ಹಣಕಾಸು ಸಚಿವಾಲಯ
ಹಣಕಾಸು ವರ್ಷ 2025-26 ರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್ ಆರ್ ಬಿ) ಗಳ ನಿವ್ವಳ ಲಾಭ ₹10,176 ಕೋಟಿಗೆ ಏರಿಕೆ, ಒಟ್ಟು ₹13.5 ಲಕ್ಷ ಕೋಟಿ ದಾಟಿದ ವ್ಯವಹಾರ
ಹಣಕಾಸು ವರ್ಷ 2025-26ರಲ್ಲಿ ಆರ್ ಆರ್ ಬಿ ಗಳಲ್ಲಿ 54.98 ಲಕ್ಷಕ್ಕೂ ಹೆಚ್ಚು ಹೊಸ ಪಿಎಂಜೆಡಿವೈ ಖಾತೆ; ಗ್ರಾಮೀಣ ಪ್ರದೇಶ ಮತ್ತು ಬ್ಯಾಂಕಿಂಗ್ ವ್ಯವಹಾರ ಕಡಿಮೆ ಇರುವೆಡೆಗಳಲ್ಲಿ ಆರ್ಥಿಕ ಸೇರ್ಪಡೆಯ ಬಲವರ್ಧನೆ
ದೇಶದ ಯುವಜನರು ಸೇರಿದಂತೆ ಸಮಾಜದ ಎಲ್ಲ ವರ್ಗಕ್ಕೂ ಬ್ಯಾಂಕಿಂಗ್ ಸೇವೆ ಖಚಿತಪಡಿಸಿಕೊಳ್ಳಲು ಡಿಜಿಟಲ್ ಬ್ಯಾಂಕಿಂಗ್ ಸೇವೆ ವಿಸ್ತರಣೆ
ಪ್ರಕಟಣಾ ದಿನಾಂಕ:
25 AUG 2026 5:47PM by PIB Bengaluru
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್ ಆರ್ ಬಿ) ಗಳ ಕಾರ್ಯಕ್ಷಮತೆಯ ಕುರಿತಾದ ಪರಾಮರ್ಶನ ಸಭೆ ದೆಹಲಿಯಲ್ಲಿಂದು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆಯಿತು. ನಬಾರ್ಡ್ ಅಧ್ಯಕ್ಷರು, ಎಲ್ಲಾ 28 ಆರ್ ಆರ್ ಬಿಗಳ ಮುಖ್ಯಸ್ಥರು, ಹಣಕಾಸು ಸೇವೆಗಳ ಇಲಾಖೆ, ಪ್ರಾಯೋಜಕ ಬ್ಯಾಂಕುಗಳು, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ ಐ ಡಿ ಬಿ ಐ) ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಹಣಕಾಸು ವರ್ಷ 2025-26 ರಲ್ಲಿ ಎಲ್ಲಾ ಆರ್‌ಆರ್‌ಬಿಗಳ ಕಾರ್ಯಕ್ಷಮತೆ ಶ್ಲಾಘನೀಯ ಎಂದು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, 26 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಸುಮಾರು 700 ಜಿಲ್ಲೆಗಳ ವ್ಯಾಪ್ತಿಯಲ್ಲಿ 22,273 ಶಾಖೆಗಳ ಮೂಲಕ 28 ಆರ್ ಆರ್ ಬಿ ಗಳು ಕಾರ್ಯನಿರ್ವಹಿಸುತ್ತಿವೆ.
ಹಣಕಾಸು ವರ್ಷ 2025-26ರಲ್ಲಿ ಎಲ್ಲಾ 28 ಆರ್ ಆರ್ ಬಿಗಳ ಒಟ್ಟು ವ್ಯವಹಾರವು ₹13.5 ಲಕ್ಷ ಕೋಟಿಗಿಂತ ಹೆಚ್ಚಿದ್ದು, ಇದು ಕೆಲವು ಪ್ರತ್ಯೇಕ ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ವ್ಯವಹಾರ ಪ್ರಮಾಣವನ್ನು ಮೀರಿಸಿದೆ.
ಹಣಕಾಸು ವರ್ಷ 2024-25ರ ₹6,820 ಕೋಟಿ ಮೊತ್ತದ ಕ್ರೋಢೀಕೃತ ನಿವ್ವಳ ಲಾಭಕ್ಕೆ ಹೋಲಿಸಿದರೆ, 2025-26ನೇ ಹಣಕಾಸು ವರ್ಷದಲ್ಲಿ ಆರ್ ಆರ್ ಬಿಗಳ ನಿವ್ವಳ ಲಾಭವು ₹10,176 ಕೋಟಿಗಳಷ್ಟಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿತ್ತು. ಒಟ್ಟು ವಾಪಸ್ಸಾಗದ ಸಾಲ (ಜಿ ಎನ್ ಪಿ ಎ) ಮತ್ತು ನಿವ್ವಳ ವಾಪಸ್ಸಾಗದ ಸಾಲದ ಪ್ರಮಾಣ ಕ್ರಮವಾಗಿ ಶೇ. 5.3 ಮತ್ತು ಶೇ.2.1 ರಷ್ಟಿದ್ದು ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿವೆ.
ಆರ್ ಆರ್ ಬಿ ಗಳು ಆದ್ಯತಾ ವಲಯ ಸಾಲದ ಅಡಿಯಲ್ಲಿ ನಿಗದಿಪಡಿಸಿರುವ ಎಲ್ಲಾ ಗುರಿಗಳು ಮತ್ತು ಉಪ-ಗುರಿಗಳನ್ನು ಸಾಧಿಸುವುದನ್ನು ಮುಂದುವರಿಸಿದ್ದು, ಇದು ಸಮಾಜದ ದುರ್ಬಲ ವರ್ಗ ಮತ್ತು ವಂಚಿತ ವರ್ಗಗಳಿಗೆ ಸೇವೆ ಸಲ್ಲಿಸುವ ಬಲವಾದ ಬದ್ಧತೆಯ ಪ್ರತಿಬಿಂಬವಾಗಿದೆ.
ಹಣಕಾಸು ವರ್ಷ 2025-26ರಲ್ಲಿ ಆರ್ ಆರ್ ಬಿ ಗಳು 54.98 ಲಕ್ಷಕ್ಕೂ ಹೆಚ್ಚು ಹೊಸ ಪ್ರಧಾನಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಖಾತೆಗಳನ್ನು ತೆರೆಯುವ ಮೂಲಕ ಆರ್ಥಿಕ ಸೇರ್ಪಡೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇನ್ನೂ ಮುಖ್ಯವಾಗಿ ಆರ್ ಆರ್ ಬಿಗಳ ಸಾಲ-ಠೇವಣಿ ಅನುಪಾತದಲ್ಲಿ ಏರಿಕೆ ಪ್ರವೃತ್ತಿ ಕಂಡುಬಂದಿದ್ದು, ಹಣಕಾಸು ವರ್ಷ 2025-26ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ಶೇ.75.2 ರಷ್ಟು ದಾಖಲಾಗಿದೆ.
ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ವಿಸ್ತರಿಸುತ್ತಾ ಡಿಜಿಟಲ್ ಬ್ಯಾಂಕಿಂಗ್ ನ ಅನುಕೂಲಗಳು ದೇಶದ ಯುವಜನರು ಸೇರಿದಂತೆ ಸಮಾಜದ ಎಲ್ಲಾ ವರ್ಗವನ್ನು ತಲುಪುವಂತೆ ಖಾತರಿಪಡಿಸಿಕೊಳ್ಳುವ ಜೊತೆಜೊತೆಗೆ, ಕಾರ್ಯಾಚರಣೆಯ ದಕ್ಷತೆ ಸುಧಾರಿಸಲು ಮತ್ತು ಗ್ರಾಹಕರ ಅನುಭೂತಿ ವರ್ಧಿಸಲು ಆರ್ ಆರ್ ಬಿಗಳು ಆಧುನಿಕ ಬ್ಯಾಂಕಿಂಗ್ ತಂತ್ರಜ್ಞಾನದ ಅಳವಡಿಕೆ ಮತ್ತು ಹಣಕಾಸು ಸೇವೆಗಳ ಡಿಜಿಟಲ್ ವಿತರಣೆಗೆ ವೇಗ ನೀಡಬೇಕಿರುವುದು ಅಗತ್ಯ ಎಂದು ಕಾರ್ಯದರ್ಶಿಗಳು ಒತ್ತಿ ಹೇಳಿದ್ದಾರೆ.
ಹಣಕಾಸು ಸೇವೆಗಳ ಇಲಾಖೆ (ಡಿ ಎಫ್ ಎಸ್) ನ ಕಾರ್ಯದರ್ಶಿಯವರು ಹಣಕಾಸು ವರ್ಷ 2025-26 ರಲ್ಲಿ ಆರ್ ಆರ್ ಬಿಗಳ ಕಾರ್ಯಕ್ಷಮತೆಯಲ್ಲಿನ ಒಟ್ಟಾರೆ ಸುಧಾರಣೆಯನ್ನು ಶ್ಲಾಘಿಸಿದ್ದಾರೆ. ಔಪಚಾರಿಕ ಬ್ಯಾಂಕಿಂಗ್ ಸೇವೆ ಮತ್ತು ಸರ್ಕಾರಿ ಪ್ರಾಯೋಜಿತ ಯೋಜನೆಗಳ ಲಾಭವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಸಾಧ್ಯವಾಗುವಂತೆ ಎಲ್ಲಾ ಆರ್ ಆರ್ ಬಿಗಳು ಆವೇಗವನ್ನು ಕಾಪಾಡಿಕೊಳ್ಳುತ್ತಾ ತಮ್ಮ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.
ಎಲ್ಲಾ ಪ್ರಾಯೋಜಕ ಬ್ಯಾಂಕ್‌ಗಳು ತಮ್ಮ ಬೆಳವಣಿಗೆಯ ಪಯಣದಲ್ಲಿ, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ (ಐಟಿ) ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ತಮ್ಮ ಆರ್ ಆರ್ ಬಿಗಳಿಗೆ ಬೆಂಬಲವಾಗಿರುವಂತೆ ಅವರು ಮನವಿ ಮಾಡಿದ್ದಾರೆ. ಎಲ್ಲಾ ಆರ್ ಆರ್ ಬಿಗಳ ಮುಖ್ಯಸ್ಥರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಎಲ್ಲಾ ವಲಯಗಳಿಗೆ ಬ್ಯಾಂಕ್ ಸಾಲದ ಹರಿವನ್ನು ಹೆಚ್ಚಿಸಲು ವೈಯಕ್ತಿಕವಾಗಿ ಆಸಕ್ತಿ ತೋರಿ ಉಪಕ್ರಮ ಕೈಗೊಳ್ಳುವಂತೆ ಹಾಗೂ ಸಾಧ್ಯವಾದಲ್ಲೆಲ್ಲಾ ಹೊಸದಾಗಿ ಮತ್ತು ನವೀನವಾದ ಸಾಲ ನೀಡುವ ಮಾರ್ಗಗಳನ್ನು ಪರಿಚಯಿಸುವಂತೆ ಅವರು ಪ್ರೋತ್ಸಾಹಿಸಿದ್ದಾರೆ.
******
(ಪ್ರಕಟಣೆ ಐ.ಡಿ.: 2303317)
ವಿಸಿಟರ್ ಕೌಂಟರ್ : 20