ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹಾಗೂ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಅವರು ಬಂದರು ಭದ್ರತಾ ಬ್ಯೂರೋ (ಬಿಒಪಿಎಸ್) ಸ್ಥಾಪನೆಯಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ದೇಶದ ಕರಾವಳಿ ಭದ್ರತೆಯನ್ನು ಅಭೇದ್ಯವಾಗಿಸಲು ಸರ್ಕಾರವು ಬದ್ಧವಾಗಿದೆ
ಬಂದರು ಭದ್ರತಾ ಬ್ಯೂರೋ (ಬಿಒಪಿಎಸ್) ಅಡಿಯಲ್ಲಿ ನಿಯೋಜಿಸಬೇಕಾದ ಭದ್ರತಾ ಸಿಬ್ಬಂದಿಯ ಡೇಟಾಬೇಸ್ ಅನ್ನು ರಚಿಸಬೇಕು
ಮೀನುಗಾರಿಕಾ ಬಂದರುಗಳು ಮತ್ತು ಮೀನು ಇಳಿಸುವ ಕೇಂದ್ರಗಳಲ್ಲಿ ಬಲವಾದ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರು ನಿರ್ದೇಶನ ನೀಡಿದರು
ಇಸ್ರೋ ಅಭಿವೃದ್ಧಿಪಡಿಸಿರುವ 'ನಭಮಿತ್ರ' ಆಪ್ ಅನ್ನು ಹೆಚ್ಚಿನ ಸಂಖ್ಯೆಯ ಮೀನುಗಾರರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ವ್ಯಾಪಕವಾಗಿ ಪ್ರಚಾರ ಮಾಡಬೇಕು
ಪರವಾನಗಿ ಪಡೆದ ಖಾಸಗಿ ಭದ್ರತಾ ಏಜೆನ್ಸಿಗಳಿಗೆ ಮಾತ್ರ ಬಂದರು ಭದ್ರತೆಯನ್ನು ವಹಿಸಿಕೊಡಬೇಕು ಮತ್ತು ಸಿ ಐ ಎಸ್ ಎಫ್ ನಿಂದ ತರಬೇತಿ ಪಡೆದ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಬೇಕು
ಎಲ್ಲಾ ಮೀನು ಇಳಿಸುವ ಕೇಂದ್ರಗಳಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಈ ಸೌಲಭ್ಯಗಳಲ್ಲಿ ಕೇವಲ ಖಾಯಂ ಪೊಲೀಸ್ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಬೇಕು
प्रविष्टि तिथि:
10 JUL 2026 7:43PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹಾಗೂ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಅವರು ಇಂದು ಬಂದರು ಭದ್ರತಾ ಬ್ಯೂರೋ (ಬಿಒಪಿಎಸ್) ಸ್ಥಾಪನೆಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು. ಈ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ; ಗುಪ್ತಚರ ಬ್ಯೂರೋ ನಿರ್ದೇಶಕರು; ಕಾರ್ಯದರ್ಶಿ, ಗಡಿ ನಿರ್ವಹಣೆ; ಕಾರ್ಯದರ್ಶಿ, ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ; ಕಾರ್ಯದರ್ಶಿ, ಮೀನುಗಾರಿಕಾ ಇಲಾಖೆ; ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿ ಐ ಎಸ್ ಎಫ್) ಮಹಾನಿರ್ದೇಶಕರು ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪರವಾನಗಿ ಪಡೆದ ಖಾಸಗಿ ಭದ್ರತಾ ಏಜೆನ್ಸಿಗಳಿಗೆ ಮಾತ್ರ ಬಂದರು ಭದ್ರತೆಯನ್ನು ವಹಿಸಿಕೊಡಬೇಕು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದ (ಸಿ ಐ ಎಸ್ ಎಫ್) ತರಬೇತಿ ಪಡೆದ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಬಂದರು ಭದ್ರತಾ ತರಬೇತಿ ಸಂಸ್ಥೆಗೆ (ಪಿ ಎಸ್ ಟಿ ಐ) ಲಭ್ಯವಿರುವ ಪ್ರಸ್ತುತ ಮೂಲಸೌಕರ್ಯಗಳನ್ನು ಬಳಸಿಕೊಂಡು ಭದ್ರತಾ ಸಿಬ್ಬಂದಿಯ ತರಬೇತಿಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ಅವರು ಹೇಳಿದರು. ಬಂದರು ಭದ್ರತಾ ಬ್ಯೂರೋ ಅಡಿಯಲ್ಲಿ ನಿಯೋಜಿಸಬೇಕಾದ ಎಲ್ಲಾ ಭದ್ರತಾ ಸಿಬ್ಬಂದಿಯ ಡೇಟಾಬೇಸ್ ಅನ್ನು ರಚಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ಬಿಒಪಿಎಸ್ ಭದ್ರತಾ ಚೌಕಟ್ಟಿನ ಅಡಿಯಲ್ಲಿ ಬರುವ ಎಲ್ಲಾ ಬಂದರುಗಳು ಕಂಟೈನರ್ ಸ್ಕ್ಯಾನಿಂಗ್ ಸೌಲಭ್ಯಗಳನ್ನು ಹೊಂದಿರಬೇಕು ಎಂದೂ ಅವರು ಹೇಳಿದರು. ವಿಶಾಖಪಟ್ಟಣಂ ಬಂದರು, ಜವಾಹರಲಾಲ್ ನೆಹರು ಬಂದರು ಮತ್ತು ಮುಂದ್ರಾ ಬಂದರು ಸೇರಿದಂತೆ ದೇಶಾದ್ಯಂತದ ಪ್ರಮುಖ ಬಂದರುಗಳಲ್ಲಿ ಬಿಒಪಿಎಸ್ ಗೆ ಹಸ್ತಾಂತರಿಸಲು ಉದ್ದೇಶಿಸಿರುವ ಭದ್ರತಾ ವ್ಯವಸ್ಥೆಗಳ ಪ್ರಾಯೋಗಿಕ ಚಾಲನೆಯನ್ನು ನಡೆಸುವಂತೆ ಕೇಂದ್ರ ಗೃಹ ಸಚಿವರು ಸಿ ಐ ಎಸ್ ಎಫ್ ಗೆ ನಿರ್ದೇಶನ ನೀಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ದೇಶದ ಕರಾವಳಿ ಭದ್ರತೆಯನ್ನು ಭೇದಿಸಲಾಗದಂತೆ ಮಾಡಲು ಸರ್ಕಾರವು ದೃಢವಾಗಿ ಬದ್ಧವಾಗಿದೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು.
ಮರ್ಚೆಂಟ್ ಶಿಪ್ಪಿಂಗ್ ಆಕ್ಟ್, 2025ರ ಸೆಕ್ಷನ್ 13ರ ನಿಬಂಧನೆಗಳ ಅಡಿಯಲ್ಲಿ ಬಂದರು ಭದ್ರತಾ ಬ್ಯೂರೋವನ್ನು ಅನ್ನು ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲಾಗುತ್ತಿದೆ. ಈ ಬ್ಯೂರೋ ಮಹಾನಿರ್ದೇಶಕರ ನೇತೃತ್ವದಲ್ಲಿ ಇರಲಿದ್ದು, ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಹಡಗುಗಳು ಮತ್ತು ಬಂದರು ಸೌಲಭ್ಯಗಳ ಭದ್ರತೆಗೆ ಸಂಬಂಧಿಸಿದ ನಿಯಂತ್ರಣ ಮತ್ತು ತಪಾಸಣೆ ಕಾರ್ಯಗಳಿಗೆ ಬಿಒಪಿಎಸ್ ಜವಾಬ್ದಾರವಾಗಿರುತ್ತದೆ. ಇದು ಸೈಬರ್ ಭದ್ರತೆಗೆ ವಿಶೇಷ ಒತ್ತು ನೀಡುವುದರೊಂದಿಗೆ, ಭದ್ರತೆಗೆ ಸಂಬಂಧಿಸಿದ ಮಾಹಿತಿಯ ಸಮಯೋಚಿತ ವಿಶ್ಲೇಷಣೆ, ಸಂಗ್ರಹಣೆ ಮತ್ತು ಹಂಚಿಕೆಯನ್ನು ಖಚಿತಪಡಿಸುತ್ತದೆ. ಬಂದರುಗಳ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯಗಳನ್ನು ಡಿಜಿಟಲ್ ಬೆದರಿಕೆಗಳಿಂದ ರಕ್ಷಿಸಲು ಬ್ಯೂರೋ ಪ್ರತ್ಯೇಕ ವಿಭಾಗವನ್ನು ಸಹ ಹೊಂದಿರಲಿದೆ.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮೀನುಗಾರಿಕಾ ಬಂದರುಗಳು ಮತ್ತು ಮೀನು ಇಳಿಸುವ ಕೇಂದ್ರಗಳ ಭದ್ರತೆಯನ್ನು ಬಲಪಡಿಸಲು ಅಗತ್ಯ ನಿರ್ದೇಶನಗಳನ್ನು ನೀಡಿದರು. ಇಸ್ರೋ ಅಭಿವೃದ್ಧಿಪಡಿಸಿರುವ 'ನಭಮಿತ್ರ' ಆಪ್ ಅನ್ನು ಹೆಚ್ಚಿನ ಸಂಖ್ಯೆಯ ಮೀನುಗಾರರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ಅವರು ನಿರ್ದೇಶಿಸಿದರು.
ತಮ್ಮ ತಮ್ಮ ಜಿಲ್ಲೆಗಳಲ್ಲಿರುವ ಎಲ್ಲಾ ಮೀನು ಇಳಿಸುವ ಕೇಂದ್ರಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಕೋರಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯುವಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರು ನಿರ್ದೇಶನ ನೀಡಿದರು. ಮೀನುಗಾರರ ನೋಂದಣಿ ಪ್ರಕ್ರಿಯೆಯನ್ನು ಸರಳ ಮತ್ತು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೀನು ಇಳಿಸುವ ಕೇಂದ್ರಗಳಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಈ ಸೌಲಭ್ಯಗಳಲ್ಲಿ ಕೇವಲ ಖಾಯಂ ಪೊಲೀಸ್ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಬೇಕು ಎಂದು ಶ್ರೀ ಅಮಿತ್ ಶಾ ಅವರು ನಿರ್ದೇಶಿಸಿದರು.
*****
(रिलीज़ आईडी: 2283512)
आगंतुक पटल : 15