ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಬೆಂಗಳೂರಿನಲ್ಲಿ ವೈಟ್ ರ‍್ಯಾಬಿಟ್ ತಂತ್ರಜ್ಞಾನ ಆಧಾರಿತ ಭಾರತೀಯ ಪ್ರಮಾಣಿತ ಸಮಯ ಪ್ರಸರಣ ಪ್ರಾತ್ಯಕ್ಷಿಕೆ ಜಾಲಕ್ಕೆ ಶ್ರೀ ಪ್ರಲ್ಹಾದ್ ಜೋಶಿ ಚಾಲನೆ


ಪ್ರಾತ್ಯಕ್ಷಿಕೆ ಜಾಲವು ನಿರ್ಣಾಯಕ ಮೂಲಸೌಕರ್ಯಗಳಿಗಾಗಿ ಭಾರತೀಯ ಪ್ರಮಾಣಿತ ಸಮಯದ ಸುರಕ್ಷಿತ ಮತ್ತು ಅತ್ಯಂತ ನಿಖರವಾದ ಪ್ರಸರಣವನ್ನು ಶಕ್ತಗೊಳಿಸುತ್ತದೆ

प्रविष्टि तिथि: 18 JUL 2026 5:37PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಬೆಂಗಳೂರಿನ ಪ್ರಾದೇಶಿಕ ಉಲ್ಲೇಖ ಪ್ರಮಾಣಿತ ಪ್ರಯೋಗಾಲಯದಲ್ಲಿ (ಆರ್ ಆರ್ ಎಸ್ ಎಲ್) 16 ಜುಲೈ 2026 ರಂದು ವೈಟ್ ರ‍್ಯಾಬಿಟ್ ತಂತ್ರಜ್ಞಾನ ಆಧಾರಿತ ಭಾರತೀಯ ಪ್ರಮಾಣಿತ ಸಮಯ (ಐಎಸ್ ಟಿ) ಪ್ರಸರಣ ಪ್ರಾತ್ಯಕ್ಷಿಕೆ ಜಾಲಕ್ಕೆ ಚಾಲನೆ ನೀಡಿದರು.

ಗ್ರಾಹಕ ವ್ಯವಹಾರಗಳ ಇಲಾಖೆ, ಸಿಎಸ್ ಐಆರ್-ರಾಷ್ಟ್ರೀಯ ಭೌತಿಕ ಪ್ರಯೋಗಾಲಯ  ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಪ್ರಾತ್ಯಕ್ಷಿಕೆ ಜಾಲವು, ಪ್ರೆಸಿಶನ್ ಟೈಮ್ ಪ್ರೊಟೊಕಾಲ್ (ಪಿಟಿಪಿ) ಆಧಾರಿತ ವೈಟ್ ರ‍್ಯಾಬಿಟ್  ತಂತ್ರಜ್ಞಾನವನ್ನು ಬಳಸಿಕೊಂಡು ಯುಟಿಸಿ (ಎನ್ ಪಿ ಎಲ್ ಐ) -ಪತ್ತೆಹಚ್ಚಬಹುದಾದ ಭಾರತೀಯ ಪ್ರಮಾಣಿತ ಸಮಯದ ಸುರಕ್ಷಿತ ಪ್ರಸರಣವನ್ನು ಶಕ್ತಗೊಳಿಸುತ್ತದೆ.

ಪ್ರಾತ್ಯಕ್ಷಿಕೆ ಜಾಲದ ಪ್ರಮುಖ ಲಕ್ಷಣಗಳು

  • ಯುಟಿಸಿ (ಎನ್ ಪಿ ಎಲ್ ಐ) ಪತ್ತೆಹಚ್ಚಬಹುದಾದ ಭಾರತೀಯ ಪ್ರಮಾಣಿತ ಸಮಯದ ಸುರಕ್ಷಿತ ಪ್ರಸರಣವನ್ನು ಶಕ್ತಗೊಳಿಸುತ್ತದೆ.
  • ಪ್ರೆಸಿಶನ್ ಟೈಮ್ ಪ್ರೊಟೊಕಾಲ್ (ಪಿಟಿಪಿ) ಆಧಾರಿತ ವೈಟ್  ರ‍್ಯಾಬಿಟ್   ತಂತ್ರಜ್ಞಾನವನ್ನು ಬಳಸುತ್ತದೆ.
  • ಅತ್ಯಂತ ನಿಖರವಾದ, ಸುರಕ್ಷಿತವಾದ ಮತ್ತು ಚೇತರಿಸಿಕೊಳ್ಳುವ ಸಾಮರ್ಥ್ಯವುಳ್ಳ ಸಮಯದ ಸಿಂಕ್ರೊನೈಸೇಶನ್ (ಹೊಂದಾಣಿಕೆ) ಅನ್ನು ಒದಗಿಸುತ್ತದೆ.
  • ಈ ಕೆಳಗಿನ ನಿರ್ಣಾಯಕ ವಲಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ:
  • ಬ್ಯಾಂಕಿಂಗ್ ಮತ್ತು ಹಣಕಾಸು ಮಾರುಕಟ್ಟೆಗಳು
  • ದೂರಸಂಪರ್ಕ 
  • ವಿದ್ಯುತ್ ವ್ಯವಸ್ಥೆಗಳು
  • ಸಾರಿಗೆ
  • ಡಿಜಿಟಲ್ ಆಡಳಿತ
  • ಇತರ ಕಾರ್ಯತಂತ್ರದ ಮೂಲಸೌಕರ್ಯಗಳು

