ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ʻಮಿಷನ್ ಸಕ್ಷಮ್ ಅಂಗನವಾಡಿʼ ಮತ್ತು ʻಪೋಷಣ್ 2.0ʼ ಅಡಿಯಲ್ಲಿ ನೈಜ ಸಮಯದ ಮೇಲ್ವಿಚಾರಣೆ ಮತ್ತು ನಿಗಾಕ್ಕಾಗಿ 'ಪೋಷಣ್ ಟ್ರ್ಯಾಕರ್' ಡಿಜಿಟಲ್ ತಂತ್ರಾಂಶವು ಒಂದು ಪ್ರಮುಖ ಆಡಳಿತ ಸಾಧನವಾಗಿದೆ


ಫಲಾನುಭವಿಗಳಿಗೆ ಮನೆಗೆ ತೆಗೆದುಕೊಂಡು ಹೋಗುವ ಪಡಿತರವನ್ನು ತಡೆರಹಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ʻಪೋಷಣ್ ಟ್ರ್ಯಾಕರ್‌ʼನಲ್ಲಿ ʻನಾಮಿನಿ ಮಾಡ್ಯೂಲ್ʼ(ಪಡಿತರ ಪಡೆಯಲು ಪ್ರತಿನಿಧಿ ಆಯ್ಕೆ) ಅನ್ನು ಸಹ ಪರಿಚಯಿಸಲಾಗಿದೆ

प्रविष्टि तिथि: 24 JUL 2026 1:57PM by PIB Bengaluru

ʻಮಿಷನ್ ಸಕ್ಷಮ್ ಅಂಗನವಾಡಿʼ ಮತ್ತು ʻಪೋಷಣ್ 2.0ʼ ಅಡಿಯಲ್ಲಿ ವ್ಯಾಖ್ಯಾನಿಸಲಾದ ಸೂಚ್ಯಂಕಗಳ ಆಧಾರದ ಮೇಲೆ ಎಲ್ಲಾ ಅಂಗನವಾಡಿ ಕೇಂದ್ರಗಳು, ಅಂಗನವಾಡಿ ಕಾರ್ಯಕರ್ತರು ಮತ್ತು ಫಲಾನುಭವಿಗಳ ನೈಜ ಸಮಯದ ಮೇಲ್ವಿಚಾರಣೆ ಮತ್ತು ನಿಗಾಕ್ಕಾಗಿ ಸಚಿವಾಲಯವು 'ಪೋಷಣ್ ಟ್ರ್ಯಾಕರ್' ಡಿಜಿಟಲ್ ತಂತ್ರಾಂಶವನ್ನು ಪರಿಚಯಿಸಿದೆ. ʻಪೋಷಣ್ ಟ್ರ್ಯಾಕರ್ʼ ತಂತ್ರಾಂಶವು ವಿವಿಧ ಮಾನದಂಡಗಳ ಆಧಾರದ ಮೇಲೆ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಲು ಮತ್ತು ಅಗತ್ಯ ಪರಿಷ್ಕರಣೆಗಳನ್ನು ಮಾಡಲು ಸಚಿವಾಲಯಕ್ಕೆ ಅನುವು ಮಾಡಿಕೊಟ್ಟಿದೆ. ಅಂಗನವಾಡಿ ಕೇಂದ್ರಗಳನ್ನು ತೆರೆಯುವುದು, ಮಕ್ಕಳ ದೈನಂದಿನ ಹಾಜರಾತಿ, ʻಇಸಿಸಿಇʼ ಚಟುವಟಿಕೆಗಳು, ಮಕ್ಕಳ ಬೆಳವಣಿಗೆಯ ಮೇಲ್ವಿಚಾರಣೆ, ಬಿಸಿ ಊಟ (ಎಚ್‌ಸಿಎಂ) ಮತ್ತು ಮನೆಗೆ ತೆಗೆದುಕೊಂಡು ಹೋಗುವ ಪಡಿತರ (ಟಿಎಚ್‌ಆರ್), ಬೆಳವಣಿಗೆಯ ಮಾಪನ ಮುಂತಾದ ಅಂಗನವಾಡಿ ಸೇವೆಗಳಿಗೆ ನೈಜ ಸಮಯದ ದತ್ತಾಂಶ ಸಂಗ್ರಹಣೆಯನ್ನು ಇದು ಸುಗಮಗೊಳಿಸಿದೆ.

