ಭಾರೀ ಕೈಗಾರಿಕೆಗಳ ಸಚಿವಾಲಯ
ಪ್ರಧಾನಮಂತ್ರಿ ಮೋದಿಯವರ ದೂರದೃಷ್ಟಿ ಭಾರತದ ಇವಿ ಕ್ರಾಂತಿಯನ್ನು ಮುನ್ನಡೆಸುತ್ತಿದೆ: ಕರ್ನಾಟಕಕ್ಕೆ ಪಿಎಂ ಇ-ಡ್ರೈವ್ ಯೋಜನೆಯಡಿ 1,243 ಹೊಸ ಇವಿ ಚಾರ್ಜರ್‌ಗಳು ಲಭಿಸುತ್ತವೆ, ರಾಷ್ಟ್ರೀಯ ಇವಿ ಚಾರ್ಜಿಂಗ್ ಸಮ್ಮೇಳನಕ್ಕೆ ಬೆಂಗಳೂರು ಆತಿಥ್ಯ
ಪ್ರಧಾನಮಂತ್ರಿ ಮೋದಿ ಅವರ ವಿದ್ಯುತ್ ವಾಹನಗಳ ದೂರದೃಷ್ಟಿಗೆ ವೇಗ ಬಂದಿದೆ: ಕರ್ನಾಟಕಕ್ಕೆ ₹123.26 ಕೋಟಿ ವೆಚ್ಚದಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಬೂಸ್ಟ್ ಘೋಷಿಸಿದ ಹೆಚ್ ಡಿ ಕುಮಾರಸ್ವಾಮಿ
ಪ್ರಧಾನಮಂತ್ರಿ ಮೋದಿ ಅವರ ದೂರದೃಷ್ಟಿಯಡಿಯಲ್ಲಿ ಭಾರತ ಸ್ವಾವಲಂಬಿ ವಿದ್ಯುತ್ ಚಲನಶೀಲತೆ ಪರಿಸರ ವ್ಯವಸ್ಥೆಯತ್ತ ಸಾಗುತ್ತಿದೆ: ಹೆಚ್ ಡಿ ಕುಮಾರಸ್ವಾಮಿ
ಪ್ರಕಟಣಾ ದಿನಾಂಕ:
12 MAY 2026 6:23PM by PIB Bengaluru
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ. ಹೆಚ್.ಡಿ. ಕುಮಾರಸ್ವಾಮಿ ಅವರು ಪಿಎಂ ಇ-ಡ್ರೈವ್ ಯೋಜನೆಯಡಿ ದೇಶದ ಇವಿ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಪ್ರಮುಖ ಅನುಮೋದನೆಗಳು ಮತ್ತು ನೀತಿ ಉಪಕ್ರಮಗಳನ್ನು ಮಂಗಳವಾರ ಘೋಷಿಸಿದಾಗ, ಭಾರತದ ಸ್ವಚ್ಛ ಚಲನಶೀಲತೆಯತ್ತ ಪರಿವರ್ತನೆಗೆ ಪ್ರಮುಖ ಚಾಲನೆ ದೊರೆತುದಕ್ಕೆ ಬೆಂಗಳೂರು ಸಾಕ್ಷಿಯಾಯಿತು.
ಕರ್ನಾಟಕಕ್ಕೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಕೇಂದ್ರ ಸಚಿವರು ರಾಜ್ಯದಲ್ಲಿ 1,243 ಇವಿ ಚಾರ್ಜರ್‌ಗಳನ್ನು ಸ್ಥಾಪಿಸುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವುದಾಗಿ ಘೋಷಿಸಿದರು, ಇದಕ್ಕಾಗಿ ₹123.26 ಕೋಟಿ ಹಣಕಾಸು ವೆಚ್ಚವಾಗಲಿದೆ. ಈ ಘೋಷಣೆಯು ಭಾರತವನ್ನು ವಿದ್ಯುತ್ ಚಲನಶೀಲತೆಯತ್ತ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಸ್ಥಾನ ದೊರೆಯುವಂತೆ ಮಾಡಿದೆ.
ಬೆಂಗಳೂರಿನಲ್ಲಿ ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಯಡಿಯಲ್ಲಿ ರಾಷ್ಟ್ರವ್ಯಾಪಿ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವ ಕುರಿತು ನಡೆದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಬೆಂಗಳೂರು ಭಾರತದ ಪ್ರಮುಖ ಇವಿ ಚಾರ್ಜಿಂಗ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದರಲ್ಲದೆ ಸ್ವಚ್ಛ ಚಲನಶೀಲತೆಯತ್ತ ರಾಷ್ಟ್ರವ್ಯಾಪಿ ಪರಿವರ್ತನೆಯನ್ನು ವೇಗಗೊಳಿಸುವಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಇತರ ರಾಜ್ಯಗಳನ್ನು ಒತ್ತಾಯಿಸಿದರು.

