ಸಂಸದೀಯ ವ್ಯವಹಾರಗಳ ಸಚಿವಾಲಯ
ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA) ಅನುಷ್ಠಾನಕ್ಕಾಗಿ ಪಶ್ಚಿಮ ಬಂಗಾಳ ವಿಧಾನಸಭೆಯಿಂದ ಒಪ್ಪಂದಕ್ಕೆ ಸಹಿ
प्रविष्टि तिथि:
04 JUN 2026 7:27PM by PIB Bengaluru

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA- ನೆವಾ) ಅನುಷ್ಠಾನಕ್ಕಾಗಿ ಇಂದು ತ್ರಿಪಕ್ಷೀಯ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಾಯಿತು. ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು; ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್; ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವರು ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ಸಭಾಪತಿಗಳ ಗೌರವಾನ್ವಿತ ಉಪಸ್ಥಿತಿಯಲ್ಲಿ ಈ ಒಪ್ಪಂದ ನಡೆಯಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಮುಖ ಅಂಶಗಳು
ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಶ್ರೀ ಕಿರಣ್ ರಿಜಿಜು ಅವರು, ಶಾಸಕಾಂಗ ಸಂಸ್ಥೆಗಳಲ್ಲಿ ಡಿಜಿಟಲ್ ರೂಪಾಂತರದ ಮಹತ್ವವನ್ನು ಎತ್ತಿ ತೋರಿಸಿದರು. ಪಶ್ಚಿಮ ಬಂಗಾಳ ವಿಧಾನಸಭೆಯು ಸಂಪೂರ್ಣ ಡಿಜಿಟಲ್ ಸದನವಾಗಿ ಹೊರಹೊಮ್ಮುವ ಪ್ರಯಾಣಕ್ಕೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಅವರು ಈ ಉಪಕ್ರಮವನ್ನು ಸ್ವಾಗತಿಸಿದರು ಮತ್ತು ತಂತ್ರಜ್ಞಾನದ ಅಳವಡಿಕೆಯ ಮೂಲಕ ಆಡಳಿತ ಸಂಸ್ಥೆಗಳನ್ನು ಆಧುನೀಕರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು, ಶಾಸಕಾಂಗದ ಕಾರ್ಯನಿರ್ವಹಣೆಯನ್ನು ಬಲಪಡಿಸಲು ಮತ್ತು ಸದಸ್ಯರು ಶಾಸಕಾಂಗ ಮಾಹಿತಿಯನ್ನು ಸಮಯೋಚಿತ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಸುಲಭಲಭ್ಯವಾಗಲು ಡಿಜಿಟಲ್ ವೇದಿಕೆಗಳ ಪಾತ್ರವನ್ನು ಒತ್ತಿಹೇಳಿದರು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವರು ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು, ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಲು, ಪಾರದರ್ಶಕತೆಯನ್ನು ಸುಧಾರಿಸಲು ಮತ್ತು ಶಾಸಕಾಂಗ ಮಾಹಿತಿಯ ಲಭ್ಯತೆಯನ್ನು ಹೆಚ್ಚಿಸಲು ತಂತ್ರಜ್ಞಾನದ ಮಹತ್ವವನ್ನು ಎತ್ತಿ ತೋರಿಸಿದರು.
ಪಶ್ಚಿಮ ಬಂಗಾಳ ವಿಧಾನಸಭೆಯ ಸಭಾಪತಿ ಶ್ರೀ ರತೀಂದ್ರ ಬೋಸ್ ಅವರು, ನೆವಾ ಅನುಷ್ಠಾನವು ರಾಜ್ಯದ ಶಾಸಕಾಂಗ ಕಾರ್ಯನಿರ್ವಹಣೆಯ ದಕ್ಷತೆ, ಪಾರದರ್ಶಕತೆ ಮತ್ತು ಸುಲಭಲಭ್ಯತೆಯನ್ನು ಬಲಪಡಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ನಿಕುಂಜ ಬಿಹಾರಿ ಧಾಲ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಪಶ್ಚಿಮ ಬಂಗಾಳ ವಿಧಾನಸಭೆಯು ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (ನೆವಾ) ಉಪಕ್ರಮಕ್ಕೆ ಸೇರ್ಪಡೆಯಾಗುತ್ತಿರುವುದರ ಮಹತ್ವವನ್ನು ವಿವರಿಸಿದರು. ನೆವಾ ಅಪ್ಲಿಕೇಶನ್ ವಿಧಾನಸಭೆಯು ಹೆಚ್ಚಿನ ಪಾರದರ್ಶಕತೆ, ಸಮಯಪ್ರಜ್ಞೆ ಮತ್ತು ದಕ್ಷತೆಯೊಂದಿಗೆ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಸಂಸದೀಯ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ಲೀಡರ್ (ನೆವಾ) ಶ್ರೀ ಸತ್ಯ ಪ್ರಕಾಶ್ ಅವರು ತಮ್ಮ ಭಾಷಣದಲ್ಲಿ, ಪಶ್ಚಿಮ ಬಂಗಾಳ ವಿಧಾನಸಭೆಯು ಸಂಪೂರ್ಣ ಡಿಜಿಟಲ್ ಸದನವಾಗುವ ನಿಟ್ಟಿನಲ್ಲಿ ಸಂಸದೀಯ ವ್ಯವಹಾರಗಳ ಸಚಿವಾಲಯ ಮತ್ತು ನೆವಾ ಯೋಜನೆಯಡಿ ಇರುವ ಕೇಂದ್ರ ಯೋಜನಾ ಉಸ್ತುವಾರಿ ಘಟಕ (ಸಿಪಿಎಂಯು) ಎಲ್ಲಾ ರೀತಿಯ ಅಗತ್ಯ ನೆರವನ್ನು ನೀಡಲಿದೆ ಎಂದು ಭರವಸೆ ನೀಡಿದರು.
ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕುವುದು

ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವಾಲಯದ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ಲೀಡರ್ (ನೆವಾ) ಡಾ. ಸತ್ಯ ಪ್ರಕಾಶ್; ಪಶ್ಚಿಮ ಬಂಗಾಳ ವಿಧಾನಸಭೆಯ ಪರವಾಗಿ ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಸೌಮೇಂದ್ರ ನಾಥ್ ದಾಸ್; ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಪಶ್ಚಿಮ ಬಂಗಾಳ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ವಿಶೇಷ ಕಾರ್ಯದರ್ಶಿ ಶ್ರೀಮತಿ ಸಂಪಾ ಧರ್ ಅವರು ಈ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿದರು.
ಈ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ, ಪಶ್ಚಿಮ ಬಂಗಾಳ ವಿಧಾನಸಭೆಯು NeVA ಉಪಕ್ರಮಕ್ಕೆ ಸೇರಿದ ದೇಶದ 33ನೇ ಶಾಸಕಾಂಗವಾಗಿದೆ. ಇದು ಶಾಸಕಾಂಗ ಆಡಳಿತಕ್ಕಾಗಿ "ಒಂದು ರಾಷ್ಟ್ರ - ಒಂದು ಅಪ್ಲಿಕೇಶನ್" ಎಂಬ ದೃಷ್ಟಿಕೋನದತ್ತ ದೇಶವನ್ನು ಮತ್ತೊಂದು ಹೆಜ್ಜೆ ಹತ್ತಿರ ತಂದಿದೆ. ಈಗಾಗಲೇ 21 ಶಾಸಕಾಂಗಗಳು ನೆವಾ ವೇದಿಕೆಯ ಮೂಲಕ ಸಂಪೂರ್ಣ ಡಿಜಿಟಲ್ ಕಾರ್ಯನಿರ್ವಹಣೆಗೆ ಯಶಸ್ವಿಯಾಗಿ ಪರಿವರ್ತನೆಗೊಂಡಿವೆ.
ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA -ನೆವಾ) ಒಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಒಂದು 'ಮಿಷನ್ ಮೋಡ್ ಯೋಜನೆ'ಯಾಗಿದ್ದು, ಇದು ಸಾಮಾನ್ಯ ಡಿಜಿಟಲ್ ವೇದಿಕೆಯ ಮೂಲಕ ದೇಶಾದ್ಯಂತದ ಶಾಸಕಾಂಗಗಳ ಕಾರ್ಯನಿರ್ವಹಣೆಯನ್ನು ಡಿಜಿಟಲೀಕರಣಗೊಳಿಸುವ ಮತ್ತು ಆಧುನೀಕರಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು ಪ್ರಧಾನಮಂತ್ರಿಯವರ 'ಡಿಜಿಟಲ್ ಇಂಡಿಯಾ' ದೃಷ್ಟಿಕೋನಕ್ಕೆ ಅನುಗುಣವಾಗಿದ್ದು, ಕಾಗದ ರಹಿತ, ಪಾರದರ್ಶಕ, ದಕ್ಷ ಮತ್ತು ನಾಗರಿಕ-ಕೇಂದ್ರಿತ ಶಾಸಕಾಂಗ ಆಡಳಿತವನ್ನು ಉತ್ತೇಜಿಸಲು ಶ್ರಮಿಸುತ್ತದೆ.
ನೆವಾ ವೇದಿಕೆಯು ಪ್ರಶ್ನೆಗಳು, ಮಸೂದೆಗಳು, ಸೂಚನೆಗಳು, ಭರವಸೆಗಳು, ಸಮಿತಿ ವ್ಯವಹಾರಗಳು, ವ್ಯವಹಾರಗಳ ಪಟ್ಟಿ, ಬುಲೆಟಿನ್ ಗಳು ಮತ್ತು ಇತರ ಸದನ ಸಂಬಂಧಿತ ಚಟುವಟಿಕೆಗಳು ಸೇರಿದಂತೆ ಶಾಸಕಾಂಗ ವ್ಯವಹಾರಗಳ ಸಮಗ್ರ ಡಿಜಿಟಲ್ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ. ಇದು ಸದಸ್ಯರಿಗೆ ಶಾಸಕಾಂಗ ಮಾಹಿತಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ ಮತ್ತು ಶಾಸಕಾಂಗ ದಾಖಲೆಗಳು ಹಾಗೂ ನಡಾವಳಿಗಳ ಶಾಶ್ವತ ಡಿಜಿಟಲ್ ಭಂಡಾರವನ್ನು ಸೃಷ್ಟಿಸುತ್ತದೆ.
ಈ ಯೋಜನೆಯಡಿ ಭಾಗವಹಿಸುವ ಶಾಸಕಾಂಗಗಳಿಗೆ ಸಂಸದೀಯ ವ್ಯವಹಾರಗಳ ಸಚಿವಾಲಯವು ಆರ್ಥಿಕ ನೆರವು, ತಾಂತ್ರಿಕ ಬೆಂಬಲ, ಸಾಮರ್ಥ್ಯ ವೃದ್ಧಿ ಮತ್ತು ಅನುಷ್ಠಾನದ ಸಹಾಯವನ್ನು ಒದಗಿಸುತ್ತದೆ.
*****
(रिलीज़ आईडी: 2269219)
आगंतुक पटल : 5