ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ವಿಮಾನ ಬುಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ‘ಡಾರ್ಕ್ ಪ್ಯಾಟರ್ನ್ಸ್’ (ಮೋಸದ ವಿನ್ಯಾಸ) ಬಳಸಿದ್ದಕ್ಕಾಗಿ ಸ್ಪೈಸ್ ಜೆಟ್ ಸಂಸ್ಥೆಗೆ ₹1 ಲಕ್ಷ ದಂಡ ವಿಧಿಸಿದ ಸಿಸಿಪಿಎ
ಗ್ರಾಹಕರ ರಕ್ಷಣೆ ಕಾಯ್ದೆ 2019, ಗ್ರಾಹಕರ ರಕ್ಷಣೆ (ಇ-ಕಾಮರ್ಸ್) ನಿಯಮಗಳು 2020 ರ ನಿಯಮ 4(9), ಮತ್ತು ಡಾರ್ಕ್ ಪ್ಯಾಟರ್ನ್ ಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾರ್ಗಸೂಚಿಗಳು 2023 ಅನ್ನು ಈ ನಡವಳಿಕೆಗಳು ಉಲ್ಲಂಘಿಸಿವೆ ಎಂದು ಸಿಸಿಪಿಎ ಹೇಳಿದೆ
प्रविष्टि तिथि:
17 JUL 2026 6:46PM by PIB Bengaluru
ಮುಖ್ಯ ಆಯುಕ್ತರಾದ ಶ್ರೀಮತಿ ನಿಧಿ ಖರೆ ಮತ್ತು ಆಯುಕ್ತರಾದ ಶ್ರೀ ಅನುಪಮ್ ಮಿಶ್ರಾ ಅವರ ನೇತೃತ್ವದ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (ಸಿಸಿಪಿಎ), ಸ್ಪೈಸ್ ಜೆಟ್ ಲಿಮಿಟೆಡ್ ಸಂಸ್ಥೆಯು ತನ್ನ ವಿಮಾನ ಬುಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸಾಮಾನ್ಯವಾಗಿ ‘ಡಾರ್ಕ್ ಪ್ಯಾಟರ್ನ್ಸ್’ ಎಂದು ಕರೆಯಲಾಗುವ ಮೋಸದ ವಿನ್ಯಾಸ ವಿಧಾನಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ₹1 ಲಕ್ಷ ದಂಡ ವಿಧಿಸಿದೆ.
ಸಿಸಿಪಿಎ ಗಮನಿಸಿದ ಅಂಶಗಳು:
- ಗ್ರಾಹಕರು ತಾವಾಗಿಯೇ ಆಯ್ಕೆ ಮಾಡದಿದ್ದರೂ, ಮೊದಲೇ ‘ಟಿಕ್’ ಮಾಡಲಾದ ಬಾಕ್ಸ್ ಮೂಲಕ ಸ್ವಯಂಚಾಲಿತವಾಗಿ ಅವರನ್ನು ‘ಸ್ಪೈಸ್ ಕ್ಲಬ್ ಲಾಯಲ್ಟಿ ಪ್ರೋಗ್ರಾಂ’ಗೆ ಸೇರಿಸಲಾಗುತ್ತಿತ್ತು.
- ಗ್ರಾಹಕರು ಯಾವುದೇ ಸಮ್ಮತಿ ಸೂಚಿಸದಿದ್ದರೂ, ಪ್ರಚಾರದ ಸಂದೇಶಗಳನ್ನು ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂಬಂತೆ ‘ಡಿಫಾಲ್ಟ್’ (ಮೊದಲೇ ಆಯ್ಕೆಯಾಗಿರುವ) ಆಯ್ಕೆಯನ್ನು ಇರಿಸಲಾಗಿತ್ತು.
