ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ ವ್ಯಾಪ್ತಿಯಲ್ಲಿ ಗಮನಾರ್ಹ ಬೆಳವಣಿಗೆ ದಾಖಲೆ
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ ಪಡೆಯುವವರ ಸಂಖ್ಯೆಯಲ್ಲಿ ಐತಿಹಾಸಿಕ ಏರಿಕೆ
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಯೋಜನೆ ವಿತರಣೆಗಳು ದಾಖಲೆಯ ₹6,208 ಕೋಟಿಗಳನ್ನು ತಲುಪಿದ್ದು, ಮೆಟ್ರಿಕ್ ಪೂರ್ವ ವಿತರಣೆ ಶೇ. 143 ರಷ್ಟು ಏರಿಕೆ
प्रविष्टि तिथि:
18 JUN 2026 4:27PM by PIB Bengaluru
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ (DoSJE), ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗಳ ಅಡಿಯಲ್ಲಿ ಅರ್ಹ ಪರಿಶಿಷ್ಟ ಜಾತಿ (ಎಸ್ ಸಿ) ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರಯೋಜನಗಳ ವ್ಯಾಪ್ತಿ ವಿಸ್ತರಣೆ ಮತ್ತು ವಿತರಣೆಯಲ್ಲಿ ಗಣನೀಯ ಬೆಳವಣಿಗೆಯನ್ನು ದಾಖಲಿಸಿದೆ.
ಎಸ್‌ಸಿ ವಿದ್ಯಾರ್ಥಿಗಳಿಗೆ 2021-22ರಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ಪರಿಚಯಿಸಿದ ನಂತರ ಮತ್ತು 2022-23 ರಲ್ಲಿ ಎಸ್ ಸಿ ಗಳು ಮತ್ತು ಇತರರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆ, ಕೇಂದ್ರ ನೆರವು ಮತ್ತು ಫಲಾನುಭವಿಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ.
ಫಲಾನುಭವಿಗಳ ಆಧಾರ್-ಸೀಡೆಡ್ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಖಚಿತಪಡಿಸಿಕೊಳ್ಳುವ ಮೂಲಕ ಡಿಬಿಟಿ ಚೌಕಟ್ಟು ವಿದ್ಯಾರ್ಥಿವೇತನ ವಿತರಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಬಲಪಡಿಸಿದೆ.
ಪರಿಶಿಷ್ಟ ಜಾತಿ ಮತ್ತು ಇತರರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ, 2025–26ನೇ ಹಣಕಾಸು ವರ್ಷದಲ್ಲಿ ₹562.36 ಕೋಟಿ ಕೇಂದ್ರ ಪಾಲನ್ನು ಬಿಡುಗಡೆ ಮಾಡಲಾಗಿದ್ದು, 26.79 ಲಕ್ಷ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ಹಣ ಜಮೆಯಾಗಿ ಅನುಕೂಲವಾಗಿದೆ. 2022–23ರಲ್ಲಿ ಡಿಬಿಟಿ ಪರಿಚಯಿಸಿದ ನಂತರ ಈ ಯೋಜನೆಯಡಿಯಲ್ಲಿ ಇದು ಅತ್ಯಧಿಕ ಕೇಂದ್ರದ ಪಾಲಿನ ಬಿಡುಗಡೆಯಾಗಿದೆ.
ಅದೇ ರೀತಿ, ಎಸ್ ಸಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ, ಹಣಕಾಸು ವರ್ಷ 2025–26 ರಲ್ಲಿ ₹6,208.08 ಕೋಟಿ ಕೇಂದ್ರದ ಪಾಲನ್ನು ವಿತರಿಸಲಾಗಿದ್ದು, ಡಿಬಿಟಿ ಮೂಲಕ 47.53 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಲಾಗಿದೆ. 2021–22ರಲ್ಲಿ ಡಿಬಿಟಿ ವಿಧಾನ ಪರಿಚಯಿಸಿದ ನಂತರ ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅತ್ಯಧಿಕ ಮೊತ್ತ ಇದಾಗಿದೆ.
ಪ್ರಸಕ್ತ ಹಣಕಾಸು ವರ್ಷ ಕೂಡ ಫಲಾನುಭವಿಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಪರಿಶಿಷ್ಟ ಜಾತಿ ಮತ್ತು ಇತರರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ, 2025ರ ಏಪ್ರಿಲ್ 1 ರಿಂದ 2025ರ ಮೇ 31 ರವರೆಗಿನ ಅವಧಿಯಲ್ಲಿ 2.36 ಲಕ್ಷದಷ್ಟಿದ್ದ ಫಲಾನುಭವಿಗಳ ಸಂಖ್ಯೆ 2026 ರ ಏಪ್ರಿಲ್ 1 ರಿಂದ 2026ರ ಮೇ 31 ರವರೆಗಿನ ಅವಧಿಯಲ್ಲಿ 5.75 ಲಕ್ಷಕ್ಕೆ ಏರಿಕೆಯಾಗಿದ್ದು, ಶೇ. 143.64 ರಷ್ಟು ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ.
ಅದೇ ರೀತಿ, ಎಸ್ ಸಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ, ಫಲಾನುಭವಿಗಳ ಸಂಖ್ಯೆಯು 2025ರ ಏಪ್ರಿಲ್ 1 ರಿಂದ 2025ರ ಮೇ 31 ರವರೆಗಿನ ಅವಧಿಯಲ್ಲಿ 10.27 ಲಕ್ಷದಷ್ಟಿದ್ದು 2026ರ ಏಪ್ರಿಲ್ 1 ರಿಂದ 2026ರ ಮೇ 31 ರವರೆಗಿನ ಅವಧಿಯಲ್ಲಿ 16.63 ಲಕ್ಷಕ್ಕೆ ಏರಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದ ಅದೇ ಅವಧಿಯ ಹೋಲಿಕೆಯಲ್ಲಿ ಶೇ. 61.92 ರಷ್ಟು ಗಣನೀಯ ಬೆಳವಣಿಗೆ ಕಂಡು ಬಂದಿದೆ.
ವಿದ್ಯಾರ್ಥಿವೇತನ ವ್ಯಾಪ್ತಿ ಮತ್ತು ನಿಧಿ ವಿತರಣೆಯಲ್ಲಿನ ಗಣನೀಯ ಹೆಚ್ಚಳವು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸುವ ಮತ್ತು ಸವಲತ್ತುಗಳು ಸಕಾಲಿಕವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಇಲಾಖೆಯ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ಸಾಧನೆಗಳು ತಂತ್ರಜ್ಞಾನ ಆಧಾರಿತ ಸುಧಾರಣೆಗಳ ಯಶಸ್ಸನ್ನು ಹಾಗೂ ಪ್ರವೇಶ ಸಾಧ್ಯ ಪಾರದರ್ಶಕ ಕಲ್ಯಾಣ ಕಾರ್ಯವಿಧಾನಗಳ ಮೂಲಕ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ಸರ್ಕಾರದ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತವೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ವಿದ್ಯಾರ್ಥಿವೇತನ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ಸಾಮಾಜಿಕ ನ್ಯಾಯ ಉಪಕ್ರಮಗಳನ್ನು ಬಲಪಡಿಸಲು ಮತ್ತು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳನ್ನು ಸಬಲಗೊಳಿಸಲು ಬದ್ಧವಾಗಿದೆ.
*****
(रिलीज़ आईडी: 2274956)
आगंतुक पटल : 10