ಪ್ರಧಾನ ಮಂತ್ರಿಯವರ ಕಛೇರಿ
ಮ್ಯಾನ್ಮಾರ್ ಅಧ್ಯಕ್ಷರ ಭಾರತದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಭಾರತ-ಮ್ಯಾನ್ಮಾರ್ ಜಂಟಿ ಹೇಳಿಕೆ
ಪ್ರಕಟಣಾ ದಿನಾಂಕ:
01 JUN 2026 7:16PM by PIB Bengaluru
ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಮ್ಯಾನ್ಮಾರ್ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷರಾದ ಯು ಮಿನ್ ಆಂಗ್ ಹ್ಲೇಂಗ್ ಅವರು 30 ಮೇ ನಿಂದ 3 ಜೂನ್ 2026 ರವರೆಗೆ ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿಯನ್ನು ನೀಡಿದರು.
ಅಧ್ಯಕ್ಷರ ಜೊತೆಯಲ್ಲಿ ಅಧ್ಯಕ್ಷರ ಕಾರ್ಯಾಲಯ, ವಿದೇಶಾಂಗ ವ್ಯವಹಾರಗಳು, ಹಣಕಾಸು ಮತ್ತು ಕಂದಾಯ, ಕೃಷಿ, ಜಾನುವಾರು ಮತ್ತು ನೀರಾವರಿ, ಮತ್ತು ಕೈಗಾರಿಕೆ ಹಾಗೂ ಎಂ.ಎಸ್.ಎಂ.ಇ. ವ್ಯವಹಾರ ಅಭಿವೃದ್ಧಿ ಸಚಿವಾಲಯಗಳ ಕೇಂದ್ರ ಸಚಿವರು ಮತ್ತು ಮ್ಯಾನ್ಮಾರ್ ನ ಸೆಂಟ್ರಲ್ ಬ್ಯಾಂಕ್ನ ಗವರ್ನರ್ ಆಗಮಿಸಿದ್ದರು. ಕೃಷಿ, ಔಷಧಗಳು, ಇಂಧನ, ಬ್ಯಾಂಕಿಂಗ್, ನಿರ್ಮಾಣ, ಮಾಹಿತಿ ತಂತ್ರಜ್ಞಾನ , ಸಂವಹನ, ವ್ಯಾಪಾರ ಮತ್ತು ಸಾರಿಗೆ (ಲಾಜಿಸ್ಟಿಕ್ಸ್) ಸೇರಿದಂತೆ ವಿವಿಧ ವಲಯಗಳ ವ್ಯಾಪಾರ ನಿಯೋಗ, ಹಾಗೂ ಮ್ಯಾನ್ಮಾರ್-ಭಾರತ ಸ್ನೇಹ ಸಂಘದ ಸದಸ್ಯರು ಮ್ಯಾನ್ಮಾರ್ ನಿಯೋಗದ ಭಾಗವಾಗಿದ್ದರು.
ಭಾರತದ ಪ್ರಧಾನ ಮಂತ್ರಿಯವರು ಮತ್ತು ಮ್ಯಾನ್ಮಾರ್ ಅಧ್ಯಕ್ಷರು ಜೂನ್ 1, 2026 ರಂದು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳನ್ನು ಪರಿಶೀಲಿಸಿದರು ಮತ್ತು ಮುಂಬರುವ ದಿನಗಳಲ್ಲಿ ಸಂಬಂಧವನ್ನು ಮುನ್ನಡೆಸುವ ಮಾರ್ಗಸೂಚಿಯನ್ನು ಸಿದ್ಧಪಡಿಸಿದರು. ಪ್ರಧಾನಮಂತ್ರಿಯವರು ಭೇಟಿ ನೀಡಿದ ಗಣ್ಯರ ಗೌರವಾರ್ಥವಾಗಿ ಮಧ್ಯಾಹ್ನದ ಔತಣಕೂಟವನ್ನು ಆಯೋಜಿಸಿದ್ದರು. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಅದೇ ದಿನ ಮ್ಯಾನ್ಮಾರ್ ಅಧ್ಯಕ್ಷರನ್ನು ಬರಮಾಡಿಕೊಂಡರು. ಇದಕ್ಕೂ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ಅಜಿತ್ ದೋವಲ್ ಅವರು ಮ್ಯಾನ್ಮಾರ್ ಅಧ್ಯಕ್ಷರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರು.
ಭೇಟಿಯ ಆರಂಭದಲ್ಲಿ, ಅಧ್ಯಕ್ಷರು 30 ಮೇ 2026 ರಂದು ಬೋಧಗಯಾಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಮಹಾಬೋಧಿ ದೇವಾಲಯ, ಮಹಾಬೋಧಿ ಧ್ಯಾನ ಕೇಂದ್ರ ಮತ್ತು ಸುಜಾತಾ ಸ್ತೂಪದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅತ್ಯಂತ ಪೂಜನೀಯವಾದ ಈ ಸ್ಥಳಗಳಿಗೆ ನೀಡಿದ ಭೇಟಿಗಳು ಉಭಯ ದೇಶಗಳ ನಡುವಿನ ಸುದೀರ್ಘ ಆಧ್ಯಾತ್ಮಿಕ ಮತ್ತು ಬೌದ್ಧ ಸಂಬಂಧಗಳನ್ನು, ಹಾಗೂ ಜನರ ನಡುವಿನ ಬಾಂಧವ್ಯಕ್ಕೆ ಒತ್ತು ಕೊಟ್ಟವು.
ಅಧ್ಯಕ್ಷರು 31 ಮೇ 2026 ರಂದು ನವದೆಹಲಿಯಲ್ಲಿ ಯು.ಎಮ್.ಎಫ್.ಸಿ.ಸಿ.ಐ ಮತ್ತು ಸಿ.ಐ.ಐ ಜಂಟಿಯಾಗಿ ಆಯೋಜಿಸಿದ್ದ ಭಾರತ-ಮ್ಯಾನ್ಮಾರ್ ಉದ್ಯಮ ಶೃಂಗಸಭೆಯಲ್ಲಿ ಪ್ರಧಾನ ಭಾಷಣ ಮಾಡಿದರು. ಅಲ್ಲಿ ಉಭಯ ದೇಶಗಳ ಉದ್ಯಮದ ಮುಖ್ಯಸ್ಥರು ದ್ವಿಪಕ್ಷೀಯ ವ್ಯಾಪಾರ ಮತ್ತು ವಾಣಿಜ್ಯ ಅವಕಾಶಗಳನ್ನು ಮತ್ತಷ್ಟು ಬಲಪಡಿಸುವ ಮತ್ತು ವಿಸ್ತರಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಅಧ್ಯಕ್ಷರು ಗ್ರೇಟರ್ ನೋಯ್ಡಾದಲ್ಲಿರುವ ಎನ್.ಟಿ.ಪಿ.ಸಿ ಇಂಧನ ತಂತ್ರಜ್ಞಾನ ಸಂಶೋಧನಾ ಒಕ್ಕೂಟದ (ಎನ್. ಇ. ಟಿ.ಆರ್.ಎ.) ಸಂಕೀರ್ಣಕ್ಕೂ ಭೇಟಿ ನೀಡಿ, ಶುದ್ಧ ಇಂಧನ ನಾವೀನ್ಯತೆ, ಇಂಧನ ದಕ್ಷತೆ, ನವೀಕರಿಸಬಹುದಾದ ಇಂಧನ ಸಂಯೋಜನೆ ಮತ್ತು ಗ್ರಿಡ್ ಚೇತರಿಕೆ ಸೇರಿದಂತೆ ಸುಧಾರಿತ ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು.
ಅಧ್ಯಕ್ಷರೊಂದಿಗಿನ ತಮ್ಮ ಸಂವಾದದಲ್ಲಿ, ಪ್ರಧಾನಮಂತ್ರಿಯವರು ಮ್ಯಾನ್ಮಾರ್ ದೇಶವು ಭಾರತದ 'ನೇಬರ್ಹುಡ್ ಫಸ್ಟ್' (ನೆರೆಹೊರೆಯವರು ಮೊದಲು), 'ಆಕ್ಟ್ ಈಸ್ಟ್' ಮತ್ತು 'ಮಹಾಸಾಗರ್' (ಪ್ರಾದೇಶಿಕ ಭದ್ರತೆ ಮತ್ತು ಬೆಳವಣಿಗೆಗಾಗಿ ಪರಸ್ಪರ ಮತ್ತು ಸಮಗ್ರ ಪ್ರಗತಿ) ನೀತಿಗಳ ಸಂಗಮದಲ್ಲಿದೆ ಎಂದು ತಿಳಿಸಿದರು. ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಮಹತ್ವವನ್ನು ಈ ಚರ್ಚೆಗಳು ಒತ್ತಿಹೇಳಿದವು, ಇದರಲ್ಲಿ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳು, ರಕ್ಷಣೆ ಮತ್ತು ಭದ್ರತೆ, ಗಡಿ ನಿರ್ವಹಣೆ, ಅಭಿವೃದ್ಧಿ ನೆರವು ಮತ್ತು ಸಾಂಸ್ಕೃತಿಕ ವಿನಿಮಯಗಳು ಸೇರಿವೆ. ವಿವಿಧ ದ್ವಿಪಕ್ಷೀಯ ಒಪ್ಪಂದಗಳು ಮತ್ತು ತಿಳುವಳಿಕಾ ಪತ್ರಗಳ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ಉಭಯ ದೇಶದವರು ನೋಡಿದರು ಮತ್ತು ಅವುಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವ ಆಶಾಭಾವನೆ ವ್ಯಕ್ತಪಡಿಸಿದರು.
ಹೆಚ್ಚಾದ ಸಂಪರ್ಕ ವ್ಯವಸ್ಥೆಯು ಈ ವಲಯದಲ್ಲಿ ಪರಸ್ಪರ ಪ್ರಯೋಜನಕಾರಿ ಆರ್ಥಿಕ ಕೊಂಡಿಗಳನ್ನು ಮತ್ತು ಹಂಚಿಕೆಯ ಸಮೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಮಂತ್ರಿಗಳು ಒತ್ತಿಹೇಳಿದರು. ಈ ನಿಟ್ಟಿನಲ್ಲಿ, ಕಲಾಡನ್ ಮಲ್ಟಿ-ಮಾಡಲ್ ಟ್ರಾನ್ಸಿಟ್ ಟ್ರಾನ್ಸ್ಪೋರ್ಟ್ ಯೋಜನೆ ಮತ್ತು ಭಾರತ-ಮ್ಯಾನ್ಮಾರ್-ಥೈಲ್ಯಾಂಡ್ ತ್ರಿಪಕ್ಷೀಯ ಹೆದ್ದಾರಿಯ ಪೂರ್ಣಗೊಳಿಸುವಿಕೆಗೆ ನಿಕಟವಾಗಿ ಶ್ರಮಿಸುವ ಪ್ರಾಮುಖ್ಯತೆಯನ್ನು ಎರಡೂ ಕಡೆಯವರು ಒಪ್ಪಿಕೊಂಡರು.
ಮ್ಯಾನ್ಮಾರ್ ವಿದ್ಯಾರ್ಥಿಗಳಿಗಾಗಿ ನೀಡಲಾಗುವ ಮೇಕಾಂಗ್ ಗಂಗಾ ಐ.ಸಿ.ಸಿ.ಆರ್ (ಐಸಿಸಿಆರ್) ವಿದ್ಯಾರ್ಥಿವೇತನವನ್ನು 2026 ರಿಂದ ಜಾರಿಗೆ ಬರುವಂತೆ 36 ರಿಂದ 100 ಕ್ಕೆ ಹೆಚ್ಚಿಸಲಾಗುವುದು ಎಂದು ಪ್ರಧಾನಮಂತ್ರಿಯವರು ತಿಳಿಸಿದರು.
