ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ 2026ರ ಏಪ್ರಿಲ್ 24-26 ರವರೆಗೆ ಚಂಡೀಗಢದಲ್ಲಿ “ಅಂತ್ಯೋದಯ ಕ ಸಂಕಲ್ಪ, ಅಮೃತ ಕಾಲ್ ಕ ಪ್ರತಿಬಿಂಬ – ವಿಕಸಿತ ಭಾರತ್ ಕೆ ಸಂಕಲ್ಪ್ ಕೇ ಸಾಥ್‌’’ ವಿಷಯದ ಕುರಿತ ರಾಷ್ಟ್ರೀಯ ಚಿಂತನ ಶಿಬಿರ ಆಯೋಜನೆ


ಕೇಂದ್ರ ಮತ್ತು ರಾಜ್ಯಗಳ ನಡುವೆ  3 ದಿನಗಳ ಶಿಬಿರದಲ್ಲಿ ಸಾಮಾಜಿಕ ನ್ಯಾಯ ವಿತರಣೆ ಬಲವರ್ಧನೆ ಕುರಿತು ಚರ್ಚೆ

ಕೇಂದ್ರ ಸಚಿವರಾದ ಡಾ. ವೀರೇಂದ್ರ ಕುಮಾರ್ ಅಧ್ಯಕ್ಷತೆಯ ಚಿಂತನ ಶಿಬಿರದಲ್ಲಿ ರಾಜ್ಯಗಳ ಸಚಿವರ ಉಪಸ್ಥಿತಿ

ಶಿಬಿರದಲ್ಲಿ ಪ್ರಮುಖವಾಗಿ ಸಮಾವೇಶ್ ಪೋರ್ಟಲ್, ಎನ್ ಎಂಬಿಎ 2.0, ಸೇತು ಮತ್ತು ಸ್ಮೈಲ್ ಅಪ್ಲಿಕೇಶನ್‌  ಬಿಡುಗಡೆ

ಪ್ರಕಟಣಾ ದಿನಾಂಕ: 23 APR 2026 2:44PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2026ರ ಏಪ್ರಿಲ್ 24 ರಿಂದ 26 ರವರೆಗೆ ಚಂಡೀಗಢದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ  ”ಅಂತ್ಯೋದಯ ಕ ಸಂಕಲ್ಪ, ಅಮೃತ್ ಕಾಲ್ ಕ ಪ್ರತಿಬಿಂಬ್ – ವಿಕಸಿತ ಭಾರತ @2047" ಎಂಬ ವಿಷಯದ ಕುರಿತು ಮೂರು ದಿನಗಳ ಚಿಂತನ ಶಿಬಿರವನ್ನು ಆಯೋಜಿಸಲಿದೆ. ಅಮೃತ ಕಾಲ ಮತ್ತು ವಿಕಸಿತ ಭಾರತದ ದೂರದೃಷ್ಟಿಗೆ ಅನುಗುಣವಾಗಿ ಸಮಗ್ರ ಸಬಲೀಕರಣಕ್ಕೆ ಸಚಿವಾಲಯದ ಬದ್ಧತೆಯನ್ನು ಈ ವಿಷಯವು ಸಾಕಾರಗೊಳಿಸುತ್ತದೆ.

ಶಿಬಿರದಲ್ಲಿ ಸಾಮಾಜಿಕ ನ್ಯಾಯ ಉಪಕ್ರಮಗಳ ವಿತರಣೆಯನ್ನು ಬಲವರ್ಧನೆಗೊಳಿಸುವುದು, ಪ್ರಮುಖ ಯೋಜನೆಗಳ ಕೊನೆಯ ಹಂತದ ಅನುಷ್ಠಾನವನ್ನು ಸುಧಾರಿಸುವುದು ಮತ್ತು ಸಮಾಜದ  ಅಂಚಿನಲ್ಲಿರುವ ಸಮುದಾಯಗಳ ಸಮಗ್ರ ಮತ್ತು ಸುಸ್ಥಿರ ಸಬಲೀಕರಣಕ್ಕಾಗಿ ಕಾರ್ಯಸಾಧ್ಯವಾದ ನೀಲನಕ್ಷೆಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ವಹಿಸಲಿದ್ದು, ರಾಜ್ಯ ಸಚಿವರಾದ ಶ್ರೀ ಬಿ.ಎಲ್. ವರ್ಮಾ ಮತ್ತು ಶ್ರೀ ರಾಮದಾಸ್ ಅಠಾವಳೆ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಚಿವರು ಮತ್ತು ಅಧಿಕಾರಿಗಳು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮತ್ತು ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆಯ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮವು ಸಚಿವಾಲಯದ ಪ್ರಮುಖ ಯೋಜನೆಗಳನ್ನು ಬಿಂಬಿಸುವ ಪ್ರದರ್ಶನದೊಂದಿಗೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಸಮಾವೇಶ್‌ ಪೋರ್ಟಲ್, ಎನ್ ಎಂಬಿಎ 2.0 ಅಪ್ಲಿಕೇಶನ್, ಸೇತು ಅಪ್ಲಿಕೇಶನ್ ಮತ್ತು ಸ್ಮೈಲ್  ಅಪ್ಲಿಕೇಶನ್ ಸೇರಿದಂತೆ ಹಲವಾರು ಪ್ರಮುಖ ಡಿಜಿಟಲ್ ಮತ್ತು ನೀತಿ ಉಪಕ್ರಮಗಳಿಗೆ ಚಾಲನೆ ನೀಡಲಾಗುವುದು. ಬುದ್ಧಿಮಾಂದ್ಯತೆ ಆರೈಕೆ ಮನೆಗಳಿಗೆ ಕನಿಷ್ಠ ಮಾನದಂಡಗಳು ಮತ್ತು ಭಿಕ್ಷುಕ ಮನೆಗಳಿಗೆ ಮಾದರಿ ಮಾರ್ಗಸೂಚಿಗಳ ಕುರಿತು ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ, ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ ಮತ್ತು ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ನಡುವಿನ ತಿಳುವಳಿಕೆ ಒಪ್ಪಂದ (ಎಂಒಯು) ಗಳಿಗೆ ಸಹಿ ಹಾಕಲಾಗುವುದು.

ಮೂರು ದಿನಗಳಲ್ಲಿ ಚಿಂತನ ಶಿಬಿರವು ರಚನಾತ್ಮಕ ವಿಷಯಾಧಾರಿತ ಚರ್ಚೆಗಳು ಮತ್ತು ಬ್ರೇಕ್‌ಔಟ್ ಗೋಷ್ಠಿಗಳನ್ನು ಒಳಗೊಂಡಿರುತ್ತದೆ. ಬ್ರೇಕ್‌ಔಟ್ ಗುಂಪು ಗೋಷ್ಠಿಗಳು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತವೆ. ಏಪ್ರಿಲ್ 25 ರಂದು ಚರ್ಚೆಗಳು ವಿದ್ಯಾರ್ಥಿವೇತನ ವಿತರಣೆ ಮತ್ತು ಶೈಕ್ಷಣಿಕ ಪ್ರವೇಶ, ನಶ ಮುಕ್ತ ಭಾರತ ಪೂರಕ ವ್ಯವಸ್ಥೆ, ನೈರ್ಮಲ್ಯ ಕೆಲಸದಲ್ಲಿನ ಘನತೆ ಮತ್ತು ಮಿಷನ್ ಶೂನ್ಯ ನೈರ್ಮಲ್ಯ-ಸಂಬಂಧಿತ ಸಾವುಗಳು, ಹಿರಿಯ ನಾಗರಿಕರ ಆರೈಕೆ ಮತ್ತು ವಿಶೇಷಚೇತನ ಮಕ್ಕಳಿಗೆ ಆರಂಭಿಕ ಹಸ್ತಕ್ಷೇಪವನ್ನು ಒಳಗೊಂಡಿರುತ್ತವೆ. ಏಪ್ರಿಲ್ 26 ರಂದು ಗೋಷ್ಠಿಗಳಲ್ಲಿ ಪ್ರದೇಶ ಆಧಾರಿತ ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಸೇರ್ಪಡೆ ಮತ್ತು ಗುರುತಿಸುವಿಕೆ, ಸಾಲ ಮತ್ತು ಆರ್ಥಿಕ ಸಬಲೀಕರಣದ ಲಭ್ಯತೆ, ಮತ್ತು ವಿಶೇಷಚೇತನ ವ್ಯಕ್ತಿಗಳಿಗೆ ಪ್ರಮಾಣೀಕರಣದ ಕುರಿತು ಚರ್ಚೆ ನಡೆಯಲಿದೆ.

ಪ್ರತಿಯೊಂದು ಗುಂಪು ಅನುಷ್ಠಾನದ ಪ್ರಸ್ತುತ ಸ್ಥಿತಿಯನ್ನು ನಿರ್ಣಯಿಸುತ್ತದೆ, ಅಂತರವನ್ನು ಗುರುತಿಸುತ್ತದೆ ಮತ್ತು ಉತ್ತಮ ಪದ್ಧತಿಗಳು ಮತ್ತು ನವೀನ ಪರಿಹಾರಗಳನ್ನು ಹಂಚಿಕೊಳ್ಳುತ್ತದೆ. ಗುಂಪುಗಳು ಅಲ್ಪ, ಮಧ್ಯಮ ಮತ್ತು ದೀರ್ಘಾವಧಿಯ ಶಿಫಾರಸುಗಳನ್ನು ನಿರ್ದಿಷ್ಟ ಸಮಯದೊಂದಿಗೆ ಪ್ರಸ್ತುತಪಡಿಸುತ್ತವೆ. ಚರ್ಚೆಗಳು ರಚನಾತ್ಮಕ, ಸಾಕ್ಷ್ಯಾ ಆಧಾರಿತ ಮತ್ತು ಫಲಿತಾಂಶ-ಆಧಾರಿತವಾಗಿ ಉಳಿಯುವುದನ್ನು ಖಾತ್ರಿಪಡಿಸಿಕೊಳ್ಳಲು ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ ಒ ಪಿ)ಯನ್ನು ರೂಪಿಸಲಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯಶಸ್ವಿ ಮಾದರಿಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸಮನ್ವಯವನ್ನು ಬಲಪಡಿಸಲು ಚಿಂತನ ಶಿಬಿರವು ಸಹಯೋಗದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಫಲಿತಾಂಶಗಳು ಸಾಮಾಜಿಕ ನ್ಯಾಯ ಕಾರ್ಯಕ್ರಮಗಳಲ್ಲಿ ಸಂಯೋಜನೆ, ಡಿಜಿಟಲ್ ನಾವೀನ್ಯತೆ ಮತ್ತು ಸುಧಾರಿತ ಆಡಳಿತದ ಮೇಲೆ ಕೇಂದ್ರೀಕರಿಸಿದ ಪ್ರಾಯೋಗಿಕ ಸುಧಾರಣಾ ಕಾರ್ಯಸೂಚಿಗೆ ಕೊಡುಗೆ ನೀಡುವ ನಿರೀಕ್ಷೆಯಿದೆ.

ಹೆಚ್ಚಿನ ಸಮನ್ವಯ, ಸಮುದಾಯ ಭಾಗವಹಿಸುವಿಕೆ ಮತ್ತು ತಂತ್ರಜ್ಞಾನ ಆಧರಿಸಿದ ವಿತರಣೆಯ ಮೂಲಕ ಭಾರತದ ಸಾಮಾಜಿಕ ನ್ಯಾಯ ಚೌಕಟ್ಟನ್ನು ಬಲಪಡಿಸುವ ಸ್ಪಷ್ಟ ಮಾರ್ಗಸೂಚಿಯಲ್ಲಿ ಚರ್ಚೆಗಳು ಮುಕ್ತಾಯಗೊಳ್ಳುತ್ತವೆ. ಪ್ರಮುಖ ಫಲಿತಾಂಶಗಳು ಮತ್ತು ಮುಂದಿನ ದಾರಿಯನ್ನು ಹಂಚಿಕೊಳ್ಳಲು ಮುಕ್ತಾಯದ ದಿನದಂದು ಪತ್ರಿಕಾಗೋಷ್ಠಿ ನಡೆಸಲಾಗುವುದು.

 

*****


(ಪ್ರಕಟಣೆ ಐ.ಡಿ.: 2254872) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Punjabi