ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಕೇಂದ್ರ ಪರಿಸರ ಸಚಿವರು ಕೊಯಮತ್ತೂರಿನ ಡಬ್ಲ್ಯೂ ಐಐ-ಎಸ್ ಎ ಸಿ ಒಎನ್ ನಲ್ಲಿ ‘ಮಾನವ-ವನ್ಯಜೀವಿ ಸಂಘರ್ಷ’ ಕುರಿತಾದ ಶ್ರೇಷ್ಠತಾ ಕೇಂದ್ರವನ್ನು ಉದ್ಘಾಟಿಸಿದರು; ರಾಷ್ಟ್ರೀಯ ಮಾನವ-ವನ್ಯಜೀವಿ ಸಂಘರ್ಷ ಪೋರ್ಟಲ್ ಗೆ ಚಾಲನೆ ನೀಡಿದರು


ಸಂಘರ್ಷದ ಬದಲು ಸಹಬಾಳ್ವೆ ಮತ್ತು ಸಾಮರಸ್ಯವು ಪರಿಸರ ಸುಸ್ಥಿರತೆಯ ಮಂತ್ರವಾಗಬೇಕು: ಶ್ರೀ ಭೂಪೇಂದರ್ ಯಾದವ್

ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಗಾಗಿ ಸವಾಲುಗಳು, ನಾವೀನ್ಯತೆ ಮತ್ತು ಸಹಯೋಗದ ಪರಿಹಾರಗಳ ಕುರಿತು ಚರ್ಚಿಸಲು ರಾಷ್ಟ್ರೀಯ ಕಾರ್ಯಾಗಾರದ ಆಯೋಜನೆ

प्रविष्टि तिथि: 10 JUL 2026 11:26AM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಇಂದು ಕೊಯಮತ್ತೂರಿನಲ್ಲಿ ‘ಮಾನವ-ವನ್ಯಜೀವಿ ಸಂಘರ್ಷ’ ಕುರಿತಾದ ಶ್ರೇಷ್ಠತಾ ಕೇಂದ್ರವನ್ನು (ಸಿಒಇ) ಉದ್ಘಾಟಿಸಿದರು. ಉದ್ಘಾಟನೆಯ ನಂತರ ಮಾನವ-ವನ್ಯಜೀವಿ ಸಂಘರ್ಷದ ಕುರಿತು ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದು ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಪರಿಣಾಮಕಾರಿ ಕಾರ್ಯತಂತ್ರಗಳ ಕುರಿತು ಚರ್ಚಿಸಲು ದೇಶದಾದ್ಯಂತದ ಹಿರಿಯ ನೀತಿ ನಿರೂಪಕರು, ಅರಣ್ಯ ವ್ಯವಸ್ಥಾಪಕರು, ವಿಜ್ಞಾನಿಗಳು, ಸಂಶೋಧಕರು, ತಂತ್ರಜ್ಞಾನ ತಜ್ಞರು ಮತ್ತು ಸಂರಕ್ಷಣಾ ವೃತ್ತಿಪರರನ್ನು ಒಂದೆಡೆ ಸೇರಿಸಿತು. ಈ ಸಮಾರಂಭದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಶ್ರೀ ಕೀರ್ತಿ ವರ್ಧನ್ ಸಿಂಗ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಮುಖ ಭಾಷಣ ಮಾಡಿದ ಶ್ರೀ ಯಾದವ್ ಅವರು, ಆವಾಸಸ್ಥಾನಗಳ ವಿಘಟನೆ, ಬದಲಾಗುತ್ತಿರುವ ಭೂ-ಬಳಕೆಯ ಮಾದರಿಗಳು ಮತ್ತು ವಿಸ್ತರಿಸುತ್ತಿರುವ ಮಾನವ ಚಟುವಟಿಕೆಗಳಿಂದಾಗಿ ಜನರು ಮತ್ತು ವನ್ಯಜೀವಿಗಳ ನಡುವಿನ ಮುಖಾಮುಖಿಯು ಹೆಚ್ಚಾಗುತ್ತಿದ್ದು, ಮಾನವ-ವನ್ಯಜೀವಿ ಸಂಘರ್ಷವು ಭಾರತದ ಪ್ರಮುಖ ಸಂರಕ್ಷಣೆ ಮತ್ತು ಅಭಿವೃದ್ಧಿಯ ಸವಾಲುಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು  ಹೇಳಿದರು. "ನಮ್ಮ ದೃಷ್ಟಿಕೋನವು ಸಮಸ್ಯೆಯ ಮೇಲಿನ ಆಧಾರಿತವಾಗಿರದೆ, ಆಧುನಿಕ ತಾಂತ್ರಿಕ ಪ್ರಗತಿಯನ್ನು ಬಳಸಿಕೊಳ್ಳುವ ಮೂಲಕ ಪರಿಹಾರ ಆಧಾರಿತವಾಗಿರುಬೇಕು" ಎಂದು ಅವರು ಹೇಳಿದರು.

ವನ್ಯಜೀವಿಗಳ ರಾಷ್ಟ್ರೀಯ ಮಂಡಳಿಯ 7ನೇ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದಂತೆ, ಹೊಸದಾಗಿ ಸ್ಥಾಪಿಸಲಾದ ಈ ಶ್ರೇಷ್ಠತಾ ಕೇಂದ್ರವು ಮಾನವ-ವನ್ಯಜೀವಿ ಸಂಘರ್ಷದ ವೈಜ್ಞಾನಿಕ ಮತ್ತು ಪುರಾವೆ ಆಧಾರಿತ ನಿರ್ವಹಣೆಯನ್ನು ಬಲಪಡಿಸಲು ಸಂಶೋಧನೆ, ನಾವೀನ್ಯತೆ, ನೀತಿ ಬೆಂಬಲ, ಸಾಮರ್ಥ್ಯ ವೃದ್ಧಿ ಮತ್ತು ಉತ್ತಮ ಪದ್ಧತಿಗಳ ಪ್ರಸರಣಕ್ಕಾಗಿ ರಾಷ್ಟ್ರೀಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಶ್ರೀ ಯಾದವ್ ಮಾಹಿತಿ ನೀಡಿದರು.

ಹುಲಿ ಸಂರಕ್ಷಿತ ಪ್ರದೇಶಗಳಿಂದ ಹೊರಗಿರುವ ಹುಲಿಗಳು, ಚಿರತೆಗಳು ಮತ್ತು ಆನೆಗಳೊಂದಿಗೆ ಮಾನವರ ಸಂಘರ್ಷಗಳನ್ನು ನಿರ್ವಹಿಸಲು ನೀತಿಯನ್ನು ರೂಪಿಸುವ ಕಾರ್ಯತಂತ್ರದ ಮೇಲೆ ಈ ಸಂಸ್ಥೆಯು ಗಮನ ಹರಿಸಬೇಕು ಎಂದು ಸಚಿವರು ಬಯಕೆ ವ್ಯಕ್ತಬಡಿಸಿದರು. ಮಾನವ-ವನ್ಯಜೀವಿ ಮುಖಾಮುಖಿಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಿಷನ್ ಮೋಡ್ ನಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಮಾನವ-ವನ್ಯಜೀವಿ ಸಂಘರ್ಷವನ್ನು ಪರಿಹರಿಸಲು ಪ್ರದೇಶ-ನಿರ್ದಿಷ್ಟ ಮತ್ತು ಪ್ರಭೇದ-ನಿರ್ದಿಷ್ಟ ಕ್ರಮಗಳನ್ನು ಒಳಗೊಂಡಿರುವ ಅಗತ್ಯವಿದೆ. ಇದು ಸಮಾಜದಲ್ಲಿನ ಆತಂಕವನ್ನು ನಿವಾರಿಸುವಲ್ಲಿ ಬಹಳ ಅನುಕೂಲಕರವಾಗಲಿದೆ ಎಂದು ಅವರು ಹೇಳಿದರು.

ಸಂಘರ್ಷಗಳು ಮತ್ತು ಮಾನವ ವಾಸಸ್ಥಳಗಳು ಹಾಗೂ ಬೆಳೆಗಳಿಗೆ ಆಗುವ ಹಾನಿಯನ್ನು ನಿರ್ವಹಿಸುವಲ್ಲಿ ಸಕ್ರಿಯ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ದೇಶದಾದ್ಯಂತದ ಅರಣ್ಯ ಇಲಾಖೆಗಳಿಗೆ ಶ್ರೀ ಯಾದವ್ ಕರೆ ನೀಡಿದರು. ಸಂಬಂಧಪಟ್ಟ ಎಲ್ಲರೊಡನೆ ಸಮಾಲೋಚನೆಗಳ ಮೂಲಕ, ಆಯಾ ಸಮುದಾಯಗಳೊಂದಿಗೆ ಸಂಯೋಜಿತ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಇದನ್ನು ಮಾಡಬೇಕು ಎಂದು ಅವರು ಹೇಳಿದರು. ವನ್ಯಜೀವಿ ಸಂರಕ್ಷಣೆಯಲ್ಲಿ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿನೂತನ ಉತ್ತಮ ಪದ್ಧತಿಗಳನ್ನು ರೂಪಿಸಬೇಕು ಮತ್ತು ತಳಮಟ್ಟದಲ್ಲಿ ವ್ಯಾಪಕವಾಗಿ ಜಾರಿಗೆ ತರಬೇಕು. "ಸಂಘರ್ಷದ ಬದಲು ಸಹಬಾಳ್ವೆ ಮತ್ತು ಸಾಮರಸ್ಯವು ಪರಿಸರ ಸುಸ್ಥಿರತೆಯ ಮಂತ್ರವಾಗಬೇಕು" ಎಂದು ಸಚಿವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಕೀರ್ತಿ ವರ್ಧನ್ ಸಿಂಗ್, ಪರಿಣಾಮಕಾರಿ ವನ್ಯಜೀವಿ ಸಂರಕ್ಷಣೆಯ ಯಶಸ್ಸು ಮಾನವ-ವನ್ಯಜೀವಿ ಮುಖಾಮುಖಿಗೆ ಕಾರಣವಾಗಿದೆ ಎಂದು ಉಲ್ಲೇಖಿಸಿದರು. ಇದು ಸಂರಕ್ಷಣಾ ಸಮಸ್ಯೆಯಾಗಿರುವುದರ ಜೊತೆಗೆ, ದೀರ್ಘಾವಧಿಯಲ್ಲಿ ಜೀವನೋಪಾಯದ ಮೇಲೆ ಪರಿಣಾಮ ಬೀರುವ ದೊಡ್ಡ ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿ ಪರಿಣಮಿಸಿದೆ. ವನ್ಯಜೀವಿ ಸಂರಕ್ಷಣೆ ಮತ್ತು ದೇಶದ ಸಾಮಾಜಿಕ-ಆರ್ಥಿಕ ಪ್ರಗತಿಯನ್ನು ಸಮತೋಲನಗೊಳಿಸುವ ಮೂಲಕ ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು. ಅಧಿಕಾರಿಗಳು ಮತ್ತು ಸಮುದಾಯದ ಸಾಮರ್ಥ್ಯ ವೃದ್ಧಿ ಮಾಡುವಲ್ಲಿ ಶ್ರೇಷ್ಠತಾ ಕೇಂದ್ರವು ಪ್ರಮುಖ ಪಾತ್ರ ವಹಿಸಲಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು. ವನ್ಯಜೀವಿ ಸಂರಕ್ಷಣೆ ಮತ್ತು ಶಾಂತಿಯುತ ಮಾನವ ಮತ್ತು ವನ್ಯಜೀವಿ ಸಹಬಾಳ್ವೆಯಲ್ಲಿ ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವ ಜೊತೆಗೆ, ದತ್ತಾಂಶವನ್ನು ದಾಖಲಿಸುವಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಬಳಸಲು ಇದು ಬಹಳ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಉದ್ಘಾಟನಾ ಅಧಿವೇಶನದಲ್ಲಿ ಸಚಿವರು ‘ರಾಷ್ಟ್ರೀಯ ಮಾನವ-ವನ್ಯಜೀವಿ ಸಂಘರ್ಷ ಪೋರ್ಟಲ್’ ಅನ್ನು ಪ್ರಾರಂಭಿಸಿದರು. ಇದು ದೇಶಾದ್ಯಂತ ಸಂಘರ್ಷ ತಡೆಗಟ್ಟುವಿಕೆಗಾಗಿ ದತ್ತಾಂಶ ನಿರ್ವಹಣೆ, ಜ್ಞಾನ ಹಂಚಿಕೆ ಮತ್ತು ನಿರ್ಧಾರ ಬೆಂಬಲವನ್ನು ಸುಗಮಗೊಳಿಸಲು ವಿನ್ಯಾಸಗೊಳಿಸಲಾದ ಡಿಜಿಟಲ್ ವೇದಿಕೆಯಾಗಿದೆ. ಭಾರತದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಸಂಬಂಧಿಸಿದ ಪ್ರಸ್ತುತ ಸ್ಥಿತಿ, ಪ್ರವೃತ್ತಿಗಳು ಮತ್ತು ಭವಿಷ್ಯದ ಸವಾಲುಗಳ ಸಮಗ್ರ ಮೌಲ್ಯಮಾಪನವನ್ನು ಒದಗಿಸುವ  Current Status of Human–Wildlife Conflict in India: An Overview (‘ಭಾರತದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಪ್ರಸ್ತುತ ಸ್ಥಿತಿ: ಒಂದು ಅವಲೋಕನ) ಎಂಬ ಶೀರ್ಷಿಕೆಯ ಪ್ರಕಟಣೆಗಳ ಸರಣಿಯ ಮೊದಲ ಆವೃತ್ತಿಯನ್ನು ಸಹ ಬಿಡುಗಡೆ ಮಾಡಲಾಯಿತು.

ಕಾರ್ಯಾಗಾರದ ತಾಂತ್ರಿಕ ಅಧಿವೇಶನಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಪೋರ್ಟಲ್ ನ ನೇರ ಪ್ರಾತ್ಯಕ್ಷಿಕೆ ಒಳಗೊಂಡಿತ್ತು. ತದನಂತರ ತಜ್ಞರ ಪ್ರಸ್ತುತಿಗಳು ಮತ್ತು ಈ ಕೆಳಗಿನ ವಿಷಯಗಳ ಮೇಲೆ   ಚರ್ಚೆಗಳು ನಡೆದವು:

  • ಮಾನವ-ಆನೆ ಸಂಘರ್ಷ;
  • ಮಾನವ - ದೊಡ್ಡ ಬೆಕ್ಕುಗಳ ಪ್ರಭೇದದ ಸಂಘರ್ಷ; ಮತ್ತು
  • ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ತಂತ್ರಜ್ಞಾನ ಮತ್ತು ನಾವೀನ್ಯತೆ.

ಈ ಚರ್ಚೆಗಳು ಮಾನವ ಮತ್ತು ವನ್ಯಜೀವಿ ಸಂಘರ್ಷ ನಿರ್ವಹಣೆಯ ದೇಶದ ಕಾರ್ಯತಂತ್ರಗಳನ್ನು ಬಲಪಡಿಸಲು, ತಾಂತ್ರಿಕ ನಾವೀನ್ಯತೆಯನ್ನು ಉತ್ತೇಜಿಸಲು, ಸಂಬಂಧಪಟ್ಟವರ  ನಡುವೆ ಸಮನ್ವಯವನ್ನು ಸುಧಾರಿಸಲು ಮತ್ತು ಜನರು ಹಾಗೂ ವನ್ಯಜೀವಿಗಳ ನಡುವಿನ ಸಹಬಾಳ್ವೆಯನ್ನು ಹೆಚ್ಚಿಸಲು ಕಾರ್ಯಸಾಧ್ಯವಾದ ಶಿಫಾರಸುಗಳನ್ನು ರೂಪಿಸಲು ಸಹಾಯ ಮಾಡುತ್ತದೆ.

ಶ್ರೇಷ್ಠತಾ ಕೇಂದ್ರದ ಸ್ಥಾಪನೆಯು ವೈಜ್ಞಾನಿಕ, ತಂತ್ರಜ್ಞಾನ ಆಧಾರಿತ ಮತ್ತು ಸಮುದಾಯ ಕೇಂದ್ರಿತ ವಿಧಾನಗಳ ಮೂಲಕ ಮಾನವ ಜೀವ ಮತ್ತು ಜೀವನೋಪಾಯದ ರಕ್ಷಣೆಯೊಂದಿಗೆ ಜೀವವೈವಿಧ್ಯದ ಸಂರಕ್ಷಣೆಯನ್ನು ಸಮತೋಲನಗೊಳಿಸುವ ಭಾರತ ಸರ್ಕಾರದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಈ ಸಂದರ್ಭದಲ್ಲಿ ಸೇರಿದ ಗಣ್ಯರಲ್ಲಿ ಸಚಿವಾಲಯದ ಕಾರ್ಯದರ್ಶಿ, ಅರಣ್ಯ ಮಹಾನಿರ್ದೇಶಕರು ಮತ್ತು ವಿಶೇಷ ಕಾರ್ಯದರ್ಶಿ, ಎಡಿಜಿ (ವನ್ಯಜೀವಿ), ಭಾರತೀಯ ವನ್ಯಜೀವಿ ಸಂಸ್ಥೆಯ ನಿರ್ದೇಶಕರು, ಸಚಿವಾಲಯದ ಹಿರಿಯ ಅಧಿಕಾರಿಗಳು, ರಾಜ್ಯ ಅರಣ್ಯ ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

 

*****


(रिलीज़ आईडी: 2283219) आगंतुक पटल : 16
इस विज्ञप्ति को इन भाषाओं में पढ़ें: English , Urdu , हिन्दी , Bengali , Bengali-TR , Gujarati , Tamil