ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನದ ಅಡಿಯಲ್ಲಿ ಕರ್ನಾಟಕಕ್ಕೆ 1,178.20 ಕೋಟಿ ರೂ. ಕೇಂದ್ರದ ಪಾಲು ಬಿಡುಗಡೆ


2023-24ರಲ್ಲಿ 421.08 ಕೋಟಿ ರೂ., 2024-25ರಲ್ಲಿ ₹422.90 ಕೋಟಿ ಮತ್ತು 2025-26ರಲ್ಲಿ 334.22 ಕೋಟಿ ರೂ.ಬಿಡುಗಡೆ

ಪ್ರಕಟಣಾ ದಿನಾಂಕ: 09 AUG 2026 12:52PM by PIB Bengaluru

ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಪರಿಶಿಷ್ಟ ಜಾತಿ (ಎಸ್‌.ಸಿ) ವಿದ್ಯಾರ್ಥಿಗಳಿಗೆ ಕೇಂದ್ರ ಪುರಸ್ಕೃತ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ ಯೋಜನೆಯಡಿ ಕರ್ನಾಟಕದ ಫಲಾನುಭವಿಗಳಿಗೆ ಒಟ್ಟು 1,178.20 ಕೋಟಿ ರೂ.ಕೇಂದ್ರದ ಪಾಲನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಕಲ್ಯಾಣಕ್ಕಾಗಿ ಕೇಂದ್ರದ ಅನುದಾನದ ಕುರಿತು ರಾಜ್ಯಸಭೆಯಲ್ಲಿ ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ 2050ಕ್ಕೆ ಉತ್ತರಿಸುವಾಗ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಈ ವಿವರಗಳನ್ನು ಹಂಚಿಕೊಂಡಿದ್ದಾರೆ.

ಪ. ಜಾ ವಿದ್ಯಾರ್ಥಿಗಳ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ ಯೋಜನೆಯಡಿ ಕರ್ನಾಟಕದ ಫಲಾನುಭವಿಗಳಿಗೆ 2023-24ರಲ್ಲಿ 421.08 ಕೋಟಿ ರೂ., 2024-25ರಲ್ಲಿ 422.90 ಕೋಟಿ ರೂ. ಮತ್ತು 2025-26ರಲ್ಲಿ 334.22 ಕೋಟಿ ರೂಪಾಯಿ ಕೇಂದ್ರದ ಪಾಲು ಬಿಡುಗಡೆಯಾಗಿದೆ, ಮೂರು ಆರ್ಥಿಕ ವರ್ಷಗಳಲ್ಲಿ ಇದರ ಒಟ್ಟು ಮೊತ್ತ ₹1,178.20 ಕೋಟಿ ರುಪಾಯಿಗಳು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಪರಿಶಿಷ್ಟ ಜಾತಿಯ (ಎಸ್‌.ಸಿ) ವಿದ್ಯಾರ್ಥಿಗಳಿಗೆ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನವನ್ನು ಕೇಂದ್ರ ಪುರಸ್ಕೃತ ಯೋಜನೆಯಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಮೂಲಕ ಜಾರಿಗೊಳಿಸುತ್ತದೆ. ಈ ಯೋಜನೆಯನ್ನು 2021-22 ರಿಂದ ನೇರ ನಗದು ವರ್ಗಾವಣೆ (ಡಿಬಿಟಿ) ವಿಧಾನದ ಮೂಲಕ ಜಾರಿಗೊಳಿಸಲಾಗುತ್ತಿದೆ.

ಈ ಯೋಜನೆಯ ಅಡಿಯಲ್ಲಿ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು 'ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌'ನಲ್ಲಿ ಅಂತಿಮವಾಗಿ ಪರಿಶೀಲಿಸಿದ ರಾಜ್ಯ/ಕೇಂದ್ರಾಡಳಿತ ಪ್ರದೇಶ-ಪಾವತಿಸಿದ ದತ್ತಾಂಶವನ್ನು ಹಂಚಿಕೊಳ್ಳುವುದರ ಆಧಾರದ ಮೇಲೆ ವಿದ್ಯಾರ್ಥಿವೇತನದ ಕೇಂದ್ರದ ಪಾಲನ್ನು ಬಿಡುಗಡೆ ಮಾಡಲಾಗುತ್ತದೆ. ಈ ಯೋಜನೆಯು ಮುಕ್ತವಾಗಿದೆ ಮತ್ತು ಭಾರತದಾದ್ಯಂತ ಮಾನ್ಯತೆ ಪಡೆದ ಸಂಸ್ಥೆಗಳ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಬೇಡಿಕೆ-ಆಧಾರಿತವಾಗಿ ಒದಗಿಸಲಾಗುತ್ತದೆ.

ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಕ್ರಿಯಾ ಯೋಜನೆಗೆ (ಡಿಎಪಿಎಸ್‌ಸಿ) ಸಂಬಂಧಿಸಿದಂತೆ ಮಾಹಿತಿ ನೀಡಿರುವ ಸರಕಾರವು ʻಡಿಎಪಿಎಸ್‌ಸಿʼ ಅಡಿಯಲ್ಲಿ ಹಣವನ್ನು ಮೀಸಲಿಡಲು ನೀತಿ ಆಯೋಗವು 2017ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ತಿಳಿಸಿದೆ. ಈ ಮಾರ್ಗಸೂಚಿಗಳ ಪ್ರಕಾರ, ಜವಾಬ್ದಾರಿಯುತ ಪ್ರತಿ ಸಚಿವಾಲಯ/ಇಲಾಖೆಯು ತನ್ನ ಆಯಾ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ʻಡಿಎಪಿಎಸ್‌ಸಿʼ ಅಡಿಯಲ್ಲಿ ಅನುದಾನವನ್ನು ಮಂಜೂರು ಮಾಡುತ್ತದೆ.

ಈ ಯೋಜನೆಗಳನ್ನು ಸಂಬಂಧಪಟ್ಟ ಸಚಿವಾಲಯಗಳು/ಇಲಾಖೆಗಳು ಜಾರಿಗೊಳಿಸುತ್ತವೆ, ಆದರೆ ಕರ್ನಾಟಕ ಸೇರಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನುದಾನ ಹಂಚಿಕೆಯನ್ನು ಆಯಾ ಸಚಿವಾಲಯಗಳು/ಇಲಾಖೆಗಳು ತಮ್ಮ ಯೋಜನೆಗಳ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕೈಗೊಳ್ಳುತ್ತವೆ. ʻಡಿಎಪಿಎಸ್‌ಸಿʼ ಅಡಿಯಲ್ಲಿ ಜವಾಬ್ದಾರಿಯುತ ಸಚಿವಾಲಯಗಳು/ಇಲಾಖೆಗಳು ಮಂಜೂರು ಮಾಡಿದ ನಿಧಿಯ ವಿವರವನ್ನು ಕೇಂದ್ರ ಬಜೆಟ್‌ನ ವೆಚ್ಚದ ಬಾಬ್ತು ಹೇಳಿಕೆ ʻ10ಎʼ ನಲ್ಲಿ ಉಲ್ಲೇಖಿಸಲಾಗುತ್ತದೆ.

ಸರ್ಕಾರದ ಈ ಪ್ರತಿಕ್ರಿಯೆಯು, ಬೇಡಿಕೆ-ಆಧಾರಿತ ಕಾರ್ಯವಿಧಾನ ಮತ್ತು ನೇರ ನಗದು ವರ್ಗಾವಣೆ (ಡಿಬಿಟಿ) ಆಧಾರಿತ ವಿತರಣಾ ವ್ಯವಸ್ಥೆಯ ಮೂಲಕ ಕರ್ನಾಟಕದಲ್ಲಿನ ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬೆಂಬಲವನ್ನು ಅನುಷ್ಠಾನಗೊಳಿಸುತ್ತಿರುವುದನ್ನು ಉಲ್ಲೇಖಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2296780) ವಿಸಿಟರ್ ಕೌಂಟರ್ : 81
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil