ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಉನ್ನತ ದರ್ಜೆಯ ಶಿಕ್ಷಣ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳ ವೃತ್ತಿಪರ ಜೀವನದ ಯಶಸ್ಸನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಉಲ್ಲೇಖಿಸಿದೆ


ಗುಣಮಟ್ಟದ ಶಿಕ್ಷಣ ಮತ್ತು ಹೆಚ್ಚಿನ ಅವಕಾಶಗಳ ಮೂಲಕ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವುದು. ರಾಷ್ಟ್ರಕ್ಕೆ ಬಲವಾದ, ಉಜ್ವಲ ಭವಿಷ್ಯವನ್ನು ನಿರ್ಮಿಸುವುದು ಸಾಧ್ಯವಾಗಿದೆ

प्रविष्टि तिथि: 15 JUN 2026 12:58PM by PIB Bengaluru

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಶಿಕ್ಷಣ ಮತ್ತು ಅವಕಾಶಗಳ ಮೂಲಕ ಅಂಚಿನಲ್ಲಿರುವ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮೂಲಕ ಸಮಗ್ರ ಅಭಿವೃದ್ಧಿಯನ್ನು ಮುನ್ನಡೆಸುತ್ತಿದೆ. ತನ್ನ ಕೇಂದ್ರೀಕೃತ ಉಪಕ್ರಮಗಳ ಮೂಲಕ, ಸಚಿವಾಲಯವು ಹೆಚ್ಚು ಸಮಾನ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ.

ಪ್ರತಿಭೆಯನ್ನು ಸಕ್ರಿಯಗೊಳಿಸುವುದು, ಅವಕಾಶಗಳನ್ನು ವಿಸ್ತರಿಸುವುದು, ರಾಷ್ಟ್ರವನ್ನು ನಿರ್ಮಿಸುವುದು

ಭಾರತದಾದ್ಯಂತ, ಪ್ರತಿಭಾವಂತ ಯುವ ಎಸ್.ಸಿ. ವಿದ್ಯಾರ್ಥಿಗಳಿಗೆ ಉನ್ನತ ದರ್ಜೆಯ ಶಿಕ್ಷಣ ಯೋಜನೆಯ ಮೂಲಕ ಅವರುಗಳ ಆಕಾಂಕ್ಷೆಗಳನ್ನು ಅವರುಗಳು ಸಾಧನೆಯಾಗಿ ಪರಿವರ್ತಿಸುತ್ತಿದ್ದಾರೆ. ಪ್ರಮುಖ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣದ ಪ್ರವೇಶ ಅವಕಾಶವನ್ನು ವಿಸ್ತರಿಸುವ ಮೂಲಕ, ಈ ಯೋಜನೆಯು ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಹೊಸ ಪೀಳಿಗೆಯ ವೃತ್ತಿಪರರು, ನಾವೀನ್ಯಕಾರರು, ಸಂಶೋಧಕರು, ಉದ್ಯಮಿಗಳು ಮತ್ತು ನಾಯಕರನ್ನು ಪೋಷಿಸುತ್ತಿದೆ.

ವಾರ್ಷಿಕ ಕುಟುಂಬ ಆದಾಯ ರೂಪಾಯಿ 8 ಲಕ್ಷದವರೆಗೆ ಹೊಂದಿರುವ ಅರ್ಹ ವಿದ್ಯಾರ್ಥಿಗಳು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ಮತ್ತು ಇತರ ಪ್ರಮುಖ ಸಂಸ್ಥೆಗಳಲ್ಲಿ ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರವೇಶ ಅವಕಾಶವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಜಾರಿಗೆ ತಂದಿರುವ “ಎಸ್.ಸಿ. ವಿದ್ಯಾರ್ಥಿಗಳಿಗಾಗಿ ಉನ್ನತ ದರ್ಜೆಯ ಶಿಕ್ಷಣ ಯೋಜನೆ”ಯು ಪ್ರಯತ್ನಿಸುತ್ತದೆ.

ಈ ಯೋಜನೆಯು ಬೋಧನಾ ಶುಲ್ಕಗಳು, ಜೀವನ ವೆಚ್ಚಗಳು, ಪುಸ್ತಕಗಳು, ಕಂಪ್ಯೂಟರ್ ಗಳು ಮತ್ತು ಇತರ ಶೈಕ್ಷಣಿಕ ಅವಶ್ಯಕತೆಗಳಿಗೆ ಸಮಗ್ರ ಶೈಕ್ಷಣಿಕ ವ್ಯಾಪ್ತಿಯನ್ನು ಒದಗಿಸುತ್ತದೆ, ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಗಮನದಿಂದ ಶ್ರೇಷ್ಠತೆಯನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ.

ವರ್ಷಗಳಲ್ಲಿ, ಈ ಯೋಜನೆಯು ಶೈಕ್ಷಣಿಕ ಸಬಲೀಕರಣಕ್ಕೆ ಮಹತ್ವದ ಸಾಧನವಾಗಿ ಹೊರಹೊಮ್ಮಿದೆ, ವಿದ್ಯಾರ್ಥಿಗಳು ವೈವಿಧ್ಯಮಯ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಅವಕಾಶಗಳನ್ನು ಸೃಷ್ಟಿಸುತ್ತದೆ.

ಶೈಕ್ಷಣಿಕ ಸಬಲೀಕರಣದ ಮೂಲಕ ಬೆಳೆಯುತ್ತಿರುವ ಹೆಜ್ಜೆಗುರುತು

2007-08 ರಲ್ಲಿ ಪ್ರಾರಂಭವಾದಾಗಿನಿಂದ ಯೋಜನೆಯ ಪ್ರಭಾವವು ಸ್ಥಿರವಾಗಿ ವಿಸ್ತರಿಸಿದೆ. ಯೋಜನೆಯಡಿಯಲ್ಲಿ ಬೆಂಬಲಿತ ವಿದ್ಯಾರ್ಥಿಗಳ ಸಂಖ್ಯೆ 2007-08 ರಲ್ಲಿ 195 ರಿಂದ 2025-26 ರಲ್ಲಿ 4,742 ಕ್ಕೆ ಏರಿದೆ. ಅದೇ ಅವಧಿಯಲ್ಲಿ, ಯೋಜನೆಯಡಿಯಲ್ಲಿ ವಾರ್ಷಿಕ ವೆಚ್ಚವು ₹2.17 ಕೋಟಿಯಿಂದ ₹117.19 ಕೋಟಿಗೆ ಏರಿಕೆ ಕಂಡಿದೆ.

ಇಂದು, ಈ ಯೋಜನೆಯಡಿಯಲ್ಲಿ ಬೆಂಬಲಿತ ವಿದ್ಯಾರ್ಥಿಗಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐ.ಐ.ಟಿ.ಗಳು), ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್.ಐ.ಟಿ.ಗಳು), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು (ಐ.ಐ.ಐ.ಟಿ.ಗಳು), ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು (ಎನ್.ಎಲ್.ಯು.ಗಳು), ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್.ಐ.ಡಿ.), ಭಾರತೀಯ ನಿರ್ವಹಣಾ ಸಂಸ್ಥೆಗಳು (ಐ.ಐ.ಎಂ.ಗಳು) ನಂತಹ ಪ್ರಮುಖ ನಿರ್ವಹಣಾ ಸಂಸ್ಥೆಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಇತರ ಸಂಸ್ಥೆಗಳು ಸೇರಿದಂತೆ ಪ್ರಮುಖ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಈ ಯೋಜನೆಯು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಲ್ಲದೆ, ವಿದ್ಯಾರ್ಥಿಗಳು ಸುಧಾರಿತ ಕೌಶಲ್ಯಗಳನ್ನು ಪಡೆಯಲು, ಸಂಶೋಧನೆಯನ್ನು ಮುಂದುವರಿಸಲು, ನಾವೀನ್ಯತೆಯನ್ನು ಸ್ವೀಕರಿಸಲು ಮತ್ತು ಆರ್ಥಿಕತೆಯ ಉದಯೋನ್ಮುಖ ವಲಯಗಳಲ್ಲಿ ನಾಯಕತ್ವದ ಪಾತ್ರಗಳಿಗೆ ಸಿದ್ಧರಾಗಲು ಅನುವು ಮಾಡಿಕೊಡುತ್ತಿದೆ.

ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಶ್ರೇಷ್ಠತೆಯನ್ನು ಸೃಷ್ಟಿಸುವುದು

ತಂತ್ರಜ್ಞಾನ ವಲಯವು ಆಧುನಿಕ ಆರ್ಥಿಕತೆಯಲ್ಲಿ ಕೆಲವು ಅತ್ಯಂತ ಕ್ರಿಯಾತ್ಮಕ ಅವಕಾಶಗಳನ್ನು ನೀಡುತ್ತದೆ ಮತ್ತು ಯೋಜನೆಯಡಿಯಲ್ಲಿ ಬೆಂಬಲಿತ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ, ಕೆಲವು ಯಶಸ್ಸಿನ ಕಥೆಗಳನ್ನು ಕೆಳಗೆ ವಿವರಿಸಲಾಗಿದೆ:

Amul Shaturia IIIT Allahabad.jpg.jpeg

ಯೋಜನೆಯಡಿಯಲ್ಲಿ ನೀಡಲಾಗುವ ಬೆಂಬಲದೊಂದಿಗೆ ಶ್ರೀ ಅಮುಲ್ ಶತುರಿಯಾ ಅವರು ಐ.ಐ.ಟಿ. ಅಲಹಾಬಾದ್ ನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಟೆಕ್ ಅನ್ನು ಅಧ್ಯಯನ ಮಾಡಿದ್ದಾರೆ. ಗುಣಮಟ್ಟದ ಶಿಕ್ಷಣ, ತಾಂತ್ರಿಕ ಯೋಜನೆಗಳು ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ ಲಭ್ಯವಿರುವ ಅವಕಾಶಗಳು ಅವರ ವೃತ್ತಿಪರ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ₹56 ಲಕ್ಷ ವಾರ್ಷಿಕ ಪ್ಯಾಕೇಜ್ ನೊಂದಿಗೆ ಪ್ರಮುಖ ತಂತ್ರಜ್ಞಾನ ಕಂಪನಿಯಲ್ಲಿ ಉದ್ಯೋಗವನ್ನು ಪಡೆಯಲು ಅನುವು ಮಾಡಿಕೊಟ್ಟವು. ಅವರು, ಮೂಲತಃ ಬಡ ಆರ್ಥಿಕ ಹಿನ್ನೆಲೆಯ ಶಾಲಾ ಬಸ್ ಕಂಡಕ್ಟರ್ ನ ಮಗನಾಗಿದ್ದರೂ ಸಹ, ಈ ಯೋಜನೆಯು ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೆಚ್ಚು ಸ್ಪರ್ಧಾತ್ಮಕ ತಂತ್ರಜ್ಞಾನ-ಚಾಲಿತ ವಲಯಗಳಲ್ಲಿ ಯಶಸ್ವಿಯಾಗಿ ಸ್ಪರ್ಧಿಸಲು ಹೇಗೆ ಅನುವು ಮಾಡಿಕೊಡುತ್ತದೆ ಎಂಬುದನ್ನು ಅವರ ಸಾಧನೆಯು ಪ್ರತಿಬಿಂಬಿಸುತ್ತದೆ.

