ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಪತ್ರಿಕಾ ಪ್ರಕಟಣೆ: ಕೌಟುಂಬಿಕ ಸಾಮಾಜಿಕ ಬಳಕೆ: ಆರೋಗ್ಯ ಜನವರಿ – ಡಿಸೆಂಬರ್, 2025
ಪ್ರಕಟಣಾ ದಿನಾಂಕ:
20 APR 2026 4:00PM by PIB Bengaluru
- ಭಾರತದ ಆರೋಗ್ಯ ರಕ್ಷಣಾ ವ್ಯಾಪ್ತಿಯು ಕ್ಷಿಪ್ರವಾಗಿ ವಿಸ್ತರಿಸುತ್ತಿದೆ; ವಿಮೆಯು ಈಗ ಸುಮಾರು ಅರ್ಧದಷ್ಟು ಜನಸಂಖ್ಯೆಯನ್ನು ತಲುಪಿದೆ
- ಸಾಂಸ್ಥಿಕ ಹೆರಿಗೆಗಳು ಶೇ. 96 ರಷ್ಟನ್ನು ತಲುಪಿವೆ, ಇದು ತಾಯ್ತನದ ಆರೈಕೆಯಲ್ಲಿ ಪ್ರಮುಖ ಮೈಲಿಗಲ್ಲು
- ಸಾರ್ವಜನಿಕ ಆರೋಗ್ಯ ರಕ್ಷಣೆ ಬಲಗೊಳ್ಳುತ್ತಿದೆ: ದೇಶಾದ್ಯಂತ ಬಹುಪಾಲು ಜನರು ಉಚಿತ ಅಥವಾ ಕಡಿಮೆ ವೆಚ್ಚದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ
- ರೋಗಗಳ ವರದಿ ಹೆಚ್ಚಾಗುತ್ತಿದ್ದಂತೆ ಆರಂಭಿಕ ಪತ್ತೆಹಚ್ಚುವಿಕೆ ಸುಧಾರಿಸಿದೆ, ಇದೇ ವೇಳೆ ಸಾಂಕ್ರಾಮಿಕ ರೋಗಗಳು ಕ್ಷೀಣಿಸುತ್ತಿವೆ
- ಭಾರತದಲ್ಲಿ ಬದಲಾಗುತ್ತಿರುವ ಕಾಯಿಲೆಗಳ ಸ್ವರೂಪ: ಸೋಂಕುಗಳ ಇಳಿಕೆ, 30 ವರ್ಷದ ನಂತರದ ಜೀವನಶೈಲಿ ಕಾಯಿಲೆಗಳ ಮೇಲೆ ಹೆಚ್ಚಿನ ಗಮನ.
|
ಮುಖ್ಯಾಂಶಗಳು:
- ಅನಾರೋಗ್ಯ ಮತ್ತು ಆಸ್ಪತ್ರೆಗೆ ದಾಖಲಾತಿ:
- 2025ರಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ, ದೀರ್ಘಕಾಲದ ಕಾಯಿಲೆಗಳು ಸೇರಿದಂತೆ ಸುಮಾರು 13.1% ಜನರು ತಮಗೆ ಯಾವುದಾದರೂ ಕಾಯಿಲೆ ಇದೆ ಎಂದು ವರದಿ ಮಾಡಿದ್ದಾರೆ. ಹಿಂದಿನ NSS ಆರೋಗ್ಯ ಸಮೀಕ್ಷೆಯಲ್ಲಿ (2017-18), ಇದೇ 15 ದಿನಗಳ ಅವಧಿಯಲ್ಲಿ 7.5% ಜನರು ಅನಾರೋಗ್ಯದ ಬಗ್ಗೆ ವರದಿ ಮಾಡಿದ್ದರು.
- ವೃದ್ಧರಲ್ಲಿ (60 ವರ್ಷ ಅಥವಾ ಅದಕ್ಕಿಂತ ಹೆಚ್ಚು) ಈ ವರದಿಯ ಪ್ರಮಾಣ ಹೆಚ್ಚಿತ್ತು.
- ಕಳೆದ 365 ದಿನಗಳ ಉಲ್ಲೇಖಿತ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾದವರ ಪ್ರಮಾಣವು ಸುಮಾರು 2.9% ಆಗಿತ್ತು.
- 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ಅತ್ಯಧಿಕವಾಗಿತ್ತು (8.1%). ಯುವ ಜನಸಂಖ್ಯೆಯಲ್ಲಿ ಮಕ್ಕಳಲ್ಲಿ (0-4 ವರ್ಷಗಳು) ಅತಿ ಹೆಚ್ಚು ಆಸ್ಪತ್ರೆಗೆ ದಾಖಲಾತಿ (3.4%) ಕಂಡುಬಂದಿದೆ.
- ಹಿಂದಿನ NSS ಸಮೀಕ್ಷೆಯಲ್ಲಿ (2017-18) ಗಮನಿಸಿದ ಮಟ್ಟಗಳಿಗೆ ಹೋಲಿಸಿದರೆ 2025ರಲ್ಲಿ ಸಾಂಕ್ರಾಮಿಕ ರೋಗಗಳ ವರದಿಯು ಕಡಿಮೆಯಾಗಿದೆ, ಆದರೆ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಥೈರಾಯ್ಡ್ ಅಸ್ವಸ್ಥತೆಗಳಂತಹ ಸಾಂಕ್ರಾಮಿಕವಲ್ಲದ ರೋಗಗಳು (NCDs) ಹೆಚ್ಚಳವನ್ನು ತೋರಿಸಿವೆ.
- ಬಾಲ್ಯ ಮತ್ತು ಹದಿಹರೆಯದ ಅವಧಿಯಲ್ಲಿ ಸೋಂಕುಗಳು ಮತ್ತು ಉಸಿರಾಟದ ಕಾಯಿಲೆಗಳು ಹೆಚ್ಚಾಗಿ ವರದಿಯಾಗಿವೆ.
- ಈ ವಯೋಮಾನದವರಲ್ಲಿ ಹೆಚ್ಚಾಗಿ ಜ್ವರ ಮತ್ತು ತೀವ್ರವಾದ ಮೇಲ್ಭಾಗದ ಉಸಿರಾಟದ ಸೋಂಕುಗಳು ಸಾಮಾನ್ಯವಾಗಿದ್ದವು.
- 30 ವರ್ಷದ ನಂತರ ಹೃದಯ ಸಂಬಂಧಿ ಮತ್ತು ಅಂತಃಸ್ರಾವಕ/ಚಯಾಪಚಯ ರೋಗಗಳು ಹೆಚ್ಚಾಗಿ ವರದಿಯಾಗಿವೆ,
- ಅಧಿಕ ರಕ್ತದೊತ್ತಡ ಮತ್ತು ಮಧುಮೇಹವು ಇದಕ್ಕೆ ಪ್ರಮುಖ ಕಾರಣಗಳಾಗಿವೆ.
- ಹೆರಿಗೆ: ಬಹುತೇಕ ಎಲ್ಲೆಡೆ ಸಾಂಸ್ಥಿಕ ಹೆರಿಗೆಗಳು ನಡೆದಿರುವುದಾಗಿ ವರದಿಯಾಗಿದೆ. ಕಳೆದ 365 ದಿನಗಳ ಅವಧಿಯಲ್ಲಿ ಸುಮಾರು 96% ಹೆರಿಗೆಗಳು ಆಸ್ಪತ್ರೆಗಳಲ್ಲಿ ನಡೆದಿವೆ.
C. ಹಿಂದಿನ NSS ಸಮೀಕ್ಷೆಯಲ್ಲಿ (2017-18) ವರದಿಯಾದ ಮಟ್ಟಕ್ಕೆ ಹೋಲಿಸಿದರೆ ಆರೋಗ್ಯ ವಿಮಾ ವ್ಯಾಪ್ತಿಯು ವಿಸ್ತರಿಸಿದೆ, ಇದರಲ್ಲಿ ಸರ್ಕಾರಿ ಪ್ರಾಯೋಜಿತ ಯೋಜನೆಗಳು ಹೆಚ್ಚಿನ ನೋಂದಣಿಗಳಿಗೆ ಕಾರಣವಾಗಿವೆ.
|
A. ಪರಿಚಯ
ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI) ‘ಕೌಟುಂಬಿಕ ಸಾಮಾಜಿಕ ಬಳಕೆ’(Household Social Consumption: Health) ಎಂಬ ಶೀರ್ಷಿಕೆಯ ವರದಿಯ ಮೂಲಕ ಆರೋಗ್ಯ ಸಮೀಕ್ಷೆಯ ಸಂಶೋಧನೆಗಳನ್ನು ಬಿಡುಗಡೆ ಮಾಡಿದೆ. ರಾಷ್ಟ್ರೀಯ ಮಾದರಿ ಸಮೀಕ್ಷೆಯ (NSS) 80ನೇ ಸುತ್ತಿನ ಭಾಗವಾಗಿ ಈ ಸಮೀಕ್ಷೆಯನ್ನು ಜನವರಿ - ಡಿಸೆಂಬರ್ 2025ರ ಅವಧಿಯಲ್ಲಿ ನಡೆಸಲಾಯಿತು. ವ್ಯಾಪ್ತಿ, ಮಾದರಿ ವಿನ್ಯಾಸ, ಪರಿಕಲ್ಪನಾ ಚೌಕಟ್ಟು ಮುಂತಾದವುಗಳ ವಿಷಯದಲ್ಲಿ ಸಮೀಕ್ಷೆಯ ಸಂಕ್ಷಿಪ್ತ ಅವಲೋಕನವನ್ನು ಅಂತಿಮ ಟಿಪ್ಪಣಿಯಲ್ಲಿ ನೀಡಲಾಗಿದೆ.
‘ಕೌಟುಂಬಿಕ ಸಾಮಾಜಿಕ ಬಳಕೆ’ಕುರಿತ ಸಮೀಕ್ಷೆಯು ಪ್ರಾಯೋಗಿಕ ದತ್ತಾಂಶದ ಒಂದು ಮಹತ್ವದ ಮೂಲವಾಗಿದೆ, ಇದು ಭಾರತೀಯ ಜನಸಂಖ್ಯೆಯಲ್ಲಿನ ಅನಾರೋಗ್ಯದ ಹರಡುವಿಕೆ, ಕುಟುಂಬಗಳು ವರದಿ ಮಾಡಿದ ಕಾಯಿಲೆಗಳ ಶ್ರೇಣಿ ಮತ್ತು ಆರೋಗ್ಯ ಸೇವೆಯ ಬಳಕೆಯ ಮಾದರಿಗಳ ಕುರಿತು ಒಳನೋಟಗಳನ್ನು ಒದಗಿಸುತ್ತದೆ. ಈ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ದತ್ತಾಂಶವನ್ನು ಅಸ್ವಸ್ಥತೆ, ಆಸ್ಪತ್ರೆ ದಾಖಲಾತಿ, ಹೆರಿಗೆ ಮತ್ತು ವೈದ್ಯಕೀಯ ಹಾಗೂ ಆರೋಗ್ಯ ಸೇವೆಗಳಿಗಾಗಿ ಕುಟುಂಬಗಳು ತಮ್ಮ ಜೇಬಿನಿಂದ ಭರಿಸುವ ವೆಚ್ಚದ ಸೂಚಕಗಳನ್ನು ಸಿದ್ಧಪಡಿಸಲು ಬಳಸಲಾಗುತ್ತದೆ.
ರಾಷ್ಟ್ರೀಯ ಮಾದರಿ ಸಮೀಕ್ಷೆಯು (NSS) 1950ರ ದಶಕದಲ್ಲಿ ಅನಾರೋಗ್ಯದ ಕುರಿತಾದ ಪರಿಶೋಧನಾತ್ಮಕ ಅಧ್ಯಯನಗಳನ್ನು ಪ್ರಾರಂಭಿಸಿತು, ಇದು ಅದರ 28ನೇ ಸುತ್ತಿನಲ್ಲಿ (1973-74) ಮೊದಲ ಪೂರ್ಣ ಪ್ರಮಾಣದ ಅನಾರೋಗ್ಯ ಸಮೀಕ್ಷೆಗೆ ಕಾರಣವಾಯಿತು. ಅಂದಿನಿಂದ, ಪ್ರಸ್ತುತ ಸಮೀಕ್ಷೆಗಿಂತ (80ನೇ ಸುತ್ತು, 2025) ಮೊದಲು ಆರೋಗ್ಯದ ಕುರಿತು ಇನ್ನೂ ಆರು ಸಮೀಕ್ಷೆಗಳನ್ನು ನಡೆಸಲಾಗಿದೆ.
ಬಿ. ಪ್ರಮುಖ ಸಂಶೋಧನೆಗಳು
- ಸಮೀಕ್ಷೆಯ ದಿನಾಂಕಕ್ಕೆ ಹಿಂದಿನ 15 ದಿನಗಳಲ್ಲಿ ಸುಮಾರು 13.1% ಜನರು ತಾವು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ವರದಿ ಮಾಡಿದ್ದಾರೆ, ಇದರಲ್ಲಿ ನಗರ ಪ್ರದೇಶದವರು (14.9%) ಗ್ರಾಮೀಣ ಪ್ರದೇಶದವರಿಗಿಂತ (12.2%) ಸ್ವಲ್ಪ ಹೆಚ್ಚು ಅನಾರೋಗ್ಯವನ್ನು ವರದಿ ಮಾಡಿದ್ದಾರೆ.
- ಅನಾರೋಗ್ಯದ ಬಗ್ಗೆ ವರದಿ ಮಾಡಿದವರಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಪ್ರಮಾಣ ಅತ್ಯಧಿಕ (ಶೇ. 43.9) ಆಗಿತ್ತು. ನಂತರದ ಸ್ಥಾನಗಳಲ್ಲಿ 45–59 ವರ್ಷದವರು (ಶೇ. 22.5) ಮತ್ತು 0–4 ವರ್ಷದ ಮಕ್ಕಳು (ಶೇ. 9.9) ಇದ್ದಾರೆ.
- ಬಾಲ್ಯ ಮತ್ತು ಹದಿಹರೆಯದ ಅವಧಿಯಲ್ಲಿ ಸೋಂಕುಗಳು ಮತ್ತು ಉಸಿರಾಟದ ಕಾಯಿಲೆಗಳು ಹೆಚ್ಚಾಗಿ ವರದಿಯಾಗಿವೆ. ಯುವ ವಯಸ್ಕರಲ್ಲಿ ಮಾನಸಿಕ/ನರರೋಗ ಮತ್ತು ಜಠರಗರುಳಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿವೆ.
- 30 ವರ್ಷ ದಾಟಿದ ನಂತರ ಹೃದ್ರೋಗ (ಅಧಿಕ ರಕ್ತದೊತ್ತಡ) ಮತ್ತು ಅಂತಃಸ್ರಾವಕ/ಚಯಾಪಚಯ (ಮಧುಮೇಹ) ಅಂತಹ ಸಾಂಕ್ರಾಮಿಕವಲ್ಲದ ರೋಗಗಳು (NCDs) ಹೆಚ್ಚಾಗಿ ವರದಿಯಾಗಿವೆ.
- ಸಮೀಕ್ಷೆಯ ಹಿಂದಿನ 365 ದಿನಗಳಲ್ಲಿ ಪ್ರತಿ 100 ಜನರಲ್ಲಿ ಸರಾಸರಿ 2.9 ರಷ್ಟು ಬಾರಿ ಆಸ್ಪತ್ರೆ ದಾಖಲಾತಿ (ಅಂದರೆ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುವುದು) ಕಂಡುಬಂದಿದೆ. ಗ್ರಾಮೀಣ ಭಾಗದ ಜನರಿಗಿಂತ (ಶೇ. 2.7) ನಗರ ಪ್ರದೇಶದ ಜನರಲ್ಲಿ (ಶೇ. 3.2) ಆಸ್ಪತ್ರೆ ದಾಖಲಾತಿ ಪ್ರಮಾಣ ಹೆಚ್ಚಾಗಿದೆ.
- ಹೆರಿಗೆ: ಕಳೆದ 365 ದಿನಗಳಲ್ಲಿ ನಡೆದ ಒಟ್ಟು ಹೆರಿಗೆಗಳಲ್ಲಿ ಸಾಂಸ್ಥಿಕ ಹೆರಿಗೆಗಳು ಸುಮಾರು ಶೇ. 96.2ರಷ್ಟಿವೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 95.6ರಷ್ಟು ಸಾಂಸ್ಥಿಕ ಹೆರಿಗೆಗಳು ಮತ್ತು ಕೇವಲ ಶೇ. 4.4ರಷ್ಟು ಮನೆಯಲ್ಲಿ ಹೆರಿಗೆಗಳಾಗಿವೆ. ನಗರ ಪ್ರದೇಶಗಳಲ್ಲಿ ಸಾಂಸ್ಥಿಕ ಹೆರಿಗೆಗಳ ಪ್ರಮಾಣ ಶೇ. 97.8ರಷ್ಟಿದ್ದರೆ, ಮನೆಯಲ್ಲಿ ನಡೆದ ಹೆರಿಗೆ ಕೇವಲ ಶೇ. 2.2ರಷ್ಟಿದೆ.
- ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ ಸಾರ್ವತ್ರಿಕವಾಗಿ ಪ್ರಸವಪೂರ್ವ ಆರೈಕೆ (ANC - 98%) ಲಭ್ಯವಿರುವುದು ಕಂಡುಬಂದಿದೆ. ಪ್ರಸವೋತ್ತರ ಆರೈಕೆಯು (PNC) ಗ್ರಾಮೀಣದಲ್ಲಿ ಶೇ. 92 ಮತ್ತು ನಗರದಲ್ಲಿ ಶೇ. 95 ರಷ್ಟು ಉತ್ತಮವಾಗಿ ವರದಿಯಾಗಿದೆ.
- 2017–18ಕ್ಕೆ (ಗ್ರಾಮೀಣ ಶೇ. 14 ಮತ್ತು ನಗರ ಶೇ. 19) ಹೋಲಿಸಿದರೆ 2025ರಲ್ಲಿ (ಗ್ರಾಮೀಣ ಶೇ. 47 ಮತ್ತು ನಗರ ಶೇ. 44) ಭಾರತದಾದ್ಯಂತ ಆರೋಗ್ಯ ವಿಮಾ ವ್ಯಾಪ್ತಿಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ.
- ಕಳೆದ 365 ದಿನಗಳಲ್ಲಿ ಆಸ್ಪತ್ರೆಗೆ ದಾಖಲಾದ ಪ್ರತಿ ಪ್ರಕರಣಕ್ಕೆ (ಹೆರಿಗೆಯನ್ನು ಹೊರತುಪಡಿಸಿ) ಅಂದಾಜು ಸರಾಸರಿ ಸ್ವಂತ ವೈದ್ಯಕೀಯ ವೆಚ್ಚವು ಸುಮಾರು ₹34,064 (ಗ್ರಾಮೀಣದಲ್ಲಿ ₹31,484 ಮತ್ತು ನಗರದಲ್ಲಿ ₹38,688) ಆಗಿತ್ತು, ಆದರೆ ಮಧ್ಯಸ್ಥ (median) ಸ್ವಂತ ವೈದ್ಯಕೀಯ ವೆಚ್ಚವು ಸುಮಾರು ₹11,285 (ಗ್ರಾಮೀಣದಲ್ಲಿ ₹10,500 ಮತ್ತು ನಗರದಲ್ಲಿ ₹12,400) ಆಗಿತ್ತು.
- ಸರ್ಕಾರಿ ಆಸ್ಪತ್ರೆಗಳಲ್ಲಿ, ಅಖಿಲ ಭಾರತ ಮಟ್ಟದಲ್ಲಿ ಪ್ರತಿ ಆಸ್ಪತ್ರೆಗೆ ದಾಖಲಾದ ಪ್ರಕರಣಕ್ಕೆ (ಹೆರಿಗೆಯನ್ನು ಹೊರತುಪಡಿಸಿ) ಸರಾಸರಿ ವೆಚ್ಚ ₹6,631 ಆಗಿತ್ತು, ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಅರ್ಧದಷ್ಟು ಪ್ರಕರಣಗಳಿಗೆ ₹1,100 ಅಥವಾ ಅದಕ್ಕಿಂತ ಕಡಿಮೆ ಖರ್ಚಾಗಿದೆ.
- ಕಳೆದ 15 ದಿನಗಳ ಹೊರರೋಗಿ ಚಿಕಿತ್ಸೆಗಾಗಿ, ಭಾರತದಲ್ಲಿ ಸರಾಸರಿ ಸ್ವಂತ ವೈದ್ಯಕೀಯ ವೆಚ್ಚವು ಸುಮಾರು ₹861 (ಗ್ರಾಮೀಣ ₹847, ನಗರ ₹884) ಆಗಿತ್ತು, ಆದರೆ ಮಧ್ಯಸ್ಥ ವೆಚ್ಚವು ಸುಮಾರು ₹400 (ಗ್ರಾಮೀಣ ₹395, ನಗರ ₹420) ಆಗಿತ್ತು.
- ಸರ್ಕಾರಿ ಆಸ್ಪತ್ರೆಗಳಲ್ಲಿ, ಕಳೆದ 15 ದಿನಗಳ ಹೊರರೋಗಿ ಚಿಕಿತ್ಸೆಯ ಪ್ರತಿ ಹಂತಕ್ಕೆ ಸರಾಸರಿ ವೆಚ್ಚ ಸುಮಾರು ₹289 ಮತ್ತು ಮಧ್ಯಸ್ಥ ವೆಚ್ಚ ಸುಮಾರು ₹0 ಆಗಿತ್ತು, ಇದು ಸರ್ಕಾರಿ ಆಸ್ಪತ್ರೆಗಳಲ್ಲಿನ ಅರ್ಧದಷ್ಟು ಚಿಕಿತ್ಸಾ ಪ್ರಕ್ರಿಯೆಗಳು ಉಚಿತವಾಗಿ ದೊರೆತಿವೆ ಎಂಬುದನ್ನು ಸೂಚಿಸುತ್ತದೆ.
- ಕಳೆದ 365 ದಿನಗಳಲ್ಲಿ ಪ್ರತಿ ಹೆರಿಗೆಗೆ ತಗುಲಿದ ಸರಾಸರಿ ಸ್ವಂತ ವೈದ್ಯಕೀಯ ವೆಚ್ಚವು ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು ₹2,299 ಆಗಿತ್ತು, ಆದರೆ ಎಲ್ಲಾ ಆಸ್ಪತ್ರೆಗಳನ್ನು ಸೇರಿಸಿ ಸರಾಸರಿ ವೆಚ್ಚವು ಸುಮಾರು ₹14,775 ಆಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ತಗುಲಿದ ಮಧ್ಯಸ್ಥ ವೆಚ್ಚವು (₹801) ಎಲ್ಲಾ ಆಸ್ಪತ್ರೆಗಳ ಮಧ್ಯಸ್ಥ ವೆಚ್ಚಕ್ಕಿಂತ (₹2,851) ಮೂರನೇ ಒಂದು ಭಾಗಕ್ಕಿಂತ ಕಡಿಮೆಯಾಗಿದೆ.
B1. ಕಳೆದ 15 ದಿನಗಳ ಅವಧಿಯಲ್ಲಿ ಅನಾರೋಗ್ಯ
I. ಕಳೆದ 15 ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ವರದಿ ಮಾಡಿದ ವ್ಯಕ್ತಿಗಳ ಪ್ರಮಾಣ (PPRA)
ಚಿತ್ರ 1ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಆರು ವಯಸ್ಸಿನ ಗುಂಪುಗಳಿಗೆ, ಪುರುಷರು, ಮಹಿಳೆಯರು ಮತ್ತು ಒಟ್ಟು ಜನಸಂಖ್ಯೆಗೆ ಪ್ರತ್ಯೇಕವಾಗಿ, ಕಳೆದ 15 ದಿನಗಳಲ್ಲಿನ ವಯಸ್ಸಿಗೆ ಅನುಗುಣವಾದ PPRA (%) ಅನ್ನು ತೋರಿಸಲಾಗಿದೆ.

ಕೆಳಗಿನ ಚಿತ್ರ 2, ಗ್ರಾಮೀಣ ಮತ್ತು ನಗರ ವಲಯಗಳಿಗೆ ಪ್ರತ್ಯೇಕವಾಗಿ ಆರು ಪ್ರಮುಖ ವಯೋಮಾನದ ಗುಂಪುಗಳಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ ಅಸ್ವಸ್ಥತೆ ವರದಿ ಮಾಡಿದ ವ್ಯಕ್ತಿಗಳ ಪ್ರಮಾಣವನ್ನು (PPRA - %), ಪುರುಷರು, ಮಹಿಳೆಯರು ಮತ್ತು ಒಟ್ಟು ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕವಾಗಿ ತೋರಿಸುತ್ತದೆ.

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಅತಿ ಹೆಚ್ಚು ಅನಾರೋಗ್ಯ ದರ ವರದಿಯಾಗಿದೆ, ನಂತರದ ಸ್ಥಾನದಲ್ಲಿ 45-59 ವರ್ಷ ವಯಸ್ಸಿನವರು ಮತ್ತು 0-4 ವರ್ಷ ವಯಸ್ಸಿನ ಮಕ್ಕಳು ಇದ್ದಾರೆ.
II. ಕಳೆದ 15 ದಿನಗಳಲ್ಲಿ ಅನುಭವಿಸಿದ ಕಾಯಿಲೆಗಳ ಸ್ವರೂಪ
ಕೆಳಗಿನ ಚಿತ್ರ 3 ಕಳೆದ 15 ದಿನಗಳಲ್ಲಿ ಭಾರತೀಯ ಜನಸಂಖ್ಯೆಯು ವರದಿ ಮಾಡಿದ ಪ್ರಮುಖ ಕಾಯಿಲೆಗಳ ಶೇಕಡಾವಾರು ಹಂಚಿಕೆಯನ್ನು ವಿವಿಧ ವಯೋಮಾನದವರಲ್ಲಿ ವಿವರಿಸುತ್ತದೆ.

III. ಹೊರರೋಗಿ ಚಿಕಿತ್ಸೆ: ಕಳೆದ 15 ದಿನಗಳ ಅವಧಿಯಲ್ಲಿ ಅನುಭವಿಸಿದ ಕಾಯಿಲೆಗಳಿಗೆ, ಆರೋಗ್ಯ ಸೇವಾ ಪೂರೈಕೆದಾರರ ಪ್ರಕಾರ ಚಿಕಿತ್ಸೆ.
|
ನಗರ ನಿವಾಸಿಗಳಿಗೆ (25%) ಹೋಲಿಸಿದರೆ, ಗ್ರಾಮೀಣ ನಿವಾಸಿಗಳು ಸರ್ಕಾರಿ ಆಸ್ಪತ್ರೆ ಅಥವಾ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು (35%) ಹೆಚ್ಚಾಗಿ ಬಳಸಿದ್ದಾರೆ.
|

B2. ಕಳೆದ 365 ದಿನಗಳ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾತಿ
I. ಕಳೆದ 365 ದಿನಗಳಲ್ಲಿ ವಯೋಮಾನ ಮತ್ತು ಲಿಂಗದ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಾದವರ ಪ್ರಮಾಣ (%) (ಹೆರಿಗೆಯನ್ನು ಹೊರತುಪಡಿಸಿ)

ಆಸ್ಪತ್ರೆಗೆ ದಾಖಲಾಗುವವರ ವರದಿಯು ಅತ್ಯಂತ ಚಿಕ್ಕ ಮಕ್ಕಳಲ್ಲಿ (0-4 ವರ್ಷ) ಹೆಚ್ಚಿನ ಮಟ್ಟದಲ್ಲಿ ಪ್ರಾರಂಭವಾಗುತ್ತದೆ, ಯವೌನ ಮತ್ತು ಯುವ ಪ್ರೌಢಾವಸ್ಥೆಯಲ್ಲಿ ಕಡಿಮೆಯಾಗಿರುತ್ತದೆ, ನಂತರ ವಯಸ್ಸಾದಂತೆ ಮತ್ತೆ ಹೆಚ್ಚಾಗುತ್ತದೆ ಮತ್ತು ವೃದ್ಧಾಪ್ಯದಲ್ಲಿ ಉತ್ತುಂಗಕ್ಕೇರುತ್ತದೆ.
B3. ಕಳೆದ 365 ದಿನಗಳ ಅವಧಿಯಲ್ಲಿ ಹೆರಿಗೆ
ಹೆರಿಗೆಯ ಸ್ಥಳದ ಆಧಾರದ ಮೇಲೆ ಹೆರಿಗೆಗಳ ಶೇಕಡಾವಾರು ಹಂಚಿಕೆ
|
ಸಾಂಸ್ಥಿಕ ಹೆರಿಗೆಗಳು ಬಹುತೇಕ ಸಾರ್ವತ್ರಿಕವಾಗಿವೆ:
ಒಟ್ಟಾರೆಯಾಗಿ 96.2%, ಕೇವಲ 3.8% ಜನನಗಳು ಮನೆಯಲ್ಲಿ ನಡೆದಿವೆ.
|

ಬಿ4. ಆರೋಗ್ಯ ವಿಮೆಗೆ ಒಳಪಟ್ಟಿರುವ ಜನಸಂಖ್ಯೆ
ಯಾವುದೇ ಆರೋಗ್ಯ ವಿಮೆ ಅಥವಾ ಹಣಕಾಸು ಯೋಜನೆಯಡಿ ಒಳಪಟ್ಟಿರುವ ವ್ಯಕ್ತಿಗಳ ಶೇಕಡಾವಾರು ಪ್ರಮಾಣ: ಅಖಿಲ ಭಾರತ ಮಟ್ಟ
ಆರೋಗ್ಯ ವಿಮಾ ವ್ಯಾಪ್ತಿಯ ವರದಿಯು ಹೆಚ್ಚಾಗಿದೆ. 2017–18ರಲ್ಲಿ (ಹಿಂದಿನ NSS ಆರೋಗ್ಯ ಸಮೀಕ್ಷೆ), ಕೇವಲ ಶೇ. 14.1ರಷ್ಟು ಗ್ರಾಮೀಣ ಮತ್ತು ಶೇ. 19.1ರಷ್ಟು ನಗರ ಪ್ರದೇಶದ ಜನರು ವಿಮೆಗೆ ಒಳಪಟ್ಟಿದ್ದರು. 2025ರ ವೇಳೆಗೆ, ಈ ವ್ಯಾಪ್ತಿಯು ಗ್ರಾಮೀಣ ಪ್ರದೇಶಗಳಲ್ಲಿ ಶೇ. 47.4ಕ್ಕೆ ಮತ್ತು ನಗರ ಪ್ರದೇಶಗಳಲ್ಲಿ ಶೇ. 44.3ಕ್ಕೆ ಏರಿಕೆಯಾಗಿದೆ.

B5. ವೆಚ್ಚ
I. ಕಳೆದ 365 ದಿನಗಳ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾತಿಯ (ಒಳರೋಗಿ ಚಿಕಿತ್ಸೆ) ಮೇಲೆ ಸ್ವಂತ ವೈದ್ಯಕೀಯ ವೆಚ್ಚ (OOPME), ಅಖಿಲ ಭಾರತ
ಪ್ರತಿ ಆಸ್ಪತ್ರೆಗೆ ದಾಖಲಾದ ಪ್ರಕರಣಕ್ಕೆ ಸರಾಸರಿ ಸ್ವಂತ ವೈದ್ಯಕೀಯ ವೆಚ್ಚ ಹಾಗೂ ಮಧ್ಯಸ್ಥ ಸ್ವಂತ ವೈದ್ಯಕೀಯ ವೆಚ್ಚವನ್ನು ಕೆಳಗೆ ನೀಡಲಾಗಿದೆ.

| |
ಸ್ವಂತ ವೈದ್ಯಕೀಯ ವೆಚ್ಚ
|
|
|
ವೈದ್ಯಕೀಯ ಸಂಸ್ಥೆ
|
ಸರಾಸರಿ (₹)
|
ಮಧ್ಯಸ್ಥ (₹)
|
|
ಸರ್ಕಾರಿ ಆಸ್ಪತ್ರೆ/ಸಾರ್ವಜನಿಕ ಆರೋಗ್ಯ ಸೌಲಭ್ಯಗಳು
|
6,631
|
1,100
|
|
ದತ್ತಿ/ಟ್ರಸ್ಟ್/NGO ನಡೆಸುವ ಆಸ್ಪತ್ರೆ
|
39,530
|
10,000
|
|
ಖಾಸಗಿ ಆಸ್ಪತ್ರೆ (ಸರ್ಕಾರಿ ಎಂಪನೆಲ್ಡ್ ಒಳಗೊಂಡಂತೆ)
|
50,508
|
24,000
|
|
ಒಟ್ಟು
|
34,064
|
11,285
|
ಗಮನಿಸಿ: 1. ಸರ್ಕಾರಿ ಆಸ್ಪತ್ರೆಗಳು/ಸಾರ್ವಜನಿಕ ಆರೋಗ್ಯ ಸೌಲಭ್ಯಗಳು HSC/PHC/CHC, ಎಎಎಂ (AAM) ಇತ್ಯಾದಿಗಳನ್ನು ಒಳಗೊಂಡಿವೆ.
- ಸರ್ಕಾರಿ ಆರೋಗ್ಯ ಹಣಕಾಸು ಯೋಜನೆ/ವಿಮೆಯ ಅಡಿಯಲ್ಲಿ ಎಂಪನೆಲ್ (ನೋಂದಾಯಿತ) ಮಾಡಲಾದ ಖಾಸಗಿ ಆಸ್ಪತ್ರೆಗಳು, ಅಂದರೆ AB-PMJAY, CGHS/ECHS/ಇತರೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳು (ಉದಾಹರಣೆಗೆ ರೈಲ್ವೆ ಇತ್ಯಾದಿ), ರಾಜ್ಯ ಆರೋಗ್ಯ ವಿಮಾ ಯೋಜನೆಗಳು, ರಾಜ್ಯ ಸರ್ಕಾರದಿಂದ ಬೆಂಬಲಿತ ವೈದ್ಯಕೀಯ ಮರುಪಾವತಿ (ನೌಕರರಿಗೆ), ESIS/ESIC ಇತ್ಯಾದಿಗಳನ್ನು 'ಖಾಸಗಿ ಆಸ್ಪತ್ರೆ' ವರ್ಗದಲ್ಲಿ ಪರಿಗಣಿಸಲಾಗಿದೆ.
II. ಕಳೆದ 365 ದಿನಗಳ ಅವಧಿಯಲ್ಲಿ ಪ್ರತಿ ಸಾಂಸ್ಥಿಕ ಹೆರಿಗೆಗೆ ತಗುಲಿದ ಸ್ವಂತ ವೈದ್ಯಕೀಯ ವೆಚ್ಚ (OOPME), ಅಖಿಲ ಭಾರತ
ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದ ಪ್ರತಿ ಪ್ರಕರಣಕ್ಕೆ ಸರಾಸರಿ ಸ್ವಂತ ವೈದ್ಯಕೀಯ ವೆಚ್ಚ ಹಾಗೂ ಮಧ್ಯಸ್ಥ ಸ್ವಂತ ವೈದ್ಯಕೀಯ ವೆಚ್ಚವನ್ನು ಕೆಳಗೆ ನೀಡಲಾಗಿದೆ.
| |
ಸ್ವಂತ ವೈದ್ಯಕೀಯ ವೆಚ್ಚ
|
|
|
ವೈದ್ಯಕೀಯ ಸಂಸ್ಥೆ
|
ಸರಾಸರಿ (₹)
|
ಮಧ್ಯಸ್ಥ (₹)
|
|
ಸರ್ಕಾರಿ ಆಸ್ಪತ್ರೆ/ಸಾರ್ವಜನಿಕ ಆರೋಗ್ಯ ಸೌಲಭ್ಯಗಳು
|
2,299
|
801
|
|
ದತ್ತಿ/ಟ್ರಸ್ಟ್/NGO ನಡೆಸುವ ಆಸ್ಪತ್ರೆ
|
19,612
|
13,000
|
|
ಖಾಸಗಿ ಆಸ್ಪತ್ರೆ (ಸರ್ಕಾರಿ ಎಂಪನೆಲ್ಡ್ ಒಳಗೊಂಡಂತೆ)
|
37,630
|
32,000
|
|
ಒಟ್ಟು
|
14,775
|
2,851
|

ಗಮನಿಸಿ: 1 ಸರ್ಕಾರಿ ಆಸ್ಪತ್ರೆಗಳು/ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ HSC/PHC/CHC, AAM, ಇತ್ಯಾದಿಗಳು ಸೇರಿವೆ.
- ಸರ್ಕಾರಿ ಆರೋಗ್ಯ ಹಣಕಾಸು ಯೋಜನೆ/ವಿಮೆಯ ಅಡಿಯಲ್ಲಿ ಎಂಪನೆಲ್ (ನೋಂದಾಯಿತ) ಮಾಡಲಾದ ಖಾಸಗಿ ಆಸ್ಪತ್ರೆಗಳು, ಅಂದರೆ AB-PMJAY, CGHS/ECHS/ಇತರೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳು (ಉದಾಹರಣೆಗೆ ರೈಲ್ವೆ ಇತ್ಯಾದಿ), ರಾಜ್ಯ ಆರೋಗ್ಯ ವಿಮಾ ಯೋಜನೆಗಳು, ರಾಜ್ಯ ಸರ್ಕಾರದಿಂದ ಬೆಂಬಲಿತ ವೈದ್ಯಕೀಯ ಮರುಪಾವತಿ (ನೌಕರರಿಗೆ), ESIS/ESIC ಇತ್ಯಾದಿಗಳನ್ನು 'ಖಾಸಗಿ ಆಸ್ಪತ್ರೆ' ವರ್ಗದಲ್ಲಿ ಪರಿಗಣಿಸಲಾಗಿದೆ.
ಅಂತಿಮ ಟಿಪ್ಪಣಿ: 'ಕುಟುಂಬ ಸಾಮಾಜಿಕ ಬಳಕೆ: ಆರೋಗ್ಯ'ದ ಭೌಗೋಳಿಕ ವ್ಯಾಪ್ತಿ, ಮಾದರಿ ಗಾತ್ರ, ಮಾದರಿ ವಿನ್ಯಾಸ ಮತ್ತು ಪರಿಕಲ್ಪನಾ ಚೌಕಟ್ಟಿನ ಕುರಿತಾದ ಕಿರು ಪರಿಚಯ.
A. ಭೌಗೋಳಿಕ ವ್ಯಾಪ್ತಿ
ಈ ಸಮೀಕ್ಷೆಯು ಇಡೀ ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಿದೆ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಗ್ರಾಮಗಳನ್ನು ಹೊರತುಪಡಿಸಿ, ಅಲ್ಲಿಗೆ ತಲುಪುವುದು ಕಷ್ಟಕರವಾಗಿದೆ).
- ಮಾದರಿ ಗಾತ್ರ
ಆರೋಗ್ಯದ ಮೇಲಿನ ಅನುಸೂಚಿಯನ್ನು (ಅನುಸೂಚಿ 25.0) ಸಂಗ್ರಹಿಸಲು ಒಟ್ಟು 17,520 FSUಗಳನ್ನು (9,575 ಗ್ರಾಮಗಳು ಮತ್ತು 7,945 ನಗರ ಬ್ಲಾಕ್‌ಗಳು) ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆ ನಡೆಸಿದ ಒಟ್ಟು ಕುಟುಂಬಗಳ ಸಂಖ್ಯೆ 139,732 (ಗ್ರಾಮೀಣ ಪ್ರದೇಶಗಳಲ್ಲಿ 76,296 ಮತ್ತು ನಗರ ಪ್ರದೇಶಗಳಲ್ಲಿ 63,436).
- ಮಾದರಿ ವಿನ್ಯಾಸ
ಈ ಸಮೀಕ್ಷೆಯನ್ನು ಬಹು-ಹಂತದ ಸ್ತರ ವಿನ್ಯಾಸದ ಮಾದರಿ (multi-stage stratified sampling design) ಅನುಸರಿಸಿ ನಡೆಸಲಾಗಿದೆ. ಇದರಲ್ಲಿ ಮೊದಲ ಹಂತದ ಘಟಕಗಳು (FSUs) ನಗರ ಪ್ರದೇಶಗಳಲ್ಲಿ UFS (ನಗರ ಚೌಕಟ್ಟಿನ ಸಮೀಕ್ಷೆ) ಬ್ಲಾಕ್ ಗಳು ಮತ್ತು 2011ರ ಜನಗಣತಿಯ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಗಳಾಗಿವೆ (ನಗರೀಕರಣಗೊಂಡ ಮತ್ತು ಇತ್ತೀಚಿನ UFSನಲ್ಲಿ ಸೇರಿಸಲಾದ ಗ್ರಾಮಗಳನ್ನು ತೆಗೆದುಹಾಕುವ ಮೂಲಕ ನವೀಕರಿಸಲಾಗಿದೆ), ಆದರೆ ಕೇರಳದ ಗ್ರಾಮೀಣ ಪ್ರದೇಶಗಳನ್ನು ಹೊರತುಪಡಿಸಿ, ಅಲ್ಲಿ ಪಂಚಾಯತ್ ವಾರ್ಡ್ ಗಳನ್ನು FSUಗಳಾಗಿ ತೆಗೆದುಕೊಳ್ಳಲಾಗಿದೆ. ಎರಡೂ ವಲಯಗಳಿಗೆ ಅಂತಿಮ ಹಂತದ ಘಟಕಗಳು (USUs) ಕುಟುಂಬಗಳಾಗಿವೆ. FSU ಮತ್ತು USU ಎರಡನ್ನೂ 'ಸಿಂಪಲ್ ರಾಂಡಮ್ ಸ್ಯಾಂಪ್ಲಿಂಗ್ ವಿಥೌಟ್ ರಿಪ್ಲೇಸ್‌ಮೆಂಟ್' (SRSWOR) ಮೂಲಕ ಆಯ್ಕೆ ಮಾಡಲಾಗಿದೆ. ದೊಡ್ಡ FSUಗಳ ಸಂದರ್ಭದಲ್ಲಿ, ದೊಡ್ಡ ಗ್ರಾಮಗಳನ್ನು/UFS ಬ್ಲಾಕ್‌ಗಳನ್ನು ಕಲ್ಪನಾತ್ಮಕವಾಗಿ ಹೆಚ್ಚು ಕಡಿಮೆ ಸಮಾನ ಗಾತ್ರದ ಸಣ್ಣ ಘಟಕಗಳಾಗಿ ವಿಂಗಡಿಸಲಾಗಿದೆ, ಇವುಗಳನ್ನು ಉಪ-ಘಟಕಗಳು (sub-units) ಎಂದು ಕರೆಯಲಾಗುತ್ತದೆ.
- ಪ್ರಮುಖ ಸೂಚಕಗಳ ಪರಿಕಲ್ಪನಾ ಚೌಕಟ್ಟು
‘ಕೌಟುಂಬಿಕ ಸಾಮಾಜಿಕ ಬಳಕೆ’ಕುರಿತ ಸಮೀಕ್ಷೆಯು ಅನಾರೋಗ್ಯದ ಹರಡುವಿಕೆ , ಆಸ್ಪತ್ರೆಗೆ ದಾಖಲಾತಿಯ ದರ, ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳ ಬಳಕೆ, ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳಿಗಾಗಿ ಕುಟುಂಬದ ಸ್ವಂತ ಖರ್ಚು ಮುಂತಾದ ಅನಾರೋಗ್ಯ ಮತ್ತು ಆಸ್ಪತ್ರೆಗೆ ದಾಖಲಾತಿಯ ಸೂಚಕಗಳ ಅಂದಾಜುಗಳನ್ನು ನೀಡುತ್ತದೆ. ಸಮೀಕ್ಷೆಯಿಂದ ಪಡೆದ ಪ್ರಮುಖ ಸೂಚಕಗಳನ್ನು ಕೆಳಗೆ ವ್ಯಾಖ್ಯಾನಿಸಲಾಗಿದೆ:
(ಎ) 15 ದಿನಗಳ ಅವಧಿಯಲ್ಲಿ ಅಸ್ವಸ್ಥತೆ ವರದಿ ಮಾಡಿದ ವ್ಯಕ್ತಿಗಳ ಪ್ರಮಾಣ (PPRA)
'ಅಸ್ವಸ್ಥತೆ ವರದಿ ಮಾಡಿದ ವ್ಯಕ್ತಿಗಳ ಪ್ರಮಾಣ' (PPRA) ಎಂದರೆ, ಕಳೆದ 15 ದಿನಗಳ ಅವಧಿಯಲ್ಲಿ ಅನಾರೋಗ್ಯವನ್ನು ವರದಿ ಮಾಡಿದ ಜನಸಂಖ್ಯೆಯಲ್ಲಿನ ಅಂದಾಜು ವ್ಯಕ್ತಿಗಳ ಸಂಖ್ಯೆಯನ್ನು ಒಟ್ಟು ಅಂದಾಜು ಜನಸಂಖ್ಯೆಯ ಅನುಪಾತವಾಗಿ ವ್ಯಾಖ್ಯಾನಿಸಲಾಗಿದೆ. ಈ ಅಂಕಿಅಂಶವನ್ನು ಶೇಕಡಾವಾರು ಪ್ರಮಾಣದಲ್ಲಿ ವ್ಯಕ್ತಪಡಿಸಲಾಗುತ್ತದೆ.
PPRA (%) = 100 X ಜನಸಂಖ್ಯೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಲಾದ ಒಟ್ಟು ವ್ಯಕ್ತಿಗಳ ಸಂಖ್ಯೆ / ಒಟ್ಟು ಜನಸಂಖ್ಯೆ

(b) ಆಸ್ಪತ್ರೆಗೆ ದಾಖಲಾತಿ ಪ್ರಮಾಣ (Hospitalization rate)
ಆಸ್ಪತ್ರೆಗೆ ದಾಖಲಾತಿ ಪ್ರಮಾಣವನ್ನು ಕಳೆದ 365 ದಿನಗಳ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾದವರ (ಒಳರೋಗಿ ಚಿಕಿತ್ಸೆಗಳು) ಅಂದಾಜು ಸಂಖ್ಯೆಯನ್ನು, ಒಟ್ಟು ಅಂದಾಜು ಜನಸಂಖ್ಯೆಯ ಅನುಪಾತವಾಗಿ ವ್ಯಾಖ್ಯಾನಿಸಲಾಗಿದೆ. ಆದಾಗ್ಯೂ, ಈ ಲೆಕ್ಕಾಚಾರದಲ್ಲಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದ ಪ್ರಕರಣಗಳನ್ನು ಹೊರಗಿಡಲಾಗುತ್ತದೆ.
ಆಸ್ಪತ್ರೆಗೆ ದಾಖಲಾತಿ ಪ್ರಮಾಣ (%) = 100 X ಕಳೆದ 365 ದಿನಗಳಲ್ಲಿ ಆಸ್ಪತ್ರೆಗೆ ದಾಖಲಾದ ಒಟ್ಟು ಸಂಖ್ಯೆ / ಒಟ್ಟು ವ್ಯಕ್ತಿಗಳ ಸಂಖ್ಯೆ (ಕಳೆದ 365 ದಿನಗಳಲ್ಲಿ ಮೃತಪಟ್ಟ ಸದಸ್ಯರು ಸೇರಿದಂತೆ)

(c) ಪ್ರತಿ ಆಸ್ಪತ್ರೆ ದಾಖಲಾತಿ ಪ್ರಕರಣದ ಸರಾಸರಿ ವೈಯಕ್ತಿಕ ವೈದ್ಯಕೀಯ ವೆಚ್ಚ
ವೈಯಕ್ತಿಕ ವೈದ್ಯಕೀಯ ವೆಚ್ಚ = (ಒಟ್ಟು ವೈದ್ಯಕೀಯ ವೆಚ್ಚ) – (ಮರುಪಾವತಿಯಾದ ಮೊತ್ತ (ವಿಮಾ ಕಂಪನಿ ಅಥವಾ ಉದ್ಯೋಗದಾತರಿಂದ)
ವೈದ್ಯಕೀಯ ವೆಚ್ಚ: ವೈದ್ಯಕೀಯ ವೆಚ್ಚವು ವೈದ್ಯರ/ಸರ್ಜನ್‌ರ ಶುಲ್ಕ, ಔಷಧಿ, ರೋಗನಿರ್ಣಯ ಪರೀಕ್ಷೆಗಳು (diagnostic tests), ಬೆಡ್ ಶುಲ್ಕಗಳು ಮತ್ತು ಇತರ ವೈದ್ಯಕೀಯ ವೆಚ್ಚಗಳನ್ನು (ಸಹಾಯಕರ ಶುಲ್ಕಗಳು, ಫಿಸಿಯೋಥೆರಪಿ, ವೈಯಕ್ತಿಕ ವೈದ್ಯಕೀಯ ಉಪಕರಣಗಳು, ರಕ್ತ, ಆಮ್ಲಜನಕ ಇತ್ಯಾದಿ) ಒಳಗೊಂಡಿರುತ್ತದೆ.
ಪ್ರತಿ ಆಸ್ಪತ್ರೆ ದಾಖಲಾತಿ ಪ್ರಕರಣದ ಸರಾಸರಿ OOPME = ಒಟ್ಟು 'ವೈಯಕ್ತಿಕ' ವೈದ್ಯಕೀಯ ವೆಚ್ಚ / ಆಸ್ಪತ್ರೆ ದಾಖಲಾತಿ ಪ್ರಕರಣಗಳ ಒಟ್ಟು ಸಂಖ್ಯೆ

ಸೂಚನೆ: ಕುಟುಂಬಗಳನ್ನು (ಅಥವಾ ಕುಟುಂಬದ ಸದಸ್ಯರನ್ನು) ಅವರ ವಾಸಸ್ಥಳದ ಆಧಾರದ ಮೇಲೆ ವಲಯಗಳಾಗಿ (ಗ್ರಾಮೀಣ/ನಗರ) ವಿಂಗಡಿಸಲಾಗಿದೆಯೇ ಹೊರತು, ಅವರು ಚಿಕಿತ್ಸೆ ಪಡೆದ ಸ್ಥಳದ ಆಧಾರದ ಮೇಲಲ್ಲ.
ಪಿಡಿಎಫ್ ನೋಡಲು ಇಲ್ಲಿ ಕ್ಲಿಕ್ ಮಾಡಿ
******
(ಪ್ರಕಟಣೆ ಐ.ಡಿ.: 2253913)
ವಿಸಿಟರ್ ಕೌಂಟರ್ : 18