ಗ್ರಾಹಕ ವ್ಯವಹಾರಗಳ ಇಲಾಖೆಯು ಸಿಎಸ್ಐಆರ್-ಎನ್ ಪಿಎಲ್, ಇಸ್ರೋ, ಸೆಬಿ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್, ಬಿಎಸ್ ಎನ್ ಎಲ್   ಮತ್ತು ಇತರ ಪಾಲುದಾರರ ಸಹಯೋಗದೊಂದಿಗೆ, ವೈಟ್ ತಂತ್ರಜ್ಞಾನವನ್ನು ಬಳಸಿಕೊಂಡು ಆರ್ ಆರ್ ಎಸ್ ಎಲ್ ಬೆಂಗಳೂರು ಮತ್ತು ಎನ್ ಎಸ್ ಇ ಚೆನ್ನೈ ನಡುವೆ ಭಾರತೀಯ ಪ್ರಮಾಣಿತ ಸಮಯದ ಸುರಕ್ಷಿತ ಪ್ರಸರಣದ ಪರಿಶೀಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು. ಇದಕ್ಕೂ ಮುನ್ನ, ಶ್ರೀ ಪ್ರಲ್ಹಾದ್ ಜೋಶಿ ಅವರು ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಭೇಟಿ ನೀಡಿ, ಗ್ರಾಹಕ ವ್ಯವಹಾರಗಳ ಇಲಾಖೆಯು ಸಿಎಸ್ ಐಆರ್-ರಾಷ್ಟ್ರೀಯ ಭೌತಿಕ ಪ್ರಯೋಗಾಲಯ, ಇಸ್ರೋ ಮತ್ತು ಇತರ ಪಾಲುದಾರ ಸಂಸ್ಥೆಗಳ ಸಹಯೋಗದೊಂದಿಗೆ ಜಾರಿಗೊಳಿಸುತ್ತಿರುವ ಭಾರತೀಯ ಪ್ರಮಾಣಿತ ಸಮಯ ಪ್ರಸರಣ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು.

ಭೇಟಿಯ ಸಂದರ್ಭದಲ್ಲಿ, ಕೇಂದ್ರ ಸಚಿವರು ಭಾರತೀಯ ಪ್ರಮಾಣಿತ ಸಮಯದ ಪ್ರಸರಣಕ್ಕಾಗಿ ಅಭಿವೃದ್ಧಿಪಡಿಸಲಾದ ಸೌಲಭ್ಯಗಳನ್ನು ಪರಿಶೀಲಿಸಿದರು ಮತ್ತು ಯೋಜನೆಗೆ ಸಂಬಂಧಿಸಿದ ವಿಜ್ಞಾನಿಗಳು ಹಾಗೂ ಎಂಜಿನಿಯರುಗಳೊಂದಿಗೆ ಮಾತನಾಡಿದರು. ಸ್ವದೇಶಿ, ಸುರಕ್ಷಿತ ಮತ್ತು ಚೇತರಿಸಿಕೊಳ್ಳುವ ಸಮಯ ಪ್ರಸರಣ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಇಸ್ರೋದ ಕೊಡುಗೆಯನ್ನು ಅವರು ಶ್ಲಾಘಿಸಿದರು ಮತ್ತು ಸರ್ಕಾರದ "ಒಂದು ರಾಷ್ಟ್ರ, ಒಂದು ಸಮಯ"  ಉಪಕ್ರಮವನ್ನು ಮುನ್ನಡೆಸುವಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಸಿಎಸ್ ಐ ಆರ್-ರಾಷ್ಟ್ರೀಯ ಭೌತಿಕ ಪ್ರಯೋಗಾಲಯದೊಂದಿಗಿನ ಅದರ ಸಹಯೋಗವನ್ನು ಶ್ಲಾಘಿಸಿದರು.

ಶ್ರೀ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಭಾರತೀಯ ಪ್ರಮಾಣಿತ ಸಮಯದ ನಿಖರ ಮತ್ತು ಸುರಕ್ಷಿತ ಪ್ರಸರಣವು ದೇಶದ ಪ್ರಮುಖ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು. ವಿಶ್ವಾಸಾರ್ಹ ರಾಷ್ಟ್ರೀಯ ಸಮಯದ ಮೂಲವು ಇವುಗಳನ್ನು  ನೀಡುತ್ತದೆ ಎಂದು ಅವರು ತಿಳಿಸಿದರು:

