ಸಂವಹನ ಸಚಿವಾಲಯ
ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರಿಂದ ಭಾರತ್ 6ಜಿ ಒಕ್ಕೂಟದ ಪ್ರಗತಿ ಪರಿಶೀಲನೆ, 5ಜಿ ಲ್ಯಾಬ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ
ಟೆಲಿಕಾಂ ತಂತ್ರಜ್ಞಾನದಲ್ಲಿ ಭಾರತವನ್ನು ಮುಂಚೂಣಿ ಕೊಡುಗೆದಾರನನ್ನಾಗಿ ಮಾಡುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ್ 6ಜಿ ಒಕ್ಕೂಟ (ಬಿ6ಜಿಎ) ಕಾರ್ಯನಿರ್ವಹಿಸುತ್ತಿದೆ
ಭಾರತ್ 6ಜಿ ಒಕ್ಕೂಟ ಜಾಗತಿಕ ಪ್ರಗತಿಯನ್ನು ಮಾನದಂಡವಾಗಿಸಿಕೊಳ್ಳಬೇಕು ಮತ್ತು ಕಾರ್ಯಕಾರಿ ಗುಂಪುಗಳ ನಡುವಿನ ಸಹಯೋಗವನ್ನು ಬಲಪಡಿಸಬೇಕು: ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ
6ಜಿ ತಂತ್ರಜ್ಞಾನಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಲು ಸರ್ಕಾರ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ
प्रविष्टि तिथि:
28 JUL 2026 7:51PM by PIB Bengaluru
ಕೇಂದ್ರ ಸಂವಹನ ಮತ್ತು ಈಶಾನ್ಯ ವಲಯ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಡಾ. ಚಂದ್ರಶೇಖರ ಪೆಮ್ಮಸಾನಿ ಮತ್ತು ಕಾರ್ಯದರ್ಶಿ (ಟೆಲಿಕಾಂ) ಶ್ರೀ ಅಮಿತ ಅಗರ್ವಾಲ್ ಅವರೊಂದಿಗೆ ಭಾರತ್ 6ಜಿ ಒಕ್ಕೂಟದ (ಬಿ6ಜಿಎ) ಪ್ರಗತಿಯನ್ನು ಪರಿಶೀಲಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 22, 2023 ರಂದು ಭಾರತದ 6ಜಿ ದೃಷ್ಟಿಕೋನ "ಭಾರತ್ 6ಜಿ ವಿಷನ್" ದಾಖಲೆಯನ್ನು ಬಿಡುಗಡೆ ಮಾಡಿದ್ದರು. ಇದು 2030ರ ವೇಳೆಗೆ 6ಜಿ ತಂತ್ರಜ್ಞಾನದ ವಿನ್ಯಾಸ, ಅಭಿವೃದ್ಧಿ ಮತ್ತು ನಿಯೋಜನೆಯಲ್ಲಿ ಭಾರತವನ್ನು ಮುಂಚೂಣಿ ಕೊಡುಗೆದಾರನನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.

ಈ ಸಭೆಯು ಭಾರತದ 6ಜಿ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಭಾರತ್ 6ಜಿ ಒಕ್ಕೂಟ (ಬಿ6ಜಿಎ) ಸಾಧಿಸಿದ ಪ್ರಗತಿ ಮತ್ತು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿತು. ಈ ಒಕ್ಕೂಟವು ಸ್ಪೆಕ್ಟ್ರಮ್; ಸಾಧನ ತಂತ್ರಜ್ಞಾನ ಮತ್ತು ಉತ್ಪಾದನಾ ವ್ಯವಸ್ಥೆ; ತಂತ್ರಜ್ಞಾನ; ಅಪ್ಲಿಕೇಶನ್ ಗಳು; ಹಸಿರು ಮತ್ತು ಸುಸ್ಥಿರತೆ; ಔಟ್‌ರೀಚ್ (ಸಂಪರ್ಕ ಅಭಿಯಾನ); ಮತ್ತು 6ಜಿ ಬಳಕೆ ಪ್ರಕರಣಗಳು ಹಾಗೂ ಆದಾಯದ ಮೂಲಗಳನ್ನು ಒಳಗೊಂಡ ಏಳು ವಿಶಿಷ್ಟ ಕಾರ್ಯಕಾರಿ ಗುಂಪುಗಳ ಮೂಲಕ ಕಾರ್ಯನಿರ್ವಹಿಸುತ್ತದೆ.
