ಲೋಕಸಭಾ ಸಚಿವಾಲಯ
ಭಾರತ ಮತ್ತು ಸೇಶೆಲ್ಸ್ ನೂರಾರು ವರ್ಷಗಳ ಹಳೆಯ ನಾಗರಿಕತೆಯ ಬಾಂಧವ್ಯದಲ್ಲಿ ಬೇರೂರಿರುವ ಸುಸ್ಥಿರ ಸಂಬಂಧವನ್ನು ಹಂಚಿಕೊಳ್ಳುತ್ತವೆ: ಲೋಕಸಭೆ ಸಭಾಪತಿ
ಯೋಗ ಸೇರಿದಂತೆ ಭಾರತದ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ, ಸೇಶೆಲ್ಸ್‌ನ ಆಳವಾದ ಆಸಕ್ತಿಯು ಜನರ ನಡುವಿನ ಸೌಹಾರ್ದಯುತ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ: ಲೋಕಸಭೆ ಸಭಾಪತಿ
ಸೇಶೆಲ್ಸ್‌ನ ರಾಷ್ಟ್ರೀಯ ಸಂಸತ್ತನ್ನು ಉದ್ದೇಶಿಸಿ ಪ್ರಧಾನಮಂತ್ರಿ ಮೋದಿ ಮಾಡಿದ ಭಾಷಣವು, ದ್ವಿಪಕ್ಷೀಯ ಬಾಂಧವ್ಯಕ್ಕೆ ಹೊಸ ಚೈತನ್ಯವನ್ನು ತುಂಬಿದೆ: ಲೋಕಸಭೆ ಸಭಾಪತಿ
ಸೇಶೆಲ್ಸ್‌ನ ಸಂಸದೀಯ ನಿಯೋಗದೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಲೋಕಸಭಾ ಸ್ಪೀಕರ್
ಪ್ರಕಟಣಾ ದಿನಾಂಕ:
02 SEP 2026 6:06PM by PIB Bengaluru
ಲೋಕಸಭಾ ಸಭಾಪತಿ ಶ್ರೀ ಓಂ ಬಿರ್ಲಾ ಅವರು ಇಂದು ಸಂಸತ್ ಭವನದ ಸಂಕೀರ್ಣದಲ್ಲಿ ಸೇಶೆಲ್ಸ್‌ನ ರಾಷ್ಟ್ರೀಯ ಸಂಸತ್ತಿನ ಸಭಾಪತಿ ಗೌರವಾನ್ವಿತ ಶ್ರೀಮತಿ ಅಜರೆಲ್ ಯೊಲಾಂಡಾ ಎರ್ನೆಸ್ಟಾ ಮತ್ತು ಸೇಶೆಲ್ಸ್‌ನ ಪ್ರಮುಖ ಸಂಸದೀಯ ನಿಯೋಗದೊಂದಿಗೆ ದ್ವಿಪಕ್ಷೀಯ ಸಂಸದೀಯ ಸಂವಾದ ನಡೆಸಿದರು.
ಗೌರವಾನ್ವಿತ ಶ್ರೀಮತಿ ಅಜರೆಲ್ ಎರ್ನೆಸ್ಟಾ ಅವರನ್ನು ಸ್ವಾಗತಿಸಿದ ಶ್ರೀ ಬಿರ್ಲಾ ಅವರು, ಸೇಶೆಲ್ಸ್‌ನ ರಾಷ್ಟ್ರೀಯ ಸಂಸತ್ತಿನ ಮೊದಲ ಮಹಿಳಾ ಸಭಾಪತಿ ಆಗಿ ಐತಿಹಾಸಿಕವಾಗಿ ಆಯ್ಕೆಯಾಗಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ಈ ವರ್ಷದ ಆರಂಭದಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ನ ಸ್ಪೀಕರ್‌ಗಳು ಮತ್ತು ಪ್ರಿಸೈಡಿಂಗ್ ಆಫೀಸರ್‌ಗಳ (CSPOC) 28 ನೇ ಸಮ್ಮೇಳನದಲ್ಲಿ ಎರ್ನೆಸ್ಟಾ ಅವರೊಂದಿಗೆ ನಡೆಸಿದ ತಮ್ಮ ಹಿಂದಿನ ಸಂವಾದವನ್ನು ಆತ್ಮೀಯವಾಗಿ ನೆನಪಿಸಿಕೊಂಡ ಶ್ರೀ ಬಿರ್ಲಾ, ಭಾರತದ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ, ವಿಶೇಷವಾಗಿ ಯೋಗದಲ್ಲಿ ಅವರಿಗಿರುವ ನಿರಂತರ ಆಸಕ್ತಿಯನ್ನು ಪ್ರಶಂಸಿಸಿದರು. ಅವರು ಶ್ರೀಮತಿ ಕಾಳಿ ಮಾತೆಯ ಮೇಲಿರುವ ಅವರ ಭಕ್ತಿಯನ್ನೂ ಆತ್ಮೀಯವಾಗಿ ಸ್ಮರಿಸಿದರು.
ಭಾರತ ಮತ್ತು ಸೇಶೆಲ್ಸ್ ನಡುವಿನ ಆಳವಾದ ಹಾಗೂ ಸುಸ್ಥಿರ ಸ್ನೇಹವನ್ನು ಪ್ರತಿಬಿಂಬಿಸಿದ ಶ್ರೀ ಬಿರ್ಲಾ ಅವರು, ಸೇಶೆಲ್ಸ್‌ನ 50ನೇ ಸ್ವಾತಂತ್ರ್ಯೋತ್ಸವದ ಜೊತೆಗೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 50 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸೇಶೆಲ್ಸ್‌ಗೆ ಅಭಿನಂದನೆ ಸಲ್ಲಿಸಿದರು. ಭಾರತ ಮತ್ತು ಸೇಶೆಲ್ಸ್ ನಡುವಿನ ಬಾಂಧವ್ಯವು ರಾಜತಾಂತ್ರಿಕತೆಯ ಸಾಂಪ್ರದಾಯಿಕ ಗಡಿಗಳನ್ನು ಮೀರಿ ನಿಂತಿದ್ದು, ಶತಮಾನಗಳಷ್ಟು ಹಳೆಯ ನಾಗರಿಕತೆಯ ಸಂಪರ್ಕಗಳು, ಸಕ್ರಿಯ ಭಾರತೀಯ ವಲಸೆಗಾರರು ಮತ್ತು ನಿರಂತರ ಜನರ ನಡುವಿನ ಬಾಂಧವ್ಯದಿಂದ ಸಮೃದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಉಭಯ ದೇಶಗಳ ಹಂಚಿಕೆಯ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಂಪ್ರದಾಯಗಳು ಈ ನಿಕಟ ಸಂಬಂಧವನ್ನು ಇನ್ನಷ್ಟು ಬಲಪಡಿಸಿವೆ ಎಂದು ಶ್ರೀ ಬಿರ್ಲಾ ಒತ್ತಿಹೇಳಿದರು. ಅವರು ವಿಶೇಷವಾಗಿ ಸೇಶೆಲ್ಸ್‌ನಲ್ಲಿ ಭಾರತದ ಆಧ್ಯಾತ್ಮಿಕ ಸಂಪ್ರದಾಯಗಳು, ಪ್ರಮುಖವಾಗಿ ಯೋಗದ ಬಗ್ಗೆ ಬೆಳೆಯುತ್ತಿರುವ ಆಳವಾದ ಆಸಕ್ತಿಯನ್ನು ಎತ್ತಿ ತೋರಿದರು. ಯೋಗದ ಕಡೆಗಿನ ಶ್ರೀಮತಿ ಎರ್ನೆಸ್ಟಾ ಅವರ ವೈಯಕ್ತಿಕ ಒಲವನ್ನು ಪ್ರಶಂಸಿಸಿದ ಅವರು, ಭಾರತೀಯ ತರಬೇತುದಾರರ ಮೂಲಕ ಸೇಶೆಲ್ಸ್‌ನಲ್ಲಿ ಯೋಗವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಭಾರತದ ಬೆಂಬಲವನ್ನು ನೀಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ಸೇಶೆಲ್ಸ್‌ಗೆ ನೀಡಿದ ಅಧಿಕೃತ ಪ್ರವಾಸವನ್ನು ಉಲ್ಲೇಖಿಸಿದ ಶ್ರೀ ಬಿರ್ಲಾ, ಪ್ರಧಾನಮಂತ್ರಿ ಶ್ರೀ ಮೋದಿ ಮತ್ತು ಸೇಶೆಲ್ಸ್‌ನ ಅಧ್ಯಕ್ಷರಾದ ಘನತೆವೆತ್ತ ಡಾ. ಪ್ಯಾಟ್ರಿಕ್ ಹರ್ಮಿನಿ ನಡುವಿನ ನಿಕಟ ಮತ್ತು ಆತ್ಮೀಯ ಸಂಬಂಧಡಾ ಕುರಿತು ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ಮೋದಿ ಅವರು ಸೇಶೆಲ್ಸ್‌ನ ರಾಷ್ಟ್ರೀಯ ಸಂಸತ್ತಿನ ವಿಶೇಷ ಗೋಷ್ಠಿಯನ್ನು ಉದ್ದೇಶಿಸಿ ಭಾಷಣ ಮಾಡಿದ ಮೊದಲ ಭಾರತೀಯ ಪ್ರಧಾನಮಂತ್ರಿಯಾಗಿದ್ದಾರೆ ಎಂಬುದಕ್ಕೆ ಅವರು ವಿಶೇಷ ಹೆಮ್ಮೆ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಶ್ರೀ ಮೋದಿ ಅವರ ಐತಿಹಾಸಿಕ ಭಾಷಣವು ಭಾರತ ಮತ್ತು ಸೇಶೆಲ್ಸ್ ನಡುವಿನ ಬಹುವಿಧದ ಬಾಂಧವ್ಯಕ್ಕೆ ಹೊಸ ಚೈತನ್ಯ ಮತ್ತು ಹೊಸ ವೇಗವನ್ನು ತುಂಬಿದೆ, ಉಭಯ ದೇಶಗಳ ನಡುವಿನ ಪಾಲುದಾರಿಕೆಯ ಸೌಹಾರ್ದತೆ ಮತ್ತು ಆಳವನ್ನು ಇನ್ನಷ್ಟು ಪುನರುಚ್ಚರಿಸಿದೆ ಎಂದು ಶ್ರೀ ಬಿರ್ಲಾ ಅಭಿಪ್ರಾಯಪಟ್ಟರು. ಸಂಸದೀಯ ತೊಡಗಿಸಿಕೊಳ್ಳುವಿಕೆಯ ಮಹತ್ವವನ್ನು ಒತ್ತುಪಡಿಸಿದ ಶ್ರೀ ಬಿರ್ಲಾ, ಉಭಯ ಶಾಸಕಾಂಗಗಳ ನಡುವಿನ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಮತ್ತು ಪ್ರಜಾಪ್ರಭುತ್ವ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳ ತಮ್ಮ ಹಂಚಿಕೆಯ ಪರಂಪರೆಯನ್ನು ಮುನ್ನಡೆಸಲು ಕರೆ ನೀಡಿದರು.
ಶ್ರೀಮತಿ ಎರ್ನೆಸ್ಟಾ ಅವರ ಭಾರತದೊಂದಿಗಿನ ಹಿಂದಿನ ಸಂಪರ್ಕವನ್ನು ನೆನಪಿಸಿಕೊಂಡ ಶ್ರೀ ಬಿರ್ಲಾ ಅವರು, ಎರ್ನೆಸ್ಟಾ ಅವರು ಸಂಸದೀಯ ಅಧ್ಯಯನ ಮತ್ತು ತರಬೇತಿ ಬ್ಯೂರೋ (BPST), ಅಂದರೆ ಇಂದಿನ ಪ್ರೈಡ್ (PRIDE) ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಉಲ್ಲೇಖಿಸಿದರು. ಭಾರತದೊಂದಿಗಿನ ಅವರ ದೀರ್ಘಕಾಲದ ನಿಕಟ ಸಂಬಂಧವು ಉಭಯ ಸಂಸತ್ತುಗಳ ನಡುವಿನ ಸುಸ್ಥಿರ ಬಾಂಧವ್ಯವನ್ನು ಪೋಷಿಸಲು ಅರ್ಥಪೂರ್ಣ ಕೊಡುಗೆ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು. ಭಾರತೀಯ ಸಂಸತ್ತಿಗೆ ಭೇಟಿ ನೀಡುವಂತೆ ಸೇಶೆಲ್ಸ್‌ನ ರಾಷ್ಟ್ರೀಯ ಸಂಸತ್ತಿನ ಸದಸ್ಯರನ್ನು ಆಹ್ವಾನಿಸಿದ ಶ್ರೀ ಬಿರ್ಲಾ ಅವರು, ಇಂತಹ ವಿನಿಮಯಗಳು ಭಾರತದ ಸಮೃದ್ಧ ಮತ್ತು ರೋಚಕ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಹತ್ತಿರದಿಂದ ಅನುಭವಿಸಲು ಅವಕಾಶವನ್ನು ಒದಗಿಸುತ್ತವೆ ಎಂದು ಹೇಳಿದರು. ಸಂಸದೀಯ ಸಾಮರ್ಥ್ಯವನ್ನು ಬಲಪಡಿಸುವಲ್ಲಿ 'ಪ್ರಜಾಪ್ರಭುತ್ವಗಳಿಗಾಗಿ ಸಂಸದೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆ'ಯ (PRIDE) ಪಾತ್ರವನ್ನು ಒತ್ತಿ ಹೇಳಿದ ಅವರು, ಸೇಶೆಲ್ಸ್‌ನ ಸದಸ್ಯರು ಮತ್ತು ಅಧಿಕಾರಿಗಳಿಗಾಗಿ ಶಾಸನಬದ್ಧ ಕರಡು ರಚನೆ, ಸಂಸದೀಯ ಕಾರ್ಯವಿಧಾನಗಳು ಮತ್ತು ಇತರ ಶಾಸನಬದ್ಧ ಪ್ರಕ್ರಿಯೆಗಳ ಕುರಿತು ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂದು ತಿಳಿಸಿದರು.
