ಉಪರಾಷ್ಟ್ರಪತಿಗಳ ಕಾರ್ಯಾಲಯ
ಬೆಂಗಳೂರಿನಲ್ಲಿ ನಡೆದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಜೀ ಅವರ ಜನ್ಮ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್
ರಾಮಕೃಷ್ಣ ಹೆಗಡೆ ಜೀ ಅವರು ಮಹಾನ್ ರಾಜನೀತಿಜ್ಞ, ರಾಷ್ಟ್ರವಾದಿ ಮತ್ತು ನಾಯಕರನ್ನು ರೂಪಿಸಿದವರು: ಉಪರಾಷ್ಟ್ರಪತಿ
ವಿಕೇಂದ್ರೀಕರಣ, ಹೊಣೆಗಾರಿಕೆ ಮತ್ತು ನಾಗರಿಕರ ಭಾಗವಹಿಸುವಿಕೆಯು ರಾಮಕೃಷ್ಣ ಹೆಗಡೆ ಜೀ ಅವರ ಆಡಳಿತವನ್ನು ವ್ಯಾಖ್ಯಾನಿಸಿದವು: ಉಪರಾಷ್ಟ್ರಪತಿ
ರಾಮಕೃಷ್ಣ ಹೆಗಡೆ ಜೀ ಅವರ ನಾಯಕತ್ವದಲ್ಲಿ ಕರ್ನಾಟಕವು ಆಡಳಿತಕ್ಕೆ ಮಾದರಿಯಾಯಿತು: ಉಪರಾಷ್ಟ್ರಪತಿ
ಪ್ರಕಟಣಾ ದಿನಾಂಕ:
29 AUG 2026 7:25PM by PIB Bengaluru
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ರಾಜನೀತಿಜ್ಞ ಶ್ರೀ ರಾಮಕೃಷ್ಣ ಹೆಗಡೆ ಜೀ ಅವರ 100ನೇ ಜನ್ಮ ಜಯಂತಿಯ ಸಂದರ್ಭದಲ್ಲಿ ಸನ್ಮಾನ್ಯ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಅವರನ್ನು ಮಹಾನ್ ರಾಜನೀತಿಜ್ಞ, ರಾಷ್ಟ್ರವಾದಿ ಮತ್ತು ನಾಯಕರನ್ನು ರೂಪಿಸಿದವರು ಎಂದು ಬಣ್ಣಿಸಿದ ಅವರು, ಶ್ರೀ ಹೆಗಡೆ ಜೀ ಅವರ ನಾಯಕತ್ವದಲ್ಲಿ ಕರ್ನಾಟಕವು ಆಡಳಿತಕ್ಕೆ ಮಾದರಿಯಾಗಿ ಹೊರಹೊಮ್ಮಿತು ಎಂದು ಹೇಳಿದರು.
ಸನ್ಮಾನ್ಯ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಮಾತನಾಡಿ, ಶ್ರೀ ಹೆಗಡೆ ಜೀ ಅವರು ತಮ್ಮ ನಿಲುವುಗಳಲ್ಲಿ ದೃಢವಾಗಿ ನಿಂತು ಕರ್ನಾಟಕದಲ್ಲಿ ಹಲವು ಆಧುನಿಕ ಆಡಳಿತ ಸಂಸ್ಥೆಗಳಿಗೆ ಅಡಿಪಾಯ ಹಾಕಿದ ಧೈರ್ಯಶಾಲಿ ನಾಯಕರಾಗಿದ್ದರು ಎಂದು ಹೇಳಿದರು. ಅವರ ಸಾರ್ವಜನಿಕ ಜೀವನವು ವಿಕೇಂದ್ರೀಕರಣ, ಹೊಣೆಗಾರಿಕೆ, ನಾಗರಿಕರ ಭಾಗವಹಿಸುವಿಕೆ, ಸಂಸದೀಯ ಒಕ್ಕೂಟ ವ್ಯವಸ್ಥೆ (ಫೆಡರಲಿಸಂ) ಮತ್ತು ಸಂಸ್ಥೆಗಳ ಮೇಲಿನ ನಂಬಿಕೆಯಿಂದ ಮಾರ್ಗದರ್ಶಿಸಲ್ಪಟ್ಟಿತ್ತು ಎಂದು ಅವರು ಹೇಳಿದರು.
ವಿಕೇಂದ್ರೀಕರಣಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ ಉಪರಾಷ್ಟ್ರಪತಿಯವರು, ಆಡಳಿತವನ್ನು ಜನರಿಗೆ ಹತ್ತಿರ ತಂದ 'ಕರ್ನಾಟಕ ಜಿಲ್ಲಾ ಪರಿಷತ್ತುಗಳು, ತಾಲೂಕು ಪಂಚಾಯತ್ ಸಮಿತಿಗಳು, ಮಂಡಲ ಪಂಚಾಯತ್‌ಗಳು ಮತ್ತು ನ್ಯಾಯ ಪಂಚಾಯತ್‌ಗಳ ಕಾಯಿದೆ, 1985' ಅನ್ನು ಎತ್ತಿಹಿಡಿದರು. ಈ ದೃಷ್ಟಿಕೋನವನ್ನು ನಂತರ 73 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮೂಲಕ ಬಲಪಡಿಸಲಾಯಿತು ಎಂದು ಅವರು ಉಲ್ಲೇಖಿಸಿದರು.
ವೈಯಕ್ತಿಕ ನೆನಪೊಂದನ್ನು ಹಂಚಿಕೊಂಡ ಸನ್ಮಾನ್ಯ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, ಶ್ರೀ ಹೆಗಡೆ ಜೀ ಅವರು ಹಣದ ಸರಳ ವ್ಯಾಖ್ಯಾನವನ್ನು ನೀಡಿದ್ದಾರೆ ಎಂದು ಹೇಳಿದರು: ಉತ್ತಮ ಮನೆ, ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ ಮತ್ತು ಉತ್ತಮ ಕಾರನ್ನು ಹೊಂದಿರುವ ಆರಾಮದಾಯಕ ಜೀವನ — "ಅದಕ್ಕಿಂತ ಹೆಚ್ಚು ಹಣ ಅಂದರೆ ಏನು?" ಎಂದು ಕೇಳಿದ್ದರು. ಈ ಮಾತುಗಳು ಶ್ರೀ ಹೆಗಡೆ ಜೀ ಅವರ ಸರಳತೆ ಮತ್ತು ಜೀವನದ ಬಗೆಗಿನ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.
ಹೊಣೆಗಾರಿಕೆಗೆ ಅವರು ನೀಡುತ್ತಿದ್ದ ಮಹತ್ವವದ ಬಗ್ಗೆ ಒತ್ತಿ ಹೇಳಿದ ಸನ್ಮಾನ್ಯ ಉಪರಾಷ್ಟ್ರಪತಿಯವರು, ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಬಲಪಡಿಸಿದ್ದನ್ನು ನೆನಪಿಸಿಕೊಂಡರು ಮತ್ತು ಸಾರ್ವಜನಿಕ ಹುದ್ದೆಯು ವಿಶ್ವಾಸದ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು. ಬಲವಾದ ರಾಜ್ಯಗಳು ಭಾರತವನ್ನು ಬಲಪಡಿಸುತ್ತವೆ, ಬಲವಾದ ಸ್ಥಳೀಯ ಸರ್ಕಾರಗಳು ರಾಜ್ಯಗಳನ್ನು ಬಲಪಡಿಸುತ್ತವೆ ಮತ್ತು ಸಬಲಗೊಂಡ ನಾಗರಿಕರು ಸ್ಥಳೀಯ ಸರ್ಕಾರವನ್ನು ಬಲಪಡಿಸುತ್ತಾರೆ ಎಂಬ ಶ್ರೀ ಹೆಗಡೆ ಜೀ ಅವರ ನಂಬಿಕೆಯನ್ನು ಅವರು ಒತ್ತಿಹೇಳಿದರು.
ಶ್ರೀ ಹೆಗಡೆ ಜೀ ಅವರನ್ನು ಸಂಸ್ಥೆಗಳು ಮತ್ತು ನಾಯಕರ ನಿರ್ಮಾತೃ ಎಂದು ಬಣ್ಣಿಸಿದ ಸನ್ಮಾನ್ಯ ಶ್ರೀ ಸಿ. ಪಿ. ರಾಧಾಕೃಷ್ಣನ್, "ಮಹಾನ್ ನಾಯಕರು ಒಂದು ಕ್ಷಣವನ್ನು ಪರಿವರ್ತಿಸಬಹುದು. ಆದರೆ ಮಹಾನ್ ಸಂಸ್ಥೆಗಳ ನಿರ್ಮಾತೃಗಳು ಪೀಳಿಗೆಗಳನ್ನೇ ಪರಿವರ್ತಿಸುತ್ತಾರೆ" ಎಂದು ಹೇಳಿದರು. ಶ್ರೀ ಹೆಗಡೆ ಜೀ ಅವರ ಪ್ರಾಮಾಣಿಕತೆ, ಧೈರ್ಯ ಮತ್ತು ಸಾರ್ವಜನಿಕ ಸೇವೆಗೆ ಅವರ ಬದ್ಧತೆಯನ್ನು ಯುವ ಪೀಳಿಗೆಯು ಅಳವಡಿಸಿಕೊಳ್ಳಬೇಕು ಮತ್ತು 'ರಾಷ್ಟ್ರ ಪ್ರಥಮ' — ದೇಶವೇ ಮೊದಲು ಎಂಬುದನ್ನು ಎತ್ತಿಹಿಡಿಯಬೇಕು ಎಂದು ಅವರು ಕರೆ ನೀಡಿದರು. ಈ ಮೌಲ್ಯಗಳನ್ನು ಮುನ್ನಡೆಸುವುದೇ ಅವರ ಪರಂಪರೆಗೆ ಸಲ್ಲಿಸುವ ಅತ್ಯಂತ ಅರ್ಥಪೂರ್ಣ ಶ್ರದ್ಧಾಂಜಲಿಯಾಗುತ್ತದೆ ಎಂದು ಅವರು ಹೇಳಿದರು.
ಶ್ರೀ ಎಂ. ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಶ್ರೀ ಹೆಗಡೆ ಜೀ ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.
*****
(ಪ್ರಕಟಣೆ ಐ.ಡಿ.: 2304580)
ವಿಸಿಟರ್ ಕೌಂಟರ್ : 31