ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ನವದೆಹಲಿಯಲ್ಲಿ ಜಯಪ್ರಕಾಶ್ ನಾರಾಯಣ್ ಗ್ರಂಥಾಲಯ ಉದ್ಘಾಟನೆ
ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರಿಗೆ ಸಮರ್ಪಿತವಾಗಿರುವ ಈ ಗ್ರಂಥಾಲಯವು ಯುವಜನರಿಗೆ ಜ್ಞಾನ ಮತ್ತು ಬೌದ್ಧಿಕ ಚರ್ಚೆಯ ಹೊಸ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ
ರಾಷ್ಟ್ರದ ಭವಿಷ್ಯವು ಕೇವಲ ಕೃಷಿ, ಮಾರುಕಟ್ಟೆಗಳು ಅಥವಾ ಉದ್ಯಮಗಳಿಂದ ಮಾತ್ರ ರೂಪಿತವಾಗುವುದಿಲ್ಲ, ಬದಲಿಗೆ ಅದರ ಗ್ರಂಥಾಲಯಗಳಲ್ಲಿ ಸೇರುವ ಯುವಜನರ ಗುಂಪುಗಳಿಂದ ರೂಪಿತವಾಗುತ್ತದೆ
ಜ್ಞಾನ ಮತ್ತು ಬುದ್ಧಿವಂತಿಕೆಯು ರಾಷ್ಟ್ರವನ್ನು ನಿರ್ಮಿಸುವ ಮತ್ತು ಉನ್ನತೀಕರಿಸುವ ಪ್ರತಿಯೊಂದು ಪ್ರಯತ್ನದ ಅಡಿಪಾಯವಾಗಿದೆ ಮತ್ತು ಗ್ರಂಥಾಲಯವು ಅವುಗಳನ್ನು ಪೋಷಿಸಲು ಅತ್ಯಂತ ಸುಸಜ್ಜಿತವಾದ ಸಂಸ್ಥೆಯಾಗಿದೆ
ಮಾತನಾಡುವ ಮುನ್ನ ಯೋಚಿಸಬೇಕು ಮತ್ತು ಯೋಚಿಸುವ ಮುನ್ನ ಓದಬೇಕು. ಇಂತಹ ಮೌಲ್ಯಗಳನ್ನು ಗ್ರಂಥಾಲಯಗಳ ಮೂಲಕ ಮಾತ್ರ ಬೆಳೆಸಿಕೊಳ್ಳಬಹುದು
ಓದುವಿಕೆ ಒಮ್ಮೆ ಅಭ್ಯಾಸವಾದರೆ, ಒಪ್ಪು ಮತ್ತು ತಪ್ಪುಗಳನ್ನು ಗುರುತಿಸುವ ಸಾಮರ್ಥ್ಯವು ಸ್ವಾಭಾವಿಕವಾಗಿ ಬೆಳೆಯುತ್ತದೆ ಎಂದ ಗೃಹ ಸಚಿವರು ಯುವಕರಿಗೆ ಗ್ರಂಥಾಲಯಗಳೊಂದಿಗೆ ಸಂಪರ್ಕ ಸಾಧಿಸಲು ಕರೆ ನೀಡಿದರು
1 ಕೋಟಿ ಉಚಿತ ಇ-ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಾಲಯವು ಓದುಗರಿಗೆ ಕೇವಲ ವದಂತಿಗಳನ್ನು ಅವಲಂಬಿಸದೆ, ಅವರ ಆಸಕ್ತಿಯ ವಿಷಯಗಳನ್ನು ಆಳವಾಗಿ ಅನ್ವೇಷಿಸಲು ಅವಕಾಶವನ್ನು ಒದಗಿಸುತ್ತದೆ
ದೆಹಲಿ ಸರ್ಕಾರವು ನಗರದಾದ್ಯಂತ ಇರುವ ಎಲ್ಲಾ ಗ್ರಂಥಾಲಯಗಳನ್ನು ಸಂಯೋಜಿಸಬೇಕು ಮತ್ತು ಅವುಗಳನ್ನು ಶಾಲೆಗಳೊಂದಿಗೆ ಸಂಪರ್ಕಿಸಬೇಕು, ಇದರಿಂದ ಗ್ರಂಥಾಲಯದ ಪರಿಸರ ವ್ಯವಸ್ಥೆಯನ್ನು ಹೆಚ್ಚು ಸಮೃದ್ಧ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು
ರಾಮಧಾರಿ ಸಿಂಗ್ 'ದಿನಕರ್' ಅವರ ಕೃತಿಗಳನ್ನು ಓದದೆ ಭಾರತದ ಆತ್ಮ, ಅದರ ಸಂಸ್ಕೃತಿ, ಸ್ವಾಭಿಮಾನ ಮತ್ತು ಹೋರಾಟಗಳನ್ನು ಯಾರೂ ನಿಜವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಮತ್ತು ಗ್ರಂಥಾಲಯಗಳು ಆ ಉದ್ದೇಶಕ್ಕಾಗಿ ಅತ್ಯಂತ ಪ್ರಬಲ ಮಾಧ್ಯಮವಾಗಬಲ್ಲವು
ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಆಗಿನ ಪ್ರಧಾನಮಂತ್ರಿಯವರ ಅಧಿಕಾರದ ಲಾಲಸೆ ಮತ್ತು ತುರ್ತು ಪರಿಸ್ಥಿತಿಯನ್ನು ಧೈರ್ಯದಿಂದ ವಿರೋಧಿಸಿದರು ಮತ್ತು ಬಿಹಾರದ ಗಾಂಧಿ ಮೈದಾನದಿಂದ ಇಡೀ ದೇಶಕ್ಕೆ "ಸಂಪೂರ್ಣ ಕ್ರಾಂತಿ"ಯ ಐತಿಹಾಸಿಕ ಕರೆಯನ್ನು ನೀಡಿದರು
ತುರ್ತು ಪರಿಸ್ಥಿತಿಯ ಸಮಯದಲ್ಲಿ, ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿದಾಗ ಮತ್ತು ಪತ್ರಿಕೆಗಳನ್ನು ಸೆನ್ಸಾರ್ ಮಾಡಿದಾಗ, ಜಯಪ್ರಕಾಶ್ ಅವರ ಘೋಷಣೆಯು ಭರವಸೆಯ ಏಕೈಕ ಬೆಳಕಾಯಿತು
ಈ ಚಳುವಳಿಯು ಅಂತಿಮವಾಗಿ ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಆಗಿನ ಪ್ರಧಾನಮಂತ್ರಿಯವರು ರಾಯಬರೇಲಿಯಲ್ಲಿ ಸೋಲಲು ಕಾರಣವಾಯಿತು
ಗಾಂಧಿನಗರದ ಪ್ರತಿಯೊಂದು ಗ್ರಾಮಕ್ಕೂ ಗ್ರಂಥಾಲಯವನ್ನು ಒದಗಿಸಲಾಗಿದೆ ಮತ್ತು ಕೇಂದ್ರ ಗ್ರಂಥಾಲಯ ಜಾಲಕ್ಕೆ ಸಂಪರ್ಕಿಸಲಾಗಿದೆ; ಇಂದು, ಯಾವುದೇ ಗ್ರಾಮದ ಮಗುವೊಂದು ಸ್ಥಳೀಯ ಗ್ರಂಥಾಲಯದಲ್ಲಿ ನಿರ್ದಿಷ್ಟ ಪುಸ್ತಕವನ್ನು ಕೋರಿದರೆ, ಆ ಪುಸ್ತಕವನ್ನು ಆ ಗ್ರಾಮದಲ್ಲೇ ಲಭ್ಯವಾಗುವಂತೆ ಮಾಡಲಾಗುತ್ತದೆ
प्रविष्टि तिथि:
11 JUL 2026 3:31PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಜಯಪ್ರಕಾಶ್ ನಾರಾಯಣ್ ಸಾರ್ವಜನಿಕ ಗ್ರಂಥಾಲಯವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ದೆಹಲಿ ಸರ್ಕಾರದ ಸಚಿವರಾದ ಶ್ರೀ ಪರ್ವೇಶ್ ವರ್ಮಾ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್.