ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಸೈಕಲ್ ರಾಷ್ಟ್ರವನ್ನು ಒಂದುಗೂಡಿಸುತ್ತದೆ ಎನ್ನುವ ಫಿಟ್ ಇಂಡಿಯಾ ಭಾನುವಾರದ 75ನೇ ಆವೃತ್ತಿಯಾಗಿ ಅಹಮದಾಬಾದ್ ನಲ್ಲಿ ಭಾರತದ ಅದ್ದೂರಿ ಕಾಮನ್ವೆಲ್ತ್ ಕ್ರೀಡಾಕೂಟ ದಿನಾಚರಣೆ ನಡೆಯಿತು
ಕೇಂದ್ರ ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಗುಜರಾತ್ ಉಪ ಮುಖ್ಯಮಂತ್ರಿ ಹರ್ಷ್ ಸಾಂಘ್ವಿ ಮತ್ತು ನಟ ಆಯುಷ್ಮಾನ್ ಖುರಾನಾ ಅವರೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟ ಪ್ರದರ್ಶನವನ್ನು ಉದ್ಘಾಟಿಸಿದರು, ಸಾವಿರಾರು ಜನರು ಸಬರಮತಿ ನದಿ ದಂಡೆಯಲ್ಲಿ ಸಿಡಬ್ಲ್ಯೂಜಿ ದಿನವನ್ನು ಆಚರಿಸಲು ನೆರೆದರು
“ಸೈಕ್ಲಿಂಗ್ ಕೇವಲ ವ್ಯಾಯಾಮವಲ್ಲ, ಇದು ಒಂದು ಚಳುವಳಿ. ಇದು ನಮ್ಮನ್ನು (ಫಿಟ್ ) ಸದೃಢವಾಗಿರಿಸುತ್ತದೆ, ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಇಂಧನ ಉಳಿತಾಯಕ್ಕೆ ಸಹಾಯ ಮಾಡುತ್ತದೆ, ಜೊತೆಗೆ ಇಂಧನ ಬಳಕೆ ಕಡಿಮೆ ಮಾಡುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮನವಿಗೆ ಇದು ಪೂರಕವಾಗಿದೆ” ಎಂದು ಡಾ. ಮಾಂಡವಿಯಾ ಹೇಳಿದರು
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನ ಮತ್ತು ಮಾರ್ಗದರ್ಶನದಲ್ಲಿ, ʻಸಂಡೇಸ್ ಆನ್ ಸೈಕಲ್’ ನಂತಹ ಉಪಕ್ರಮಗಳು ಭಾರತೀಯ ಕ್ರೀಡೆಗಳ ಭವಿಷ್ಯವನ್ನು ರೂಪಿಸುತ್ತಿವೆ” ಎಂದು ನಟ ಆಯುಷ್ಮಾನ್ ಖುರಾನಾ ಹೇಳಿದರು
ಪ್ರಕಟಣಾ ದಿನಾಂಕ:
24 MAY 2026 1:41PM by PIB Bengaluru
‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’ನ 75ನೇ ಆವೃತ್ತಿಯು ಇಂದು ದೇಶಾದ್ಯಂತ 8,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೃಹತ್ ಜನರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಇದು ಕಾಮನ್ವೆಲ್ತ್ ಗೇಮ್ಸ್ ದಿನದ ಸ್ಮರಣೆಯನ್ನು ಆಚರಿಸುವುದರ ಜೊತೆಗೆ, ಅಹಮದಾಬಾದ್ ನಲ್ಲಿ ನಡೆಯಲಿರುವ ಐತಿಹಾಸಿಕ 2030 ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಉತ್ತೇಜನವನ್ನು ನೀಡಿತು.
ಅಹಮದಾಬಾದ್ ನ ಪ್ರಸಿದ್ಧ ಸಬರಮತಿ ನದಿ ದಂಡೆಯಿಂದ ರಾಷ್ಟ್ರೀಯ ಆಚರಣೆಯ ನೇತೃತ್ವವನ್ನು ವಹಿಸಿದ್ದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವೀಯ, ಗುಜರಾತ್ ಉಪ ಮುಖ್ಯಮಂತ್ರಿ ಶ್ರೀ ಹರ್ಷ್ ಸಂಘವಿ ಮತ್ತು ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರು 5,000 ಸೈಕ್ಲಿಸ್ಟ್ಗಳು, ಕ್ರೀಡಾಪಟುಗಳು, ಯುವ ಸ್ವಯಂಸೇವಕರು ಮತ್ತು ಫಿಟ್ ನೆಸ್ ಉತ್ಸಾಹಿಗಳೊಂದಿಗೆ ಕೈಜೋಡಿಸಿ, ಸಮುದಾಯದ ಸಹಭಾಗಿತ್ವ ಮತ್ತು ಕ್ರೀಡಾ ಮನೋಭಾವದ ರೋಮಾಂಚಕ ಪ್ರದರ್ಶನದಲ್ಲಿ ಭಾಗವಹಿಸಿದರು.

“ಫಿಟ್ಟರ್ ಇಂಡಿಯಾಗೆ ಒಂದು ಹೊಸ ಐಕಾನ್ – 2030 ರತ್ತ ಪೆಡಲಿಂಗ್” ಎಂಬ ವಿಷಯದ ಅಡಿಯಲ್ಲಿ ನಡೆದ ಅಹಮದಾಬಾದ್ ಆವೃತ್ತಿಯು, ಭವ್ಯವಾದ 5 ಕಿಲೋಮೀಟರ್ ಸೈಕ್ಲಿಂಗ್ ರ್ಯಾಲಿ ಹಾಗೂ ಯೋಗ ಮತ್ತು ಜುಂಬಾ ಪ್ರದರ್ಶನಗಳನ್ನು ಒಳಗೊಂಡಿತ್ತು. ಇದು ಸಬರಮತಿ ನದಿದಂಡೆಯನ್ನು ಫಿಟ್ನೆಸ್ (ದಾರ್ಢ್ಯತೆ), ಸಂಸ್ಕೃತಿ ಮತ್ತು ಭಾರತದ ಕ್ರೀಡಾ ಅಭಿವೃದ್ಧಿಯ ಸಂಭ್ರಮದ ತಾಣವಾಗಿ ಮಾರ್ಪಡಿಸಿತು.
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ, ಡಾ. ಮಾಂಡವೀಯ ಅವರು ಉದ್ಘಾಟಿಸಿದ ವಿಶೇಷ ಕಾಮನ್ವೆಲ್ತ್ ಕ್ರೀಡಾಕೂಟದ ವಿಷಯದ ಮೇಲೆ ಆಯೋಜಿತ ಪ್ರದರ್ಶನ. ಇದು ಭಾರತದ ಕ್ರೀಡಾ ಸಾಧನೆಗಳು, ಖೇಲೋ ಇಂಡಿಯಾ ಮಿಷನ್ ಅಡಿಯಲ್ಲಿ ಕ್ರೀಡಾ ಮೂಲಸೌಕರ್ಯಗಳ ಬೆಳವಣಿಗೆ ಮತ್ತು 2030 ರಲ್ಲಿ ನಡೆಯಲಿರುವ ಶತಮಾನೋತ್ಸವದ ಕಾಮನ್ವೆಲ್ತ್ ಕ್ರೀಡಾಕೂಟದ ಮುನ್ನೋಟದಲ್ಲಿ ದೇಶದ ವಿಸ್ತರಿಸುತ್ತಿರುವ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸಿತು.
ಕಾರ್ಯಕ್ರಮದಲ್ಲಿ ಪಿಕಲ್ಬಾಲ್, ಬಾಕ್ಸ್ ಕ್ರಿಕೆಟ್, ವಾಲಿಬಾಲ್, ಹಗ್ಗ ಜಗ್ಗಾಟ (ಟಗ್ ಆಫ್ ವಾರ್) ಮತ್ತು ಹಲವಾರು ಸಂವಾದಾತ್ಮಕ ಸಮುದಾಯ ಆಟಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಆಕರ್ಷಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಇದು ಎಲ್ಲಾ ವಯೋಮಾನದ ಭಾಗವಹಿಸುವವರಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ನಟ ಆಯುಷ್ಮಾನ್ ಖುರಾನಾ ಅವರು ಹಿಂದಿನ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರು ಮತ್ತು ಒಲಂಪಿಯನ್ಸ್ ಆದ ಗುರುಜಿತ್ ಕೌರ್, ರಜನಿ ಎತಿಮಾರ್ಪು, ಸೋನಿಕಾ ತಾಂಡಿ, ಅಂಜುಮ್ ಮೌದ್ಗಿಲ್, ಅಂಕುರ್ ಮಿತ್ತಲ್ ಮತ್ತು ತೃಪ್ತಿ ಮುರುಗುಂಡೆ ಅವರೊಂದಿಗೆ ಸೇರಿ ಯುವ ಜನರನ್ನು ಪ್ರೇರೇಪಿಸಿದರು ಮತ್ತು ಭಾರತದ ಯುವಕರಲ್ಲಿ ಬೆಳೆಯುತ್ತಿರುವ ದಾರ್ಢ್ಯತೆ ಮತ್ತು ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಿದರು.

ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ನ ಹಿರಿಯ ಉಪಾಧ್ಯಕ್ಷ ಅಜಯ್ ಪಟೇಲ್; ಒಲಿಂಪಿಕ್ ಶೂಟರ್ ಮತ್ತು ಸಿಡಬ್ಲ್ಯೂಜಿ ಪದಕ ವಿಜೇತ ಗಗನ್ ನಾರಂಗ್; ಖೇಲೋ ಇಂಡಿಯಾದ ಉಪ ಮಹಾನಿರ್ದೇಶಕ ಶ್ರೀ ಮಯಾಂಕ್ ಶ್ರೀವಾಸ್ತವ; ಮತ್ತು ಒಲಿಂಪಿಯನ್ ಹಾಗೂ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಆದಿಲ್ ಸುಮರಿವಾಲಾ ಸೇರಿದಂತೆ ಹಲವು ಗಣ್ಯರು ಮತ್ತು ಕ್ರೀಡಾ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷ ಸಾಂಸ್ಕೃತಿಕ ಆಕರ್ಷಣೆಯಾಗಿ, ಪ್ರಸಿದ್ಧ ಕಲಾವಿದ ಶ್ರೀ ಅನಿಶ್ ರಂಗ್ರೇಜ್ ಅವರು ಗರ್ಬಾದ ಸಾಂಪ್ರದಾಯಿಕ ಉತ್ಸಾಹವನ್ನು ಯೋಗದ ವಿಜ್ಞಾನದೊಂದಿಗೆ ಸಂಯೋಜಿಸಿ ವಿಶಿಷ್ಟ ಪ್ರದರ್ಶನವನ್ನು ನೀಡಿದರು.
ಇದಲ್ಲದೆ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಡಾ. ಪವನ್ ಕುಮಾರ್ ಅವರು ಆರೋಗ್ಯ ಕ್ಷೇಮ ಸಮಾಲೋಚನೆ ಮತ್ತು ಮಾರ್ಗದರ್ಶನ ಅಧಿವೇಶನದ ಮೂಲಕ ಭಾಗವಹಿಸಿದವರೊಂದಿಗೆ ಸಂವಾದ ನಡೆಸಿ, ಸಮಗ್ರ ದಾರ್ಢ್ಯತೆ ಮತ್ತು ಆರೋಗ್ಯಕರ ಜೀವನವನ್ನು ಉತ್ತೇಜಿಸಿದರು.
2030ರ ಐತಿಹಾಸಿಕ ಶತಮಾನೋತ್ಸವದ ಕಾಮನ್ವೆಲ್ತ್ ಕ್ರೀಡಾಕೂಟದ ಸಿದ್ಧತೆಯ ಭಾಗವಾಗಿ, ಸಾರ್ವಜನಿಕ ಸಹಭಾಗಿತ್ವವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ದೇಶಾದ್ಯಂತ ಭವ್ಯವಾದ, ಸಂವಾದಾತ್ಮಕ ಮತ್ತು ಸಮುದಾಯ ಆಧಾರಿತ ಉಪಕ್ರಮಗಳನ್ನು ಆಯೋಜಿಸುವುದನ್ನು ಮುಂದುವರಿಸಲಿದೆ.
ಭಾರತವು 2030ರಲ್ಲಿ ಸಿಡಬ್ಲ್ಯೂ ಜಿ ಆತಿಥ್ಯ ವಹಿಸಲು ಸಜ್ಜಾಗುತ್ತಿರುವ ಬೆನ್ನಲ್ಲೇ, ಯುವ ಪೀಳಿಗೆಯು ದಾರ್ಢ್ಯತೆ, ಕ್ರೀಡೆ ಮತ್ತು ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟದ ಆಂದೋಲನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ರಾಷ್ಟ್ರವ್ಯಾಪಿ ಆಚರಣೆಗಳು ಹೊಂದಿವೆ.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮಾಂಡವಿಯಾ, “ನಾವು 75ನೇ ಆವೃತ್ತಿಯ ʻಫಿಟ್ ಇಂಡಿಯಾ ಸಂಡೇಸ್ʼಗಳನ್ನು ಸೈಕಲ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ದಿನದಂದು ಆಚರಿಸುತ್ತಿರುವುದರಿಂದ ಇಂದು ಬಹಳ ವಿಶೇಷ ಸಂದರ್ಭವಾಗಿದೆ. 2030ರಲ್ಲಿ ಗುಜರಾತ್ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ ಹಾಗು ದಾರ್ಢ್ಯತೆ (ಫಿಟ್ನೆಸ್) ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಸಾವಿರಾರು ಜನರು ಬೆಳಿಗ್ಗೆ ಬೇಗನೆ ಒಟ್ಟುಗೂಡುವುದನ್ನು ಕಾಣುತ್ತಿರುವುದು ಇನ್ನೂ ಸಂತೋಷ ತಂದಿದೆ.” ಎಂದು ಹೇಳಿದರು
ಸದೃಢವಾಗಿರುವ ಸಮಾಜವು ಸಮೃದ್ಧ ರಾಷ್ಟ್ರವನ್ನು ನಿರ್ಮಿಸಬಲ್ಲದು. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ದ ದೃಷ್ಟಿಕೋನವನ್ನು ನಾವು ನಿಜವಾಗಿಯೂ ಸಾಕಾರಗೊಳಿಸಬೇಕಾದರೆ, ಪ್ರತಿಯೊಬ್ಬ ನಾಗರಿಕನೂ ಸದೃಢ ಮತ್ತು ಆರೋಗ್ಯಕರ ಜೀವನಕ್ಕೆ ಆದ್ಯತೆ ನೀಡಬೇಕು. ಸೈಕ್ಲಿಂಗ್ ಕೇವಲ ಒಂದು ವ್ಯಾಯಾಮವಲ್ಲ, ಅದೊಂದು ಚಳುವಳಿ. ಇದು ನಮ್ಮನ್ನು ಸದೃಡವಾಗಿರಿಸುತ್ತದೆ, ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಇಂಧನವನ್ನು ಉಳಿಸಲು ಸಹಾಯ ಮಾಡುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ದೂರದ ಪ್ರಯಾಣಕ್ಕಾದರೂ ಸೈಕ್ಲಿಂಗ್ ಅಳವಡಿಸಿಕೊಳ್ಳುವ ಮೂಲಕ, ನಾವು ಆರೋಗ್ಯಕರ ಮತ್ತು ಸುಸ್ಥಿರ ಭಾರತಕ್ಕೆ ಕೊಡುಗೆ ನೀಡಬಹುದು.”
ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಾಂಘ್ವಿ, “ಇಂದು ಇಡೀ ಅಹಮದಾಬಾದ್ ನಗರವು ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’ಗಾಗಿ ಚೈತನ್ಯಮಯವಾಯಿತು ಮತ್ತು ಗುಜರಾತ್ ನ ಜನರಿಂದ ಬಂದ ಇಂತಹ ಅದ್ಭುತ ಸ್ಪಂದನೆಯನ್ನು ನೋಡಿ ನನಗೆ ಅತ್ಯಂತ ಸಂತೋಷವಾಗಿದೆ. ಸಾವಿರಾರು ನಾಗರಿಕರು ಮುಂಜಾನೆಯೇ ಸದೃಢತೆ ಮತ್ತು ಕ್ರೀಡೆಗಾಗಿ ಹೆಜ್ಜೆ ಹಾಕಿದ್ದು, ಆರೋಗ್ಯಕರ ಜೀವನದ ಬಗ್ಗೆ ಅವರಲ್ಲಿ ಬೆಳೆಯುತ್ತಿರುವ ಅರಿವು ಮತ್ತು ಉತ್ಸಾಹವನ್ನು ತೋರಿಸುತ್ತದೆ.” ಎಂದು ಹೇಳಿದರು.
ಅಹಮದಾಬಾದ್ ನಲ್ಲಿ ಕಂಡುಬಂದ ಬೃಹತ್ ಪ್ರಮಾಣದ ಭಾಗವಹಿಸುವಿಕೆಯು ಗುಜರಾತ್ ನಾದ್ಯಂತ ಕ್ರೀಡೆ ಮತ್ತು ದಾರ್ಢ್ಯತೆಯತ್ತ ಬೆಳೆಯುತ್ತಿರುವ ಉತ್ಸಾಹವನ್ನು ಪ್ರತಿಬಿಂಬಿಸಿದೆ. ಇದು ಭವಿಷ್ಯದಲ್ಲಿ ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲು ರಾಜ್ಯದ ಸಿದ್ಧತೆಯನ್ನು ಒತ್ತಿಹೇಳುತ್ತದೆ.
ನಾಗರಿಕರು, ಕ್ರೀಡಾಪಟುಗಳು, ಯುವ ಸ್ವಯಂಸೇವಕರು ಮತ್ತು ಫಿಟ್ನೆಸ್ ಉತ್ಸಾಹಿಗಳ ಬಲವಾದ ಹಾಜರಾತಿಯು ಈ ಪ್ರದೇಶದಲ್ಲಿ ಕ್ರೀಡಾ ಸಂಸ್ಕೃತಿಯ ತ್ವರಿತ ಬೆಳವಣಿಗೆಯನ್ನು ಪ್ರದರ್ಶಿಸಿತು ಮತ್ತು 2030ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ಜಾಗತಿಕ ಕ್ರೀಡಾ ಸ್ಪರ್ಧೆಗಳಿಗೆ ಅಹಮದಾಬಾದ್ ಪ್ರಮುಖ ತಾಣವಾಗಿ ಹೊರಹೊಮ್ಮುವುದನ್ನು ಬಲಪಡಿಸಿತು.
ನಟ ಮತ್ತು ಫಿಟ್ ಇಂಡಿಯಾ ಐಕಾನ್ ಆಯುಷ್ಮಾನ್ ಖುರಾನಾ “ಇಂದು ಇಲ್ಲಿ ಎಲ್ಲಾ ವಯೋಮಾನದ ಜನರು ಇಷ್ಟೊಂದು ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸುತ್ತಿರುವುದನ್ನು ನೋಡಿ ನನಗೆ ನಿಜಕ್ಕೂ ಸಂತೋಷವಾಗಿದೆ. ಫಿಟ್ ಇಂಡಿಯಾ ಮತ್ತು ಮುಂಬರುವ 2030 ರ ಕಾಮನ್ವೆಲ್ತ್ ಕ್ರೀಡಾಕೂಟದ ನಡುವಿನ ಈ ಸಹಯೋಗವು ಅದ್ಭುತವಾಗಿದೆ, ಏಕೆಂದರೆ ಇದು ಯುವ ಭಾರತೀಯರಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪ್ರೇರೇಪಿಸುತ್ತಿದೆ. ‘ಸಂಡೇಸ್ ಆನ್ ಸೈಕಲ್’ ಅತ್ಯಂತ ಆಸಕ್ತಿದಾಯಕ ಮತ್ತು ಭವಿಷ್ಯದ ದೃಷ್ಟಿಕೋನ ಹೊಂದಿರುವ ಉಪಕ್ರಮವಾಗಿದೆ.” ಎಂದು ಹೇಳಿದರು.
“ಕ್ರೀಡೆ ಎಂದರೆ ಕೇವಲ ಪದಕಗಳನ್ನು ಗೆಲ್ಲುವುದಷ್ಟೇ ಅಲ್ಲ; ಅದು ಶಿಸ್ತು, ತ್ಯಾಗ ಮತ್ತು ಆಕಾಂಕ್ಷೆಗಳನ್ನು ಸೃಷ್ಟಿಸುವುದಾಗಿದೆ. ಪ್ರತಿಯೊಬ್ಬ ಕ್ರೀಡಾಪಟುವಿನ ಹಿಂದೆ ಇಡೀ ಕುಟುಂಬವು ತ್ಯಾಗ ಮಾಡುತ್ತಿರುತ್ತದೆ ಮತ್ತು ಅವರ ಕನಸುಗಳನ್ನು ಬೆಂಬಲಿಸುತ್ತಿರುತ್ತದೆ. ಅವರ ಯಶಸ್ಸು ದೇಶದ ಯಶಸ್ಸಾಗುತ್ತದೆ. ಇಂದು ಇಲ್ಲಿ ಭಾಗವಹಿಸಿರುವ ಮಕ್ಕಳನ್ನು ನೋಡುತ್ತಿದ್ದರೆ, ಭಾರತದ ಮುಂಬರುವ ಹಲವು ಪದಕ ವಿಜೇತರು ನಮ್ಮ ನಡುವೆಯೇ ಇದ್ದಾರೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ದೃಷ್ಟಿಕೋನ ಮತ್ತು ಮಾರ್ಗದರ್ಶನದಲ್ಲಿ, ಇಂತಹ ಉಪಕ್ರಮಗಳು ಭಾರತೀಯ ಕ್ರೀಡೆಗಳ ಭವಿಷ್ಯವನ್ನು ರೂಪಿಸುತ್ತಿವೆ.” ಎಂದು ಹೇಳಿದರು.
ದೇಶದಾದ್ಯಂತ ಇಂತಹದೇ ಆಚರಣೆಗಳು ಎಸ್ ಎ ಐ (ಸಾಯ್ ಪ್ರಾದೇಶಿಕ ಕೇಂದ್ರಗಳು, ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳು,ಖೇಲೋ ಇಂಡಿಯಾ ಕೇಂದ್ರಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆದವು. ಒಲಿಂಪಿಯನ್ಸ್, ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರು ಮತ್ತು ಕ್ರೀಡಾ ತಾರೆಗಳು ಆಯಾ ಪ್ರದೇಶಗಳಲ್ಲಿ ನಾಗರಿಕರೊಂದಿಗೆ ಕೈಜೋಡಿಸಿದರು. ಗೌರವಾನ್ವಿತ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವೆ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ ಅವರು ಗುವಾಹಟಿಯಲ್ಲಿ ಆಚರಣೆಯ ನೇತೃತ್ವ ವಹಿಸಿದ್ದರು. ಮಾಜಿ ಕುಸ್ತಿ ತಾರೆ ಬಬಿತಾ ಫೋಗಟ್ ಧರ್ಮಶಾಲಾದಲ್ಲಿ ಭಾಗವಹಿಸಿದರೆ, ಪ್ರಖ್ಯಾತ ಚಿತ್ರ ‘ಚಕ್ ದೇ! ಇಂಡಿಯಾ’ಕ್ಕೆ ಪ್ರೇರಣೆಯಾಗಿದ್ದ ಮಾಜಿ ಭಾರತೀಯ ಹಾಕಿ ಆಟಗಾರ್ತಿ ಸಬಾ ಅಂಜುಮ್ ಮುಂಬೈನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ, ದೇಶಾದ್ಯಂತ ‘ಕ್ರೀಡಾ ಜನ ಭಾಗೀದಾರಿ’ಯ ಉತ್ಸಾಹವನ್ನು ಹೆಚ್ಚಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೂಪಿಸಿದ ʻಫಿಟ್ ಇಂಡಿಯಾ ಮೂವ್ಮೆಂಟ್ʼ ಅಡಿಯಲ್ಲಿ ಡಿಸೆಂಬರ್ 2024 ರಲ್ಲಿ ಪ್ರಾರಂಭವಾದಾಗಿನಿಂದ, ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’ ಭಾರತದ ಅತಿದೊಡ್ಡ ಸಮುದಾಯ ಚಾಲಿತ ಫಿಟ್ನೆಸ್ ಉಪಕ್ರಮಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದು 3.07 ಲಕ್ಷಕ್ಕೂ ಹೆಚ್ಚು ಸ್ಥಳಗಳನ್ನು ತಲುಪಿದ್ದು, 50 ಲಕ್ಷಕ್ಕೂ ಹೆಚ್ಚು ಸೈಕ್ಲಿಸ್ಟ್ಗಳನ್ನು ತೊಡಗಿಸಿಕೊಂಡಿದೆ ಮತ್ತು ದೈಹಿಕವಾಗಿ ಹಾಗೂ ಡಿಜಿಟಲ್ ಮೂಲಕ ಭಾಗವಹಿಸುವಿಕೆಯ ಮೂಲಕ 7 ಕೋಟಿಗೂ ಹೆಚ್ಚು ಭಾರತೀಯರನ್ನು ಒಟ್ಟುಗೂಡಿಸಿದೆ.
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ , ಯೋಗಾಸನ ಭಾರತ್, ರಾಹಗಿರಿ ಫೌಂಡೇಶನ್, ಮೈ ಬೈಕ್ಸ್ ಮತ್ತು ಮೈ ಭಾರತ್ ಸಹಯೋಗದೊಂದಿಗೆ ಆಯೋಜಿಸಿರುವ ಈ ಉಪಕ್ರಮವು, ಪ್ರಧಾನಮಂತ್ರಿಯವರ “ಫಿಟ್ನೆಸ್ ಕಾ ಡೋಸ್, ಆಧ ಘಂಟಾ ರೋಜ್” (ದಾರ್ಡ್ಯತೆಯ ಡೋಸ್, ಪ್ರತಿದಿನ ಅರ್ಧ ಗಂಟೆ) ಎನ್ನುವ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುತ್ತಿದೆ.
ಅಹಮದಾಬಾದ್ 2030ರ ಐತಿಹಾಸಿಕ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವತ್ತ ಸ್ಥಿರವಾಗಿ ಸಾಗುತ್ತಿರುವ ಬೆನ್ನಲ್ಲೇ, ಇಂದಿನ ಆಚರಣೆಯು ಹೆಚ್ಚು ಸದೃಢವಾದ, ಬಲವಾದ ಮತ್ತು ಹೆಚ್ಚು ಮಹತ್ವಾಕಾಂಕ್ಷೆಯ ಕ್ರೀಡಾ ಭವಿಷ್ಯದತ್ತ ಇಡೀ ದೇಶವೇ ಒಟ್ಟಾಗಿ ಸಾಗುತ್ತಿರುವುದಕ್ಕೆ ಪ್ರಭಾವಶಾಲಿ ಸಂಕೇತವಾಗಿದೆ.
*****
(ಪ್ರಕಟಣೆ ಐ.ಡಿ.: 2264768)
ವಿಸಿಟರ್ ಕೌಂಟರ್ : 10