ಹಣಕಾಸು ಸಚಿವಾಲಯ
azadi ka amrit mahotsav

ಆನೆದಂತದ ಕಲಾಕೃತಿಗಳ ಅಕ್ರಮ ವ್ಯಾಪಾರದಲ್ಲಿ ತೊಡಗಿದ್ದ ವನ್ಯಜೀವಿ ಕಳ್ಳಸಾಗಣೆ ಜಾಲವನ್ನು ಭೇದಿಸಿದ ಡಿ ಆರ್ ಐ


ಆನೆದಂತದಿಂದ ತಯಾರಿಸಲಾದ 54 ಅದ್ಭುತವಾಗಿ ರಚಿಸಿರುವ ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ನಾಲ್ವರನ್ನು ಬಂಧಿಸಲಾಗಿದೆ

प्रविष्टि तिथि: 19 AUG 2026 9:00PM by PIB Bengaluru

ಒಂದು ಪ್ರಮುಖ ಕಾರ್ಯಾಚರಣೆಯಲ್ಲಿ, ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿ ಆರ್ ಐ) ವನ್ಯಜೀವಿ ಕಳ್ಳಸಾಗಣೆದಾರರ ಜಾಲವನ್ನು ಭೇದಿಸಿದ್ದು, ಇಂದು 54 ಸೂಕ್ಷ್ಮ ಕೆತ್ತನೆಯ ಆನೆದಂತದ ಕಲಾಕೃತಿಗಳನ್ನು ವಶಪಡಿಸಿಕೊಂಡಿದೆ.

ಆನೆದಂತದ ಕಲಾಕೃತಿಗಳ ಅಕ್ರಮ ವ್ಯಾಪಾರದ ಕುರಿತು ದೊರೆತ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ, ಡಿ ಆರ್ ಐ ಅಧಿಕಾರಿಗಳು ಲಖನೌದಲ್ಲಿ ನಿಖರವಾದ ಕಾರ್ಯಾಚರಣೆಯನ್ನು ಯೋಜಿಸಿ, ವನ್ಯಜೀವಿ ವಸ್ತುಗಳ ಅಕ್ರಮ ವ್ಯಾಪಾರದಲ್ಲಿ ತೊಡಗಿದ್ದ ಜಾಲದ ನಾಲ್ಕು ಜನರನ್ನು ತಡೆದು ತಪಾಸಣೆ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ಆನೆದಂತದಿಂದ ಮಾಡಲ್ಪಟ್ಟ 54 ಅದ್ಭುತವಾಗಿ ರಚಿಸಲಾದ ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಕಲಾಕೃತಿಗಳಲ್ಲಿ ಎತ್ತು, ಆನೆಗಳು, ನಾಯಿಯ ಪ್ರಾಣಿ ವಿಗ್ರಹಗಳು; ಯೋಧ, ಮಗುವನ್ನು ಹಿಡಿದಿರುವ ತಾಯಿಯ ಮಾನವ ವಿಗ್ರಹಗಳು ಮತ್ತು ಕತ್ತರಿ, ಬಾಚಣಿಗೆ, ಅಗರಬತ್ತಿ ಸ್ಟ್ಯಾಂಡ್, ಸಿಂದೂರ ದಾನಿ ಮುಂತಾದ ಇತರ ವಸ್ತುಗಳು ಸೇರಿವೆ. ಆನೆದಂತದಿಂದ ತಯಾರಿಸಲಾದ ಈ ಕಲಾಕೃತಿಗಳು ಅತ್ಯಂತ ಸೂಕ್ಷ್ಮ, ವಿವರವಾದ ಕೆತ್ತನೆಗಳಿಂದ ಕೂಡಿದ್ದು, ಅಪಾರ ವಾಣಿಜ್ಯ ಮತ್ತು ಪಾರಂಪರಿಕ ಮೌಲ್ಯವನ್ನು ಹೊಂದಿವೆ. ಜಪ್ತಿ ಮಾಡಲಾದ ಆನೆದಂತದ ಕಲಾಕೃತಿಗಳು ಮತ್ತು ಜಾಲದ ನಾಲ್ವರು ಸದಸ್ಯರನ್ನು ಮುಂದಿನ ತನಿಖೆಗಾಗಿ ಉತ್ತರ ಪ್ರದೇಶ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಅಳಿವಿನಂಚಿನಲ್ಲಿರುವ ಕಾಡುಪ್ರಾಣಿ ಮತ್ತು ಸಸ್ಯವರ್ಗದ ಅಂತಾರಾಷ್ಟ್ರೀಯ ವ್ಯಾಪಾರ ಸಮಾವೇಶದ (ಸಿಐಟಿಇಎಸ್) ಅಡಿಯಲ್ಲಿ ಭಾರತದ ಅಂತರರಾಷ್ಟ್ರೀಯ ಬಾಧ್ಯತೆಗಳಿಗೆ ಅನುಗುಣವಾಗಿ, ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972, ಆನೆದಂತ ಮತ್ತು ಅದರಿಂದ ತಯಾರಿಸಿದ ವಸ್ತುಗಳ ವ್ಯಾಪಾರ ಹಾಗೂ ವಾಣಿಜ್ಯವನ್ನು ನಿಷೇಧಿಸುತ್ತದೆ.

ಜುಲೈ ತಿಂಗಳಿನಲ್ಲಿ (ಪತ್ರಿಕಾ ಪ್ರಕಟಣೆ ಲಿಂಕ್: https://www.pib.gov.in/PressReleasePage.aspx?PRID=2284262&reg=1&lang=1) ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ರಾಜಸ್ಥಾನದ ಸುಜಾನ್ ಗಢ್ ನಲ್ಲಿ 11 ಕೆಜಿ ಆನೆದಂತಗಳನ್ನು ಹಾಗೂ ಹೌರಾ ಕೋಲ್ಕತ್ತಾದಲ್ಲಿ ದೇವರ ಎರಡು ಸೂಕ್ಷ್ಮ ವಿನ್ಯಾಸದ ಆನೆದಂತದ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಮೇ ತಿಂಗಳಿನಲ್ಲಿ (ಪತ್ರಿಕಾ ಪ್ರಕಟಣೆ ಲಿಂಕ್: https://www.pib.gov.in/PressReleasePage.aspx?PRID=2266027&reg=48&lang=2), ಡಿ ಆರ್ ಐ ಕರ್ನಾಟಕದ ಮೈಸೂರಿನಲ್ಲಿ ಕಳ್ಳಸಾಗಣೆ ಜಾಲವೊಂದನ್ನು ಭೇದಿಸಿ 4 ಕೆಜಿ ಆನೆದಂತಗಳನ್ನು ವಶಪಡಿಸಿಕೊಂಡಿತ್ತು.

ಈ ಸರಣಿ ಕಾರ್ಯಾಚರಣೆಗಳು ಅಕ್ರಮ ವನ್ಯಜೀವಿ ಕಳ್ಳಸಾಗಣೆಯ ಹೆಚ್ಚುತ್ತಿರುವ ಅಪಾಯವನ್ನು ಉಲ್ಲೇಖಿಸುತ್ತವೆ. ಜೊತೆಗೆ ಭಾರತದ ಜೈವಿಕ ವೈವಿಧ್ಯತೆಯನ್ನು ರಕ್ಷಿಸಲು ಮತ್ತು ರಾಷ್ಟ್ರೀಯ ಕಾನೂನುಗಳು ಹಾಗೂ ಸಿಐಟಿಇಎಸ್ ಅಡಿಯಲ್ಲಿನ ಅಂತಾರಾಷ್ಟ್ರೀಯ ಬದ್ಧತೆಗಳಿಗೆ ಅನುಗುಣವಾಗಿ ಇಂತಹ ಅಪರಾಧ ಜಾಲಗಳನ್ನು ನಿರ್ಮೂಲನಗೊಳಿಸಲು ಡಿಆರ್ಐನ ಅಚಲ ಬದ್ಧತೆಯನ್ನು ಉಲ್ಲೇಖಿಸುತ್ತವೆ.

 

*****


(रिलीज़ आईडी: 2301463) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Bengali , Telugu