ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ನಶಾ ಮುಕ್ತ ಭಾರತ ಅಭಿಯಾನದ (NMBA) 6ನೇ ವರ್ಷಾಚರಣೆಯ ನೆನಪಿಗಾಗಿ 2026ರ ಆಗಸ್ಟ್ 18 ರಂದು ಮದ್ಯ ಮತ್ತು ಮಾದಕ ದ್ರವ್ಯ ಮುಕ್ತ ರಾಷ್ಟ್ರೀಯ ಪ್ರತಿಜ್ಞಾವಿಧಿ ಸ್ವೀಕಾರ
ದೇಶಾದ್ಯಂತ ಅರಿವು ಮೂಡಿಸುವ ಅಭಿಯಾನಗಳ ಮೂಲಕ ನಶಾ ಮುಕ್ತ ಭಾರತ ಅಭಿಯಾನದಡಿಯಲ್ಲಿ 29.68 ಕೋಟಿಗೂ ಹೆಚ್ಚು ನಾಗರಿಕರಿಗೆ ತಲುಪಿದ ಸಂದೇಶ
प्रविष्टि तिथि:
23 JUL 2026 8:04PM by PIB Bengaluru
ನಶಾ ಮುಕ್ತ ಭಾರತ ಅಭಿಯಾನದ (NMBA) 6 ನೇ ವರ್ಷಾಚರಣೆಯ ಸವಿನೆನಪಿಗಾಗಿ 2026 ರ ಆಗಸ್ಟ್ 18 ರಂದು ಮದ್ಯ ಮತ್ತು ಮಾದಕ ದ್ರವ್ಯ ವಿರೋಧಿ ರಾಷ್ಟ್ರೀಯ ಸಮೂಹ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇದರ ನೋಡಲ್ ಸಚಿವಾಲಯವಾಗಿದ್ದು, ಪ್ರತ್ಯಕ್ಷ ಮತ್ತು ಆನ್‌ಲೈನ್ ಭಾಗವಹಿಸುವಿಕೆಯ ಮೂಲಕ 10 ರಿಂದ 12 ಕೋಟಿಗೂ ಹೆಚ್ಚು ನಾಗರಿಕರನ್ನು ಒಗೂಡಿಸುವ ಗುರಿಯನ್ನು ಹೊಂದಿದೆ.
ಈ ನಿಟ್ಟಿನಲ್ಲಿ, ನಶಾ ಮುಕ್ತ ಭಾರತ ಅಭಿಯಾನದ ಉದ್ದೇಶಗಳಿಗೆ ಅನುಗುಣವಾಗಿ ಪ್ರತ್ಯಕ್ಷ ಮತ್ತು ಆನ್‌ಲೈನ್ ಮಾರ್ಗದ ಮೂಲಕ ದೇಶಾದ್ಯಂತ ಪ್ರತಿಜ್ಞಾವಿಧಿಯಲ್ಲಿ ನಿಗದಿತ ಸಂಖ್ಯೆಯ ನಾಗರಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಕಾರ್ಯತಂತ್ರ ಮತ್ತು ಯೋಜನೆಯ ಕುರಿತು ಚರ್ಚಿಸಲು ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾದಕದ್ರವ್ಯ ತಡೆಗಟ್ಟುವಿಕೆ) ಡಾ. ಸಂದೀಪ್ ರೇವಾಜಿ ರಾಥೋಡ್ ಅವರ ಅಧ್ಯಕ್ಷತೆಯಲ್ಲಿ 2 ನೇ ಉನ್ನತ ಮಟ್ಟದ ಸಮನ್ವಯ ಸಭೆಯು ಇಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಿತು.
ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ, ಅನುಷ್ಠಾನ ಕಾರ್ಯತಂತ್ರಕ್ಕಾಗಿ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲಿಸಲಾಯಿತು. ದೇಶಾದ್ಯಂತ ಪ್ರತಿಜ್ಞಾವಿಧಿಗಾಗಿ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು, ಸ್ವಯಂಸೇವಕರು ಮತ್ತು ಇತರ ಪಾಲುದಾರರನ್ನು ಒಗೂಡಿಸುವಲ್ಲಿ ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳ ಪಾತ್ರದ ಕುರಿತು ಚರ್ಚಿಸಲಾಯಿತು.
