ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಆರ್ಥಿಕ ನಿರ್ಬಂಧಗಳಿಂದ ಡಿಜಿಟಲ್ ಉದ್ಯಮಶೀಲತೆಯವರೆಗೆ: ಸ್ವ-ಉದ್ಯೋಗದೆಡೆಗೆ ಅಮಿತ್ ಆರ್ಯ ಅವರ ಪಯಣ
प्रविष्टि तिथि:
19 AUG 2026 6:14PM by PIB Bengaluru
ಹರಿಯಾಣ ನಿವಾಸಿಯಾದ ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ಅಮಿತ್ ಆರ್ಯ ಅವರು ಸ್ವ- ಉದ್ಯೋಗಿಯಾಗಿ, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಸ್ಥಿರವಾದ ಆದಾಯ ಮೂಲವನ್ನು ಕಂಡುಕೊಳ್ಳುವ ಆಕಾಂಕ್ಷೆ ಹೊಂದಿದ್ದರು. ಆದಾಗ್ಯೂ, ಅವರ ಪ್ರದೇಶದಲ್ಲಿನ ಆರ್ಥಿಕ ನಿರ್ಬಂಧಗಳು ಮತ್ತು ಸೀಮಿತ ಉದ್ಯೋಗಾವಕಾಶಗಳು ಅನೇಕ ಸವಾಲುಗಳನ್ನು ಒಡ್ಡಿದವು. ಉದ್ಯಮವನ್ನು ಪ್ರಾರಂಭಿಸಲು ಸಾಕಷ್ಟು ಹಣವಿಲ್ಲದ ಕಾರಣ, ಅವರು ಸುಸ್ಥಿರ ಜೀವನೋಪಾಯವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ಅದೇ ವೇಳೆ, ಅವರ ಗ್ರಾಮದಲ್ಲಿ ಡಿಜಿಟಲ್ ಮತ್ತು ಇ-ಆಡಳಿತ ಸೇವೆಗಳ ಹೆಚ್ಚುತ್ತಿರುವ ಅಗತ್ಯದಿಂದಾಗಿ ಅವರಿಗೆ ಒಂದು ಅವಕಾಶ ಒದಗಿ ಬಂದಿತು. ಆಗ ಅಮಿತ್ ಅವರಲ್ಲಿ ಗ್ರಾಮೀಣ ನಾಗರಿಕರಿಗೆ ಅಗತ್ಯವಾದ ಡಿಜಿಟಲ್ ಸೇವೆಗಳನ್ನು ಒದಗಿಸುವುದರ ಜೊತೆಗೆ ಸ್ವತಃ ವಿಶ್ವಾಸಾರ್ಹ ಆದಾಯದ ಮೂಲವನ್ನು ಸೃಜಿಸಬಲ್ಲ ಡಿಜಿಟಲ್ ಸೇವಾ ಕೇಂದ್ರ (ಡಿ ಎಸ್ ಸಿ) ಸ್ಥಾಪಿಸುವ ಪರಿಕಲ್ಪನೆ ಮೂಡಿಬಂದಿತು.
ಅವಕಾಶವಾಗಿ ಆಕಾಂಕ್ಷೆಯ ಪರಿವರ್ತನೆ
ಅಮಿತ್ ಅವರು ಹರಿಯಾಣ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಕಲ್ಯಾಣ ನಿಗಮ (ಹೆಚ್ ಬಿ ಸಿ ಕೆ ಎನ್) ಆಯೋಜಿಸಿದ್ದ ಜಾಗೃತಿ ಶಿಬಿರದಲ್ಲಿ ಭಾಗವಹಿಸಿದಾಗ ಒಂದು ಪ್ರಮುಖ ತಿರುವು ದೊರೆಯಿತು. ಜಾಗೃತಿ ಕಾರ್ಯಕ್ರಮದ ಮೂಲಕ, ಅವರು ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್ ಬಿ ಸಿ ಎಫ್ ಡಿ ಸಿ) ಯೋಜನೆಯಡಿಯಲ್ಲಿ ದೊರೆಯುವ ಹಣಕಾಸಿನ ನೆರವಿನ ಬಗ್ಗೆ ತಿಳಿದುಕೊಂಡರು. ಬಳಿಕ ಅವರು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿ, 2019 ರಲ್ಲಿ ₹1.00 ಲಕ್ಷ ನಿಯಮಿತ ಅವಧಿಯಲ್ಲಿ ಮರುಪಾವತಿ ಮಾಡಬೇಕಾದ ಸಾಲ (ಟರ್ಮ್ ಲೋನ್) ಪಡೆದರು.

ಈ ಆರ್ಥಿಕ ನೆರವಿನಿಂದಾಗಿ ಅಮಿತ್ ಅವರು ತಮ್ಮ ಗ್ರಾಮದಲ್ಲಿ ಡಿಜಿಟಲ್ ಸೇವಾ ಕೇಂದ್ರವನ್ನು ತೆರೆಯಲು ಸಾಧ್ಯವಾಯಿತು. ಇದು ಅವರ ಸ್ವ-ಉದ್ಯೋಗದ ಕನಸನ್ನು ನನಸಾಗಿಸಿತು. ಅಂದಿನಿಂದ ಈ ಕೇಂದ್ರವು ಯಶಸ್ವಿ ಉದ್ಯಮವಾಗಿ ಅಭಿವೃದ್ಧಿ ಹೊಂದುತ್ತಾ ಹಳ್ಳಿಯಲ್ಲಿನ ನಿವಾಸಿಗಳಿಗೆ ಮತ್ತು ಹತ್ತಿರದ ಸಮುದಾಯಗಳ ಜನರಿಗೆ ಡಿಜಿಟಲ್ ಮತ್ತು ಇ-ಆಡಳಿತ ಸೇವೆಗಳನ್ನು ಒದಗಿಸುತ್ತಿದೆ.
ಸುಸ್ಥಿರ ಜೀವನೋಪಾಯ
ಡಿಜಿಟಲ್ ಸೇವಾ ಕೇಂದ್ರದ ಸ್ಥಾಪನೆಯು ಅಮಿತ್ ಅವರ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಯನ್ನು ತಂದಿದೆ. ಅವರ ಪ್ರಸ್ತುತ ವಾರ್ಷಿಕ ಆದಾಯ ಸುಮಾರು ₹2.30 ಲಕ್ಷದಷ್ಟಿದ್ದು, ಅವರಿಗೆ ಹೆಚ್ಚಿನ ಆರ್ಥಿಕ ಸ್ಥಿರತೆಯನ್ನು ಒದಗಿಸಿದೆ ಮತ್ತು ಅವರ ಕುಟುಂಬ ಪೋಷಣೆಗೆ ಪೂರಕವಾಗಿದೆ.
ಈ ಉದ್ಯಮದಿಂದಾಗಿ ಅಮಿತ್ ಅವರು ತಮ್ಮ ಸಾಲವನ್ನು ನಿಯಮಿತವಾಗಿ ಮರುಪಾವತಿಸಲು ಸಾಧ್ಯವಾಗಿದ್ದು, ಇದು ಅವರ ಜೀವನೋಪಾಯ ಉಪಕ್ರಮದ ಸುಸ್ಥಿರತೆಯನ್ನು ಪ್ರತಿಬಿಂಬಿಸಿದೆ. ಉದ್ಯಮ ಪ್ರಾರಂಭಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಪರದಾಡುತ್ತಿದ್ದ ಅವರು ಈಗ ತಮ್ಮದೇ ಆದ ಉದ್ಯಮದ ಮೂಲಕ ಸ್ವತಂತ್ರ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ.
ಸಬಲೀಕರಣದ ಗಾಥೆ
ಅಮಿತ್ ಆರ್ಯ ಅವರ ಜೀವನ ಪಯಣವು ಆರ್ಥಿಕ ಅಡೆತಡೆಗಳನ್ನು ಮೆಟ್ಟಿ ನಿಂತು ಸ್ವಉದ್ಯೋಗ ಮಾಡಲು ಸಕಾಲಿಕ ಹಣಕಾಸಿನ ನೆರವು ಹೇಗೆ ಪೂರಕ ಎಂಬುದನ್ನು ಪ್ರದರ್ಶಿಸಿದೆ. ಎನ್ ಬಿ ಸಿ ಎಫ್ ಡಿ ಸಿ ಯೋಜನೆಯಡಿಯಲ್ಲಿ ₹1 ಲಕ್ಷ ನಿರ್ದಿಷ್ಟ ಮರುಪಾವತಿ ಅವಧಿಯ ಸಾಲವು ಆಲೋಚನೆಯನ್ನು ಕಾರ್ಯಸಾಧ್ಯ ಜೀವನೋಪಾಯವಾಗಿ ಪರಿವರ್ತಿಸಲು ಅಗತ್ಯವಾದ ಆರಂಭಿಕ ಬೆಂಬಲವನ್ನು ಒದಗಿಸಿದೆ.
ಪ್ರಸ್ತುತ, ಅವರ ಡಿಜಿಟಲ್ ಸೇವಾ ಕೇಂದ್ರವು ಅವರಿಗೆ ಸ್ಥಿರವಾದ ಆದಾಯ ಒದಗಿಸುತ್ತಿದೆಯಲ್ಲದೇ, ಗ್ರಾಮೀಣ ನಾಗರಿಕರು ತಮ್ಮ ಮನೆಯ ಸಮೀಪದಲ್ಲೇ ವಿವಿಧ ಡಿಜಿಟಲ್ ಮತ್ತು ಇ-ಆಡಳಿತ ಸೇವೆಗಳನ್ನು ಪಡೆಯಲು ಸಹಾಯಕವಾಗಿದೆ. ಆರ್ಥಿಕ ನಿರ್ಬಂಧಗಳಿಂದ ಯಶಸ್ವಿ ಸ್ವ-ಉದ್ಯೋಗದವರೆಗಿನ ಅವರ ಪಯಣವು ಸಾಂಸ್ಥಿಕ ಆರ್ಥಿಕ ಬೆಂಬಲವು ಹೇಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ನಿದರ್ಶನವಾಗಿದೆ.
*****
(रिलीज़ आईडी: 2301402)
आगंतुक पटल : 8