಮಹಿಳೆಯರು ಎದುರಿಸುತ್ತಿರುವ ತೊಂದರೆಗಳನ್ನು ಪ್ರಸ್ತಾಪಿಸಿದ ಶ್ರೀ ಚೌಹಾಣ್, ಬ್ಯಾಂಕ್ ಅಧಿಕಾರಿಗಳಿಗೆ ಹೆಚ್ಚಿನ ತರಬೇತಿ ನೀಡುವುದರ ಜೊತೆಗೆ ಈ ವಿಷಯದಲ್ಲಿ ಸಂವೇದನೆ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. “ನಮ್ಮ ಸಹೋದರಿಯರು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಗಳು ಬ್ಯಾಂಕ್ ಮಟ್ಟದಲ್ಲೇ ಉಂಟಾಗುತ್ತವೆ ಎಂಬುದನ್ನು ನೀವು ನೋಡಿದ್ದೀರಿ. ಆ ಮಟ್ಟದಲ್ಲಿ ಸಿಬ್ಬಂದಿಗೆ ತರಬೇತಿ ನೀಡಲು ಮತ್ತು ಸಂವೇದನೆ ಮೂಡಿಸಲು ನಾವು ಪ್ರಯತ್ನಿಸಬೇಕು” ಎಂದು ಅವರು ಹೇಳಿದರು. ಬ್ಯಾಂಕುಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (ಎಸ್‌ ಆರ್‌ ಎಲ್‌ ಎಮ್) ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ಅವರು ಕರೆ ನೀಡಿದರು. “ನಿರ್ದಿಷ್ಟವಾಗಿ, ಖಾಸಗಿ ಬ್ಯಾಂಕುಗಳ ಪ್ರತಿನಿಧಿಗಳು ಈ ಸಭೆಗಳಿಗೆ ಹಾಗೂ ಜಿಲ್ಲಾ ಮಟ್ಟದ ಸಲಹಾ ಸಮಿತಿ (ಡಿ ಎಲ್‌ ಸಿ ಸಿ) ಸಭೆಗಳಿಗೆ ಆಗಾಗ್ಗೆ ಗೈರಾಗುತ್ತಾರೆ ಎಂಬ ದೂರುಗಳು ನನಗೆ ಬಂದಿವೆ. ಈ ಬದ್ಧತೆಯನ್ನು ಗಂಭೀರವಾಗಿ ಈಡೇರಿಸಲು ಅವರೂ ಸಹ ಎಲ್ಲ ಪ್ರಯತ್ನಗಳನ್ನು ಮಾಡಬೇಕು” ಎಂದು ಅವರು ಹೇಳಿದರು.

ಬಡತನ ಹೆಚ್ಚಿರುವ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ

ಹೆಚ್ಚಿನ ಬಡತನವಿರುವ ಪ್ರದೇಶಗಳಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಶ್ರೀ ಚೌಹಾಣ್ ಒತ್ತಿ ಹೇಳಿದರು. “ಅನೇಕ ಬಾರಿ, ಈಗಾಗಲೇ ಸಮೃದ್ಧಿ ಇರುವ ಪ್ರದೇಶಗಳಿಗೆ ಹೆಚ್ಚಿನ ಹಣ ಹೋಗುತ್ತದೆ. ಅಲ್ಲಿ ಬ್ಯಾಂಕ್ ಶಾಖೆಗಳು ಸಾಲವನ್ನು ಹೆಚ್ಚು ತ್ವರಿತವಾಗಿ ಒದಗಿಸುತ್ತವೆ. ಆದರೆ ಅಗತ್ಯ ಹೆಚ್ಚಿರುವ ಪ್ರದೇಶಗಳಲ್ಲಿ ನಮ್ಮ ಗಮನ ಇರಬೇಕು. ‘ಇನ್ನೂ ಕತ್ತಲೆ ಇರುವಲ್ಲಿಯೇ ದೀಪ ಬೆಳಗಿಸೋಣ.’ ಅವುಗಳೇ ನಮ್ಮ ಆದ್ಯತೆಯ ಪ್ರದೇಶಗಳಾಗಬೇಕು” ಎಂದು ಅವರು ಹೇಳಿದರು.

ಆತ್ಮವತ್ ಸರ್ವಭೂತೇಷು’: ಗುರಿಯೊಂದಿಗೆ ಭಾವನಾತ್ಮಕ ಬದ್ಧತೆ

ಇತರರ ಕಷ್ಟಗಳನ್ನು ತನ್ನದೇ ಕಷ್ಟವೆಂದು ಭಾವಿಸುವ ಭಾರತೀಯ ತತ್ವವಾದ 'ಆತ್ಮವತ್ ಸರ್ವಭೂತೇಷು' ಅನ್ನು ಉಲ್ಲೇಖಿಸಿದ ಶ್ರೀ ಚೌಹಾಣ್, ಪಾಲುದಾರರು ಮಿಷನ್‌ ನೊಂದಿಗೆ ಭಾವನಾತ್ಮಕವಾಗಿ ಒಂದಾಗುವಂತೆ ಮನವಿ ಮಾಡಿದರು. “ನಾವು ‘ಆತ್ಮವತ್ ಸರ್ವಭೂತೇಷು’ ಎಂಬ ತತ್ವವನ್ನು ನಂಬುತ್ತೇವೆ. ನಾವೆಲ್ಲರೂ ಒಂದೇ ಚೈತನ್ಯದ ಭಾಗವಾಗಿದ್ದೇವೆ. ಯಾರಾದರೂ ಏಕೆ ಸಂಕಟದಲ್ಲಿರಬೇಕು? ಅವರ ನೋವು ನಮ್ಮದೇ ನೋವಾಗಬಾರದೆ? ‘ವಸುಧೈವ ಕುಟುಂಬಕಂ’, ವಿಶ್ವದ ಕಲ್ಯಾಣ ಮತ್ತು ‘ಸರ್ವೇ ಭವಂತು ಸುಖಿನಃ’ ನಮ್ಮ ಸಂಸ್ಕೃತಿಯ ಮೂಲ ಮೌಲ್ಯಗಳಾಗಿವೆ” ಎಂದು ಅವರು ಹೇಳಿದರು. “ನಾವು ಆ ಮನೋಭಾವವನ್ನು ನಮ್ಮೊಳಗೆ ಅಳವಡಿಸಿಕೊಂಡು ಈ ಗುರಿ ಸಾಧನೆಗೆ ಶ್ರಮಿಸಿದರೆ, ನಮ್ಮ ಕೆಲಸದಲ್ಲಿ ನಿಜವಾದ ಸಂತೋಷವನ್ನು ಕಾಣುತ್ತೇವೆ” ಎಂದು ಅವರು ಹೇಳಿದರು. ಎಲ್ಲಾ ಪಾಲುದಾರರ ಪ್ರಯತ್ನಗಳನ್ನು ಅಭಿನಂದಿಸಿದ ಶ್ರೀ ಚೌಹಾಣ್, ಮುಂದಿನ ಹಂತದಲ್ಲಿ ಸ್ಪಷ್ಟವಾದ ಮಾರ್ಗಸೂಚಿ, ನಿಗದಿತ ಕಾಲಮಿತಿ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ನೀಡಬೇಕು ಎಂದರು. “ಸ್ಪಷ್ಟವಾದ ಮಾರ್ಗಸೂಚಿ ಮತ್ತು ಕಾಲಮಿತಿಯೊಂದಿಗೆ ದೊಡ್ಡ ಗುರಿ ಸಾಧಿಸಲು ನಾವು ಕಾರ್ಯನಿರ್ವಹಿಸಬೇಕು ಮತ್ತು ನಿಗದಿತ ಅವಧಿಯೊಳಗೆ ಅದನ್ನು ಸಾಧಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು” ಎಂದು ಅವರು ಹೇಳಿದರು.

ಯಾವುದೇ ಗುರಿ ಅಸಾಧ್ಯವಲ್ಲ

ಭೋಪಾಲ್ ಮೂಲದ ಖ್ಯಾತ ಹಿಂದಿ ಕವಿ ದುಶ್ಯಂತ್ ಕುಮಾರ್ ಅವರನ್ನು ಉಲ್ಲೇಖಿಸಿದ ಶ್ರೀ ಚೌಹಾಣ್, ದೃಢಸಂಕಲ್ಪ ಮತ್ತು ನಿರಂತರ ಪ್ರಯತ್ನವಿದ್ದರೆ ಯಾವುದೇ ಗುರಿ ಸಾಧನೆಯೂ ಅಸಾಧ್ಯವಲ್ಲ ಎಂದು ಹೇಳಿದರು. “ನಾವು ನೀಡಿರುವ ಬದ್ಧತೆಗಳನ್ನು ಈಡೇರಿಸುತ್ತೇವೆ ಎಂದು ಸಂಕಲ್ಪ ಮಾಡೋಣ. ನಾವು ನಿಗದಿಪಡಿಸಿರುವ ಗುರಿಗಳು ಮತ್ತು ಉದ್ದೇಶಗಳನ್ನು ಸಾಧಿಸುತ್ತೇವೆ ಹಾಗೂ ನಿಗದಿತ ಕಾಲಮಿತಿಯೊಳಗೆ ಪ್ರಧಾನಮಂತ್ರಿಯವರ ಬದ್ಧತೆಯನ್ನು ಈಡೇರಿಸುತ್ತೇವೆ” ಎಂದು ಶ್ರೀ ಚೌಹಾಣ್ ಹೇಳಿದರು.

