ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಮೇ 3 ರಂದು ಕರ್ನಾಟಕದ ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಯನ್ನು ಉದ್ಘಾಟಿಸಲಿರುವ ಡಾ. ಮನ್ಸುಖ್ ಮಾಂಡವೀಯಾ


ಕರ್ನಾಟಕದ ಬಳ್ಳಾರಿಯಲ್ಲಿ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಗೆ ಕೇಂದ್ರ ಸಚಿವರು ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ಪ್ರಕಟಣಾ ದಿನಾಂಕ: 01 MAY 2026 3:35PM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ  ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯಾ ಅವರು ಕರ್ನಾಟಕದ ದೊಡ್ಡಬಳ್ಳಾಪುರದಲ್ಲಿ ನೂತನವಾಗಿ ನಿರ್ಮಿಸಲಾದ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ ಮತ್ತು ಕರ್ನಾಟಕದ ಬಳ್ಳಾರಿಯಲ್ಲಿ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಗೆ 03.05.2026 ರಂದು ದೊಡ್ಡಬಳ್ಳಾಪುರದಿಂದ ರಿಮೋಟ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಆರೋಗ್ಯ ಸೌಲಭ್ಯಗಳು ಈ ಪ್ರದೇಶದಲ್ಲಿ ನೌಕರರ ರಾಜ್ಯ ವಿಮಾ (ಇಎಸ್ಐ) ಯೋಜನೆಯಡಿ ಆರೋಗ್ಯ  ಸೇವಾ  ವಿತರಣೆಯನ್ನು ಬಲಪಡಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿವೆ.

ವಿಶೇಷ ಸೌಜನ್ಯದ ಕ್ರಮವಾಗಿ, ಡಾ. ಮಾಂಡವೀಯಾ ಅವರು ಆಸ್ಪತ್ರೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಕಟ್ಟಡ ಕಾರ್ಮಿಕರನ್ನು ಗೌರವಿಸಲಿದ್ದಾರೆ ಮತ್ತು ಕಾರ್ಯಕ್ರಮದಲ್ಲಿ ಇಎಸ್ಐ ಫಲಾನುಭವಿಗಳಿಗೆ ನಗದು ಪ್ರಯೋಜನಗಳನ್ನು ವಿತರಿಸಲಿದ್ದಾರೆ. ದೊಡ್ಡಬಳ್ಳಾಪುರ ಸೌಲಭ್ಯವು 1,42,037 ವಿಮೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಸೇವೆ ಸಲ್ಲಿಸಲಿದ್ದು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ ಸುಮಾರು 5.50 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಬಳ್ಳಾರಿ ಘಟಕವು ಪೂರ್ಣಗೊಂಡ ನಂತರ, ಸುಮಾರು 64,000 ಕಾರ್ಮಿಕರು ಮತ್ತು ಅವರ ಕುಟುಂಬಗಳ ವೈದ್ಯಕೀಯ ಅಗತ್ಯಗಳನ್ನು ಪೂರೈಸುತ್ತದೆ, ಬಳ್ಳಾರಿ ವಿಭಾಗದ 2 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಕರ್ನಾಟಕದ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿರುವ ಇಎಸ್ಐಸಿ ಆಸ್ಪತ್ರೆಯು 100 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಸೆಕೆಂಡರಿ ಕೇರ್ ಸೌಲಭ್ಯವಾಗಿದ್ದು, 5 ಎಕರೆ ಪ್ರದೇಶದಲ್ಲಿ 101.14 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 32 ಸಿಬ್ಬಂದಿ ವಸತಿಗೃಹಗಳನ್ನು ಒಳಗೊಂಡಿದೆ ಮತ್ತು ಸಾಮಾನ್ಯ ವೈದ್ಯಕೀಯ, ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ, ಮಕ್ಕಳ ವೈದ್ಯಶಾಸ್ತ್ರ, ಮೂಳೆಶಾಸ್ತ್ರ, ತುರ್ತು ಆರೈಕೆ ಮತ್ತು ವಿಕಿರಣ ಚಿಕಿತ್ಸೆ, ಪ್ರಯೋಗಾಲಯ ಹಾಗು ರಕ್ತ ಬ್ಯಾಂಕ್ ಸೇರಿದಂತೆ ಸಮಗ್ರ ರೋಗನಿರ್ಣಯ ಸೌಲಭ್ಯಗಳಂತಹ ಪ್ರಮುಖ ಸೇವೆಗಳನ್ನು ಒದಗಿಸುತ್ತದೆ. ಬಳ್ಳಾರಿಯಲ್ಲಿ ಉದ್ದೇಶಿತ ಇಎಸ್ಐಸಿ ಆಸ್ಪತ್ರೆಯನ್ನು 5.21 ಎಕರೆ ಪ್ರದೇಶದಲ್ಲಿ 150 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಅದು ಇಎಸ್ಐ ಯೋಜನೆಯಡಿ ವಿಮೆದಾರರು ಮತ್ತು ಅವರ ಕುಟುಂಬಗಳಿಗೆ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.

ನೌಕರರ ರಾಜ್ಯ ವಿಮೆ (ಇಎಸ್ಐ) ಯೋಜನೆಯನ್ನು ಕರ್ನಾಟಕದಲ್ಲಿ 1958 ರಲ್ಲಿ ಪರಿಚಯಿಸಲಾಯಿತು, ಇದು ಬೆಂಗಳೂರಿನಿಂದ ಪ್ರಾರಂಭವಾಯಿತು ಮತ್ತು ಈಗ ಎಲ್ಲಾ 31 ಜಿಲ್ಲೆಗಳನ್ನು ಒಳಗೊಂಡಿದೆ. 31.03.2025 ರ ಹೊತ್ತಿಗೆ, ಈ ಯೋಜನೆಯು 2,01,749 ಉದ್ಯೋಗದಾತರು ಮತ್ತು 35,33,300 ವಿಮೆದಾರರನ್ನು (11,22,118 ಮಹಿಳೆಯರು ಸೇರಿದಂತೆ) ಒಳಗೊಂಡಿದೆ, ಒಟ್ಟು 1,37,09,204 ಫಲಾನುಭವಿಗಳನ್ನು ಹೊಂದಿದೆ. ರಾಜ್ಯದಲ್ಲಿ  ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಒಂದು ಪ್ರಾದೇಶಿಕ ಕಚೇರಿ ಮತ್ತು ಆರು ಉಪ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ನಗದು ಪ್ರಯೋಜನಗಳನ್ನು 48 ಶಾಖಾ ಕಚೇರಿಗಳು ಮತ್ತು 6 ಡಿಸಿಬಿಒಗಳ ಮೂಲಕ ನೀಡಲಾಗುತ್ತದೆ. ಪ್ರಾಥಮಿಕ ಆರೈಕೆಯನ್ನು ಡಿಸಿಬಿಒಗಳು ಮತ್ತು ಉದ್ಯೋಗದಾತರು ನಡೆಸುವ ಔಷಧಾಲಯಗಳೊಂದಿಗೆ 125 ಇಎಸ್ಐಎಸ್ ಔಷಧಾಲಯಗಳ ಮೂಲಕ ನೀಡಲಾಗುತ್ತದೆ. ದ್ವಿತೀಯ ಹಂತದ ಆರೈಕೆ ಸೇವೆಗಳನ್ನು ರಾಜಾಜಿನಗರ, ಇಂದಿರಾನಗರ ಮತ್ತು ಗುಲ್ಬರ್ಗದಲ್ಲಿರುವ ಒಟ್ಟು 03 ಇಎಸ್ಐಸಿ ಆಸ್ಪತ್ರೆಗಳು ಮತ್ತು ಏಳು ಸರ್ಕಾರಿ ಸ್ವಾಮ್ಯದ ಇಎಸ್ಐಎಸ್ ಆಸ್ಪತ್ರೆಗಳ ಮೂಲಕ ತಲುಪಿಸಲಾಗುತ್ತದೆ. ದ್ವಿತೀಯ ಹಂತದ ಆರೈಕೆಗಾಗಿ 143 ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಾಗಿ 123 ಆಸ್ಪತ್ರೆಗಳೊಂದಿಗೆ ನೋಂದಾಯಿಸುವ ಮೂಲಕ ಇವುಗಳನ್ನು ಮತ್ತಷ್ಟು ಬೆಂಬಲಿಸಲಾಗಿದೆ. ಈ 03 ಇಎಸ್ಐಸಿ ಆಸ್ಪತ್ರೆಗಳ ಪೈಕಿ, ಬೆಂಗಳೂರಿನ ರಾಜಾಜಿನಗರದಲ್ಲಿರುವ ಆಸ್ಪತ್ರೆಯು ವೈದ್ಯಕೀಯ ಕಾಲೇಜು ಮತ್ತು ಸ್ನಾತಕೋತ್ತರ (ಪಿಜಿ) ಸಂಸ್ಥೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಗುಲ್ಬರ್ಗದ ಇಎಸ್ಐಸಿ ಆಸ್ಪತ್ರೆಯು ವೈದ್ಯಕೀಯ ಕಾಲೇಜು ಮತ್ತು ದಂತ ವೈದ್ಯಕೀಯ ಕಾಲೇಜಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಇಂದಿರಾನಗರದ ಇಎಸ್ಐಸಿ ಆಸ್ಪತ್ರೆಯು ನರ್ಸಿಂಗ್ ಕಾಲೇಜಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಗಳು ವಾರ್ಷಿಕವಾಗಿ 136 ಎಂಬಿಬಿಎಸ್ ಸೀಟುಗಳು, 28 ಡೆಂಟಲ್ ಸೀಟುಗಳು, 60 ನರ್ಸಿಂಗ್ ಸೀಟುಗಳು ಮತ್ತು 96 ಪ್ಯಾರಾಮೆಡಿಕಲ್ ಸೀಟುಗಳು ಸೇರಿದಂತೆ ವಿಮೆದಾರರ ಮಕ್ಕಳಿಗೆ ಮೀಸಲು ಸೀಟುಗಳನ್ನು ನೀಡುತ್ತವೆ.

 

*****


(ಪ್ರಕಟಣೆ ಐ.ಡಿ.: 2257318) ವಿಸಿಟರ್ ಕೌಂಟರ್ : 33
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati