ಸಹಕಾರ ಸಚಿವಾಲಯ
azadi ka amrit mahotsav

ಜಾಮ್‌ನಗರ ಜಿಲ್ಲಾ ಸಹಕಾರಿ ಬ್ಯಾಂಕಿನ ಹೊಸ 'ಸಹಕಾರ ಭವನ'ವನ್ನು ವರ್ಚುವಲ್ ಆಗಿ ಉದ್ಘಾಟಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ, ಸಹಕಾರ ಸಚಿವಾಲಯವು ಸಹಕಾರಿ ಆಂದೋಲನಕ್ಕೆ ಹೊಸ ಶಕ್ತಿ ಮತ್ತು ಆವೇಗ ತುಂಬಿದೆ - ಶ್ರೀ ಅಮಿತ್ ಶಾ

ಆಧುನಿಕ ತಂತ್ರಜ್ಞಾನದೊಂದಿಗೆ, ಆರ್‌ಬಿಐ ಮತ್ತು ನಬಾರ್ಡ್ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾದ 'ಸಹಕಾರ ಭವನ'ವು ಜಾಮ್‌ನಗರ ಮತ್ತು ದೈವಭೂಮಿ ದ್ವಾರಕಾದ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ

ಸರಿಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಕಟ್ಟಡವು ತರಬೇತಿ ಕೇಂದ್ರ, ರೈತರ ಹಾಸ್ಟೆಲ್, ಆಧುನಿಕ ಸಮ್ಮೇಳನ ಸಭಾಂಗಣಗಳು ಮತ್ತು ಸುರಕ್ಷಿತ ಲಾಕರ್‌ಗಳು ಸೇರಿದಂತೆ ಹಲವಾರು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ

135 ಕೋಟಿ ರೂ. ಠೇವಣಿ, 780 ಕೋಟಿ ರೂ. ಸಾಲ ವಿತರಣೆ, 24 ಕೋಟಿ ರೂ. ಲಾಭ ಮತ್ತು ಶೂನ್ಯ ಎನ್‌ಪಿಎ ಜಾಮ್‌ನಗರ ಜಿಲ್ಲಾ ಸಹಕಾರಿ ಬ್ಯಾಂಕಿನ ಪ್ರಮುಖ ಸಾಧನೆಗಳಾಗಿವೆ - ಶ್ರೀ ಅಮಿತ್ ಶಾ

40 ಶಾಖೆಗಳು, 431 ಸೇವಾ ಸಹಕಾರಿ ಸಂಘಗಳು ಮತ್ತು 652 ಹಾಲು ಉತ್ಪಾದಕರ ಸಂಘಗಳೊಂದಿಗೆ ಬ್ಯಾಂಕ್ ಹಳ್ಳಿಗಳಾದ್ಯಂತ ಸಹಕಾರ ಬಲಪಡಿಸಲಿದೆ

2 ಲಕ್ಷಕ್ಕೂ ಹೆಚ್ಚಿನ ಹೊಸ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ(ಪಿಎಸಿಎಸ್)ಗಳು ಮತ್ತು ಡೇರಿ ಸಹಕಾರಿ ಸಂಘಗಳು, ಪಿಎಸಿಎಸ್‌ಗಾಗಿ 20ಕ್ಕೂ ಹೆಚ್ಚು ಹೊಸ ವ್ಯವಹಾರ ಚಟುವಟಿಕೆಗಳೊಂದಿಗೆ, ಗ್ರಾಮೀಣ ಪ್ರದೇಶಗಳ ಸಮೃದ್ಧಿಗೆ ಭದ್ರ ಅಡಿಪಾಯ ಹಾಕಲಿದೆ - ಶ್ರೀ ಅಮಿತ್ ಶಾ

प्रविष्टि तिथि: 28 JUL 2026 9:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಸಹಕಾರದಿಂದ ಸಮೃದ್ಧಿ' ಎಂಬ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುತ್ತಾ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ, ದೇಶದ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಆಧುನಿಕ, ಪಾರದರ್ಶಕ ಮತ್ತು ರೈತ ಕೇಂದ್ರಿತವಾಗಿಸುವತ್ತ ಇಂದು ಮತ್ತೊಂದು ದಿಟ್ಟ ಹೆಜ್ಜೆ ಇಡಲಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಜಾಮ್‌ನಗರ ಜಿಲ್ಲಾ ಸಹಕಾರಿ ಬ್ಯಾಂಕಿನ ಹೊಸದಾಗಿ ನಿರ್ಮಿಸಲಾದ ಪ್ರಧಾನ ಕಚೇರಿ 'ಸಹಕಾರ ಭವನ'ವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ವರ್ಚುವಲ್ ಆಗಿ ಉದ್ಘಾಟಿಸಿದರು. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಹೊಸ ಪ್ರಧಾನ ಕಚೇರಿಯು ಜಾಮ್‌ನಗರ ಮತ್ತು ದೈವಭೂಮಿ ದ್ವಾರಕಾ ಜಿಲ್ಲೆಗಳ ರೈತರು, ಸೇವಾ ಸಹಕಾರಿ ಸಂಘಗಳು ಮತ್ತು ಡೇರಿ ಸಹಕಾರಿ ಸಂಸ್ಥೆಗಳ ಹಣಕಾಸು ಮತ್ತು ಸಾಂಸ್ಥಿಕ ಅಗತ್ಯಗಳನ್ನು ಪೂರೈಸಲಿದೆ.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಗುಜರಾತ್ ಸಹಕಾರ ಸಚಿವರಾದ ಶ್ರೀ ಜಿತುಭಾಯಿ ವಘಾನಿ, ಗುಜರಾತ್ ಸಂಪುಟ ಸಚಿವರಾದ ಶ್ರೀ ಅರ್ಜುನ್‌ಭಾಯಿ ಮೋಧ್ವಾಡಿಯಾ, ಶ್ರೀ ರಾಘವ್‌ಜಿಭಾಯಿ ಪಟೇಲ್, ಶ್ರೀ ಮುಲುಭಾಯಿ ಬೇರಾ, ಜಾಮ್‌ನಗರದ ಸಂಸತ್ ಸದಸ್ಯರಾದ ಶ್ರೀಮತಿ ಪೂನಾಂಬೆನ್ ಮಾದಮ್, ಜಾಮ್‌ನಗರ ಉತ್ತರದ ಶಾಸಕಿ ಮತ್ತು ರಾಜ್ಯ ಸಚಿವರಾದ ಶ್ರೀಮತಿ ರಿವಾಬಾ ಜಡೇಜಾ, ಗುಜರಾತ್ ರಾಜ್ಯ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಅಜಯ್‌ಭಾಯಿ ಪಟೇಲ್ ಮತ್ತು ಜಾಮ್‌ನಗರ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಜಿತುಭಾಯಿ ಲಾಲ್ ಕಾರ್ಯಕ್ರಮದಲ್ಲಿ ನೇರವಾಗಿ ಅಥವಾ ವರ್ಚುವಲ್ ಆಗಿ ಭಾಗವಹಿಸಿದ್ದರು. ಜಾಮ್‌ನಗರ ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಮತ್ತು ಜಿಲ್ಲಾ ಸಹಕಾರಿ ಸಂಘಗಳ ಅಧ್ಯಕ್ಷರು, ಜಾಮ್‌ನಗರ ಹಾಲು ಒಕ್ಕೂಟದ ಪದಾಧಿಕಾರಿಗಳು, ಸಹಕಾರಿ ನಗರ ಬ್ಯಾಂಕ್‌ಗಳ ಅಧ್ಯಕ್ಷರು, ಸೇವಾ ಸಹಕಾರಿ ಸಂಘಗಳ ಪ್ರತಿನಿಧಿಗಳು, ಹಲವಾರು ಜನಪ್ರತಿನಿಧಿಗಳು ಮತ್ತು ಹೆಚ್ಚಿನ ಸಂಖ್ಯೆಯ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಹೊಸ ಪ್ರಧಾನ ಕಚೇರಿಯ ನಿರ್ಮಾಣಕ್ಕೆ ಕೈಜೋಡಿಸಿದ ಜಾಮ್‌ನಗರ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರು, ಅದರ ಎಲ್ಲಾ ನಿರ್ದೇಶಕರು, ಸೇವಾ ಸಹಕಾರಿ ಸಂಘಗಳ ಪದಾಧಿಕಾರಿಗಳು ಮತ್ತು ರೈತರನ್ನು ಅಭಿನಂದಿಸಿದರು. ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಲು ಆಧುನೀಕರಣ ಅತ್ಯಗತ್ಯ, ಈ ಪ್ರಕ್ರಿಯೆಯು ಸಹಕಾರಿ ಸಂಸ್ಥೆಗಳ ಪ್ರಧಾನ ಕಚೇರಿ ಮತ್ತು ಕಾರ್ಯ ನಿರ್ವಹಣೆಯೊಂದಿಗೆ ಪ್ರಾರಂಭವಾಗುತ್ತಿದೆ ಎಂದು ಅವರು ಹೇಳಿದರು.

ಜಾಮ್‌ನಗರ ಜಿಲ್ಲಾ ಸಹಕಾರಿ ಬ್ಯಾಂಕಿನ ಹೊಸ ಪ್ರಧಾನ ಕಚೇರಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ನಿಗದಿಪಡಿಸಿದ ಎಲ್ಲಾ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗಿದೆ, ಇದು ಅತ್ಯಾಧುನಿಕ ತಂತ್ರಜ್ಞಾನದಿಂದ ಸುಸಜ್ಜಿತವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಜಾಮ್‌ನಗರ ಜಿಲ್ಲೆಯ ರೈತರು, ಸೇವಾ ಸಹಕಾರಿ ಸಂಘಗಳು ಮತ್ತು ಇತರೆ ಸಹಕಾರಿ ಸಂಸ್ಥೆಗಳಿಗೆ ಉತ್ತಮ, ಸುರಕ್ಷಿತ ಮತ್ತು ಹೆಚ್ಚು ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಪ್ರಧಾನ ಕಚೇರಿ ಸಹಾಯ ಮಾಡಲಿದೆ ಎಂದು ಅವರು ಹೇಳಿದರು.

1969ರಲ್ಲಿ ಕೇವಲ 2.5 ಲಕ್ಷ ರೂ. ಸಾಧಾರಣ ಬಂಡವಾಳದೊಂದಿಗೆ ಪ್ರಾರಂಭವಾದ ಜಾಮ್‌ನಗರ ಜಿಲ್ಲಾ ಸಹಕಾರಿ ಬ್ಯಾಂಕ್ ಇಂದು 215 ಕೋಟಿ ರೂ.ಗಿಂತ ಹೆಚ್ಚಿನ ವ್ಯವಹಾರ ಹೊಂದಿದೆ. ಸೇವಾ ಸಹಕಾರಿ ಸಂಘಗಳು ಮತ್ತು ಡೇರಿ ಸಹಕಾರಿ ಸಂಘಗಳು ತಮ್ಮ ಕಾರ್ಯಾಚರಣೆಯ ಕ್ಷೇತ್ರಗಳನ್ನು ವಿಸ್ತರಿಸುತ್ತಿದ್ದಂತೆ, ಜಿಲ್ಲೆಯಾದ್ಯಂತ ಸಹಕಾರಿ ಕ್ಷೇತ್ರದ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸುವ ಪ್ರಮುಖ ಸಂಸ್ಥೆಯಾಗಿ ಬ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅಮಿತ್ ಶಾ ಹೇಳಿದರು.

ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಆಧುನಿಕ ಪ್ರಧಾನ ಕಚೇರಿಯನ್ನು 25,000 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ನಿರ್ಮಿಸಲಾಗಿದೆ, ಇದು ಸುಮಾರು 47,000 ಚದರ ಅಡಿ ಕಾರ್ಯ ಸ್ಥಳವನ್ನು ನೀಡುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮುಂದಿನ 15 ವರ್ಷಗಳ ಕಾಲ ಬ್ಯಾಂಕಿನ ಯೋಜಿತ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಈ ಕಟ್ಟಡವು ತರಬೇತಿ ಕೇಂದ್ರ, ರೈತರ ಹಾಸ್ಟೆಲ್, ಆಧುನಿಕ ಸಮ್ಮೇಳನ ಕೊಠಡಿಗಳು, ಸಭೆ ಸಭಾಂಗಣಗಳು, ಸುರಕ್ಷಿತ ಲಾಕರ್ ಸೌಲಭ್ಯಗಳು ಮತ್ತು ಭೋಜನ ಶಾಲೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಹೊಂದಿದೆ. ಜಾಮ್‌ನಗರ ಮತ್ತು ದೈವಭೂಮಿ ದ್ವಾರಕಾ ಜಿಲ್ಲೆಗಳ ರೈತರಿಗೆ ಈ ಕಟ್ಟಡವು ಶಕ್ತಿ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಕಟ್ಟಡದಲ್ಲಿ 200 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಲಾಗಿದ್ದು, ಇದನ್ನು ಹಸಿರು ಕಟ್ಟಡವಾಗಿ ಅಭಿವೃದ್ಧಿಪಡಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದರು.

ಬ್ಯಾಂಕ್ ಸುಮಾರು 135 ಕೋಟಿ ರೂ. ಮೊತ್ತದ ಒಟ್ಟು ಠೇವಣಿಗಳನ್ನು ಹೊಂದಿದೆ. ಇದು 780 ಕೋಟಿ ರೂ. ಸಾಲಗಳನ್ನು ವಿತರಿಸಿದೆ, 24 ಕೋಟಿ ರೂ. ಲಾಭ ಗಳಿಸಿದೆ ಮತ್ತು ಶೂನ್ಯ ಒಟ್ಟು ಎನ್‌ಪಿಎ(ಅನುತ್ಪಾದಕ ಆಸ್ತಿ) ಹೊಂದಿದೆ. ಈ ಸಾಧನೆಗಳು ಬ್ಯಾಂಕಿನ ದಕ್ಷ ಆಡಳಿತ ನಿರ್ವಹಣೆ ಮತ್ತು ಸಹಕಾರಿ ಮೌಲ್ಯಗಳನ್ನು ಹೊಂದಿರುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ವಿವರಿಸಿದರು.

40 ಶಾಖೆಗಳ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಈ ಬ್ಯಾಂಕ್, ಜಾಮ್‌ನಗರ ಜಿಲ್ಲೆಯಾದ್ಯಂತ ಹಳ್ಳಿಗಳಿಗೆ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಲು ಹೊಸ ಪ್ರಧಾನ ಕಚೇರಿಯನ್ನು ಬಳಸಲಿದೆ. ಬ್ಯಾಂಕ್ 431 ಸೇವಾ ಸಹಕಾರ ಸಂಘಗಳು, 6 ಡೇರಿ ಒಕ್ಕೂಟಗಳು ಮತ್ತು 652 ಹಾಲು ಉತ್ಪಾದಕರ ಸಂಘಗಳೊಂದಿಗೆ ಸಂಬಂಧ ಹೊಂದಿದ್ದು, 1.5 ಲಕ್ಷಕ್ಕೂ ಹೆಚ್ಚು ಸಹಕಾರಿ ಸದಸ್ಯರಿಗೆ ಸೇವೆಗಳನ್ನು ಒದಗಿಸುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪಿಸಿದೆ, ದೇಶದ ಸಹಕಾರಿ ಚಳುವಳಿಗೆ ಹೊಸ ಶಕ್ತಿ ಮತ್ತು ಆವೇಗ  ತುಂಬಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. 2 ಲಕ್ಷಕ್ಕೂ ಹೆಚ್ಚು ಹೊಸ ಪ್ರಾಥಮಿಕ ಕೃಷಿ ಸಾಲ ಸಂಘಗಳು ಮತ್ತು ಡೇರಿ ಸಹಕಾರಿ ಸಂಘಗಳನ್ನು ಸ್ಥಾಪಿಸುವುದು, ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ(ಪಿಎಸಿಎಸ್‌)ಗಳಿಗೆ 20ಕ್ಕೂ ಹೆಚ್ಚು ಹೊಸ ವ್ಯವಹಾರ ಚಟುವಟಿಕೆಗಳನ್ನು ಸೇರಿಸುವುದು, ಸಹಕಾರಿ ಸಂಸ್ಥೆಗಳ ಲೆಕ್ಕಪರಿಶೋಧನಾ ವ್ಯವಸ್ಥೆಯ ಆನ್‌ಲೈನ್‌ ಮತ್ತು ವಿವಿಧ ಸಹಕಾರಿ ಸಂಸ್ಥೆಗಳನ್ನು ಪರಸ್ಪರ ಸಂಪರ್ಕಿಸುವಂತಹ ಉಪಕ್ರಮಗಳು ಮುಂಬರುವ ವರ್ಷಗಳಲ್ಲಿ ರೈತರ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

ಜಾಮ್‌ನಗರಕ್ಕೆ ಮುಂದೆ ಭೇಟಿ ನೀಡಿದಾಗ, ಜಾಮ್‌ನಗರ ಜಿಲ್ಲಾ ಸಹಕಾರಿ ಬ್ಯಾಂಕಿನ ಹೊಸ ಪ್ರಧಾನ ಕಚೇರಿಗೆ ಭೇಟಿ ನೀಡುವುದಾಗಿ ಶ್ರೀ ಅಮಿತ್ ಶಾ ಹೇಳಿದರು. ತಮ್ಮ ಭೇಟಿಯ ಸಮಯದಲ್ಲಿ, ಜಿಲ್ಲೆಯ ಸೇವಾ ಸಹಕಾರಿ ಸಂಘಗಳು ಮತ್ತು ಡೇರಿ ಸಹಕಾರಿ ಸಂಘಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸಹಕಾರಿ ಕ್ಷೇತ್ರದ ವಿಸ್ತರಣೆ ಮತ್ತು ರೈತರ ಸಮೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸುವುದಾಗಿ ಅವರು ಹೇಳಿದರು. ಮುಂಬರುವ ವರ್ಷಗಳಲ್ಲಿ ಜಾಮ್‌ನಗರ ಜಿಲ್ಲಾ ಸಹಕಾರಿ ಬ್ಯಾಂಕ್ ಬಲಿಷ್ಠವಾಗಿ ಬೆಳೆಯುತ್ತದೆ. ಹಳ್ಳಿಗಳಾದ್ಯಂತ ನಾಗರಿಕರು, ರೈತರು ಮತ್ತು ಸಹಕಾರಿ ಸಂಸ್ಥೆಗಳಿಗೆ ಉತ್ತಮ ಸೇವೆಗಳನ್ನು ಒದಗಿಸುತ್ತದೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
 

*****

 


(रिलीज़ आईडी: 2290924) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Gujarati