ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಂದ ಮುಂಬೈನಲ್ಲಿ ‘ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ 2026’ರ ರೋಡ್‌ಶೋ, ಸ್ವಚ್ಛ ಇಂಧನ ಹೂಡಿಕೆಗೆ ಉತ್ತೇಜನ ನೀಡುವಂತೆ ಸಂಬಂಧಿತ ವಲಯಗಳಿಗೆ ಕರೆ


ಹಸಿರು ಇಂಧನ ವಲಯವು ಹೂಡಿಕೆ ಮತ್ತು ಸಹಭಾಗಿತ್ವಕ್ಕೆ ಮಹತ್ವದ ಅವಕಾಶಗಳನ್ನು ಒದಗಿಸುತ್ತದೆ: ಶ್ರೀ ಪ್ರಲ್ಹಾದ್ ಜೋಶಿ

ಶೃಂಗಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಪಾಲುದಾರ ರಾಜ್ಯವಾಗಿ ಭಾಗವಹಿಸಲಿದೆ: ಮಹಾರಾಷ್ಟ್ರ ಸರ್ಕಾರದ ಸಚಿವರಾದ ಶ್ರೀ ಅತುಲ್ ಮೋರೆಶ್ವರ್ ಸಾವೆ

ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026 ನವದೆಹಲಿಯ ಭಾರತ ಮಂಟಪದಲ್ಲಿ 2026 ರ ನವೆಂಬರ್ 2 ರಿಂದ 5 ರವರೆಗೆ ನಡೆಯಲಿದೆ

ಪ್ರಕಟಣಾ ದಿನಾಂಕ: 27 AUG 2026 5:46PM by PIB Bengaluru

 

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಶಿಕ್ಷಣ, ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಮುಂಬರುವ ‘ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ (BRESE) 2026’ ಅಂಗವಾಗಿ ಇಂದು ಮುಂಬೈನಲ್ಲಿ ಆಯೋಜಿಸಿದ್ದ ರೋಡ್‌ಶೋನಲ್ಲಿ ಹೂಡಿಕೆದಾರರು, ಡೆವಲಪರ್‌ಗಳು, ಹಣಕಾಸು ಸಂಸ್ಥೆಗಳು, ಕೈಗಾರಿಕಾ ವಲಯದ ಪ್ರಮುಖರು ಹಾಗೂ ಇತರ ಸಂಬಂಧಿತ ವಲಯಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಧಾನ ಭಾಷಣ ಮಾಡಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ಇಂಧನ ವಲಯದ ಎಲ್ಲ ಸಂಬಂಧಿತ ಪಾಲುದಾರರು ಮುಂಬರುವ BRESE 2026ರಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಶೃಂಗಸಭೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಆಸಕ್ತಿಯನ್ನು ಮೂಡಿಸುತ್ತಿದೆ ಎಂದು ಅವರು ಹೇಳಿದರು. BRESE 2026ರಲ್ಲಿ ಮೂರು ಪ್ರಮುಖ ಜಾಗತಿಕ ವೇದಿಕೆಗಳು ಒಂದೇ ಸೂರಿನಡಿ ಸಮಾವೇಶಗೊಳ್ಳಲಿವೆ - ಬಿಆರ್‌ಇ (BRE) ಶೃಂಗಸಭೆ ಮತ್ತು ಎಕ್ಸ್‌ಪೋ, ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ 9ನೇ ಸಾಮಾನ್ಯ ಸಭೆ ಹಾಗೂ 4ನೇ ಅಂತಾರಾಷ್ಟ್ರೀಯ ಹಸಿರು ಜಲಜನಕ ಸಮ್ಮೇಳನ. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ 75ಕ್ಕೂ ಹೆಚ್ಚು ದೇಶಗಳ ಸರ್ಕಾರದ ಮುಖ್ಯಸ್ಥರು ಮತ್ತು ಇಂಧನ ಸಚಿವರು, ಜಾಗತಿಕ ಸಾಂಸ್ಥಿಕ ಹೂಡಿಕೆದಾರರು, ತಂತ್ರಜ್ಞಾನ ಪೂರೈಕೆದಾರರು ಹಾಗೂ ನವೀಕರಿಸಬಹುದಾದ ಇಂಧನದ ಸಂಪೂರ್ಣ ಮೌಲ್ಯ ಸರಪಳಿಗೆ ಸೇರಿದ 25,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಶ್ರೀ ಜೋಶಿ ಹೇಳಿದರು.

ಶೃಂಗಸಭೆಯು ಉದ್ಯಮದ ಪಾಲುದಾರರಿಗೆ ಸಹಭಾಗಿತ್ವಗಳನ್ನು ರೂಪಿಸಿಕೊಳ್ಳಲು, ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಹಾಗೂ ಜಾಗತಿಕ ಹೂಡಿಕೆದಾರರು ಮತ್ತು ತಂತ್ರಜ್ಞಾನ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಒದಗಿಸಲಿದೆ ಎಂದು ಶ್ರೀ ಜೋಶಿ ಹೇಳಿದರು. ರಾಜ್ಯಗಳಿಗೆ ತಮ್ಮ ಯೋಜನೆಗಳ ಪ್ರಸ್ತಾವಿತ ಪಟ್ಟಿಯನ್ನು ಜಾಗತಿಕ ಡೆವಲಪರ್‌ಗಳು ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮುಂದೆ ಪ್ರದರ್ಶಿಸಲು ಶೃಂಗಸಭೆಯು ವೇದಿಕೆ ಒದಗಿಸಲಿದೆ. ಬ್ಯಾಂಕುಗಳು ಮತ್ತು ಹೂಡಿಕೆದಾರರಿಗೆ ಯೋಜನೆಗಳು ಮತ್ತು ಹಣಕಾಸು ಅವಕಾಶಗಳ ನಡುವೆ ಹೆಚ್ಚಿನ ಸಮನ್ವಯ ಸಾಧಿಸಲು ಇದು ನೆರವಾಗಲಿದೆ ಎಂದು ಅವರು ಹೇಳಿದರು.

ದೇಶದಲ್ಲಿ ನವೀಕರಿಸಬಹುದಾದ ಇಂಧನ ವಲಯದ ಬೆಳವಣಿಗೆಯನ್ನು ವಿವರಿಸಿದ ಶ್ರೀ ಪ್ರಲ್ಹಾದ್ ಜೋಶಿ, ಭಾರತವು 300 ಗಿಗಾವ್ಯಾಟ್‌ಗೂ ಅಧಿಕ ಸ್ಥಾಪಿತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ದಾಟಿದ್ದು, ಸುಮಾರು 302-303 ಗಿಗಾವ್ಯಾಟ್ ತಲುಪಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯು ಸುಮಾರು 53.5 ಲಕ್ಷ ಫಲಾನುಭವಿ ಕುಟುಂಬಗಳನ್ನು ತಲುಪಿದೆ ಎಂದು ಅವರು ತಿಳಿಸಿದರು. ಕಳೆದ 12 ವರ್ಷಗಳಲ್ಲಿ ಭಾರತದ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವು 80.3 ಗಿಗಾವ್ಯಾಟ್‌ನಿಂದ 300.5 ಗಿಗಾವ್ಯಾಟ್‌ಗೆ ಏರಿಕೆಯಾಗಿದ್ದು, ಶೇ. 275ರಷ್ಟು ಏರಿಕೆ ದಾಖಲಿಸಿದೆ ಎಂದು ಶ್ರೀ ಜೋಶಿ ಹೇಳಿದರು. ಇದೇ ಅವಧಿಯಲ್ಲಿ ಸೌರಶಕ್ತಿ ಸಾಮರ್ಥ್ಯವು 2.8 ಗಿಗಾವ್ಯಾಟ್‌ನಿಂದ 165 ಗಿಗಾವ್ಯಾಟ್‌ಗೆ ಏರಿಕೆಯಾಗಿದ್ದು, ಸುಮಾರು 58 ಪಟ್ಟು ಬೆಳವಣಿಗೆಯಾಗಿದೆ. ಇದೇ ವೇಳೆ, ಪವನಶಕ್ತಿ ಸಾಮರ್ಥ್ಯವು ಸುಮಾರು 21 ಗಿಗಾವ್ಯಾಟ್‌ನಿಂದ 58 ಗಿಗಾವ್ಯಾಟ್‌ಗೆ ಏರಿಕೆಯಾಗಿದ್ದು, ಶೇ. 176ರಷ್ಟು ಹೆಚ್ಚಳವಾಗಿದೆ. 2026–27ನೇ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಭಾರತವು 17 ಗಿಗಾವ್ಯಾಟ್‌ಗೂ ಅಧಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿದ್ದು, ಇದರಲ್ಲಿ 14.33 ಗಿಗಾವ್ಯಾಟ್ ಸೌರಶಕ್ತಿ ಸಾಮರ್ಥ್ಯ ಮತ್ತು 2 ಗಿಗಾವ್ಯಾಟ್‌ಗೂ ಅಧಿಕ ಪವನಶಕ್ತಿ ಸಾಮರ್ಥ್ಯ ಸೇರಿದೆ ಎಂದು ಸಚಿವರು ಹೇಳಿದರು.

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿರುವ ಭಾರತವು ದೇಶೀಯ ಮತ್ತು ವಿದೇಶಿ ಹೂಡಿಕೆಗಳನ್ನು ಗಣನೀಯವಾಗಿ ಆಕರ್ಷಿಸುತ್ತಿದೆ ಎಂದು ಶ್ರೀ ಜೋಶಿ ಹೇಳಿದರು. ದೇಶಾದ್ಯಂತ ವೇಗವಾಗಿ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ, ಹಸಿರು ಇಂಧನ ವಲಯವು ಹೂಡಿಕೆ ಮತ್ತು ಸಹಭಾಗಿತ್ವಕ್ಕೆ ಮಹತ್ವದ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿ ಸಾಧಿಸಲು ಮುಂದಿನ ಐದು ವರ್ಷಗಳಲ್ಲಿ ₹30 ಲಕ್ಷ ಕೋಟಿಗೂ ಅಧಿಕ ಹೂಡಿಕೆಯ ಅಗತ್ಯವಿದೆ ಎಂದು ಶ್ರೀ ಜೋಶಿ ಹೇಳಿದರು. ಈ ಬಂಡವಾಳದ ಗಮನಾರ್ಹ ಭಾಗವನ್ನು ಭಾರತೀಯ ಹಣಕಾಸು ಸಂಸ್ಥೆಗಳು, ಬಂಡವಾಳ ಮಾರುಕಟ್ಟೆಗಳು, ವಿಮಾ ನಿಧಿಗಳು, ಮೂಲಸೌಕರ್ಯ ಹೂಡಿಕೆದಾರರು ಮತ್ತು ಖಾಸಗಿ ಬಂಡವಾಳದ ಮೂಲಕ ಸಂಗ್ರಹಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಭಾರತದ ಶುದ್ಧ ಇಂಧನ ಹೂಡಿಕೆ ವ್ಯವಸ್ಥೆಯಲ್ಲಿ ಮುಂಬೈ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.

BRESE 2026ರ ಪ್ರಯೋಜನವನ್ನು ಮಹಾರಾಷ್ಟ್ರ ಬಳಸಿಕೊಳ್ಳಬೇಕು ಎಂದು ಕರೆ ನೀಡಿದ ಶ್ರೀ ಜೋಶಿ, ರಾಜ್ಯವು ತನ್ನ ನವೀಕರಿಸಬಹುದಾದ ಇಂಧನ ಯೋಜನೆಗಳು ಮತ್ತು ಯಶಸ್ವಿ ಮಾದರಿಗಳನ್ನು, ವಿಶೇಷವಾಗಿ ಪಿಎಂ-ಕುಸುಮ್ ಯೋಜನೆಯಡಿ ತನ್ನ ಅನುಭವವನ್ನು ಪ್ರದರ್ಶಿಸುವಂತೆ ಕರೆ ನೀಡಿದರು. ಕೃಷಿ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಸೌರೀಕರಣ ಮಾದರಿಗಳನ್ನು ಇತರಡೆ ಪುನರಾವರ್ತಿಸಲು ಅಂತಾರಾಷ್ಟ್ರೀಯ ಸಹಭಾಗಿತ್ವಗಳನ್ನು ಅನ್ವೇಷಿಸುವಂತೆಯೂ ಅವರು ತಿಳಿಸಿದರು.

ಮಹಾರಾಷ್ಟ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಅತುಲ್ ಮೋರೆಶ್ವರ್ ಸಾವೆ ಅವರು, BRESE 2026ರಲ್ಲಿ ಮಹಾರಾಷ್ಟ್ರವು ಪಾಲುದಾರ ರಾಜ್ಯವಾಗಿ ಭಾಗವಹಿಸಲಿದೆ ಎಂದು ತಿಳಿಸಿದರು. ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯಡಿ ಸಕ್ರಿಯ ಮಾರಾಟಗಾರರ ಜಾಲದ ವಿಚಾರದಲ್ಲಿ ಮಹಾರಾಷ್ಟ್ರವು ದೇಶದ ಅಗ್ರ ರಾಜ್ಯಗಳ ಪೈಕಿ ಒಂದಾಗಿದೆ. ರಾಜ್ಯದಲ್ಲಿ ಈಗಾಗಲೇ ಬಲಿಷ್ಠ ಮೇಲ್ಛಾವಣಿ ಸೌರಶಕ್ತಿ ಅನುಷ್ಠಾನ ವ್ಯವಸ್ಥೆ ಅಸ್ತಿತ್ವದಲ್ಲಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯ ಸೌರ ಪಂಪ್‌ಗಳನ್ನು ಅಳವಡಿಸುವ ಗುರಿಯನ್ನು ಮಹಾರಾಷ್ಟ್ರ ಈಡೇರಿಸಿದೆ. ದೇಶದ ಅತಿದೊಡ್ಡ ಕೈಗಾರಿಕಾ ಇಂಧನ ಬೇಡಿಕೆಯ ನೆಲೆಗಳಲ್ಲಿ ಒಂದಾದ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ನವೀಕರಿಸಬಹುದಾದ ಇಂಧನ ವಿತರಣಾ ಪರಿಸರ ವ್ಯವಸ್ಥೆಯ ಬೆಂಬಲದೊಂದಿಗೆ 2030 ರ ವೇಳೆಗೆ 65 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಮಹಾರಾಷ್ಟ್ರ ಹೊಂದಿದೆ. ಮಹಾರಾಷ್ಟ್ರ ಸರ್ಕಾರ ಈ ಗುರಿಯನ್ನು ಸಾಧಿಸುವ ಬಗ್ಗೆ ಆಶಾವಾದ ಹೊಂದಿದೆ ಎಂದು ಶ್ರೀ ಸಾವೆ ಹೇಳಿದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಕುಮಾರ್ ಸಾರಂಗಿ ಮಾತನಾಡಿ, BRESE 2026 ನವೀಕರಿಸಬಹುದಾದ ಇಂಧನ ವಲಯದ ಸವಾಲುಗಳು ಮತ್ತು ಅವಕಾಶಗಳ ಕುರಿತು ಚರ್ಚಿಸಲು ‘ಒನ್-ಸ್ಟಾಪ್’ ವೇದಿಕೆಯಾಗಲಿದೆ ಎಂದು ತಿಳಿಸಿದರು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಶ್ರೀ ಜೆವಿಎನ್ ಸುಬ್ರಹ್ಮಣ್ಯಂ ಅವರು BRESE 2026 ನವೀಕರಿಸಬಹುದಾದ ಇಂಧನ ವಲಯದ ಪಾಲುದಾರರಿಗೆ ಒದಗಿಸಲಿರುವ ಅವಕಾಶಗಳನ್ನು ಪ್ರಸ್ತುತಪಡಿಸಿದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಐಎಸ್‌ಎ (ISA) ಆತಿಥ್ಯದಲ್ಲಿ, ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ - CII) ದ ಬೆಂಬಲದೊಂದಿಗೆ ಆಯೋಜಿಸಲಾದ ಈ ರೋಡ್‌ಶೋ, 2026ರ ನವೆಂಬರ್ 2ರಿಂದ 5ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ ಬಿಆರ್‌ಇ (BRE) ಶೃಂಗಸಭೆ 2026ಕ್ಕೆ ಮುನ್ನ ವೇಗ ಹೆಚ್ಚಿಸಲು ದೇಶಾದ್ಯಂತ ಆಯೋಜಿಸಲಾಗುತ್ತಿರುವ ಪ್ರಾದೇಶಿಕ ಕಾರ್ಯಕ್ರಮಗಳ ಸರಣಿಯಲ್ಲಿ ಎರಡನೆಯದಾಗಿದೆ. ಈ ಕಾರ್ಯಕ್ರಮದಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE), ಮಹಾರಾಷ್ಟ್ರ ಸರ್ಕಾರ ಹಾಗೂ ಭಾರತದ ನವೀಕರಿಸಬಹುದಾದ ಇಂಧನ, ಬ್ಯಾಂಕಿಂಗ್ ಮತ್ತು ಮೂಲಸೌಕರ್ಯ ಕ್ಷೇತ್ರಗಳ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದರು.

ಮುಂಬೈ ರೋಡ್‌ಶೋ ತಳಮಟ್ಟದಲ್ಲಿ ಭಾರತದ ಶುದ್ಧ ಇಂಧನ ಕಾರ್ಯಕ್ರಮಗಳ ವ್ಯಾಪ್ತಿಯು ವೇಗವಾಗಿ ಹೆಚ್ಚುತ್ತಿರುವುದನ್ನೂ ಎತ್ತಿ ತೋರಿಸಿತು. ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯಡಿ ದೇಶಾದ್ಯಂತ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈಗ ಸ್ವತಃ ಸೌರಶಕ್ತಿ ಉತ್ಪಾದಿಸುತ್ತಿವೆ. 2024ರ ಫೆಬ್ರವರಿಯಲ್ಲಿ ಯೋಜನೆ ಆರಂಭವಾದ ಬಳಿಕ ₹28,000 ಕೋಟಿಗೂ ಅಧಿಕ ಕೇಂದ್ರ ಹಣಕಾಸು ನೆರವನ್ನು ಬಿಡುಗಡೆ ಮಾಡಲಾಗಿದೆ. ಯೋಜನೆಯ ಬಜೆಟ್ ಅನ್ನು 2025–26ರಲ್ಲಿ ₹17,000 ಕೋಟಿಯಿಂದ 2026–27ರಲ್ಲಿ ₹22,000 ಕೋಟಿಗೆ ಹೆಚ್ಚಿಸಲಾಗಿದ್ದು, ಯೋಜನೆಯ ವ್ಯಾಪ್ತಿ ಮತ್ತು ವೇಗವನ್ನು ಇದು ಪ್ರತಿಬಿಂಬಿಸುತ್ತದೆ. ಪಿಎಂ-ಕುಸುಮ್ ಯೋಜನೆಯಡಿ ಲಕ್ಷಾಂತರ ರೈತರು ಡೀಸೆಲ್ ಅವಲಂಬಿತ ನೀರಾವರಿಯನ್ನು ಸೌರ ಪಂಪ್‌ಗಳಿಗೆ ಬದಲಿಸಿಕೊಂಡಿದ್ದು, ಇದರಿಂದಾಗಿ ಅವರು ಇಂಧನ ಗ್ರಾಹಕರಿಂದ ಇಂಧನ ಉತ್ಪಾದಕರಾಗಿ ರೂಪಾಂತರಗೊಂಡಿದ್ದಾರೆ.

ಮುಂಬೈ ಕಾರ್ಯಕ್ರಮಕ್ಕೂ ಮುನ್ನ 24 ಆಗಸ್ಟ್ 2026ರಂದು ಜೈಪುರದಲ್ಲಿ ಯಶಸ್ವಿಯಾಗಿ ಮೊದಲ ರೋಡ್‌ಶೋ ಆಯೋಜಿಸಲಾಗಿತ್ತು. ಮುಂಬರುವ ವಾರಗಳಲ್ಲಿ ಹೈದರಾಬಾದ್, ಅಹಮದಾಬಾದ್, ಲಖನೌ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಮುಂದಿನ ರೋಡ್‌ಶೋಗಳನ್ನು ಆಯೋಜಿಸಲು ನಿಗದಿಪಡಿಸಲಾಗಿದೆ. ಈ ಪ್ರಾದೇಶಿಕ ಕಾರ್ಯಕ್ರಮಗಳಲ್ಲಿ ಎಲ್ಲ ರಾಜ್ಯ ಸರ್ಕಾರಗಳು, ವಿದ್ಯುತ್ ಉಪಯುಕ್ತತಾ ಸಂಸ್ಥೆಗಳು ಮತ್ತು ಕೈಗಾರಿಕಾ ವಲಯದ ಪಾಲುದಾರರು ಸಕ್ರಿಯವಾಗಿ ಭಾಗವಹಿಸುವಂತೆ ಸಚಿವಾಲಯ ಮತ್ತು ಆಯೋಜಕ ಪಾಲುದಾರರು ಆಹ್ವಾನಿಸಿದ್ದಾರೆ.

ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ (BRE Summit) 2026 ಕುರಿತು:

ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ (BRE SUMMIT) 2026 ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಪ್ರದರ್ಶನಗಳಲ್ಲಿ ಒಂದಾಗಿದ್ದು, ಶುದ್ಧ ಇಂಧನ ಸಹಕಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಪ್ರಮುಖ ಜಾಗತಿಕ ವೇದಿಕೆಯಾಗಿದೆ.

ಹೆಚ್ಚಿನ ಮತ್ತು ಇತ್ತೀಚಿನ ಮಾಹಿತಿಗಾಗಿ, www.bresummit.in ಗೆ ಭೇಟಿ ನೀಡಿ.

 

******


(ಪ್ರಕಟಣೆ ಐ.ಡಿ.: 2303928) ವಿಸಿಟರ್ ಕೌಂಟರ್ : 23
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Marathi