ಸಂಸತ್ತಿನ ಕಾರ್ಯನಿರ್ವಹಣೆಯಲ್ಲಿ ತಂತ್ರಜ್ಞಾನದ ಪರಿವರ್ತನಾತ್ಮಕ ಪಾತ್ರದ ಬಗ್ಗೆ ಮಾತನಾಡಿದ ಶ್ರೀ ಬಿರ್ಲಾ ಅವರು, ಭಾರತೀಯ ಸಂಸತ್ತು ಕಾಗದರಹಿತ ಸಂಸತ್ತಿನ (paperless Parliament) ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ ಮತ್ತು ಸಂಸದೀಯ ನಡಾವಳಿಗಳನ್ನು 22 ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸಿಕೊಳ್ಳುತ್ತಿದೆ ಎಂದು ತಿಳಿಸಿದರು. 'ಡಿಜಿಟಲ್ ಸಂಸತ್ತು' ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಭಾರತದ ಆಳವಾದ ಹೂಡಿಕೆಗಳು ಮತ್ತು ದೇಶಾದ್ಯಂತ ಶಾಸಕಾಂಗ ಸಂಸ್ಥೆಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿಗೆ ತರುವ ಪ್ರಯತ್ನಗಳನ್ನು ಅವರು ಎತ್ತಿ ತೋರಿದರು. ಆರೋಗ್ಯ, ಡಿಜಿಟಲ್ ರೂಪಾಂತರ, ಮೂಲಸೌಕರ್ಯ ಮತ್ತು ಪುನರುತ್ಪಾದಕ ಇಂಧನದಂತಹ ಕ್ಷೇತ್ರಗಳಲ್ಲಿ ಭಾರತ-ಸೇಶೆಲ್ಸ್ ಸಹಕಾರಕ್ಕೆ ಇರುವ ಅಪಾರ ಸಾಧ್ಯತೆಗಳನ್ನು ಅವರು ಒತ್ತಿಹೇಳಿದರು. ಪ್ರೈಡ್ (PRIDE) ಮೂಲಕ ಸಂಸದೀಯ ಸಾಮರ್ಥ್ಯ ವರ್ಧನೆಯಲ್ಲಿ ಭಾರತದ ಸಮೃದ್ಧ ಅನುಭವವನ್ನು ಹಂಚಿಕೊಳ್ಳಲು ಶ್ರೀ ಬಿರ್ಲಾ ಅವರು ಮುಂದಾದರು ಮತ್ತು ಪ್ರೈಡ್‌ನ ವಿಶೇಷ ತರಬೇತಿ ಕಾರ್ಯಕ್ರಮಗಳಿಂದ ಸೇಶೆಲ್ಸ್‌ನ ರಾಷ್ಟ್ರೀಯ ಸಂಸತ್ತಿನ ಸದಸ್ಯರು ಹಾಗೂ ಅಧಿಕಾರಿಗಳು ಪ್ರಯೋಜನ ಪಡೆಯಬಹುದು ಎಂದು ಪ್ರಸ್ತಾಪಿಸಿದರು.
