ಜಲ ಶಕ್ತಿ ಸಚಿವಾಲಯ
ಜೆಜೆಎಂ 2.0 ಅಡಿಯಲ್ಲಿ ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳಿಂದ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಸುಗಮಗೊಳಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಡಿಡಿಡಬ್ಲ್ಯೂಎಸ್ ಮನವಿ
ಗ್ರಾಮೀಣ ಕುಡಿಯುವ ನೀರು ಸರಬರಾಜಿನಲ್ಲಿ ಕಲಿಕೆಯನ್ನು ಬಲಪಡಿಸಲು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಪರಿಣಾಮಕಾರಿ ಕೆಲಸದ ಗೋಚರತೆಯನ್ನು ಹೆಚ್ಚಿಸಲು ಕೈಗೊಂಡ ಉಪಕ್ರಮ ಇದಾಗಿದೆ
ಪ್ರಕಟಣಾ ದಿನಾಂಕ:
28 AUG 2026 5:27PM by PIB Bengaluru
ಕ್ಷೇತ್ರ ಮಟ್ಟದಲ್ಲಿ ಕಲಿಕೆ ಮತ್ತು ಜ್ಞಾನ ಹಂಚಿಕೆಯನ್ನು ಬಲಪಡಿಸುವ ಒಂದು ಮಹತ್ವದ ಉಪಕ್ರಮದಲ್ಲಿ, ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (ಡಿಡಿಡಬ್ಲ್ಯೂಎಸ್), ಜಲ ಜೀವನ್ ಮಿಷನ್ (ಜೆಜೆಎಂ) 2.0 ಅಡಿಯಲ್ಲಿ ಹೊರಹೊಮ್ಮುತ್ತಿರುವ ಅತ್ಯುತ್ತಮ ಅಭ್ಯಾಸಗಳು ಹಾಗೂ ಕಾರ್ಯವಿಧಾನಗಳನ್ನು ದಾಖಲಿಸಲು ಮತ್ತು ಪ್ರಕಟಿಸಲು ಸ್ಥಳೀಯ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಪ್ರೋತ್ಸಾಹಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದೆ.
ಜಲ ಜೀವನ್ ಮಿಷನ್ ಆರಂಭವಾದಾಗಿನಿಂದ ಗ್ರಾಮೀಣ ಕುಡಿಯುವ ನೀರಿನ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿ ಉಪಕ್ರಮವಾಗಿ ಹೊರಹೊಮ್ಮಿದೆ. ಇದರ ಪರಿಣಾಮವಾಗಿ, ಸಮುದಾಯದ ಭಾಗವಹಿಸುವಿಕೆ, ಜಲಮೂಲಗಳ ಸುಸ್ಥಿರತೆ, ನೀರಿನ ಗುಣಮಟ್ಟ ನಿರ್ವಹಣೆ, ಕಾರ್ಯಾಚರಣೆ ಮತ್ತು ನಿರ್ವಹಣೆ, ತಂತ್ರಜ್ಞಾನ ಅಳವಡಿಕೆ ಹಾಗೂ ವಿಕೇಂದ್ರೀಕೃತ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಲವಾರು ಗಮನಾರ್ಹ ಉತ್ತಮ ಅಭ್ಯಾಸಗಳು ರೂಪುಗೊಂಡಿವೆ.
ಕ್ಷೇತ್ರಮಟ್ಟದಲ್ಲಿ ಕಂಡುಬಂದ ಈ ನವೀನ ಪ್ರಯತ್ನಗಳ ಮಹತ್ವವನ್ನು ಗುರುತಿಸಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಕರೆ ನೀಡಲಾಗಿದೆ:
- ಜೆಜೆಎಂ 2.0 ಅಡಿಯಲ್ಲಿ ಆಯ್ಕೆಮಾಡಿದ ಪ್ರಕರಣ ಅಧ್ಯಯನಗಳು (ಕೇಸ್ ಸ್ಟಡಿಗಳು) ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಅಧ್ಯಯನ ಮಾಡಲು ಮತ್ತು ದಾಖಲಿಸಲು ಸ್ಥಳೀಯ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವುದು.
- ಸಾಕ್ಷ್ಯಾಧಾರಿತ ಜ್ಞಾನ ಹಂಚಿಕೆ ಮತ್ತು ಇಂತಹ ಉತ್ತಮ ಅಭ್ಯಾಸಗಳ ಪುನರಾವರ್ತನೆಗೆ ಅನುಕೂಲವಾಗುವಂತೆ, ಈ ಅಧ್ಯಯನಗಳ ಫಲಿತಾಂಶಗಳನ್ನು ಶೈಕ್ಷಣಿಕ ನಿಯತಕಾಲಿಕೆಗಳು, ಸಂಸ್ಥೆಗಳ ವರದಿಗಳು, ಸುದ್ದಿಪತ್ರಿಕೆಗಳು, ಸಂಶೋಧನಾ ಪ್ರಬಂಧಗಳು, ವೆಬ್‌ಸೈಟ್ ಹಾಗೂ ಇತರ ಸೂಕ್ತ ವೇದಿಕೆಗಳ ಮೂಲಕ ಪ್ರಸಾರ ಮಾಡುವುದು.
- ಸೂಕ್ತವಾದ ಕೇಸ್ ಸ್ಟಡಿಗಳು ಮತ್ತು ಪ್ರವಾಸದ ಸ್ಥಳಗಳನ್ನು ಗುರುತಿಸುವುದು ಹಾಗೂ ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳು/ಶಾಲೆಗಳು, ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಗಳು ಮತ್ತು ಗ್ರಾಮ ಪಂಚಾಯಿತಿಗಳೊಂದಿಗೆ ಅಗತ್ಯ ಸಮನ್ವಯವನ್ನು ಸುಗಮಗೊಳಿಸುವುದು.
- ಹತ್ತಿರದ ಶಾಲೆಗಳ ಹೈಯರ್ ಸೆಕೆಂಡರಿ/ಸೀನಿಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ಬಹು ಗ್ರಾಮೀಣ ಯೋಜನೆಗಳು, ನೀರು ಸಂಸ್ಕರಣಾ ಘಟಕಗಳು, ನೀರು ಪಡೆಯುವ ಬಾವಿಗಳು, ಮೇಲ್ವಿಚಾರಣಾ ನಿಯಂತ್ರಣ ಮತ್ತು ದತ್ತಾಂಶ ಸ್ವಾಧೀನ ವ್ಯವಸ್ಥೆ (SCADA) ಹಾಗೂ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ನಂತಹ ಆಧುನಿಕ ತಂತ್ರಜ್ಞಾನಗಳು ಮತ್ತು ರಾಷ್ಟ್ರೀಯ ಪರೀಕ್ಷೆ ಮತ್ತು ಮಾಪನಾಂಕ ಪ್ರಯೋಗಾಲಯಗಳ ಮಾನ್ಯತಾ ಮಂಡಳಿ (ಎನ್ ಎ ಬಿ ಎಲ್) ಯಿಂದ ಮಾನ್ಯತೆ ಪಡೆದ ನೀರು ಪರೀಕ್ಷಾ ಪ್ರಯೋಗಾಲಯಗಳಿಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸುವುದು.
ಸೆಪ್ಟೆಂಬರ್ 2026 ರ ಅಂತ್ಯದ ವೇಳೆಗೆ ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಕನಿಷ್ಠ ಒಂದು ವಿದ್ಯಾರ್ಥಿ ಪ್ರವಾಸ ಮತ್ತು ಒಂದು ಪ್ರಕಟಿತ ಕೇಸ್ ಸ್ಟಡಿ/ಅತ್ಯುತ್ತಮ ಅಭ್ಯಾಸದ ಪ್ರಕಟಣೆಯನ್ನು ಕೈಗೊಳುವ ಗುರಿಯನ್ನು ಈ ಉಪಕ್ರಮವು ಹೊಂದಿದೆ.
ಈ ಉಪಕ್ರಮದ ಮೂಲಕ, ಜೆಜೆಎಂ 2.0 ಕ್ಷೇತ್ರದಿಂದ ಕಲಿಯುವ ಸಂಸ್ಕೃತಿಯನ್ನು ಆಳವಾಗಿಸಲು, ನಾವೀನ್ಯತೆಯನ್ನು ಪ್ರೋತ್ಸಾಹಿಸಲು ಮತ್ತು ಯಶಸ್ವಿ ಗ್ರಾಮೀಣ ನೀರು ಸರಬರಾಜು ಅಭ್ಯಾಸಗಳನ್ನು ಹೆಚ್ಚು ಗೋಚರವಾಗುವಂತೆ ಹಾಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಶ್ರಮಿಸುತ್ತದೆ, ಆ ಮೂಲಕ ಗ್ರಾಮೀಣ ನೀರಿನ ಭದ್ರತೆಯನ್ನು ನಿರಂತರವಾಗಿ ಬಲಪಡಿಸಲು ಕೊಡುಗೆ ನೀಡುತ್ತದೆ.
******
(ಪ್ರಕಟಣೆ ಐ.ಡಿ.: 2304367)
ವಿಸಿಟರ್ ಕೌಂಟರ್ : 12