ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ವಿದ್ಯುತ್ ಚಾಲಿತ ಬಸ್‌ ಗಳು ಮತ್ತು ವಿದ್ಯುತ್ ಟ್ರಕ್‌ ಗಳಿಗೆ ಹಣಕಾಸು ವ್ಯವಸ್ಥೆಗಳ ಕುರಿತು ಉನ್ನತ ಮಟ್ಟದ ಸಭೆ ಕರೆದ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ

प्रविष्टि तिथि: 20 MAY 2026 8:13PM by PIB Bengaluru

ಖಾಸಗಿ ವಲಯದಲ್ಲಿ ಎಲೆಕ್ಟ್ರಿಕ್ ಬಸ್‌ ಗಳು ಮತ್ತು ಎಲೆಕ್ಟ್ರಿಕ್ ಟ್ರಕ್‌ ಗಳ ಅಳವಡಿಕೆಯನ್ನು ವೇಗಗೊಳಿಸಲು ಅಗತ್ಯವಿರುವ ಹಣಕಾಸು ಒದಗಿಸುವ ಕಾರ್ಯವಿಧಾನಗಳ ಕುರಿತು ಚರ್ಚಿಸಲು, ಭಾರತ ಸರ್ಕಾರದ ಭಾರಿ ಕೈಗಾರಿಕಾ ಸಚಿವಾಲಯವು (MHI) ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ 2026 ರ ಮೇ 20 ರಂದು ನವದೆಹಲಿಯಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿತು. ಈ ಸಭೆಯಲ್ಲಿ ಎಸ್‌ಬಿಐ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್‌ ಡಿ ಎಫ್‌ ಸಿ (HDFC), ಸಿಡ್ಬಿ (SIDBI) ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ ಗಳ ಹಿರಿಯ ಪ್ರತಿನಿಧಿಗಳು; ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ ಪೋರ್ಟ್ ಕಾಂಗ್ರೆಸ್ (AIMTC), ಕೋದಂಡರಾಮು ಲಾರಿ ಅಸೋಸಿಯೇಷನ್, ಬಸ್ ಆಪರೇಟರ್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾ (BOCI), ಕರ್ನಾಟಕ ಬಸ್ ಆಪರೇಟರ್ಸ್ ಅಸೋಸಿಯೇಷನ್ (KBOA) ಮತ್ತು ಸೌತ್ ಇಂಡಿಯಾ ಮೋಟಾರ್ ಟ್ರಾನ್ಸ್‌ ಪೋರ್ಟ್ ಅಸೋಸಿಯೇಷನ್ ನಂತಹ ಸಂಘಗಳನ್ನು ಒಳಗೊಂಡಂತೆ ಬಸ್ ಮತ್ತು ಟ್ರಕ್ ನಿರ್ವಾಹಕರು; ಹಾಗೂ ಪ್ರಮುಖ ಖಾಸಗಿ ಸಾರಿಗೆ ನಿರ್ವಾಹಕರು ಮತ್ತು ಟ್ರಾವೆಲ್ ಕಂಪನಿಗಳು ಭಾಗವಹಿಸಿದ್ದವು.

ಇ-ಬಸ್ ಮತ್ತು ಇ-ಟ್ರಕ್ ಅಳವಡಿಕೆಗೆ ಇರುವ ಹಣಕಾಸಿನ ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು, ಇ-ಬಸ್‌ ಗಳು ಮತ್ತು ಇ-ಟ್ರಕ್‌ ಗಳಿಗೆ ಹಣಕಾಸು ಒದಗಿಸುವ ಪ್ರಸ್ತುತ ಸ್ಥಿತಿ, ಹಣಕಾಸಿನ ಸವಾಲುಗಳನ್ನು ಪರಿಹರಿಸಲು ಬೇಕಾದ ಸಂಭಾವ್ಯ ಪರಿಹಾರಗಳು ಮತ್ತು ಇದಕ್ಕೆ ಅಗತ್ಯವಿರುವ ಸರ್ಕಾರದ ಬೆಂಬಲದ ಬಗ್ಗೆ ತಿಳಿದುಕೊಳ್ಳುವುದು ಈ ಸಭೆಯ ಉದ್ದೇಶಗಳಾಗಿದ್ದವು.

ಜಾಗತಿಕ ಅನಿಶ್ಚಿತತೆಗಳು ಮತ್ತು ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸುತ್ತಿರುವ ಪರಿಸ್ಥಿತಿಯ ನಡುವೆ ಇಂಧನವನ್ನು ಉಳಿಸಲು ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕರೆಗೆ ಅನುಗುಣವಾಗಿ ಈ ಸಭೆಯು ಒಂದು ಹೆಜ್ಜೆಯಾಗಿದೆ. ಇದು ಇಂಧನ ಭದ್ರತೆ, ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿತ, ಕಡಿಮೆ ತೈಲ ಆಮದು ಬಿಲ್‌ ಗಳು ಮತ್ತು ಎಲ್ಲರಿಗೂ ಸುಸ್ಥಿರ ಭವಿಷ್ಯದ ಕಡೆಗೆ ಭಾರತದ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಈ ಸಭೆಯಲ್ಲಿ, ಕ್ರೆಡಿಟ್ ಗ್ಯಾರಂಟಿ (ಸಾಲದ ಖಾತರಿ) ಮತ್ತು ಬಡ್ಡಿ ರಿಯಾಯಿತಿಯಂತಹ (ಇಂಟರೆಸ್ಟ್ ಸಬ್‌ ವೆನ್ಶನ್) ಪ್ರಸ್ತಾವಿತ ಬೆಂಬಲ ಕಾರ್ಯವಿಧಾನಗಳು ಸೇರಿದಂತೆ, ಖಾಸಗಿ ವಲಯದಲ್ಲಿ ಎಲೆಕ್ಟ್ರಿಕ್ ಬಸ್‌ ಗಳು ಮತ್ತು ಎಲೆಕ್ಟ್ರಿಕ್ ಟ್ರಕ್‌ ಗಳ ಅಳವಡಿಕೆಗೆ ಸಂಬಂಧಿಸಿದ ಪ್ರಮುಖ ಹಣಕಾಸಿನ ಸವಾಲುಗಳ ಕುರಿತು ಚರ್ಚಿಸಲಾಯಿತು. ಹಣಕಾಸು ಸಂಸ್ಥೆಗಳು ಸಾಲ ನೀಡುವಾಗ ಎದುರಿಸುವ ಅಪಾಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಕ್ರೆಡಿಟ್ ಗ್ಯಾರಂಟಿ ಯೋಜನೆಗಳು ಮತ್ತು ಖಾಸಗಿ ವಲಯದ ಖರೀದಿದಾರರಿಗೆ ಸಾಲದ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿರುವ ಬಡ್ಡಿ ರಿಯಾಯಿತಿ ಕಾರ್ಯವಿಧಾನಗಳನ್ನು, ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ತ್ವರಿತ ಅಳವಡಿಕೆಯನ್ನು ಬೆಂಬಲಿಸುವ ಸಂಭಾವ್ಯ ಕ್ರಮಗಳಾಗಿ ಚರ್ಚಿಸಲಾಯಿತು.

ಸಾರ್ವಜನಿಕ ಸಾರಿಗೆಯು, ವಿಶೇಷವಾಗಿ ಬಸ್‌ ಗಳು, ಭಾರತದಾದ್ಯಂತ ಸಂಚಾರದ ಬೆನ್ನೆಲುಬಾಗಿವೆ. ಹಾಗೆಯೇ ದೇಶೀಯ ಸರಕುಗಳ ಗಣನೀಯ ಪಾಲನ್ನು ಸಾಗಿಸುವ ಮೂಲಕ ಸರಕು ಸಾಗಣೆಯಲ್ಲಿ ಟ್ರಕ್‌ ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅದೇ ಸಮಯದಲ್ಲಿ, ವಾಣಿಜ್ಯ ವಾಹನಗಳ ವಿಭಾಗವು ರಸ್ತೆ ಸಾರಿಗೆಯ ಹೊರಸೂಸುವಿಕೆ (ಎಮಿಷನ್), ಇಂಧನ ಬಳಕೆ ಮತ್ತು ಕಣಗಳ (ಪರ್ಟಿಕುಲೇಟ್ ಮ್ಯಾಟರ್) ಮಾಲಿನ್ಯಕ್ಕೆ ಗಣನೀಯವಾಗಿ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತದ ಡಿಕಾರ್ಬನೈಸೇಶನ್ (ಇಂಗಾಲ ಮುಕ್ತ) ಗುರಿಗಳನ್ನು ಸಾಧಿಸಲು ಮತ್ತು 2070ರ ವೇಳೆಗೆ ರಾಷ್ಟ್ರದ 'ನೆಟ್ ಜೀರೋ' (ನಿವ್ವಳ ಶೂನ್ಯ) ಗುರಿಯನ್ನು ಮುನ್ನಡೆಸಲು ಬಸ್‌ ಗಳು ಮತ್ತು ಟ್ರಕ್‌ ಗಳ ವಿದ್ಯುದ್ದೀಕರಣವು ಅತ್ಯಗತ್ಯವಾಗಿದೆ.

ಈ ಉಪಕ್ರಮವು ವಾಣಿಜ್ಯ ವಾಹನಗಳ ವಿಭಾಗದಲ್ಲಿ ಎಲೆಕ್ಟ್ರಿಕ್ ಚಲನಶೀಲತೆಗೆ (ಇ-ಮೊಬಿಲಿಟಿ) ಪರಿವರ್ತನೆಯನ್ನು ಸುಲಭಗೊಳಿಸಲು ಭಾರಿ ಕೈಗಾರಿಕಾ ಸಚಿವಾಲಯವು ಹೊಂದಿರುವ ಪೂರ್ವಭಾವಿ ದೃಷ್ಟಿಕೋನವನ್ನು ತೋರಿಸುತ್ತದೆ. ಸರ್ಕಾರಿ ಇಲಾಖೆಗಳು, ಬಹುಪಕ್ಷೀಯ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಮತ್ತು ಉದ್ಯಮದ ಪಾಲುದಾರರನ್ನು ಒಂದೇ ವೇದಿಕೆಗೆ ತರುವ ಮೂಲಕ, ಇವಿ (EV) ಅಳವಡಿಕೆಗೆ ಇರುವ ಮುಖ್ಯ ಅಡೆತಡೆಗಳನ್ನು ನಿವಾರಿಸುವ ಕಾರ್ಯಸಾಧ್ಯವಾದ ಹಣಕಾಸು ಪರಿಹಾರಗಳನ್ನು ರೂಪಿಸುವ ಗುರಿಯನ್ನು ಸಚಿವಾಲಯ ಹೊಂದಿದೆ. ಆ ಮೂಲಕ, 'ಆತ್ಮನಿರ್ಭರ ಭಾರತ' ಮತ್ತು 'ವಿಕಸಿತ ಭಾರತ @2047' ರ ದೂರದೃಷ್ಟಿಯ ಅಡಿಯಲ್ಲಿ ದೇಶದ ಇಂಧನ ಭದ್ರತೆ, ಮಾಲಿನ್ಯ ಹೊರಸೂಸುವಿಕೆ ಕಡಿತ ಮತ್ತು ಸ್ಥಳೀಯ ಸುಧಾರಿತ ಉತ್ಪಾದನೆಯ ವಿಶಾಲ ಗುರಿಗಳನ್ನು ಬೆಂಬಲಿಸಲು ಸಚಿವಾಲಯ ಶ್ರಮಿಸುತ್ತಿದೆ.

 

*****


(रिलीज़ आईडी: 2263469) आगंतुक पटल : 46
इस विज्ञप्ति को इन भाषाओं में पढ़ें: English , Urdu , हिन्दी , Tamil