ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

ರಾಜ್ಯ ಹಣಕಾಸು ಆಯೋಗಗಳ ದತ್ತಾಂಶಗಳ ಕುರಿತಾದ ವರದಿ ಬಿಡುಗಡೆ


“ಸಮರ್ಥ ಹಣಕಾಸು ನಿರ್ಧಾರಗಳಿಗೆ ವಿಶ್ವಾಸಾರ್ಹ, ಸಕಾಲಿಕ ಮತ್ತು ಸೂಕ್ಷ್ಮ ಮಟ್ಟದ ದತ್ತಾಂಶ ಅತ್ಯಗತ್ಯ” : ಡಾ. ವಿ. ಅನಂತ ನಾಗೇಶ್ವರನ್

“ಪರಿಣಾಮಕಾರಿ ರಾಜ್ಯ ಹಣಕಾಸು ಆಯೋಗಗಳಿಗಾಗಿ ಬಲವಾದ ಸಮನ್ವಯ, ಉತ್ತಮ ದತ್ತಾಂಶ ಅತ್ಯಗತ್ಯ” : ಶ್ರೀ ವಿವೇಕ್ ಭಾರದ್ವಾಜ್

प्रविष्टि तिथि: 08 JUN 2026 8:12PM by PIB Bengaluru

ದತ್ತಾಂಶ ಆಧಾರಿತ ಹಣಕಾಸು ವಿಕೇಂದ್ರೀಕರಣವನ್ನು ಉತ್ತೇಜಿಸುವಲ್ಲಿ ಮತ್ತು ತಳಮಟ್ಟದ ಆಡಳಿತವನ್ನು ಬಲಪಡಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಡಾ. ವಿ. ಅನಂತ ನಾಗೇಶ್ವರನ್ ಅವರು ಇಂದು ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್, ಪಂಚಾಯತ್ ರಾಜ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸುಶೀಲ್ ಕುಮಾರ್ ಲೋಹಾನಿ, ಪಂಚಾಯತ್ ರಾಜ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಮುಕ್ತಾ ಶೇಖರ್ ಮತ್ತು ಸಂಶೋಧನಾ ಸಂಸ್ಥೆಗಳು ಹಾಗೂ ನೀತಿ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಮತ್ತು ಗಣ್ಯ ಪ್ರತಿನಿಧಿಗಳ ಸಮ್ಮುಖದಲ್ಲಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ರಾಜ್ಯ ಹಣಕಾಸು ಆಯೋಗಗಳ ದತ್ತಾಂಶಗಳ ಸಮಿತಿ ವರದಿ'ಯನ್ನು ಬಿಡುಗಡೆ ಮಾಡಿದರು.

ಸಶಕ್ತ ಸ್ಥಳೀಯ ಸ್ವಯಂ-ಸರ್ಕಾರ ಮತ್ತು ಸಮಗ್ರ ಅಭಿವೃದ್ಧಿಗೆ ಅತ್ಯಗತ್ಯವಾದ ಬುನಾದಿಯಾಗಿರುವ ದತ್ತಾಂಶ ಆಧಾರಿತ ನೀತಿ ನಿರೂಪಣೆ ಮತ್ತು ಪುರಾವೆ ಆಧಾರಿತ ಹಣಕಾಸು ಆಡಳಿತದ ಕುರಿತು ಮುಖ್ಯ ಭಾಷಣ ಮಾಡಿದ ಡಾ. ವಿ. ಅನಂತ ನಾಗೇಶ್ವರನ್ ಅವರು, ನಾಗರಿಕರು ಆಡಳಿತವನ್ನು ಕುಡಿಯುವ ನೀರು, ರಸ್ತೆಗಳು, ಬೀದಿ ದೀಪಗಳು ಮತ್ತು ಅಂಗನವಾಡಿ ಸೇವೆಗಳಂತಹ ಮೂಲಭೂತ ಸೇವೆಗಳ ಲಭ್ಯತೆಯ ಮೂಲಕವೇ ಅನುಭವಿಸುತ್ತಾರೆ, ಇದರಿಂದಾಗಿ ಸಶಕ್ತ ಪಂಚಾಯತ್‌ ಗಳು ಪರಿಣಾಮಕಾರಿ ಆಡಳಿತಕ್ಕೆ ಕೇಂದ್ರಬಿಂದುವಾಗಿವೆ ಎಂದು ಹೇಳಿದರು. ಹಣಕಾಸು ವಿಕೇಂದ್ರೀಕರಣ ಎಂದರೆ ಅಂತಿಮವಾಗಿ ಆಡಳಿತವನ್ನು ಜನರ ಜೀವನವನ್ನು ಸ್ಪರ್ಶಿಸುವಷ್ಟು ಹತ್ತಿರಕ್ಕೆ ಕೊಂಡೊಯ್ಯುವುದಾಗಿದೆ ಮತ್ತು ರಾಜ್ಯ ಹಣಕಾಸು ಆಯೋಗಗಳು (ಎಸ್‌ ಎಫ್‌‌ ಸಿ) ವಿಶ್ವಾಸಾರ್ಹ, ಸಕಾಲಿಕ ಹಾಗೂ ಸೂಕ್ಷ್ಮ ಮಟ್ಟದ ದತ್ತಾಂಶಗಳನ್ನು ಹೊಂದಿದ್ದಾಗ ಮಾತ್ರ ಉತ್ತಮ ಶಿಫಾರಸುಗಳನ್ನು ಮಾಡಲು ಸಾಧ್ಯ ಎಂದು ಅವರು ತಿಳಿಸಿದರು. ಉತ್ತಮ ದತ್ತಾಂಶವು ಉತ್ತಮ ಆಡಳಿತಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಸಂಪನ್ಮೂಲ ಹಂಚಿಕೆಯ ನಿರ್ಧಾರಗಳ ಗುಣಮಟ್ಟವು ಲಭ್ಯವಿರುವ ದತ್ತಾಂಶ ಮತ್ತು ವಿಶ್ಲೇಷಣೆಯ ಗುಣಮಟ್ಟದಿಂದ ನೇರವಾಗಿ ನಿರ್ಧರಿತವಾಗುತ್ತದೆ ಎಂದು ಅವರು  ಉಲ್ಲೇಖಿಸಿದರು ಮತ್ತು ಈ ವರದಿಯನ್ನು ಸ್ಥಳೀಯ ಆಡಳಿತದ ಮಾಹಿತಿ ವ್ಯವಸ್ಥೆಯನ್ನು ಬಲಪಡಿಸುವ ಪ್ರಮುಖ ಹೆಜ್ಜೆ ಎಂದು ಬಣ್ಣಿಸಿದರು. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕ್ರಿಯಾತ್ಮಕ, ಹಣಕಾಸು ಮತ್ತು ಆಡಳಿತಾತ್ಮಕ ಅಧಿಕಾರಗಳು ಎಷ್ಟರ ಮಟ್ಟಿಗೆ ವಿಕೇಂದ್ರೀಕರಣಗೊಂಡಿವೆ ಎಂಬುದನ್ನು ಮೌಲ್ಯಮಾಪನ ಮಾಡಲು, ದೇಶಾದ್ಯಂತ 73ನೇ ಸಂವಿಧಾನ ತಿದ್ದುಪಡಿಯ ಅನುಷ್ಠಾನದ ಕುರಿತು ಕಾಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ ಕಾರ್ಯಕ್ಷಮತೆ ತನಿಖೆ ನಡೆಸಬೇಕು ಎಂಬ ವರದಿಯ ಶಿಫಾರಸನ್ನು ಡಾ. ನಾಗೇಶ್ವರನ್ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು, ಈ ಉಪಕ್ರಮವು ಹೊಣೆಗಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಸಾಂವಿಧಾನಿಕ ವಿಕೇಂದ್ರೀಕರಣದ ಪ್ರಯೋಜನಗಳನ್ನು ಆಳಗೊಳಿಸುತ್ತದೆ ಎಂದರು. ಈ ವರದಿಯನ್ನು ಸಿದ್ಧಪಡಿಸಿದ ಪಂಚಾಯತ್ ರಾಜ್ ಸಚಿವಾಲಯವನ್ನು ಶ್ಲಾಘಿಸಿದ ಅವರು, ಇದರ ಶಿಫಾರಸುಗಳು ಹಣಕಾಸು ವಿಕೇಂದ್ರೀಕರಣವನ್ನು ಬಲಪಡಿಸಲು, ಸ್ಥಳೀಯ ಸಾರ್ವಜನಿಕ ಹಣಕಾಸನ್ನು ಸುಧಾರಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಸುಸ್ಥಾಪಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಗಣನೀಯ ಕೊಡುಗೆ ನೀಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಆರಂಭಿಕ ಭಾಷಣ ಮಾಡಿದ ಶ್ರೀ ವಿವೇಕ್ ಭಾರದ್ವಾಜ್ ಅವರು, ರಾಜ್ಯ ಹಣಕಾಸು ಆಯೋಗಗಳು ಮತ್ತು ಕೇಂದ್ರ ಹಣಕಾಸು ಆಯೋಗಗಳ ನಡುವೆ ಹೆಚ್ಚಿನ ಸಮನ್ವಯತೆಯ ಅಗತ್ಯವನ್ನು ತಿಳಿಸಿದರು. ರಾಜ್ಯ ಹಣಕಾಸು ಆಯೋಗಗಳ ಶಿಫಾರಸುಗಳ ಗುಣಮಟ್ಟ ಮತ್ತು ಸಕಾಲಿಕತೆಯನ್ನು ಸುಧಾರಿಸಲು ವಿಶ್ವಾಸಾರ್ಹ ಮತ್ತು ಸುಲಭವಾಗಿ ಲಭ್ಯವಾಗುವ ದತ್ತಾಂಶಗಳು ಮೂಲಭೂತವಾಗಿವೆ ಎಂದು ಅವರು ಹೇಳಿದರು. ದತ್ತಾಂಶ ವಿಶ್ಲೇಷಣೆ ಮತ್ತು ಡಿಜಿಟಲ್  ವೇದಿಕೆಗಳ ಬಳಕೆಯ ಮೂಲಕ ಡಿಜಿಟಲ್ ರೂಪಾಂತರದ ವಿಭಾಗದಲ್ಲಿ, 'ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗಳು 2026' ರ ಅಡಿಯಲ್ಲಿ 'ಪಂಚಾಯತ್ ಪ್ರಗತಿ ಸೂಚ್ಯಂಕ' ಸುವರ್ಣ ಪ್ರಶಸ್ತಿಗೆ ಆಯ್ಕೆಯಾಗಿದೆ ಮತ್ತು ಈ ವರ್ಷ ಘೋಷಿಸಲಾದ 16 ಪ್ರಶಸ್ತಿಗಳಲ್ಲಿ ನಾಲ್ಕು ಪಂಚಾಯತ್ ಸಂಬಂಧಿತ ಉಪಕ್ರಮಗಳಿಗೆ ಲಭಿಸಿದೆ ಎಂಬ ಸುದ್ದಿಯನ್ನು ಹಂಚಿಕೊಂಡ ಶ್ರೀ ಭಾರದ್ವಾಜ್ ಅವರು, ಭಾರತದ ಆಡಳಿತ ವ್ಯವಸ್ಥೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ವಿವರಿಸಿದರು. ಸುಸ್ಥಿರ ವಿಕೇಂದ್ರೀಕರಣಕ್ಕೆ ಕೇವಲ ಹಣಕಾಸು ವರ್ಗಾವಣೆ ಮಾತ್ರವಲ್ಲದೆ ಬಲವಾದ ಸಾಂಸ್ಥಿಕ ಸುಧಾರಣೆಗಳೂ ಅಗತ್ಯ ಎಂದು ಅವರು ಒತ್ತಿಹೇಳಿದರು. ಸ್ಥಳೀಯ ಸರ್ಕಾರಗಳ ದತ್ತಾಂಶ ವ್ಯವಸ್ಥೆಯನ್ನು ಬಲಪಡಿಸುವುದರಿಂದ ಪುರಾವೆ ಆಧಾರಿತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸು ಹಂಚಿಕೆಯ ಪರಿಣಾಮಕಾರಿತನವನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದರು. ಹದಿನಾರನೇ ಹಣಕಾಸು ಆಯೋಗದೊಂದಿಗೆ ಸಚಿವಾಲಯವು ನಡೆಸಿದ ನಿರಂತರ ಪ್ರಯತ್ನಗಳ ಎರಡು ಪ್ರಮುಖ ಫಲಿತಾಂಶಗಳನ್ನು ಶ್ರೀ ಭಾರದ್ವಾಜ್ ಒತ್ತಿ ಹೇಳಿದರು. ಮೊದಲನೆಯದಾಗಿ, ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಅರೆ-ನಗರ ಪ್ರದೇಶಗಳ ಆಡಳಿತಾತ್ಮಕ ಅಗತ್ಯಗಳನ್ನು ಗುರುತಿಸಿ, ಪಟ್ಟಣಗಳು ನಗರ ಸಂಸ್ಥೆಗಳಾಗಿ ಪರಿವರ್ತನೆಗೊಳ್ಳುವುದನ್ನು ನಿರ್ವಹಿಸುವ ಸ್ಥಳೀಯ ಸಂಸ್ಥೆಗಳಿಗೆ ಬೆಂಬಲ ನೀಡಲು ಆಯೋಗವು ₹10,000 ಕೋಟಿಯ ನಗರೀಕರಣ ಪ್ರೀಮಿಯಂ ಅನ್ನು ಪ್ರಸ್ತಾಪಿಸಿದೆ. ಅರೆ-ನಗರ ರೂಪಾಂತರದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ಕೈಗೊಂಡ ಮೊದಲ ಸಮರ್ಪಿತ ರಾಷ್ಟ್ರೀಯ ಉಪಕ್ರಮ ಇದಾಗಿದೆ ಎಂದು ಅವರು ಹೇಳಿದರು. ಎರಡನೆಯದಾಗಿ, ಆಯೋಗವು ಕಾರ್ಯಕ್ಷಮತೆ ಆಧಾರಿತ ಅನುದಾನ ವ್ಯವಸ್ಥೆಯನ್ನು ಪುನಃ ಪರಿಚಯಿಸಿದ್ದು, ಕೇವಲ ಪಂಚಾಯತ್‌ ಗಳಿಗಾಗಿಯೇ ₹₹87,000 ಕೋಟಿಯನ್ನು ನಿಗದಿಪಡಿಸಿದೆ ಎಂದು ಅವರು ತಿಳಿಸಿದರು. ಈ ಅನುದಾನಗಳು ಸ್ವಂತ ಮೂಲದ ಆದಾಯದಲ್ಲಿ ಕನಿಷ್ಠ ಶೇಕಡಾ 2.5 ರಷ್ಟು ವಾರ್ಷಿಕ ಬೆಳವಣಿಗೆಯನ್ನು ಹೊಂದುವುದಕ್ಕೆ ಲಿಂಕ್ ಆಗಿರುತ್ತವೆ, ಇದು ಸ್ಥಳೀಯ ಸರ್ಕಾರಗಳ ಹೆಚ್ಚುತ್ತಿರುವ ಹಣಕಾಸು ಸಾಮರ್ಥ್ಯ ಮತ್ತು ಸ್ವಾವಲಂಬನೆಯ ಮೇಲಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ರಾಜ್ಯ ಹಣಕಾಸು ಆಯೋಗಗಳ ದತ್ತಾಂಶಗಳ ಸಮಿತಿಯ ಸದಸ್ಯ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿ (NIPFP) ಯ ಸಹ ಪ್ರಾಧ್ಯಾಪಕರಾದ ಡಾ. ಮನೀಶ್ ಗುಪ್ತಾ ಅವರು, ಸ್ಥಳೀಯ ಸಾರ್ವಜನಿಕ ಹಣಕಾಸು ಮತ್ತು ಹಣಕಾಸು ವಿಕೇಂದ್ರೀಕರಣದ ಗುಣಮಟ್ಟವನ್ನು ಬಲಪಡಿಸಲು ಬಲವಾದ ದತ್ತಾಂಶಗಳು ಮತ್ತು ಪುರಾವೆ ಆಧಾರಿತ ವಿಶ್ಲೇಷಣೆಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಪಂಚಾಯತ್ ಮಟ್ಟದಲ್ಲಿ ಸುಲಭವಾಗಿ ಲಭ್ಯವಿರುವ, ಪ್ರಮಾಣೀಕೃತ ಮತ್ತು ಸೂಕ್ಷ್ಮ ಮಟ್ಟದ ದತ್ತಾಂಶಗಳನ್ನು ಬಳಸಿಕೊಳ್ಳುವುದು ರಾಜ್ಯ ಹಣಕಾಸು ಆಯೋಗಗಳ ಮುಂದಿರುವ ದೊಡ್ಡ ಅವಕಾಶಗಳಲ್ಲಿ ಒಂದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು, ಮತ್ತು ದತ್ತಾಂಶ ವ್ಯವಸ್ಥೆಗಳನ್ನು ಬಲಪಡಿಸುವುದು ಕೇವಲ ಎಸ್‌ ಎಫ್‌ ಸಿ ವರದಿಗಳನ್ನು ಸುಧಾರಿಸುವುದಕ್ಕಾಗಿ ಮಾತ್ರವಲ್ಲ, ಸ್ಥಳೀಯ ಸರ್ಕಾರಗಳು ಪರಿಣಾಮಕಾರಿ ಸ್ವಯಂ-ಆಡಳಿತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲು ಅವುಗಳನ್ನು ಸಶಕ್ತಗೊಳಿಸುವುದಾಗಿದೆ ಎಂದರು.

ರಾಜ್ಯ ಹಣಕಾಸು ಆಯೋಗಗಳ ದತ್ತಾಂಶಗಳ ವರದಿಯು ಹಣಕಾಸು, ಜನಸಂಖ್ಯೆ, ಆಡಳಿತ, ಮೂಲಸೌಕರ್ಯ ಮತ್ತು ಸೇವಾ ವಿತರಣೆಯ ಆಯಾಮಗಳಲ್ಲಿ ರಾಜ್ಯ ಹಣಕಾಸು ಆಯೋಗಗಳಿಗೆ ಅಗತ್ಯವಿರುವ ದತ್ತಾಂಶಗಳನ್ನು ಗುರುತಿಸಿದೆ. ಸಮಿತಿಯು ಪ್ರಸ್ತಾಪಿಸಿರುವ ಪ್ರಮುಖ ಶಿಫಾರಸುಗಳಲ್ಲಿ ಪಂಚಾಯತ್ ಮಟ್ಟದ ಹಣಕಾಸು ದತ್ತಾಂಶ ಸಂಗ್ರಹಗಳ ಅಭಿವೃದ್ಧಿ, ಎಸ್‌ ಎಫ್‌ ಸಿ ಬಳಕೆಗಾಗಿ ಪಂಚಾಯತ್ ಪ್ರಗತಿ ಸೂಚ್ಯಂಕದ ಸೂಚಕಗಳ ವರ್ಗೀಕರಣ, ರಾಜ್ಯ ಸರ್ಕಾರಗಳ ಒಳಗೆ ಸಮರ್ಪಿತ ರಾಜ್ಯ ಹಣಕಾಸು ಆಯೋಗದ ಕೋಶಗಳನ್ನು ಸ್ಥಾಪಿಸುವುದು, ಲೆಕ್ಕಪತ್ರ ಚೌಕಟ್ಟುಗಳ ಪ್ರಮಾಣೀಕರಣ, ಎಸ್‌ ಎಫ್‌ ಸಿ ಗಳಿಗಾಗಿ ಸಾಮಾನ್ಯ ವರದಿ ಚೌಕಟ್ಟನ್ನು ಅಳವಡಿಸಿಕೊಳ್ಳುವುದು, ಸಮಗ್ರ ದತ್ತಾಂಶ ಕೈಪಿಡಿಗಳ ಪ್ರಕಟಣೆ, ಮತ್ತು ಭವಿಷ್ಯದ ಆಯೋಗಗಳಿಗೆ ಬೆಂಬಲ ನೀಡಲು ರಾಜ್ಯ ಹಣಕಾಸು ಆಯೋಗದ ಕೈಪಿಡಿ ಸಿದ್ಧಪಡಿಸುವುದು ಸೇರಿವೆ. 'ವಿಕಸಿತ ಭಾರತ್ @2047' ರ ಪ್ರಯಾಣದ ಭಾಗವಾಗಿ ಭಾರತದಲ್ಲಿ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣವನ್ನು ಆಳಗೊಳಿಸಲು ಮತ್ತು ಸ್ಥಳೀಯ ಸಾರ್ವಜನಿಕ ಹಣಕಾಸನ್ನು ಬಲಪಡಿಸಲು ಬದ್ಧವಾಗಿರುವ ರಾಜ್ಯ ಸರ್ಕಾರಗಳು, ರಾಜ್ಯ ಹಣಕಾಸು ಆಯೋಗಗಳು, ಸಾಂವಿಧಾನಿಕ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳಿಗೆ ಈ ವರದಿಯು ಒಂದು ಅಧಿಕೃತ ಉಲ್ಲೇಖವಾಗಿ ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಹಿನ್ನೆಲೆ

ಭಾರತದ ಸಂವಿಧಾನದ 243-I ವಿಧಿಯಡಿ ರಚಿಸಲಾದ ರಾಜ್ಯ ಹಣಕಾಸು ಆಯೋಗಗಳು, ಪಂಚಾಯತ್ ರಾಜ್ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಮತ್ತು ಸ್ಥಳೀಯ ಸರ್ಕಾರಗಳಿಗೆ ಹಣಕಾಸು ವಿಕೇಂದ್ರೀಕರಣದ ತತ್ವಗಳನ್ನು ಶಿಫಾರಸು ಮಾಡಲು ಕಡ್ಡಾಯಗೊಳಿಸಲಾಗಿದೆ. ಹದಿನಾರನೇ ಹಣಕಾಸು ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ನವೆಂಬರ್ 2024 ರಲ್ಲಿ ಆಯೋಜಿಸಲಾಗಿದ್ದ ʼಅಭಿವೃದ್ಧಿಗಾಗಿ ವಿಕೇಂದ್ರೀಕರಣʼ ಕುರಿತ ಹಣಕಾಸು ಆಯೋಗಗಳ ಸಮಾವೇಶದಲ್ಲಿ, ರಾಜ್ಯ ಹಣಕಾಸು ಆಯೋಗಗಳ ಕಾರ್ಯನಿರ್ವಹಣೆಗೆ ಪೂರಕವಾಗಿ ಬಲವರ್ಧಿತ ದತ್ತಾಂಶ ವ್ಯವಸ್ಥೆಯ ಅಗತ್ಯವನ್ನು ಪಂಚಾಯತ್ ರಾಜ್ ಸಚಿವಾಲಯವು ಗುರುತಿಸಿತ್ತು. ಅದರಂತೆ, ಅಗತ್ಯವಿರುವ ದತ್ತಾಂಶಗಳನ್ನು ಮ್ಯಾಪ್ ಮಾಡಲು, ಅಸ್ತಿತ್ವದಲ್ಲಿರುವ ಮೂಲಗಳನ್ನು ಪರಿಶೀಲಿಸಲು ಮತ್ತು ಪುರಾವೆ ಆಧಾರಿತ ಹಣಕಾಸು ವಿಕೇಂದ್ರೀಕರಣವನ್ನು ಮುನ್ನಡೆಸಲು ವ್ಯವಸ್ಥಿತ ಕ್ರಮಗಳನ್ನು ಶಿಫಾರಸು ಮಾಡಲು 'ರಾಜ್ಯ ಹಣಕಾಸು ಆಯೋಗಗಳಿಗಾಗಿ ದತ್ತಾಂಶಗಳ ಸಮಿತಿ' ಯನ್ನು ರಚಿಸಲಾಗಿತ್ತು.

 

******

 


(रिलीज़ आईडी: 2270488) आगंतुक पटल : 16
इस विज्ञप्ति को इन भाषाओं में पढ़ें: English , Urdu , हिन्दी , Gujarati