ಡಿ.ಎಂ.ಸಿ) ಅಧ್ಯಕ್ಷರಾದ ಶ್ರೀ ಕೇಶವ್ ಚಂದ್ರ ಮತ್ತು ಇತರ ಹಲವು ಗಣ್ಯರು ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ರಾಷ್ಟ್ರದ ಭವಿಷ್ಯವನ್ನು ಅದರ ಮಾರುಕಟ್ಟೆಗಳಲ್ಲಿನ ಜನಸಂದಣಿ ಅಥವಾ ಅದು ಹೊಂದಿರುವ ಕೈಗಾರಿಕೆಗಳ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ, ಬದಲಿಗೆ, ಅದನ್ನು ಅದರ ಗ್ರಂಥಾಲಯಗಳಲ್ಲಿ ಅಧ್ಯಯನ ಮಾಡುವ ಯುವಕರ ಸಂಖ್ಯೆಯಿಂದ ಅಳೆಯಲಾಗುತ್ತದೆ ಎಂದು ಮಹಾನ್ ಚಿಂತಕರೊಬ್ಬರು ಒಮ್ಮೆ ಹೇಳಿದ್ದಾರೆ ಎಂದರು. ಜ್ಞಾನ ಮತ್ತು ಬುದ್ಧಿವಂತಿಕೆಯು ರಾಷ್ಟ್ರವನ್ನು ಮುನ್ನಡೆಸುವ, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಮತ್ತು ಅದನ್ನು ಸಮೃದ್ಧಿಯತ್ತ ಕೊಂಡೊಯ್ಯುವ ಎಲ್ಲಾ ಚಟುವಟಿಕೆಗಳ ಅಡಿಪಾಯವಾಗಿದೆ ಎಂದು ಅವರು ಹೇಳಿದರು. ಇಂತಹ ಜ್ಞಾನವನ್ನು ನಿಜವಾಗಿಯೂ ಗ್ರಂಥಾಲಯದ ಮೂಲಕ ಮಾತ್ರ ನೀಡಲು ಸಾಧ್ಯ ಎಂದು ಅವರು ತಿಳಿಸಿದರು.

ಯುವ ಪೀಳಿಯು ಕನಿಷ್ಠ ಒಮ್ಮೆಯಾದರೂ ಗ್ರಂಥಾಲಯದೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಶ್ರೀ ಅಮಿತ್ ಶಾ ಮನವಿ ಮಾಡಿದರು. ಗ್ರಂಥಾಲಯದೊಂದಿಗೆ ಒಡನಾಟ ಹೊಂದುವುದು ವ್ಯಕ್ತಿತ್ವದಲ್ಲಿ ಗಮನಾರ್ಹವಾದ ಪರಿಷ್ಕರಣೆಯನ್ನು ತರುತ್ತದೆ ಎಂದು ಅವರು ಹೇಳಿದರು. ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡ ಗೃಹ ಸಚಿವರು, ತಾವು ಹುಟ್ಟಿ ಬಾಲ್ಯವನ್ನು ಕಳೆದ ಸಣ್ಣ ಪಟ್ಟಣದಲ್ಲಿ ಸುಸಜ್ಜಿತವಾದ ಗ್ರಂಥಾಲಯವಿತ್ತು ಎಂದು ಹೇಳಿದರು. ಆ ಗ್ರಂಥಾಲಯದೊಂದಿಗಿನ ಅವರ ಒಡನಾಟವು ಅವರ ಜೀವನದಲ್ಲಿ ಆಳವಾದ ಬದಲಾವಣೆಯನ್ನು ತಂದಿತು. ಪುಸ್ತಕಗಳನ್ನು ಓದುತ್ತಿದ್ದಂತೆ ತಮಗೇ ತಿಳಿಯದಂತೆ ಕ್ರಮೇಣ ವೇದಗಳು ಮತ್ತು ಉಪನಿಷತ್ತುಗಳ ಅಧ್ಯಯನದತ್ತ ಮುನ್ನಡೆದೆ ಎಂದು ಅವರು ಹೇಳಿದರು.