Sushmitha Pothuraju IIIT Allahabad.jpg.jpeg

ಅದೇ ರೀತಿ,ಕು. ಸುಶ್ಮಿತಾ ಪೋತುರಾಜು ಅವರು ಐಐಐಟಿ ಅಲಹಾಬಾದ್ ನಲ್ಲಿ ತಮ್ಮ ಅಧ್ಯಯನದ ಸಮಯದಲ್ಲಿ ಶೈಕ್ಷಣಿಕ, ಕೋಡಿಂಗ್ ಚಟುವಟಿಕೆಗಳು, ಇಂಟರ್ನ್‌ಶಿಪ್ ಗಳು ಮತ್ತು ನಾಯಕತ್ವದ ತೊಡಗಿಸಿಕೊಳ್ಳುವಿಕೆಗಳಲ್ಲಿನ ಅವಕಾಶಗಳನ್ನು ಬಳಸಿಕೊಂಡರು. ₹45 ಲಕ್ಷ ವಾರ್ಷಿಕ ಪ್ಯಾಕೇಜ್ ನೊಂದಿಗೆ ಅಮೆಜಾನ್ ನಲ್ಲಿ ಅವರ ಪಡೆದ ಉದ್ಯೋಗವು ಮುಂದುವರಿದ ತಂತ್ರಜ್ಞಾನ ವೃತ್ತಿಜೀವನದಲ್ಲಿ ಮಹಿಳಾ ವಿದ್ವಾಂಸರ ಹೆಚ್ಚುತ್ತಿರುವ ಉಪಸ್ಥಿತಿಯನ್ನು ಪ್ರದರ್ಶಿಸುತ್ತದೆ ಮತ್ತು ಶ್ರೇಷ್ಠತೆ ಮತ್ತು ವೃತ್ತಿಪರ ಸಾಧನೆಯನ್ನು ಬೆಳೆಸುವಲ್ಲಿ ಯೋಜನೆಯ ಪಾತ್ರವನ್ನು ಎತ್ತಿ ತೋರಿಸುತ್ತದೆ.

ಈ ಯಶಸ್ಸಿನ ಕಥೆಗಳು ದೃಢನಿಶ್ಚಯ ಮತ್ತು ಪ್ರತಿಭೆಯೊಂದಿಗೆ ಸಂಯೋಜಿಸಲ್ಪಟ್ಟ ಶೈಕ್ಷಣಿಕ ಅವಕಾಶವು ಅತ್ಯುತ್ತಮ ವೃತ್ತಿಪರ ಫಲಿತಾಂಶಗಳಿಗೆ ಹೇಗೆ ಮಾರ್ಗಗಳನ್ನು ಸೃಷ್ಟಿಸಬಹುದು ಎಂಬುದನ್ನು ವಿವರಿಸುತ್ತದೆ.

ರಾಷ್ಟ್ರ ನಿರ್ಮಾಣ ವಲಯಗಳಲ್ಲಿ ಭಾಗವಹಿಸುವಿಕೆಯನ್ನು ಬಲಪಡಿಸುವುದು

ಭಾರತದ ಅಭಿವೃದ್ಧಿ ಪ್ರಯಾಣಕ್ಕೆ ನಿರ್ಣಾಯಕವಾಗಿರುವ ವಲಯಗಳಲ್ಲಿ ಯೋಜನೆಯ ಪ್ರಭಾವವು ಸಮಾನವಾಗಿ ಗೋಚರಿಸುತ್ತದೆ.

MS. Thamballa Sindhu IIT Palakkad.JPG.jpeg

ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಐಐಟಿ ಪಾಲಕ್ಕಾಡ್ ನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಕು. ತಂಬಲ ಸಿಂಧು, ವೃತ್ತಿಪರ ಶಿಕ್ಷಣ ಮತ್ತು ಉದ್ಯಮ ಆಧಾರಿತ ಕಲಿಕೆಯನ್ನು ಮುಂದುವರಿಸಲು ಯೋಜನೆಯ ಮೂಲಕ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡರು. ತರುವಾಯ ಅವರು ಭಾರತದ ಪ್ರಮುಖ ಮೂಲಸೌಕರ್ಯ ಮತ್ತು ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾದ ಲಾರ್ಸೆನ್ & ಟರ್ಬೊ ಕನ್ಸ್ಟ್ರಕ್ಷನ್ ಸಂಸ್ಥೆಯಲ್ಲಿ “ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ”ಯಾಗಿ ಆಯ್ಕೆಯಾದರು.

Shri Nalan S IIT Palakkad.JPG.jpeg

ಅಂತೆಯೇ, ಐಐಟಿ ಪಾಲಕ್ಕಾಡ್ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಶ್ರೀ ನಲನ್ ಎಸ್. ಅವರು, ತಮ್ಮ ಸಮುದಾಯದ ಮೊದಲ ತಲೆಮಾರಿನ ವಿದ್ಯಾರ್ಥಿಯಾಗಿದ್ದು, ರಕ್ಷಣಾ ಸಚಿವಾಲಯದ ಅಡಿಯಲ್ಲಿ ನವರತ್ನ ಶ್ರೇಣಿಯ ಸಾರ್ವಜನಿಕ ವಲಯದ ಉದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿ.ಇ.ಎಲ್.) ನಲ್ಲಿ ಉದ್ಯೋಗವನ್ನು ಪಡೆದರು.

ಅವರ ಸಾಧನೆಯು ಈ ಯೋಜನೆಯು ಕಾರ್ಯತಂತ್ರದ ಕ್ಷೇತ್ರಗಳು ಮತ್ತು ತಾಂತ್ರಿಕ ಪ್ರಗತಿಗೆ ಕೊಡುಗೆ ನೀಡುವ ಹೆಚ್ಚು ಕೌಶಲ್ಯಪೂರ್ಣ ವೃತ್ತಿಪರರನ್ನು ತಯಾರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ.

ಇಂತಹ ಸಾಧನೆಗಳು ಭಾರತದ ಮೂಲಸೌಕರ್ಯ, ಉತ್ಪಾದನೆ, ರಕ್ಷಣೆ ಮತ್ತು ತಾಂತ್ರಿಕ ಆಕಾಂಕ್ಷೆಗಳನ್ನು ಬೆಂಬಲಿಸುವ ಸಾಮರ್ಥ್ಯವಿರುವ ಕೌಶಲ್ಯಪೂರ್ಣ ಕಾರ್ಯಪಡೆಯನ್ನು ರಚಿಸುವಲ್ಲಿ ಯೋಜನೆಯ ಕೊಡುಗೆಯನ್ನು ಎತ್ತಿ ತೋರಿಸುತ್ತವೆ.

ವೈವಿಧ್ಯಮಯ ವೃತ್ತಿಪರ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಕ್ರಿಯಗೊಳಿಸುವುದು

ಯೋಜನೆಯ ವ್ಯಾಪ್ತಿಯು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನವನ್ನು ಮೀರಿ ವಿಸ್ತರಿಸುತ್ತದೆ. ಕು. ಬೊಗ್ಗಿಟಿ ಶೈನಿ ಜಾಸ್ಪರ್ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್ಮೆಂಟ್ ನಲ್ಲಿ ತಮ್ಮ ಪಿಜಿಡಿಎಂ ಅನ್ನು ಪೂರ್ಣಗೊಳಿಸಿದರು.

Ms. Boggiti Shiny Jasper.jpg.jpeg

ಯೋಜನೆಯ ಮೂಲಕ ಸೃಷ್ಟಿಯಾದ ಅವಕಾಶಗಳು ಅವರಿಗೆ ಶೈಕ್ಷಣಿಕ, ಇಂಟರ್ನ್ಶಿಪ್ ಗಳು ಮತ್ತು ವೃತ್ತಿಪರ ಅಭಿವೃದ್ಧಿಯ ಮೇಲೆ ಗಮನಹರಿಸಲು ಅನುವು ಮಾಡಿಕೊಟ್ಟವು, ಇದು ಕಾರ್ಪೊರೇಟ್ ವಲಯದಲ್ಲಿ ಯಶಸ್ವಿ ಉದ್ಯೋಗಕ್ಕೆ ಕಾರಣವಾಯಿತು. ಅವರ ಪ್ರಯಾಣವು ವೃತ್ತಿಪರ ಪ್ರಗತಿಯನ್ನು ಸುಗಮಗೊಳಿಸುವಲ್ಲಿ ಮತ್ತು ಹುಡುಗಿಯರಿಗೂ ಭವಿಷ್ಯದ ನಾಯಕತ್ವಕ್ಕೆ ಅವಕಾಶಗಳನ್ನು ಸೃಷ್ಟಿಸುವಲ್ಲಿ ಯೋಜನೆಯ ಪಾತ್ರವನ್ನು ಉಲ್ಲೇಖಿಸುತ್ತದೆ.

