ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗುಜರಾತ್ ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ‘ಸಾಮೂಹಿಕ ಗಿಡ ನೆಡುವ ಅಭಿಯಾನ’ಕ್ಕೆ ಚಾಲನೆ ನೀಡಿದರು ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಏಕ್ ಪೇಡ್ ಮಾ ಕೆ ನಾಮ್’ ಕರೆ ಅತ್ಯಂತ ವೇಗವಾಗಿ ಜನಾಂದೋಲನವಾಗಿ ಬೆಳೆದಿದೆ ಮತ್ತು ಇಡೀ ದೇಶವು ಪ್ರಧಾನಿಯವರ ‘ಪ್ರಗತಿಯೊಂದಿಗೆ ಜನರು, ಭೂಮಿ’ ಎಂಬ ಮಂತ್ರವನ್ನು ಅಳವಡಿಸಿಕೊಳ್ಳುತ್ತಿದೆ
ಇಂದು ಗಾಂಧಿನಗರ ಲೋಕಸಭಾ ಕ್ಷೇತ್ರವೊಂದರಲ್ಲೇ ಒಂದು ಕೋಟಿಗೂ ಹೆಚ್ಚು ಗಿಡಗಳನ್ನು ನೆಡಲಾಗಿದೆ
ಸಾನಂದ್, ಗಾಂಧಿನಗರ, ಕಲೋಲ್ ಮತ್ತು ಅಹಮದಾಬಾದ್ ಒಟ್ಟಾಗಿ ಹಸಿರು ಹೊದಿಕೆಯನ್ನು ಶೇಕಡಾ 11.23 ರಷ್ಟು ಹೆಚ್ಚಿಸಿದ್ದು, 2029 ರ ವೇಳೆಗೆ ಶೇಕಡಾ 20 ರಷ್ಟು ಸಾಧಿಸುವ ಗುರಿ ಹೊಂದಿವೆ
ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಒಂದೇ ದಿನದಲ್ಲಿ 101 ಆಮ್ಲಜನಕ ಉದ್ಯಾನಗಳನ್ನು ಉದ್ಘಾಟಿಸಿದೆ
ಜನರ ನೇತೃತ್ವದ ಈ ಸಸಿ ನೆಡುವ ಅಭಿಯಾನವು ಅಹಮದಾಬಾದ್ ನ ತಾಪಮಾನವನ್ನು ಇತರ ನಗರಗಳಿಗೆ ಹೋಲಿಸಿದರೆ ಕನಿಷ್ಠ ಶೇಕಡಾ 5 ರಷ್ಟು ಕಡಿಮೆ ಮಾಡುತ್ತದೆ
ಹೆಚ್ಚು ಹಸಿರುಮಯ ವಾತಾವರಣ, ಶುದ್ಧ ಗಾಳಿ, ಪರಿಶುದ್ಧ ನೀರು ಮತ್ತು ಬದುಕಲು ಯೋಗ್ಯವಾದ ಗ್ರಹವನ್ನು ಸೃಷ್ಟಿಸುವುದು ಈ ಬೃಹತ್ ಅಭಿಯಾನದ ಉದ್ದೇಶವಾಗಿದೆ
ಪ್ರತಿಯೊಬ್ಬ ನಾಗರಿಕನೂ ಒಂದು ಗಿಡವನ್ನು ನೆಡಬೇಕು ಮತ್ತು ಭವಿಷ್ಯದ ಪೀಳಿಗೆಗಾಗಿ ಓಝೋನ್ ಪದರವನ್ನು ರಕ್ಷಿಸಲು ಸಹಾಯ ಮಾಡಬೇಕು
ಸಿಎಪಿಎಫ್ ಸಿಬ್ಬಂದಿ ಕಳೆದ ಏಳು ವರ್ಷಗಳಲ್ಲಿ ದೇಶಾದ್ಯಂತ ಏಳು ಕೋಟಿಗೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ
प्रविष्टि तिथि:
12 JUL 2026 3:01PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ‘ಸಾಮೂಹಿಕ ಗಿಡ ನೆಡುವ ಅಭಿಯಾನ’ಕ್ಕೆ ಚಾಲನೆ ನೀಡಿದರು ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಅಮಿತ್ ಶಾ ಅವರು, ಇಂದು ಗಾಂಧಿನಗರ ಲೋಕಸಭಾ ಕ್ಷೇತ್ರವೊಂದರಲ್ಲೇ ನಾಗರಿಕರು ಒಂದು ಕೋಟಿಗೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ ಎಂದು ಹೇಳಿದರು. ಇದರ ಜೊತೆಗೆ ಅಹಮದಾಬಾದ್ ನಗರದಾದ್ಯಂತ 50 ಲಕ್ಷ ಗಿಡಗಳನ್ನು ನೆಡಲಾಗಿದೆ. ಈ ಅಭಿಯಾನವು ಹೆಚ್ಚು ಹಸಿರುಮಯ ವಾತಾವರಣವನ್ನು ನಿರ್ಮಿಸಲು, ಶುದ್ಧ ಗಾಳಿ ಮತ್ತು ಪರಿಶುದ್ಧ ನೀರನ್ನು ಖಚಿತಪಡಿಸಿಕೊಳ್ಳಲು ಹಾಗೂ ಉತ್ತಮ ಗುಣಮಟ್ಟದ, ಬದುಕಲು ಯೋಗ್ಯವಾದ ಭೂಮಿ ಮತ್ತು ನೆಲವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. 1.25 ಕೋಟಿ ಗಿಡಗಳನ್ನು ನೆಡುವ ಅಭಿಯಾನವು ಕೇವಲ ಘೋಷಣೆಯಾಗಿ ಉಳಿಯದೆ ಜನಾಂದೋಲನವಾಗಿ ರೂಪಾಂತರಗೊಂಡಿದೆ ಎಂದು ಶ್ರೀ ಶಾ ಹೇಳಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಏಕ್ ಪೇಡ್ ಮಾ ಕೆ ನಾಮ್" ಕರೆ ಅತ್ಯಂತ ವೇಗವಾಗಿ ಜನಾಂದೋಲನವಾಗಿ ಬೆಳೆದಿದೆ ಮತ್ತು ಇಡೀ ದೇಶವು ಪ್ರಧಾನಿಯವರ "ಪ್ರಗತಿಯೊಂದಿಗೆ ಜನರು, ಭೂಮಿ" ಎಂಬ ಮಂತ್ರವನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಶ್ರೀ ಶಾ ತಿಳಿಸಿದರು.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಕಳೆದ ಏಳು ವರ್ಷಗಳಲ್ಲಿ ದೇಶಾದ್ಯಂತ ಏಳು ಕೋಟಿಗೂ ಹೆಚ್ಚು ಗಿಡಗಳನ್ನು ನೆಟ್ಟಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎರಡು ದಿನಗಳ ಹಿಂದೆ ದೆಹಲಿಯಲ್ಲೂ ದೊಡ್ಡ ಪ್ರಮಾಣದ ಗಿಡ ನೆಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು. ನೆಟ್ಟಿರುವ ಗಿಡಗಳು ಭಾರತದ ಪರಿಸರ ಪರಿಸ್ಥಿತಿಗೆ ಪೂರಕವಾದ ಸ್ಥಳೀಯ ತಳಿಗಳಾಗಿದ್ದು, ಇವುಗಳಲ್ಲಿ 100 ಕ್ಕೂ ಹೆಚ್ಚು ವರ್ಷಗಳ ಜೀವಿತಾವಧಿ ಹೊಂದಿರುವ ಪ್ರಭೇದಗಳು ಸೇರಿವೆ ಎಂದು ಅವರು ಹೇಳಿದರು. ಸಸಿ ನೆಡುವ ಅಭಿಯಾನದ ಉದ್ದೇಶವು ಅಹಮದಾಬಾದ್ ಅನ್ನು ನೈಸರ್ಗಿಕವಾಗಿ ಹೆಚ್ಚು ಹಸಿರು ನಗರವಾಗಿ ಪರಿವರ್ತಿಸುವುದಾಗಿದೆ ಎಂದು ಶ್ರೀ ಶಾ ಹೇಳಿದರು. ಗಾಂಧಿನಗರ ಪ್ರದೇಶದಲ್ಲಿ ಈ ಹಿಂದೆ 12 ಆಮ್ಲಜನಕ ಉದ್ಯಾನಗಳಿದ್ದವು, ಆದರೆ ಇಂದು 61 ಹೊಸ ಆಮ್ಲಜನಕ ಉದ್ಯಾನಗಳನ್ನು ಉದ್ಘಾಟಿಸಲಾಗಿದೆ, ಇದರಿಂದಾಗಿ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಇವುಗಳ ಒಟ್ಟು ಸಂಖ್ಯೆ 73 ಕ್ಕೆ ಏರಿದೆ. ಅದೇ ರೀತಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಒಂದೇ ದಿನದಲ್ಲಿ 101 ಆಮ್ಲಜನಕ ಉದ್ಯಾನಗಳನ್ನು ಉದ್ಘಾಟಿಸಿದೆ ಎಂದು ಅವರು ಹೇಳಿದರು.