ಇಂದು ತಾವು ಸಭಾಂಗಣದಲ್ಲಿ ಬರೆದಿದ್ದ "ಮಾತನಾಡುವ ಮುನ್ನ ಯೋಚಿಸಬೇಕು, ಏಕೆಂದರೆ ಆಡಿದ ಮಾತುಗಳು ಎಂದಿಗೂ ಹಿಂತಿರುಗುವುದಿಲ್ಲ" ಎಂಬ ಸಾಲನ್ನು ಗಮನಿಸಿದ್ದಾಗಿ ಕೇಂದ್ರ ಗೃಹ ಸಚಿವರು ತಿಳಿಸಿದರು. ಮಾತನಾಡುವ ಮುನ್ನ ಯಾವಾಗಲೂ ಯೋಚಿಸಬೇಕು ನಿಜ, ಆದರೆ ಏನು ಯೋಚಿಸಬೇಕು ಎಂಬುದನ್ನು ತಿಳಿಯಲು ಮೊದಲು ಓದಬೇಕು—ಮತ್ತು ಅಂತಹ ತಿಳುವಳಿಕೆಯನ್ನು ಗ್ರಂಥಾಲಯದ ಮೂಲಕ ಮಾತ್ರ ಪಡೆಯಬಹುದು ಎಂದು ಅವರು ಹೇಳಿದರು.
ಗ್ರಂಥಾಲಯಗಳು ತಮ್ಮ ಜೀವನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ತಮ್ಮ ಸಂಸದೀಯ ಕ್ಷೇತ್ರದಲ್ಲಿ ಸಣ್ಣದೊಂದು ಉಪಕ್ರಮವನ್ನು ಕೈಗೊಂಡಿದ್ದು, ಅಲ್ಲಿನ ಪ್ರತಿಯೊಂದು ಗ್ರಾಮದಲ್ಲೂ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ ಮತ್ತು ಪ್ರತಿಯೊಂದರಲ್ಲೂ ಸುಮಾರು 3,000 ದಿಂದ 4,000 ಪುಸ್ತಕಗಳಿವೆ ಎಂದು ಅವರು ಹೇಳಿದರು. ಈ ಗ್ರಂಥಾಲಯಗಳನ್ನು 1.25 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವನ್ನು ಹೊಂದಿರುವ ಕೇಂದ್ರ ಗ್ರಂಥಾಲಯದೊಂದಿಗೆ ಸಂಪರ್ಕಿಸಲಾಗಿದೆ. ಇದರೊಂದಿಗೆ ನಾಲ್ಕು ಸಂಚಾರಿ ಗ್ರಂಥಾಲಯಗಳನ್ನೂ ನಿಯೋಜಿಸಲಾಗಿದೆ. ಗ್ರಾಮಗಳ ಮಕ್ಕಳು ತಮಗೆ ಬೇಕಾದ ಯಾವುದೇ ಪುಸ್ತಕದ ಹೆಸರನ್ನು ಗ್ರಂಥಾಲಯದಲ್ಲಿ ಬರೆದು ವಿನಂತಿಸಬಹುದು ಮತ್ತು ಪ್ರತಿ ಶುಕ್ರವಾರ ಆಯಾ ಗ್ರಾಮಗಳಿಗೆ ವಿನಂತಿಸಿದ ಪುಸ್ತಕಗಳನ್ನು ತಲುಪಿಸಲಾಗುತ್ತದೆ ಎಂದು ಅವರು ಹೇಳಿದರು. ಪ್ರತಿಯೊಂದು ಗ್ರಂಥಾಲಯವನ್ನು ಶಾಲೆಗಳೊಂದಿಗೆ ಜೋಡಿಸುವ ಪ್ರಯತ್ನಗಳೂ ನಡೆದಿವೆ ಎಂದು ಅವರು ಹೇಳಿದರು.