ಸಾಮಾಜಿಕ, ಸ್ವಯಂಸೇವಾ, ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ಸಾಮಾಜಿಕ ಪ್ರಭಾವಿಗಳ ಹೊರತಾಗಿ ರೈಲ್ವೆ, ರಕ್ಷಣೆ, ಪೊಲೀಸ್, ಸಿಎಪಿಎಫ್, ಎನ್‌ಸಿಸಿ, ಆಯುಷ್, ಗ್ರಾಮೀಣಾಭಿವೃದ್ಧಿ, ಕಂದಾಯ ಸೇರಿದಂತೆ ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳ ಅಡಿಯಲ್ಲಿರುವ ಎಲ್ಲಾ ಸಂಯೋಜಿತ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಪಿಎಸ್‌ಯುಗಳು (PSUs) ಮತ್ತು ಕ್ಷೇತ್ರ ಮಟ್ಟದ ಘಟಕಗಳಲ್ಲಿ ಪ್ರತಿಜ್ಞಾವಿಧಿ ಸಮಾರಂಭಗಳನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಭಾಗವಹಿಸುವಿಕೆಯ ವಿವರಗಳು ಮತ್ತು ಪ್ರಸಾರವನ್ನು ಸಲ್ಲಿಸಲು ಏಕರೂಪದ ವರದಿ ವ್ಯವಸ್ಥೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಯೋಜನೆ ಮತ್ತು ಸಂಘಟಿತ ಕಾರ್ಯತಂತ್ರದ ಕುರಿತು ನೀಡಲಾದ ಪವರ್ ಪಾಯಿಂಟ್ ಪ್ರಸ್ತುತಿಯನ್ನು ವಿವರವಾಗಿ ಚರ್ಚಿಸಲಾಯಿತು, ಇದರಲ್ಲಿ ಸಂಬಂಧಿತ ಇಲಾಖೆಗಳು ಮತ್ತು ಸಚಿವಾಲಯಗಳ ಎಲ್ಲಾ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದರು.

ಎನ್‌ಎಂಬಿಎ (NMBA) ಪ್ರತಿಜ್ಞೆಯು ಮಾದಕ ದ್ರವ್ಯ ವ್ಯಸನಕ್ಕೆ ಒಳಗಾದವರನ್ನು ತಲುಪಲು ಸ್ವಯಂಸೇವಕರಾಗುವ ಒಂದು ಉಪಕ್ರಮವಾಗಿದೆ. ಜನರು ಮಾದಕ ದ್ರವ್ಯಗಳಿಂದ ದೂರವಿರಲು ಹೊಣೆಗಾರಿಕೆಯ ಭಾವನೆಯನ್ನು ಮೂಡಿಸಲು, ಜವಾಬ್ದಾರಿಯುತ ನಡವಳಿಕೆಯನ್ನು ಉತ್ತೇಜಿಸಲು ಮತ್ತು ಸಾಮಾನ್ಯ ಗುರಿಯತ್ತ ಒಟ್ಟಾಗಿ ಕೆಲಸ ಮಾಡಲು ಪಾಲುದಾರರನ್ನು ಪ್ರೋತ್ಸಾಹಿಸಲು ಏಕತೆ ಮತ್ತು ಬದ್ಧತೆಯ ಭಾವನೆಯನ್ನು ಬೆಳೆಸುವ ಉದ್ದೇಶವನ್ನು ಈ ಪ್ರತಿಜ್ಞೆಯು ಹೊಂದಿದೆ. ಮಾದಕದ್ರವ್ಯ ಮುಕ್ತ ಸಮಾಜವನ್ನು ನಿರ್ಮಿಸಲು ಸಕ್ರಿಯವಾಗಿ ಕೊಡುಗೆ ನೀಡಲು ಯುವಕರನ್ನು ಸಶಕ್ತಗೊಳಿಸಲು ಈ ಪ್ರತಿಜ್ಞೆಯು ಮತ್ತಷ್ಟು ಶ್ರಮಿಸುತ್ತದೆ.
ಎನ್‌ಎಂಬಿಎ (NMBA) ಇ-ಪ್ರತಿಜ್ಞೆಯ (e-Pledge) ಲಿಂಕ್ ಇಲ್ಲಿದೆ: https://nmba.dosje.gov.in/pledge-certificate?type=e-pledge
ಹೆಲ್ಪ್‌ಲೈನ್—14446 ರ ಮೂಲಕ ಮಾದಕದ್ರವ್ಯ ವ್ಯಸನ ಮುಕ್ತಿಯನ್ನು ಉತ್ತೇಜಿಸುವ ಮತ್ತು ಪ್ರೋತ್ಸಾಹಿಸುವ ಪ್ರಮುಖ ಸಂದೇಶದ ಮೇಲೆ ಗಮನಹರಿಸುವುದನ್ನು ಸಹ ಸಭೆಯು ಉಲ್ಲೇಖಿಸಿದೆ. ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ 'ನಶಾ ಮುಕ್ತಿ ಮಿತ್ರ'ರಾಗಿ ನೋಂದಾಯಿಸಿಕೊಳ್ಳುವ ಮೂಲಕ ನಾಗರಿಕರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವ ಚೈತನ್ಯವನ್ನು ಬೆಳೆಸಿಕೊಳ್ಳುವತ್ತ ಸಭೆಯು ಗಮನ ಹರಿಸಿತು:
https://nmba.dosje.gov.in/volunteer/registration
ದೇಶದಲ್ಲಿ ಮಾದಕದ್ರವ್ಯದ ಬೇಡಿಕೆಯನ್ನು ತಡೆಯಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2020 ರ ಆಗಸ್ಟ್ 15 ರಂದು ನಶಾ ಮುಕ್ತ ಭಾರತ ಅಭಿಯಾನವನ್ನು (NMBA) ಪ್ರಾರಂಭಿಸಿತು. ಸಾಮೂಹಿಕ ಕ್ರಮದ ತುರ್ತು ಅಗತ್ಯವನ್ನು ಗುರುತಿಸಿ, ಸಚಿವಾಲಯವು ತಡೆಗಟ್ಟುವಿಕೆ, ಮೌಲ್ಯಮಾಪನ, ಚಿಕಿತ್ಸೆ, ಪುನರ್ವಸತಿ, ನಂತರದ ಆರೈಕೆ, ಸಾರ್ವಜನಿಕ ಮಾಹಿತಿ ಪ್ರಸಾರ ಮತ್ತು ಸಮುದಾಯ ಅರಿವು ಸೇರಿದಂತೆ ವಿವಿಧ ಉಪಕ್ರಮಗಳನ್ನು ಸಂಘಟಿಸುತ್ತದೆ.
ಸಚಿವಾಲಯವು ಮಾದಕದ್ರವ್ಯ ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (NAPDDR) ಅಡಿಯಲ್ಲಿ ಸಮಗ್ರ ಮತ್ತು ಸಾಕ್ಷ್ಯ ಆಧಾರಿತ ಕಾರ್ಯತಂತ್ರವನ್ನು ಜಾರಿಗೆ ತರುತ್ತಿದೆ. ನವದೆಹಲಿಯ ಏಮ್ಸ್‌ನ (AIIMS) ರಾಷ್ಟ್ರೀಯ ಮಾದಕದ್ರವ್ಯ ಅವಲಂಬನೆ ಚಿಕಿತ್ಸಾ ಕೇಂದ್ರ (NDDTC) ನಡೆಸಿದ ಭಾರತದಲ್ಲಿ ಮಾದಕದ್ರವ್ಯ ಬಳಕೆಯ ಪ್ರಮಾಣ ಮತ್ತು ಮಾದರಿಯ ಕುರಿತಾದ ಮೊದಲ ರಾಷ್ಟ್ರೀಯ ಸಮೀಕ್ಷೆಯ ಸಂಶೋಧನೆಗಳನ್ನು ಈ ಕಾರ್ಯತಂತ್ರವು ಆಧರಿಸಿದೆ.
ಎನ್‌ಎಪಿಡಿಡಿಆರ್ (NAPDDR) ಅಡಿಯಲ್ಲಿ, ತಡೆಗಟ್ಟುವ ಶಿಕ್ಷಣ, ಅರಿವು ಮೂಡಿಸುವಿಕೆ, ಸಮಾಲೋಚನೆ, ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಸ್ವಯಂಸೇವಾ ಸಂಸ್ಥೆಗಳು (NGOs) ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಸಚಿವಾಲಯವು ಆರ್ಥಿಕ ನೆರವು ನೀಡುತ್ತದೆ.
ಇಂದಿನವರೆಗೂ, ಈ ಅಭಿಯಾನವು ದೇಶಾದ್ಯಂತ ನಡೆಸಲಾದ ಅರಿವು ಮೂಡಿಸುವ ಚಟುವಟಿಕೆಗಳ ಮೂಲಕ 11.43 ಕೋಟಿಗೂ ಹೆಚ್ಚು ಯುವಕರು ಮತ್ತು 8.05 ಕೋಟಿ ಮಹಿಳೆಯರು ಸೇರಿದಂತೆ 29.68 ಕೋಟಿಗೂ ಹೆಚ್ಚು ನಾಗರಿಕರಿಗೆ ತಲುಪಿದೆ. ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸಲು 1.25 ಲಕ್ಷಕ್ಕೂ ಹೆಚ್ಚು 'ನಶಾ ಮುಕ್ತಿ ಮಿತ್ರರು' (NMM) ಸಹ ಅಭಿಯಾನಕ್ಕೆ ಸೇರ್ಪಡೆಗೊಂಡಿದ್ದಾರೆ.
ಚಿಕಿತ್ಸಾ ಸೇವೆಗಳ ಲಭ್ಯತೆಯನ್ನು ಸುಧಾರಿಸಲು, ಸಚಿವಾಲಯವು 'NMBA 2.0' ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ್ದು, ನಾಗರಿಕರು ಹತ್ತಿರದ ವ್ಯಸನ ಮುಕ್ತಿ ಕೇಂದ್ರವನ್ನು ಪತ್ತೆಹಚ್ಚಲು ಅನುವು ಮಾಡಿಕೊಟ್ಟಿದೆ.
ಪುನರ್ವಸತಿ ಮೂಲಸೌಕರ್ಯವನ್ನು ವಿಸ್ತರಿಸುವ ಮೂಲಕ, ತಡೆಗಟ್ಟುವ ಮಧ್ಯಸ್ಥಿಕೆಗಳನ್ನು ಹೆಚ್ಚಿಸುವ ಮೂಲಕ, ಅನುಷ್ಠಾನದ ಪ್ರಕ್ರಿಯೆಗಳನ್ನು ಸರಳೀಕರಿಸುವ ಮೂಲಕ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಮಾದಕದ್ರವ್ಯ ಮುಕ್ತ ಮತ್ತು ಸಾಮಾಜಿಕವಾಗಿ ಒಳಗೊಳ್ಳುವ ಭಾರತದತ್ತ ಸರ್ಕಾರ ತನ್ನ ಬದ್ಧತೆಯನ್ನು ಬಲಪಡಿಸುವುದನ್ನು ಮುಂದುವರಿಸಿದೆ. ಸುಸ್ಥಿರ ಸಮುದಾಯ ಭಾಗವಹಿಸುವಿಕೆ, ಸುಧಾರಿತ ಆಡಳಿತ ಮತ್ತು ತಂತ್ರಜ್ಞಾನ ಆಧಾರಿತ ಸೇವಾ ವಿತರಣೆಯ ಮೂಲಕ, ಸಂಕಷ್ಟದಲ್ಲಿರುವ ಸಮುದಾಯಗಳನ್ನು ರಕ್ಷಿಸಲು ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು ಸಚಿವಾಲಯವು ಬದ್ಧವಾಗಿದೆ.
*****
(रिलीज़ आईडी: 2288670)
आगंतुक पटल : 3