- ಸಿಸಿಪಿಎ ನೋಟಿಸ್ ನೀಡಿದ ನಂತರವೂ, ಕಂಪನಿಯು ತನ್ನ ಹಳೆಯ ವಿಧಾನವನ್ನು ಬದಲಾಯಿಸಿ, ಟೆಕ್ಸ್ಟ್ ಮೆಸೇಜ್, ವಾಟ್ಸಾಪ್ ಮತ್ತು ಇಮೇಲ್ ಮೂಲಕ ಮುಂದಿನ ಸಂದೇಶಗಳನ್ನು ಕಳುಹಿಸಲು ಮತ್ತೊಂದು ‘ಮೊದಲೇ ಟಿಕ್ ಮಾಡಿದ ಬಾಕ್ಸ್’ ಅನ್ನು ಬಳಸಲಾರಂಭಿಸಿತು. ಈ ಮೂಲಕ ಅದೇ ಅಭ್ಯಾಸವನ್ನು ಬೇರೆ ರೂಪದಲ್ಲಿ ಮುಂದುವರಿಸಿತು.
ವಿಚಾರಣೆಯ ಸಂದರ್ಭದಲ್ಲಿ, ಈ ಸಮಸ್ಯೆಯು ತಾಂತ್ರಿಕ ದೋಷದಿಂದ ಸಂಭವಿಸಿದೆ ಎಂದು ಸ್ಪೈಸ್ ಜೆಟ್ ಹೇಳಿದೆ. ಅಗತ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಅದನ್ನು ಶಾಶ್ವತವಾಗಿ ಮುಂದುವರಿಸಲಾಗುವುದು ಎಂಬುದನ್ನು ಖಚಿತಪಡಿಸುವ ಮುಚ್ಚಳಿಕೆಯನ್ನು ನೀಡುವಂತೆ ಕಂಪನಿಗೆ ಸೂಚಿಸಲಾಯಿತು.
ಸ್ಪೈಸ್ ಜೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ನಲ್ಲಿ ಸಿಸಿಪಿಎ ಪತ್ತೆಹಚ್ಚಿದ ಡಾರ್ಕ್ ಪ್ಯಾಟರ್ನ್ ಗಳು:
- ಬಲವಂತದ ಕ್ರಮ – ಮೊದಲೇ ಟಿಕ್ ಮಾಡಿದ ಬಾಕ್ಸ್ ಮೂಲಕ ಗ್ರಾಹಕರನ್ನು ಸ್ವಯಂಚಾಲಿತವಾಗಿ ಸ್ಪೈಸ್ ಕ್ಲಬ್ ಲಾಯಲ್ಟಿ ಪ್ರೋಗ್ರಾಂಗೆ ಸೇರಿಸುವುದು.
- ಇಂಟರ್ಫೇಸ್ ಹಸ್ತಕ್ಷೇಪ) – ಕಂಪನಿಯು ತನಗೆ ಅನುಕೂಲಕರವಾದ ಆಯ್ಕೆಯನ್ನೇ ಮೊದಲ ಆದ್ಯತೆಯಾಗಿ (ಡಿಫಾಲ್ಟ್ ಆಗಿ) ಪ್ರದರ್ಶಿಸುವುದು, ಆ ಮೂಲಕ ಗ್ರಾಹಕರ ನಿರ್ಧಾರದ ಮೇಲೆ ಪ್ರಭಾವ ಬೀರಲು ಯತ್ನಿಸುವುದು.
- ಗೊಂದಲದ ಪ್ರಶ್ನೆ – ಗ್ರಾಹಕರನ್ನು ದಾರಿ ತಪ್ಪಿಸುವ ಸಾಧ್ಯತೆಯಿರುವ, ಗೊಂದಲದ ಮತ್ತು ನಕಾರಾತ್ಮಕ ಪದಗಳನ್ನೊಳಗೊಂಡ ಸಮ್ಮತಿ ಭಾಷೆಯನ್ನು ಬಳಸುವುದು.
