ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಮೂಲ ವರ್ಷ 2022-23ರ ಅನ್ವಯ ಜಿಲ್ಲಾ ದೇಶಿ ಉತ್ಪನ್ನ ಅಂದಾಜುಗಳ ಸಂಕಲನಕ್ಕಾಗಿ ಏಕರೂಪದ ಮಾರ್ಗಸೂಚಿ ಬಿಡುಗಡೆ
प्रविष्टि तिथि:
03 JUN 2026 4:00PM by PIB Bengaluru
ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI), ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (NSO), ಮೂಲ ವರ್ಷ 2022-23 ರ ಅನ್ವಯ ಜಿಲ್ಲಾ ದೇಶಿ ಉತ್ಪನ್ನ (DDP) ಅಂದಾಜುಗಳ ಸಂಕಲನದ ಕರಡು ಮಾರ್ಗಸೂಚಿಯನ್ನು ಅಧಿಕೃತ ಜಾಲತಾಣದಲ್ಲಿ 07.04.2026 ರಂದು ಪ್ರಕಟಿಸಿತ್ತು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಶೈಕ್ಷಣಿಕ ಸಂಸ್ಥೆಗಳು, ಸಂಶೋಧಕರು ಮತ್ತು ಉಪ-ರಾಜ್ಯ ಮಟ್ಟದ ಅಂಕಿ-ಅಂಶಗಳ ಬಳಕೆದಾರರು ಸೇರಿದಂತೆ ವಿವಿಧ ಪಾಲುದಾರರಿಂದ ಸಮಾಲೋಚನೆ ಮತ್ತು ಪ್ರತಿಕ್ರಿಯೆ ಪಡೆಯಲು ಇದನ್ನು ಅಪ್‌ಲೋಡ್ ಮಾಡಲಾಗಿತ್ತು.
ವಿವಿಧ ಪಾಲುದಾರರಿಂದ ಸ್ವೀಕರಿಸಲ್ಪಟ್ಟ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಅಂತಿಮಗೊಳಿಸಲಾದ “ಜಿಲ್ಲಾ ದೇಶಿ ಉತ್ಪನ್ನ (DDP) ಅಂದಾಜುಗಳ ಸಂಕಲನದ ಮಾರ್ಗಸೂಚಿ”ಯನ್ನು ಬಿಡುಗಡೆ ಮಾಡಲಾಗಿದ್ದು, MoSPI ನ ಅಧಿಕೃತ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ.
ಪರಿಷ್ಕೃತ ಮೂಲ ವರ್ಷದ ಚೌಕಟ್ಟಿನಡಿಯಲ್ಲಿ ಜಿಲ್ಲಾ ಮಟ್ಟದ ಆರ್ಥಿಕ ಅಂದಾಜುಗಳಲ್ಲಿ ಸುಸ್ಥಿರತೆ, ಹೋಲಿಕೆ ಮತ್ತು ವಿಧಾನದ ಪ್ರಮಾಣೀಕರಣವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಈ ಮಾರ್ಗಸೂಚಿಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಜಿಲ್ಲಾ ದೇಶಿ ಉತ್ಪನ್ನದ ಅಂದಾಜುಗಳ ಸಂಕಲನಕ್ಕಾಗಿ ಒಂದು ಸಮಗ್ರ ಮತ್ತು ಏಕರೂಪದ ಚೌಕಟ್ಟನ್ನು ಒದಗಿಸುತ್ತದೆ. ಈ ದಾಖಲೆಯು ಒಟ್ಟು ಜಿಲ್ಲಾ ದೇಶಿ ಉತ್ಪನ್ನ (GDDP), ನಿವ್ವಳ ಜಿಲ್ಲಾ ದೇಶಿ ಉತ್ಪನ್ನ (NDDP) ಮತ್ತು ಜಿಲ್ಲಾ ಮಟ್ಟದ ತಲಾ ಆದಾಯದ ಸಂಕಲನಕ್ಕಾಗಿ ಪರಿಕಲ್ಪನೆಗಳು, ವ್ಯಾಪ್ತಿ, ದತ್ತಾಂಶದ ಮೂಲಗಳು, ಅಂದಾಜು ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳನ್ನು ವಿವರವಾಗಿ ವಿವರಿಸುತ್ತದೆ.
ಜಿಲ್ಲಾ ಮಟ್ಟದ ದತ್ತಾಂಶಗಳ ಲಭ್ಯತೆಯ ಆಧಾರದ ಮೇಲೆ, ಸಾಧ್ಯವಿರುವ ಕಡೆಗಳಲ್ಲೆಲ್ಲಾ ಕೆಳಮಟ್ಟದಿಂದ ಮೇಲ್ಮಟ್ಟದವರೆಗಿನ ವಿಧಾನವನ್ನು ಬಳಸಿ DDP ಅಂದಾಜುಗಳನ್ನು ಸಂಕಲಿಸುವುದಕ್ಕೆ ಈ ಮಾರ್ಗಸೂಚಿಯು ಪ್ರಮುಖವಾಗಿ ಒತ್ತು ನೀಡುತ್ತದೆ. ಜಿಲ್ಲಾವಾರು ಮಾಹಿತಿ ಸಮರ್ಪಕವಾಗಿ ಲಭ್ಯವಿಲ್ಲದ ವಲಯಗಳಲ್ಲಿ, ಸುಸ್ಥಿರ ರೀತಿಯಲ್ಲಿ ಜಿಲ್ಲಾ ಮಟ್ಟದ ಅಂದಾಜುಗಳನ್ನು ಪಡೆಯಲು ಸೂಕ್ತವಾದ ಮೇಲ್ಮಟ್ಟದಿಂದ ಕೆಳಮಟ್ಟದವರೆಗಿನ ವಿಧಾನಗಳನ್ನು ಮತ್ತು ಸೂಕ್ತ ಹಂಚಿಕೆ ಸೂಚಕಗಳನ್ನು ಶಿಫಾರಸು ಮಾಡಲಾಗಿದೆ.
ಪ್ರಸ್ತುತ, 26 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಜಿಲ್ಲಾ ದೇಶಿ ಉತ್ಪನ್ನ (DDP) ಅಂದಾಜುಗಳನ್ನು ಸಂಕಲಿಸುತ್ತಿವೆ. ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಏಕರೂಪದ ಮತ್ತು ಹೋಲಿಸಬಹುದಾದ ರೀತಿಯಲ್ಲಿ DDP ಅಂದಾಜುಗಳನ್ನು ಸಂಕಲಿಸುವಂತೆ ಮಾಡಲು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI) ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಅಂತಿಮಗೊಳಿಸಲಾದ ಈ ಮಾರ್ಗಸೂಚಿಯು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಅಂದಾಜು ಮಾಡುವ ಪದ್ಧತಿಗಳನ್ನು ಸಮನ್ವಯಗೊಳಿಸಲು ಸುಲಭಗೊಳಿಸುತ್ತದೆ ಮತ್ತು ಜಿಲ್ಲಾ ಮಟ್ಟದ ಆರ್ಥಿಕ ಅಂಕಿ-ಅಂಶಗಳ ಸಿದ್ಧತೆಗಾಗಿ ಸಾಂಸ್ಥಿಕ ಚೌಕಟ್ಟನ್ನು ಬಲಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ವಿಶ್ವಾಸಾರ್ಹ ಮತ್ತು ಹೋಲಿಸಬಹುದಾದ DDP ಅಂದಾಜುಗಳ ಲಭ್ಯತೆಯು ವಿಕೇಂದ್ರೀಕೃತ ಯೋಜನೆ, ಪುರಾವೆ ಆಧಾರಿತ ನೀತಿ ನಿರೂಪಣೆ, ಪ್ರಾದೇಶಿಕ ಅಭಿವೃದ್ಧಿ ವಿಶ್ಲೇಷಣೆ ಮತ್ತು ಜಿಲ್ಲಾ ಮಟ್ಟದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೆಂಬಲ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಮಾರ್ಗಸೂಚಿಯು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ದತ್ತಾಂಶ ವ್ಯವಸ್ಥೆಗಳನ್ನು ಸುಧಾರಿಸಲು ಮತ್ತು ದೃಢವಾದ ಜಿಲ್ಲಾ ಮಟ್ಟದ ಅಂದಾಜುಗಳ ಸಿದ್ಧತೆಗಾಗಿ ಸಾಂಖ್ಯಿಕ ಸಾಮರ್ಥ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
The final Guideline is now available on the official website of MoSPI.
Click here for PDF
*****
(रिलीज़ आईडी: 2268492)
आगंतुक पटल : 7