10 ಕೋಟಿಗೂ ಅಧಿಕ ಗ್ರಾಮೀಣ ಮಹಿಳೆಯರ ಸಂಘಟನೆ; ₹13.67 ಲಕ್ಷ ಕೋಟಿ ಸಾಲ ವಿತರಣೆ

ದೀನದಯಾಳ್ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಅಡಿಯಲ್ಲಿ ಇದುವರೆಗೆ 10 ಕೋಟಿಗೂ ಅಧಿಕ ಗ್ರಾಮೀಣ ಮಹಿಳೆಯರನ್ನು 92–93 ಲಕ್ಷ ಸ್ವಸಹಾಯ ಗುಂಪುಗಳಾಗಿ ಸಂಘಟಿಸಲಾಗಿದೆ. ಬ್ಯಾಂಕುಗಳು ಸ್ವಸಹಾಯ ಗುಂಪುಗಳಿಗೆ ಒಟ್ಟಾರೆಯಾಗಿ ₹13.67 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಒದಗಿಸಿವೆ. ಆರು ಕೋಟಿಯ ಗುರಿಗೆ ಹೋಲಿಸಿದರೆ, ಇದುವರೆಗೆ ಸುಮಾರು 3.5 ಕೋಟಿ ‘ಲಕ್ಷಾಧಿಪತಿ ದೀದಿ’ಗಳನ್ನು ರೂಪಿಸಲಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಸ್ವಸಹಾಯ ಗುಂಪುಗಳಿಗೆ ₹₹10 ಲಕ್ಷ ಕೋಟಿ ಹಾಗೂ ವೈಯಕ್ತಿಕ ಮಹಿಳಾ ಸದಸ್ಯರಿಗೆ ₹₹1 ಲಕ್ಷ ಕೋಟಿ ಸಾಲ ಲಭ್ಯವಾಗುವಂತೆ ಮಾಡುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.

ಹಣಕಾಸು ಒಳಗೊಳ್ಳುವಿಕೆ 2.0 ಕ್ರಿಯಾ ಯೋಜನೆ

ಸಭೆಯಲ್ಲಿ ನಡೆದ ಚರ್ಚೆಗಳು ‘ಹಣಕಾಸು ಒಳಗೊಳ್ಳುವಿಕೆ 2.0’ ದೂರದೃಷ್ಟಿಯಡಿ ರೂಪಿಸಲಾಗುವ ಮುಂದಿನ ಕಾರ್ಯಯೋಜನೆಗೆ ಆಧಾರವಾಗಲಿವೆ. ಸ್ವಸಹಾಯ ಗುಂಪುಗಳಿಗೆ ಸಮಯೋಚಿತ ಮತ್ತು ಸಮರ್ಪಕ ಸಾಲ, ಮಹಿಳಾ ಉದ್ಯಮಿಗಳಿಗೆ ಮೀಸಲಾದ ಹಣಕಾಸು ನೆರವು ಹಾಗೂ ಗ್ರಾಮೀಣ ಭಾರತದಾದ್ಯಂತ ಉತ್ತಮ ಗುಣಮಟ್ಟದ ಹಣಕಾಸು ಸೇವೆಗಳಿಗೆ ಪ್ರವೇಶವನ್ನು ವಿಸ್ತರಿಸುವುದರ ಮೇಲೆ ಈ ಉಪಕ್ರಮವು ಗಮನ ಕೇಂದ್ರೀಕರಿಸಲಿದೆ. ಸ್ವಸಹಾಯ ಗುಂಪಿನ ಮಹಿಳೆಯರು ಬ್ಯಾಂಕ್ ಸಾಲ ಪಡೆಯುವಲ್ಲಿ ಯಾವುದೇ ತೊಂದರೆ ಎದುರಿಸದಂತೆ ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶ್ರೀ ಚೌಹಾಣ್ ಭರವಸೆ ನೀಡಿದರು. ಅಡಚಣೆಗಳನ್ನು ಗುರುತಿಸಿ ನಿವಾರಿಸಲು ಸಹಾಯವಾಣಿ, ಪ್ರಕ್ರಿಯೆಗಳ ಸುಧಾರಣೆ ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯವನ್ನು ಬಳಸಿಕೊಳ್ಳಲಾಗುವುದು. ಮಹಿಳಾ ನೇತೃತ್ವದ ಗ್ರಾಮೀಣ ಅಭಿವೃದ್ಧಿಯನ್ನು ಬಲಪಡಿಸಲು, ಹಣಕಾಸು ಒಳಗೊಳ್ಳುವಿಕೆಯನ್ನು ಇನ್ನಷ್ಟು ಆಳಗೊಳಿಸಲು ಹಾಗೂ ಗ್ರಾಮೀಣ ಭಾರತದಾದ್ಯಂತ ಎಲ್ಲರನ್ನೂ ಒಳಗೊಂಡ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಈ ಸಭೆಯು ಮಹತ್ವದ ಹೆಜ್ಜೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ.

 

*****

 


(ಪ್ರಕಟಣೆ ಐ.ಡಿ.: 2306618) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Odia