ಇಂತಹ ಅಭ್ಯಾಸಗಳು ಗ್ರಾಹಕರ ಸ್ವತಂತ್ರ ನಿರ್ಧಾರದ ಹಕ್ಕನ್ನು ಕಸಿದುಕೊಳ್ಳುತ್ತವೆ, ಸರಿಯಾದ ಮಾಹಿತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳುವುದನ್ನು ಕುಂಠಿತಗೊಳಿಸುತ್ತವೆ ಮತ್ತು ನ್ಯಾಯಯುತ ಹಾಗೂ ಪಾರದರ್ಶಕ ಗ್ರಾಹಕ ಸೇವೆಯ ತತ್ವಗಳಿಗೆ ವಿರುದ್ಧವಾಗಿವೆ ಎಂದು ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ.
ಕಂಪನಿಯ ಈ ನಡವಳಿಕೆಯು ಗ್ರಾಹಕ ರಕ್ಷಣೆ ಕಾಯ್ದೆ 2019 ರ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ಧತಿಗಳು, ಅನ್ಯಾಯದ ಒಪ್ಪಂದಗಳು ಮತ್ತು ದಾರಿ ತಪ್ಪಿಸುವ ಮಾಹಿತಿಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಸಿಸಿಪಿಎ ಪತ್ತೆಹಚ್ಚಿದೆ. ಅಷ್ಟೇ ಅಲ್ಲದೆ, ಗ್ರಾಹಕರ ಸಮ್ಮತಿಯನ್ನು ಸ್ಪಷ್ಟ ಮತ್ತು ಸಕಾರಾತ್ಮಕ ಕ್ರಮದ ಮೂಲಕವೇ ಪಡೆಯಬೇಕು ಎಂದು ಕಡ್ಡಾಯಗೊಳಿಸುವ ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳು 2020 ರ ನಿಯಮ 4(9) ಮತ್ತು ಡಾರ್ಕ್ ಪ್ಯಾಟರ್ನ್ ಗಳ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಮಾರ್ಗಸೂಚಿಗಳು 2023 ಅನ್ನು ಕಂಪನಿಯು ಉಲ್ಲಂಘಿಸಿದೆ ಎಂದು ಪ್ರಾಧಿಕಾರವು ತೀರ್ಪು ನೀಡಿದೆ.
ಗ್ರಾಹಕರ ಸಮ್ಮತಿಯು ಯಾವಾಗಲೂ ಸ್ಪಷ್ಟವಾಗಿ, ಮಾಹಿತಿಪೂರ್ಣವಾಗಿ ಮತ್ತು ಸ್ವಯಂಪ್ರೇರಿತವಾಗಿರಬೇಕು ಎಂದು ಈ ಆದೇಶವು ಪುನರುಚ್ಚರಿಸುತ್ತದೆ. ಮೊದಲೇ ಟಿಕ್ ಮಾಡಿದ ಬಾಕ್ಸ್‌ಗಳು, ಡಿಫಾಲ್ಟ್ ಸೆಟ್ಟಿಂಗ್ ಅಥವಾ ಮೋಸದ ಇಂಟರ್‌ಫೇಸ್ ವಿನ್ಯಾಸದ ಮೂಲಕ ಪಡೆಯುವ ಸಮ್ಮತಿಯು ಸಿಂಧುವಲ್ಲ ಮತ್ತು ಅದು ಗ್ರಾಹಕ ಕಲ್ಯಾಣ ಹಾಗೂ ಕಾನೂನಿನ ನಿಬಂಧನೆಗಳಿಗೆ ವಿರುದ್ಧವಾಗಿದೆ.
ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ ಗಳು ನ್ಯಾಯಯುತ, ಪಾರದರ್ಶಕ ಹಾಗೂ ಗ್ರಾಹಕ-ಕೇಂದ್ರಿತ ರೀತಿಯಲ್ಲಿ ವ್ಯವಹಾರ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಸಿಸಿಪಿಎ ಸದಾ ಬದ್ಧವಾಗಿದೆ.
*******
(रिलीज़ आईडी: 2285998)
आगंतुक पटल : 6