Shri Rishabh Bhaskar Lade Maharashtra NLU.jpeg

ಕಾನೂನು ಶಿಕ್ಷಣ ಕ್ಷೇತ್ರದಲ್ಲಿ, ಶ್ರೀ ರಿಷಭ್ ಭಾಸ್ಕರ್ ಲಾಡೆ ಮುಂಬೈನ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಬಿ.ಎ. ಎಲ್.ಎಲ್.ಬಿ. (ಆನರ್ಸ್) ಕಾರ್ಯಕ್ರಮವನ್ನು ತಮ್ಮ ಶೈಕ್ಷಣಿಕವಾಗಿ ಮುಂದುವರಿಸಿದರು. ತಮ್ಮ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅವರು ಐಡಿಬಿಐ ಬ್ಯಾಂಕಿನಲ್ಲಿ ಸಹಾಯಕ ಕಾನೂನು ವ್ಯವಸ್ಥಾಪಕರಾಗಿ ಉದ್ಯೋಗ ಪಡೆದರು. ಈ ಯೋಜನೆಯು ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಾನೂನು, ಬ್ಯಾಂಕಿಂಗ್ ಮತ್ತು ಆಡಳಿತದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಹೇಗೆ ಅನುವು ಮಾಡಿಕೊಡುತ್ತದೆ ಎಂಬುದನ್ನು ಅವರ ಸಾಧನೆಯು ಪ್ರತಿಬಿಂಬಿಸುತ್ತದೆ.

ವೈವಿಧ್ಯಮಯ ವಿಭಾಗಗಳಲ್ಲಿ ಶ್ರೇಷ್ಠತೆಯನ್ನು ಬೆಂಬಲಿಸುವ ಮತ್ತು ವೃತ್ತಿಪರ ವೃತ್ತಿಜೀವನಗಳಿಗೆ ಪ್ರತಿಫಲ ನೀಡುವ ಮಾರ್ಗಗಳನ್ನು ಸೃಷ್ಟಿಸುವ ಯೋಜನೆಯ ಸಾಮರ್ಥ್ಯವನ್ನು ಈ ಉದಾಹರಣೆಗಳು ಪ್ರದರ್ಶಿಸುತ್ತವೆ.

ಸೃಜನಶೀಲತೆ, ಉದ್ಯಮಶೀಲತೆ ಮತ್ತು ಸಂಶೋಧನೆಯನ್ನು ಬೆಳೆಸುವುದು

ಈ ಯೋಜನೆಯು ವಿದ್ಯಾರ್ಥಿಗಳನ್ನು ನಾವೀನ್ಯತೆ, ಸೃಜನಶೀಲತೆ ಮತ್ತು ಉದ್ಯಮಶೀಲತೆಯನ್ನು ಅನುಸರಿಸಲು ಪ್ರೋತ್ಸಾಹಿಸುತ್ತಿದೆ.

ಅಹಮದಾಬಾದ್ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ ವಿದ್ಯಾರ್ಥಿನಿ ಕು. ವರ್ತಿಕಾ ಸೋಂಕರ್, ಯೋಜನೆಯ ಮೂಲಕ ಸೃಷ್ಟಿಯಾದ ಅವಕಾಶಗಳನ್ನು ತಮ್ಮ ವಿನ್ಯಾಸ ಪರಿಣತಿ ಮತ್ತು ಸೃಜನಶೀಲ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಂಡರು.

Vartika Sonkar NIFT Mumbai.jpeg

ಇಂದು, ಅವರು ವೃತ್ತಿಪರ ಆಭರಣ ವಿನ್ಯಾಸಕಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ ಮತ್ತು ಉದ್ಯಮದಲ್ಲಿನ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ. ಈ ಯೋಜನೆಯು ಸೃಜನಶೀಲ ವಲಯಗಳಲ್ಲಿನ ಪ್ರತಿಭೆಯನ್ನು ಹೇಗೆ ಬೆಂಬಲಿಸುತ್ತದೆ ಮತ್ತು ಉದ್ಯಮಶೀಲತಾ ಮಹತ್ವಾಕಾಂಕ್ಷೆಗಳನ್ನು ಅನುಸರಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ ಎಂಬುದನ್ನು ಅವರ ಪ್ರಯಾಣವು ಎತ್ತಿ ತೋರಿಸುತ್ತದೆ.

ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ, ಯೋಜನೆಯಡಿಯಲ್ಲಿ ಬೆಂಬಲಿತ ವಿದ್ವಾಂಸರು ಜ್ಞಾನ ಮತ್ತು ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಿದ್ದಾರೆ.

Chintala Sanjay NIT Raipur.png

ಶ್ರೀ ಚಿಂತಲಾ ಸಂಜಯ್ ಅವರು ಆರೋಗ್ಯ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸಂಶೋಧನೆ ಸೇರಿದಂತೆ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಅನ್ವಯಿಕೆಗಳಲ್ಲಿನ ತಮ್ಮ ಕೆಲಸದ ಮೂಲಕ ಶೈಕ್ಷಣಿಕ ಶ್ರೇಷ್ಠತೆಯನ್ನು ಪ್ರದರ್ಶಿಸಿದ್ದಾರೆ. ಅಂತಹ ಸಾಧನೆಗಳು ಯೋಜನೆಯಡಿಯಲ್ಲಿ ಬೆಂಬಲಿತ ವಿದ್ಯಾರ್ಥಿಗಳ ನಾವೀನ್ಯತೆ-ಚಾಲಿತ ವಲಯಗಳಿಗೆ ಹೆಚ್ಚುತ್ತಿರುವ ಕೊಡುಗೆಯನ್ನು ಪ್ರತಿಬಿಂಬಿಸುತ್ತವೆ.

ಅನೇಕ ವಿದ್ವಾಂಸರು ಮುಂದುವರಿದ ಶೈಕ್ಷಣಿಕ ಮತ್ತು ಸಂಶೋಧನಾ ಆಕಾಂಕ್ಷೆಗಳನ್ನು ಅನುಸರಿಸುತ್ತಿದ್ದಾರೆ, ಭಾರತದ ಜ್ಞಾನ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡುತ್ತಿದ್ದಾರೆ ಮತ್ತು ದೇಶದ ನಾವೀನ್ಯತೆ ಸಾಮರ್ಥ್ಯವನ್ನು ಬಲಪಡಿಸುತ್ತಿದ್ದಾರೆ.

ಆಕಾಂಕ್ಷೆ ಮತ್ತು ಸಾಧನೆಯ ಸಂಸ್ಕೃತಿಯನ್ನು ಸೃಷ್ಟಿಸುತ್ತಿದ್ದಾರೆ

ಶೈಕ್ಷಣಿಕ ಸಾಧನೆ ಮತ್ತು ವೃತ್ತಿಪರ ಯಶಸ್ಸಿನ ಹೊರತಾಗಿ, ಈ ಯೋಜನೆಯು ಆಕಾಂಕ್ಷೆ, ಆತ್ಮವಿಶ್ವಾಸ ಮತ್ತು ಸಾಧನೆಯ ಸಂಸ್ಕೃತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತಿದೆ.

ಯೋಜನೆಯಡಿಯಲ್ಲಿ ಬೆಂಬಲಿತ ವಿದ್ಯಾರ್ಥಿಗಳು ಹೆಚ್ಚಿನ ಗಮನ ಮತ್ತು ನಿರ್ಣಯದೊಂದಿಗೆ ಶೈಕ್ಷಣಿಕ, ಸಂಶೋಧನೆ, ನಾವೀನ್ಯತೆ, ಉದ್ಯಮಶೀಲತೆ ಮತ್ತು ವೃತ್ತಿಪರ ಅಭಿವೃದ್ಧಿಯಲ್ಲಿ ಅವಕಾಶಗಳನ್ನು ಅನುಸರಿಸುತ್ತಿದ್ದಾರೆ. ಅವರ ಸಾಧನೆಗಳು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಅವಕಾಶಗಳನ್ನು ವಿಸ್ತರಿಸುವಲ್ಲಿ ಮತ್ತು ಸಾಮರ್ಥ್ಯವನ್ನು ವೃತ್ತಪರ ಕ್ಷೇತ್ರದ ಬಾಗಿಲು ತೆರೆಯುಂತೆ ಮಾಡುವಲ್ಲಿ ಶಿಕ್ಷಣದ ಪರಿವರ್ತಕ ಪಾತ್ರವನ್ನು ಬಲಪಡಿಸುತ್ತವೆ.

ಈ ಪರಿಣಾಮವು ವೈಯಕ್ತಿಕ ಸಾಧನೆಗಳನ್ನು ಮೀರಿ ವಿಸ್ತರಿಸುತ್ತದೆ, ಬಲವಾದ ಕುಟುಂಬಗಳು, ಹೆಚ್ಚು ಮಹತ್ವಾಕಾಂಕ್ಷೆಯ ಸಮುದಾಯಗಳು ಮತ್ತು ಹೆಚ್ಚು ಕೌಶಲ್ಯಪೂರ್ಣ ಮತ್ತು ಆತ್ಮವಿಶ್ವಾಸದ ಕಾರ್ಯಪಡೆಗೆ ಕೊಡುಗೆ ನೀಡುತ್ತದೆ.

ಅಂತರ್ಗತ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು

“ಎಸ್.ಸಿ. ವಿದ್ಯಾರ್ಥಿಗಳಿಗಾಗಿ ಉನ್ನತ ದರ್ಜೆಯ ಶಿಕ್ಷಣ ಯೋಜನೆ”ಯು ಶೈಕ್ಷಣಿಕ ಸಬಲೀಕರಣ, ಸೇರ್ಪಡೆ ಮತ್ತು ಸಮಾನ ಅವಕಾಶಕ್ಕೆ ಭಾರತ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಯೋಜನೆಯಡಿಯಲ್ಲಿ ಬೆಂಬಲಿತ ವಿದ್ಯಾರ್ಥಿಗಳ ಸಾಧನೆಗಳು ಗುಣಮಟ್ಟದ ಶಿಕ್ಷಣದ ಪ್ರವೇಶವು ಪ್ರತಿಭೆಯನ್ನು ಹೇಗೆ ಪೋಷಿಸುತ್ತದೆ, ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ವಲಯಗಳಲ್ಲಿ ನಾಯಕತ್ವಕ್ಕೆ ಮಾರ್ಗಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಪ್ರದರ್ಶಿಸುತ್ತದೆ. ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ನಿಂದ ಕಾನೂನು, ನಿರ್ವಹಣೆ, ವಿನ್ಯಾಸ ಮತ್ತು ಸಂಶೋಧನೆಯವರೆಗೆ, ಈ ವಿದ್ವಾಂಸರು ಜ್ಞಾನ-ಚಾಲಿತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ರಾಷ್ಟ್ರವಾಗುವತ್ತ ಭಾರತದ ಪ್ರಯಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ.

ಯೋಜನೆಯಡಿಯಲ್ಲಿನ ಪ್ರತಿಯೊಂದು ಸಾಧನೆಯು ಪ್ರತಿಭೆ, ಅವಕಾಶ ಮತ್ತು ನಿರ್ಣಯದ ಯಶಸ್ವಿ ಒಮ್ಮುಖವನ್ನು ಪ್ರತಿನಿಧಿಸುತ್ತದೆ. ಯೋಜನೆಯು ತನ್ನ ಅನುಷ್ಠಾನದ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇರುವುದರಿಂದ, ಇದು ಆತ್ಮವಿಶ್ವಾಸದ ವೃತ್ತಿಪರರು, ನಾವೀನ್ಯಕಾರರು, ಉದ್ಯಮಿಗಳು ಮತ್ತು ನಾಯಕರ ಪೀಳಿಗೆಯನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ, ಅವರ ಕೊಡುಗೆಗಳು ಅಭಿವೃದ್ಧಿ ಹೊಂದಿದ, ಅಂತರ್ಗತ ಮತ್ತು ಸ್ವಾವಲಂಬಿ ಭಾರತದ ಭವಿಷ್ಯವನ್ನು ರೂಪಿಸುತ್ತವೆ.

 

*****


(रिलीज़ आईडी: 2272944) आगंतुक पटल : 16
इस विज्ञप्ति को इन भाषाओं में पढ़ें: English , Urdu , हिन्दी , Tamil