ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರಿಂದ ಎಚ್1ಎನ್1 ಜ್ವರದ ಸಿದ್ಧತೆಗಳ ಪರಿಶೀಲನೆ; ಜಾಗರೂಕತೆ ಮತ್ತು ಸಮರ್ಥ ಕಣ್ಗಾವಲಿಗೆ ಒತ್ತು
प्रविष्टि तिथि:
21 AUG 2026 4:10PM by PIB Bengaluru
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು ಇಂದು ದೇಶದ ರಾಜಧಾನಿಯತ್ತ ಹೆಚ್ಚಿನ ಗಮನ ಹರಿಸಿ, ದೇಶದಲ್ಲಿನ ಎಚ್1ಎನ್1 ಜ್ವರದ ಪ್ರಸ್ತುತ ಪರಿಸ್ಥಿತಿ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದರು. ದೆಹಲಿ ಆರೋಗ್ಯ ಸಚಿವರಾದ ಡಾ. ಪಂಕಜ್ ಕುಮಾರ್ ಸಿಂಗ್ ಅವರೂ ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಆರೋಗ್ಯ ಸಚಿವರು ರಾಷ್ಟ್ರೀಯ ಕಣ್ಗಾವಲು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಪರಿಸ್ಥಿತಿ, ಜ್ವರದ ಮಾದರಿಯ ಅನಾರೋಗ್ಯ (ಐ ಎಲ್ ಐ) ಮತ್ತು ತೀವ್ರ ಉಸಿರಾಟದ ಸೋಂಕಿನ (ಎಸ್ ಎ ಆರ್ ಇ ೦- ಸಾರಿ) ಪ್ರವೃತ್ತಿಗಳು, ಪರೀಕ್ಷೆ ಮತ್ತು ಪ್ರಯೋಗಾಲಯ ಕಣ್ಗಾವಲು ಹಾಗೂ ಋತುಮಾನದ ಇನ್ಫ್ಲುಯೆಂಜಾ (ಜ್ವರದ) ಪ್ರಕರಣಗಳನ್ನು ನಿರ್ವಹಿಸಲು ಆರೋಗ್ಯ ರಕ್ಷಣಾ ಸೌಲಭ್ಯಗಳ ಸಿದ್ಧತೆಯನ್ನು ಪರಿಶೀಲಿಸಿದರು. ನಿರಂತರ ಜಾಗರೂಕತೆ, ಸಮರ್ಥ ಕಣ್ಗಾವಲು ಮತ್ತು ಸಕ್ರಿಯ ಸಿದ್ಧತೆಯ ಅಗತ್ಯವನ್ನು ಶ್ರೀ ನಡ್ಡಾ ಅವರು ಪ್ರತಿಪಾದಿಸಿದರು. ಜೊತೆಗೆ ಜ್ವರದ ಪ್ರವೃತ್ತಿಗಳನ್ನು ಹತ್ತಿರದಿಂದ ಮೇಲ್ವಿಚಾರಣೆ ಮಾಡುವುದು ಮತ್ತು ಯಾವುದೇ ಅಸಾಮಾನ್ಯ ಏರಿಕೆ ಅಥವಾ ಪ್ರಕರಣಗಳ ಗುಂಪುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ನಿರ್ವಹಿಸುವುದಕ್ಕೆ ಒತ್ತು ನೀಡಿದರು.
ದೆಹಲಿಯಲ್ಲಿನ ಆರೋಗ್ಯ ರಕ್ಷಣಾ ಸೌಲಭ್ಯಗಳ ಸಿದ್ಧತೆಯನ್ನು ಪರಿಶೀಲಿಸಲಾಯಿತು. ಇದರಲ್ಲಿ ಆಸ್ಪತ್ರೆಯ ಹಾಸಿಗೆಗಳು, ಕ್ರಿಟಿಕಲ್ ಕೇರ್ (ತುರ್ತು ನಿಗಾ) ಸೌಲಭ್ಯಗಳು, ಆಮ್ಲಜನಕ ಬೆಂಬಲಿತ ಹಾಸಿಗೆಗಳು, ವೆಂಟಿಲೇಟರ್ ಗಳು, ಅತ್ಯಗತ್ಯ ಔಷಧಗಳು, ರೋಗನಿರ್ಣಯ ಮತ್ತು ಇತರ ಬಹುಮುಖ್ಯ ಪೂರೈಕೆಗಳ ಲಭ್ಯತೆ ಸೇರಿದೆ. ಸಚಿವರು ಹೆಚ್ಚುವರಿ ಅಗತ್ಯಗಳನ್ನು ಎದುರಿಸಲು ಸೂಕ್ತ ಸಾಮರ್ಥ್ಯ ಮತ್ತು ವಿಶೇಷವಾಗಿ ನುರಿತ ಅಥವಾ ಗಂಭೀರ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ತಡೆರಹಿತ ಉಲ್ಲೇಖ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.

ಕೇಂದ್ರ ಆರೋಗ್ಯ ಸಚಿವರು ಅಸ್ತಿತ್ವದಲ್ಲಿರುವ ಕಣ್ಗಾವಲು ಮತ್ತು ಪ್ರಯೋಗಾಲಯ ಜಾಲದ ಪರಿಣಾಮಕಾರಿ ಬಳಕೆಯೊಂದಿಗೆ, ಇನ್ಫ್ಲುಯೆಂಜಾ ಪ್ರಕರಣಗಳ ಆರಂಭಿಕ ಪತ್ತೆ, ಸಮಯೋಚಿತ ಪರೀಕ್ಷೆ ಮತ್ತು ಸೂಕ್ತ ವೈದ್ಯಕೀಯ ನಿರ್ವಹಣೆಯನ್ನು ನಿರಂತರವಾಗಿ ಬಲಪಡಿಸಲು ಕರೆ ನೀಡಿದರು.

ಇದಕ್ಕೂ ಮುನ್ನ, 10 ಜುಲೈ 2026 ರಂದು, ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ತೀವ್ರ ಉಸಿರಾಟದ ಅನಾರೋಗ್ಯ (ಎ ಆರ್ ಐ)ಕ್ಕಾಗಿ ಸಿದ್ಧತೆ ಮತ್ತು ಕಣ್ಗಾವಲನ್ನು ಬಲಪಡಿಸಲು ಮತ್ತು ಆರೋಗ್ಯ ಸೌಲಭ್ಯಗಳು ಅಗತ್ಯ ಸಿದ್ಧತೆಯೊಂದಿಗೆ ಇರುವುದನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಿದ್ದರು.
ಶ್ರೀ ನಡ್ಡಾ ಅವರು ಉಸಿರಾಟದ ನೈರ್ಮಲ್ಯ ಮತ್ತು ಕೈಗಳ ನೈರ್ಮಲ್ಯ ಸೇರಿದಂತೆ ಸಾರ್ವಜನಿಕ ಜಾಗೃತಿ ಮತ್ತು ತಡೆಗಟ್ಟುವ ಆರೋಗ್ಯ ಅಭ್ಯಾಸಗಳಿಗೆ ಒತ್ತು ನೀಡಿದರು. ಅಲ್ಲದೆ ನಿರಂತರ ಅಥವಾ ತೀವ್ರ ಉಸಿರಾಟದ ಲಕ್ಷಣಗಳು, ಉಸಿರಾಟದ ತೊಂದರೆ ಅಥವಾ ಇತರ ಎಚ್ಚರಿಕೆಯ ಚಿಹ್ನೆಗಳನ್ನು ಹೊಂದಿರುವ ವ್ಯಕ್ತಿಗಳು ತಕ್ಷಣವೇ ವೈದ್ಯಕೀಯ ಸಲಹೆಯನ್ನು ಪಡೆಯುವಂತೆ ಸಲಹೆ ನೀಡಿದರು.

ಪರಿಸ್ಥಿತಿಯನ್ನು ಹತ್ತಿರದಿಂದ ಮತ್ತು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಪುನರುಚ್ಚರಿಸಿದರು. ಡೆಂಗ್ಯೂ ಮತ್ತು ಮಲೇರಿಯಾ ಸೇರಿದಂತೆ ಋತುಗಳಿಗನುಗುಣವಾಗಿ ಬರುವ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸುಸ್ಥಿರ ಮತ್ತು ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಋತುಮಾನದ ರೋಗಗಳ ತಡೆಗಟ್ಟುವಿಕೆ, ಹರಡುವಿಕೆ ಮತ್ತು ನಿಯಂತ್ರಣದ ಕುರಿತು ಸಮುದಾಯಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಮುನ್ಸಿಪಲ್ ಸದಸ್ಯರುಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ರಾಜ್ಯ ಸರ್ಕಾರಗಳು ಸಕ್ರಿಯ ಮತ್ತು ಸಿದ್ಧತಾ ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಶ್ರೀ ನಡ್ಡಾ ಕರೆ ನೀಡಿದರು.
ಸ್ಥಳೀಯ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ಇಡೀ ಸರ್ಕಾರದ ಸಮಗ್ರ ವಿಧಾನದ ಮೂಲಕ ರಾಷ್ಟ್ರೀಯ ರಾಜಧಾನಿಯಲ್ಲಿ ಟಿಬಿ (ಕ್ಷಯ ರೋಗ) ಪತ್ತೆ ಹೆಚ್ಚಿರುವುದನ್ನು ಎತ್ತಿ ತೋರಿಸಿದ ಕೇಂದ್ರ ಸಚಿವರು, ಸತ್ಯಾಧಾರಿತ ಮತ್ತು ಪುರಾವೆ ಆಧಾರಿತ ಮಾಹಿತಿಯನ್ನು ಪ್ರಸಾರ ಮಾಡುವಲ್ಲಿ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವಲ್ಲಿ ಎಲ್ಲಾ ಹಂತಗಳ ಸಾರ್ವಜನಿಕ ಪ್ರತಿನಿಧಿಗಳ ಸಕ್ರಿಯ ಭಾಗವಹಿಸುವಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.
ಎಚ್1ಎನ್1 ಸೇರಿದಂತೆ ಋತುಮಾನದ ಜ್ವರಕ್ಕೆ ಪರಿಣಾಮಕಾರಿ ಕಣ್ಗಾವಲು, ಆರಂಭಿಕ ಪತ್ತೆ, ಸಮಯೋಚಿತ ವೈದ್ಯಕೀಯ ನಿರ್ವಹಣೆ ಮತ್ತು ಸಕ್ರಿಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು ಮತ್ತು ಇತರ ಭಾಗೀದಾರರೊಂದಿಗೆ ನಿಕಟವಾಗಿ ಸಂಯೋಜನೆ ಮುಂದುವರಿಸಿದೆ.
ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲ ಶ್ರೀವಾಸ್ತವ; ಹೆಚ್ಚುವರಿ ಕಾರ್ಯದರ್ಶಿ (ಸಾರ್ವಜನಿಕ ಆರೋಗ್ಯ) ಡಾ. ರಾಕೇಶ್ ಗುಪ್ತಾ; ದೆಹಲಿ ರಾಜ್ಯ ಆರೋಗ್ಯ ಕಾರ್ಯದರ್ಶಿ ಶ್ರೀ ರೂಪೇಶ್ ಕುಮಾರ್ ಠಾಕೂರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
*****
(रिलीज़ आईडी: 2302029)
आगंतुक पटल : 21