ರಕ್ಷಣಾ ಸಚಿವಾಲಯ
ರಕ್ಷಣಾ ಸಚಿವರು ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಅವರಿಂದ ಎಎಂಸಿಎ ಮುಖ್ಯ ಸಂಯೋಜನೆ ಮತ್ತು ಹಾರಾಟ ಪರೀಕ್ಷಾ ಕೇಂದ್ರ ಹಾಗೂ ನೌಕಾ ವ್ಯವಸ್ಥೆಗಳ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ
ಮದ್ದುಗುಂಡು, ಪ್ರೊಪೆಲ್ಲಂಟ್ ಗಳು ಮತ್ತು ಸ್ಫೋಟಕ ಕಡ್ಡಿ (ಫ್ಯೂಸ್) ತಯಾರಿಕಾ ಖಾಸಗಿ ಯೋಜನೆಗಳಿಗೆ ಭೂಮಿ ಪೂಜೆ; ರಾಜ್ಯದಲ್ಲಿ 'ಡ್ರೋನ್ ನಗರಿ' ಸ್ಥಾಪಿಸಲು 8 ಕಂಪನಿಗಳ ಸಹಯೋಗ
ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯ: ರಕ್ಷಣಾ ಸಚಿವರು
"ಈ 'ಅಭಿವೃದ್ಧಿ ಕೇಂದ್ರ' (ಗ್ರೋತ್ ಪೋಲ್) ಯೋಜನೆಗಳು ಬೃಹತ್ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ"
"ದೇಶವು ಸಮಗ್ರ ಜನರ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ; ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯು ರಕ್ಷಣಾ ಉತ್ಪಾದನೆಯನ್ನು ಜನಾಂದೋಲನವಾಗಿ ಪರಿವರ್ತಿಸಿದೆ"
ರಕ್ಷಣಾ ಉತ್ಪಾದನೆಯು ಇನ್ನು 1-2 ತಿಂಗಳುಗಳಲ್ಲಿ 1.75 ಲಕ್ಷ ಕೋಟಿ ರೂಪಾಯಿಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಲಿದೆ: ಶ್ರೀ ರಾಜನಾಥ್ ಸಿಂಗ್
ಪ್ರಕಟಣಾ ದಿನಾಂಕ:
15 MAY 2026 3:46PM by PIB Bengaluru
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಅವರು ಮೇ 15, 2026 ರಂದು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿಯಲ್ಲಿ ವಿವಿಧ ಕಾರ್ಯತಂತ್ರದ ವೈಮಾನಿಕ ಮತ್ತು ರಕ್ಷಣಾ ಯೋಜನೆಗಳ ಶಂಕುಸ್ಥಾಪನೆ ಹಾಗೂ ಭೂಮಿ ಪೂಜೆ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದರು. ಐದನೇ ತಲೆಮಾರಿನ ಸುಧಾರಿತ ಮಧ್ಯಮ ಯುದ್ಧ ವಿಮಾನ (ಎಎಂಸಿಎ) ಮತ್ತು ಇತರ ಭವಿಷ್ಯದ ಸ್ವದೇಶಿ ಯುದ್ಧವಿಮಾನಗಳ ಅಭಿವೃದ್ಧಿಯನ್ನು ವೇಗಗೊಳಿಸಲು ಪುಟ್ಟಪರ್ತಿಯಲ್ಲಿ 'ಮುಖ್ಯ ಸಂಯೋಜನೆ ಮತ್ತು ಹಾರಾಟ ಪರೀಕ್ಷಾ ಕೇಂದ್ರ'ಕ್ಕೆ ಶಂಕುಸ್ಥಾಪನೆ ಮಾಡಲಾಯಿತು. ಹಾಗೆಯೇ, ಸುಧಾರಿತ ನೀರೊಳಗಿನ ಆಯುಧಗಳು ಮತ್ತು ನೌಕಾ ಯುದ್ಧ ವ್ಯವಸ್ಥೆಗಳ ಅಗತ್ಯತೆಗಳನ್ನು ಪೂರೈಸಲು ಅನಾಕಪಲ್ಲಿ ಜಿಲ್ಲೆಯ ಟಿ. ಸಿರಸಪಲ್ಲಿ ಗ್ರಾಮದಲ್ಲಿ 'ನೌಕಾ ವ್ಯವಸ್ಥೆಗಳ ಉತ್ಪಾದನಾ ಘಟಕ'ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.


ಶ್ರೀ ಸತ್ಯಸಾಯಿ ಜಿಲ್ಲೆಯ ಮಡಕಶಿರಾದಲ್ಲಿ 'ರಕ್ಷಣಾ ಎನರ್ಜೆಟಿಕ್ಸ್ ಘಟಕ' ಮತ್ತು 'ಮದ್ದುಗುಂಡು ಹಾಗೂ ವಿದ್ಯುತ್ ಸ್ಫೋಟಕ ಕಡ್ಡಿ (ಫ್ಯೂಸ್) ಕಾರ್ಖಾನೆ'ಗೆ ಭೂಮಿ ಪೂಜೆ ನೆರವೇರಿಸಲಾಯಿತು. ಇದರೊಂದಿಗೆ, ಎಂಟು ಡ್ರೋನ್ ಕಂಪನಿಗಳ ಒಕ್ಕೂಟವು ಕರ್ನೂಲ್ ನಲ್ಲಿ 'ಡ್ರೋನ್ ನಗರಿ' ಸ್ಥಾಪಿಸಲು ಕೈಜೋಡಿಸಿದೆ. ಇದೇ ಸಂದರ್ಭದಲ್ಲಿ ವಿವಿಧ ಕಂಪನಿಗಳು ರಾಜ್ಯದಲ್ಲಿ ರಕ್ಷಣಾ ಘಟಕಗಳನ್ನು ಸ್ಥಾಪಿಸಲು ಆಂಧ್ರಪ್ರದೇಶ ಸರ್ಕಾರದೊಂದಿಗೆ ಒಡಂಬಡಿಕೆ ಪತ್ರಗಳನ್ನು ವಿನಿಮಯ ಮಾಡಿಕೊಂಡವು.
ತಮ್ಮ ಭಾಷಣದಲ್ಲಿ ರಕ್ಷಣಾ ಸಚಿವರು ಈ ಯೋಜನೆಗಳ ಆರಂಭವನ್ನು "ನಿಜಕ್ಕೂ ಐತಿಹಾಸಿಕ" ಎಂದು ಬಣ್ಣಿಸಿದರು. ಪ್ರಸ್ತುತ ಜಾಗತಿಕ ಪ್ರಕ್ಷುಬ್ಧತೆಯ ಯುಗದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ರಕ್ಷಣಾ ಉತ್ಪಾದನೆಯಲ್ಲಿ 'ಆತ್ಮನಿರ್ಭರತೆ' (ಸ್ವಾವಲಂಬನೆ) ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ಪ್ರತಿಪಾದಿಸಿದರು. ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ನಮ್ಮ ಗುರಿ ಸ್ವಾವಲಂಬನೆ ಸಾಧಿಸುವುದಾಗಿರಬೇಕೇ ಹೊರತು, ಇತರ ರಾಷ್ಟ್ರಗಳ ಮೇಲೆ ಶಾಶ್ವತವಾಗಿ ಅವಲಂಬಿತವಾಗಿರುವುದಲ್ಲ ಎಂದು ಅವರು ತಿಳಿಸಿದರು.
"ಈ ಯೋಜನೆಗಳು ರಕ್ಷಣಾ ಪಡೆಗಳ ಎಲ್ಲಾ ಮೂರು ವಿಭಾಗಗಳ (ಭೂಸೇನೆ, ವಾಯುಸೇನೆ, ನೌಕಾಸೇನೆ) ಅಗತ್ಯತೆಗಳನ್ನು ಪೂರೈಸಲಿವೆ. ಈ ಕಾರ್ಯತಂತ್ರದ ವೈವಿಧ್ಯೀಕರಣವು ಅಕಸ್ಮಿಕವಲ್ಲ. ನಮ್ಮ ಉದ್ದೇಶ ಅತ್ಯಂತ ಸ್ಪಷ್ಟವಾಗಿದೆ: ಮೂರೂ ಸೇವೆಗಳು ಭವಿಷ್ಯದ ಯುದ್ಧಗಳಿಗೆ ಸನ್ನದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ದೃಢವಾದ ಗುರಿಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಈ ಯೋಜನೆಗಳು ದೇಶದ ಸ್ವಾವಲಂಬನೆಯ ಹಾದಿಯಲ್ಲಿ ಮತ್ತು ಆಂಧ್ರಪ್ರದೇಶದ ಅಭಿವೃದ್ಧಿಯ ಪಯಣದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಗಲಿವೆ" ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು.

ರಕ್ಷಣಾ ಸಚಿವರು ಮುಂದುವರಿದು, ಈ ಯೋಜನೆಗಳು ಪ್ರಬಲ "ಅಭಿವೃದ್ಧಿ ಕೇಂದ್ರಗಳಾಗಿ" ಕಾರ್ಯನಿರ್ವಹಿಸಲಿವೆ ಮತ್ತು ಇದರಿಂದಾಗಿ ಬೃಹತ್ ಉದ್ಯೋಗ ಸೃಷ್ಟಿಯಾಗಲಿದೆ ಎಂದರು. "ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ) ಸೇರಿದಂತೆ ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳು ಈ ಉಪಕ್ರಮದ ಅವಿಭಾಜ್ಯ ಅಂಗವಾಗಲಿವೆ. ಬಲವಾದ ಸರಬರಾಜು ಸರಪಳಿಗಳನ್ನು ಸ್ಥಾಪಿಸಲಾಗುವುದು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಅಭಿವೃದ್ಧಿ ಹೊಂದಲಿವೆ. ಸ್ಥಳೀಯ ಯುವಜನರಿಗೆ ಉನ್ನತ ತಂತ್ರಜ್ಞಾನದ ಕ್ಷೇತ್ರದಲ್ಲಿ ಕೆಲಸ ಮಾಡಲು, ಕಲಿಯಲು ಮತ್ತು ಬೆಳೆಯಲು ಒಂದು ವೇದಿಕೆ ಸಿಗಲಿದೆ. ಇದು ಇಡೀ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಉತ್ತೇಜನ ನೀಡಲಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ" ಎಂದು ಅವರು ಹೇಳಿದರು.
ಎಎಂಸಿಎ ಯೋಜನೆಯ ಒಟ್ಟು ವೆಚ್ಚ ಸುಮಾರು 15,000 ಕೋಟಿ ರೂಪಾಯಿಗಳಾಗಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಂಗಸಂಸ್ಥೆಯಾದ ವೈಮಾನಿಕ ಅಭಿವೃದ್ಧಿ ಸಂಸ್ಥೆಯ 'ಮುಖ್ಯ ಸಂಯೋಜನೆ ಮತ್ತು ಹಾರಾಟ ಪರೀಕ್ಷಾ ಕೇಂದ್ರ' ಈ ಯೋಜನೆಯ ಪ್ರಮುಖ ಭಾಗವಾಗಿದೆ. ಈ ಕೇಂದ್ರವನ್ನು ಸುಮಾರು 2,000 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಐದನೇ ತಲೆಮಾರಿನ ಯುದ್ಧವಿಮಾನಗಳು ಗಗನಕ್ಕೇರುವ ಜಗತ್ತಿನ ಕೆಲವೇ ಕೆಲವು ಆಯ್ದ ಪ್ರತಿಷ್ಠಿತ ತಾಣಗಳ ಸಾಲಿಗೆ ಸೇರಲು ಪುಟ್ಟಪರ್ತಿ ಈಗ ಸಜ್ಜಾಗಿದೆ. ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ಶತ್ರುವನ್ನು ಧೂಳೀಪಟ ಮಾಡಬಲ್ಲ ಅತ್ಯಾಧುನಿಕ ಯುದ್ಧವಿಮಾನದ ಜನ್ಮಭೂಮಿ ಇದಾಗಲಿದೆ ಎಂದು ಶ್ರೀ ರಾಜನಾಥ್ ಸಿಂಗ್ ಘೋಷಿಸಿದರು.

ಭಾರತ್ ಡೈನಾಮಿಕ್ಸ್ ಲಿಮಿಟೆಡ್ ನ 480 ಕೋಟಿ ರೂಪಾಯಿಗಳ ಯೋಜನೆಯಾದ 'ನೌಕಾ ವ್ಯವಸ್ಥೆಗಳ ಉತ್ಪಾದನಾ ಘಟಕ'ವು ಸ್ವಯಂಚಾಲಿತ ನೀರೊಳಗಿನ ವಾಹನಗಳು, ನೀರೊಳಗಿನ ರಕ್ಷಣಾತ್ಮಕ ಪ್ರತಿತಂತ್ರ ವ್ಯವಸ್ಥೆಗಳು ಮತ್ತು ಮುಂದಿನ ಪೀಳಿಗೆಯ ಟಾರ್ಪಿಡೋಗಳ (ನೀರೊಳಗಿನ ಕ್ಷಿಪಣಿಗಳು) ತಯಾರಿಕೆಯ ಮೇಲೆ ಗಮನ ಹರಿಸಲಿದೆ. ಇದು ದೇಶವು ಇದುವರೆಗೆ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಹಲವಾರು ನಿರ್ಣಾಯಕ ಬಿಡಿಭಾಗಗಳನ್ನು ಉತ್ಪಾದಿಸಲಿದೆ. ಈ ಯೋಜನೆಯು ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಮತ್ತು ದೇಶದ ಕಡಲ ಆರ್ಥಿಕತೆ ಹಾಗೂ ಕಡಲ ಭದ್ರತೆಯಲ್ಲಿ ಭಾರಿ ಬದಲಾವಣೆ ತರಲಿದೆ ಎಂದು ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತ್ ಫೋರ್ಜ್ ಲಿಮಿಟೆಡ್ ನ ಅಂಗಸಂಸ್ಥೆಯಾದ ಆಗ್ನೇಯಾಸ್ತ್ರ ಎನರ್ಜೆಟಿಕ್ಸ್ ಲಿಮಿಟೆಡ್ ನ 'ರಕ್ಷಣಾ ಎನರ್ಜೆಟಿಕ್ಸ್ ಘಟಕ'ವನ್ನು 1,500 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಸ್ಥಾಪಿಸಲಾಗುತ್ತಿದೆ. ಈ ಸೌಲಭ್ಯವು ಭವಿಷ್ಯದ ಯುದ್ಧಗಳಿಗಾಗಿ ಭಾರತದ ಸನ್ನದ್ಧತೆಯನ್ನು ಬಲಪಡಿಸುವ ಆಯುಧಗಳನ್ನು ಉತ್ಪಾದಿಸಲಿದೆ ಎಂದು ಶ್ರೀ ರಾಜನಾಥ್ ಸಿಂಗ್ ಆಶಿಸಿದರು.
ಎಚ್ ಎಫ್ ಸಿ ಎಲ್ ಲಿಮಿಟೆಡ್ ನ 'ಮದ್ದುಗುಂಡು ಮತ್ತು ವಿದ್ಯುತ್ ಸ್ಫೋಟಕ ಕಡ್ಡಿ (ಫ್ಯೂಸ್) ಕಾರ್ಖಾನೆ'ಯನ್ನು ಸುಮಾರು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಸ್ಥಾಪಿಸಲಾಗುತ್ತಿದೆ. ಯಾವುದೇ ಮದ್ದುಗುಂಡುಗಳ ಅತ್ಯಂತ ಪ್ರಮುಖ ಭಾಗ 'ಫ್ಯೂಸ್' ಎಂದು ಬಣ್ಣಿಸಿದ ರಕ್ಷಣಾ ಸಚಿವರು, ಮದ್ದುಗುಂಡು ತಯಾರಿಕೆಯಲ್ಲಿ ದೇಶದ ಸ್ವಾವಲಂಬನೆಯ ಪಯಣದಲ್ಲಿ ಈ ಯೋಜನೆಯು ಹೊಸ ಅಧ್ಯಾಯದ ಆರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. "ಈ ಕಾರ್ಖಾನೆಯಲ್ಲಿ ತಯಾರಾಗುವ ಅತ್ಯಾಧುನಿಕ ಫ್ಯೂಸ್ ಗಳು ನಮ್ಮ ರಕ್ಷಣಾ ಪಡೆಗಳ ಸಾಮರ್ಥ್ಯವನ್ನು ಗಮನಾರ್ಹವಾಗಿ ಬಲಪಡಿಸಲಿವೆ" ಎಂದು ಅವರು ಹೇಳಿದರು.

ಮುಂಬರುವ ಡ್ರೋನ್ ನಗರಿ ಬಗ್ಗೆ ಮಾತನಾಡಿದ ಶ್ರೀ ರಾಜನಾಥ್ ಸಿಂಗ್ ಅವರು, ಯುವ ಉದ್ಯಮಿಗಳ ಸಹಯೋಗದ ದೃಷ್ಟಿಕೋನವನ್ನು ಶ್ಲಾಘಿಸಿದರು ಮತ್ತು ಈ ಘಟಕಗಳು ಪ್ರತ್ಯೇಕವಾಗಿ ಸಣ್ಣ ಪ್ರಮಾಣದಲ್ಲಿದ್ದರೂ, 'ಮೇಕ್ ಇನ್ ಇಂಡಿಯಾ' ಕನಸನ್ನು ನನಸಾಗಿಸಲು ಪ್ರಮುಖವಾಗಿವೆ ಎಂದರು. "ಡ್ರೋನ್ ತಂತ್ರಜ್ಞಾನವು ಆಧುನಿಕ ಯುದ್ಧಭೂಮಿಯಲ್ಲಿ ನಿಜವಾದ ಮಹತ್ವದ ಬದಲಾವಣೆ ತಂದಿದೆ. ಇದಲ್ಲದೆ, ಇತರ ವಲಯಗಳಲ್ಲೂ ಇದರ ಪಾತ್ರ ವೇಗವಾಗಿ ವಿಸ್ತರಿಸುತ್ತಿದೆ. ಇಲ್ಲಿ ತಯಾರಾಗುವ ಡ್ರೋನ್ ಗಳು ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಹಾರಿಸಲಿವೆ ಎಂಬ ನಂಬಿಕೆ ನನಗಿದೆ. ಸೂರತ್ ಅನ್ನು 'ವಜ್ರದ ನಗರಿ' ಮತ್ತು ಬೆಂಗಳೂರನ್ನು ಭಾರತದ 'ಸಿಲಿಕಾನ್ ವ್ಯಾಲಿ' ಎಂದು ಕರೆಯುವಂತೆ, ಈ ಪ್ರದೇಶವನ್ನು ಶೀಘ್ರದಲ್ಲೇ ದೇಶದ 'ಡ್ರೋನ್ ಕೇಂದ್ರ' ಎಂದು ಗುರುತಿಸಲಾಗುವುದು" ಎಂದು ಅವರು ಹೇಳಿದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರವು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಶ್ರಮಿಸಿದೆ ಎಂದು ರಕ್ಷಣಾ ಸಚಿವರು ಹೇಳಿದರು. ಇಂದು ದೇಶವು ಕೇವಲ 'ಸಮಗ್ರ ಸರ್ಕಾರ' ದೃಷ್ಟಿಕೋನದೊಂದಿಗೆ ಮಾತ್ರವಲ್ಲದೆ, 'ಸಮಗ್ರ ದೇಶ' ಮತ್ತು 'ಸಮಗ್ರ ಜನರ' ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು. "ವೈಯಕ್ತಿಕ ಸಂಶೋಧಕರಾಗಿರಲಿ, ದೊಡ್ಡ ಸಂಸ್ಥೆಯಾಗಿರಲಿ, ನವೋದ್ಯಮಗಳಾಗಿರಲಿ ಅಥವಾ ಸಣ್ಣ ಮತ್ತು ಮಧ್ಯಮ ಕೈಗಾರಿಗಳಾಗಿರಲಿ, ಪ್ರತಿಯೊಬ್ಬರೂ ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತಿದ್ದಾರೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯು ರಕ್ಷಣಾ ಉತ್ಪಾದನೆಯನ್ನು ಯಶಸ್ವಿಯಾಗಿ ಒಂದು ಜನಾಂದೋಲನವಾಗಿ ಪರಿವರ್ತಿಸಿದೆ" ಎಂದು ಅವರು ಹೇಳಿದರು.
ಸರ್ಕಾರದ ಪ್ರಯತ್ನಗಳಿಂದಾಗಿ ಸಾಧಿಸಿದ ಪ್ರಗತಿಯನ್ನು ಪಟ್ಟಿ ಮಾಡಿದ ಶ್ರೀ ರಾಜನಾಥ್ ಸಿಂಗ್, ರಕ್ಷಣಾ ಉತ್ಪಾದನೆಯು 2014 ರಲ್ಲಿ ಕೇವಲ 46,000 ಕೋಟಿ ರೂಪಾಯಿ ಇದ್ದದ್ದು ಇಂದು ಸುಮಾರು 1.54 ಲಕ್ಷ ಕೋಟಿ ರೂಪಾಯಿಗಳ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ತಿಳಿಸಿದರು. ಮುಂದಿನ ಒಂದು ಅಥವಾ ಎರಡು ತಿಂಗಳುಗಳಲ್ಲಿ ರಕ್ಷಣಾ ಉತ್ಪಾದನೆಯು 1.75 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಮಟ್ಟವನ್ನು ತಲುಪಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಒಂದು ದಶಕದ ಹಿಂದೆ ಸುಮಾರು 600 ಕೋಟಿ ರೂಪಾಯಿ ಇದ್ದ ರಕ್ಷಣಾ ರಫ್ತು ಇಂದು ದಾಖಲೆಯ ಸುಮಾರು 40,000 ಕೋಟಿ ರೂಪಾಯಿಗಳನ್ನು ತಲುಪಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ ತಪ್ಪು ಮಾಹಿತಿಯ ಯುಗದಲ್ಲಿ ಜನರು ಜಾಗರೂಕರಾಗಿರಬೇಕು ಎಂದು ರಕ್ಷಣಾ ಸಚಿವರು ಕರೆ ನೀಡಿದರು. "ನಮ್ಮ ವಿರೋಧಿಗಳು ಕೇವಲ ಆಯುಧಗಳಿಂದಲೇ ನಮ್ಮ ಮೇಲೆ ದಾಳಿ ಮಾಡಲು ಪ್ರಯತ್ನಿಸಬೇಕು ಎಂದೇನೂ ಇಲ್ಲ. ಅವರು ವದಂತಿಗಳನ್ನು ಅಥವಾ ತಪ್ಪು ಮಾಹಿತಿಯನ್ನು ಹರಡುವ ಮೂಲಕ ದೇಶಕ್ಕೆ ಹಾನಿ ಮಾಡಲು ಪ್ರಯತ್ನಿಸಬಹುದು. ದೇಶದಲ್ಲಿ ತೈಲ ಖಾಲಿಯಾಗಿದೆ ಅಥವಾ ದೇಶಕ್ಕೆ ಯಾವುದೋ ದೊಡ್ಡ ವಿಪತ್ತು ಬರಲಿದೆ ಎಂಬ ವದಂತಿಗಳನ್ನು ಅವರು ಹರಡಬಹುದು. ದೇಶದಲ್ಲಿ ಗೊಂದಲ ಮತ್ತು ಅರಾಜಕತೆಯನ್ನು ಸೃಷ್ಟಿಸುವ ಉದ್ದೇಶದಿಂದಲೇ ಇದನ್ನು ಮಾಡಲಾಗುತ್ತದೆ. ಒಂದು ಸಣ್ಣ ತಪ್ಪು ಮಾಹಿತಿಯೂ ದೇಶಕ್ಕೆ ಹಾನಿಕಾರಕವಾಗಿರುವುದರಿಂದ ನಾವು ಅತ್ಯಂತ ಜಾಗರೂಕರಾಗಿರಬೇಕು. ಪ್ರಧಾನಮಂತ್ರಿಯವರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಅಥವಾ ಇಂಧನವನ್ನು ಉಳಿಸಲು ನಮಗೆ ಸಲಹೆ ನೀಡಿದ್ದರೆ, ಅದನ್ನು ಒಳ್ಳೆಯ ಸಲಹೆಯ ಮನೋಭಾವದಿಂದಲೇ ನೋಡಬೇಕು" ಎಂದು ಅವರು ಹೇಳಿದರು.

ರಾಷ್ಟ್ರ ನಿರ್ಮಾಣದ ಕಾರ್ಯವು ಸಾಮೂಹಿಕ ಪ್ರಯತ್ನದ ಮೂಲಕ ಸಾಧ್ಯವಾಗುತ್ತದೆ ಎಂದು ಶ್ರೀ ರಾಜನಾಥ್ ಸಿಂಗ್ ಒತ್ತಿ ಹೇಳಿದರು. "ನಾವು ಕೈಜೋಡಿಸೋಣ ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳುವುದಲ್ಲದೆ, ವಿಶ್ವ ಬಂಧುತ್ವದ ಭಾವನೆಯೊಂದಿಗೆ ಇಡೀ ಜಗತ್ತಿಗೆ ಸಹಾಯ ಹಸ್ತ ಚಾಚುವ ಸಾಮರ್ಥ್ಯವಿರುವ ಪ್ರಬಲ ರಾಷ್ಟ್ರವನ್ನು ನಿರ್ಮಿಸೋಣ" ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್ ಚಂದ್ರಬಾಬು ನಾಯ್ಡು, ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ಸ್ವದೇಶೀಕರಣ ಹಾಗೂ ಸ್ವಾವಲಂಬನೆಗೆ ನಿರಂತರ ಒತ್ತು ನೀಡುವ ಮೂಲಕ ಮಿಲಿಟರಿಯನ್ನು ಆಧುನೀಕರಿಸಲು ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವರು ಕೈಗೊಂಡ ಪ್ರಯತ್ನಗಳನ್ನು ಶ್ಲಾಘಿಸಿದರು. ಸುಧಾರಣೆಗಳು, ಹೂಡಿಕೆ ಮತ್ತು ನಾವೀನ್ಯತೆಗಳಿಗೆ ನಿರಂತರ ಒತ್ತು ನೀಡುತ್ತಿರುವುದರಿಂದ ರಕ್ಷಣಾ ಮತ್ತು ಏರೋಸ್ಪೇಸ್ ವಲಯಗಳಲ್ಲಿ ದೇಶದ ಸನ್ನದ್ಧತೆ ಮತ್ತು ಜಾಗತಿಕ ಸ್ಥಾನಮಾನವು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಶ್ರೀ ಎನ್. ಚಂದ್ರಬಾಬು ನಾಯ್ಡು ಅವರು 'ಆಪರೇಷನ್ ಸಿಂಧೂರ್' ಅನ್ನು ಭಾರತದ ಬೆಳೆಯುತ್ತಿರುವ ಶಕ್ತಿ ಮತ್ತು ತಾಂತ್ರಿಕ ಪ್ರಗತಿ ಹಾಗೂ ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಯ ಯಶಸ್ಸಿಗೆ ಒಂದು ಹೆಮ್ಮೆಯ ಉದಾಹರಣೆ ಎಂದು ಬಣ್ಣಿಸಿದರು. ಶಂಕುಸ್ಥಾಪನೆ ನೆರವೇರಿಸಲಾದ ಈ ಸೌಲಭ್ಯಗಳು ದೇಶದ ರಕ್ಷಣಾ ಸನ್ನದ್ಧತೆಯನ್ನು ಬಲಪಡಿಸಲಿವೆ ಮತ್ತು ಈ ಪ್ರದೇಶದ ಬೆಳವಣಿಗೆಯನ್ನು ಉತ್ತೇಜಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಕೈಗಾರಿಕೆಗಳು ಮತ್ತು ಉದ್ಯಮಿಗಳಿಗೆ "ಆಂಧ್ರಪ್ರದೇಶದಲ್ಲೇ ವಿನ್ಯಾಸಗೊಳಿಸಿ, ಆಂಧ್ರಪ್ರದೇಶದಲ್ಲೇ ತಯಾರಿಸಿ, ಆಂಧ್ರಪ್ರದೇಶದಿಂದಲೇ ಮುನ್ನಡೆಸಿ" ಎಂದು ಕರೆ ನೀಡಿದರು ಮತ್ತು ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. "ಹೊಸ ಆಂಧ್ರಪ್ರದೇಶವನ್ನು ನಾವೀನ್ಯತೆ, ಮೂಲಸೌಕರ್ಯ ಮತ್ತು ಕೈಗಾರಿಕೀಕರಣ ಎಂಬ ಮೂರು ಸಾಮರ್ಥ್ಯಗಳೊಂದಿಗೆ ನಿರ್ಮಿಸಲಾಗುತ್ತಿದೆ. ಭಾರತವು ಅಭಿವೃದ್ಧಿ ಹೊಂದಿದ ಭಾರತದ (ವಿಕಸಿತ ಭಾರತ) ಗುರಿಯತ್ತ ಮುನ್ನಡೆಯುತ್ತಿರುವಾಗ, ಆಂಧ್ರಪ್ರದೇಶವು ಮುಂಚೂಣಿಯಲ್ಲಿ ನಿಂತು ಮುನ್ನಡೆಸಲಿದೆ" ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು, ಆಂಧ್ರಪ್ರದೇಶ ಸರ್ಕಾರದ ಸಚಿವರು, ರಕ್ಷಣಾ ಉತ್ಪಾದನಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜೀವ್ ಕುಮಾರ್, ರಕ್ಷಣಾ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಮತ್ತು ಉದ್ಯಮದ ಪ್ರತಿನಿಧಿಗಳು ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2261450)
ವಿಸಿಟರ್ ಕೌಂಟರ್ : 14