ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
2022-23ರ ಮೂಲ ವರ್ಷದ ಆಧಾರದೊಂದಿಗೆ ಒಟ್ಟು ರಾಜ್ಯ ಮೌಲ್ಯವರ್ಧಿತ (ಜಿ.ಎಸ್.ವಿ.ಎ.) ಅಂದಾಜುಗಳ ಸಂಕಲನಕ್ಕಾಗಿ ಶಿಷ್ಟಾಚಾರದ ಏಕರೂಪದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ
ಪ್ರಕಟಣಾ ದಿನಾಂಕ:
07 MAY 2026 4:11PM by PIB Bengaluru
ಕೇಂದ್ರ ಅಂಕಿಅಂಶ (ಸಾಂಖ್ಯಿಕ) ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (ಎಂ.ಒ.ಎಸ್.ಪಿ.ಐ) ರಾಷ್ಟ್ರೀಯ ಖಾತೆಗಳ ಆಧಾರಕ್ಕಾಗಿ ಮೂಲ ವರ್ಷವನ್ನು 2022–23ಕ್ಕೆ ನವೀಕರಿಸಿದೆ. ಈ ಪರಿಷ್ಕರಣೆಯು ಆಧುನಿಕ ದತ್ತಾಂಶ ಮೂಲಗಳು ಮತ್ತು ವಿಕಸನಗೊಳ್ಳುತ್ತಿರುವ ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಸುಧಾರಿತ ಅಂದಾಜು ಅಭ್ಯಾಸಗಳನ್ನು ಸಂಯೋಜಿಸುವ ಮೂಲಕ ಆರ್ಥಿಕತೆಯ ಪ್ರಸ್ತುತ ರಚನೆಯನ್ನು ಹೆಚ್ಚು ನಿಖರವಾಗಿ ಸೆರೆಹಿಡಿಯುವ ಗುರಿಯನ್ನು ಹೊಂದಿದೆ. ಈ ಬದಲಾವಣೆಗೆ ಅನುಗುಣವಾಗಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟು ರಾಜ್ಯ ದೇಶೀಯ ಉತ್ಪನ್ನ (ಜಿ.ಎಸ್.ಡಿ.ಪಿ) ಸಂಕಲನಕ್ಕಾಗಿ ಹೊಸ ಮೂಲ ವರ್ಷವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ, ಇದು ಪ್ರಾದೇಶಿಕ ಆರ್ಥಿಕ ಕಾರ್ಯಕ್ಷಮತೆಯನ್ನು ನಿರ್ಣಯಿಸುವಲ್ಲಿ ಹೆಚ್ಚಿನ ನಿಖರತೆ, ಸ್ಥಿರತೆ ಮತ್ತು ಹೋಲಿಕೆಯನ್ನು ಖಚಿತಪಡಿಸುತ್ತದೆ.
ಈ ಪರಿವರ್ತನೆಗೆ ಮಾರ್ಗದರ್ಶನ ನೀಡಲು, ರಾಷ್ಟ್ರೀಯ ಖಾತೆಗಳ ಅಂಕಿಅಂಶಗಳ ಸಲಹಾ ಸಮಿತಿಯು (ಎ.ಸಿ.ಎನ್.ಎ.ಎಸ್.) ಪ್ರಾದೇಶಿಕ ಖಾತೆಗಳ ಉಪ-ಸಮಿತಿಯನ್ನು ರಚಿಸಿತು, ಇದರಲ್ಲಿ ಐಐಎಂ ಅಹಮದಾಬಾದ್ ನ ಮಾಜಿ ಪ್ರಾಧ್ಯಾಪಕ ಪ್ರೊ. ರವೀಂದ್ರ ಎಚ್. ಧೋಲಾಕಿಯಾ ಅಧ್ಯಕ್ಷತೆಯಲ್ಲಿ, ರಾಜ್ಯ ಸರ್ಕಾರಗಳು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ), ನೀತಿ ಆಯೋಗ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಸದಸ್ಯರು ಒಳಗೊಂಡಿದ್ದರು. ರಾಜ್ಯ ದೇಶೀಯ ಉತ್ಪನ್ನ (ಎಸ್.ಡಿ.ಪಿ) ಮತ್ತು ಜಿಲ್ಲಾ ದೇಶೀಯ ಉತ್ಪನ್ನ (ಡಿಡಿಪಿ) ಸಂಕಲಿಸಲು ಪರಿಕಲ್ಪನೆಗಳು, ವಿಧಾನಗಳು ಮತ್ತು ಉದಯೋನ್ಮುಖ ದತ್ತಾಂಶ ಮೂಲಗಳನ್ನು ಪರಿಶೀಲಿಸುವುದು ಇದರ ಕರ್ತವ್ಯವಾಗಿದೆ.
ಒಟ್ಟು ರಾಜ್ಯ ಮೌಲ್ಯವರ್ಧಿತ (ಜಿ.ಎಸ್.ವಿ.ಎ.) ಮತ್ತು ಒಟ್ಟು ರಾಜ್ಯ ದೇಶೀಯ ಉತ್ಪನ್ನ (ಜಿ.ಎಸ್.ಡಿ.ಪಿ) (ಜಿ.ಎಸ್.ಡಿ.ಪಿ = ಜಿ.ಎಸ್.ವಿ.ಎ. + ಉತ್ಪನ್ನಗಳ ಮೇಲಿನ ನಿವ್ವಳ ತೆರಿಗೆಗಳು) ಸಂಕಲಿಸುವಲ್ಲಿ ಪ್ರಮುಖ ಆದ್ಯತೆಗಳು, ಈ ಕೆಳಗಿನಂತಿವೆ:
- ದತ್ತಾಂಶ ಏಕೀಕರಣವನ್ನು ವಿಸ್ತರಿಸುವುದು: ವ್ಯಾಪ್ತಿ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸಲು ಆಡಳಿತಾತ್ಮಕ ದಾಖಲೆಗಳು, ವಲಯ ಡೇಟಾಬೇಸ್ ಗಳು ಮತ್ತು ಸಮೀಕ್ಷೆಯ ಇನ್ಪುಟ್ಗಳನ್ನು ಸಂಯೋಜಿಸುವುದು.
- ಸಂಸ್ಕರಣಾ ವಿಧಾನಗಳು: ವಿಶೇಷವಾಗಿ ಉದಯೋನ್ಮುಖ ಸೇವಾ ವಲಯಗಳು ಮತ್ತು ಸಂಘಟಿತವಲ್ಲದ ಉದ್ಯಮಗಳಲ್ಲಿ ವಿಕಸನಗೊಳ್ಳುತ್ತಿರುವ ಆರ್ಥಿಕತೆಯನ್ನು ಉತ್ತಮವಾಗಿ ಪ್ರತಿಬಿಂಬಿಸಲು ಅಂದಾಜು ತಂತ್ರಗಳನ್ನು ನವೀಕರಿಸುವುದು.
- ರಾಷ್ಟ್ರೀಯ ಸಮುಚ್ಚಯಗಳೊಂದಿಗೆ ಜೋಡಣೆಯನ್ನು ಖಚಿತಪಡಿಸುವುದು: ರಾಷ್ಟ್ರೀಯ ಸಮುಚ್ಚಯಗಳೊಂದಿಗೆ ಹೋಲಿಕೆಯನ್ನು ಬಲಪಡಿಸಲು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಂದಾಜುಗಳ ನಡುವೆ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು.
- ಪ್ರಮಾಣೀಕರಣ ಅಭ್ಯಾಸಗಳು: ಪ್ರಾದೇಶಿಕ ಖಾತೆಗಳ ಅಂಕಿಅಂಶಗಳಿಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕರೂಪದ, ಪಾರದರ್ಶಕ ಮತ್ತು ಹೋಲಿಸಬಹುದಾದ ವಿಧಾನಗಳನ್ನು ಉತ್ತೇಜಿಸುವುದು.
ಪ್ರತ್ಯೇಕ ರಾಜ್ಯಗಳ ಆರ್ಥಿಕ ಕಾರ್ಯಕ್ಷಮತೆಯನ್ನು ಅಳೆಯಲು ಒಟ್ಟು ರಾಜ್ಯ ದೇಶೀಯ ಉತ್ಪನ್ನ (ಜಿ.ಎಸ್.ಡಿ.ಪಿ) ಅತ್ಯಗತ್ಯ. ರಾಜ್ಯ ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿ ವಲಯ ಬೆಳವಣಿಗೆಯನ್ನು ವಿಶ್ಲೇಷಿಸಲು, ಪರಿಣಾಮಕಾರಿ ಹಣಕಾಸು ಯೋಜನೆ, ತೆರಿಗೆ ಸಂಗ್ರಹಣೆ ಮತ್ತು ರಾಜ್ಯಗಳ ನಡುವೆ ಸ್ಪರ್ಧಾತ್ಮಕ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು ಇದು ಪ್ರಾಥಮಿಕ ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ.
ಭಾರತದ ಹಣಕಾಸಿನ “ರಾಜ್ಯಗಳ ಒಕ್ಕೂಟ ವ್ಯವಸ್ಥೆ(ಫೆಡರಲಿಸಂ ರಚನೆ”)ಯಲ್ಲಿ ಒಟ್ಟು ರಾಜ್ಯ ದೇಶೀಯ ಉತ್ಪನ್ನ (ಜಿ.ಎಸ್.ಡಿ.ಪಿ) ಒಂದು ನಿರ್ಣಾಯಕ ಮಾನದಂಡವಾಗಿದೆ. ಹಣಕಾಸು ಸಚಿವಾಲಯ, ಹಣಕಾಸು ಆಯೋಗ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಮತ್ತು ಇತರ ಪಾಲುದಾರರು ಹಣಕಾಸಿನ ವಿಕೇಂದ್ರೀಕರಣ, ನೀತಿ ಸೂತ್ರೀಕರಣ, ಸಂಪನ್ಮೂಲ ಹಂಚಿಕೆ, ಬಜೆಟ್, ಕಾರ್ಯಕ್ಷಮತೆ ಮೌಲ್ಯಮಾಪನ ಮತ್ತು ಅಂತರ-ರಾಜ್ಯ ಹೋಲಿಕೆಗಳಿಗಾಗಿ ಜಿಎಸ್ಡಿಪಿಯನ್ನು ವ್ಯಾಪಕವಾಗಿ ಬಳಸುತ್ತಾರೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಹಣಕಾಸು ಆಯೋಗವು ರಾಜ್ಯಗಳ ಹಣಕಾಸಿನ ಸಾಮರ್ಥ್ಯ ಮತ್ತು ಸಾಪೇಕ್ಷ ಆರ್ಥಿಕ ಸ್ಥಿತಿಯನ್ನು ನಿರ್ಣಯಿಸಲು ಜಿಎಸ್ಡಿಪಿ ಅಂದಾಜುಗಳನ್ನು ಬಳಸುತ್ತದೆ ಮತ್ತು ಕೇಂದ್ರ ತೆರಿಗೆಗಳ ವಿತರಣೆಯನ್ನು ಶಿಫಾರಸು ಮಾಡುತ್ತದೆ. ತಲಾವಾರು ಜಿ.ಎಸ್.ಡಿ.ಪಿ.ಯಂತಹ ಸೂಚಕಗಳು ತೆರಿಗೆ ವಿಕೇಂದ್ರೀಕರಣವನ್ನು ನಿರ್ಧರಿಸುವಲ್ಲಿ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಮತ್ತು ಹಣಕಾಸಿನ ಇಕ್ವಿಟಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಮಾನದಂಡಗಳಾಗಿವೆ.
ಇದಲ್ಲದೆ, ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ (ಡಿ.ಒ.ಇ) ಹಣಕಾಸಿನ ಜವಾಬ್ದಾರಿ ಚೌಕಟ್ಟಿನ ಅಡಿಯಲ್ಲಿ ರಾಜ್ಯಗಳ ಸಾಲ ಮಿತಿಗಳನ್ನು ನಿಗದಿಪಡಿಸಲು ಜಿ.ಎಸ್.ಡಿ.ಪಿ. ಅಂದಾಜುಗಳನ್ನು ಬಳಸುತ್ತದೆ, ಏಕೆಂದರೆ ಅನುಮತಿಸುವ ಸಾಲ ಮಿತಿಯನ್ನು ಸಾಮಾನ್ಯವಾಗಿ ಜಿ.ಎಸ್.ಡಿ.ಪಿ.ಯ ಶೇಕಡಾವಾರು ಪ್ರಮಾಣದಲ್ಲಿ ನಿರ್ಧರಿಸಲಾಗುತ್ತದೆ.
ಪ್ರಸ್ತುತ ಸಮಕಾಲೀನವಾಗಿ, ಲಕ್ಷದ್ವೀಪ ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು (ಡಿ.ಎನ್.ಎಚ್.ಡಿ.ಡಿ.) ಹೊರತುಪಡಿಸಿ, 34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಜಿ.ಎಸ್.ಡಿ.ಪಿ. ಅಂದಾಜುಗಳನ್ನು 2011-12ರ ಮೂಲ ವರ್ಷದೊಂದಿಗೆ ಸಂಗ್ರಹಿಸುತ್ತಿವೆ. ಮೂಲ ವರ್ಷ 2022–23 ಹೊಂದಿರುವ ಹೊಸ ಸರಣಿಯಲ್ಲಿ, ಪ್ರಾದೇಶಿಕ ಲೆಕ್ಕಪತ್ರ ಅಂಕಿಅಂಶಗಳ ಸಂಕಲನದಲ್ಲಿ ಸಂಪೂರ್ಣ ರಾಷ್ಟ್ರೀಯ ವ್ಯಾಪ್ತಿ ಮತ್ತು ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಲಕ್ಷದ್ವೀಪ ಮತ್ತು ಡಿಎನ್.ಹೆಚ್ & ಡಿಡಿ ಸೇರಿದಂತೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳಲು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (ಎಂ.ಒ.ಎಸ್.ಪಿ.ಐ.) ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ.
ಜಿ.ಎಸ್.ವಿ.ಎ. ಸಂಕಲನಕ್ಕಾಗಿ ಕರಡು ಮಾರ್ಗಸೂಚಿಯನ್ನು ಏಪ್ರಿಲ್ 7, 2026 ರಂದು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (ಎಂ.ಒ.ಎಸ್.ಪಿ.ಐ.) ಜಾಲತಾಣದಲ್ಲಿ ಏಪ್ರಿಲ್ 27, 2026 ರವರೆಗೆ ವ್ಯಾಪಕ ಪ್ರಸರಣ ಮತ್ತು ಪಾಲುದಾರರ ಪ್ರತಿಕ್ರಿಯೆಗಾಗಿ ಇರಿಸಲಾಗಿದೆ. ಸ್ವೀಕರಿಸಿದ ಕಾಮೆಂಟ್ಗಳು ಮತ್ತು ಸಲಹೆಗಳ ಆಧಾರದ ಮೇಲೆ, ಒಟ್ಟು ರಾಜ್ಯ ಮೌಲ್ಯವರ್ಧಿತವನ್ನು (ಜಿ.ಎಸ್.ವಿ.ಎ.) ಮೂಲಾಧಾರ ವರ್ಷ 2022-23 ನೊಂದಿಗೆ ಸಂಕಲನಕ್ಕಾಗಿ ಏಕರೂಪದ ಮಾರ್ಗಸೂಚಿಯನ್ನು ಅಂತಿಮಗೊಳಿಸಲಾಗಿದೆ. ಈ ಮಾರ್ಗಸೂಚಿಯು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ರಾಜ್ಯ ಮಟ್ಟದ ಅಂದಾಜುಗಳ ಸ್ಥಿರತೆ, ವಿಶ್ವಾಸಾರ್ಹತೆ ಮತ್ತು ಹೋಲಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಪ್ರಮಾಣೀಕೃತ ಚೌಕಟ್ಟನ್ನು ಒದಗಿಸುತ್ತದೆ.
ಅಂತಿಮ ಮಾರ್ಗಸೂಚಿಯು ಈಗ ಕೇಂದ್ರ ಅಂಕಿಅಂಶ (ಸಾಂಖ್ಯಿಕ) ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (ಎಂ.ಒ.ಎಸ್.ಪಿ.ಐ) ಅಧಿಕೃತ ಜಾಲತಾಣದಲ್ಲಿ ಲಭ್ಯವಿದೆ (https://www.mospi.gov.in/product/more/6-Documents).
*****
(ಪ್ರಕಟಣೆ ಐ.ಡಿ.: 2258781)
ವಿಸಿಟರ್ ಕೌಂಟರ್ : 10