ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ವೇಗದ ಪಾವತಿಗಳು, ಬಲಿಷ್ಠ ಎಂ ಎಸ್ ಎಂ ಇ: ಎಲ್ಲಾ ಎಂ ಎಸ್ ಎಂ ಇ ಇನ್ ವಾಯ್ಸ್ ಗಳ ಪಾವತಿಗಾಗಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಿಗೆ ಟ್ರೆಡ್ಸ್ ಕಡ್ಡಾಯಗೊಳಿಸಿದ ಸರ್ಕಾರ
ಜೂನ್ 30, 2026ರ ಅಧಿಸೂಚನೆಯು ಕೇಂದ್ರ ಬಜೆಟ್ 2026-27ರ ಬದ್ಧತೆಯನ್ನು ಪೂರೈಸುತ್ತದೆ; ಲಕ್ಷಾಂತರ ಎಂ ಎಸ್ ಎಂ ಇ ಪೂರೈಕೆದಾರರಿಗೆ ತ್ವರಿತ, ಗ್ಯಾರಂಟಿ ರಹಿತ ಕಾರ್ಯನಿರತ ಬಂಡವಾಳಕ್ಕೆ ದಾರಿ ಮಾಡಿಕೊಡುತ್ತದೆ
प्रविष्टि तिथि:
10 JUL 2026 11:43AM by PIB Bengaluru
ಟ್ರೆಡ್ಸ್ (TReDS) ಮೂಲಕ ಕಡ್ಡಾಯ ಇತ್ಯರ್ಥ: ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿಪಿಎಸ್ಇಗಳು), ಎಂಎಸ್ ಎಂ ಇ ಗಳಿಂದ ಪಡೆದ ಸರಕು ಮತ್ತು ಸೇವೆಗಳ ಇನ್ ವಾಯ್ಸ್ ಗಳ (ಬಿಲ್ಲುಗಳ) ಇತ್ಯರ್ಥವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಅಧಿಕೃತಗೊಳಿಸಿರುವ ಟ್ರೆಡ್ಸ್ ವೇದಿಕೆಗಳ ಮೂಲಕವೇ ಕಡ್ಡಾಯವಾಗಿ ನಿರ್ವಹಿಸಬೇಕು.
ಪಾರದರ್ಶಕತೆ ಮತ್ತು ಉತ್ತರದಾಯಿತ್ವ: ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಟ್ರೆಡ್ಸ್ ಮೂಲಕ ಇತ್ಯರ್ಥಪಡಿಸಲಾದ ಎಂಎಸ್ ಎಂ ಇ ಇನ್ವಾಯ್ಸ್ ಗಳ ವಿವರಗಳನ್ನು ಆರ್ಬಿಐ ನಿರ್ದೇಶನದಂತೆ ಬಹಿರಂಗಪಡಿಸಬೇಕು ಮತ್ತು ತಮ್ಮ ವಾರ್ಷಿಕ ಆಡಿಟ್ ಸಮಯದಲ್ಲಿ ಟ್ರೆಡ್ಸ್ ನೋಂದಣಿ ಹಾಗೂ ಅನುಸರಣೆಯ ಶಾಸನಬದ್ಧ ಲೆಕ್ಕಪರಿಶೋಧಕರ ಪ್ರಮಾಣಪತ್ರವನ್ನು ಪಡೆಯಬೇಕು.
ಕಾರ್ಪೊರೇಟ್ ಭಾರತಕ್ಕೆ ಒಂದು ಮಾದರಿ: ಈ ಕಡ್ಡಾಯ ಆದೇಶವು ದೇಶದಾದ್ಯಂತ ಇರುವ ದೊಡ್ಡ ಕಾರ್ಪೊರೇಟ್ ಖರೀದಿದಾರರಿಗೆ ಸಕಾಲದಲ್ಲಿ ಪಾವತಿ ಮಾಡುವ ಶಿಸ್ತನ್ನು ಕಲಿಸಲು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳನ್ನುರೋಲ್ ಮಾಡೆಲ್ ಗಳನ್ನಾಗಿ ರೂಪಿಸುತ್ತದೆ.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ( ಎಂ ಎಸ್ ಎಂ ಇ) ಪಾವತಿಗಳಿಗಾಗಿ ದೀರ್ಘಕಾಲ ಕಾಯುವ ಸಮಸ್ಯೆಗೆ ನಿರ್ಣಾಯಕ ಅಂತ್ಯ ಹಾಡಲು, ಭಾರತ ಸರ್ಕಾರದ ಎಂ ಎಸ್ ಎಂ ಇ ಸಚಿವಾಲಯವು, ಎಲ್ಲಾ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿಪಿಎಸ್ ಇಗಳು) ತಮ್ಮ ಎಂ ಎಸ್ ಎಂ ಇ ಪೂರೈಕೆದಾರರೊಂದಿಗಿನ ವಹಿವಾಟುಗಳ ಇತ್ಯರ್ಥಕ್ಕಾಗಿ ವ್ಯಾಪಾರ ಸ್ವೀಕಾರಾರ್ಹ ರಿಯಾಯಿತಿ ವ್ಯವಸ್ಥೆ (ಟ್ರೇಡ್ ರಿಸೀವಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ - TReDS - ಟ್ರೆಡ್ಸ್) ಅನ್ನು ಕಡ್ಡಾಯವಾಗಿ ಬಳಸಬೇಕೆಂದು ಸೂಚಿಸಿದೆ. 30 ಜೂನ್ 2026 ರಂದು ಹೊರಡಿಸಲಾದ ಈ ಅಧಿಸೂಚನೆಯು ಕೇಂದ್ರ ಬಜೆಟ್ 2026-27 ರ ಪ್ರಮುಖ ಘೋಷಣೆಯನ್ನು ಜಾರಿಗೆ ತಂದಿದೆ.
ಎಂ ಎಸ್ ಎಂ ಇಗಳು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿದ್ದು, ʻಉದ್ಯಮ್ ನೋಂದಣಿ ಪೋರ್ಟಲ್ʼ ಮತ್ತು ʻಉದ್ಯಮ್ ಅಸಿಸ್ಟ್ ಪ್ಲಾಟ್ಫಾರ್ಮ್ʼನಲ್ಲಿ 8.70 ಕೋಟಿಗೂ ಹೆಚ್ಚು ಉದ್ಯಮಗಳು ನೋಂದಾಯಿಸಿಕೊಂಡಿವೆ ಹಾಗೂ 38 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿವೆ. ಆದರೂ, ವಿಳಂಬವಾದ ಪಾವತಿಗಳು ಈ ವಲಯದ ಅತ್ಯಂತ ನಿರಂತರ ಸವಾಲುಗಳಲ್ಲಿ ಒಂದಾಗಿ ಉಳಿದಿದ್ದು, ಕಾರ್ಯನಿರತ ಬಂಡವಾಳಕ್ಕೆ ತಡೆ ಉಂಟುಮಾಡುತ್ತದೆ ಮತ್ತು ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ. ಎಲ್ಲಾ ಸಿ ಪಿ ಎಸ್ ಇ ಖರೀದಿಗಳಿಗೆ ಟ್ರೆಡ್ಸ್ ಅನ್ನು ಕಡ್ಡಾಯ ಪಾವತಿಸುವ ಮಾರ್ಗವನ್ನಾಗಿ ಮಾಡುವ ಮೂಲಕ, ಸಾರ್ವಜನಿಕ ವಲಯದ ಸಂಗ್ರಹಣೆಯು ಈಗ ಸಣ್ಣ ಪೂರೈಕೆದಾರರ ಪರವಾಗಿ ಸಕ್ರಿಯವಾಗಿ ಕೆಲಸ ಮಾಡುತ್ತದೆ. ಸಿ ಪಿ ಎಸ್ ಇ ಗಳ ಖರೀದಿಯು ಟ್ರೆಡ್ಸ್ ನಲ್ಲಿ ದಾಖಲಾಗುತ್ತದೆ ಮತ್ತು ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ಇನ್ವಾಯ್ಸ್ ಫೈನಾನ್ಸಿಂಗ್ ಮೂಲಕ ಎಂಎಸ್ ಎಂ ಇಗಳಿಗೆ ಸಕಾಲದಲ್ಲಿ ಪಾವತಿಯನ್ನು ಖಾತ್ರಿಪಡಿಸಲಾಗುತ್ತದೆ.
ಎಂ ಎಸ್ ಎಂ ಇಗಳಿಗೆ ಇದರ ಅನುಕೂಲತೆಗಳೇನು
ಪ್ರತಿಯೊಂದು ಸಿ ಪಿ ಎಸ್ ಇ ಇನ್ವಾಯ್ಸ್ (ಬಿಲ್ಲುಗಳು), ಟ್ರೆಡ್ಸ್ ಮೂಲಕ ಸಾಗುವುದರಿಂದ, ಎಂ ಎಸ್ ಎಂ ಇ ಪೂರೈಕೆದಾರರು ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿಯೇ ಅನುಮೋದಿತ ಇನ್ ವಾಯ್ಸ್ಗಳಿಗೆ ಪಾವತಿ ಸ್ವೀಕರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಟ್ರೆಡ್ಸ್ ನಲ್ಲಿನ ಹಣಕಾಸು ಸೌಲಭ್ಯವು ಯಾವುದೇ ಗ್ಯಾರಂಟಿ ರಹಿತ ಮತ್ತು ಮಾರಾಟಗಾರರ ಮೇಲೆ ಯಾವುದೇ ಹೊಣೆಗಾರಿಕೆ ಇಲ್ಲದೆ ಇರುತ್ತದೆ. ಬ್ಯಾಂಕುಗಳು ಮತ್ತು ಎನ್ ಬಿ ಎಫ್ ಸಿಗಳು ಇನ್ ವಾಯ್ಸ್ ಗಳನ್ನು ಡಿಸ್ಕೌಂಟ್ ಮಾಡಲು ಸ್ಪರ್ಧಾತ್ಮಕವಾಗಿ ಬಿಡ್ ಮಾಡುವುದರಿಂದ, ಎಂಎಸ್ ಎಂ ಇಗಳಿಗೆ ಕಡಿಮೆ ಅವಧಿಯಲ್ಲಿ ಮತ್ತು ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ಕಾರ್ಯನಿರತ ಬಂಡವಾಳ ದೊರೆಯುತ್ತದೆ.
ಟ್ರೆಡ್ಸ್ (TReDS) ಬಗ್ಗೆ
ಟ್ರೆಡ್ಸ್ ಎಂಬುದು ಆರ್ ಬಿ ಐ ನಿಯಂತ್ರಿತ ಎಲೆಕ್ಟ್ರಾನಿಕ್ ವೇದಿಕೆಯಾಗಿದ್ದು, ಕಾರ್ಪೊರೇಟ್ ಖರೀದಿದಾರರು, ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಎಂ ಎಸ್ ಎಂ ಇಗಳಿಗೆ ಬರಬೇಕಾದ ಬಾಕಿಯನ್ನು ಹಣಕಾಸು ಒದಗಿಸುವವರ ನಡುವಿನ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಪಾವತಿಸಲು 2017 ರಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಐದು ವೇದಿಕೆಗಳು ಕಾರ್ಯನಿರ್ವಹಿಸುತ್ತಿವೆ: ಆರ್ ಎಕ್ಸ್ ಐ ಎಲ್ (RXIL), ಎಂ 1 ಎಕ್ಸ್ ಚೇಂಜ್ (M1xchange), ಇನ್ವಾಯ್ಸ್ ಮಾರತ (Invoicemart), ಸಿ2ಟ್ರೆಡ್ಸ್ (C2treds) ಮತ್ತು ಡಿಟಿಎಕ್ಸ್ (DTX). ಈ ವೇದಿಕೆಯು ಗಮನಾರ್ಹವಾಗಿ ಬೆಳೆದಿದ್ದು, ಇನ್ವಾಯ್ಸ್ ಡಿಸ್ಕೌಂಟಿಂಗ್ ಪ್ರಮಾಣವು ಆರ್ಥಿಕ ವರ್ಷ 2021-22 ರಲ್ಲಿ ₹40,000 ಕೋಟಿಯಿಂದ ಆರ್ಥಿಕ ವರ್ಷ 2025-26 ರಲ್ಲಿ ₹3.47 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಟ್ರೆಡ್ಸ್ ಸುಧಾರಣಾ ಪ್ರಯಾಣ

ಈ ಅಧಿಸೂಚನೆಯನ್ನು 30 ಜೂನ್ 2026 ರಂದು ಹೊರಡಿಸಲಾಗಿದೆ. ಪೂರ್ಣ ವಿವರಗಳು ಭಾರತದ ಗಜೆಟ್ ನಲ್ಲಿ https://egazette.gov.in ನಲ್ಲಿ ಲಭ್ಯವಿದೆ.
*****
(रिलीज़ आईडी: 2283300)
आगंतुक पटल : 4