ಇದೊಂದು ಸಾರ್ವತ್ರಿಕ ಏಕ ಗವಾಕ್ಷಿ ಯೋಜನೆಯಾಗಿದ್ದು, ಯಾವುದೇ ಫಲಾನುಭವಿಯು ನೋಂದಾಯಿಸಲು ಮತ್ತು ಸೇವೆಗಳನ್ನು ಪಡೆಯಲು ಯಾವುದೇ ಪ್ರವೇಶ ಅಡೆತಡೆಗಳಿಲ್ಲ. ʻಇ-ಕೆವೈಸಿʼ ಕಾರ್ಯವಿಧಾನದ ಮೂಲಕ ಮುಖ ಗುರುತಿಸುವಿಕೆಗೆ (ಎಫ್ಆರ್‌ಎಸ್) ಒಳಗಾಗಲು ಸಿದ್ಧರಿರುವ ಪ್ರತಿಯೊಬ್ಬ ಫಲಾನುಭವಿಯು ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಂಪೂರ್ಣವಾಗಿ ಅರ್ಹರಾಗಿರುತ್ತಾರೆ. ಈ ʻಆಧಾರ್ʼ ಸಂಖ್ಯೆ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯು ಫಲಾನುಭವಿಗಳನ್ನು ಸರಿಯಾಗಿ ಗುರುತಿಸಲು, ಸೋರಿಕೆಯನ್ನು ತಡೆಗಟ್ಟಲು ಮತ್ತು ನಕಲಿ ನಮೂದುಗಳನ್ನು ತೆಗೆದುಹಾಕಲು ಅನುವು ಮಾಡಿಕೊಟ್ಟಿದೆ. ʻಪೋಷಣ್ ಟ್ರ್ಯಾಕರ್ʼ ಡ್ಯಾಶ್‌ಬೋರ್ಡ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಶೇ.99.88 ರಷ್ಟು ನೋಂದಾಯಿತ ಫಲಾನುಭವಿಗಳು ʻಆಧಾರ್ʼ ದೃಢೀಕರಣಕ್ಕೆ ಒಳಗಾಗಿದ್ದಾರೆ. ಸೇವಾ ವಿತರಣೆಯ ಕೊನೆಯ ಮೈಲಿಯ ಮೇಲ್ವಿಚಾರಣೆಗಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು (ಎಂಡಬ್ಲ್ಯುಸಿಡಿ) ʻಪೋಷಣ್ ಟ್ರ್ಯಾಕರ್ʼನಲ್ಲಿ ʻಮುಖ ಗುರುತಿಸುವಿಕೆ ವ್ಯವಸ್ಥೆʼ (ಎಫ್ಆಆರ್‌ಎಸ್‌) ಅನ್ನು ಅಭಿವೃದ್ಧಿಪಡಿಸಿದೆ. ಇದು ʻಮನಗೆ ಕೊಂಡೊಯ್ಯುವ ಪಡಿತರʼದ(ಟೇಕ್‌ ಹೊಂ ರೇಷನ್‌ - ಟಿಎಚ್ಆರ್) ಪ್ರಯೋಜನವು ನೋಂದಾಯಿಸಲಾದ ಉದ್ದೇಶಿತ ಫಲಾನುಭವಿಗೆ ಮಾತ್ರ ದೊರೆಯುವುದನ್ನು ಖಚಿತಪಡಿಸುತ್ತದೆ.

ಫಲಾನುಭವಿಗಳಿಗೆ ಮನಗೆ ಕೊಂಡೊಯ್ಯುವ ಪಡಿತರವನ್ನು(ಟಿಎಚ್ಆರ್) ಸುಗಮವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ʻಪೋಷಣ್ ಟ್ರ್ಯಾಕರ್‌ʼನಲ್ಲಿ ʻನಾಮಿನಿ ಮಾಡ್ಯೂಲ್ʼ ಅನ್ನು ಸಹ ಪರಿಚಯಿಸಲಾಗಿದೆ. ಯಾವುದೇ ಕಾರಣದಿಂದಾಗಿ, ನೋಂದಾಯಿತ ಫಲಾನುಭವಿಯು ʻಎಫ್‌ಆರ್‌ಎಸ್ʼ ಮೂಲಕ ತಮ್ಮ ಮನಗೆ ಕೊಂಡೊಯ್ಯಬಹುದಾದ ಪಡಿತರವನ್ನು ಸ್ವೀಕರಿಸಲು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ಅಂಥವರು ತಮ್ಮ ಪಡಿತರವನ್ನು ಸ್ವೀಕರಿಸಲು ತನ್ನ ಪರವಾಗಿ ನಾಮನಿರ್ದೇಶಿತರನ್ನು ಆಯ್ಕೆ ಮಾಡಬಹುದು. ನಾಮನಿರ್ದೇಶಿತರು ಒಮ್ಮೆ ಮಾತ್ರ ʻಇ-ಕೆವೈಸಿʼಗೆ ಒಳಗಾಗಬೇಕು. ಅವರ ಇ-ಕೆವೈಸಿಯನ್ನು ಫಲಾನುಭವಿಯ ಪರವಾಗಿ ಪಡಿತರ ಸ್ವೀಕರಿಸಲು ಬಂದ ಪ್ರತಿ ಬಾರಿಯೂ ಮುಖ ಹೋಲಿಕೆ ಮೂಲಕ ಪರಿಶೀಲಿಸಲಾಗುತ್ತದೆ. ನಾಮನಿರ್ದೇಶಿತರನ್ನು ಸೇರಿಸಿದ ನಂತರವೂ, ಫಲಾನುಭವಿಯು ಬಯಸಿದರೆ ತಾವೇ ಪಡಿತರ ಪಡೆಯುವುದನ್ನು ಮುಂದುವರಿಸಬಹುದು. ಈ ವ್ಯವಸ್ಥೆಯು ಫಲಾನುಭವಿಗಳ ಜೀವನ ಸೌಕರ್ಯವನ್ನು ಸುಧಾರಿಸಿದೆ.

ʻಪೋಷಣ್ ಟ್ರ್ಯಾಕರ್ʼ ತಂತ್ರಾಂಶದಲ್ಲಿನ ಎಲ್ಲಾ ಫಲಾನುಭವಿಗಳ ನೋಂದಣಿ, ದತ್ತಾಂಶ ಲಭ್ಯತೆ, ನಿಗಾ ಮತ್ತು ಮೇಲ್ವಿಚಾರಣೆಗಾಗಿ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮೇಲ್ವಿಚಾರಕರು ಮತ್ತು ಬ್ಲಾಕ್ ಸಂಯೋಜಕರಿಗೆ ಸ್ಮಾರ್ಟ್ ಫೋನ್‌ಗಳ ಖರೀದಿಗಾಗಿ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣವನ್ನು ಬಿಡುಗಡೆ ಮಾಡುತ್ತದೆ. ಬೆಳವಣಿಗೆಯ ಮೇಲ್ವಿಚಾರಣಾ ಸಾಧನಗಳ (ಉದ್ದ ಮತ್ತು ಎತ್ತರದ ಅಳತೆಗಾಗಿ ʻಇನ್ಫೆಂಟೋಮೀಟರ್ʼ ಮತ್ತು ʻಸ್ಟೇಡಿಯೋಮೀಟರ್ʼ; ಶಿಶುವಿನ ತೂಕದ ಮಾಪಕ, ಫಲಾನುಭವಿತಾಯಿಯ ತೂಕದ ಮಾಪಕ) ಖರೀದಿಗೆ ಸಹ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಪ್ರತಿ ಸ್ಮಾರ್ಟ್ ಫೋನ್‌ಗೆ ರೂ.10,000 + ಜಿಎಸ್‌ಟಿ ಹಾಗೂ ಮತ್ತು 4 ಜಿಎಂಡಿಗಳ ಸೆಟ್‌ಗೆ ₹8,000/- ಮೊತ್ತವನ್ನು ವೆಚ್ಚ-ಹಂಚಿಕೆ ಆಧಾರದ ಮೇಲೆ ಕೇಂದ್ರ ಸರ್ಕಾರವು ಒದಗಿಸುತ್ತದೆ.

ಪೌಷ್ಠಿಕಾಂಶ ಮೇಲ್ವಿಚಾರಣೆ, ʻಇಸಿಸಿಇʼ ವಿತರಣೆ, ಫಲಾನುಭವಿಗಳ ಪರಿಶೀಲನೆ ಮತ್ತು ಸೇವಾ ದಕ್ಷತೆಯ ಮೇಲೆ ಡಿಜಿಟಲೀಕರಣದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ʻಪೋಷಣ್ ಟ್ರ್ಯಾಕರ್‌ʼನ ಗಣಕೀಕೃತ ವಿಶ್ಲೇಷಣೆ ಮುಖಾಂತರ ಫಲಿತಾಂಶ ಆಧಾರಿತ ಮೌಲ್ಯಮಾಪನ ಮತ್ತು ನಿರಂತರ ಮೇಲ್ವಿಚಾರಣೆಯನ್ನು ನಡೆಸಲಾಗುತ್ತಿದೆ. ವೀಡಿಯೊಗಳು, ಚಟುವಟಿಕೆ ಮಾಡ್ಯೂಲ್‌ಗಳು ಮತ್ತು ಮನೆ ಆಧಾರಿತ ಕಲಿಕಾ ಸಾಮಗ್ರಿಗಳ ರೂಪದಲ್ಲಿ ʻಪೋಷಣ್ ಟ್ರ್ಯಾಕರ್‌ʼನಲ್ಲಿ ʻನವಚೇತನʼ (ಆರಂಭಿಕ ಬಾಲ್ಯದ ಪ್ರಚೋದನೆಯ ರಾಷ್ಟ್ರೀಯ ನೀತಿ) ಹಾಗೂ ʻಆಧಾರಶಿಲಾʼದ (ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ) ಜೊತೆ ಹೊಂದಿಕೆಯಾಗಿರುವ ʻಇಸಿಸಿಇʼ ವಿಷಯವನ್ನು ಸಂಯೋಜಿಸಲಾಗಿದೆ. ಆ ಮೂಲಕ  ಡಿಜಿಟಲ್ ಕಲಿಕೆಯ ಬೆಂಬಲವನ್ನು ಬಲಪಡಿಸಲಾಗಿದೆ. ಈ ತಂತ್ರಾಂಶವು ಪ್ರಸ್ತುತ 249 ಇಸಿಸಿಇ ವೀಡಿಯೊಗಳು, 190 ಆಡಿಯೊ ಸಂದೇಶಗಳು ಮತ್ತು 130ಕ್ಕೂ ಹೆಚ್ಚು ಚಟುವಟಿಕೆ ಆಧಾರಿತ ಕಲಿಕೆಯ ಸಂಪನ್ಮೂಲಗಳನ್ನು ಹೊಂದಿದೆ. 0-3 ವರ್ಷ ವಯಸ್ಸಿನ ಮಕ್ಕಳಿಗೆ, ರಚನಾತ್ಮಕ ಮನೆ ಭೇಟಿಗಳನ್ನು ಬೆಂಬಲಿಸಲು ಮತ್ತು ಬಾಲ್ಯದ ಪ್ರಚೋದನೆಗಾಗಿ ಆರೈಕೆದಾರರ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲು ʻನವಚೇತನʼ ಅಡಿಯಲ್ಲಿ 14 ವೀಡಿಯೊಗಳ ಮೂಲಕ 140 ಮನೆ ಆಧಾರಿತ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಉಪಕ್ರಮಗಳು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಕ ಬಾಲ್ಯದ ಶಿಕ್ಷಣ ಮತ್ತು ಆರೈಕೆ (ಇಸಿಸಿಇ) ಯ ಸುಧಾರಿತ ಏಕರೂಪತೆ, ಗುಣಮಟ್ಟ ಮತ್ತು ಪರಿಣಾಮಕಾರಿತ್ವಕ್ಕೆ ಕೊಡುಗೆ ನೀಡಿವೆ. ಇದರಲ್ಲಿರುವ ʻಫಲಾನುಭವಿ ಇಂಟರ್ಫೇಸ್ʼ ವ್ಯವಸ್ಥೆಯು ʻಇಸಿಸಿಇʼ, ಆರಂಭಿಕ ಪ್ರಚೋದನೆ ಹಾಗೂ ಮಕ್ಕಳ ಆರೈಕೆ ಅಭ್ಯಾಸಗಳ ಬಗ್ಗೆ ಪೋಷಕರಿಗೆ ಕಲಿಕೆಯ ವಿಷಯ ಮತ್ತು ಸಂದೇಶಗಳನ್ನು ಪ್ರಸಾರ ಮಾಡಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಆರೈಕೆದಾರರ ಜಾಗೃತಿ ಮತ್ತು ಆರಂಭಿಕ ಬಾಲ್ಯದ ಅಭಿವೃದ್ಧಿಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸುತ್ತದೆ.