  • ಗ್ರಾಹಕ ಸಂರಕ್ಷಣೆಯನ್ನು ಬಲಪಡಿಸುತ್ತದೆ.
  • ನ್ಯಾಯೋಚಿತ ವ್ಯಾಪಾರವನ್ನು ಬೆಂಬಲಿಸುತ್ತದೆ.
  • ಸೈಬರ್ ಚೇತರಿಕೆ ಸಾಮರ್ಥ್ಯವನ್ನು   ಹೆಚ್ಚಿಸುತ್ತದೆ.
  • ಹಣಕಾಸು ಮಾರುಕಟ್ಟೆಗಳ ವಿಶ್ವಾಸಾರ್ಹತೆಯನ್ನು ಸುಧಾರಿಸುತ್ತದೆ.
  • ದೂರಸಂಪರ್ಕ ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಸುಧಾರಿಸುತ್ತದೆ.
  • ಡಿಜಿಟಲ್ ಆಡಳಿತವನ್ನು ಬಲಪಡಿಸುತ್ತದೆ.

ಈ ಉಪಕ್ರಮವು ತಾಂತ್ರಿಕ ಸ್ವಾವಲಂಬನೆ ಮತ್ತು ವಿಕಸಿತ ಭಾರತ ದೃಷ್ಟಿಕೋನಕ್ಕೆ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದರು. ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿಧಿ ಖಾರೆ ಅವರು ಮಾತನಾಡಿ, ಭಾರತೀಯ ಪ್ರಮಾಣಿತ ಸಮಯ ಪ್ರಸರಣ ಯೋಜನೆಯು ಸುರಕ್ಷಿತ, ಚೇತರಿಸಿಕೊಳ್ಳುವ ಮತ್ತು ಸ್ವದೇಶಿ ರಾಷ್ಟ್ರೀಯ ಸಮಯ ಸಿಂಕ್ರೊನೈಸೇಶನ್ ಚೌಕಟ್ಟನ್ನು ಸ್ಥಾಪಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. ಕಾನೂನು ಮಾಪನಶಾಸ್ತ್ರದಲ್ಲಿ ನಡೆಯುತ್ತಿರುವ ಸುಧಾರಣೆಗಳೊಂದಿಗೆ ಈ ಉಪಕ್ರಮವು ಗ್ರಾಹಕರ ವಿಶ್ವಾಸವನ್ನು ಬಲಪಡಿಸುತ್ತದೆ, ವ್ಯವಹಾರ ನಡೆಸುವ ಸುಲಭತೆಯನ್ನು ಬೆಂಬಲಿಸುತ್ತದೆ ಮತ್ತು ಭಾರತದ ಡಿಜಿಟಲ್ ರೂಪಾಂತರಕ್ಕೆ ಕೊಡುಗೆ ನೀಡುತ್ತದೆ ಎನ್ನುವುದರ ಬಗ್ಗೆ ಅವರು ಗಮನ ಸೆಳೆದರು.

"ಒಂದು ರಾಷ್ಟ್ರ, ಒಂದು ಸಮಯ" ಉಪಕ್ರಮದ ಅಡಿಯಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಸ್ರೋ, ಸಿಎಸ್ ಐಆರ್-ರಾಷ್ಟ್ರೀಯ ಭೌತಿಕ ಪ್ರಯೋಗಾಲಯ, ಆರ್ ಆರ್ ಎಸ್ ಎಲ್ ಬೆಂಗಳೂರು ಮತ್ತು ಎಲ್ಲಾ ಪಾಲುದಾರ ಸಂಸ್ಥೆಗಳ ವಿಜ್ಞಾನಿಗಳು, ಎಂಜಿನಿಯರುಗಳು ಮತ್ತು ತಾಂತ್ರಿಕ ತಂಡಗಳನ್ನು ಅಭಿನಂದಿಸಿದರು. ಈ ಯೋಜನೆಯು ಭಾರತದ ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ, ವಿದೇಶಿ ಸಮಯದ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ನಿರ್ಣಾಯಕ ಡಿಜಿಟಲ್ ಮೂಲಸೌಕರ್ಯವನ್ನು ಬೆಂಬಲಿಸುತ್ತದೆ ಮತ್ತು ನಿಖರ ಸಮಯ ಪ್ರಸರಣದಲ್ಲಿ ಭಾರತವನ್ನು ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷರಾದ ಡಾ. ವಿ. ನಾರಾಯಣನ್; ಇಸ್ರೋದ ಇಸ್ಟ್ರಾಕ್ (ISTRAC) ನಿರ್ದೇಶಕರಾದ ಶ್ರೀ ರಾಘವೇಂದ್ರ ಎಂ. ಆರ್.; ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿಧಿ ಖಾರೆ; ಇಸ್ರೋ, ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು ಸಿಎಸ್ ಐಆರ್-ರಾಷ್ಟ್ರೀಯ ಭೌತಿಕ ಪ್ರಯೋಗಾಲಯದ   ಹಿರಿಯ ವಿಜ್ಞಾನಿಗಳು ಮತ್ತು ಅಧಿಕಾರಿಗಳು; ಹಾಗೂ ಬಿಎಸ್ ಎನ್ ಎಲ್, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಮತ್ತು ಸೆಬಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

 

*****


(रिलीज़ आईडी: 2286452) आगंतुक पटल : 17
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil