ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಜೂನ್ 1, 2026 ರ ನಂತರ ಸೌರ ಪಿವಿ ಕೋಶಗಳ ' ಎ ಎಲ್‌ ಎಮ್‌ ಎಮ್ ಪಟ್ಟಿ-II' ಗಡುವು ಸಾರಾಸಗಟಾಗಿ ವಿಸ್ತರಣೆಯಾಗುವುದಿಲ್ಲ


ಈಗಾಗಲೇ ಮಾಡಲಾದ ಹೂಡಿಕೆಗಳನ್ನು ರಕ್ಷಿಸಲು ಪ್ರಕರಣದಿಂದ ಪ್ರಕರಣದ ಆಧಾರದ ಮೇಲೆ (ಕೇಸ್-ಟು-ಕೇಸ್) ಪರಿಹಾರ

ಪ್ರಕಟಣಾ ದಿನಾಂಕ: 25 MAY 2026 7:44PM by PIB Bengaluru

ಸೌರ ಪಿವಿ ಕೋಶಗಳಿಗಾಗಿ ಮಾದರಿಗಳು ಮತ್ತು ತಯಾರಕರ ಅನುಮೋದಿತ ಪಟ್ಟಿ (ಎ ಎಲ್‌ ಎಮ್‌ ಎಮ್) ಪಟ್ಟಿ-II ರ ಅನ್ವಯಿಕತೆಯ ಗಡುವನ್ನು 1ನೇ ಜೂನ್ 2026 ರ ನಂತರ ಸಾರಾಸಗಟಾಗಿ ವಿಸ್ತರಿಸುವ ಅಗತ್ಯವಿಲ್ಲ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ನಿರ್ಧರಿಸಿದೆ. ಪಾಲುದಾರರಿಂದ ಬಂದ ಮನವಿಗಳ ವಿವರವಾದ ಪರಿಶೀಲನೆ ಮತ್ತು ಉದ್ಯಮದೊಂದಿಗೆ ನಡೆಸಿದ ವ್ಯಾಪಕ ಸಮಾಲೋಚನೆಗಳ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸೌರ ಪಿವಿ ಕೋಶಗಳ ಎ ಎಲ್‌ ಎಮ್‌ ಎಮ್ ಪಟ್ಟಿ-II ರ ಅಸ್ತಿತ್ವದಲ್ಲಿರುವ ಚೌಕಟ್ಟಿನ ಅಡಿಯಲ್ಲಿ, 1ನೇ ಜೂನ್ 2026 ಕ್ಕಿಂತ ಮೊದಲು ಕಾರ್ಯಾರಂಭ ಮಾಡಿದ ನೆಟ್-ಮೀಟರಿಂಗ್ ಯೋಜನೆಗಳು ಮತ್ತು ಓಪನ್ ಆಕ್ಸೆಸ್ ಯೋಜನೆಗಳಿಗೆ ಸೌರ ಪಿವಿ ಕೋಶಗಳ ಎ ಎಲ್ ಎಮ್ ಎಮ್ ಪಟ್ಟಿ-II ರ ಅನ್ವಯಿಸುವಿಕೆಯಿಂದ ವಿನಾಯಿತಿ ನೀಡಲಾಗಿದೆ. ಈ ದಿನಾಂಕದ ನಂತರ ಕಾರ್ಯಾರಂಭ ಮಾಡುವ ಯೋಜನೆಗಳು ಎ ಎಲ್ ಎಮ್ ಎಮ್ ಪಟ್ಟಿ-II ರ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯಕ್ಕೆ 1ನೇ ಜೂನ್ 2026 ರ ಗಡುವಿಗೆ ಸಂಬಂಧಿಸಿದಂತೆ ಹಲವಾರು ಮನವಿಗಳು ಬಂದಿದ್ದವು, ಅದರಲ್ಲಿ ಕೆಲವು ಪಾಲುದಾರರು ಗಡುವು ವಿಸ್ತರಣೆಯನ್ನು ಕೋರಿದ್ದರೆ, ಇನ್ನು ಕೆಲವರು ಯಾವುದೇ ವಿಸ್ತರಣೆಯನ್ನು ನೀಡಬಾರದು ಎಂದು ವಿನಂತಿಸಿದ್ದರು. ಈ ಪರಿಶೀಲನಾ ಪ್ರಕ್ರಿಯೆಯ ಅವಧಿಯಲ್ಲಿ, ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು 29.04.2026 ರಂದು ಹೊರಡಿಸಿದ ಕಚೇರಿ ಜ್ಞಾಪನಾ ಪತ್ರವನ್ನೂ ಸಚಿವಾಲಯವು ಪರಿಗಣಿಸಿದೆ. ಅದು ಪ್ರಸ್ತುತ ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಯುದ್ಧ ಎಂದು ಪರಿಗಣಿಸಲು ಸಲಹೆ ನೀಡಿದೆ ಮತ್ತು ನಿರ್ದಿಷ್ಟ ಪರಿಸ್ಥಿತಿಗಳ ಆಧಾರದ ಮೇಲೆ ಎರಡರಿಂದ ನಾಲ್ಕು ತಿಂಗಳ ಅವಧಿಯ ಕಾಲಾವಕಾಶ ವಿಸ್ತರಣೆಯನ್ನು ಪರಿಗಣಿಸಬಹುದೇ ಹೊರತು ಸಾರಾಸಗಟು ನೀತಿಯ ಮೂಲಕ ಅಲ್ಲ ಎಂದು ಸೂಚಿಸಿದೆ.

ಸ್ವೀಕರಿಸಿದ ಮನವಿಗಳ ವಿವರವಾದ ಪರಿಶೀಲನೆ ಮತ್ತು ವ್ಯಾಪಕ ಪಾಲುದಾರರ ಸಮಾಲೋಚನೆಗಳ ನಂತರ, ಸೌರ ಪಿವಿ ಕೋಶಗಳ ಎ ಎಲ್ ಎಮ್ ಎಮ್ ಪಟ್ಟಿ-II ರ ಅನ್ವಯಿಕತೆಯ ಗಡುವನ್ನು 1ನೇ ಜೂನ್ 2026 ರ ನಂತರ ಸಾರಾಸಗಟಾಗಿ ವಿಸ್ತರಿಸುವ ಅಗತ್ಯವಿಲ್ಲ ಎಂದು ನಿರ್ಧರಿಸಲಾಗಿದೆ.

ಆದಾಗ್ಯೂ, ಸಾರ್ವಜನಿಕ ಹಿತದೃಷ್ಟಿಯಿಂದ ಈಗಾಗಲೇ ಮಾಡಲಾದ ಹೂಡಿಕೆಗಳನ್ನು ರಕ್ಷಿಸುವ ಸಲುವಾಗಿ, ಕೆಲವು ನೆಟ್-ಮೀಟರಿಂಗ್, ಓಪನ್ ಆಕ್ಸೆಸ್ ಮತ್ತು ನವೀಕರಿಸಬಹುದಾದ ಇಂಧನ ವಿದ್ಯುತ್ ಯೋಜನೆಗಳಿಗೆ ಪ್ರಕರಣದಿಂದ ಪ್ರಕರಣದ ಆಧಾರದ ಮೇಲೆ (ಕೇಸ್-ಟು-ಕೇಸ್) ಸೂಕ್ತ ಕಾಲಾವಕಾಶ ವಿಸ್ತರಣೆಯನ್ನು ಪರಿಗಣಿಸಲಾಗುವುದು. ಇವುಗಳಲ್ಲಿ ಸೌರ ಮಾಡ್ಯೂಲ್‌ ಗಳ ಸ್ಥಾಪನೆ ಪೂರ್ಣಗೊಂಡಿದ್ದರೂ ಕಾರ್ಯಾರಂಭ ಮಾಡುವುದು ಬಾಕಿ ಇರುವ ಯೋಜನೆಗಳು, ಅಥವಾ ನವೀಕರಿಸಬಹುದಾದ ಇಂಧನ ವಿದ್ಯುತ್ ಅಭಿವರ್ಧಕರು ಈಗಾಗಲೇ ಅನುಷ್ಠಾನಕ್ಕಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿರುವ ಯೋಜನೆಗಳು ಸೇರಿವೆ. ಇಂತಹ ಪರಿಣಾಮಕಾರಿ ಕ್ರಮಗಳಲ್ಲಿ ಭೂಸ್ವಾಧೀನ, ಹಣಕಾಸಿನ ಮುಕ್ತಾಯ (ಫೈನಾನ್ಶಿಯಲ್ ಕ್ಲೋಸರ್), ಸಂಪರ್ಕ ವ್ಯವಸ್ಥೆಗಳು, ಎಲೆಕ್ಟ್ರಿಕಲ್ ಡ್ರಾಯಿಂಗ್ಸ್ ಅನುಮೋದನೆ ಮತ್ತು ಸೌರ ಮಾಡ್ಯೂಲ್‌ ಗಳ ಆಗಮನ ಅಥವಾ ಸ್ಥಾಪನೆಗಳು ಸೇರಿವೆ.

ಸಂಬಂಧಪಟ್ಟ ಅಭಿವರ್ಧಕರು ಸಲ್ಲಿಸುವ ಪೂರಕ ಮಾಹಿತಿ ಮತ್ತು ದಾಖಲೆ ಪುರಾವೆಗಳ ವಸ್ತುನಿಷ್ಠ ಮೌಲ್ಯಮಾಪನದ ನಂತರ, ಸೌರ ಪಿವಿ ಕೋಶಗಳ ಎ ಎಲ್ ಎಮ್ ಎಮ್ ಪಟ್ಟಿ-II ರ ಅನ್ವಯಿಸುವಿಕೆಗೆ ಸಂಬಂಧಿಸಿದಂತೆ ಇಂತಹ ಪ್ರಕರಣಗಳಿಗೆ ಸೂಕ್ತ ಕಾಲಾವಕಾಶ ವಿಸ್ತರಣೆಯನ್ನು ಪರಿಗಣಿಸಲಾಗುವುದು.

1ನೇ ಜೂನ್ 2026 ರ ನಂತರ ಕಾಲಾವಕಾಶ ವಿಸ್ತರಣೆಯನ್ನು ಬಯಸುವ ನವೀಕರಿಸಬಹುದಾದ ವಿದ್ಯುತ್ ಯೋಜನೆಗಳ ಅಭಿವರ್ಧಕರು ತಮ್ಮ ಕ್ಲೈಮುಗಳನ್ನು, ಅಗತ್ಯವಿರುವ ದಾಖಲೆ ಪುರಾವೆಗಳೊಂದಿಗೆ, ರಾಷ್ಟ್ರೀಯ ಸೌರ ಇಂಧನ ಸಂಸ್ಥೆ (ಎನ್‌ ಐ ಎಸ್‌ ಇ) ಇದಕ್ಕಾಗಿ ಅಭಿವೃದ್ಧಿಪಡಿಸಿರುವ ಮೀಸಲಾದ ಪೋರ್ಟಲ್ ಮೂಲಕ 30ನೇ ಜೂನ್ 2026 ರಂದು ಅಥವಾ ಅದಕ್ಕೂ ಮೊದಲು ಸಲ್ಲಿಸಬಹುದು. ಸಂಬಂಧಪಟ್ಟ ನವೀಕರಿಸಬಹುದಾದ ಇಂಧನ ವಿದ್ಯುತ್ ಅಭಿವರ್ಧಕರು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಯೋಜನೆವಾರು ಮತ್ತು ಪ್ರಕರಣದಿಂದ ಪ್ರಕರಣದ ಆಧಾರದ ಮೇಲಿನ ಕ್ಲೈಮುಗಳನ್ನು ಶಿಫಾರಸು ಮಾಡಲು ಸಚಿವಾಲಯವು ರಚಿಸಲಿರುವ ಪರಿಣಿತರ ಸಮಿತಿಯು ಈ ಕ್ಲೈಮುಗಳನ್ನು ಪರಿಶೀಲಿಸಲಿದೆ.

ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ಟ್ ಬಿಜ್ಲಿ ಯೋಜನೆ (ಪಿ ಎಂ ಎಸ್‌ ಜಿ: ಎಂಬಿವೈ) ಅಡಿಯಲ್ಲಿ ಸರಕಾರದ ಸಬ್ಸಿಡಿಯನ್ನು ಸ್ವಯಂಪ್ರೇರಿತವಾಗಿ ತ್ಯಜಿಸುವ "ಗಿವ್ ಇಟ್ ಅಪ್" ಅಭಿಯಾನದಲ್ಲಿ ಭಾಗವಹಿಸುವ ವಸತಿ ನೆಟ್-ಮೀಟರಿಂಗ್ ಗ್ರಾಹಕರು, 31ನೇ ಮಾರ್ಚ್ 2027 ರಂದು ಯೋಜನೆ ಮುಕ್ತಾಯಗೊಳ್ಳುವವರೆಗೆ ಅಸ್ತಿತ್ವದಲ್ಲಿರುವ ಯೋಜನೆ ಮಾರ್ಗಸೂಚಿಗಳ ಮೂಲಕವೇ ನಿಯಂತ್ರಿಸಲ್ಪಡುತ್ತಾರೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಸ್ಪಷ್ಟಪಡಿಸಿದೆ. ಆದಾಗ್ಯೂ, ಅಂತಹ ವಸತಿ ನೆಟ್-ಮೀಟರಿಂಗ್ ಗ್ರಾಹಕರು ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ಟ್ ಬಿಜ್ಲಿ ಯೋಜನೆಯ ರಾಷ್ಟ್ರೀಯ ಪೋರ್ಟಲ್ ಮೂಲಕವೇ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು.

ಭಾರತವನ್ನು ಸೌರ ಪಿವಿ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ಸೌರ ಪಿವಿ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ನೀತಿಯ ಸ್ಥಿರತೆಯನ್ನು ಖಾತ್ರಿಪಡಿಸುವ ಕಡೆಗೆ ಸರ್ಕಾರದ ಬದ್ಧತೆಯನ್ನು ಈ ನಿರ್ಧಾರಗಳು ಪ್ರತಿಬಿಂಬಿಸುತ್ತವೆ ಎಂದು ಸಚಿವಾಲಯ ತಿಳಿಸಿದೆ. ಈ ನಿರ್ಧಾರವು ಹೂಡಿಕೆದಾರರ ವಿಶ್ವಾಸವನ್ನು ಕಾಪಾಡುವ ಮತ್ತು ಅಭಿವರ್ಧಕರು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರೂ ಕಾರ್ಯಾರಂಭ ಮಾಡಲು ಸಾಧ್ಯವಾಗದ ನವೀಕರಿಸಬಹುದಾದ ಇಂಧನ ವಿದ್ಯುತ್ ಯೋಜನೆಗಳಲ್ಲಿ ಈಗಾಗಲೇ ಮಾಡಲಾದ ಹೂಡಿಕೆಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ.

ಹೆಚ್ಚಿನ ವಿವರಗಳು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ ನಲ್ಲಿ ದಿನಾಂಕ 25.05.2026 ರ ಸಚಿವಾಲಯದ ಒ.ಎಂ. ಸಂಖ್ಯೆ 283/63/2025-ಗ್ರಿಡ್‌ ಸೋಲಾರ್‌ ನಲ್ಲಿ ಲಭ್ಯವಿವೆ.

 

*****

 


(ಪ್ರಕಟಣೆ ಐ.ಡಿ.: 2265185) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , English , Urdu