ಗಿಡಗಳನ್ನು ನೆಡಲು ಬಯಸುವ ನಾಗರಿಕರ ಮನೆ ಬಾಗಿಲಿಗೆ ಸಸಿಗಳನ್ನು ನೇರವಾಗಿ ತಲುಪಿಸಲು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ವೈಜ್ಞಾನಿಕ ಉಪಕ್ರಮದ ಅಡಿಯಲ್ಲಿ ವಿಶೇಷ ವಾಹನ ಸೇವೆಯನ್ನು ಪರಿಚಯಿಸಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ತಿಳಿಸಿದರು. ಸಾರ್ವಜನಿಕರ ಸಹಭಾಗಿತ್ವವಿಲ್ಲದೆ ಯಾವುದೇ ಅಭಿಯಾನ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಈ ಗಿಡ ನೆಡುವ ಅಭಿಯಾನವು ಮುಂಬರುವ ವರ್ಷಗಳಲ್ಲಿ ಅಹಮದಾಬಾದ್ ನ ತಾಪಮಾನವನ್ನು ಇತರ ನಗರಗಳಿಗೆ ಹೋಲಿಸಿದರೆ ಕನಿಷ್ಠ ಶೇಕಡಾ 5 ರಷ್ಟು ಕಡಿಮೆ ಮಾಡುತ್ತದೆ ಎಂದು ಶ್ರೀ ಶಾ ಹೇಳಿದರು. ಪರಿಸರ ಸಂರಕ್ಷಣೆಗೆ ಪ್ರಧಾನಿ ಮೋದಿ ಅವರ "ಏಕ್ ಪೇಡ್ ಮಾ ಕೆ ನಾಮ್" ಘೋಷಣೆಯು ಏಕೈಕ ಮಾರ್ಗವಾಗಿದೆ ಎಂದು ಶ್ರೀ ಶಾ ಹೇಳಿದರು. ಪ್ರತಿಯೊಬ್ಬ ನಾಗರಿಕನೂ ಒಂದು ಗಿಡವನ್ನು ನೆಡಬೇಕು ಮತ್ತು ಭವಿಷ್ಯದ ಪೀಳಿಗೆಗಾಗಿ ಓಝೋನ್ ಪದರವನ್ನು ರಕ್ಷಿಸಲು ಸಹಾಯ ಮಾಡಬೇಕು ಎಂದು ಅವರು ಕರೆ ನೀಡಿದರು. ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಸಾನಂದ್, ಗಾಂಧಿನಗರ, ಕಲೋಲ್ ಮತ್ತು ಅಹಮದಾಬಾದ್ ನಗರಗಳು ಒಟ್ಟಾಗಿ ಹಸಿರು ಹೊದಿಕೆಯನ್ನು ಶೇಕಡಾ 11.23 ರಷ್ಟು ಹೆಚ್ಚಿಸಿದ್ದು, 2029 ರ ವೇಳೆಗೆ ಅದನ್ನು ಶೇಕಡಾ 20 ಕ್ಕೆ ಹೆಚ್ಚಿಸಲು ಸಂಕಲ್ಪ ಮಾಡಿವೆ ಎಂದು ಅವರು ಹೇಳಿದರು.
ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 20 ರಷ್ಟು ಹಸಿರು ಹೊದಿಕೆಯನ್ನು ಸಾಧಿಸುವುದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಲ್ಲಾ ಲೋಕಸಭಾ ಕ್ಷೇತ್ರಗಳ ಪೈಕಿ ಗಾಂಧಿನಗರವು ಅತ್ಯಧಿಕ ಸಂಖ್ಯೆಯ ಸೋಲಾರ್ ರೂಫ್‌ಟಾಪ್ (ಛಾವಣಿ ಸೌರಶಕ್ತಿ) ಅಳವಡಿಕೆಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಅಹಮದಾಬಾದ್ ಮತ್ತು ಗಾಂಧಿನಗರದ ನಿವಾಸಿಗಳು ತಮ್ಮ ಯಾವುದೇ ಮನೆ, ಅಪಾರ್ಟ್‌ಮೆಂಟ್ ಅಥವಾ ಛಾವಣಿಯು ಸೋಲಾರ್ ರೂಫ್‌ಟಾಪ್ ಅಳವಡಿಕೆಯಿಲ್ಲದೆ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಇಂದು 22 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದ್ದು, ಏಳು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಅವರು ತಿಳಿಸಿದರು. 325 ಹೊಸ ಎಎಂಟಿಎಸ್ ಮತ್ತು ಬಿ ಆರ್ ಟಿ ಎಸ್ ಬಸ್ಸುಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿವೆ ಮತ್ತು ಇಂದಿನ ಉದ್ಘಾಟನೆಯ ನಂತರ ಅಹಮದಾಬಾದ್ ನಲ್ಲಿ ಮಾಲಿನ್ಯವನ್ನು ಉಂಟುಮಾಡುವ ಯಾವುದೇ ಬಸ್ಸುಗಳು ಇರುವುದಿಲ್ಲ ಎಂದು ಶ್ರೀ ಶಾ ಹೇಳಿದರು.

ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ₹28,492 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿವೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ಇವುಗಳಲ್ಲಿ ಘಾಟ್ಲೋಡಿಯಾದಲ್ಲಿ ₹7,030 ಕೋಟಿ, ವೇಜಲ್ಪುರದಲ್ಲಿ ₹₹2,670 ಕೋಟಿ, ಸಬರಮತಿಯಲ್ಲಿ ₹₹2,149 ಕೋಟಿ, ನರನ್‌ಪುರದಲ್ಲಿ ₹₹3,262 ಕೋಟಿ, ಸಾನಂದ್ ನಲ್ಲಿ ₹₹2,800 ಕೋಟಿ, ಗಾಂಧಿನಗರ ಉತ್ತರದಲ್ಲಿ ₹₹4,300 ಕೋಟಿ ಮತ್ತು ಕಲೋಲ್ ನಲ್ಲಿ ₹2,003 ಕೋಟಿ ವೆಚ್ಚದ ಯೋಜನೆಗಳು ಸೇರಿವೆ ಎಂದು ಅವರು ಹೇಳಿದರು. ಅಹಮದಾಬಾದ್ ನಗರ ಮತ್ತು ಗಾಂಧಿನಗರ ಲೋಕಸಭಾ ಕ್ಷೇತ್ರದ ಜನತೆಗೆ ಮನವಿ ಮಾಡಿದ ಶ್ರೀ ಶಾ, ತಮ್ಮ ವಸತಿ ಸಂಘಗಳ ಯಾವುದೇ ಮೂಲೆಯನ್ನು ಮರವಿಲ್ಲದೆ ಬಿಡಬಾರದು ಎಂದು ಒತ್ತಾಯಿಸಿದರು. ಭವಿಷ್ಯದ ಪೀಳಿಗೆಗೆ ಬದುಕಲು ಯೋಗ್ಯವಾದ ಗ್ರಹವನ್ನು ನಿರ್ಮಿಸಲು ಗಿಡಗಳನ್ನು ನೆಡುವುದು ನಮ್ಮ ಸಾಮೂಹಿಕ ಗುರಿಯಾಗಬೇಕು ಎಂದು ಅವರು ಹೇಳಿದರು. ಪ್ರತಿಯೊಂದು ಮನೆಯೂ ಛಾವಣಿ ಸೌರಶಕ್ತಿಯ ಅಳವಡಿಕೆಯನ್ನು ಹೊಂದುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಅವರು ನಾಗರಿಕರಲ್ಲಿ ವಿನಂತಿಸಿದರು.
*****
(रिलीज़ आईडी: 2283961)
आगंतुक पटल : 15