ʻಮಿಷನ್ ಸಕ್ಷಮ್ ಅಂಗನವಾಡಿʼ ಮತ್ತು ʻಪೋಷಣ್ 2.0ʼರ ಫಲಿತಾಂಶ ಆಧಾರಿತ ಮೌಲ್ಯಮಾಪನ ಅಧ್ಯಯನವನ್ನು ನೀತಿ ಆಯೋಗದ ʻಅಭಿವೃದ್ಧಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಚೇರಿʼಯು (ಡಿಎಂಇಒ) ನಡೆಸಿತು (2025). ಅಧ್ಯಯನದ ಪ್ರಕಾರ, ʻಪೋಷಣ್ ಟ್ರ್ಯಾಕರ್ʼ ತಂತ್ರಾಂಶದ ಮೂಲಕ ಡಿಜಿಟಲೀಕರಣವು ಪೌಷ್ಠಿಕಾಂಶದ ಮೇಲ್ವಿಚಾರಣೆ, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ), ಫಲಾನುಭವಿ ದೃಢೀಕರಣ ಮತ್ತು ಸೇವಾ ವಿತರಣಾ ದಕ್ಷತೆಯ ಮೇಲೆ ಬಹು-ಆಯಾಮದ ಪರಿಣಾಮವನ್ನು ಬೀರುತ್ತದೆ ಎಂದು ಸಾಂಸ್ಥಿಕ ಮೌಲ್ಯಮಾಪನಗಳು ಮತ್ತು ಮನೆ ಸಮೀಕ್ಷೆಗಳ ಪುರಾವೆಗಳು ಸೂಚಿಸುತ್ತವೆ. ಪೂರಕ ಪೌಷ್ಟಿಕಾಂಶ ಕಾರ್ಯಕ್ರಮ (ಎಸ್ಎನ್‌ಪಿ) ಅಡಿಯಲ್ಲಿ ಹಸ್ತಚಾಲಿತ, ಕಾಗದ ಆಧಾರಿತ ವ್ಯವಸ್ಥೆಗಳಿಂದ ತಂತ್ರಜ್ಞಾನ-ಸಶಕ್ತ ಆಡಳಿತ ಚೌಕಟ್ಟಿಗೆ ʻಪೋಷಣ್ ಟ್ರ್ಯಾಕರ್ʼ ಗಮನಾರ್ಹ ಬದಲಾವಣೆಯಾಗಿದೆ ಎಂದು ವರದಿಯು ಉಲ್ಲೇಖಿಸಿದೆ. ವರದಿಯ ಪ್ರಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪರಿಚಯಿಸಿದ ʻಪೋಷಣ್ ಟ್ರ್ಯಾಕರ್ʼ ವ್ಯವಸ್ಥೆಯು ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳ ಡಿಜಿಟಲ್ ಮೇಲ್ವಿಚಾರಣೆ, ದಾಸ್ತಾನು ಮತ್ತು ಸೇವಾ ವಿತರಣೆಗೆ ಮೂಲಾಧಾರವಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಖಾತೆ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಮಾಹಿತಿಯನ್ನು ನೀಡಿದ್ದಾರೆ.

 

*****


(रिलीज़ आईडी: 2288809) आगंतुक पटल : 14
इस विज्ञप्ति को इन भाषाओं में पढ़ें: English , Urdu , हिन्दी , Tamil