ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್ ಪೋ (ಬಿ ಆರ್‌ ಇ ಎಸ್ ಇ) 2026 ನವೆಂಬರ್ 2 ರಿಂದ 5 ರವರೆಗೆ ನವದೆಹಲಿಯಲ್ಲಿ ನಡೆಯಲಿದೆ: ಶ್ರೀ ಪ್ರಲ್ಹಾದ್ ಜೋಶಿ


ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐ ಎಸ್‌ ಎ) ಸಭೆಯ 9ನೇ ಅಧಿವೇಶನ ಮತ್ತು ಹಸಿರು ಜಲಜನಕದ ಮೇಲಿನ 4ನೇ ಅಂತಾರಾಷ್ಟ್ರೀಯ ಸಮ್ಮೇಳನದೊಂದಿಗೆ ಶೃಂಗಸಭೆ ನಡೆಯಲಿದೆ

प्रविष्टि तिथि: 23 JUL 2026 7:23PM by PIB Bengaluru

ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್ ಪೋ (ಬಿ ಆರ್‌ ಇ ಎಸ್‌ ಇ) 2026 ನವೆಂಬರ್ 2 ರಿಂದ 5 ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಅವರು ಇಂದು ಇಲ್ಲಿ ನಡೆದ ಬಿ ಆರ್‌ ಇ ಎಸ್ ಇ 2026 ರ ಪೂರ್ವಭಾವಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ತಮ್ಮ ದಿಕ್ಸೂಚಿ ಭಾಷಣದಲ್ಲಿ, ಶ್ರೀ ಪ್ರಲ್ಹಾದ್ ಜೋಶಿ ಅವರು ಬಿ ಆರ್‌ ಇ ಎಸ್ ಇ 2026 ಪ್ರಥಮ ಬಾರಿಗೆ ಮೂರು ಪ್ರಮುಖ ನವೀಕರಿಸಬಹುದಾದ ಇಂಧನ ಕಾರ್ಯಕ್ರಮಗಳನ್ನು - ಬಿ ಆರ್‌ ಇ ಎಸ್ ಇ 2026, ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐ ಎಸ್‌ ಎ) ಸಭೆಯ 9ನೇ ಅಧಿವೇಶನ, ಮತ್ತು ಹಸಿರು ಜಲಜನಕದ ಮೇಲಿನ 4ನೇ ಅಂತಾರಾಷ್ಟ್ರೀಯ ಸಮ್ಮೇಳನ (ಐಸಿಜಿಎಚ್)‌ - ಒಂದೇ ವೇದಿಕೆಯಡಿಯಲ್ಲಿ ತರಲಿದೆ ಎಂದು ಹೇಳಿದರು. ಪ್ರಧಾನಮಂತ್ರಿಯವರು ಬಿ ಆರ್‌ ಇ ಎಸ್ ಇ 2026 ಅನ್ನು ಉದ್ಘಾಟಿಸಲು ಸಮ್ಮತಿಸಿದ್ದಾರೆ ಎಂದು ಶ್ರೀ ಜೋಶಿ ಮಾಹಿತಿ ನೀಡಿದರು. ಪ್ರಧಾನಮಂತ್ರಿಯವರ ಉಪಸ್ಥಿತಿಯು 'ವಿಕಸಿತ ಭಾರತ'ದ ಪ್ರಮುಖ ಸ್ತಂಭವಾಗಿ ಹಾಗೂ ಜಾಗತಿಕ ಸುಸ್ಥಿರ ಅಭಿವೃದ್ಧಿಗೆ ಭಾರತದ ಕೊಡುಗೆಯಾಗಿ ನವೀಕರಿಸಬಹುದಾದ ಇಂಧನಕ್ಕೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಶೃಂಗಸಭೆಯು ಪ್ರಮುಖ ನವೀಕರಿಸಬಹುದಾದ ಇಂಧನ ಅಭಿವೃದ್ಧಿದಾರರು, ತಂತ್ರಜ್ಞಾನ ಕಂಪನಿಗಳು, ತಯಾರಕರು, ಬ್ಯಾಟರಿ ಸಂಗ್ರಹಣೆ ಸಂಸ್ಥೆಗಳು, ಹಸಿರು ಜಲಜನಕದ ಪ್ರವರ್ತಕರು, ಹಣಕಾಸು ಸಂಸ್ಥೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಹೂಡಿಕೆದಾರರನ್ನು ಒಂದೇ ಸೂರಿನಡಿ ತರಲಿದ್ದು, ಸಂಪೂರ್ಣ ನವೀಕರಿಸಬಹುದಾದ ಇಂಧನ ಮೌಲ್ಯ ಸರಪಳಿಯ ಪ್ರಾತಿನಿಧ್ಯವನ್ನು ಖಚಿತಪಡಿಸಲಿದೆ ಎಂದು ಶ್ರೀ ಜೋಶಿ ತಿಳಿಸಿದರು. ಈ ಶೃಂಗಸಭೆಯನ್ನು ನಿಜವಾದ ಜಾಗತಿಕ ದೃಷ್ಟಿಕೋನದೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು. ಬಿ ಆರ್‌ ಇ ಎಸ್ ಶೃಂಗಸಭೆಗೆ 34 ದೇಶಗಳಿಗೆ ಆಹ್ವಾನ ನೀಡಲಾಗಿದ್ದರೆ, ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಸಭೆಗಾಗಿ 128 ದೇಶಗಳನ್ನು ಆಹ್ವಾನಿಸಿದೆ ಎಂದು ಅವರು ಹೇಳಿದರು.

ಜಾಗತಿಕ ನವೀಕರಿಸಬಹುದಾದ ಇಂಧನ ಸಮುದಾಯವನ್ನು ಒಂದೆಡೆ ಸೇರಿಸಲು ಭಾರತಕ್ಕೆ ಸಾಧ್ಯವಾಗಿರುವುದು, ಜಾಗತಿಕ ಮಟ್ಟದಲ್ಲಿ ಭಾರತದ ಕಾರ್ಯಕ್ಷಮತೆಯ ಬಲವಾದ ದಾಖಲೆ ಹಾಗೂ ವಿಶ್ವಾಸಾರ್ಹತೆಯ ಆಧಾರದ ಮೇಲೆ ಎಂದು ಶ್ರೀ ಜೋಶಿ ಒತ್ತಿಹೇಳಿದರು. ಭಾರತವು ಶೀಘ್ರದಲ್ಲೇ 300 ಗಿಗಾವಾಟ್ ಗಿಂತಲೂ ಹೆಚ್ಚಿನ ಪಳೆಯುಳಿಕೆಯೇತರ ಇಂಧನ ಸ್ಥಾಪಿತ ಸಾಮರ್ಥ್ಯದ ಮೈಲಿಗಲ್ಲನ್ನು ದಾಟಲಿದೆ ಎಂದು ಅವರು ತಿಳಿಸಿದರು. ಮುಂಬರುವ ವಾರಗಳಲ್ಲಿ 'ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆ'ಯ ಫಲಾನುಭವಿ ಕುಟುಂಬಗಳ ಸಂಖ್ಯೆ 50 ಲಕ್ಷವನ್ನು ದಾಟುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಭಾರತ್‌ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್ ಪೋ 2026 ಅನ್ನು ಜಾಗತಿಕ ನವೀಕರಿಸಬಹುದಾದ ಇಂಧನ ಸಮುದಾಯದೊಂದಿಗೆ ಭಾರತದ ತೊಡಗಿಸಿಕೊಳ್ಳುವಿಕೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಸಚಿವರು ಬಣ್ಣಿಸಿದರು. ಈ ಶೃಂಗಸಭೆಯು ಕ್ಷೇತ್ರದ ಬೆಳವಣಿಗೆ, ಉದಯೋನ್ಮುಖ ಅವಕಾಶಗಳು ಮತ್ತು ಸ್ವಚ್ಛ ಇಂಧನ ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಜಾಗತಿಕ ಸಹಯೋಗಕ್ಕೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. 2026 ರ ನವೆಂಬರ್ 2 ರಿಂದ 5 ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುವ ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವದಾದ್ಯಂತದ ಸರ್ಕಾರಗಳು, ಉದ್ಯಮ ಮುಖಂಡರು, ಹೂಡಿಕೆದಾರರು, ಸಂಶೋಧಕರು, ನಾವೀನ್ಯಕಾರರು, ಉದ್ಯಮಿಗಳು ಮತ್ತು ಅಭಿವೃದ್ಧಿ ಪಾಲದಾರರಿಗೆ ಆಹ್ವಾನ ನೀಡಿದರು. ಈ ಶೃಂಗಸಭೆಯು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೊಸ ಸಹಭಾಗಿತ್ವವನ್ನು ಹೆಚ್ಚಿಸುತ್ತದೆ, ಹೂಡಿಕೆಗಳನ್ನು ಉತ್ತೇಜಿಸುತ್ತದೆ, ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಬಲಪಡಿಸುತ್ತದೆ ಎಂಬ ಭರವಸೆಯನ್ನು ಶ್ರೀ ಜೋಶಿ ವ್ಯಕ್ತಪಡಿಸಿದರು.

ಪೂರ್ವಭಾವಿ ಕಾರ್ಯಕ್ರಮದಲ್ಲಿ ಶ್ರೀ ಜೋಶಿ ಅವರು ಬಿ ಆರ್‌ ಇ ಎಸ್ ಇ 2026 ರ ಅಧಿಕೃತ ಲೋಗೋ 'ಊರ್ಜಾ ಚಕ್ರ'ವನ್ನು ಅನಾವರಣಗೊಳಿಸಿದರು ಹಾಗೂ ಶೃಂಗಸಭೆಯ ಅಧಿಕೃತ ಡಿಜಿಟಲ್ ಪೋರ್ಟಲ್ ಮತ್ತು ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಿದರು.

ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಅವರು, ಭಾರತದ ನವೀಕರಿಸಬಹುದಾದ ಇಂಧನ ಪರಿವರ್ತನೆಯು ದೇಶಾದ್ಯಂತದ ರಾಜ್ಯಗಳ ಸಾಮೂಹಿಕ ಪ್ರಯತ್ನಗಳಿಂದ ನಡೆಸಲ್ಪಡುತ್ತಿದೆ ಎಂದು ಹೇಳಿದರು. ರಾಜಸ್ಥಾನವು ತನ್ನ ಬೃಹತ್ ಸೌರ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದೆ ಮತ್ತು ಗುಜರಾತ್ ಖಾವಡಾದಲ್ಲಿ ವಿಶ್ವದ ಅತಿದೊಡ್ಡ ಹೈಬ್ರಿಡ್ ನವೀಕರಿಸಬಹುದಾದ ಇಂಧನ ಪಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ, ಹಾಗೆಯೇ ಇತರ ಹಲವು ರಾಜ್ಯಗಳು ಜಲವಿದ್ಯುತ್, ಫ್ಲೋಟಿಂಗ್ (ತೇಲುವ) ಸೌರ ವ್ಯವಸ್ಥೆಗಳು, ಬಯೋಮಾಸ್ ಮತ್ತು ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನವನ್ನು ಮುನ್ನಡೆಸುತ್ತಿದ್ದು, ಇದು ಸಹಕಾರಿ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಮಾತನಾಡಿ, ಭಾರತದ ನವೀಕರಿಸಬಹುದಾದ ಇಂಧನ ಪರಿವರ್ತನೆಯು ನೀತಿ ಸ್ಥಿರತೆ, ಮಾರುಕಟ್ಟೆ ಸೃಷ್ಟಿ, ಪರಿಸರ ವ್ಯವಸ್ಥೆಯ ಅಭಿವೃದ್ಧಿ ಮತ್ತು ಪ್ರಸರಣ ಮೂಲಸೌಕರ್ಯ ಎಂಬ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ನಿರ್ಮಿತವಾಗಿದೆ ಎಂದು ಹೇಳಿದರು. ಇಂಧನ ಪರಿವರ್ತನೆಯ ಮುಂದಿನ ಹಂತವು ಹೈಬ್ರಿಡ್ ನವೀಕರಿಸಬಹುದಾದ ಇಂಧನ ಯೋಜನೆಗಳು, ಬ್ಯಾಟರಿ ಇಂಧನ ಸಂಗ್ರಹ ವ್ಯವಸ್ಥೆಗಳು, ತೇಲುವ ಸೌರ ವ್ಯವಸ್ಥೆಗಳು, ಅಗ್ರಿವೋಲ್ಟಾಯಿಕ್ಸ್ ಮತ್ತು ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಮೂಲಕ ವ್ಯವಸ್ಥೆಯ ಸಾಮರ್ಥ್ಯಗಳನ್ನು ಬಲಪಡಿಸುವುದರ ಮೇಲೆ ಗಮನ ಹರಿಸುತ್ತದೆ ಎಂದು ಅವರು ಹೇಳಿದರು. ಭಾರತ್‌ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್ ಪೋ (ಬಿ ಆರ್‌ ಇ ಎಸ್ ಇ) 2026 ಸ್ವಚ್ಛ ಇಂಧನದಲ್ಲಿ ಹೂಡಿಕೆಗಳು, ತಂತ್ರಜ್ಞಾನ ಸಹಭಾಗಿತ್ವ ಮತ್ತು ಸಹಯೋಗವನ್ನು ವೇಗಗೊಳಿಸಲು ಸರ್ಕಾರಗಳು, ಉದ್ಯಮಗಳು, ಹೂಡಿಕೆದಾರರು, ನಾವೀನ್ಯಕಾರರು ಮತ್ತು ಅಂತಾರಾಷ್ಟ್ರೀಯ ಪಾಲುದಾರರಿಗೆ ಸಮಾನ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಹಿನ್ನೆಲೆ ಟಿಪ್ಪಣಿ ಲಿಂಕ್: https://drive.google.com/file/d/1N1nfvYVsI_8q-u2-w5foe2N5KzMw06cG/view?usp=sharing

 

*****

 


(रिलीज़ आईडी: 2288580) आगंतुक पटल : 32
इस विज्ञप्ति को इन भाषाओं में पढ़ें: English , हिन्दी , Gujarati , Tamil