ವಿವಿಧ ರಾಜ್ಯಗಳು ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 4,874 ಇವಿ ಚಾರ್ಜರ್‌ಗಳ ಸ್ಥಾಪನೆಗೆ ಇದುವರೆಗೆ ₹503.86 ಕೋಟಿ ಮೌಲ್ಯದ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ ಎಂದು ಸಚಿವರು ಹೇಳಿದರು. ಅನುಮೋದಿತ ಪ್ರಸ್ತಾವನೆಗಳಲ್ಲಿ ರಾಜಸ್ಥಾನ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸೇರಿದಂತೆ ಅವುಗಳ ಜೊತೆಗೆ ಎಚ್‌ಪಿಸಿಎಲ್, ಐಒಸಿಎಲ್ ಮತ್ತು ಬಿಪಿಸಿಎಲ್‌ನಂತಹ ಪ್ರಮುಖ ಸಿಪಿಎಸ್‌ಇಗಳು ಸೇರಿವೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಭಾರತವು 2070 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ದೃಢವಾಗಿ ಸಂಕಲ್ಪ ಮಾಡಿದೆ ಮತ್ತು ವಿಕಸಿತ ಭಾರತ 2047ರ ದೃಷ್ಟಿಕೋನದತ್ತ ಸ್ಥಿರವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು. ಸುಸ್ಥಿರತೆ, ನಾವೀನ್ಯತೆ ಮತ್ತು ಪ್ರಮಾಣದ ಮೇಲೆ ಪ್ರಧಾನಮಂತ್ರಿಯವರ ಒತ್ತು ಚಲನಶೀಲತೆ ಮತ್ತು ಶಕ್ತಿಯ ಕಡೆಗೆ ಭಾರತದ ವಿಧಾನವನ್ನು ಮೂಲಭೂತವಾಗಿ ಪರಿವರ್ತಿಸಿದೆ ಎಂದು ಅವರು ಗಮನಿಸಿದರು.
ಭಾರತದ ಆಟೋಮೋಟಿವ್ ವಲಯವು ದೇಶದ ಜಿಡಿಪಿಗೆ 7% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ, ಉತ್ಪಾದನಾ ಜಿಡಿಪಿಯ ಸುಮಾರು ಅರ್ಧದಷ್ಟಿದೆ ಮತ್ತು ಸುಮಾರು 30 ಮಿಲಿಯನ್ ಜೀವನೋಪಾಯಗಳನ್ನು ಬೆಂಬಲಿಸುತ್ತದೆ, ಇದು ಭಾರತದ ಸ್ವಚ್ಛ ಚಲನಶೀಲತೆಯ ಪರಿವರ್ತನೆಗೆ ಕೇಂದ್ರವಾಗಿದೆ ಎಂದು ಸಚಿವರು ಎತ್ತಿ ತೋರಿಸಿದರು.
ಭವಿಷ್ಯದ ಚಲನಶೀಲ ತಂತ್ರಜ್ಞಾನಗಳಿಗೆ ಜಾಗತಿಕ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಲು ಭಾರೀ ಕೈಗಾರಿಕಾ ಸಚಿವಾಲಯವು ಪ್ರಾರಂಭಿಸಿದ ಹಲವಾರು ಪ್ರಮುಖ ಉಪಕ್ರಮಗಳನ್ನು ಅವರು ಒತ್ತಿ ಹೇಳಿದರು. ಬ್ಯಾಟರಿ ಸೆಲ್ ತಯಾರಿಕೆಗಾಗಿ ₹18,100 ಕೋಟಿ ಪಿ.ಎಲ್.ಐ. ಎ.ಸಿ.ಸಿ. (PLI ACC) ಯೋಜನೆ, ಇ.ವಿ. ಗಳು ಮತ್ತು ಹೈಡ್ರೋಜನ್ ಚಾಲಿತ ವಾಹನಗಳು ಸೇರಿದಂತೆ ಸ್ವಚ್ಚ ವಾಹನಗಳನ್ನು ಉತ್ತೇಜಿಸುವ ₹25,938 ಕೋಟಿ ಪಿ.ಎಲ್.ಐ. ಆಟೋ ಯೋಜನೆ ಮತ್ತು ಅಪರೂಪದ ಭೂಮಿಯ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಗುರಿಯನ್ನು ಹೊಂದಿರುವ ಇತ್ತೀಚೆಗೆ ಪ್ರಾರಂಭಿಸಲಾದ ₹7,280 ಕೋಟಿಯ ಆರ್.ಇ.ಪಿ.ಎಂ. (REPM) ಯೋಜನೆ ಇವುಗಳಲ್ಲಿ ಸೇರಿವೆ.
ಪಿ.ಎಂ.ಇ.ಡ್ರೈವ್ (PM E-DRIVE) ಯೋಜನೆಯನ್ನು ಭಾರತದ ಇ.ವಿ. ರೂಪಾಂತರದ ಮೂಲಾಧಾರವೆಂದು ವಿವರಿಸಿದ ಕುಮಾರಸ್ವಾಮಿ, ₹10,900 ಕೋಟಿ ಉಪಕ್ರಮವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಬಸ್ಸುಗಳು ಮತ್ತು ಟ್ರಕ್‌ಗಳ ಅಳವಡಿಕೆಯನ್ನು ವೇಗಗೊಳಿಸುತ್ತಿದೆ ಮತ್ತು ಅದೇ ಸಮಯದಲ್ಲಿ ದೇಶಾದ್ಯಂತ ದೃಢವಾದ ಇ.ವಿ. ಚಾರ್ಜಿಂಗ್ ಮೂಲಸೌಕರ್ಯವನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು. ದೇಶಾದ್ಯಂತ ಇ.ವಿ. ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯ ನಿಯೋಜನೆಗಾಗಿ ₹2,000 ಕೋಟಿಯನ್ನು ನಿರ್ದಿಷ್ಟವಾಗಿ ಅದಕ್ಕಾಗಿಯೇ ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
ದೇಶಾದ್ಯಂತ ಚಾರ್ಜಿಂಗ್ ಮೂಲಸೌಕರ್ಯವನ್ನು ಹೆಚ್ಚಿಸುವಲ್ಲಿ ಬಿಪಿಸಿಎಲ್, ಐಒಸಿಎಲ್ ಮತ್ತು ಎಚ್‌ಪಿಸಿಎಲ್ ಸೇರಿದಂತೆ ತೈಲ ಮಾರುಕಟ್ಟೆ ಕಂಪನಿಗಳ ಕೊಡುಗೆಯನ್ನು ಸಚಿವರು ಶ್ಲಾಘಿಸಿದರು. ಫೇಮ್-II ಯೋಜನೆಯಡಿಯಲ್ಲಿ, ಒಎಂಸಿಗಳು ದೇಶಾದ್ಯಂತ 8,932 ಇವಿ ಚಾರ್ಜರ್‌ಗಳನ್ನು ಸ್ಥಾಪಿಸಿವೆ ಮತ್ತು ಭಾರೀ ಕೈಗಾರಿಕಾ ಸಚಿವಾಲಯದಿಂದ ₹873.5 ಕೋಟಿ ಸಬ್ಸಿಡಿ ಬೆಂಬಲವನ್ನು ಪಡೆದಿವೆ. ಇವುಗಳಲ್ಲಿ, ಕರ್ನಾಟಕದಲ್ಲಿಯೇ 721 ಚಾರ್ಜರ್‌ಗಳನ್ನು ಸ್ಥಾಪಿಸಲಾಗಿದೆ.
ಚಾರ್ಜ್ ಪಾಯಿಂಟ್ ಆಪರೇಟರ್‌ಗಳು ಮತ್ತು ಟಾಟಾ ಪವರ್, ಚಾರ್ಜ್‌ಝೋನ್ ಹಾಗು ಮಹೀಂದ್ರಾ ಮತ್ತು ಮಹೀಂದ್ರಾದಂತಹ ಉದ್ಯಮದ ಪ್ರಮುಖರು ನಾವೀನ್ಯತೆ ಮತ್ತು ಕಾರ್ಯಗತಗೊಳಿಸುವ ಸಾಮರ್ಥ್ಯಗಳ ಮೂಲಕ ಭಾರತದ ಇವಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ವಹಿಸಿದ ಪಾತ್ರವನ್ನು ಹೆಚ್.ಡಿ. ಕುಮಾರಸ್ವಾಮಿ ಶ್ಲಾಘಿಸಿದರು.

ಸಚಿವಾಲಯದ ಮುಂದಿನ ಪ್ರಮುಖ ಉಪಕ್ರಮವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ, ಕೇಂದ್ರ ಸಚಿವರು ರಾಷ್ಟ್ರೀಯ ಏಕೀಕೃತ ಇವಿ ಚಾರ್ಜಿಂಗ್ ಅಪ್ಲಿಕೇಶನ್ - ಏಕೀಕೃತ ಭಾರತ್ ಇ-ಚಾರ್ಜ್ (ಯುಬಿಸಿ) ಕುರಿತು ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಈ ವೇದಿಕೆಯು ಇವಿ ಬಳಕೆದಾರರು ಒಂದೇ ವಿಶ್ವಾಸಾರ್ಹ ಇಂಟರ್ಫೇಸ್ ಮೂಲಕ ಬಹು ಆಪರೇಟರ್‌ಗಳ ಚಾರ್ಜಿಂಗ್ ನೆಟ್‌ವರ್ಕ್‌ಗಳನ್ನು ಅನ್ವೇಷಿಸಲು, ಪ್ರವೇಶಿಸಲು ಮತ್ತು ಪಾವತಿಸಲು ಅನುವು ಮಾಡಿಕೊಡುವ ಗುರಿಯನ್ನು ಹೊಂದಿದೆ. ಯುಪಿಐನ ಡಿಜಿಟಲ್ ಪಾವತಿಗಳ ರೂಪಾಂತರಕ್ಕೆ ಅದರ ಸಂಭಾವ್ಯ ಪರಿಣಾಮವನ್ನು ಹೋಲಿಸಿದರೆ, ಈ ಉಪಕ್ರಮವು ಭಾರತದ ಇವಿ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ಗಮನಾರ್ಹವಾಗಿ ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಭಾರೀ ಕೈಗಾರಿಕಾ ಸಚಿವಾಲಯವು ವಿದ್ಯುತ್ ಸಚಿವಾಲಯ, ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕಾ ಪಾಲುದಾರರೊಂದಿಗೆ ಸಮನ್ವಯದೊಂದಿಗೆ ದೇಶದಲ್ಲಿ ವಿದ್ಯುತ್ ಚಲನಶೀಲತೆಯ ತ್ವರಿತ ಬೆಳವಣಿಗೆಯನ್ನು ಬೆಂಬಲಿಸಲು ಗ್ರಿಡ್ ಸಿದ್ಧತೆ, ಪ್ರಮಾಣೀಕರಣ ಮತ್ತು ಡಿಜಿಟಲ್ ಏಕೀಕರಣವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದೆ ಎಂದು ಶ್ರೀ ಕುಮಾರಸ್ವಾಮಿ ಹೇಳಿದರು.
ಭವಿಷ್ಯದ ಮಾರ್ಗಸೂಚಿಯನ್ನು ವಿವರಿಸುತ್ತಾ, ಭಾರತದ ಇವಿ ಚಾರ್ಜಿಂಗ್ ಮೂಲಸೌಕರ್ಯ ಕಾರ್ಯತಂತ್ರವು ಮೂರು ತತ್ವಗಳಿಂದ ಮಾರ್ಗದರ್ಶಿಸಲ್ಪಡುತ್ತದೆ ಎಂದು ಸಚಿವರು ಹೇಳಿದರು; ನಗರ ಮತ್ತು ಗ್ರಾಮೀಣ ಭಾರತದಾದ್ಯಂತ ಚಾರ್ಜಿಂಗ್ ಸೌಲಭ್ಯಗಳು ಲಭ್ಯವಾಗುವಂತೆ, ಕೈಗೆಟುಕುವ ಮತ್ತು ವಿಶ್ವಾಸಾರ್ಹವಾಗಿ ಒದಗುವಂತೆ ಖಚಿತಪಡಿಸಿಕೊಳ್ಳುವುದು ಆದ್ಯತೆಯಾಗಿದೆ ಎಂದರು.
ಈ ಪರಿವರ್ತನೆಯನ್ನು ಭಾರತದ ಭವಿಷ್ಯಕ್ಕೆ ನಿರ್ಣಾಯಕ ಕ್ಷಣ ಎಂದು ಕರೆದ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಇವಿ ಆಂದೋಲನವು ಕೇವಲ ಮೂಲಸೌಕರ್ಯ ಸೃಷ್ಟಿಯ ಬಗ್ಗೆ ಅಲ್ಲ, ಬದಲಾಗಿ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಇಂಧನ ಸುರಕ್ಷತೆಯನ್ನು ಬಲಪಡಿಸುವುದು ಮತ್ತು ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವುದರ ಬಗ್ಗೆ ಎಂದು ಹೇಳಿದರು.
ನಾವು ಬರೇ ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಾತ್ರವೇ ಸ್ಥಾಪಿಸುತ್ತಿರುವುದಲ್ಲ, ಬದಲಾಗಿ ಭಾರತದ ಭವಿಷ್ಯಕ್ಕೆ ಶಕ್ತಿ ತುಂಬುತ್ತಿದ್ದೇವೆ" ಎಂದು ಹೇಳಿದ ಸಚಿವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಜಾಗತಿಕ ಸ್ವಚ್ಛ ಚಲನಶೀಲತೆಯ ರೂಪಾಂತರವನ್ನು ಮುಂಚೂಣಿಯಿಂದ ಮುನ್ನಡೆಸಲು ಭಾರತ ಸಿದ್ಧವಾಗಿದೆ ಎಂದೂ ಹೇಳಿದರು.
*****
(ಪ್ರಕಟಣೆ ಐ.ಡಿ.: 2260471)
ವಿಸಿಟರ್ ಕೌಂಟರ್ : 6