ಒಕ್ಕೂಟದ ಸದಸ್ಯ ಸಂಸ್ಥೆಗಳು ಜಂಟಿಯಾಗಿ 5ಜಿ ಮತ್ತು 6ಜಿ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ 7,700 ಕ್ಕೂ ಹೆಚ್ಚು ಪೇಟೆಂಟ್ ಸಲ್ಲಿಕೆಗಳನ್ನು ಹೊಂದಿದ್ದು, ಇದರಲ್ಲಿ 4,400 ಕ್ಕೂ ಹೆಚ್ಚು ವಿದೇಶಿ ಸಲ್ಲಿಕೆಗಳು ಸೇರಿವೆ. ಇದು ಭಾರತದ ಸಂಶೋಧನೆ ಮತ್ತು ನಾವೀನ್ಯತೆಯ ವ್ಯವಸ್ಥೆಯ ಬೆಳೆಯುತ್ತಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. 3ಜಿಪಿಪಿ ಯಲ್ಲಿ ಭಾರತದ ಭಾಗವಹಿಸುವಿಕೆಯೂ ಗಣನೀಯವಾಗಿ ಹೆಚ್ಚಾಗಿದ್ದು, ಭಾರತೀಯ ಭಾಗವಹಿಸುವವರ ಸಂಖ್ಯೆ 2020 ರಲ್ಲಿದ್ದ 717 ರಿಂದ 2025 ರಲ್ಲಿ 1,787 ಕ್ಕೆ ಏರಿದೆ. ಇದೇ ಅವಧಿಯಲ್ಲಿ ತಾಂತ್ರಿಕ ಕೊಡುಗೆಗಳು 196 ರಿಂದ 2,943 ಕ್ಕೆ ಹೆಚ್ಚಾಗಿವೆ.

ಟೆಲಿಕಾಂ ಸ್ಟ್ಯಾಂಡರ್ಡ್ಸ್ ಡೆವಲಪ್‌ಮೆಂಟ್ ಸೊಸೈಟಿ, ಇಂಡಿಯಾ (ಟಿ ಎಸ್ ಡಿ ಎಸ್ ಐ) ದಿಂದ 6ಜಿ ತಂತ್ರಜ್ಞಾನ ಪ್ರಮಾಣೀಕರಣ ಪ್ರಯತ್ನಗಳ ಕುರಿತು ನವೀಕರಣವನ್ನು ಸಭೆಯಲ್ಲಿ ಮಂಡಿಸಲಾಯಿತು. ಜಾಗತಿಕ ಪ್ರಮಾಣೀಕರಣ ಪ್ರಕ್ರಿಯೆಗಳಲ್ಲಿ ಭಾರತದ ಸಕ್ರಿಯ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಯ ಪ್ರಾಮುಖ್ಯತೆಯನ್ನು ಹಾಗೂ ಜಾಗತಿಕವಾಗಿ ಪ್ರಸ್ತುತವಾಗಿರುವ 6ಜಿ ಮಾನದಂಡಗಳ ಅಭಿವೃದ್ಧಿಗೆ ಭಾರತೀಯ ನಾವೀನ್ಯತೆಗಳು, ತಂತ್ರಜ್ಞಾನಗಳು, ಬಳಕೆದಾರ ಪ್ರಕರಣಗಳು ಮತ್ತು ಅವಶ್ಯಕತೆಗಳು ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಚರ್ಚೆಗಳು ಎತ್ತಿಹಿಡಿದವು.
