ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ನೀರು ಕುರಿತ ರಾಷ್ಟ್ರೀಯ ಇಲಾಖಾ ಶೃಂಗಸಭೆಯ ಸಮಾರೋಪ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು
'ಟೀಮ್ ಇಂಡಿಯಾ'ದ ಸ್ಫೂರ್ತಿಯನ್ನು ಬಲಪಡಿಸಲು ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಧಾನಮಂತ್ರಿ ಅವರು ಪರಿಕಲ್ಪಿಸಿರುವ ಶೃಂಗಸಭೆಗಳ ಸರಣಿಯಲ್ಲಿ ಇದು ಮೊದಲನೆಯದು
ಕಾರ್ಯಸಾಧ್ಯ ಮತ್ತು ಕಾಲಮಿತಿಯ ಫಲಿತಾಂಶಗಳಿಗಾಗಿ ನಿರಂತರ ಪರಿಶೀಲನೆ ಮತ್ತು ಅನುಸರಣಾ ಪ್ರಕ್ರಿಯೆ ಅಳವಡಿಸಿಕೊಳ್ಳುವಂತೆ ಪ್ರಧಾನಮಂತ್ರಿ ಒತ್ತಿ ಹೇಳಿದರು
ಜನರ ಸಹಭಾಗಿತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು ಜಲ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲು ‘ಜಲ ಉತ್ಸವ’ಕ್ಕೆ ಉತ್ತೇಜನ ನೀಡುವಂತೆ ಕರೆ ನೀಡಿದರು
ನೀರು ಉಳಿತಾಯ ಮಾಡುವ ತಂತ್ರಜ್ಞಾನಗಳ ವ್ಯಾಪಕ ಅಳವಡಿಕೆಗೆ ಹಾಗೂ ಜಾಗತಿಕ ಅತ್ಯುತ್ತಮ ಪದ್ಧತಿಗಳಿಂದ ಕಲಿಯಬೇಕು: ಪ್ರಧಾನಿ
ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆಯ ಮೂಲಕ ಬಲವಾದ ಜಲ ದತ್ತಾಂಶ ಆಡಳಿತ ವ್ಯವಸ್ಥೆ ರೂಪಿಸಬೇಕು: ಪ್ರಧಾನಿ
ಜಲ ಸಂಬಂಧಿತ ವಿಷಯಗಳ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ರೈತರನ್ನು ಒಳಗೊಂಡ ವ್ಯವಸ್ಥಿತ ಅಂತಾರಾಜ್ಯ ಅಧ್ಯಯನ ಪ್ರವಾಸಗಳನ್ನು ಆಯೋಜಿಸುವಂತೆ ಪ್ರಧಾನಮಂತ್ರಿ ಅವರು ಸಲಹೆ ನೀಡಿದರು
ಪ್ರಕಟಣಾ ದಿನಾಂಕ:
02 SEP 2026 8:56PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಲಶಕ್ತಿ ಸಚಿವಾಲಯ ಆಯೋಜಿಸಿದ್ದ ಎರಡು ದಿನಗಳ 'ನೀರು ಕುರಿತ ರಾಷ್ಟ್ರೀಯ ಇಲಾಖಾ ಶೃಂಗಸಭೆ'ಯ ಸಮಾರೋಪ ಅಧಿವೇಶನದ ಅಧ್ಯಕ್ಷತೆ ವಹಿಸಿದರು. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ʼಟೀಮ್ ಇಂಡಿಯಾʼದ ಸ್ಫೂರ್ತಿಯನ್ನು ಬಲಪಡಿಸುವುದು, ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಆಳಗೊಳಿಸುವುದು ಹಾಗೂ ರಾಷ್ಟ್ರೀಯ ಆದ್ಯತೆಗಳ ಸಾಮೂಹಿಕ ಹೊಣೆಗಾರಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಧಾನಮಂತ್ರಿಯವರು ಪರಿಕಲ್ಪಿಸಿರುವ ಇಲಾಖಾ ಶೃಂಗಸಭೆಗಳ ಸರಣಿಯಲ್ಲಿ ಇದು ಮೊದಲನೆಯದಾಗಿದೆ. ಭಾರತದ ಜಲ ಭದ್ರತೆಯ ವಿವಿಧ ಆಯಾಮಗಳ ಕುರಿತು ಸಮಗ್ರ ಚರ್ಚೆ ನಡೆಸಲು ಈ ಶೃಂಗಸಭೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಒಂದೇ ವೇದಿಕೆಗೆ ತಂದಿತು.
ಎರಡು ದಿನಗಳ ಸುದೀರ್ಘ ಚಿಂತನ-ಮಂಥನವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಶೃಂಗಸಭೆಯಲ್ಲಿ ಹೊರಹೊಮ್ಮಿದ ಕಾರ್ಯಸಾಧ್ಯ ಹಾಗೂ ಕಾಲಮಿತಿಯ ಕ್ರಿಯಾ ಅಂಶಗಳನ್ನು ನಿರಂತರ ಪರಿಶೀಲನೆ ಮತ್ತು ಕಲಿಕೆಯ ಪ್ರಕ್ರಿಯೆಯ ಮೂಲಕ ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಒತ್ತಿ ಹೇಳಿದರು. ಶೃಂಗಸಭೆಯು ಒಂದು ಬಾರಿಯ ಕಾರ್ಯಕ್ರಮವಾಗಿ ಉಳಿಯಬಾರದು ಎಂದು ತಿಳಿಸಿದ ಅವರು, ನಿರಂತರ ಪರಿಶೀಲನೆ ಮತ್ತು ಅನುಸರಣಾ ಕ್ರಮಗಳ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಜನಸಂಖ್ಯೆ ಹೆಚ್ಚಳ ಮತ್ತು ಭವಿಷ್ಯದ ನೀರಿನ ಅಗತ್ಯತೆಗಳು ಸೇರಿದಂತೆ ನಗರೀಕರಣದಿಂದ ಉದ್ಭವಿಸುತ್ತಿರುವ ಸವಾಲುಗಳ ಕುರಿತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅರಿವು ಮೂಡಿಸುವಂತೆ ಪ್ರಧಾನಮಂತ್ರಿಯವರು ಕರೆ ನೀಡಿದರು. ನಗರ ಸ್ಥಳೀಯ ಸಂಸ್ಥೆಗಳಿಗಾಗಿ ಇದೇ ರೀತಿಯ ಚಿಂತನ-ಶಿಬಿರಗಳನ್ನು ಆಯೋಜಿಸುವಂತೆಯೂ ಅವರು ಸಲಹೆ ನೀಡಿದರು. ನೀರು ಉಳಿತಾಯ ಮಾಡುವ ತಂತ್ರಜ್ಞಾನಗಳ ವ್ಯಾಪಕ ಅಳವಡಿಕೆಗೆ ಅವರು ಕರೆ ನೀಡಿದರು. ಭಾರತೀಯ ತಯಾರಕರು ಮತ್ತು ಸಂಬಂಧಿತ ವಲಯದ ಪಾಲುದಾರರು ಪರಿಣಾಮಕಾರಿ ಪರಿಹಾರಗಳನ್ನು ಅಭಿವೃದ್ಧಿಪಡಿಸಿ, ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗುವಂತೆ ಜಾಗತಿಕ ಅತ್ಯುತ್ತಮ ಪದ್ಧತಿಗಳ ಪ್ರದರ್ಶನ ಸೇರಿದಂತೆ ವಿಶೇಷ ಪ್ರದರ್ಶನಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವಂತೆಯೂ ಅವರು ಸಲಹೆ ನೀಡಿದರು.
ಜನರ ಸಹಭಾಗಿತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ‘ಜಲ ಉತ್ಸವ’ವನ್ನು ಉತ್ತೇಜಿಸುವಂತೆ ಸಲಹೆ ನೀಡಿದರು. ಹೂಳು ತೆಗೆಯುವ ಕೆಲಸವನ್ನು ನಿಯಮಿತ ಕಾರ್ಯಕ್ರಮವನ್ನಾಗಿ ರೂಪಿಸುವಂತೆ ಹಾಗೂ ಅದಕ್ಕಾಗಿ ಸ್ಪಷ್ಟ ಮಾನದಂಡಗಳು ಮತ್ತು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅಭಿವೃದ್ಧಿಪಡಿಸುವಂತೆ ಅವರು ಕರೆ ನೀಡಿದರು. ಅಣೆಕಟ್ಟುಗಳ ಸುರಕ್ಷತೆಯ ಕುರಿತು ಮಾತನಾಡಿದ ಅವರು, ಪ್ರತಿ ಮುಂಗಾರು ಮಳೆಯ ಆರಂಭಕ್ಕೂ ಮುನ್ನ ಕಟ್ಟುನಿಟ್ಟಿನ ಸಿದ್ಧತೆಗಳನ್ನು ಕೈಗೊಳ್ಳಬೇಕು, ನಿಗದಿತ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಮತ್ತು ಸೂಕ್ತ ವಿಷಯಗಳನ್ನು ಶೈಕ್ಷಣಿಕ ಪಠ್ಯಕ್ರಮಗಳಲ್ಲಿ ಅಳವಡಿಸುವುದು ಸೇರಿದಂತೆ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಒತ್ತಿ ಹೇಳಿದರು.
ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಲ ನಿರ್ವಹಣೆ ಮತ್ತು ಆಡಳಿತಕ್ಕೆ ಸಂಬಂಧಿಸಿದ ಜ್ಞಾನ ಹಾಗೂ ಸಾಮರ್ಥ್ಯವನ್ನು ಬಲಪಡಿಸುವಂತೆಯೂ ಪ್ರಧಾನಮಂತ್ರಿಯವರು ಕರೆ ನೀಡಿದರು. ಪ್ರಾಯೋಗಿಕ ಕಲಿಕೆ ಹಾಗೂ ಯಶಸ್ವಿ ಕ್ರಮಗಳ ಪುನರಾವರ್ತನೆಗೆ ಅನುಕೂಲವಾಗುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ರೈತರನ್ನು ಒಳಗೊಂಡ ವ್ಯವಸ್ಥಿತ ಅಂತಾರಾಜ್ಯ ಅಧ್ಯಯನ ಪ್ರವಾಸಗಳನ್ನು ಆಯೋಜಿಸುವಂತೆ ಅವರು ಸಲಹೆ ನೀಡಿದರು.
ಜಲ ವಲಯಕ್ಕೆ ಸಂಬಂಧಿಸಿದ ದತ್ತಾಂಶವನ್ನು ಒಂದೆಡೆ ಸಮಗ್ರವಾಗಿ ಸಂಗ್ರಹಿಸಿ, ವ್ಯವಸ್ಥಿತವಾಗಿ ನಿರ್ವಹಿಸಿ, ವಿಶ್ಲೇಷಿಸಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಲಿಷ್ಠ ಜಲ ದತ್ತಾಂಶ ಆಡಳಿತ ವ್ಯವಸ್ಥೆ ರೂಪಿಸುವಂತೆ ಪ್ರಧಾನಮಂತ್ರಿಯವರು ಕರೆ ನೀಡಿದರು. ಏಕರೂಪದ ಸ್ವರೂಪದಲ್ಲಿ ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆಗಾಗಿ ಕೃತಕ ಬುದ್ಧಿಮತ್ತೆಯ (ಎಐ) ಬಳಕೆಯನ್ನು ಅವರು ಶಿಫಾರಸು ಮಾಡಿದರು. ಕೃಷಿ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಸಂಸ್ಕರಿಸಿದ ನೀರನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ನೀರಿನ ಕೊರತೆಯನ್ನು ಎದುರಿಸಲು ಪೂರ್ವಭಾವಿ ಮತ್ತು ಸಮಗ್ರ ಯೋಜನೆ ರೂಪಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ತಮ್ಮ ಅನುಭವವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ನೀರಿನ ಕೊರತೆಯ ಸಂದರ್ಭಗಳನ್ನು ವ್ಯವಸ್ಥಿತ ಯೋಜನೆ, ಬದ್ಧತೆ, ಸಾಕಷ್ಟು ಸಂಪನ್ಮೂಲಗಳು ಹಾಗೂ ಸಮರ್ಥ ಅಧಿಕಾರಿಗಳ ನಿಯೋಜನೆಯ ಮೂಲಕ ಅವಕಾಶಗಳಾಗಿ ಪರಿವರ್ತಿಸಬಹುದು ಎಂದು ಹೇಳಿದರು.
ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್ ಅವರು ಶೃಂಗಸಭೆಯ ನಾಲ್ಕು ಪ್ರಮುಖ ಫಲಿತಾಂಶಗಳನ್ನು ವಿವರಿಸಿದರು: ಜಲ ಮೂಲಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು; ಜಲ ಸಂರಕ್ಷಣೆಯನ್ನು ನಿರಂತರ ಜನಾಂದೋಲನವಾಗಿ ಬಲಪಡಿಸುವುದು; ಕುಡಿಯುವ ನೀರಿನ ಮೂಲಗಳ ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸುವುದು; ಹಾಗೂ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ಪರಿಣಾಮಕಾರಿ ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಸಾಂಸ್ಥಿಕಗೊಳಿಸುವುದು.
*****
(ಪ್ರಕಟಣೆ ಐ.ಡಿ.: 2306155)
ವಿಸಿಟರ್ ಕೌಂಟರ್ : 10