ಭಾರೀ ಕೈಗಾರಿಕೆಗಳ ಸಚಿವಾಲಯ
ಪ್ರಧಾನಮಂತ್ರಿ ಮೋದಿಯವರ ವಿಕಸಿತ ಭಾರತ ದೃಷ್ಟಿಕೋನ: ಜಾಗತಿಕ ಆಟೋಮೊಬೈಲ್ ಉದ್ಯಮಕ್ಕೆ ಭವಿಷ್ಯಕ್ಕೆ ಸನ್ನದ್ಧವಾದ ಕಾರ್ಯಪಡೆಯನ್ನು ಭಾರತ ನಿರ್ಮಿಸಬೇಕು
ನಾಳಿನ ಉದ್ಯೋಗಗಳು ಮತ್ತು ವಿಶ್ವದಾದ್ಯಂತದ ಅವಕಾಶಗಳಿಗಾಗಿ ಭಾರತದ ಯುವಜನತೆಗೆ ಕೌಶಲ್ಯಾಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ
ಭಾರತವು ಜಾಗತಿಕ ವಾಹನ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿಗೆ ವಾಹನ ಉದ್ಯಮವೇ ಚಾಲನೆ ನೀಡಬೇಕು: ಹೆಚ್.ಡಿ. ಕುಮಾರಸ್ವಾಮಿ
ಎ ಎಸ್ ಡಿ ಸಿ ಯ ಮುಂದಿನ ಆದ್ಯತೆ: ಭಾರತ ಮತ್ತು ವಿಶ್ವಕ್ಕಾಗಿ ನುರಿತ ಆಟೋಮೊಬೈಲ್ ಕ್ಷೇತ್ರದ ಪ್ರತಿಭಾವಂತರನ್ನು ರೂಪಿಸುವುದು
ನುರಿತ ಯುವಜನತೆಗೆ ಜಾಗತಿಕ ಅವಕಾಶಗಳ ವಿಸ್ತರಣೆ: ರೊಮೇನಿಯಾಗೆ ತೆರಳಲಿರುವ 43 ಅಭ್ಯರ್ಥಿಗಳಿಗೆ ಬೀಳ್ಕೊಡುಗೆ
ಪ್ರಕಟಣಾ ದಿನಾಂಕ:
31 AUG 2026 5:51PM by PIB Bengaluru
ದೇಶವು ವಿಕಸಿತ ಭಾರತ @2047ರ ಗುರಿಯತ್ತ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಭಾರತದ ಯುವ ಪೀಳಿಗೆಗೆ ಕೌಶಲ್ಯಾಭಿವೃದ್ಧಿ, ಕೌಶಲ್ಯ ಉನ್ನತೀಕರಣ ಮತ್ತು ಉದ್ಯೋಗ ಸೃಷ್ಟಿಯನ್ನು ಪ್ರಮುಖ ಆದ್ಯತೆಯನ್ನಾಗಿ ಮಾಡಬೇಕಾದ ಅಗತ್ಯವಿದೆ ಎಂದು ಕೇಂದ್ರ ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಸೋಮವಾರ ಒತ್ತಿ ಹೇಳಿದರು. ಭಾರತದ ನುರಿತ ಕಾರ್ಯಪಡೆಯು ದೇಶೀಯ ಅಗತ್ಯಗಳನ್ನು ಪೂರೈಸುವುದಕ್ಕೆ ಮಾತ್ರ ಸೀಮಿತವಾಗದೆ, ವಿಶ್ವದಾದ್ಯಂತದ ಕೈಗಾರಿಕೆಗಳ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಸನ್ನದ್ಧವಾಗಿರಬೇಕು ಎಂದು ಅವರು ಹೇಳಿದರು.