ಸಭೆಯಲ್ಲಿ ಭಾರತ್ 6ಜಿ ಒಕ್ಕೂಟ ಕಾರ್ಯಕಾರಿ ಗುಂಪುಗಳ ತ್ರೈಮಾಸಿಕ ನವೀಕರಣಗಳನ್ನು ಮಂಡಿಸಲಾಯಿತು. ಇವು 6ಜಿ ಅನುಕೂಲಕರ ವ್ಯವಸ್ಥೆಯ ಆರು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದ್ದವು—ತಂತ್ರಜ್ಞಾನ; ಅಪ್ಲಿಕೇಶನ್ ಗಳು & 6ಜಿ ಬಳಕೆದಾರ ಪ್ರಕರಣಗಳು ಮತ್ತು ಆದಾಯದ ಮೂಲಗಳು; ಹಸಿರು ಮತ್ತು ಸುಸ್ಥಿರತೆ; ಸ್ಪೆಕ್ಟ್ರಮ್; ಡಿವೈಸ್ ಗಳ ತಂತ್ರಜ್ಞಾನ, ಘಟಕಗಳು, ಸಂವೇದಕಗಳು (ಸೆನ್ಸರ್) ಮತ್ತು ಉತ್ಪಾದನಾ ವ್ಯವಸ್ಥೆ; ಮತ್ತು ಔಟ್‌ರೀಚ್. ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸುವುದು, ಉದಯೋನ್ಮುಖ ಅಪ್ಲಿಕೇಶನ್ ಗಳು ಮತ್ತು ಬಳಕೆದಾರ ಪ್ರಕರಣಗಳನ್ನು ಗುರುತಿಸುವುದು, ಸ್ಪೆಕ್ಟ್ರಮ್ ತಂತ್ರಗಳನ್ನು ಬಲಪಡಿಸುವುದು, ಇಂಧನ-ಕ್ಷಮತೆಯುಳ್ಳ ಮತ್ತು ಸುಸ್ಥಿರ ತಂತ್ರಜ್ಞಾನಗಳನ್ನು ಉತ್ತೇಜಿಸುವುದು, ಸಾಧನಗಳು, ಘಟಕಗಳು, ಸೆನ್ಸರ್ ಗಳು ಮತ್ತು ಉತ್ಪಾದನೆಯಲ್ಲಿ ದೇಶೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಸಂಪೂರ್ಣ ವ್ಯವಸ್ಥೆಯಾದ್ಯಂತ ಸಹಯೋಗ ಮತ್ತು ಔಟ್‌ರೀಚ್ ವಿಸ್ತರಿಸುವುದರ ಮೇಲೆ ಚರ್ಚೆಗಳು ಗಮನಹರಿಸಿದವು.
ಸಂಶೋಧನೆ, ನಾವೀನ್ಯತೆ, ಮಾನದಂಡಗಳು, ಉತ್ಪಾದನೆ ಮತ್ತು ಮಾರುಕಟ್ಟೆ ನಿಯೋಜನೆಗಳ ನಡುವೆ ಬಲವಾದ ಸಂಪರ್ಕಗಳೊಂದಿಗೆ ಭಾರತದಲ್ಲಿ ದೃಢವಾದ ಸಂಪೂರ್ಣ (ಎಂಡ್-ಟು-ಎಂಡ್) ದೂರಸಂಪರ್ಕ ವ್ಯವಸ್ಥೆಯನ್ನು ನಿರ್ಮಿಸುವ ಪ್ರಾಮುಖ್ಯತೆಗೆ ಸಭೆಯು ಒತ್ತು ನೀಡಿತು. ತಂತ್ರಜ್ಞಾನ ಅಭಿವೃದ್ಧಿಯನ್ನು ವೇಗಗೊಳಿಸಲು, ಸಂಶೋಧನೆಯನ್ನು ನಿಯೋಜಿಸಬಹುದಾದ ಪರಿಹಾರಗಳಾಗಿ ಪರಿವರ್ತಿಸಲು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಉತ್ಪನ್ನಗಳು ಮತ್ತು ಸೇವೆಗಳನ್ನು ರಚಿಸಲು ಸರ್ಕಾರ, ಉದ್ಯಮ, ಶೈಕ್ಷಣಿಕ ಕ್ಷೇತ್ರ, ನವೋದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಹೆಚ್ಚಿನ ಸಹಯೋಗದ ಅಗತ್ಯತೆಯ ಕುರಿತು ಭಾಗವಹಿಸಿದವರು ಚರ್ಚಿಸಿದರು.
ಜನವರಿ-ಜೂನ್ 2026 ರ ಅವಧಿಯ ಸಂಚಿತ ಕಾರ್ಯಕ್ಷಮತೆಯ ಆಧಾರದ ಮೇಲೆ, 5ಜಿ/5ಜಿ-ಸುಧಾರಿತ ತಂತ್ರಜ್ಞಾನಗಳಲ್ಲಿ ಬಳಕೆ, ತೊಡಗಿಸಿಕೊಳ್ಳುವಿಕೆ, ನಾವೀನ್ಯತೆ ಮತ್ತು ಒಟ್ಟಾರೆ ಶ್ರೇಷ್ಠತೆಯ ಅತ್ಯುತ್ತಮ ಪ್ರದರ್ಶನವನ್ನು ಗುರುತಿಸುವ '5ಜಿ ಲ್ಯಾಬ್ಸ್ ಎಕ್ಸಲೆನ್ಸ್ ಪ್ರಶಸ್ತಿಗಳನ್ನು' ಸಹ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. 5ಜಿ ಮತ್ತು 5ಜಿ-ಸುಧಾರಿತ ತಂತ್ರಜ್ಞಾನಗಳನ್ನು ಆಧರಿಸಿದ ಪ್ರಯೋಗ, ನಾವೀನ್ಯತೆ, ಪರೀಕ್ಷೆ, ಕೌಶಲ್ಯ ಅಭಿವೃದ್ಧಿ ಮತ್ತು ಅಪ್ಲಿಕೇಶನ್ ಗಳು ಹಾಗೂ ಬಳಕೆದಾರ ಪ್ರಕರಣಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆಗಾಗಿ ಈ ಪ್ರಶಸ್ತಿಗಳು ಸಂಸ್ಥೆಗಳು ಮತ್ತು ಪಾಲುದಾರರನ್ನು ಗೌರವಿಸುತ್ತವೆ. ಜನವರಿ-ಜೂನ್ 2026 ರ ಅವಧಿಯ ಸಂಚಿತ ಕಾರ್ಯಕ್ಷಮತೆಯ ಆಧಾರದ ಮೇಲೆ ನಾಲ್ಕು ಪ್ರಶಸ್ತಿ ವರ್ಗಗಳನ್ನು ಸ್ಥಾಪಿಸಲಾಗಿತ್ತು, ಅವುಗಳೆಂದರೆ:
|
ಪ್ರಶಸ್ತಿ ವರ್ಗ
|
ಶ್ರೇಣಿ 1
|
ಶ್ರೇಣಿ 2
|
ಶ್ರೇಣಿ 3
|
|
5ಜಿ ಲ್ಯಾಬ್ ಎಕ್ಸಲೆನ್ಸ್ ಪ್ರಶಸ್ತಿ
|
ಐಐಐಟಿಡಿಎಂ ಕರ್ನೂಲ್
|
ಡಿಕೆಟಿಇ ಟೆಕ್ಸ್ ಟೈಲ್ & ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್, ಮಹಾರಾಷ್ಟ್ರ
|
ಐಐಟಿ ರೂರ್ಕಿ
|
|
5ಜಿ ಲ್ಯಾಬ್ ಯುಟಿಲೈಸೇಶನ್ ಎಕ್ಸಲೆನ್ಸ್ ಪ್ರಶಸ್ತಿ
|
ಐಐಐಟಿಡಿಎಂ ಕರ್ನೂಲ್
|
ಐಐಟಿ ರೋಪಾರ್
|
ಪಿಇಸಿ ಚಂಡೀಗಢ
|
|
5ಜಿ ಲ್ಯಾಬ್ ಎಂಗೇಜ್‌ಮೆಂಟ್ ಎಕ್ಸಲೆನ್ಸ್ ಪ್ರಶಸ್ತಿ
|
ಐಐಐಟಿಡಿಎಂ ಕರ್ನೂಲ್
|
ಐಐಟಿ ರೂರ್ಕಿ
|
ಟಿ ಎಚ್ ಡಿ ಸಿ ಇನ್‌ಸ್ಟಿಟ್ಯೂಟ್ ಆಫ್ ಹೈಡ್ರೋಪವರ್ ಇಂಜಿನಿಯರಿಂಗ್ & ಟೆಕ್ನಾಲಜಿ, ತೆಹ್ರಿ
|
|
5ಜಿ ಲ್ಯಾಬ್ ಇನ್ನೋವೇಶನ್ ಎಕ್ಸಲೆನ್ಸ್ ಪ್ರಶಸ್ತಿ
|
ಐಐಐಟಿಡಿಎಂ ಕರ್ನೂಲ್
|
ಡಿಕೆಟಿಇ ಟೆಕ್ಸ್ ಟೈಲ್ & ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್, ಮಹಾರಾಷ್ಟ್ರ
|
ಐಐಟಿ ದೆಹಲಿ
|
ಐಐಐಟಿಡಿಎಂ ಕರ್ನೂಲ್ ಎಲ್ಲಾ ನಾಲ್ಕು ವಿಭಾಗಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಇದು ದೇಶಾದ್ಯಂತದ 5ಜಿ ಬಳಕೆದಾರ ಪ್ರಕರಣ ಲ್ಯಾಬ್‌ಗಳಲ್ಲಿ ಅದರ ಅತ್ಯುತ್ತಮ ಒಟ್ಟಾರೆ ಕಾರ್ಯಾಚರಣೆಯನ್ನು ಪ್ರತಿಬಿಂಬಿಸುತ್ತದೆ.