ನಗರದಾದ್ಯಂತ ಇರುವ ಎಲ್ಲಾ ಗ್ರಂಥಾಲಯಗಳನ್ನು ಪರಸ್ಪರ ಸಂಪರ್ಕಿಸಲು ಮತ್ತು ಅವುಗಳನ್ನು ಶಾಲೆಗಳೊಂದಿಗೆ ಜೋಡಿಸಲು ಸಮಗ್ರ ಯೋಜನೆಯನ್ನು ರೂಪಿಸುವಂತೆ ಕೇಂದ್ರ ಗೃಹ ಸಚಿವರು ದೆಹಲಿ ಸರ್ಕಾರವನ್ನು ಒತ್ತಾಯಿಸಿದರು. ಪುಸ್ತಕ ಪ್ರೇಮಿಗಳು ಗ್ರಂಥಾಲಯಗಳೊಂದಿಗೆ ತೊಡಗಿಸಿಕೊಳ್ಳಲು ಉತ್ತೇಜಿಸಲು ಸುದೀರ್ಘವಾದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಅವರು ಹೇಳಿದರು. ಜಯಪ್ರಕಾಶ್ ನಾರಾಯಣ್ ಸಾರ್ವಜನಿಕ ಗ್ರಂಥಾಲಯದ ಸಿಬ್ಬಂದಿಯೂ ನವದೆಹಲಿಯ ಸುತ್ತಮುತ್ತಲಿನ ಹತ್ತು ವಿಧಾನಸಭಾ ಕ್ಷೇತ್ರಗಳ ಎಲ್ಲಾ ಶಾಲೆಗಳನ್ನು ತಲುಪಲು, ಯುವಕರನ್ನು ಗ್ರಂಥಾಲಯದೊಂದಿಗೆ ಸಂಪರ್ಕಿಸಲು ಮತ್ತು ಭೇಟಿ ನೀಡಲು ಪ್ರೇರೇಪಿಸುವಂತೆ ಅವರು ಮನವಿ ಮಾಡಿದರು. ಯುವಜನರಲ್ಲಿ ಒಮ್ಮೆ ಓದುವ ಹವ್ಯಾಸ ಬೆಳೆದರೆ, ಅವರು ಸ್ವತಃ ಅದನ್ನು ಮುಂದುವರಿಸುತ್ತಾರೆ ಎಂದು ಅವರು ಹೇಳಿದರು.
ಗ್ರಂಥಾಲಯವು ಜ್ಞಾನದ ವಿಶಾಲ ಸಾಗರದಲ್ಲಿ ಇಳಿಯಲು ಧೈರ್ಯವನ್ನು ನೀಡುತ್ತದೆ ಮತ್ತು ಅದರ ಆಳದಲ್ಲಿ ಅಡಗಿರುವ ಮುತ್ತುಗಳು ಮತ್ತು ರತ್ನಗಳನ್ನು ತರಲು ಜನರನ್ನು ಪ್ರೇರೇಪಿಸುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು. ಜ್ಞಾನದ ಅನ್ವೇಷಣೆಯ ಮೂಲಕ ಕಂಡುಹಿಡಿಯಲಾದ ಈ ಬುದ್ಧಿವಂತಿಕೆಯ ಮುತ್ತು - ರತ್ನಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಪರಿಷ್ಕರಿಸುತ್ತವೆ, ರಾಷ್ಟ್ರವನ್ನು ಮುನ್ನಡೆಸುತ್ತವೆ ಮತ್ತು ದೇಶವನ್ನು ಸಮೃದ್ಧ, ಸ್ವಾವಲಂಬಿ, ಸುಸಂಸ್ಕೃತ, ವಿದ್ಯಾವಂತ ಮತ್ತು ಸುರಕ್ಷಿತವಾಗಿಸಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು. ದೇಶದ ಯುವಕರು ಸಾಹಿತಿ ರಾಮಧಾರಿ ಸಿಂಗ್ 'ದಿನಕರ್' ಅವರ ಕೃತಿಗಳನ್ನು ಓದದ ಹೊರತು, ಅವರು ಭಾರತವನ್ನು ನಿಜವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಗ್ರಂಥಾಲಯಗಳು ಇಂತಹ ಅನೇಕ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಯಲು ಪ್ರವೇಶ ದ್ವಾರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು.
ಜಯಪ್ರಕಾಶ್ ನಾರಾಯಣ್ ಸಾರ್ವಜನಿಕ ಗ್ರಂಥಾಲಯವು 32,000 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವನ್ನು ಹೊಂದಿದೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಈ ಗ್ರಂಥಾಲಯವು ಸಂಶೋಧಕರಿಗೆ ವಿಶೇಷ ಸೌಲಭ್ಯಗಳು, ಆಧುನಿಕ ಬಹುಪಯೋಗಿ ಸಭಾಂಗಣ, ಸಮಕಾಲೀನ ಓದುವ ಪ್ರದೇಶ, ಮಕ್ಕಳ ವಲಯ, ಸಂಶೋಧನಾ ಕೇಂದ್ರ ಮತ್ತು ಒಂದು ಕೋಟಿ ಆನ್‌ಲೈನ್ ಪುಸ್ತಕಗಳಿಗೆ ಪ್ರವೇಶವನ್ನು ಒದಗಿಸುವ ಇ-ಗ್ರಂಥಾಲಯವನ್ನು ಹೊಂದಿದೆ. ಗ್ರಂಥಾಲಯದಾದ್ಯಂತ ಉಚಿತ ವೈ-ಫೈ ಲಭ್ಯವಿದೆ. ಸಂದರ್ಶಕರು ಟಿಪ್ಪಣಿಗಳನ್ನು ತೆಗೆದುಕೊಳ್ಳಲು, ಡೌನ್‌ಲೋಡ್ ಮಾಡಲು ಮತ್ತು ಅಧ್ಯಯನ ಮಾಡುವಾಗ ತಮ್ಮ ಆಲೋಚನೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುವ ಹಲವಾರು ಮಾನಿಟರ್ ಗಳನ್ನು ಸಹ ಸ್ಥಾಪಿಸಲಾಗಿದೆ. ಗ್ರಂಥಾಲಯವು ಅತ್ಯಾಧುನಿಕ ಆರ್ ಎಫ್ ಐ ಡಿ ಆಧಾರಿತ ಪುಸ್ತಕ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ ಎಂದು ಅವರು ಹೇಳಿದರು. ಒಪ್ಯಾಕ್ (ಆನ್‌ಲೈನ್ ಪಬ್ಲಿಕ್ ಆಕ್ಸೆಸ್ ಕ್ಯಾಟಲಾಗ್) ಮೂಲಕ, ಇದನ್ನು ಭಾರತದ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಕ್ಕೂ ಸಂಪರ್ಕಿಸಲಾಗುತ್ತದೆ ಎಂದು ಅವರು ಹೇಳಿದರು. ಶ್ರೀ ಅಮಿತ್ ಶಾ ಅವರು ಯುವಕರಿಗೆ ತಮ್ಮ ಆಸಕ್ತಿಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಆ ಕ್ಷೇತ್ರಗಳಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಪ್ರಖ್ಯಾತ ವ್ಯಕ್ತಿಗಳ ಕೃತಿಗಳನ್ನು ಅಧ್ಯಯನ ಮಾಡಲು ಕರೆ ನೀಡಿದರು. ಗ್ರಂಥಾಲಯವು ಒಂದು ಕೋಟಿ ಇ-ಪುಸ್ತಕಗಳ ಪ್ರವೇಶವನ್ನು ನೀಡುತ್ತದೆ, ಇದು ದೆಹಲಿಯ ಯುವಕರಿಗೆ ಒಂದು ಕೋಟಿ ಇ-ಪುಸ್ತಕಗಳು ಮತ್ತು 32,000 ಕ್ಕೂ ಹೆಚ್ಚು ಭೌತಿಕ ಪುಸ್ತಕಗಳನ್ನು ಉಚಿತವಾಗಿ ಪಡೆದುಕೊಳ್ಳಲು ಒಂದು ಅದ್ಭುತ ಅವಕಾಶವಾಗಿದೆ ಎಂದು ಅವರು ತಿಳಿಸಿದರು.
ಜಯಪ್ರಕಾಶ್ ನಾರಾಯಣ್ (ಜೆಪಿ) ಅವರು ತಮ್ಮ ಜೀವನದುದ್ದಕ್ಕೂ ವೈವಿಧ್ಯಮಯ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠತೆಯನ್ನು ಸಾಧಿಸಿದ ದಾರ್ಶನಿಕ ಚಿಂತಕ ಮತ್ತು ಕ್ರಾಂತಿಕಾರಿಯಾಗಿದ್ದರು ಎಂದು ಶ್ರೀ ಶಾ ಹೇಳಿದರು. ಅವರು ಕ್ವಿಟ್ ಇಂಡಿಯಾ ಚಳುವಳಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಸ್ವಾತಂತ್ರ್ಯದ ನಂತರ, ಅವರು ಸರ್ಕಾರಕ್ಕೆ ಸೇರಲು ನಿರಾಕರಿಸಿದರು. ನಂತರ ಅವರು ಸಮಾಜವಾದವನ್ನು ಅಳವಡಿಸಿಕೊಂಡರು, ಸೋಶಿಯಲಿಸ್ಟ್ ಕಾಂಗ್ರೆಸ್ ಅನ್ನು ಸ್ಥಾಪಿಸಿದರು ಮತ್ತು ವಿನೋಬಾ ಭಾವೆಯವರ ಭೂದಾನ ಚಳುವಳಿ ಮತ್ತು ಸರ್ವೋದಯದ ತತ್ತ್ವವನ್ನು ದೇಶದಾದ್ಯಂತದ ಹಳ್ಳಿಗಳಿಗೆ ಪ್ರಚಾರ ಮಾಡಲು ಕೆಲಸ ಮಾಡಿದರು. ಚಂಬಲ್ ಪ್ರದೇಶದ 200 ಕ್ಕೂ ಹೆಚ್ಚು ದರೋಡೆಕೋರರು ಶರಣಾಗುವಂತೆ ಅವರು ಮನವೊಲಿಸಿದರು ಎಂದು ಅವರು ಹೇಳಿದರು.

ತುರ್ತು ಪರಿಸ್ಥಿತಿಯ ಸಮಯದಲ್ಲಿ, ಜಯಪ್ರಕಾಶ್ ನಾರಾಯಣ್ ಅವರು ಆಗಿನ ಪ್ರಧಾನ ಮಂತ್ರಿಯವರನ್ನು ದೃಢವಾಗಿ ವಿರೋಧಿಸಿದರು, ಬಿಹಾರ ಮತ್ತು ಗುಜರಾತ್ ನಲ್ಲಿ ವಿದ್ಯಾರ್ಥಿ ಚಳುವಳಿಗಳನ್ನು ಮುನ್ನಡೆಸಿದರು ಮತ್ತು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದರು ಎಂದು ಶ್ರೀ ಶಾ ಹೇಳಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೆಪಿ, ಅಟಲ್ ಜಿ, ಅಡ್ವಾಣಿ ಜಿ ಮತ್ತು ಸಾವಿರಾರು ಇತರ ನಾಯಕರನ್ನು ಜೈಲಿಗೆ ಹಾಕಲಾಗಿತ್ತು ಎಂದು ಅವರು ನೆನಪಿಸಿಕೊಂಡರು. ಈ ಅವಧಿಯಲ್ಲೇ ರಾಮಧಾರಿ ಸಿಂಗ್ 'ದಿನಕರ್' ಅವರು ರಚಿಸಿದ "ಅಂಧೇರೇ ಮೇ ಏಕ್ ಪ್ರಕಾಶ್, ಜಯಪ್ರಕಾಶ್" ಎಂಬ ಘೋಷಣೆಯು ದೇಶದಾದ್ಯಂತ ಪ್ರತಿಧ್ವನಿಸಿತು. 1977 ರ ಸಾರ್ವತ್ರಿಕ ಚುನಾವಣೆಯಲ್ಲಿ ಆಗಿನ ಪ್ರಧಾನ ಮಂತ್ರಿಯವರು ರಾಯಬರೇಲಿಯಲ್ಲಿ ಪರಾಭವಗೊಂಡರು ಮತ್ತು ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು ಎಂದು ಅವರು ಹೇಳಿದರು.
ಜ್ಞಾನದ ಹಸಿವನ್ನು ನೀಗಿಸುವ ಸಾಧನವಾಗಿ ಸ್ಥಾಪಿಸಲಾಗಿರುವ ಜಯಪ್ರಕಾಶ್ ನಾರಾಯಣ್ ಗ್ರಂಥಾಲಯದ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳುವಂತೆ ಗೃಹ ಸಚಿವರು ದೆಹಲಿಯ ಎಲ್ಲಾ ಹದಿಹರೆಯದವರು ಮತ್ತು ಯುವಕರಲ್ಲಿ ಮನವಿ ಮಾಡಿದರು. ಯುವಕರು ಗ್ರಂಥಾಲಯದ ಮೂಲಕ ತಮ್ಮ ಜೀವನವನ್ನು ಸಮೃದ್ಧಗೊಳಿಸಿಕೊಳ್ಳಬೇಕು ಮತ್ತು 2047 ರ ವೇಳೆಗೆ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
*****
(रिलीज़ आईडी: 2283797)
आगंतुक पटल : 7