ನವದೆಹಲಿಯಲ್ಲಿ ನಡೆದ ಆಟೋಮೋಟಿವ್ ಸ್ಕಿಲ್ಸ್ ಡೆವಲಪ್‌ಮೆಂಟ್ ಕೌನ್ಸಿಲ್ (ಎ ಎಸ್ ಡಿ ಸಿ) ವಾರ್ಷಿಕ ಸಮಾವೇಶ 2026 ಅನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ವಿದ್ಯುತ್ ಚಾಲಿತ ಸಂಚಾರ, ಆಟೊಮೇಷನ್, ಸಂಪರ್ಕಿತ ತಂತ್ರಜ್ಞಾನಗಳು, ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳು ಮತ್ತು ಇಂಡಸ್ಟ್ರಿ 4.0 ಗಳಿಂದ ಚಾಲಿತವಾಗಿರುವ ಭಾರತದ ಆಟೋಮೊಬೈಲ್ ಕ್ಷೇತ್ರವು ಪರಿವರ್ತನೆಯ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಪ್ರಸ್ತಾಪಿಸಿದ ಶ್ರೀ ಕುಮಾರಸ್ವಾಮಿ ಅವರು, ಭಾರತವು ಕೇವಲ ದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಾಗಿರುವುದನ್ನು ಮೀರಿ, ವಾಹನ ಉತ್ಪಾದನೆ, ತಂತ್ರಜ್ಞಾನ ಮತ್ತು ಸಂಚಾರ ಪರಿಹಾರಗಳ ಪ್ರಮುಖ ಜಾಗತಿಕ ಕೇಂದ್ರವಾಗಿ ಕ್ರಮೇಣ ಹೊರಹೊಮ್ಮುತ್ತಿದೆ ಎಂದು ಹೇಳಿದರು.
“ನಮ್ಮ ದೇಶೀಯ ಮಾನವ ಸಂಪನ್ಮೂಲ ಅಗತ್ಯಗಳನ್ನು ಪೂರೈಸುವುದಕ್ಕೆ ಮಾತ್ರ ಭಾರತದ ಮಹತ್ವಾಕಾಂಕ್ಷೆ ಸೀಮಿತವಾಗಬಾರದು. ನುರಿತ ಆಟೋಮೊಬೈಲ್ ಕ್ಷೇತ್ರದ ಪ್ರತಿಭಾವಂತರನ್ನು ಒದಗಿಸುವ ಜಾಗತಿಕ ಕೇಂದ್ರವಾಗಿ ಭಾರತವನ್ನು ರೂಪಿಸುವ ಗುರಿಯನ್ನು ನಾವು ಹೊಂದಬೇಕು” ಎಂದು ಅವರು ಹೇಳಿದರು.
ಆಟೋಮೊಬೈಲ್ ಉದ್ಯಮದಲ್ಲಿ ವೇಗವಾಗಿ ನಡೆಯುತ್ತಿರುವ ಪರಿವರ್ತನೆಗೆ ಹೊಸ ತಂತ್ರಜ್ಞಾನಗಳು ಹಾಗೂ ಬದಲಾಗುತ್ತಿರುವ ಕೆಲಸದ ಸ್ಥಳದ ಅಗತ್ಯಗಳಿಗೆ ಹೊಂದಿಕೊಳ್ಳಬಲ್ಲ ಕಾರ್ಯಪಡೆಯ ಅಗತ್ಯವಿದೆ ಎಂದು ಸಚಿವರು ಒತ್ತಿ ಹೇಳಿದರು. ಅಭ್ಯರ್ಥಿಗಳಿಗೆ ಕೇವಲ ತರಬೇತಿ ನೀಡುವುದಕ್ಕೆ ಸೀಮಿತವಾಗದೆ, ಯುವಜನರು ಅರ್ಥಪೂರ್ಣ ಉದ್ಯೋಗಾವಕಾಶಗಳಾಗಿ ಪರಿವರ್ತನೆಯಾಗುವಂತಹ ಕೌಶಲ್ಯಗಳನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು.
“ನಮ್ಮ ಯುವ ಪೀಳಿಗೆಗೆ ಕೌಶಲ್ಯಾಭಿವೃದ್ಧಿ ಮತ್ತು ಕೌಶಲ್ಯ ಉನ್ನತೀಕರಣದ ಮೂಲಕ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೂ ಅತ್ಯಗತ್ಯವಾಗಿದೆ” ಎಂದು ಅವರು ಹೇಳಿದರು.
ವಿದ್ಯುತ್ ಚಾಲಿತ ಸಂಚಾರ, ಆಟೋಮೇಷನ್ ಮತ್ತು ಸುಧಾರಿತ ವಾಹನ ತಂತ್ರಜ್ಞಾನಗಳ ಹೆಚ್ಚುತ್ತಿರುವ ಅಳವಡಿಕೆಯಿಂದ ವಾಹನ ಉತ್ಪಾದನೆ, ಬ್ಯಾಟರಿ ಉತ್ಪಾದನೆ, ಚಾರ್ಜಿಂಗ್ ಮೂಲಸೌಕರ್ಯ, ಸೇವೆ ಮತ್ತು ಮಾರಾಟದ ನಂತರದ ಬೆಂಬಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಹೇಳಿದರು. ಆದ್ದರಿಂದ ವಿಶೇಷ ಪರಿಣತಿ ಹಾಗೂ ಕೈಗಾರಿಕೆಗೆ ಅಗತ್ಯವಾದ ಸಾಮರ್ಥ್ಯಗಳನ್ನು ಹೊಂದಿರುವ ತಂತ್ರಜ್ಞರು, ಎಂಜಿನಿಯರ್‌ಗಳು ಮತ್ತು ವೃತ್ತಿಪರರನ್ನು ರೂಪಿಸುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಕೈಗಾರಿಕೆ–ಕೌಶಲ್ಯಾಭಿವೃದ್ಧಿ ನಡುವಿನ ಬಲವಾದ ಸಂಪರ್ಕ
ಈ ಕಾರ್ಯಪಡೆಯನ್ನು ನಿರ್ಮಿಸುವ ಜವಾಬ್ದಾರಿ ಕೇವಲ ಕೌಶಲ್ಯಾಭಿವೃದ್ಧಿ ಸಂಸ್ಥೆಗಳ ಮೇಲಷ್ಟೇ ಇರಲು ಸಾಧ್ಯವಿಲ್ಲ ಎಂದು ಶ್ರೀ ಕುಮಾರಸ್ವಾಮಿ ಒತ್ತಿ ಹೇಳಿದರು. ಭವಿಷ್ಯಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ನಿರ್ಧರಿಸುವಲ್ಲಿ ಮತ್ತು ತರಬೇತಿಯು ನೈಜ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುವಲ್ಲಿ ವಾಹನ ತಯಾರಕರು, ಬಿಡಿಭಾಗಗಳ ತಯಾರಕರು, ಡೀಲರ್ ಗಳು ಹಾಗೂ ಉದ್ಯಮದ ಇತರ ಪಾಲುದಾರರು ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಅವರು ಹೇಳಿದರು.
“ಕೆಲಸದ ಸ್ಥಳದ ಅಗತ್ಯಗಳಿಂದ ಪ್ರತ್ಯೇಕವಾಗಿ ಕೌಶಲ್ಯಾಭಿವೃದ್ಧಿ ಯಶಸ್ವಿಯಾಗಲು ಸಾಧ್ಯವಿಲ್ಲ. ತರಬೇತಿಯು ನೈಜ ಉದ್ಯಮದ ಅಗತ್ಯಗಳನ್ನು ಪ್ರತಿಬಿಂಬಿಸುವಂತಾಗಲು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಅನುಗುಣವಾಗಿ ಮುಂದುವರಿಯಲು ಉದ್ಯಮದ ಪಾಲ್ಗೊಳ್ಳುವಿಕೆ ಅತ್ಯಗತ್ಯ” ಎಂದು ಅವರು ಹೇಳಿದರು.

ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗದ ನಡುವಿನ ಸಂಪರ್ಕವನ್ನು ಇನ್ನಷ್ಟು ಬಲಿಷ್ಠ ಹಾಗೂ ಸುಗಮಗೊಳಿಸಬೇಕೆಂದು ಅವರು ಕರೆ ನೀಡಿದರು. ಇದಕ್ಕಾಗಿ ಉದ್ಯಮದೊಂದಿಗೆ ನಿರಂತರ ಸಮಾಲೋಚನೆ ನಡೆಸಿ ಪಠ್ಯಕ್ರಮ, ತರಬೇತಿ ವಿಧಾನಗಳು ಮತ್ತು ಮೌಲ್ಯಮಾಪನ ವ್ಯವಸ್ಥೆಗಳನ್ನು ಕಾಲಕಾಲಕ್ಕೆ ನವೀಕರಿಸಬೇಕು ಎಂದು ಅವರು ಹೇಳಿದರು.
ಹೆಚ್ಚೆಚ್ಚು ತಂತ್ರಜ್ಞಾನ ಆಧಾರಿತವಾಗುತ್ತಿರುವ ಆಟೋಮೊಬೈಲ್ ಉದ್ಯಮದ ಅಗತ್ಯಗಳನ್ನು ಪೂರೈಸಬಲ್ಲ ಪ್ರತಿಭಾವಂತರ ಸರಬರಾಜು ವ್ಯವಸ್ಥೆಯನ್ನು ರೂಪಿಸಲು ವಾಹನ ತಯಾರಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನೆರವಾಗಬೇಕು ಎಂದು ಸಚಿವರು ಹೇಳಿದರು.
“ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗದ ನಡುವೆ ಇನ್ನಷ್ಟು ಬಲಿಷ್ಠ ಹಾಗೂ ಸುಗಮ ಸಂಪರ್ಕವನ್ನು ನಾವು ನಿರ್ಮಿಸಬೇಕಾಗಿದೆ. ವಾಹನ ಉದ್ಯಮದ ಬೆಳವಣಿಗೆ ಮತ್ತು ಪರಿವರ್ತನೆಯೊಂದಿಗೆ ನಮ್ಮ ಕೌಶಲ್ಯಾಭಿವೃದ್ಧಿ ವ್ಯವಸ್ಥೆಯೂ ವಿಕಸನಗೊಳ್ಳಬೇಕು” ಎಂದು ಅವರು ಹೇಳಿದರು.
ಜಾಗತಿಕ ಪ್ರತಿಭಾವಂತರ ಸಮೂಹ ನಿರ್ಮಾಣದಲ್ಲಿ ಎ ಎಸ್ ಡಿ ಸಿ ಯ ಪಾತ್ರ
ಆಟೋಮೊಬೈಲ್ ಕ್ಷೇತ್ರದ ಬದಲಾಗುತ್ತಿರುವ ಅಗತ್ಯಗಳಿಗೆ ಭಾರತದ ಕಾರ್ಯಪಡೆ ಹೊಂದಿಕೊಂಡಿರುವುದನ್ನು ಖಚಿತಪಡಿಸುವಲ್ಲಿ ಎ ಎಸ್ ಡಿ ಸಿ ಯಂತಹ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಶ್ರೀ ಕುಮಾರಸ್ವಾಮಿ ಹೇಳಿದರು.
ಭವಿಷ್ಯದ ಅಗತ್ಯಗಳನ್ನು ಮುಂಚಿತವಾಗಿ ಅಂದಾಜಿಸಿ, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತವಾಗಿರುವ ಕೌಶಲ್ಯಗಳೊಂದಿಗೆ ಭಾರತದ ಯುವಜನರನ್ನು ಸಜ್ಜುಗೊಳಿಸಲು ಎ ಎಸ್ ಡಿ ಸಿ ಉದ್ಯಮದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.
ಕೇವಲ ದೇಶದ ಅಗತ್ಯಗಳನ್ನು ಪೂರೈಸುವ ಕಾರ್ಯಪಡೆಯನ್ನು ನಿರ್ಮಿಸುವುದಕ್ಕೆ ಸೀಮಿತವಾಗದೆ, ಆಟೋಮೊಬೈಲ್ ಕ್ಷೇತ್ರದ ನುರಿತ ವೃತ್ತಿಪರರನ್ನು ಜಾಗತಿಕ ಮಟ್ಟದಲ್ಲಿ ಒದಗಿಸುವ ರಾಷ್ಟ್ರವಾಗಿ ಭಾರತ ತನ್ನನ್ನು ಸ್ಥಾಪಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.

“ಪ್ರಮಾಣೀಕೃತ ಅಭ್ಯರ್ಥಿಗಳನ್ನು ಸೃಷ್ಟಿಸುವುದು ಮಾತ್ರ ನಮ್ಮ ಜವಾಬ್ದಾರಿಯಲ್ಲ. ಭಾರತದ ವಾಹನ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಬಲ್ಲ ಹಾಗೂ ಜಾಗತಿಕ ಮಾನದಂಡಗಳಿಗೆ ತಕ್ಕಂತೆ ಸ್ಪರ್ಧಿಸಬಲ್ಲ ವೃತ್ತಿಪರರನ್ನು ರೂಪಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಸಚಿವರು ಹೇಳಿದರು.
ವಿಶೇಷವಾಗಿ ಹೊಸ ತಂತ್ರಜ್ಞಾನಗಳು ಆಟೋಮೊಬೈಲ್ ಕ್ಷೇತ್ರದಲ್ಲಿನ ಉದ್ಯೋಗಗಳ ಸ್ವರೂಪವನ್ನು ವೇಗವಾಗಿ ಬದಲಾಯಿಸುತ್ತಿರುವ ಸಂದರ್ಭದಲ್ಲಿ, ನಿರಂತರ ಕೌಶಲ್ಯ ಉನ್ನತೀಕರಣ ಮತ್ತು ಮರುಕೌಶಲ್ಯಾಭಿವೃದ್ಧಿಯ ಮಹತ್ವವನ್ನೂ ಅವರು ಒತ್ತಿ ಹೇಳಿದರು.
ರೊಮೇನಿಯಾಗೆ ತೆರಳುವ 43 ಅಭ್ಯರ್ಥಿಗಳಿಗೆ ಬೀಳ್ಕೊಡುಗೆ
ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀ ಕುಮಾರಸ್ವಾಮಿ ಅವರು ಎ ಎಸ್ ಡಿ ಸಿ ಯ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದರು ಹಾಗೂ ರೊಮೇನಿಯಾದಲ್ಲಿ ಉದ್ಯೋಗ ಪಡೆದಿರುವ 43 ಅಭ್ಯರ್ಥಿಗಳಿಗೆ ಬೀಳ್ಕೊಡುಗೆ ನೀಡಿದರು. ನುರಿತ ಭಾರತೀಯ ಯುವಜನತೆಗೆ ಲಭ್ಯವಾಗುತ್ತಿರುವ ಹೆಚ್ಚಿನ ಅಂತರರಾಷ್ಟ್ರೀಯ ಅವಕಾಶಗಳನ್ನು ಇದು ಪ್ರತಿಬಿಂಬಿಸುತ್ತದೆ.
ಕೌಶಲ್ಯಾಭಿವೃದ್ಧಿಯಲ್ಲಿ ಭಾರತ ಮಾಡುತ್ತಿರುವ ಹೂಡಿಕೆಯು ಯುವ ಭಾರತೀಯರಿಗೆ ಜಾಗತಿಕ ಕಾರ್ಯಪಡೆಯಲ್ಲಿ ಭಾಗವಹಿಸಲು ಹೇಗೆ ಅವಕಾಶಗಳನ್ನು ಸೃಷ್ಟಿಸಬಲ್ಲದು ಎಂಬುದನ್ನು ಇಂತಹ ಅವಕಾಶಗಳು ತೋರಿಸುತ್ತವೆ ಎಂದು ಸಚಿವರು ಹೇಳಿದರು.
ಎ ಎಸ್ ಡಿ ಸಿ ಯ ಕಾರ್ಯಚಟುವಟಿಕೆಗಳು ಈಗಾಗಲೇ ಗಮನಾರ್ಹವಾಗಿ ವಿಸ್ತರಿಸುತ್ತಿವೆ. 2025–26ನೇ ಹಣಕಾಸು ವರ್ಷದಲ್ಲಿ ಕೌನ್ಸಿಲ್ 5,08,173 ಕಲಿಕಾರ್ಥಿಗಳನ್ನು ತಲುಪಿದ್ದು, 1,53,240 ಮೌಲ್ಯಮಾಪನಗಳನ್ನು ನಡೆಸಿದೆ ಹಾಗೂ ಸುಮಾರು 3,700 ಸಂಸ್ಥೆಗಳಲ್ಲಿ 2,88,756 ಅಪ್ರೆಂಟಿಸ್‌ಶಿಪ್ ಒಪ್ಪಂದಗಳನ್ನು ಸೃಷ್ಟಿಸಿದೆ.
ಆಟೋಮೊಬೈಲ್ ಉದ್ಯಮವು ಮೂಲಭೂತ ತಾಂತ್ರಿಕ ಪರಿವರ್ತನೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಸರ್ಕಾರ, ಉದ್ಯಮ, ಶೈಕ್ಷಣಿಕ ವಲಯ ಮತ್ತು ಕೌಶಲ್ಯಾಭಿವೃದ್ಧಿ ಸಂಸ್ಥೆಗಳ ನಡುವಿನ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.
“ಭಾರತವು ಮಹತ್ವಾಕಾಂಕ್ಷೆ, ಮಾರುಕಟ್ಟೆ ಮತ್ತು ಉತ್ಪಾದನಾ ಅವಕಾಶಗಳನ್ನು ಹೊಂದಿದೆ. ಆ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸುವ ಸಾಮರ್ಥ್ಯವುಳ್ಳ ನುರಿತ ಕಾರ್ಯಪಡೆಯನ್ನೂ ನಾವು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.
ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವ, ತಂತ್ರಜ್ಞಾನ ಅಳವಡಿಕೆಯನ್ನು ಉತ್ತೇಜಿಸುವ ಮತ್ತು ಭವಿಷ್ಯದ ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉಪಕ್ರಮಗಳಿಗೆ ಸರ್ಕಾರವು ನಿರಂತರವಾಗಿ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.
“ಭವಿಷ್ಯಕ್ಕೆ ಸನ್ನದ್ಧವಾದ ಭಾರತಕ್ಕೆ ಭವಿಷ್ಯಕ್ಕೆ ಸನ್ನದ್ಧವಾದ ಕಾರ್ಯಪಡೆಯ ಅಗತ್ಯವಿದೆ. ಕೌಶಲ್ಯಾಭಿವೃದ್ಧಿ, ಕೌಶಲ್ಯ ಉನ್ನತೀಕರಣ ಮತ್ತು ಬಲವಾದ ಉದ್ಯಮ ಪಾಲ್ಗೊಳ್ಳುವಿಕೆಯ ಮೂಲಕ ಭಾರತದಲ್ಲಿ ಹಾಗೂ ವಿಶ್ವದಾದ್ಯಂತ ನಮ್ಮ ಯುವಜನತೆಗೆ ನಾವು ಅವಕಾಶಗಳನ್ನು ಸೃಷ್ಟಿಸಬಹುದು” ಎಂದು ಸಚಿವರು ಹೇಳಿದರು.
ದೇಶವು ತನ್ನ ಯುವ ಪೀಳಿಗೆಯನ್ನು ಸೂಕ್ತ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವಲ್ಲಿ ಮತ್ತು ಆ ಕೌಶಲ್ಯಗಳನ್ನು ಉದ್ಯೋಗಾವಕಾಶಗಳೊಂದಿಗೆ ಸಂಪರ್ಕಿಸುವಲ್ಲಿ ಯಶಸ್ವಿಯಾದರೆ, ಭಾರತದ ಜನಸಂಖ್ಯಾ ಸಾಮರ್ಥ್ಯವು ದೇಶದ ಅತ್ಯಂತ ದೊಡ್ಡ ಆರ್ಥಿಕ ಸಂಪತ್ತುಗಳಲ್ಲಿ ಒಂದಾಗಿ ಪರಿವರ್ತನೆಯಾಗಬಹುದು ಎಂದು ಒತ್ತಿ ಹೇಳುವ ಮೂಲಕ ಸಚಿವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
*****
(ಪ್ರಕಟಣೆ ಐ.ಡಿ.: 2305275)
ವಿಸಿಟರ್ ಕೌಂಟರ್ : 8