ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

‘ಡಿಎಚ್ಆರ್-ಐಸಿಎಂಆರ್‌’ ಆಯೋಜಿರುವ ‘ಶೈನ್-2026’ ಕಾರ್ಯಕ್ರಮವು 83 ಸ್ಥಳಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಆರೋಗ್ಯ ಸಂಶೋಧನೆಯೊಂದಿಗೆ ಮುಖಾಮುಖಿಯಾಗಿಸಲಿದೆ


ಸುಮಾರು 30,000 ವಿದ್ಯಾರ್ಥಿಗಳು ಆರೋಗ್ಯ ಸಂಶೋಧನೆಯನ್ನು ನೇರವಾಗಿ ಅನುಭವಿಸಲಿದ್ದಾರೆ

ಆಗಸ್ಟ್ 11–12 ರಂದು 83 ಐಸಿಎಂಆರ್ ಸ್ಥಳಗಳಲ್ಲಿ ಎರಡು ದಿನಗಳ ಕಾರ್ಯಕ್ರಮ ನಡೆಯಲಿದೆ

ಕೀಲಾಂಗ್‌ನಿಂದ ಕೇರಳದವರೆಗೆ ಮತ್ತು ಡಿಯುನಿಂದ ನಾಗಾಲ್ಯಾಂಡ್ ವರೆಗೆ ನಡೆಯಲಿರುವ ‘ಶೈನ್-2026’ ಕಾರ್ಯಕ್ರಮವು ವಿಜ್ಞಾನವನ್ನು ಭಾರತದಾದ್ಯಂತ ಕೊಂಡೊಯ್ಯುತ್ತದೆ

ವಿದ್ಯಾರ್ಥಿಗಳು ಪ್ರಯೋಗಾಲಯಗಳನ್ನು ಅನ್ವೇಷಿಸಲಿದ್ದಾರೆ, ನೇರ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದ್ದಾರೆ ಮತ್ತು ಐಸಿಎಂಆರ್ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲಿದ್ದಾರೆ

ಕುತೂಹಲದಿಂದ ಇರಲು, ಪ್ರಶ್ನೆಗಳನ್ನು ಕೇಳಲು ಮತ್ತು ವಿಜ್ಞಾನವನ್ನು ವೃತ್ತಿಯಾಗಿ ಅನ್ವೇಷಿಸಲು ಡಾ.ರಾಜೀವ್ ಬಹ್ಲ್ ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು

‘ಶೈನ್’ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದ್ದು, ರಾಷ್ಟ್ರವ್ಯಾಪಿ ವಿದ್ಯಾರ್ಥಿ ಸಂಶೋಧನಾ ಸ್ಪರ್ಧೆ ಘೋಷಿಸಲಾಗಿದೆ

ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಮತ್ತು ಮುಂದಿನ ಪೀಳಿಗೆಯ ಆರೋಗ್ಯ ಸಂಶೋಧಕರನ್ನು ಪ್ರೇರೇಪಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ

प्रविष्टि तिथि: 11 AUG 2026 1:55PM by PIB Bengaluru

ಆರೋಗ್ಯ ಸಂಶೋಧನಾ ಇಲಾಖೆ (ಡಿಎಚ್ಆರ್) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ರಾಷ್ಟ್ರವ್ಯಾಪಿ ಮುಕ್ತ ದಿನದ ಅನುಭವಕ್ಕಾಗಿ ಶಾಲಾ ವಿದ್ಯಾರ್ಥಿಗಳನ್ನು ತಮ್ಮ ಪ್ರಯೋಗಾಲಯಗಳಿಗೆ ಸ್ವಾಗತಿಸುವ ಮೂಲಕ ‘ಐಸಿಎಂಆರ್-ಶೈನ್’ನ (ಮುಂದಿನ ಪೀಳಿಗೆಯ ಅನ್ವೇಷಕರಿಗಾಗಿ ವಿಜ್ಞಾನ ಮತ್ತು ಆರೋಗ್ಯ ಸಂಶೋಧನೆ) ಎರಡನೇ ಆವೃತ್ತಿ ಇಂದು ಪ್ರಾರಂಭವಾಯಿತು. "ವಿಜ್ಞಾನಿಯಾಗಿ ಒಂದು ದಿನವನ್ನು ಕಳೆಯಲು" ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನೀಡಿದ ಕರೆಯಿಂದ ಪ್ರೇರಿತರಾಗಿ  2026ರ ಆಗಸ್ಟ್ 11-12 ರಂದು ಈ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಐಸಿಎಂಆರ್ ಸಂಸ್ಥೆಗಳು, ಮಾದರಿ ಗ್ರಾಮೀಣ ಆರೋಗ್ಯ ಸಂಶೋಧನಾ ಘಟಕಗಳು (ಎಂಆರ್‌ಎಚ್‌ಆರ್‌ಯು) ಮತ್ತು ಅನುಮೋದಿತ ಕ್ಷೇತ್ರ ಘಟಕಗಳು ಸೇರಿದಂತೆ ದೇಶಾದ್ಯಂತ 83 ಸ್ಥಳಗಳಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಸುಮಾರು 10,000 ಅಡಿ ಎತ್ತರದಲ್ಲಿರುವ ಹಿಮಾಚಲ ಪ್ರದೇಶದ ಕೀಲಾಂಗ್‌ನಿಂದ ದಕ್ಷಿಣದಲ್ಲಿ ಕೇರಳದವರೆಗೆ ಮತ್ತು ಪಶ್ಚಿಮದಲ್ಲಿ ಡಿಯುನಿಂದ ಪೂರ್ವದ ನಾಗಾಲ್ಯಾಂಡ್‌ವರೆಗೆ, ಈ ಕಾರ್ಯಕ್ರಮವು ದೇಶಾದ್ಯಂತದ ಮಕ್ಕಳನ್ನು ತಲುಪುತ್ತದೆ, ಅವರನ್ನು ವಿಜ್ಞಾನಕ್ಕೆ ಹತ್ತಿರವಾಗಿಸುತ್ತದೆ ಮತ್ತು ವೈಜ್ಞಾನಿಕ ವಿಚಾರಣೆಯಲ್ಲಿ ಕುತೂಹಲ ಮತ್ತು ಆಸಕ್ತಿಯನ್ನು ಉತ್ತೇಜಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಡಿಎಚ್ಆರ್ ಕಾರ್ಯದರ್ಶಿ ಮತ್ತು ಐಸಿಎಂಆರ್ ಮಹಾನಿರ್ದೇಶಕ ಡಾ.ರಾಜೀವ್ ಬಹ್ಲ್ ಅವರು, "ಇಂದು ನಮ್ಮೊಂದಿಗೆ ಸೇರಿರುವ ಎಲ್ಲಾ ಯುವ ವಿದ್ಯಾರ್ಥಿಗಳಿಗೆ, ಕುತೂಹಲದಿಂದಿರಲು, ಪ್ರಶ್ನೆಗಳನ್ನು ಕೇಳಲು ಮತ್ತು ಏಕೆ ಎಂದು ಆಶ್ಚರ್ಯ ಪಡಲು ಎಂದಿಗೂ ಹಿಂಜರಿಯಬೇಡಿ ಎಂದು ನಾನು ಪ್ರೋತ್ಸಾಹಿಸುತ್ತೇನೆ. ಪ್ರತಿಯೊಂದು ಆವಿಷ್ಕಾರವು ಒಂದು ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತದೆ, ಮತ್ತು ಪ್ರತಿಯೊಂದು ಆವಿಷ್ಕಾರವು ಹೊಸ ಸಾಧ್ಯತೆಯನ್ನು ಅನ್ವೇಷಿಸುವ ಧೈರ್ಯದಿಂದ ಪ್ರಾರಂಭವಾಗುತ್ತದೆ. ‘ಶೈನ್’ ಮೂಲಕ ನೀವು ಪಡೆಯುವ  ಅನುಭವವು ಆರೋಗ್ಯ ಸಂಶೋಧನೆಯ ರೋಮಾಂಚಕಾರಿ ಪ್ರಪಂಚದ ಒಂದು ನೋಟವನ್ನು ಒದಗಿಸುತ್ತದೆ. ಜೊತೆಗೆ, ವಿಜ್ಞಾನವನ್ನು ನೀವು ಅಧ್ಯಯನ ಮಾಡುವ ವಿಷಯವಾಗಿ ಮಾತ್ರವಲ್ಲದೆ, ಜನರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುವ ವೃತ್ತಿಯಾಗಿ ಪರಿಗಣಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ,’’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಮಯದಲ್ಲಿ, ಡಾ.ರಾಜೀವ್ ಬಹ್ಲ್ ಅವರು ವಿಜ್ಞಾನ, ಆರೋಗ್ಯ ಮತ್ತು ಸಂಶೋಧನೆಯ ಬಗ್ಗೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಸಾಪೇಕ್ಷ ಉದಾಹರಣೆಗಳ ಮೂಲಕ ಪ್ರತಿಕ್ರಿಯಿಸಿದರು ಮತ್ತು ಕುತೂಹಲದಿಂದ ಇರಲು ಮತ್ತು ಪಠ್ಯಪುಸ್ತಕಗಳನ್ನು ಮೀರಿ ಯೋಚಿಸಲು ಪ್ರೋತ್ಸಾಹಿಸಿದರು. ‘ಐಸಿಎಂಆರ್‌’ನ ಸಂಶೋಧನಾ ಕಾರ್ಯ ಮತ್ತು ಆವಿಷ್ಕಾರಗಳನ್ನು ಪ್ರದರ್ಶಿಸುವ ಪ್ರದರ್ಶನವನ್ನು ಅವರು ಉದ್ಘಾಟಿಸಿದರು.ವೈಜ್ಞಾನಿಕ ಆವಿಷ್ಕಾರಗಳು ನೈಜ ಪ್ರಪಂಚದ ಆರೋಗ್ಯ ಸವಾಲುಗಳಿಗೆ ಪರಿಹಾರಗಳಾಗಿ ಹೇಗೆ ಪರಿವರ್ತಿಸುತ್ತವೆ ಎಂಬುದನ್ನು ಅನ್ವೇಷಿಸಲು ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡಿದರು.

ಕಾರ್ಯಕ್ರಮ ನಡೆಯುವ ಈ ಎರಡು ದಿನಗಳಲ್ಲಿ, ಸರ್ಕಾರಿ ಮತ್ತು ಖಾಸಗಿ ಶಾಲೆಗಳ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ನೇರವಾಗಿ ಆರೋಗ್ಯ ಸಂಶೋಧನಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಭಾಗವಹಿಸುವ ವಿದ್ಯಾರ್ಥಿಗಳು ಮಾರ್ಗದರ್ಶನ ಸಮೇತ ಪ್ರಯೋಗಾಲಯ ಪ್ರವಾಸಗಳು, ಸಂಶೋಧನಾ ಪ್ರದರ್ಶನಗಳು, ಪೋಸ್ಟರ್ ನಡಿಗೆಗಳು, ವೀಡಿಯೊ ಪ್ರಸ್ತುತಿಗಳು ಮತ್ತು  ವೈಜ್ಞಾನಿಕ ಕಾರ್ಯಗಳ ನೇರ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ, ಐಸಿಎಂಆರ್ ವಿಜ್ಞಾನಿಗಳೊಂದಿಗೆ ಸಂವಹನ ನಡೆಸುವ ಮೂಲಕ ಅವರ ಸಂಶೋಧನಾ ಪ್ರಯಾಣಗಳು, ಪರಿಣತಿಯ ಕ್ಷೇತ್ರಗಳು ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ದೈನಂದಿನ ಕೆಲಸಗಳ ಬಗ್ಗೆ ಒಳನೋಟವನ್ನು ಪಡೆಯಲಿದ್ದಾರೆ.

ಯುವ ಭಾಗಿದಾರರಲ್ಲಿ ವೈಜ್ಞಾನಿಕ ಕುತೂಹಲದ ಮನೋಭಾವವನ್ನು ಜೀವಂತಗೊಳಿಸುವುದು ‘ಶೈನ್’ನ ಅಧಿಕೃತ ‘ಮ್ಯಾಸ್ಕಾಟ್’(ಲಾಂಚನ) ಆಗಿರುವ `ಡಾ.ಕ್ಯೂರಿಯೊ’ ಅನ್ನು ಉಪಕ್ರಮದ ಜನಸಂಪರ್ಕ ಸಾಮಗ್ರಿಗಳು, ಪೋಸ್ಟರ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರದರ್ಶಿಸಲಾಗಿದೆ ಮತ್ತು ‘ಐಸಿಎಂಆರ್’ನ ಕೆಲಸದ ಬಗ್ಗೆ ಸಂವಾದಾತ್ಮಕ ವೀಡಿಯೊಗಳ ಸರಣಿಯ ‘ನಿರೂಪಕ’ ರೂಪದಲ್ಲೂ ಪ್ರತ್ಯಕ್ಷವಾಗಿದೆ.

ಈ ಸಂದರ್ಭದ ಅಂಗವಾಗಿ, ಐಸಿಎಂಆರ್ ಅಧಿಕೃತ ‘ಶೈನ್’ ವೆಬ್‌ತಾಣವನ್ನೂ (shine.icmr.org.in)   ಪ್ರಾರಂಭಿಸಿದೆ. ಇದು ಆರೋಗ್ಯ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಸಂಪನ್ಮೂಲಗಳು, ನವೀಕರಣಗಳು ಮತ್ತು ಅವಕಾಶಗಳನ್ನು ಒದಗಿಸುವ ವಿಶೇಷ ವೇದಿಕೆಯಾಗಿದೆ. ಈ ಕಾರ್ಯಕ್ರಮದ ಪ್ರಾರಂಭದ ಜೊತೆಗೆ, ರಾಷ್ಟ್ರವ್ಯಾಪಿ ಶಾಲಾ ಸ್ಪರ್ಧೆಯನ್ನು ‘ಐಸಿಎಂಆರ್’ ಘೋಷಿಸಿದೆ. ಇದು ವಿದ್ಯಾರ್ಥಿಗಳು ತಮ್ಮದೇ ಆದ ಸಂಶೋಧನಾ ಪ್ರಶ್ನೆಗಳನ್ನು ರೂಪಿಸಲು ಮತ್ತು ನೈಜ ಪ್ರಪಂಚದ ಸಾರ್ವಜನಿಕ ಆರೋಗ್ಯ ಸವಾಲುಗಳಿಗೆ ಸಂಭಾವ್ಯ ಪರಿಹಾರಗಳನ್ನು ಪ್ರಸ್ತಾಪಿಸಲು ಅವಕಾಶ ಒದಗಿಸುತ್ತದೆ. ದೇಶಾದ್ಯಂತ ‘ಐಸಿಎಂಆರ್’ ಪ್ರಯೋಗಾಲಯಗಳು ನೀಡಿದ ಆಹ್ವಾನಗಳ ಮೂಲಕ ಸುಮಾರು 30,000 ವಿದ್ಯಾರ್ಥಿಗಳು ಈ ಉಪಕ್ರಮದ ಮುಂದಿನ ಹಂತದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ತನ್ನ ಸಂಸ್ಥೆಗಳು ಮತ್ತು ಸಂಶೋಧನಾ ಘಟಕಗಳ ಬಾಗಿಲುಗಳನ್ನು ತೆರೆಯುವ ಮೂಲಕ, ಕಾರ್ಯಕ್ರಮವು ವಿಜ್ಞಾನವನ್ನು ಸ್ಪಷ್ಟ ಮತ್ತು ಸುಲಭ ಲಭ್ಯವನ್ನಾಗಿ ಮಾಡಲು ಪ್ರಯತ್ನಿಸುತ್ತದೆ. ಸಮುದಾಯಗಳು ಎದುರಿಸುತ್ತಿರುವ ಆರೋಗ್ಯ ಸವಾಲುಗಳನ್ನು ಸಂಶೋಧನೆಯು ಹೇಗೆ ಪರಿಹರಿಸಬಲ್ಲದು ಎಂಬುದನ್ನು ಯುವ ಕಲಿಕಾರ್ಥಿಗಳಿಗೆ ತೋರಿಸುತ್ತದೆ ಮತ್ತು ವೈಜ್ಞಾನಿಕ ವಿಚಾರಣೆಯಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತದೆ.  ‘ವಿಕಸಿತ ಭಾರತ-2047’ ದೃಷ್ಟಿಕೋನಕ್ಕೆ ಅನುಗುಣವಾಗಿ, ದೇಶದ ಯುವಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಹಾಗೂ ಭಾರತದ ಆರೋಗ್ಯ ಮತ್ತು ಅಭಿವೃದ್ಧಿ ಗುರಿಗಳಿಗೆ ಕೊಡುಗೆ ನೀಡುವ ಮುಂದಿನ ಪೀಳಿಗೆಯ ಸಂಶೋಧಕರನ್ನು ಪ್ರೇರೇಪಿಸುವ ‘ಐಸಿಎಂಆರ್’ನ ಬದ್ಧತೆಯನ್ನು ಈ ಉಪಕ್ರಮವು ಪುನರುಚ್ಚರಿಸುತ್ತದೆ.

 

*****


(रिलीज़ आईडी: 2297599) आगंतुक पटल : 27
इस विज्ञप्ति को इन भाषाओं में पढ़ें: English , Urdu , हिन्दी , Bengali , Bengali-TR , Tamil , Telugu