ಪರಿಸರ ಮತ್ತು ಅರಣ್ಯ ಸಚಿವಾಲಯ
2011-2020 ರ ಅವಧಿಯಲ್ಲಿ ಭಾರತವು 21.76 ದಶಲಕ್ಷ ಹೆಕ್ಟೇರ್ ಭೂಮಿಯನ್ನು ಪುನರುಜ್ಜೀವನಗೊಳಿಸಿದೆ ಮತ್ತು 1.22 ಶತಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಿದೆ: ಉಲಾನ್ಬಾತರ್, ಮಂಗೋಲಿಯಾದಲ್ಲಿ ನಡೆದ ಯುಎನ್ ಸಿಸಿಡಿ ಸಿಒಪಿ17 ರಲ್ಲಿ ಶ್ರೀ ಭೂಪೇಂದರ್ ಯಾದವ್
ಭೂ ಪುನರುಜ್ಜೀವನವು ಭಾರತದ ಸ್ಥಾಪಿತ ರಾಷ್ಟ್ರೀಯ ಆದ್ಯತೆಯಾಗಿದೆ; ಇದು ಸುಸ್ಥಿರ ಭೂ ನಿರ್ವಹಣೆ, ಜೀವವೈವಿಧ್ಯ ಸಂರಕ್ಷಣೆ, ಹವಾಮಾನ ಕ್ರಿಯೆ ಮತ್ತು ಗ್ರಾಮೀಣಾಭಿವೃದ್ಧಿಯ ಅವಿಭಾಜ್ಯವಾಗಿದೆ: ಕೇಂದ್ರ ಪರಿಸರ ಸಚಿವರು
प्रविष्टि तिथि:
24 AUG 2026 2:58PM by PIB Bengaluru
ಭೂ ಪುನರುಜ್ಜೀವನವು ಭಾರತದ ಸ್ಥಾಪಿತ ರಾಷ್ಟ್ರೀಯ ಆದ್ಯತೆಯಾಗಿದೆ ಹಾಗೂ ಸುಸ್ಥಿರ ಭೂ ನಿರ್ವಹಣೆ, ಜೀವವೈವಿಧ್ಯ ಸಂರಕ್ಷಣೆ, ಹವಾಮಾನ ಕ್ರಿಯೆ ಮತ್ತು ಗ್ರಾಮೀಣಾಭಿವೃದ್ಧಿಯ ದೇಶದ ಪ್ರಯತ್ನಗಳ ಅವಿಭಾಜ್ಯವಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಇಂದು ತಿಳಿಸಿದ್ದಾರೆ. ಮಂಗೋಲಿಯಾದ ಉಲಾನ್ ಬಾತರ್ ನಲ್ಲಿ ನಡೆಯುತ್ತಿರುವ ಮರುಭೂಮೀಕರಣವನ್ನು ತಡೆಗಟ್ಟುವ ವಿಶ್ವಸಂಸ್ಥೆಯ ಒಪ್ಪಂದದ (ಯುಎನ್ ಸಿಸಿಡಿ) 17ನೇ ಸಮ್ಮೇಳನದಲ್ಲಿ (ಸಿಒಪಿ 17) ಐಯುಸಿಎನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಯಾದವ್, ಭಾರತವು ಪುನರುಜ್ಜೀವನವನ್ನು ಪ್ರತ್ಯೇಕ ಚಟುವಟಿಕೆಯಾಗಿ ನೋಡದೆ, ಸುಸ್ಥಿರ ಮತ್ತು ಚೇತರಿಕೆಯುಕ್ತ ಅಭಿವೃದ್ಧಿಯ ಅತ್ಯಗತ್ಯ ಅಂಗವಾಗಿ ಪರಿಗಣಿಸುತ್ತದೆ ಎಂದು ಹೇಳಿದರು.

ಭಾರತವು 'ಬಾನ್ ಚಾಲೆಂಜ್'ನ ಪ್ರಮುಖ ಜಾಗತಿಕ ಸಹಮತದಾರರಲ್ಲಿ ಒಂದಾಗಿದೆ ಎಂದು ಸಚಿವರು ಹೇಳಿದರು. 2015 ರಲ್ಲಿ, ಭಾರತವು ಕ್ಷೀಣಿಸಿದ ಮತ್ತು ಅರಣ್ಯನಾಶವಾದ ಭೂಮಿಯನ್ನು ಪುನರುಜ್ಜೀವನಗೊಳಿಸಲು ಆರಂಭಿಕ ಭರವಸೆ ನೀಡಿತ್ತು, ಅದನ್ನು ನಂತರ 2030 ರ ವೇಳೆಗೆ 26 ದಶಲಕ್ಷ ಹೆಕ್ಟೇರ್ ಗೆ ಹೆಚ್ಚಿಸಲಾಯಿತು. ಈ ಬದ್ಧತೆಯು ಸವಾಲಿನ ವ್ಯಾಪ್ತಿ ಮತ್ತು ಬೃಹತ್ ಪ್ರಮಾಣದಲ್ಲಿ ಪುನರುಜ್ಜೀವನಗೊಳಿಸುವ ಭಾರತದ ರಾಷ್ಟ್ರೀಯ ಸಾಮರ್ಥ್ಯದ ಮೇಲಿನ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
2011–2020ರ ಅವಧಿಯನ್ನು ಒಳಗೊಂಡಂತೆ ಭಾರತವು ಇತ್ತೀಚೆಗೆ ʻಬಾನ್ ಚಾಲೆಂಜ್ʼ ಮೇಲಿನ ತನ್ನ ಎರಡನೇ ಪ್ರಗತಿಯ ವರದಿಯನ್ನು ಬಿಡುಗಡೆ ಮಾಡಿದೆ ಎಂದು ಶ್ರೀ ಯಾದವ್ ಹೇಳಿದರು. ಈ ಅವಧಿಯಲ್ಲಿ, ಗಮನಾರ್ಹ ಹಣಕಾಸಿನ ಹರಿವಿನ ಬೆಂಬಲದೊಂದಿಗೆ 21.76 ದಶಲಕ್ಷ ಹೆಕ್ಟೇರ್ ಭೂಮಿಯನ್ನು ಪುನರುಜ್ಜೀವನಕ್ಕೆ ತರಲಾಗಿದೆ ಮತ್ತು ಸುಮಾರು 1.22 ಶತಕೋಟಿ ಮಾನವ-ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗಿದೆ ಎಂದು ಅವರು ತಿಳಿಸಿದರು. ಈ ಅಂಕಿ-ಅಂಶಗಳು ಕ್ಷೀಣಿಸಿದ ಭೂಪ್ರದೇಶಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಮತ್ತು ಗ್ರಾಮೀಣ ಜೀವನೋಪಾಯವನ್ನು ಬೆಂಬಲಿಸುವ ಮೂಲಕ ಪುನರುಜ್ಜೀವನವು ಪರಿಸರ ಮತ್ತು ಸಾಮಾಜಿಕ-ಆರ್ಥಿಕ ಫಲಿತಾಂಶಗಳೆರಡನ್ನೂ ನೀಡಬಲ್ಲದು ಎಂಬುದನ್ನು ತೋರಿಸುತ್ತವೆ ಎಂದು ಸಚಿವರು ಹೇಳಿದರು. ಮುಖ್ಯವಾಗಿ, ಈ ಮೌಲ್ಯಮಾಪನವು ಕೇವಲ ಹೆಕ್ಟೇರ್ ಗಳನ್ನು ಅಳೆಯುವುದನ್ನು ಮೀರಿದ್ದಾಗಿದ್ದು ಪುನರುಜ್ಜೀವನವು ಪ್ರತಿಯೊಂದು ಭೂಪ್ರದೇಶದ ಪರಿಸರ ಮತ್ತು ಸಾಮಾಜಿಕ-ಆರ್ಥಿಕ ಗುಣಲಕ್ಷಣಗಳಿಗೆ ಸ್ಪಂದಿಸಬೇಕು ಎಂಬುದನ್ನು ಗುರುತಿಸಿ, ಇದು ಅರಣ್ಯಗಳು, ಕೃಷಿ, ಮಣ್ಣು ಮತ್ತು ನೀರು ಸಂರಕ್ಷಣೆ ಮತ್ತು ಇತರ ಭೂ-ಬಳಕೆಯ ವ್ಯವಸ್ಥೆಗಳಾದ್ಯಂತ ಪುನರುಜ್ಜೀವನವನ್ನು ಒಳಗೊಳ್ಳುತ್ತದೆ ಎಂದು ಹೇಳಿದರು.
ವರದಿ ಮಾಡುವ ಪ್ರಕ್ರಿಯೆಯು ಪುನರುಜ್ಜೀವನದ ಫಲಿತಾಂಶಗಳು, ಹಣಕಾಸಿನ ಹರಿವುಗಳು ಮತ್ತು ಜೀವನೋಪಾಯದ ಪರಿಣಾಮಗಳನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ಉಲ್ಲೇಖಿಸಲಾಗಿದೆ ಎಂದು ಶ್ರೀ ಯಾದವ್ ಹೇಳಿದರು. ಆದ್ದರಿಂದ ಭಾರತವು ಐ ಸಿ ಎಫ್ ಆರ್ ಇ ಸುಸ್ಥಿರ ಭೂ ನಿರ್ವಹಣೆಯ ಶ್ರೇಷ್ಠತಾ ಕೇಂದ್ರ ಮತ್ತು ಐಯುಸಿಎನ್ ಸಹಯೋಗದೊಂದಿಗೆ 2021-2025 ರ ಮುಂದಿನ ವರದಿ ಮಾಡುವ ಚಕ್ರವನ್ನು ಕೈಗೆತ್ತಿಕೊಳ್ಳುತ್ತಿದೆ. ಈ ಚಕ್ರವು ಪುನರುಜ್ಜೀವನಗೊಳಿಸಿದ ಪ್ರದೇಶ, ಹಣಕಾಸಿನ ಹರಿವು ಮತ್ತು ಸೃಷ್ಟಿಯಾದ ಉದ್ಯೋಗ ಎಂಬ ಮೂರು ಪ್ರಮುಖ ಆಯಾಮಗಳ ಮೇಲೆ ಗಮನ ಹರಿಸುತ್ತದೆ, ಜೊತೆಗೆ ಪುನರುಜ್ಜೀವನಕ್ಕಾಗಿ ರಾಷ್ಟ್ರೀಯ ಸಾಕ್ಷ್ಯ ಆಧಾರವನ್ನು ಬಲಪಡಿಸುತ್ತದೆ. ಯಾವುದೇ ಬದ್ಧತೆಯ ವಿಶ್ವಾಸಾರ್ಹತೆಯು ಅಂತಿಮವಾಗಿ ಅದರ ಅನುಷ್ಠಾನದ ಮೇಲೆ ಆಧಾರಿತವಾಗಿರುತ್ತದೆ ಎಂದು ಸಚಿವರು ಹೇಳಿದರು. ಆದ್ದರಿಂದ ಭಾರತವು ಈ ಮಹತ್ವಾಕಾಂಕ್ಷೆಯನ್ನು ಕ್ರಿಯಾರೂಪಕ್ಕೆ ಇಳಿಸಲು ಬಹು-ವಲಯ ಮತ್ತು ಭೂಪ್ರದೇಶ-ಆಧಾರಿತ ವಿಧಾನವನ್ನು ಅಭಿವೃದ್ಧಿಪಡಿಸಿದೆ.
ʻಹಸಿರು ಭಾರತ ಮಿಷನ್ʼಅರಣ್ಯ ಮತ್ತು ಮರಗಳ ನೆಡುವಿಕೆ, ಪರಿಸರ ವ್ಯವಸ್ಥೆಯ ಸೇವೆಗಳು ಮತ್ತು ಹವಾಮಾನ ಚೇತರಿಕೆಯನ್ನು ಬಲಪಡಿಸುತ್ತಿದೆ ಎಂದು ಶ್ರೀ ಯಾದವ್ ಮಾಹಿತಿ ನೀಡಿದರು. ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನೆ ಪ್ರಾಧಿಕಾರದ (ಸಿಎಎಂಪಿಎ) ಮೂಲಕ, ಗಮನಾರ್ಹ ಸಂಪನ್ಮೂಲಗಳನ್ನು ಪರಿಹಾರಾತ್ಮಕ ಅರಣ್ಯೀಕರಣ ಮತ್ತು ಸಂಬಂಧಿತ ಪುನರುಜ್ಜೀವನ ಚಟುವಟಿಕೆಗಳತ್ತ ನಿರ್ದೇಶಿಸಲಾಗುತ್ತಿದೆ. ನಗರ ಹಸಿರೀಕರಣಕ್ಕಾಗಿ 'ನಗರ ವನ ಯೋಜನೆ'ಯು ನಗರ ಅರಣ್ಯ ಮತ್ತು ಹಸಿರು ಜಾಗಗಳ ಮೂಲಕ ನಗರ ಮತ್ತು ಉಪ-ನಗರ ಭೂಪ್ರದೇಶಗಳಿಗೆ ಪುನರುಜ್ಜೀವನದ ಕಾರ್ಯಸೂಚಿಯನ್ನು ವಿಸ್ತರಿಸುತ್ತದೆ. ಈ ಪ್ರಯತ್ನಗಳಿಗೆ ದೇಶಾದ್ಯಂತ ಜಲಾನಯನ ಪ್ರದೇಶ ಅಭಿವೃದ್ಧಿ, ಕೃಷಿ-ಅರಣ್ಯ, ಮಣ್ಣು ಮತ್ತು ನೀರು ಸಂರಕ್ಷಣೆ ಮತ್ತು ಸಮುದಾಯ ಆಧಾರಿತ ಪುನರುಜ್ಜೀವನ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಸಚಿವರು ಹೇಳಿದರು.
ಪುನರುಜ್ಜೀವನವನ್ನು ಒಂದೇ ಕಾರ್ಯಕ್ರಮ ಅಥವಾ ವಲಯದ ಮೂಲಕ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಈ ಅನುಭವವು ತೋರಿಸಿಕೊಡುತ್ತದೆ ಎಂದು ಶ್ರೀ ಯಾದವ್ ಹೇಳಿದರು. ಇದಕ್ಕೆ ಭೂಪ್ರದೇಶಗಳು, ವಲಯಗಳು ಮತ್ತು ಆಡಳಿತದ ಹಂತಗಳಾದ್ಯಂತ ಅಂದರೆ ಸ್ಥಳೀಯ ಸಮುದಾಯಗಳು ಮತ್ತು ರಾಜ್ಯಗಳಿಂದ ಕೇಂದ್ರ ಸರ್ಕಾರದವರೆಗೆ ಒಗ್ಗೂಡುವಿಕೆಯ ಅಗತ್ಯವಿದೆ. 2030 ರ ಆಚೆಗೆ ನೋಡಿದಾಗ, ಭಾರತದ ಉದ್ದೇಶವು ಹೆಚ್ಚು ಭೂಮಿಯನ್ನು ಪುನರುಜ್ಜೀವನಗೊಳಿಸುವುದು ಮಾತ್ರವಲ್ಲದೆ, ಅದನ್ನು ಉತ್ತಮವಾಗಿ ಪುನರುಜ್ಜೀವನಗೊಳಿಸುವುದು, ಉತ್ತಮ ಹಣಕಾಸು ಒದಗಿಸುವುದು ಮತ್ತು ಬೆಳವಣಿಗೆ ಹೊಂದಬಹುದಾದ ಹಾಗೂ ಸುಸ್ಥಿರ ಫಲಿತಾಂಶಗಳನ್ನು ನೀಡುವುದಾಗಿದೆ ಎಂದು ಸಚಿವರು ಹೇಳಿದರು. ಹೆಚ್ಚಿನ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಸಜ್ಜುಗೊಳಿಸಲು ನವೀನ ಹಣಕಾಸು ಕಾರ್ಯವಿಧಾನಗಳು; ಜ್ಞಾನ, ತಂತ್ರಜ್ಞಾನಗಳು ಮತ್ತು ಅನುಭವವನ್ನು ಹಂಚಿಕೊಳ್ಳಲು ಬಲವಾದ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಭಾಗವಹಿಸುವಿಕೆ; ಮತ್ತು ಸ್ಥಳೀಯ ಸಮುದಾಯಗಳ ನಿರಂತರ ಭಾಗವಹಿಸುವಿಕೆ ಇದಕ್ಕೆ ಅಗತ್ಯವಿರುತ್ತದೆ ಎಂದು ಸಚಿವರು ತಿಳಿಸಿದರು. ಪುನರುಜ್ಜೀವನವು ಅಂತಿಮವಾಗಿ ಈ ಭೂಪ್ರದೇಶಗಳನ್ನು ಅವಲಂಬಿಸಿರುವ ಮತ್ತು ನಿರ್ವಹಿಸುವ ಜನರಿಂದ ಸುಸ್ಥಿರವಾಗಿ ಉಳಿಯುತ್ತದೆ ಎಂದು ಸಚಿವರು ಹೇಳಿದರು.
ಬೃಹತ್ ಪ್ರಮಾಣದಲ್ಲಿ ಪುನರುಜ್ಜೀವನವನ್ನು ಮುನ್ನಡೆಸಲು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡಲು ಭಾರತವು ಬದ್ಧವಾಗಿದೆ ಎಂದು ಹೇಳುವ ಮೂಲಕ ಶ್ರೀ ಯಾದವ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಬಲವಾದ ಸಂಸ್ಥೆಗಳು, ಸುಸ್ಥಿರ ಹಣಕಾಸು, ಸಮರ್ಥ ವಿಜ್ಞಾನ, ಬಲವಾದ ಮೇಲ್ವಿಚಾರಣೆ ಮತ್ತು ವಲಯಗಳು ಹಾಗೂ ಆಡಳಿತ ಮಟ್ಟಗಳಾದ್ಯಂತ ಪಾಲುದಾರಿಕೆಗಳ ಬೆಂಬಲವಿದ್ದಾಗ ಮಹತ್ವಾಕಾಂಕ್ಷೆಯ ಬದ್ಧತೆಗಳನ್ನು ಅಳೆಯಬಹುದಾದ ಫಲಿತಾಂಶಗಳಾಗಿ ಪರಿವರ್ತಿಸಬಹುದು ಎಂಬುದನ್ನು ಭಾರತದ ಅನುಭವವು ತೋರಿಸುತ್ತದೆ. ಈ ಹಂಚಿಕೆಯ ಕಾರ್ಯಸೂಚಿಯನ್ನು ಮುನ್ನಡೆಸುವಲ್ಲಿ ಎಲ್ಲಾ ಪಾಲುದಾರರೊಂದಿಗೆ ಕೆಲಸ ಮಾಡಲು ಭಾರತವು ಎದುರು ನೋಡುತ್ತಿದೆ ಎಂದು ಅವರು ಹೇಳಿದರು.
*****
(रिलीज़ आईडी: 2302725)
आगंतुक पटल : 11