ರೂಪಾಯಿ-ಕ್ಯಾತ್ (Rupee-Kyat) ಇತ್ಯರ್ಥ ಕಾರ್ಯವಿಧಾನದ ಮೂಲಕ ದ್ವಿಪಕ್ಷೀಯ ವ್ಯಾಪಾರವನ್ನು ಸುಗಮಗೊಳಿಸಲು ಮತ್ತು ಹೆಚ್ಚಿಸಲು ಉಭಯ ದೇಶದವರು ಒಪ್ಪಿಕೊಂಡರು ಮತ್ತು ಮೇ 2024ರಲ್ಲಿ ಇದು ಕಾರ್ಯರೂಪಕ್ಕೆ ಬಂದ ನಂತರ ದಾಖಲಾದ ವಹಿವಾಟಿನ ಪ್ರಮಾಣದಲ್ಲಿನ ಸ್ಥಿರ ಬೆಳವಣಿಗೆಯನ್ನು ಶ್ಲಾಘಿಸಿದರು. ಉಭಯ ದೇಶಗಳ ರಾಷ್ಟ್ರೀಯ ಕಾನೂನುಗಳು ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿ, ಕೃಷಿ-ಸಂಸ್ಕರಣೆ, ಪೆಟ್ರೋಲಿಯಂ, ಇಂಧನ, ಗಣಿಗಾರಿಕೆ ವಲಯಗಳಂತಹ ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ನಿಕಟ ವ್ಯಾಪಾರ ಮತ್ತು ಹೂಡಿಕೆ ಸಹಕಾರಕ್ಕೆ ಎರಡೂ ಕಡೆಯವರು ಬೆಂಬಲ ವ್ಯಕ್ತಪಡಿಸಿದರು.
ಮ್ಯಾನ್ಮಾರ್ ಗಣರಾಜ್ಯದ ಸಾರ್ವಭೌಮತ್ವ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಭಾರತದ ಬೆಂಬಲವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ತಮ್ಮ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಚಟುವಟಿಕೆಗಳಿಗಾಗಿ ಸಾರ್ವಭೌಮ ಪ್ರದೇಶವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವ ಪ್ರಾಮುಖ್ಯತೆಯನ್ನು ಉಭಯ ಕಡೆಯವರು ಒತ್ತಿಹೇಳಿದರು. ಭಾರತದ ಭದ್ರತಾ ಹಿತಾಸಕ್ತಿಗಳಿಗೆ ವಿರುದ್ಧ ತನ್ನ ಭೂಪ್ರದೇಶವನ್ನು ಬಳಸಲು ಅನುಮತಿಸುವುದಿಲ್ಲ ಎಂಬ ಮ್ಯಾನ್ಮಾರ್ನ ಭರವಸೆಯನ್ನು ಅಧ್ಯಕ್ಷರು ಪುನರುಚ್ಚರಿಸಿದರು. ಮ್ಯಾನ್ಮಾರ್ ನ ಅಚಲ ಮತ್ತು ವಿಶ್ವಾಸಾರ್ಹ ಪಾಲುದಾರನಾಗಿರುವ ಭಾರತವು ಉಭಯ ದೇಶಗಳ ನಡುವಿನ ಭದ್ರತಾ ಸಹಕಾರವನ್ನು ಗಾಢವಾಗಿಸಲು ಬದ್ಧವಾಗಿದೆ ಎಂದು ಪ್ರಧಾನಮಂತ್ರಿಯವರು ದೃಢಪಡಿಸಿದರು.
ಶಾಂತಿ, ಸ್ಥಿರತೆ, ದೇಶದ ಸಾಮರಸ್ಯ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಮ್ಯಾನ್ಮಾರ್ ನೇತೃತ್ವದ ಪ್ರಯತ್ನಗಳಿಗೆ ಪ್ರಧಾನಮಂತ್ರಿಯವರು ಬೆಂಬಲವನ್ನು ವ್ಯಕ್ತಪಡಿಸಿದರು. ಉಭಯ ದೇಶಗಳ ನಡುವಿನ ಪರಸ್ಪರ ಗೌರವ ಮತ್ತು ಸೌಹಾರ್ದಯುತ ಸಂಬಂಧಗಳ ಆಧಾರದ ಮೇಲೆ ನಿರಂತರ ನೆರವು ಮತ್ತು ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಭಾರತದ ರಚನಾತ್ಮಕ ಬೆಂಬಲ ಮತ್ತು ಸಹಕಾರವನ್ನು ಅಧ್ಯಕ್ಷರು ಶ್ಲಾಘಿಸಿದರು.
ಮಹಾರಾಷ್ಟ್ರದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳೊಂದಿಗೆ ಅಧ್ಯಕ್ಷರು ನಡೆಸಲಿರುವ ಸಭೆಗಳು, ಹಾಗೂ 2026 ಜೂನ್ 2 ಮತ್ತು 3ರಂದು ಮುಂಬೈಗೆ ನೀಡಲಿರುವ ಮುಂಬರುವ ಭೇಟಿಯ ಸಂದರ್ಭದಲ್ಲಿನ ಅವರ ಉದ್ಯಮ ತೊಡಗಿಸಿಕೊಳ್ಳುವಿಕೆಗಳು ಪ್ರಸ್ತುತ ಇರುವ ದ್ವಿಪಕ್ಷೀಯ ಸಹಕಾರ ಮತ್ತು ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿವೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು.
ಅಧ್ಯಕ್ಷರಾದ ಯು ಮಿನ್ ಆಂಗ್ ಹ್ಲೇಂಗ್ ಅವರ ಅಧಿಕೃತ ಭೇಟಿಯು ಮ್ಯಾನ್ಮಾರ್ ಮತ್ತು ಭಾರತದ ನಡುವಿನ ದೀರ್ಘಕಾಲದ ಸ್ನೇಹ ಮತ್ತು ನಿಕಟ ಪಾಲುದಾರಿಕೆಯನ್ನು ಹಾಗೂ ಉಭಯ ದೇಶಗಳ ಪರಸ್ಪರ ಪ್ರಯೋಜನಕ್ಕಾಗಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿತು. ಎಲ್ಲಾ ಹಂತಗಳಲ್ಲಿ ನಿಕಟ ಸಂಬಂಧವನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಅಧ್ಯಕ್ಷ ಯು ಮಿನ್ ಆಂಗ್ ಹ್ಲೇಂಗ್ ಅವರು ಭಾರತದಲ್ಲಿ ತಮಗೆ ಮತ್ತು ತಮ್ಮ ನಿಯೋಗದ ಸದಸ್ಯರಿಗೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ತಮ್ಮ ಪ್ರಾಮಾಣಿಕ ಕೃತಜ್ಞತೆಗಳನ್ನು ಅರ್ಪಿಸಿದರು. ಅಧ್ಯಕ್ಷರು ಭಾರತದ ಪ್ರಧಾನಮಂತ್ರಿಯವರನ್ನು ಪರಸ್ಪರ ಅನುಕೂಲಕರ ದಿನಾಂಕಗಳಲ್ಲಿ ಮ್ಯಾನ್ಮಾರ್ ಗೆ ಭೇಟಿ ನೀಡುವಂತೆ ಆಹ್ವಾನಿಸಿದರು.
*****
(ಪ್ರಕಟಣೆ ಐ.ಡಿ.: 2267884)
ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam