ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾರ್ವೆ ಪ್ರಧಾನಮಂತ್ರಿ ಜತೆ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಪತ್ರಿಕಾ ಅವರ ಹೇಳಿಕೆ

ಪ್ರಕಟಣಾ ದಿನಾಂಕ: 18 MAY 2026 5:37PM by PIB Bengaluru

ನಾರ್ವೆಯ ಗೌರವಾನ್ವಿತ ಪ್ರಧಾನ ಮಂತ್ರಿ ಅವರೆ,

ಎರಡೂ ದೇಶಗಳ ಪ್ರತಿನಿಧಿಗಳೆ,

ಮಾಧ್ಯಮದ ಸ್ನೇಹಿತರೆ,

ನಮಸ್ಕಾರ್!

ನಾರ್ವೆಗೆ ಭೇಟಿ ನೀಡಿರುವುದು ನನಗೆ ತುಂಬಾ ಸಂತಸ ತಂದಿದೆ. ಈ ಸುಂದರ ದೇಶವು ಪ್ರಕೃತಿ ಮತ್ತು ಮಾನವ ಸಾಮರಸ್ಯದ ಪ್ರಗತಿಗೆ ಅದ್ಭುತ ಉದಾಹರಣೆಯಾಗಿದೆ.

ಮೊದಲನೆಯದಾಗಿ, ಈ ಆತ್ಮೀಯ ಮತ್ತು ಸೌಹಾರ್ದಯುತ ಸ್ವಾಗತಕ್ಕಾಗಿ ನಾನು ಪ್ರಧಾನಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿನ್ನೆ ನಡೆದ ನಾರ್ವೆಯ ಸಂವಿಧಾನ ದಿನದ ಮಹತ್ವದ ಸಂದರ್ಭದಲ್ಲಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪರವಾಗಿ, ಬಲವಾದ ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವ ರಾಷ್ಟ್ರವಾದ ನಾರ್ವೆಯ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಕಳೆದ ವರ್ಷ ನಾನು ನಾರ್ವೆಗೆ ಭೇಟಿ ನೀಡಬೇಕಿತ್ತು, ಆದರೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಪ್ರವಾಸ ಮುಂದೂಡಬೇಕಾಯಿತು. ಆ ಕಷ್ಟದ ಸಮಯದಲ್ಲಿ, ಭಯೋತ್ಪಾದನೆಯ ವಿರುದ್ಧ ನಾರ್ವೆ ಭಾರತದೊಂದಿಗೆ ಸದೃಢವಾಗಿ ನಿಂತಿತು. ಇದು ನಮ್ಮ ಸ್ನೇಹದ ಬಲವನ್ನು ಪ್ರತಿಬಿಂಬಿಸುತ್ತದೆ. ಇಂದು ನಾನು ನಾರ್ವೆಗೆ ಭೇಟಿ ನೀಡಿರುವಾಗ ಆ ಬೆಂಬಲ ಮತ್ತು ಒಗ್ಗಟ್ಟಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಸ್ನೇಹಿತರೆ,

ಇಂದು ಜಗತ್ತು ಅಸ್ಥಿರತೆ ಮತ್ತು ಅನಿಶ್ಚಯದ ಅವಧಿಯನ್ನು ದಾಟುತ್ತಿದೆ. ಅದು ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾ ಆಗಿರಲಿ, ವಿಶ್ವದ ಅನೇಕ ಭಾಗಗಳು ಸಂಘರ್ಷವನ್ನು ಎದುರಿಸುತ್ತಲೇ ಇವೆ. ಅಂತಹ ಸಮಯದಲ್ಲಿ ಭಾರತ ಮತ್ತು ಯುರೋಪ್ ತಮ್ಮ ಸಂಬಂಧದಲ್ಲಿ ಹೊಸ ಸುವರ್ಣ ಯುಗವನ್ನು ಪ್ರವೇಶಿಸುತ್ತಿವೆ.

ಕಳೆದ ವರ್ಷ ಭಾರತ ಮತ್ತು ಐರೋಪ್ಯ ಒಕ್ಕೂಟವು ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಜಾರಿಗೆ ತಂದಿವೆ. ಈ ಒಪ್ಪಂದವು ಭಾರತ ಮತ್ತು ನಾರ್ವೆ ನಡುವೆ ಹಂಚಿಕೆಯ ಪ್ರಗತಿ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಒಂದು ನೀಲನಕ್ಷೆಯಾಗಿದೆ. ಈ ಒಪ್ಪಂದದ ಅಡಿ, ಮುಂದಿನ 15 ವರ್ಷಗಳಲ್ಲಿ ಭಾರತಕ್ಕೆ 100 ಶತಕೋಟಿ ಡಾಲರ್ ಹೂಡಿಕೆ ಹರಿದು ಬರಲಿದ್ದು, 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಭಾರತ ಹೊಂದಿದೆ. ಇಂದು ಈ ಒಪ್ಪಂದದ ಭರವಸೆಯನ್ನು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸಲು ಎರಡೂ ಕಡೆಯವರು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ.

ಸ್ನೇಹಿತರೆ,

ಇಂದು ನಾವು ಭಾರತ - ನಾರ್ವೆ ಸಂಬಂಧಗಳನ್ನು ಹಸಿರು ಕಾರ್ಯತಂತ್ರ ಪಾಲುದಾರಿಕೆಯಾಗಿ ಉನ್ನತೀಕರಿಸುತ್ತಿದ್ದೇವೆ. ಈ ಕಾರ್ಯತಂತ್ರ ಪಾಲುದಾರಿಕೆಯ ಮೂಲಕ, ನಮ್ಮ ಕಂಪನಿಗಳು ಭಾರತದ ಪ್ರಮಾಣ, ವೇಗ ಮತ್ತು ಪ್ರತಿಭೆಯನ್ನು ನಾರ್ವೆಯ ತಂತ್ರಜ್ಞಾನ ಮತ್ತು ಬಂಡವಾಳದೊಂದಿಗೆ ಸಂಯೋಜಿಸುವ ಮೂಲಕ ಸ್ವಚ್ಛ ಇಂಧನದಿಂದ ಹವಾಮಾನ ಚೇತರಿಕೆವರೆಗೆ ಮತ್ತು ನೀಲಿ ಆರ್ಥಿಕತೆಯಿಂದ ಹಸಿರು ಸಾಗಣೆ ತನಕ ವಿವಿಧ ವಲಯಗಳಲ್ಲಿ ಜಾಗತಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲಿವೆ.

ಸ್ನೇಹಿತರೆ,

ಸಂಶೋಧನೆ, ಶಿಕ್ಷಣ ಮತ್ತು ನಾವೀನ್ಯತೆಗಳು ನಮ್ಮ ಸಂಬಂಧದ ಬಲವಾದ ಆಧಾರಸ್ತಂಭಗಳಾಗಿ ಹೊರಹೊಮ್ಮುತ್ತಿವೆ. ಇಂದು ಸುಸ್ಥಿರತೆ, ಸಾಗರ ಶಕ್ತಿ, ಭೂವಿಜ್ಞಾನ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ಸಂಶೋಧನಾ ಸಹಕಾರ ವಿಸ್ತರಿಸಲು ನಾವು ಒಪ್ಪಿಕೊಂಡಿದ್ದೇವೆ.

ಎಂಜಿನಿಯರಿಂಗ್, ಎಐ, ಸೈಬರ್ ಮತ್ತು ಡಿಜಿಟಲ್ ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ನಮ್ಮ ಪಾಲುದಾರಿಕೆ ಭವಿಷ್ಯವನ್ನು ಸಿದ್ಧಗೊಳಿಸಲು ನಾವು ನಮ್ಮ ವಿಶ್ವವಿದ್ಯಾಲಯಗಳು ಮತ್ತು ನವೋದ್ಯಮ ಪರಿಸರ ವ್ಯವಸ್ಥೆಗಳನ್ನು ಸಂಪರ್ಕಿಸುತ್ತೇವೆ. ಕೌಶಲ್ಯ ಅಭಿವೃದ್ಧಿ ಮತ್ತು ಪ್ರತಿಭೆ ಚಲನಶೀಲತೆಯಲ್ಲಿ ನಮ್ಮ ಸಹಕಾರವು ಮತ್ತಷ್ಟು ವಿಸ್ತರಿಸಲಿದೆ.

ಸ್ನೇಹಿತರೆ,

ಆರ್ಕ್ಟಿಕ್ ಪ್ರದೇಶದಲ್ಲಿ ನಾರ್ವೆ ಒಂದು ಪ್ರಮುಖ ದೇಶವಾಗಿದೆ. ಆರ್ಕ್ಟಿಕ್ ಮತ್ತು ಧ್ರುವ ಸಂಶೋಧನೆಯಲ್ಲಿ ನಮಗೆ ದೀರ್ಘಕಾಲದ ಸಹಕಾರವಿದೆ. ಭಾರತದ ಆರ್ಕ್ಟಿಕ್ ಸಂಶೋಧನಾ ಕೇಂದ್ರ "ಹಿಮಾದ್ರಿ" ಕಾರ್ಯಾಚರಣೆಗಳನ್ನು ಬೆಂಬಲಿಸಿದ್ದಕ್ಕಾಗಿ ನಾವು ನಾರ್ವೆಗೆ ಕೃತಜ್ಞರಾಗಿರುತ್ತೇವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ನಾರ್ವೇ ಬಾಹ್ಯಾಕಾಶ ಸಂಸ್ಥೆಯ ನಡುವೆ ಇಂದು ಸಹಿ ಹಾಕಲಾಗುತ್ತಿರುವ ಒಪ್ಪಂದವು ನಮ್ಮ ಬಾಹ್ಯಾಕಾಶ ಸಹಕಾರಕ್ಕೆ ಹೊಸ ಆಯಾಮಗಳನ್ನು ನೀಡುತ್ತದೆ.

ಈ ಎಲ್ಲಾ ಕ್ಷೇತ್ರಗಳಲ್ಲಿ ಆಳವಾದ ಸಹಕಾರದ ಮೂಲಕ, ನಮ್ಮ ವಿಜ್ಞಾನಿಗಳು ಹವಾಮಾನ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳಲು, ದುರ್ಬಲ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಮತ್ತು ಮಾನವತೆಯ ಭವಿಷ್ಯವನ್ನು ಭದ್ರಪಡಿಸಲು ಕೊಡುಗೆ ನೀಡುತ್ತಾರೆ.

ಸ್ನೇಹಿತರೆ,

ಭಾರತ ಮತ್ತು ನಾರ್ವೆ ನಡುವಿನ ಹಸಿರು ಕಾರ್ಯತಂತ್ರ ಪಾಲುದಾರಿಕೆ ಇಡೀ ಜಗತ್ತಿಗೆ ಪ್ರಯೋಜನಕಾರಿಯಾಗಿದೆ. ಇಂದು ನಾರ್ವೆ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮಕ್ಕೆ ಸೇರುತ್ತಿರುವುದು ನಮಗೆ ತುಂಬಾ ಸಂತೋಷ ತಂದಿದೆ.

ಎರಡು ಪ್ರಮುಖ ಕಡಲ ರಾಷ್ಟ್ರಗಳಾಗಿ ಸಾಗರ ಆರ್ಥಿಕತೆ, ಕಡಲ ಭದ್ರತೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಸಹಕಾರ ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಇಂದು ನಾವು ತ್ರಿಕೋನ ಅಭಿವೃದ್ಧಿ ಸಹಕಾರ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ. ಒಟ್ಟಾಗಿ, ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳ ಮೂಲಕ ಜಾಗತಿಕ ದಕ್ಷಿಣದ ದೇಶಗಳಲ್ಲಿ ಮಾನವ ಅಭಿವೃದ್ಧಿಗೆ ನಾವು ಕೊಡುಗೆ ನೀಡುತ್ತೇವೆ.

ಸ್ನೇಹಿತರೆ,

ಭಾರತ ಮತ್ತು ನಾರ್ವೆ ಎರಡೂ ನಿಯಮ ಆಧಾರಿತ ಕ್ರಮ, ಸಂವಾದ ಮತ್ತು ರಾಜತಾಂತ್ರಿಕತೆಯನ್ನು ನಂಬುತ್ತವೆ. ಮಿಲಿಟರಿ ಸಂಘರ್ಷದ ಮೂಲಕ ಯಾವುದೇ ಸಮಸ್ಯೆ ಪರಿಹರಿಸಲಾಗುವುದಿಲ್ಲ ಎಂದು ನಾವು ಒಪ್ಪುತ್ತೇವೆ. ಅದು ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾವಾಗಲಿ, ಸಂಘರ್ಷಗಳಿಗೆ ಆರಂಭಿಕ ಅಂತ್ಯ ಮತ್ತು ಶಾಂತಿಯ ಮರುಸ್ಥಾಪನೆಗೆ ನಾವು ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ ಮತ್ತು ಸಹಾಯ ನೀಡುತ್ತೇವೆ.

ಬೆಳೆಯುತ್ತಿರುವ ಜಾಗತಿಕ ಸವಾಲುಗಳನ್ನು ಎದುರಿಸಲು ಜಾಗತಿಕ ಸಂಸ್ಥೆಗಳ ಸುಧಾರಣೆ ಅತ್ಯಗತ್ಯ ಎಂಬುದಕ್ಕೂ ನಾವು ಒಪ್ಪುತ್ತೇವೆ. ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ನಿರ್ಮೂಲನೆ ಮಾಡುವುದು ನಮ್ಮ ಹಂಚಿಕೆಯ ಬದ್ಧತೆಯಾಗಿದೆ.

ಗೌರವಾನ್ವಿತರೆ,

ಆರ್ಕ್ಟಿಕ್‌ನಿಂದ ಬಾಹ್ಯಾಕಾಶದವರೆಗೆ, ಹಸಿರು ಸಾಗಣೆಯಿಂದ ನೀಲಿ ಆರ್ಥಿಕತೆಯವರೆಗೆ ಮತ್ತು ಇಂಧನ ಭದ್ರತೆಯಿಂದ ಆಹಾರ ಭದ್ರತೆಯವರೆಗೆ ನಮ್ಮ ಸಹಕಾರವು ಹೊಸ ಗಡಿಗಳನ್ನು ತಲುಪುತ್ತಿದೆ. ನಮ್ಮ ಹಸಿರು ಕಾರ್ಯತಂತ್ರ ಪಾಲುದಾರಿಕೆಯ ಮೂಲಕ ವಿಶ್ವಾಸಾರ್ಹ, ಭವಿಷ್ಯದ ಮತ್ತು ದೀರ್ಘಕಾಲೀನ ಪಾಲುದಾರಿಕೆಯ ಹೊಸ ಅಧ್ಯಾಯ ಬರೆಯೋಣ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2262743) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Manipuri , Assamese , Punjabi , Gujarati , Odia , Telugu , Malayalam