ಮುಕ್ತ ಚರ್ಚೆ ಮತ್ತು ಭಾಗವಹಿಸಿದವರೊಂದಿಗಿನ ಸಂವಾದವು ನಡೆಯಿತು. ಇದು 6ಜಿ ವ್ಯವಸ್ಥೆಯಲ್ಲಿನ ಉದಯೋನ್ಮುಖ ತಂತ್ರಜ್ಞಾನಗಳು, ಅವಕಾಶಗಳು ಮತ್ತು ಸವಾಲುಗಳ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಪಾಲುದಾರರಿಗೆ ಅವಕಾಶವನ್ನು ಒದಗಿಸಿತು. ಈ ಸಂವಾದವು ತಂತ್ರಜ್ಞಾನ ಅಭಿವೃದ್ಧಿ, ಪ್ರಮಾಣೀಕರಣ, ಸ್ಪೆಕ್ಟ್ರಮ್, ಸುಸ್ಥಿರ ಸಂವಹನಗಳು, ಸಾಧನಗಳು ಮತ್ತು ಉತ್ಪಾದನೆ, ಅಪ್ಲಿಕೇಶನ್ ಗಳು ಮತ್ತು ಬಳಕೆದಾರ ಪ್ರಕರಣಗಳು, ಹಾಗೂ ವಿವಿಧ ಪಾಲುದಾರರ ನಡುವಿನ ಸಹಯೋಗವನ್ನು ಬಲಪಡಿಸುವ ಕಾರ್ಯವಿಧಾನಗಳು ಸೇರಿದಂತೆ ಪ್ರಮುಖ ವಿಷಯಗಳನ್ನು ಒಳಗೊಂಡಿತ್ತು.
ತಮ್ಮ ಪ್ರಮುಖ ಭಾಷಣದಲ್ಲಿ, ಕೇಂದ್ರ ಸಂವಹನ ಮತ್ತು ಈಶಾನ್ಯ ವಲಯ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಜಾಗತಿಕ ದೂರಸಂಪರ್ಕ ವ್ಯವಸ್ಥೆಗೆ ಭಾರತವನ್ನು ಪ್ರಮುಖ ಕೊಡುಗೆದಾರನನ್ನಾಗಿ ರೂಪಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತದ 6ಜಿ ಪ್ರಯಾಣವು ದೇಶೀಯ ಸಂಶೋಧನೆ ಮತ್ತು ನಾವೀನ್ಯತೆ, ಬಲವಾದ ಮಾನದಂಡಗಳ ಭಾಗವಹಿಸುವಿಕೆ, ದೇಶೀಯ ಉತ್ಪಾದನೆ, ಸುಸ್ಥಿರ ತಂತ್ರಜ್ಞಾನಗಳು ಮತ್ತು ಜಾಗತಿಕ ಸಹಭಾಗಿತ್ವಗಳಲ್ಲಿ ನೆಲೆಗೊಂಡಿರಬೇಕು ಎಂದು ಅವರು ಒತ್ತಿ ಹೇಳಿದರು. "ಕಳೆದ ಸಭೆಯಿಂದೀಚೆಗೆ ಅಪಾರ ಪ್ರಮಾಣದ ಪ್ರಗತಿಯಾಗಿದೆ. ನಿಗದಿತ ಗುರಿಗಳನ್ನು ಸಾಧಿಸಿದ್ದಕ್ಕಾಗಿ ನಾನು ತಂಡವನ್ನು ಅಭಿನಂದಿಸಲು ಬಯಸುತ್ತೇನೆ ಮತ್ತು ಮುಂದಿನ ಗುರಿಗಳನ್ನು ಕ್ರಿಯಾಶೀಲ ರೀತಿಯಲ್ಲಿ ಸಾಧಿಸುವುದನ್ನು ಎದುರುನೋಡುತ್ತಿದ್ದೇನೆ. 6ಜಿ ಸಾಧಿಸುವ ಪ್ರಗತಿಯಲ್ಲಿ ಇತರ ಎಲ್ಲಾ ಅಂತರರಾಷ್ಟ್ರೀಯ ಒಕ್ಕೂಟಗಳು ಎಲ್ಲಿವೆ ಮತ್ತು ನಾವು ಅವರಿಗೆ ಹೇಗೆ ಹೋಲಿಕೆಯಾಗುತ್ತೇವೆ ಎಂಬುದನ್ನು ನಾವು ನೋಡಬೇಕು. ಕಾರ್ಯಕಾರಿ ಗುಂಪುಗಳ ನಡುವಿನ ಪರಸ್ಪರ ಛೇದಕ ಕ್ಷೇತ್ರಗಳನ್ನು (ಇಂಟರ್‌ಸೆಕ್ಷನ್) ಸಹ ನಾವು ಗುರುತಿಸಬೇಕು ಮತ್ತು ಅವುಗಳ ನಡುವೆ ಸಹಯೋಗಕ್ಕೆ ಹೇಗೆ ಅವಕಾಶವಿದೆ ಎಂಬುದನ್ನು ಕಂಡುಕೊಳ್ಳಬೇಕು" ಎಂದು ಅವರು ಹೇಳಿದರು.
ಏಳು ಕಾರ್ಯಕಾರಿ ಗುಂಪುಗಳ ನಡುವೆ ಹೆಚ್ಚಿನ ಸಮನ್ವಯ ಮತ್ತು ಸಹಯೋಗವನ್ನು ಬೆಳೆಸಲು ಪರಸ್ಪರ ಛೇದಕ ಕ್ಷೇತ್ರಗಳನ್ನು ಗುರುತಿಸುವುದರ ಮೇಲೆ ಗಮನ ಹರಿಸುವಂತೆ ಕೇಂದ್ರ ಸಚಿವರು ಸಲಹೆ ನೀಡಿದರು. ಅದೇ ಸಮಯದಲ್ಲಿ ಕೊರತೆಗಳನ್ನು ಗುರುತಿಸಲು, ಜಾಗತಿಕ ಅತ್ಯುತ್ತಮ ಅಭ್ಯಾಸಗಳಿಂದ ಕಲಿಯಲು ಮತ್ತು ದೇಶದ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ಅಂತರರಾಷ್ಟ್ರೀಯ 6ಜಿ ಒಕ್ಕೂಟಗಳಿಗೆ ಎದುರಾಗಿ ದೇಶದ ಪ್ರಗತಿಯನ್ನು ಮಾನದಂಡವಾಗಿಸಿಕೊಳ್ಳಲು ಸಲಹೆ ನೀಡಿದರು. 6ಜಿ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯಗಳನ್ನು ಬಲಪಡಿಸಲು ಶೈಕ್ಷಣಿಕ ಕ್ಷೇತ್ರ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಿಶ್ವದರ್ಜೆಯ ಪರೀಕ್ಷಾ ಮೂಲಸೌಕರ್ಯಗಳನ್ನು ಒಳಗೊಂಡ ದೃಢವಾದ ವ್ಯವಸ್ಥೆಯನ್ನು ಪೋಷಿಸುವ ಅಗತ್ಯತೆಯೊಂದಿಗೆ, ಸಚಿವಾಲಯ ಮತ್ತು ಸರ್ಕಾರದಿಂದ ಹೆಚ್ಚಿನ ಬೆಂಬಲಕ್ಕಾಗಿ ಭಾಗವಹಿಸಿದವರ ಸಲಹೆಗಳನ್ನು ಅವರು ಗಮನಿಸಿದರು.
ಭಾರತದ ಡಿಜಿಟಲ್ ಆಕಾಂಕ್ಷೆಗಳನ್ನು ಬೆಂಬಲಿಸುವ ಮತ್ತು ಜಾಗತಿಕ ತಾಂತ್ರಿಕ ಪ್ರಗತಿಗೆ ಕೊಡುಗೆ ನೀಡುವ ಸಾಮರ್ಥ್ಯವಿರುವ ಸುರಕ್ಷಿತ, ಸ್ಥಿತಿಸ್ಥಾಪಕ, ಸುಸ್ಥಿರ ಮತ್ತು ಒಳಗೊಳ್ಳುವ ದೂರಸಂಪರ್ಕ ವ್ಯವಸ್ಥೆಯನ್ನು ನಿರ್ಮಿಸುವ ಪ್ರಾಮುಖ್ಯತೆಯನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು. ಸಂಶೋಧನೆ, ನಾವೀನ್ಯತೆ, ಮಾನದಂಡಗಳು, ಉತ್ಪಾದನೆ ಮತ್ತು ಅಪ್ಲಿಕೇಶನ್ ಗಳ ಸಮ್ಮಿಲನವು ಭಾರತವು ಮುಂದಿನ ಪೀಳಿಗೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಮಾತ್ರವಲ್ಲದೆ ಅವುಗಳ ಜಾಗತಿಕ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಕೇಂದ್ರ ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಡಾ. ಚಂದ್ರಶೇಖರ ಪೆಮ್ಮಸಾನಿ ಅವರು, ಭವಿಷ್ಯಕ್ಕೆ ಸಿದ್ಧವಿರುವ ದೂರಸಂಪರ್ಕ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸರ್ಕಾರ, ಉದ್ಯಮ, ಶೈಕ್ಷಣಿಕ ಕ್ಷೇತ್ರ ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ನಿಕಟ ಸಹಯೋಗದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ದೇಶೀಯ ತಂತ್ರಜ್ಞಾನ ಅಭಿವೃದ್ಧಿಯನ್ನು ವೇಗಗೊಳಿಸುವ, ಪ್ರತಿಭೆಯನ್ನು ಪೋಷಿಸುವ ಮತ್ತು ಉದಯೋನ್ಮುಖ ಸಂವಹನ ತಂತ್ರಜ್ಞಾನಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನವೋದ್ಯಮಗಳು ಮತ್ತು ನಾವೀನ್ಯಕಾರರಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವ ಅಗತ್ಯವನ್ನು ಅವರು ಎತ್ತಿಹಿಡಿದರು. "ಭಾರತದ 6ಜಿ ಭವಿಷ್ಯವನ್ನು ರೂಪಿಸಲು ಉದ್ಯಮ, ಶೈಕ್ಷಣಿಕ ಕ್ಷೇತ್ರ, ನವೋದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವಲ್ಲಿ ಭಾರತ್ 6ಜಿ ಒಕ್ಕೂಟ ಮಾಡಿರುವ ಗಮನಾರ್ಹ ಪ್ರಗತಿಯನ್ನು ಕಂಡು ನನಗೆ ಸಂತೋಷವಾಗಿದೆ. ಇದರ ಪಾಲುದಾರರು ಮತ್ತು ಕಾರ್ಯಕಾರಿ ಗುಂಪುಗಳ ಸಾಮೂಹಿಕ ಪ್ರಯತ್ನಗಳು ನಾವೀನ್ಯತೆ, ದೇಶೀಯ ತಂತ್ರಜ್ಞಾನ ಅಭಿವೃದ್ಧಿ ಮತ್ತು ಜಾಗತಿಕ ಪ್ರಮಾಣೀಕರಣಕ್ಕೆ ಬಲವಾದ ಅಡಿಪಾಯವನ್ನು ಹಾಕಿವೆ. ನಾವು ಮುಂದುವರಿಯುತ್ತಿದ್ದಂತೆ, ಎಲ್ಲಾ ಪಾಲುದಾರರಲ್ಲಿ ಸಹಯೋಗವನ್ನು ಮತ್ತಷ್ಟು ಆಳವಾಗಿಸುವುದು, ಕಾರ್ಯಕಾರಿ ಗುಂಪುಗಳ ನಡುವಿನ ಸಮನ್ವಯವನ್ನು ಬಲಪಡಿಸುವುದು ಹಾಗೂ ಸಂಶೋಧನೆ, ಪರೀಕ್ಷೆ ಮತ್ತು ಮಾನದಂಡಗಳ ಅಭಿವೃದ್ಧಿಯನ್ನು ವೇಗಗೊಳಿಸುವುದು ಅತ್ಯಗತ್ಯ" ಎಂದು ಅವರು ಹೇಳಿದರು.
ಭಾರತ್ 6ಜಿ ಒಕ್ಕೂಟ ಪರಿಶೀಲನಾ ಸಭೆಯು ತಂತ್ರಜ್ಞಾನ, ಅಪ್ಲಿಕೇಶನ್ ಗಳು ಮತ್ತು ಬಳಕೆದಾರ ಪ್ರಕರಣಗಳು, ಸುಸ್ಥಿರತೆ, ಸ್ಪೆಕ್ಟ್ರಮ್, ಸಾಧನಗಳು ಮತ್ತು ಉತ್ಪಾದನೆ, ಪ್ರಮಾಣೀಕರಣ ಮತ್ತು ಸಂಪರ್ಕ ಅಭಿಯಾನದಾದ್ಯಂತ ಸಮನ್ವಯಗೊಳಿಸಿದ ಪ್ರಯತ್ನಗಳ ಮೂಲಕ ಭಾರತದ 6ಜಿ ಪ್ರಯಾಣವನ್ನು ವೇಗಗೊಳಿಸುವ ಸಾಮೂಹಿಕ ಸಂಕಲ್ಪವನ್ನು ಪುನರುಚ್ಚರಿಸಿತು. ಚರ್ಚೆಗಳು ಮತ್ತು ಸಂವಾದಗಳು ದೇಶೀಯ, ಜಾಗತಿಕವಾಗಿ ಪರಸ್ಪರ ಕಾರ್ಯಸಾಧ್ಯವಾದ ಮತ್ತು ಭವಿಷ್ಯಕ್ಕೆ ಸಿದ್ಧವಿರುವ ದೂರಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಕೋನಕ್ಕೆ ಹೆಚ್ಚಿನ ವೇಗವನ್ನು ನೀಡಿದವು. ಇದು 6ಜಿ ನಾವೀನ್ಯತೆ, ತಂತ್ರಜ್ಞಾನ, ಮಾನದಂಡಗಳು ಮತ್ತು ನಿಯೋಜನೆಗೆ ಭಾರತವು ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲು ಅನುವು ಮಾಡಿಕೊಡುತ್ತದೆ.
ಭಾರತ್ 6ಜಿ ಒಕ್ಕೂಟ (ಬಿ6ಜಿಎ) ಕುರಿತು
ಭಾರತ್ 6ಜಿ ಒಕ್ಕೂಟ ಎಂಬುದು ಭಾರತದಲ್ಲಿ ವಿಶ್ವದರ್ಜೆಯ, ಭವಿಷ್ಯಕ್ಕೆ ಸಿದ್ಧವಿರುವ 6ಜಿ ವ್ಯವಸ್ಥೆಯನ್ನು ನಿರ್ಮಿಸಲು ಶೈಕ್ಷಣಿಕ ಕ್ಷೇತ್ರ, ಉದ್ಯಮ, ನವೋದ್ಯಮಗಳು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಒಟ್ಟುಗೂಡಿಸುವ ಬಹು-ಪಾಲುದಾರರ ಸಹಯೋಗದ ವೇದಿಕೆಯಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ), ನಾವೀನ್ಯತೆ ಮತ್ತು ಪ್ರಮಾಣೀಕರಣದ ಮೇಲೆ ಗಮನ ಹರಿಸುವ ಬಿ6ಜಿಎ, ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನಗಳಲ್ಲಿ ಜಾಗತಿಕ ನಾಯಕತ್ವದ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Follow DoT Handles for more: -
X - https://x.com/DoT_India
Insta- https://www.instagram.com/department_of_telecom?igsh=MXUxbHFjd3llZTU0YQ==
Fb - https://www.facebook.com/DoTIndia
Youtube: https://youtube.com/@departmentoftelecom?si=DALnhYkt89U5jAaa
*****
(रिलीज़ आईडी: 2290847)
आगंतुक पटल : 13