ಉಪರಾಷ್ಟ್ರಪತಿಗಳ ಕಾರ್ಯಾಲಯ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಉಪರಾಷ್ಟ್ರಪತಿ ಅವರ ಭಾಷಣ
ವಿಕಸಿತ ಭಾರತವು ಸಾಮೂಹಿಕ ಪ್ರಯತ್ನದ ಅಗತ್ಯವಿರುವ ಒಂದು ಹಂಚಿಕೆಯ ರಾಷ್ಟ್ರೀಯ ಧ್ಯೇಯವಾಗಿದೆ: ಉಪರಾಷ್ಟ್ರಪತಿ
ಶೈಕ್ಷಣಿಕ ಉತ್ಕೃಷ್ಟತೆಯಲ್ಲಿ ಮಹಿಳೆಯರ ಮುನ್ನಡೆಯು ಹೆಚ್ಚುತ್ತಿರುವ ನಾರಿ ಶಕ್ತಿಯನ್ನು ಪ್ರತಿಫಲಿಸುತ್ತದೆ: ಉಪರಾಷ್ಟ್ರಪತಿ
ಯಶಸ್ಸನ್ನು ಸಮಾಜದ ಮೇಲಾಗುವ ಧನಾತ್ಮಕ ಪರಿಣಾಮದಿಂದ ಅಳೆಯಬೇಕೇ ಹೊರತು ವೈಯಕ್ತಿಕ ಲಾಭದಿಂದಲ್ಲ: ಉಪರಾಷ್ಟ್ರಪತಿ
ಆಧುನಿಕತೆಯನ್ನು ಅಳವಡಿಸಿಕೊಳ್ಳುವಾಗಲೂ ನಮ್ಮ ಪರಂಪರೆಯಲ್ಲಿ ಬೇರೂರಬೇಕು: ಉಪರಾಷ್ಟ್ರಪತಿ
ಪ್ರಕಟಣಾ ದಿನಾಂಕ:
22 APR 2026 5:17PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ಕರ್ನಾಟಕದ ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಉಪರಾಷ್ಟ್ರಪತಿಯವರು, ನೀವು ಜೀವನದ ಹೊಸ ಹಂತಕ್ಕೆ ಕಾಲಿಡುತ್ತಿರುವಾಗ ಸಮಾಜ ಮತ್ತು ರಾಷ್ಟ್ರಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಜವಾಬ್ದಾರಿಯನ್ನು ಹೊತ್ತಿದ್ದೀರಿ ಎಂದು ಅವರು ಹೇಳಿದರು.
ಭಾರತದ ಬೆಳವಣಿಗೆಯ ಪಥವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿ ಅವರು, ದೇಶವು ಇಂದು ಒಂದು ನಿರ್ಣಾಯಕ ಘಟ್ಟದಲ್ಲಿದೆ ಎಂದು ತಿಳಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಂಡಿಸಿರುವ “ವಿಕಸಿತ ಭಾರತ”ದ ದೃಷ್ಟಿಕೋನವನ್ನು ಉಲ್ಲೇಖಿಸಿದ ಅವರು, ಇದು ಪ್ರತಿಯೊಬ್ಬ ನಾಗರಿಕನೂ ತನ್ನ ಅತ್ಯುತ್ತಮವಾದುದನ್ನು ನೀಡಬೇಕಾದ ಒಂದು ಹಂಚಿಕೆಯ ರಾಷ್ಟ್ರ ನಿರ್ಮಾಣದ ಧ್ಯೇಯವಾಗಿದೆ ಎಂದರು. ಯುವಜನರು ನವೀನ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು, ಪ್ರಾಮಾಣಿಕತೆಯಿಂದ ಮುನ್ನಡೆಯಬೇಕು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಆತ್ಮನಿರ್ಭರ ಭಾರತದ ಪ್ರಾಮುಖ್ಯತೆ ಬಗ್ಗೆ ಹೇಳಿದ ಉಪರಾಷ್ಟ್ರಪತಿ ಅವರು, ಸ್ವಾವಲಂಬನೆಯು ದೇಶದ ಆಂತರಿಕ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಉಳಿಯುವ ಜೊತೆಗೆ ಸ್ಥಳೀಯ ಉದ್ಯಮಗಳನ್ನು ಬೆಂಬಲಿಸುವುದರಲ್ಲಿ ಬೇರೂರಿದೆ ಎಂದು ತಿಳಿಸಿದರು. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಯುವ ಪದವೀಧರರು ನಿರಂತರವಾಗಿ ತಮ್ಮ ಕೌಶಲ್ಯಗಳನ್ನು ನವೀಕರಿಸಿಕೊಳ್ಳಬೇಕು ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ಅವಕಾಶಗಳಿಗೆ ತಕ್ಕಂತೆ ತಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ಉಪರಾಷ್ಟ್ರಪತಿಯವರು, ಶೈಕ್ಷಣಿಕ ಉತ್ಕೃಷ್ಟತೆಯಲ್ಲಿ ಮಹಿಳೆಯರ ಬೆಳೆಯುತ್ತಿರುವ ಪಾತ್ರವನ್ನು ಉಲ್ಲೇಖಿಸಿದರು. ದೇಶಾದ್ಯಂತ ನಡೆಯುವ ಘಟಿಕೋತ್ಸವಗಳಲ್ಲಿ ಪದಕ ವಿಜೇತರಲ್ಲಿ ಮಹಿಳೆಯರೇ ಸತತವಾಗಿ ಬಹುಸಂಖ್ಯಾತರಾಗಿರುವುದನ್ನು ತಾವು ಗಮನಿಸಿರುವುದಾಗಿ ತಿಳಿಸಿದ ಅವರು, ಈ ವರ್ಷ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ವಿಜೇತರಲ್ಲಿ ಶೇಕಡಾ 80 ಕ್ಕೂ ಹೆಚ್ಚು ಮಂದಿ ಮಹಿಳೆಯರಾಗಿರುವುದು ತಮಗೆ ತೃಪ್ತಿ ತಂದಿದೆ ಎಂದು ಹೇಳಿದರು. ಇದನ್ನು ಅವರು ಹೆಚ್ಚುತ್ತಿರುವ "ನಾರಿ ಶಕ್ತಿ"ಯ ಪ್ರತಿಬಿಂಬ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಮಾನತೆ ಹಾಗೂ ನಾಯಕತ್ವದ ಕಡೆಗೆ ಸಾಗುತ್ತಿರುವ ವಿಶಾಲ ಸಾಮಾಜಿಕ ಪರಿವರ್ತನೆ ಎಂದು ಬಣ್ಣಿಸಿದರು.
ವಿಶ್ವವು ಅಪಾರ ಅವಕಾಶಗಳನ್ನು ನೀಡುತ್ತಿರುವಂತೆಯೇ, ಹವಾಮಾನ ಬದಲಾವಣೆ, ತಾಂತ್ರಿಕ ಅಡಚಣೆಗಳು ಮತ್ತು ಸಾಮಾಜಿಕ ಅಸಮಾನತೆಗಳಂತಹ ಸವಾಲುಗಳನ್ನೂ ಎದುರಿಸುತ್ತಿದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು. ಈ ಸವಾಲುಗಳನ್ನು ಧೈರ್ಯ ಮತ್ತು ಸೃಜನಶೀಲತೆಯಿಂದ ಎದುರಿಸುವಂತೆ ಹಾಗೂ ಯಶಸ್ಸನ್ನು ಕೇವಲ ವೈಯಕ್ತಿಕ ಸಾಧನೆಗಳಿಂದ ಅಳೆಯದೆ, ಸಮಾಜದಲ್ಲಿ ನೀವು ಉಂಟುಮಾಡುವ ಧನಾತ್ಮಕ ಪರಿಣಾಮದಿಂದ ಅಳೆಯುವಂತೆ ಅವರು ವಿದ್ಯಾರ್ಥಿಗಳನ್ನು ಆಗ್ರಹಿಸಿದರು.
ವಿದ್ಯಾರ್ಥಿಗಳು ಆಧುನಿಕತೆ ಮತ್ತು ಜಾಗತಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವಾಗಲೂ ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯಲ್ಲಿ ಬೇರೂರಿರಬೇಕು ಎಂದು ಅವರು ಕರೆ ನೀಡಿದರು.
ಯುವ ಮನಸ್ಸುಗಳನ್ನು ರೂಪಿಸುವಲ್ಲಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವಲ್ಲಿ ಪೋಷಕರು, ಅಧ್ಯಾಪಕರು ಮತ್ತು ಆಡಳಿತ ಮಂಡಳಿಯ ಪಾತ್ರವನ್ನು ಶ್ಲಾಘಿಸಿದ ಉಪರಾಷ್ಟ್ರಪತಿ ಅವರು ಅವರನ್ನು ಅಭಿನಂದಿಸಿದರು. ಪದವೀಧರರು ಸವಾಲುಗಳ ಎದುರು ಸ್ಥಿತಪ್ರಜ್ಞರಾಗಿರಬೇಕು, ವೈಫಲ್ಯಗಳಿಂದ ಕಲಿಯಬೇಕು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಅವರು ಒತ್ತಾಯಿಸಿದರು. ದೊಡ್ಡ ಕನಸುಗಳನ್ನು ಕಾಣಲು, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಮತ್ತು ವಿಕಸಿತ ಭಾರತ ಹಾಗೂ ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಮುಕ್ತ ಮನಸ್ಸಿನಿಂದ ಕೊಡುಗೆ ನೀಡಲು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸತ್ಯನಾರಾಯಣ ಅವರೊಂದಿಗೆ ಅಧ್ಯಾಪಕರು, ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
******
(ಪ್ರಕಟಣೆ ಐ.ಡಿ.: 2254617)
ವಿಸಿಟರ್ ಕೌಂಟರ್ : 16