ಸಂಸ್ಕೃತಿ, ಶಿಕ್ಷಣ ಮತ್ತು ಪ್ರವಾಸೋದ್ಯಮದ ಮೂಲಕ ಭಾರತ-ಸೇಶೆಲ್ಸ್ ಜನರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಸಮೃದ್ಧಗೊಳಿಸುವ ಮಹತ್ವವನ್ನು ಶ್ರೀ ಬಿರ್ಲಾ ಒತ್ತಿಹೇಳಿದರು. ಗ್ಲೋಬಲ್ ಸೌತ್ (Global South) ಧ್ವನಿ ಮತ್ತು ಆಕಾಂಕ್ಷೆಗಳನ್ನು ವರ್ಧಿಸಲು ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡುವ ಅವಕಾಶವನ್ನೂ ಅವರು ಎತ್ತಿಹಿಡಿದರು. ಸೇಶೆಲ್ಸ್ ಅನ್ನು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ವಿಶ್ವಾಸಾರ್ಹ ಮತ್ತು ಮೌಲ್ಯಯುತ ಪಾಲುದಾರ ಎಂದು ಬಣ್ಣಿಸಿದ ಶ್ರೀ ಬಿರ್ಲಾ, ‘ಮಹಾ ಸಾಗರ’ ದೃಷ್ಟಿಕೋನದ ಸನ್ನಿವೇಶದಲ್ಲಿ ಅದರ ಮಹತ್ವವದ ಬಗ್ಗೆ ಒತ್ತಿ ಹೇಳಿದರು. ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ವೇದಿಕೆಗಳ ಮೂಲಕ ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಪ್ರೋತ್ಸಾಹಿಸುವಲ್ಲಿ ಉಭಯ ದೇಶಗಳ ನಡುವಿನ ನಿಕಟ ಸಹಕಾರದ ಮಹತ್ವವನ್ನು ಅವರು ಒತ್ತಿಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೌರವಾನ್ವಿತ ಶ್ರೀಮತಿ ಅಜರೆಲ್ ಎರ್ನೆಸ್ಟಾ ಅವರು, ತಮಗೆ ಮತ್ತು ಸಂಸದೀಯ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಶ್ರೀ ಬಿರ್ಲಾ ಅವರಿಗೆ ಧನ್ಯವಾದ ಅರ್ಪಿಸಿದರು. ಸಿಎಸ್‌ಪಿಒಸಿ (CSPOC) ಸಮಯದಲ್ಲಿ ಭಾರತೀಯ ಸಂಸತ್ತಿಗೆ ನೀಡಿದ್ದ ತಮ್ಮ ಹಿಂದಿನ ಭೇಟಿಯನ್ನು ನೆನಪಿಸಿಕೊಂಡ ಅವರು, "ಭಾರತವು ನನ್ನ ಹೃದಯ ಗೆದ್ದಿದೆ" ಎಂದು ಹೇಳಿದರು. ಭಾರತವನ್ನು "ಪ್ರಜಾಪ್ರಭುತ್ವದ ತಾಯಿ" ಎಂದು ಬಣ್ಣಿಸಿದ ಶ್ರೀಮತಿ ಎರ್ನೆಸ್ಟಾ, ಭಾರತದೊಂದಿಗಿನ ತಮ್ಮ ದೀರ್ಘಕಾಲದ ನಿಕಟ ಸಂಬಂಧವನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಸೇಶೆಲ್ಸ್‌ನಲ್ಲಿ ನೆಲೆಸಿದ ಆರಂಭಿಕ ಜನರಲ್ಲಿ ಭಾರತೀಯರೂ ಸೇರಿದ್ದಾರೆ ಮತ್ತು ಭಾರತೀಯ ಸಂಸ್ಕೃತಿಯು ಈ ದ್ವೀಪ ರಾಷ್ಟ್ರದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಆಳವಾಗಿ ಹೆಣೆದುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತ ಮತ್ತು ಸೇಶೆಲ್ಸ್ ಕೇವಲ ಒಂದು ಮಹಾಸಾಗರವನ್ನು ಮಾತ್ರವಲ್ಲದೆ, ಹಂಚಿಕೆಯ ಇತಿಹಾಸ ಮತ್ತು ಸುಸ್ಥಿರ ಬಾಂಧವ್ಯವನ್ನು ಹಂಚಿಕೊಳ್ಳುತ್ತವೆ ಎಂದು ಉಲ್ಲೇಖಿಸಿದ ಶ್ರೀಮತಿ ಎರ್ನೆಸ್ಟಾ, ಸಂಸತ್ತಿನ ಡಿಜಿಟಲೀಕರಣ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ತಂತ್ರಜ್ಞಾನದ ವ್ಯಾಪಕ ಬಳಕೆಯಲ್ಲಿ ಭಾರತದ ಅದ್ಭುತ ಪ್ರಗತಿಯನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ಡಾ. ಡಿ. ಪುರಂದೇಶ್ವರಿ, ಶ್ರೀಮತಿ ಅಪರಾಜಿತ ಸಾರಂಗಿ ಮತ್ತು ಶ್ರೀಮತಿ ಹಿಮಾದ್ರಿ ಸಿಂಗ್ ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2306161)
ವಿಸಿಟರ್ ಕೌಂಟರ್ : 5