ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಜಲಾನಯನ ಅಭಿವೃದ್ಧಿ ಘಟಕದ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು; ‘ಬರಮುಕ್ತ ಭಾರತ’ದತ್ತ ಜಲಾನಯನ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಒತ್ತು

ಪ್ರಕಟಣಾ ದಿನಾಂಕ: 01 SEP 2026 5:23PM by PIB Bengaluru

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಜಲಾನಯನ ಅಭಿವೃದ್ಧಿ ಘಟಕದ (ಡಬ್ಲ್ಯೂಡಿಸಿ-ಪಿ ಎಂ ಕೆ ಎಸ್ ವೈ) ಪ್ರಗತಿಯನ್ನು ಪರಿಶೀಲಿಸಿದರು. ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವುದರ ಜೊತೆಗೆ ತಳಮಟ್ಟದಲ್ಲಿ ಸ್ಪಷ್ಟ ಮತ್ತು ನಿಖರ ಫಲಿತಾಂಶಗಳನ್ನು ಖಾತರಿಪಡಿಸುವಂತೆ ಅವರು ರಾಜ್ಯಗಳಿಗೆ ಕರೆ ನೀಡಿದರು. ‘ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಬರಮುಕ್ತ ಭಾರತ’ದ ಗುರಿಯನ್ನು ಸಾಕಾರಗೊಳಿಸುವಲ್ಲಿ ಜಲಾನಯನ ಅಭಿವೃದ್ಧಿಯು ಪ್ರಮುಖ ಸಾಧನವಾಗಿದೆ ಎಂದು ಅವರು ಹೇಳಿದರು.

ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, “ಜಲಾನಯನ ಅಭಿವೃದ್ಧಿಯು ಕೇವಲ ಜಲಮೂಲಗಳನ್ನು ನಿರ್ಮಿಸುವ ಕಾರ್ಯಕ್ರಮವಲ್ಲ; ಹೊಲಗಳಿಗೆ ನೀರನ್ನು ತಲುಪಿಸುವುದು, ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸುವುದು ಹಾಗೂ ರೈತರ ಆದಾಯ ಮತ್ತು ಜೀವನೋಪಾಯವನ್ನು ಸುಧಾರಿಸುವುದೇ ಇದರ ನಿಜವಾದ ಉದ್ದೇಶವಾಗಿದೆ. ಪ್ರತಿಯೊಂದು ಹನಿ ನೀರನ್ನೂ ಗರಿಷ್ಠವಾಗಿ ಸದ್ಬಳಕೆ ಮಾಡಬೇಕು ಮತ್ತು ಅದರ ಪ್ರಯೋಜನ ರೈತರಿಗೆ ತಲುಪಬೇಕು ಎಂಬುದೇ ನಮ್ಮ ಗುರಿಯಾಗಿದೆ” ಎಂದು ಹೇಳಿದರು.

ಡಬ್ಲ್ಯೂಡಿಸಿ-ಪಿ ಎಂ ಕೆ ಎಸ್ ವೈ 2.0 ಯೋಜನೆಯಡಿ, ಇದುವರೆಗೆ 52.93 ಲಕ್ಷ ಹೆಕ್ಟೇರ್ ಪ್ರದೇಶವನ್ನು ಒಳಗೊಂಡ 1,220 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಗೆ ಅನುಮೋದಿಸಲಾದ ಒಟ್ಟು ವೆಚ್ಚ ₹12,404 ಕೋಟಿಯಾಗಿದ್ದು, ಇದರಲ್ಲಿ ಕೇಂದ್ರದ ಪಾಲು ₹8,134 ಕೋಟಿಯಾಗಿದೆ. ಕೇಂದ್ರದ ಪಾಲಿನಲ್ಲಿ ₹6,955.75 ಕೋಟಿಯನ್ನು (ಶೇ.85) ಈಗಾಗಲೇ ಬಿಡುಗಡೆ ಮಾಡಲಾಗಿದೆ.

