ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ನೈಲಿಟ್ (NIELIT) ಮತ್ತು ಇಂಟೆಲ್ ಇಂಡಿಯಾದಿಂದ ರಾಷ್ಟ್ರೀಯ ನಾಯಕತ್ವ ಸಂವಾದ ಆಯೋಜನೆ ಮತ್ತು ಏಜೆಂಟಿಕ್ ಎಐ (Agentic AI) ಯುಗಕ್ಕೆ ಭಾರತದ ಕಾರ್ಯಪಡೆಯನ್ನು ಸಜ್ಜುಗೊಳಿಸಲು ಏಜೆಂಟಿಕ್ ಎಐ ಕೌಶಲ್ಯ ಕಾರ್ಯಕ್ರಮಗಳಿಗೆ ಚಾಲನೆ
ಭವಿಷ್ಯದ ಕಾರ್ಯಪಡೆಯ ಸನ್ನದ್ಧತೆಯ ಕುರಿತು ಚರ್ಚಿಸಲು ಸರ್ಕಾರ, ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮವನ್ನು ಒಂದೆಡೆ ತಂದ ರಾಷ್ಟ್ರೀಯ ನಾಯಕತ್ವ ಸಂವಾದ; ದೇಶಾದ್ಯಂತ ಯುವಜನರ ಕೌಶಲ್ಯ ಅಭಿವೃದ್ಧಿಗಾಗಿ ಏಜೆಂಟಿಕ್ ಎಐ ಕೌಶಲ್ಯ ಕಾರ್ಯಕ್ರಮಕ್ಕೆ ಚಾಲನೆ
ಪ್ರಕಟಣಾ ದಿನಾಂಕ:
03 SEP 2026 11:13AM by PIB Bengaluru
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT), ಇಂಟೆಲ್ ಇಂಡಿಯಾ ಸಹಯೋಗದೊಂದಿಗೆ ನವದೆಹಲಿಯ ಇಂಡಿಯಾ ಹ್ಯಾಬಿಟೇಟ್ ಸೆಂಟರ್‌ನಲ್ಲಿ “ಏಜೆಂಟಿಕ್ ಎಐ ಯುಗಕ್ಕೆ ಭವಿಷ್ಯದ ಕಾರ್ಯಪಡೆಯನ್ನು ಸಜ್ಜುಗೊಳಿಸುವುದು” ಎಂಬ ವಿಷಯದ ಕುರಿತು ರಾಷ್ಟ್ರೀಯ ನಾಯಕತ್ವ ಸಂವಾದವನ್ನು ಆಯೋಜಿಸಿತ್ತು.

ವೇಗವಾಗಿ ವಿಕಸನಗೊಳ್ಳುತ್ತಿರುವ ಕೃತಕ ಬುದ್ಧಿಮತ್ತೆಯ (AI) ಸನ್ನಿವೇಶ ಮತ್ತು ಭಾರತದಲ್ಲಿ ಉದ್ಯೋಗ, ಶಿಕ್ಷಣ ಹಾಗೂ ಕಾರ್ಯಪಡೆಯ ಅಭಿವೃದ್ಧಿಯ ಭವಿಷ್ಯದ ಮೇಲಿನ ಅದರ ಪರಿಣಾಮಗಳ ಕುರಿತು ಚರ್ಚಿಸಲು, ಈ ಸಂವಾದವು ಸರ್ಕಾರ, ವಿದೇಶಿ ರಾಯಭಾರ ಕಚೇರಿಗಳು, ಶೈಕ್ಷಣಿಕ ಕ್ಷೇತ್ರ, ಉದ್ಯಮ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಯ ಹಿರಿಯ ಪ್ರತಿನಿಧಿಗಳನ್ನು ಒಂದೆಡೆ ತಂದಿತು.
ಕಾರ್ಯಕ್ರಮದಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಅಧ್ಯಕ್ಷರಾದ ಶ್ರೀ ಶಶಿ ಶೇಖರ್ ವೆಂಪಟಿ ಮುಖ್ಯ ಅತಿಥಿಯಾಗಿ, ನೈಲಿಟ್‌ನ ಮಹಾ ನಿರ್ದೇಶಕಾರು ಡಾ. ಎಂ. ಎಂ. ತ್ರಿಪಾಠಿ, ಇಂಡಿಯಾ ಎಐ ಮಿಷನ್‌ನ ಸಿಒಒ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಸುದೀಪ್ ಶ್ರೀವಾಸ್ತವ, ಇಂಟೆಲ್‌ನ ಹೆಡ್ ಮತ್ತು ಗ್ಲೋಬಲ್ ಡೈರೆಕ್ಟರ್ ಶ್ರೀ ಅನ್ಶುಲ್ ಸೋನಾಕ್ ಅವರೊಂದಿಗೆ ಸರ್ಕಾರ, ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮದ ಹಿರಿಯ ಗಣ್ಯರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.
ಏಜೆಂಟಿಕ್ ಎಐ ಒಡ್ಡುವ ಉದಯೋನ್ಮುಖ ಅವಕಾಶಗಳು ಮತ್ತು ಸವಾಲುಗಳು ಹಾಗೂ ಹೆಚ್ಚೆಚ್ಚು ಎಐ-ಚಾಲಿತವಾಗುತ್ತಿರುವ ಅರ್ಥವ್ಯವಸ್ಥೆಗೆ ಭಾರತದ ಕಾರ್ಯಪಡೆಯ ಸನ್ನದ್ಧತೆಯನ್ನು ಬಲಪಡಿಸುವ ಅಗತ್ಯತೆಯ ಮೇಲೆ ಈ ಸಂವಾದವು ಗಮನ ಹರಿಸಿತು. ಉದಯೋನ್ಮುಖ ಕೌಶಲ್ಯ ಅಗತ್ಯತೆಗಳು, ಉದ್ಯಮಕ್ಕೆ ಅನುಗುಣವಾದ ಪಠ್ಯಕ್ರಮಗಳು, ಪ್ರಾಯೋಗಿಕ ಕಲಿಕೆ, ಅಧ್ಯಾಪಕರ ಸನ್ನದ್ಧತೆ, ಎಐ-ಸಕ್ರಿಯಗೊಳಿಸಿದ ಕಲಿಕಾ ವಾತಾವರಣ ಮತ್ತು ಬಲವಾದ ಸರ್ಕಾರ-ಶೈಕ್ಷಣಿಕ ಕ್ಷೇತ್ರ-ಉದ್ಯಮ ಸಹಯೋಗದ ಸುತ್ತ ಚರ್ಚೆಗಳು ನಡೆದವು.
ಎಐ ತಂತ್ರಜ್ಞಾನವು ಮುನ್ಸೂಚನಾ ಮತ್ತು ಸೃಜನಶೀಲ (generative) ವ್ಯವಸ್ಥೆಗಳಿಂದ ಏಜೆಂಟಿಕ್ ಎಐ-ಮಾನವನ ಮೇಲ್ವಿಚಾರಣೆಯಲ್ಲಿ ಸಂಕೀರ್ಣ ಕಾರ್ಯಗಳನ್ನು ತರ್ಕಿಸುವ, ಯೋಜಿಸುವ ಮತ್ತು ಕಾರ್ಯಗತಗೊಳಿಸುವ ಸಾಮರ್ಥ್ಯವಿರುವ ವ್ಯವಸ್ಥೆಗಳತ್ತ ವಿಕಸನಗೊಳ್ಳುತ್ತಿದ್ದಂತೆ, ವಿವಿಧ ಉದ್ಯಮಗಳಲ್ಲಿ ಅಗತ್ಯವಿರುವ ಕೌಶಲ್ಯಗಳು ಸಹ ವಿಕಸನಗೊಳ್ಳುತ್ತಿವೆ. ಅತ್ಯಂತ ಸಾಮರ್ಥ್ಯವಿರುವ ಎಐ ವ್ಯವಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯವಿರುವ ತಾಂತ್ರಿಕ ಸಾಮರ್ಥ್ಯಗಳು, ಹೊಂದಿಕೊಳ್ಳುವಿಕೆ ಮತ್ತು ಮಾನವ-ಕೇಂದ್ರಿತ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳು, ಶಿಕ್ಷಣತಜ್ಞರು ಮತ್ತು ವೃತ್ತಿಪರರನ್ನು ಸಜ್ಜುಗೊಳಿಸುವ ಮಹತ್ವವನ್ನು ಸಂವಾದವು ಎತ್ತಿಹಿಡಿಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಅಧ್ಯಕ್ಷರಾದ ಶ್ರೀ ಶಶಿ ಶೇಖರ್ ವೆಂಪಟಿ ಅವರು, ವೇಗವಾಗಿ ವಿಕಸನಗೊಳ್ಳುತ್ತಿರುವ ಏಜೆಂಟಿಕ್ ಎಐ ಯುಗಕ್ಕೆ ಭಾರತದ ಭವಿಷ್ಯದ ಕಾರ್ಯಪಡೆಯನ್ನು ಸಜ್ಜುಗೊಳಿಸುವ ಮಹತ್ವವನ್ನು ಉಲ್ಲೇಖಿಸಿದರು. ತಂತ್ರಜ್ಞಾನವು ಕೆಲಸದ ಸ್ವರೂಪವನ್ನು ಬದಲಾಯಿಸುತ್ತಿದ್ದಂತೆ ಕೌಶಲ್ಯಗಳು, ಉದ್ಯೋಗಾರ್ಹತೆ ಮತ್ತು ನಿರಂತರ ಕಲಿಕೆಯು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಅವರು ಒತ್ತಿಹೇಳಿದರು.

ಏಜೆಂಟಿಕ್ ಎಐ ಅನ್ನು ಪ್ರಜಾಸತ್ತಾತ್ಮಕಗೊಳಿಸುವ ನಿಟ್ಟಿನಲ್ಲಿ ಕೈಗೊಂಡ ಉಪಕ್ರಮಕ್ಕಾಗಿ ಅವರು ನೈಲಿಟ್ ಮತ್ತು ಇಂಟೆಲ್ ಇಂಡಿಯಾವನ್ನು ಅಭಿನಂದಿಸಿದರು. ಮೂಲಭೂತ ಮತ್ತು ಉದಯೋನ್ಮುಖ ತಂತ್ರಜ್ಞಾನ ಕೌಶಲ್ಯಗಳನ್ನು ನೈಜ-ಪ್ರಪಂಚದ ಅನುಭವ, ಉದ್ಯಮ-ಸಂಬಂಧಿತ ಪ್ರಕರಣ ಅಧ್ಯಯನಗಳು (case studies) ಮತ್ತು ಪ್ರಾಯೋಗಿಕ ಡೇಟಾಸೆಟ್‌ಗಳೊಂದಿಗೆ ಸಂಯೋಜಿಸುವ ದೀರ್ಘಕಾಲೀನ ಕೌಶಲ್ಯ ಮಾರ್ಗಗಳ ಅಗತ್ಯವನ್ನು ಅವರು ಉಲ್ಲೇಖಿಸಿದರು. ಭಾರತದ ಯುವಜನರು ಪ್ರಸ್ತುತ ಉದ್ಯೋಗಾವಕಾಶಗಳಿಗೆ ಮಾತ್ರವಲ್ಲದೆ ಭವಿಷ್ಯದ ಉದ್ಯೋಗಗಳಿಗೂ ಸಜ್ಜಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ, ಉದ್ಯಮ, ಶೈಕ್ಷಣಿಕ ಕ್ಷೇತ್ರ ಮತ್ತು ಕೌಶಲ್ಯ ಸಂಸ್ಥೆಗಳ ನಡುವೆ ನಿರಂತರ ಸಹಯೋಗದ ಮಹತ್ವವನ್ನು ಅವರು ಒತ್ತಿಹೇಳಿದರು.
ನೈಲಿಟ್‌ನ ಮಹಾ ನಿರ್ದೇಶಕರಾದ ಡಾ. ಮದನ್ ಮೋಹನ್ ತ್ರಿಪಾಠಿ ಅವರು ಮಾತನಾಡಿ, “ಕೃತಕ ಬುದ್ಧಿಮತ್ತೆಯ ವೇಗದ ವಿಕಸನವು ನಮ್ಮ ಶಿಕ್ಷಣ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಗೆ ಹೊಸ ಅವಕಾಶಗಳನ್ನು ಹಾಗೂ ಹೊಸ ಅಗತ್ಯತೆಗಳನ್ನು ಸೃಷ್ಟಿಸುತ್ತಿದೆ. ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸುವ ಜವಾಬ್ದಾರಿ ಹೊಂದಿರುವ ರಾಷ್ಟ್ರೀಯ ಸಂಸ್ಥೆಯಾಗಿ, ಕಲಿಕಾರ್ಥಿಗಳು ಮತ್ತು ಶಿಕ್ಷಣತಜ್ಞರು ತಾಂತ್ರಿಕ ರೂಪಾಂತರದ ಈ ಮುಂದಿನ ಹಂತದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೈಲಿಟ್ ಬದ್ಧವಾಗಿದೆ. ಇಂಟೆಲ್ ಇಂಡಿಯಾದೊಂದಿಗಿನ ನಮ್ಮ ಸಹಯೋಗವು ನೈಲಿಟ್‌ನ ದೇಶವ್ಯಾಪಿ ಕೌಶಲ್ಯ ವ್ಯಾಪ್ತಿಯನ್ನು ಇಂಟೆಲ್‌ನ ತಂತ್ರಜ್ಞಾನ ಪ್ರವೀಣತೆ ಮತ್ತು ಉದ್ಯಮದ ದೃಷ್ಟಿಕೋನದೊಂದಿಗೆ ಸಂಯೋಜಿಸುತ್ತದೆ, ಇದು ದೇಶಾದ್ಯಂತದ ಸಂಸ್ಥೆಗಳು ಮತ್ತು ಕಲಿಕಾರ್ಥಿಗಳಿಗೆ ಏಜೆಂಟಿಕ್ ಎಐ ಕಲಿಕೆಯನ್ನು ಹತ್ತಿರ ತರಲು ನಮಗೆ ಅನುವು ಮಾಡಿಕೊಡುತ್ತದೆ” ಎಂದು ಹೇಳಿದರು.

ಸಾರ್ವಭೌಮ ಎಐ (Sovereign AI) ಅನ್ನು ಪ್ರಜಾಸತ್ತಾತ್ಮಕಗೊಳಿಸುವ ಮತ್ತು ಭಾರತದಲ್ಲಿ ಬಲವಾದ ಹಾಗೂ ಅಂತರ್ಗತ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸರ್ಕಾರದ ದೃಷ್ಟಿಕೋನದ ಬಗ್ಗೆ ಒತ್ತಿ ಹೇಳುತ್ತಾ, ಇಂಡಿಯಾ ಎಐ ಮಿಷನ್‌ನ ಸಿಒಒ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಜಂಟಿ ಕಾರ್ಯದರ್ಶಿ ಶ್ರೀ ಸುದೀಪ್ ಶ್ರೀವಾಸ್ತವ ಅವರು, ದೇಶದ ಡಿಜಿಟಲ್ ಅರ್ಥವ್ಯವಸ್ಥೆಗೆ ಬಲವಾದ ಎಐ ಪ್ರತಿಭಾ ಪೈಪ್‌ಲೈನ್ (AI talent pipeline) ಅನ್ನು ನಿರ್ಮಿಸುವ ಮಹತ್ವದ ಕ್ಯೂರಿತು ತಿಳಿಸಿದರು.

ಶೈಕ್ಷಣಿಕ ಸಂಸ್ಥೆಗಳಾದ್ಯಂತ ಎಐ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಉದ್ಯಮ-ನೇತೃತ್ವದ ತರಬೇತಿ, ಎಐ-ಕೇಂದ್ರಿತ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಡಿಜಿಟಲ್ ಕಲಿಕಾ ಉಪಕ್ರಮಗಳ ಪಾತ್ರವನ್ನು ಅವರು ಉಲ್ಲೇಖಿಸಿದರು. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವೃತ್ತಿಪರರಿಗೆ ಉದಯೋನ್ಮುಖ ಎಐ ತಂತ್ರಜ್ಞಾನಗಳ ಪ್ರಾಯೋಗಿಕ ಅನುಭವವನ್ನು ಒದಗಿಸಲು ಎಐ ಪ್ರತಿಭೆ, ಎಐ ಡೇಟಾ ಲ್ಯಾಬ್‌ಗಳು ಮತ್ತು ಉದ್ಯಮ-ಶೈಕ್ಷಣಿಕ ಕ್ಷೇತ್ರದ ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸುವ ಮಹತ್ವವನ್ನು ಅವರು ಒತ್ತಿಹೇಳಿದರು.

ಇಂಟೆಲ್‌ನ ಏಷ್ಯಾ ಪೆಸಿಫಿಕ್ ಮತ್ತು ಜಪಾನ್, ಅಂತಾರಾಷ್ಟ್ರೀಯ ಸರ್ಕಾರಿ ವ್ಯವಹಾರಗಳ ಹಿರಿಯ ನಿರ್ದೇಶಕರಾದ ಶ್ರೀಮತಿ ಶ್ವೇತಾ ಖುರಾನಾ ಅವರು ಮಾತನಾಡಿ, "ಎಐ ತಂತ್ರಜ್ಞಾನವು ಸಹಾಯಕ ಉಪಕರಣಗಳಿಂದ (assistive tools) ಏಜೆಂಟಿಕ್ ವ್ಯವಸ್ಥೆಗಳಾಗಿ (agentic systems) ಮತ್ತು ಅಂತಿಮವಾಗಿ ಭೌತಿಕ ಬುದ್ಧಿಮತ್ತೆಯಾಗಿ (physical intelligence) ವಿಕಸನಗೊಳ್ಳುತ್ತಿದ್ದಂತೆ, ಅದು ಶಿಕ್ಷಣ, ಕೆಲಸ, ಉದ್ಯೋಗಗಳು ಮತ್ತು ಉದ್ಯಮಗಳನ್ನು ಮೂಲಭೂತವಾಗಿ ಮರುರೂಪಿಸುತ್ತದೆ. ಈ ಹೊಸ ಯುಗದಲ್ಲಿ, ಯಶಸ್ಸಿನ ನಿರ್ಣಾಯಕ ಅಂಶವೆಂದರೆ ಮಾನವ ಸನ್ನದ್ಧತೆಯಾಗಿದೆ. ಏಕೆಂದರೆ ವ್ಯಕ್ತಿಗಳಿಗೆ ಹೆಚ್ಚೆಚ್ಚು ಸಾಮರ್ಥ್ಯವಿರುವ ಎಐ ವ್ಯವಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಸಹಕರಿಸಲು ಕೌಶಲ್ಯಗಳು, ಹೊಂದಿಕೊಳ್ಳುವಿಕೆ ಮತ್ತು ವಿವೇಚನಾ ಶಕ್ತಿ ಅಗತ್ಯವಿರುತ್ತದೆ. ಆದ್ದರಿಂದ ಎಐ ಕೌಶಲ್ಯಗಳಲ್ಲಿ ಹೂಡಿಕೆ ಮಾಡುವುದು ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು, ಅವಕಾಶಗಳನ್ನು ವಿಸ್ತರಿಸಲು ಮತ್ತು ತಾಂತ್ರಿಕ ಸಾರ್ವಭೌಮತ್ವವನ್ನು ಬಲಪಡಿಸಲು ಅತ್ಯಗತ್ಯ. ನೈಲಿಟ್ (NIELIT) ನೊಂದಿಗಿನ ನಮ್ಮ ಸಹಯೋಗದ ಮೂಲಕ, ನಾವು ಈ ದೃಷ್ಟಿಕೋನವನ್ನು ಕ್ರಿಯೆಯಾಗಿ ಪರಿವರ್ತಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಇಡುತ್ತಿದ್ದೇವೆ” ಎಂದು ಹೇಳಿದರು.

ಈ ಸಂವಾದದ ಪ್ರಮುಖ ಫಲಿತಾಂಶವೆಂದರೆ, 'ನೈಲಿಟ್–ಇಂಟೆಲ್ ಇಂಡಿಯಾ ಏಜೆಂಟಿಕ್ ಎಐ ಕೌಶಲ್ಯ ಉಪಕ್ರಮ'ದ (NIELIT–Intel India Agentic AI Skilling Initiative) ಚಾಲನೆಯಾಗಿದೆ. ಇದು ಉದ್ಯಮಕ್ಕೆ ಅನುಗುಣವಾದ ಏಜೆಂಟಿಕ್ ಎಐ ಕಲಿಕಾ ಅವಕಾಶಗಳ ಪ್ರವೇಶವನ್ನು ವಿಸ್ತರಿಸುವ ಮತ್ತು ದೇಶದಲ್ಲಿ ಭವಿಷ್ಯಕ್ಕೆ ಸಜ್ಜಾದ ಎಐ ಪ್ರತಿಭಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.
ಈ ಉಪಕ್ರಮದಡಿಯಲ್ಲಿ, ಎರಡು ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ:
1. ಪ್ರತಿಯೊಬ್ಬರಿಗೂ ಏಜೆಂಟಿಕ್ ಎಐ
ಈ ಕಾರ್ಯಕ್ರಮವು ಉತ್ಪಾದಕತೆಯನ್ನು ಸುಧಾರಿಸುವುದು, ವ್ಯವಹಾರ ರೂಪಾಂತರವನ್ನು ಸಕ್ರಿಯಗೊಳಿಸುವುದು ಮತ್ತು ಬುದ್ಧಿವಂತ ನಿರ್ಧಾರ ಕೈಗೊಳ್ಳುವುದನ್ನು ಬೆಂಬಲಿಸುವುದರ ಮೇಲೆ ಗಮನ ಹರಿಸಿ, ಕಾರ್ಯಪ್ರವಾಹ ನವೀನತೆ (workflow automation), ಎಐ ಏಜೆಂಟ್‌ಗಳು ಮತ್ತು ಬಹು-ಏಜೆಂಟ್ ವ್ಯವಸ್ಥೆಗಳನ್ನು (multi-agent systems) ಕಲಿಕಾರ್ಥಿಗಳಿಗೆ ಪರಿಚಯಿಸುತ್ತದೆ. ಈ ಕಾರ್ಯಕ್ರಮವು ನೋ-ಕೋಡ್ (no-code) ವೇದಿಕೆಗಳನ್ನು ಬಳಸಿ ಎಐ-ಚಾಲಿತ ಕಾರ್ಯಪ್ರವಾಹಗಳು ಮತ್ತು ಏಜೆಂಟಿಕ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು ಹಾಗೂ ನಿರ್ವಹಿಸಲು ಪ್ರಾಯೋಗಿಕ ಅನುಭವವನ್ನು ಒದಗಿಸುತ್ತದೆ.
2. ಏಜೆಂಟಿಕ್ ಎಐ ಸಿಸ್ಟಮ್ಸ್ ಎಂಜಿನಿಯರಿಂಗ್ (Engineering Agentic AI Systems)
ಈ ಕಾರ್ಯಕ್ರಮವು ಎಐ-ಚಾಲಿತ ಏಜೆಂಟಿಕ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವುದು, ನಿರ್ಮಿಸುವುದು ಮತ್ತು ನಿಯೋಜಿಸುವುದರ ಮೇಲೆ (deploying) ಗಮನ ಹರಿಸುತ್ತದೆ. ವಿಸ್ತರಿಸಬಹುದಾದ ಮತ್ತು ಉತ್ಪಾದನೆಗೆ ಸಿದ್ಧವಾಗಿರುವ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಏಜೆಂಟ್ ರಚನೆ (agent architecture), ಉಪಕರಣಗಳ ಸಂಯೋಜನೆ, ಸರಿಹೊಂದಿಸುವಿಕೆ (orchestration), ಮೆಮೊರಿ ಮತ್ತು ನಿಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಒಳಗೊಂಡು, ಕಲಿಕಾರ್ಥಿಗಳು ನೋ-ಕೋಡ್/ಲೋ-ಕೋಡ್ ವೇದಿಕೆಗಳು ಮತ್ತು ಕೋಡ್-ಆಧಾರಿತ ಚೌಕಟ್ಟುಗಳ ಪ್ರಾಯೋಗಿಕ ಅನುಭವವನ್ನು ಪಡೆಯಲಿದ್ದಾರೆ.
ರಾಷ್ಟ್ರೀಯ ನಾಯಕತ್ವ ಸಂವಾದ ಮತ್ತು ಏಜೆಂಟಿಕ್ ಎಐ ಕೌಶಲ್ಯ ಉಪಕ್ರಮದ ಚಾಲನೆಯು ಸರ್ಕಾರ-ಶೈಕ್ಷಣಿಕ ಕ್ಷೇತ್ರ-ಉದ್ಯಮ ಸಹಯೋಗವನ್ನು ಬಲಪಡಿಸುವ ಮತ್ತು ಕೃತಕ ಬುದ್ಧಿಮತ್ತೆಯ ವೇಗದ ವಿಕಸನಕ್ಕೆ ಸ್ಪಂದಿಸುವ ಶಿಕ್ಷಣ ಹಾಗೂ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಪ್ರಮುಖ ಹೆಜ್ಜೆಯನ್ನು ಗುರುತಿಸುತ್ತದೆ.

ಈ ಸಹಯೋಗದ ಮೂಲಕ, ನೈಲಿಟ್ ಮತ್ತು ಇಂಟೆಲ್ ಇಂಡಿಯಾ ಸಂಸ್ಥೆಗಳು ಉದ್ಯಮಕ್ಕೆ ಅನುಗುಣವಾದ, ಪ್ರಾಯೋಗಿಕ ಮತ್ತು ಭವಿಷ್ಯಕ್ಕೆ ಸಜ್ಜಾದ ಏಜೆಂಟಿಕ್ ಎಐ ಕಲಿಕೆಯ ಪ್ರವೇಶವನ್ನು ವಿಶೇಷವಾಗಿ ದೇಶಾದ್ಯಂತದ ಕಲಿಕಾರ್ಥಿಗಳು ಮತ್ತು ಸಂಸ್ಥೆಗಳಿಗೆ ವಿಸ್ತರಿಸುವ ಹಾಗೂ ಭಾರತದ ಎಐ-ಚಾಲಿತ ಬೆಳವಣಿಗೆಯ ಮುಂದಿನ ಹಂತದಲ್ಲಿ ಭಾಗವಹಿಸಲು ಮತ್ತು ಅದನ್ನು ಮುನ್ನಡೆಸಲು ಸಮರ್ಥವಾಗಿರುವ ನುರಿತ ಕಾರ್ಯಪಡೆಯನ್ನು ನಿರ್ಮಿಸುವತ್ತ ಕೊಡುಗೆ ನೀಡುವ ಗುರಿಯನ್ನು ಹೊಂದಿವೆ.
*****
(ಪ್ರಕಟಣೆ ಐ.ಡಿ.: 2306289)
ವಿಸಿಟರ್ ಕೌಂಟರ್ : 10