ನಿರ್ದಿಷ್ಟವಾಗಿ ರೈತಕೇಂದ್ರಿತ ಫಲಿತಾಂಶಗಳಿಗೆ ಒತ್ತು ನೀಡಿದ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, “ಜಲಾನಯನ ಯೋಜನೆಯ ಯಶಸ್ಸಿಗೆ ಅತ್ಯಂತ ದೊಡ್ಡ ಸಾಕ್ಷಿಯೆಂದರೆ, ಜಲಾನಯನ ಅಭಿವೃದ್ಧಿ ಕ್ರಮಗಳ ಪರಿಣಾಮವಾಗಿ ಈ ಹಿಂದೆ ಸುಮಾರು 1.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೇವಲ ಒಂದು ಬೆಳೆ ಬೆಳೆಯುತ್ತಿದ್ದರೆ, ಈಗ ರೈತರು ಎರಡು ಬೆಳೆಗಳನ್ನು ಮತ್ತು ಅನೇಕ ಕಡೆಗಳಲ್ಲಿ ಮೂರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೋಟಗಾರಿಕೆ, ತರಕಾರಿ ಉತ್ಪಾದನೆ ಮತ್ತು ಹೆಚ್ಚಿನ ಮೌಲ್ಯದ ಬೆಳೆಗಳ ವಿಸ್ತರಣೆಯಿಂದ ರೈತರ ಬದುಕಿನಲ್ಲಿ ಸಮೃದ್ಧಿ ಬಂದಿದೆ. ಈ ಪರಿವರ್ತನೆಯೇ ನಮ್ಮ ಯೋಜನೆಗಳ ನಿಜವಾದ ಯಶಸ್ಸು” ಎಂದು ಹೇಳಿದರು.

ಕಾರ್ಯಕ್ರಮದಡಿ 1.24 ಲಕ್ಷ ಜಲಸಂಗ್ರಹಣಾ ರಚನೆಗಳನ್ನು ನಿರ್ಮಿಸಿ ಪುನಶ್ಚೇತನಗೊಳಿಸಲಾಗಿದೆ. ಇವುಗಳಲ್ಲಿ ತಡೆ ಅಣೆಕಟ್ಟುಗಳು, ಹಳ್ಳಗಳು, ಇಂಗು ಕೆರೆಗಳು, ಗ್ರಾಮ/ಕೃಷಿ ಹೊಂಡಗಳು, ಬದುಗಳು, ಕಂದಕಗಳು, ಜಲಾಶಯಗಳು ಹಾಗೂ ಇತರ ಮಳೆನೀರು ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣ ರಚನೆಗಳು ಸೇರಿವೆ. ಈ ರಚನೆಗಳು ಸ್ಥಳೀಯವಾಗಿ ನೀರನ್ನು ಸಂಗ್ರಹಿಸುವುದು, ಅಂತರ್ಜಲವನ್ನು ಸಂಗ್ರಹಿಸಿ ಮರುಪೂರಣಗೊಳಿಸುವುದು ಹಾಗೂ ಕೃಷಿಗೆ ನೀರಿನ ಲಭ್ಯತೆಯನ್ನು ಹೆಚ್ಚಿಸುವಲ್ಲಿ ಗಣನೀಯವಾಗಿ ನೆರವಾಗಿವೆ.

ಈ ಪ್ರಯತ್ನಗಳ ಫಲವಾಗಿ ಹೆಚ್ಚುವರಿಯಾಗಿ 3.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಂರಕ್ಷಣಾತ್ಮಕ ನೀರಾವರಿ ಸೌಲಭ್ಯ ಕಲ್ಪಿಸಲಾಗಿದ್ದು, ಮಳೆಯಾಶ್ರಿತ ಪ್ರದೇಶಗಳ ರೈತರಿಗೆ ಮಳೆ ಕೊರತೆ ಅಥವಾ ಬರ ಉಂಟಾದ ಸಂದರ್ಭದಲ್ಲಿ ಬೆಳೆಗಳನ್ನು ಸಂರಕ್ಷಿಸಲು ಇದು ನೆರವಾಗಿದೆ. ಇದುವರೆಗೆ ಕಾರ್ಯಕ್ರಮದಿಂದ 28.50 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. ಇದರ ಜೊತೆಗೆ, 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ, ತೋಟಗಾರಿಕೆ ಮತ್ತು ಗಿಡ ನೆಡುವಿಕೆ ಕೈಗೊಳ್ಳಲಾಗಿದ್ದು, 2.85 ಕೋಟಿ ಮಾನವ-ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ.

ರಾಜ್ಯಗಳು ಪಾರದರ್ಶಕ, ತಂತ್ರಜ್ಞಾನ ಆಧಾರಿತ, ಕಾರ್ಯಕ್ಷಮತೆ ಆಧಾರಿತ ಮತ್ತು ಜನಕೇಂದ್ರಿತ ರೀತಿಯಲ್ಲಿ ಕಾರ್ಯನಿರ್ವಹಿಸಿ, ಯೋಜನೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಶ್ರೀ ಚೌಹಾಣ್ ಅವರು ಕರೆ ನೀಡಿದರು. ಜಲಾನಯನ ಯೋಜನೆಗಳನ್ನು ಕೇವಲ ವೆಚ್ಚದ ಆಧಾರದ ಮೇಲೆ ಮಾತ್ರವಲ್ಲದೆ, ಭೂಮಿಯ ಪುನಶ್ಚೇತನ, ನೀರಿನ ಲಭ್ಯತೆ, ನೀರಾವರಿ, ಬೆಳೆ ತೀವ್ರತೆ, ಭೂಮಿಯ ಉತ್ಪಾದಕತೆ ಹಾಗೂ ರೈತರ ಜೀವನೋಪಾಯದಲ್ಲಿ ಉಂಟಾಗಿರುವ ವಾಸ್ತವ ಸುಧಾರಣೆಯ ಆಧಾರದ ಮೇಲೆಯೂ ಮೌಲ್ಯಮಾಪನ ಮಾಡಬೇಕು ಎಂದು ಅವರು ಹೇಳಿದರು.

‘ಜಲಾನಯನ ಯಾತ್ರೆ’ ಮತ್ತು ‘ಜಲಾನಯನ ಉತ್ಸವ’ಗಳ ಮೂಲಕ ನಾವು ಜಲಾನಯನ ಅಭಿವೃದ್ಧಿಯನ್ನು ಜನಾಂದೋಲನವಾಗಿ ರೂಪಿಸಿದ್ದೇವೆ. ಈಗ ಜಲಾನಯನ ಅಭಿವೃದ್ಧಿಯನ್ನು ಕೇವಲ ಒಂದು ಯೋಜನೆಯಾಗಿ ನೋಡದೆ, ಜಲ ಮತ್ತು ಭೂ ಸುರಕ್ಷತೆ, ಕೃಷಿ ಸುರಕ್ಷತೆ ಹಾಗೂ ಗ್ರಾಮೀಣ ಸಮೃದ್ಧಿಗಾಗಿ ರಾಷ್ಟ್ರೀಯ ಅಭಿಯಾನವಾಗಿ ಮುನ್ನಡೆಸುವುದು ನಮ್ಮ ಗುರಿಯಾಗಿದೆ. ತ್ವರಿತ ಅನುಷ್ಠಾನ, ಉತ್ತಮ ಫಲಿತಾಂಶ ಮತ್ತು ಹೆಚ್ಚಿನ ಪರಿಣಾಮವನ್ನು ಖಾತರಿಪಡಿಸುವುದೇ ನಮ್ಮ ಸಂಕಲ್ಪವಾಗಬೇಕು” ಎಂದು ಶ್ರೀ ಚೌಹಾಣ್ ಹೇಳಿದರು.

ಪರಿಶೀಲನಾ ಸಭೆಯಲ್ಲಿ, ಜಲಾನಯನ ಅಭಿವೃದ್ಧಿಯ ಪ್ರಯೋಜನಗಳು ಎಲ್ಲ ರೈತರು ಮತ್ತು ಗ್ರಾಮೀಣ ಕುಟುಂಬಗಳಿಗೆ ತಲುಪುವುದನ್ನು ಖಾತರಿಪಡಿಸಲು ರಾಜ್ಯಗಳು ಮತ್ತು ಅನುಷ್ಠಾನ ಸಂಸ್ಥೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಕರೆ ನೀಡಲಾಯಿತು.

 

*****

 

 


(ಪ್ರಕಟಣೆ ಐ.ಡಿ.: 2305781) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati