ಕೃಷಿ ಸಚಿವಾಲಯ
ನಾಲ್ಕು ಜಿಲ್ಲೆಗಳಿಗೆ ಕೃಷಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್; ಸಮಗ್ರ ಕೃಷಿ ಮಾದರಿಯನ್ನು ವೀಕ್ಷಿಸಿ ಬಳಿಕ ಸುಧಾರಿತ/ಆಧುನಿಕ ಕೃಷಿ ಉತ್ಸವ/ಮೇಳದಲ್ಲಿ ರೈತರೊಂದಿಗೆ ಸಂವಾದ ನಡೆಸಿದರು
4 ಜಿಲ್ಲೆಗಳಲ್ಲಿ ಸುಸ್ಥಿರ ಮತ್ತು ಲಾಭದಾಯಕ ಕೃಷಿಗಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ
ಸೆಹೋರ್, ದೇವಾಸ್, ವಿದಿಶಾ ಮತ್ತು ರಾಯ್ ಸೇನ್‌ಗೆ ಕೃಷಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ
ಉತ್ಪಾದನೆಯ ಮೇಲೆ ಮಾತ್ರವಲ್ಲ, ಸರಿಯಾದ ಬೆಳೆಗಳು ಮತ್ತು ಸುಸ್ಥಿರ ಕೃಷಿಯ ಮೇಲೆ ಗಮನಹರಿಸುವುದು ಅತ್ಯಗತ್ಯ.
ರಾಸಾಯನಿಕ ಗೊಬ್ಬರಗಳಿಂದ ಹಾನಿಯಾಗುತ್ತಿದೆ - ಮಣ್ಣಿನ ಮೊಬೈಲ್ ಅಪ್ಲಿಕೇಶನ್ ಮೂಲಕ ವೈಜ್ಞಾನಿಕ ಕೃಷಿ ಅಳವಡಿಸಿಕೊಳ್ಳಿ
ಪ್ರತಿ ಬ್ಲಾಕ್‌ನಲ್ಲಿ ಬೀಜ ಗ್ರಾಮಗಳನ್ನು ಸ್ಥಾಪಿಸಲಾಗುವುದು - ಉತ್ತಮ ಬೀಜಗಳೊಂದಿಗೆ ಉತ್ಪಾದನೆಯು 20% ವರೆಗೆ ಹೆಚ್ಚಾಗಲಿದೆ
“ಮಧ್ಯಪ್ರದೇಶದಲ್ಲಿ ಶುದ್ಧ ಸಸ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು; ಕೃಷಿ ಉಪಕರಣಗಳನ್ನು ಬಾಡಿಗೆಗೆ ಕೊಡುವ ಕೇಂದ್ರಗಳು ಮತ್ತು ಯಂತ್ರ ಬ್ಯಾಂಕ್‌ಗಳನ್ನು ಸಹ ಸ್ಥಾಪಿಸಲಾಗುವುದು”: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಪ್ರಕಟಣಾ ದಿನಾಂಕ:
12 APR 2026 7:29PM by PIB Bengaluru
ಮಧ್ಯಪ್ರದೇಶದ ರಾಯ್ ಸೇನ್‌ನಲ್ಲಿ ನಡೆಯುತ್ತಿರುವ ಸುಧಾರಿತ ಕೃಷಿ ಮೇಳದ ಎರಡನೇ ದಿನದಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಸೆಹೋರ್, ರಾಯ್ ಸೇನ್, ವಿದಿಶಾ ಮತ್ತು ದೇವಾಸ್ ಎಂಬ ನಾಲ್ಕು ಜಿಲ್ಲೆಗಳಿಗೆ ಸಮಗ್ರ ಕೃಷಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವ ಮೂಲಕ ರೈತರಿಗಾಗಿ ಒಂದು ಪ್ರಮುಖ ಉಪಕ್ರಮವನ್ನು ಮಂಡಿಸಿದರು. ಈ ಸಂದರ್ಭದಲ್ಲಿ, ಅವರು ಆಧುನಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾದ ಸಮಗ್ರ ಕೃಷಿ ಮಾದರಿಯನ್ನು ಪರಿಶೀಲಿಸಿದರು. ಅದೇ ಸಮಯದಲ್ಲಿ, ಬೆಳೆ ವಿಮಾ ಯೋಜನೆ ಮತ್ತು ಸಮಗ್ರ ಕೃಷಿಯ ಕುರಿತು ಮೇಳದಲ್ಲಿ ಆಯೋಜಿಸಲಾದ ವಿಶೇಷ ಅಧಿವೇಶನಗಳಲ್ಲಿ, ಕೇಂದ್ರ ಸಚಿವರು ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದರು, ಅವರ ಸಮಸ್ಯೆಗಳನ್ನು ವಿವರವಾಗಿ ಆಲಿಸಿದರು ಮತ್ತು ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಲು ವಿಜ್ಞಾನಿಗಳು ಮತ್ತು ತಜ್ಞರೊಂದಿಗೆ ವ್ಯಾಪಕ ಚರ್ಚೆಗಳನ್ನು ನಡೆಸಿದರು.
ತಮ್ಮ ಭಾಷಣದಲ್ಲಿ, ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಬೆಳೆಗಳನ್ನು ವೈವಿಧ್ಯಗೊಳಿಸುವುದು ಮತ್ತು ಸಮಗ್ರ ಕೃಷಿ ಪದ್ಧತಿಗಳನ್ನು ಜಾರಿಗೆ ತರುವುದು ಅತ್ಯಂತ ಅವಶ್ಯಕ ಎಂದು ಅವರು ಒತ್ತಿ ಹೇಳಿದರು. ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ಮಾತ್ರ ಸೀಮಿತವಾಗದೆ ಪಶುಸಂಗೋಪನೆ, ತೋಟಗಾರಿಕೆ, ಜೇನುಸಾಕಣೆ ಮತ್ತು ಸಾವಯವ ಕೃಷಿಯಂತಹ ಚಟುವಟಿಕೆಗಳನ್ನು ತಮ್ಮ ಕೃಷಿ ವ್ಯವಸ್ಥೆಗಳಲ್ಲಿ ಸೇರಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಹಾಗೆ ಮಾಡುವುದರಿಂದ, ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಸರ್ಕಾರಿ ಯೋಜನೆಗಳ ಪ್ರಯೋಜನಗಳು ಅತ್ಯಂತ ದೂರದ ಪ್ರದೇಶಗಳಲ್ಲಿನ ಕೊನೆಯ ಹಂತದಲ್ಲಿರುವ ರೈತನಿಗೆ ತಲುಪುವಂತೆ ನೋಡಿಕೊಳ್ಳಲು ಪ್ರತಿಯೊಂದು ಹಂತದಲ್ಲೂ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ವಿದಿಶಾ, ರಾಯ್ ಸೇನ್, ಸೆಹೋರ್ ಮತ್ತು ದೇವಾಸ್ಗೆ ಕೃಷಿ ಮಾರ್ಗಸೂಚಿ
ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಸುಧಾರಿತ ಕೃಷಿ ಉತ್ಸವವು ಕೇವಲ ಔಪಚಾರಿಕ ಅಥವಾ ವಿಧ್ಯುಕ್ತ ಆಚರಣೆಯ ಕಾರ್ಯಕ್ರಮವಲ್ಲ, ಬದಲಾಗಿ ದೇಶದ ಕೃಷಿ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಸುಧಾರಣೆಗಳನ್ನು ತರುವ ಗುರಿಯನ್ನು ಹೊಂದಿರುವ ಗಂಭೀರ ಮತ್ತು ರಚನಾತ್ಮಕ ಪ್ರಯತ್ನವಾಗಿದೆ ಎಂದು ಹೇಳಿದರು. ವಿದಿಶಾ, ರಾಯ್ ಸೇನ್, ಸೆಹೋರ್ ಮತ್ತು ದೇವಾಸ್ ಜಿಲ್ಲೆಗಳಿಗೆ ಈಗ ಉತ್ತಮವಾಗಿ ವ್ಯಾಖ್ಯಾನಿಸಲಾದ ಕೃಷಿ ಅಭಿವೃದ್ಧಿ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು. ಮುಂಬರುವ ಸಮಯದಲ್ಲಿ, ಮಧ್ಯಪ್ರದೇಶದ ಎಲ್ಲಾ ಜಿಲ್ಲೆಗಳಿಗೂ ಇದೇ ರೀತಿಯ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದವರು ತಿಳಿಸಿದರು.
ಈ ಯೋಜನೆಗಳು ಕೇವಲ ಕಾಗದ ಅಥವಾ ಆಡಳಿತಾತ್ಮಕ ಕಡತಗಳಿಗೆ ಸೀಮಿತವಾಗಿರದೆ, ತಳ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತವೆ ಎಂದು ಅವರು ಸ್ಪಷ್ಟವಾಗಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಒಗ್ಗೂಡಿಸುವಿಕೆ ಮತ್ತು ಸಮನ್ವಯದ ಮೂಲಕ, ಈ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ರೈತರಿಗೆ ತಲುಪಿಸಲಾಗುತ್ತದೆ. ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸುವುದು ಮಾತ್ರವಲ್ಲದೆ ದೀರ್ಘಾವಧಿಯಲ್ಲಿ ಹೆಚ್ಚು ಸುಸ್ಥಿರವಾಗಿಸುವುದು ಇದರ ಉದ್ದೇಶವಾಗಿದೆ ಎಂದವರು ನುಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕೃಷಿಯ ದಿಕ್ಕನ್ನು ಪರಿವರ್ತಿಸಲು ಮತ್ತು ಕೃಷಿಯನ್ನು ಹೆಚ್ಚು ಲಾಭದಾಯಕ ಹಾಗು ಸ್ಥಿತಿಸ್ಥಾಪಕತ್ವವಾಗಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಮೇಳದಲ್ಲಿ, ರೈತರಿಗೆ ಪ್ರಾಯೋಗಿಕ, ಕ್ಷೇತ್ರ ಮಟ್ಟದ ಮತ್ತು ವೈಜ್ಞಾನಿಕ ಜ್ಞಾನವನ್ನು ಒದಗಿಸಲಾಗುತ್ತಿದೆ. ವಿವಿಧ ಅಧಿವೇಶನಗಳ ಮೂಲಕ, ರೈತರು ತಮ್ಮ ಬೆಳೆ ವ್ಯವಸ್ಥೆಗಳು ಮತ್ತು ಒಟ್ಟಾರೆ ಉತ್ಪಾದನಾ ಪದ್ಧತಿಗಳನ್ನು ಸುಧಾರಿಸಲು ಕೃಷಿಯ ವಿವಿಧ ಅಂಶಗಳನ್ನು ಸರಳ ಮತ್ತು ಪ್ರವೇಶಿಸಬಹುದಾದ ರೀತಿಯಲ್ಲಿ ವಿವರಿಸಲು ಪ್ರಯತ್ನಿಸಲಾಗುತ್ತಿದೆ.
ರೈತರು ತಮ್ಮ ನಿರ್ದಿಷ್ಟ ಮಣ್ಣಿನ ಪರಿಸ್ಥಿತಿ, ಸ್ಥಳೀಯ ಹವಾಮಾನ, ನೀರಿನ ಲಭ್ಯತೆ ಮತ್ತು ಪ್ರಸ್ತುತ ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ವೈಜ್ಞಾನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ಉತ್ಪಾದನೆಯನ್ನು ಹೆಚ್ಚಿಸುವತ್ತ ಮಾತ್ರ ಗಮನಹರಿಸುವ ಬದಲು, ಸರಿಯಾದ ಬೆಳೆಗಳನ್ನು ಆಯ್ಕೆ ಮಾಡಲು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಖಚಿತಪಡಿಸಿಕೊಳ್ಳಲು ಸಮಾನ ಗಮನ ನೀಡಬೇಕು ಎಂದು ಅವರು ಒತ್ತಿ ಹೇಳಿದರು.
ಕೃಷಿ ಮಾರ್ಗಸೂಚಿಯಲ್ಲಿ ನೀರಿನ ನಿರ್ವಹಣೆ, ಬೆಳೆ ವೈವಿಧ್ಯೀಕರಣ ಮತ್ತು ಮೌಲ್ಯವರ್ಧನೆಯ ಮೇಲೆ ಗಮನ
ಈ ನಾಲ್ಕು ಜಿಲ್ಲೆಗಳ ಹವಾಮಾನ ಪರಿಸ್ಥಿತಿಗಳು, ಮಣ್ಣಿನ ಗುಣಲಕ್ಷಣಗಳು ಮತ್ತು ತಾಪಮಾನ ವ್ಯತ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು, ಸಮಗ್ರ ಕೃಷಿ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಈ ಮಾರ್ಗಸೂಚಿಯ ಪ್ರಾಥಮಿಕ ಉದ್ದೇಶವೆಂದರೆ ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸುವುದು, ನೀರಿನ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸುವುದು ಮತ್ತು ಲಭ್ಯವಿರುವ ಸಂಪನ್ಮೂಲಗಳ ಉತ್ತಮ ಬಳಕೆಯ ಮೂಲಕ ಉತ್ಪಾದನೆಯನ್ನು ಹೆಚ್ಚಿಸುವುದು.
ಹವಾಮಾನ-ಸ್ಥಿತಿಸ್ಥಾಪಕತ್ವದ ಕೃಷಿಯನ್ನು ಉತ್ತೇಜಿಸುವುದು, ಉತ್ಪಾದಕತೆಯನ್ನು ಹೆಚ್ಚಿಸುವುದು, ರೈತರ ಆದಾಯವನ್ನು ಹೆಚ್ಚಿಸುವುದು, ಜಲ ಸಂಪನ್ಮೂಲಗಳನ್ನು ಸಂರಕ್ಷಿಸುವುದು, ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸುವುದು ಮತ್ತು ಮಾರುಕಟ್ಟೆಗಳೊಂದಿಗೆ ರೈತರ ಸಂಪರ್ಕವನ್ನು ಬಲಪಡಿಸುವುದರ ಮೇಲೆ ಯೋಜನೆ ಗಮನ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದರು. ಈ ಉಪಕ್ರಮದ ಅಡಿಯಲ್ಲಿ, ಕೃಷಿ ಅಭಿವೃದ್ಧಿಯನ್ನು ಸ್ಥಳೀಯ ಅಗತ್ಯಗಳು ಮತ್ತು ಪರಿಸ್ಥಿತಿಗಳೊಂದಿಗೆ ಹೊಂದಿಸಲು ಸಾಧ್ಯವಾಗುವಂತೆ ಬ್ಲಾಕ್ ಮಟ್ಟದಲ್ಲಿ ಸ್ಥಳ/ಭೂ-ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ತಯಾರಿಸಲು ಪ್ರಯತ್ನಿಸಲಾಗಿದೆ.
ಅದೇ ಸಮಯದಲ್ಲಿ, ಗೋಧಿ, ಭತ್ತ ಮತ್ತು ಸೋಯಾಬೀನ್‌ನಂತಹ ಸಾಂಪ್ರದಾಯಿಕ ಬೆಳೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕಾಗಿದೆ ಮತ್ತು ಪರ್ಯಾಯ ಬೆಳೆಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಆಧಾರಿತ ಕೃಷಿ ವ್ಯವಸ್ಥೆಯ ಅಭಿವೃದ್ಧಿಗೆ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದೂ ಅವರು ಹೇಳಿದರು.
ರಾಯ್ ಸೇನಾ, ವಿದಿಶಾ, ಸೆಹೋರ್ ಮತ್ತು ದೇವಾಸ್‌ನಂತಹ ಜಿಲ್ಲೆಗಳಲ್ಲಿ, ನೀರಾವರಿಯ ಹೆಚ್ಚಿನ ಭಾಗವು ಅಂತರ್ಜಲವನ್ನು ಅವಲಂಬಿಸಿದೆ ಮತ್ತು ಹಲವಾರು ಪ್ರದೇಶಗಳಲ್ಲಿ, ಅಂತರ್ಜಲ ಮಟ್ಟವು ಗಂಬೀರ ನಿರ್ಣಾಯಕ ಮಟ್ಟವನ್ನು ತಲುಪಿದೆ ಎಂಬುದರತ್ತ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಗಮನಸೆಳೆದರು. ಇದರೊಂದಿಗೆ, ಮಣ್ಣಿನ ಆರೋಗ್ಯ ಕುಸಿಯುವುದು ಮತ್ತು ಮೌಲ್ಯವರ್ಧನೆಯ ಕೊರತೆಯು ಈ ಪ್ರದೇಶಗಳಲ್ಲಿನ ರೈತರಿಗೆ ಪ್ರಮುಖ ಸವಾಲುಗಳಾಗಿ ಪರಿಣಮಿಸಿವೆ ಎಂದವರು ನುಡಿದರು.
ಈ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು, ಗೋಧಿ ಕೃಷಿಯನ್ನು ಮೀರಿದ ಸಾಧ್ಯತೆಗಳನ್ನು ಅನ್ವೇಷಿಸಲು ಪ್ರಯತ್ನಗಳು ನಡೆದಿವೆ. ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಬೆಂಡೆಕಾಯಿ ಮತ್ತು ಕ್ಯಾಪ್ಸಿಕಂನಂತಹ ತರಕಾರಿಗಳ ಕೃಷಿಯಲ್ಲಿ ಗಮನಾರ್ಹ ಸಾಮರ್ಥ್ಯವಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇದರ ಜೊತೆಗೆ, ದಾಳಿಂಬೆಯಂತಹ ಹಣ್ಣುಗಳು ಈ ಪ್ರದೇಶದಲ್ಲಿ ಉತ್ತಮ ನಿರೀಕ್ಷೆಗಳನ್ನು ಹೊಂದಿವೆ. ರೈತರು ಲಾಭದಾಯಕತೆಯನ್ನು ಹೆಚ್ಚಿಸಲು ಡ್ರ್ಯಾಗನ್ ಹಣ್ಣು ಮತ್ತು ಆವಕಾಡೊದಂತಹ ಹೆಚ್ಚಿನ ಮೌಲ್ಯದ ಬೆಳೆಗಳನ್ನು ಸಹ ಅಳವಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಸರಿಯಾದ ವೈಜ್ಞಾನಿಕ ಯೋಜನೆಯನ್ನು ಕೈಗೊಂಡರೆ ಮತ್ತು ಸಂಪನ್ಮೂಲಗಳ ಸಮರ್ಥ ಬಳಕೆಯ ಜೊತೆಗೆ ಬೆಳೆ ವೈವಿಧ್ಯೀಕರಣವನ್ನು ಜಾರಿಗೆ ತಂದರೆ, ಈ ಜಿಲ್ಲೆಗಳಲ್ಲಿ ರೈತರ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸುವ ಸಾಧ್ಯತೆ ಬಲವಾಗಿದೆ ಎಂದು ಅವರು ಒತ್ತಿ ಹೇಳಿದರು.
ವೈಜ್ಞಾನಿಕ ಕೃಷಿಗಾಗಿ ಮಣ್ಣಿನ ಮೊಬೈಲ್ ಅಪ್ಲಿಕೇಶನ್ ಪ್ರಾರಂಭ
ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸಲಹೆ ನೀಡಿದರು ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸಾಮಾನ್ಯ ಮಾಹಿತಿ ಸಾಕಾಗುವುದಿಲ್ಲ ಎಂದು ಹೇಳಿದರು. ಬದಲಾಗಿ, ಪ್ರತಿಯೊಬ್ಬ ರೈತರು ತಮ್ಮ ಸ್ವಂತ ಹೊಲದಲ್ಲಿನ ಮಣ್ಣಿನ ಸ್ಥಿತಿಯ ಬಗ್ಗೆ ನಿಖರವಾದ ಜ್ಞಾನವನ್ನು ಹೊಂದಿರಬೇಕು ಎಂದರು.
ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ಸಾಮಾನ್ಯ ಮಣ್ಣಿನ ಸಂಬಂಧಿತ ಮಾಹಿತಿಯನ್ನು ಒದಗಿಸಲಾಗಿದ್ದರೂ, ರೈತರು ತಮ್ಮ ವೈಯಕ್ತಿಕ ಹೊಲಗಳಿಗೆ ಮಣ್ಣು ಪರೀಕ್ಷೆಯನ್ನು ನಡೆಸಿ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ಪಡೆದಾಗ ಮಾತ್ರ ನಿಜವಾದ ಪ್ರಯೋಜನಗಳನ್ನು ಸಾಧಿಸಬಹುದು ಎಂದು ಅವರು ವಿವರಿಸಿದರು. ನಿರ್ದಿಷ್ಟ ಬೆಳೆಗಳಿಗೆ ಯಾವ ಪೋಷಕಾಂಶಗಳು ಮತ್ತು ಯಾವ ಪ್ರಮಾಣದಲ್ಲಿ ಅಗತ್ಯವಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದರು.
ರೈತರಿಗೆ ಅನುಕೂಲವಾಗುವಂತೆ, ಕೃಷಿಯನ್ನು ಸುಲಭ ಮಾಡಲು ಮತ್ತು ಲಭ್ಯವಾಗುವಂತೆ ಮಾಡಲು ಹೊಸ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ರೈತರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ತಮ್ಮ ಹೊಲಗಳಲ್ಲಿ ನಿಂತಾಗ, ವಿವಿಧ ಬೆಳೆಗಳಿಗೆ ಅಗತ್ಯವಿರುವ ರಸಗೊಬ್ಬರಗಳು ಮತ್ತು ಪೋಷಕಾಂಶಗಳ ಸೂಕ್ತ ಪ್ರಮಾಣವನ್ನು ನಿರ್ಧರಿಸಬಹುದು ಎಂದರು.
ರಸಗೊಬ್ಬರಗಳ ವಿವೇಚನಾರಹಿತ ಮತ್ತು ಮಾಹಿತಿ ಕೊರತೆಯ ಬಳಕೆಯು ಹಾನಿಕಾರಕವಾಗಿದೆ ಎಂದು ಅವರು ಎಚ್ಚರಿಸಿದರು. ಇಂತಹ ಪದ್ಧತಿಗಳು ರೈತರಿಗೆ ಒಳಸುರಿ (ಇನ್‌ಪುಟ್) ವೆಚ್ಚವನ್ನು ಹೆಚ್ಚಿಸುವುದಲ್ಲದೆ, ಕಾಲಾನಂತರದಲ್ಲಿ ಮಣ್ಣಿನ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ವೈಜ್ಞಾನಿಕವಾಗಿ ನಿರ್ಧರಿಸಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸುವುದರಿಂದ ರೈತರಿಗೆ ಆರ್ಥಿಕ ನಷ್ಟ ಕಡಿಮೆಯಾಗುತ್ತದೆ ಮತ್ತು ಅದು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು.
ಈ ಉದ್ದೇಶಕ್ಕಾಗಿ, ಮಣ್ಣಿನ ಆರೋಗ್ಯ ಕಾರ್ಡ್‌ಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸಬೇಕಾದ ಮಹತ್ವವನ್ನು ಅವರು ಒತ್ತಿ ಹೇಳಿದರು.
ಪ್ರತಿ ಬ್ಲಾಕ್ನಲ್ಲಿಯೂ ಬೀಜ ಗ್ರಾಮಗಳನ್ನು ಅಭಿವೃದ್ಧಿ:
ಕೃಷಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಉತ್ತಮ ಗುಣಮಟ್ಟದ ಬೀಜಗಳು ಅತ್ಯಂತ ನಿರ್ಣಾಯಕ ಅಂಶವಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಮಾರ್ಗಸೂಚಿಯು ಸಾಂಪ್ರದಾಯಿಕ ಬೆಳೆಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಮಾತ್ರವಲ್ಲದೆ ಡ್ರ್ಯಾಗನ್ ಹಣ್ಣು, ಆವಕಾಡೊ ಮತ್ತು ಬ್ಲೂಬೆರ್ರಿಯಂತಹ ಉನ್ನತ-ಸಾಮರ್ಥ್ಯದ ಬೆಳೆಗಳನ್ನು ಸಹ ಒಳಗೊಂಡಿದೆ.
ಈ ಹೊಸ ಬೆಳೆಗಳ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ರೈತರಿಗೆ ತಿಳಿಸಲಾಗುವುದು ಮತ್ತು ಅಗತ್ಯ ತರಬೇತಿಯನ್ನು ಸಹ ನೀಡಲಾಗುವುದು ಎಂದು ಅವರು ಹೇಳಿದರು. ಈ ಉಪಕ್ರಮವು ಮೇಳದ ಅವಧಿಗೆ ಮಾತ್ರವೇ ಸೀಮಿತವಾಗಿರದೆ, ರೈತರು ಹೊಸ ತಂತ್ರಜ್ಞಾನಗಳು ಮತ್ತು ಬೆಳೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ನಿರಂತರ ಮಾರ್ಗದರ್ಶನ ಮತ್ತು ತರಬೇತಿ ಕಾರ್ಯಕ್ರಮಗಳ ರೂಪದಲ್ಲಿ ಮುಂದುವರಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರತಿಯೊಂದು ಬ್ಲಾಕ್‌ನಲ್ಲಿರುವ ಕೆಲವು ಹಳ್ಳಿಗಳನ್ನು 'ಬೀಜ ಗ್ರಾಮ'ಗಳಾಗಿ ಅಭಿವೃದ್ಧಿಪಡಿಸಬೇಕು, ಅಲ್ಲಿ ಸ್ಥಳೀಯವಾಗಿ ಉತ್ತಮ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ.ಸಿ.ಎ.ಆರ್.-ICAR) ಈ ಪ್ರಯತ್ನದಲ್ಲಿ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಮತ್ತು ತಳಿಗೆ ಅವಶ್ಯವಾದ ಮೂಲ ಬೀಜಗಳನ್ನು ಪೂರೈಸುತ್ತದೆ.
ಪ್ರತಿ ಬ್ಲಾಕ್‌ನಲ್ಲಿ ಸರಿಸುಮಾರು 10 ಹಳ್ಳಿಗಳನ್ನು ಬೀಜ ಗ್ರಾಮಗಳಾಗಿ ಅಭಿವೃದ್ಧಿಪಡಿಸಿದರೆ ಮತ್ತು ರೈತರಿಗೆ ಸ್ಥಳೀಯವಾಗಿ ಗುಣಮಟ್ಟದ ಬೀಜಗಳು ಲಭ್ಯವಾದರೆ, ಕೃಷಿ ಉತ್ಪಾದನೆಯು ಸುಮಾರು ಶೇಕಡಾ 20 ರಷ್ಟು ಹೆಚ್ಚಾಗಬಹುದು ಎಂದು ಅವರು ವಿವರಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಬೀಜ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಾಗುವುದು ಮತ್ತು ಭಾರತ ಸರ್ಕಾರ ಹಾಗು ಮಧ್ಯಪ್ರದೇಶ ಸರ್ಕಾರದ ಜಂಟಿ ಬೆಂಬಲದೊಂದಿಗೆ 'ಬೀಜಗಳು ಮತ್ತು ನಾಟಿ ಸಾಮಗ್ರಿಗಳ ಉಪ-ಮಿಷನ್' ಅಡಿಯಲ್ಲಿ ಆರ್ಥಿಕ ನೆರವು ನೀಡಲಾಗುವುದು ಎಂದು ಅವರು ಹೇಳಿದರು.
ರೈತರನ್ನು ಬೆಂಬಲಿಸಲು ಸ್ವಚ್ಛ ಸಸ್ಯ ಕೇಂದ್ರಗಳು ಮತ್ತು ಯಂತ್ರ ಬ್ಯಾಂಕುಗಳು
ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, ಕೇಂದ್ರ ಸರ್ಕಾರವು ರೈತರಿಗೆ ಉತ್ತಮ ಗುಣಮಟ್ಟದ, ರೋಗ-ಮುಕ್ತ ಸಸಿಗಳನ್ನು ಒದಗಿಸಲು 'ಸ್ವಚ್ಛ ಸಸ್ಯ ಕೇಂದ್ರ'ಗಳನ್ನು ಸ್ಥಾಪಿಸುತ್ತಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಅಂತಹ ಒಂದು ಕೇಂದ್ರವನ್ನು ಮಧ್ಯಪ್ರದೇಶದಲ್ಲಿಯೂ ಸ್ಥಾಪಿಸಬಹುದು ಎಂದರು.
ಇದರ ಜೊತೆಗೆ, ಕಳಪೆ ಗುಣಮಟ್ಟದ ಸಸಿಗಳಿಂದ ರೈತರು ಯಾವುದೇ ವಂಚನೆ ಅಥವಾ ನಷ್ಟವನ್ನು ಎದುರಿಸದಂತೆ ಪ್ರಮಾಣೀಕೃತ ಮತ್ತು ಪರೀಕ್ಷಿಸಿದ ಸಸ್ಯಗಳನ್ನು ಒದಗಿಸಲು ನರ್ಸರಿಗಳನ್ನು ಅಭಿವೃದ್ಧಿಪಡಿಸಲಾಗುವುದು.
ಕೃಷಿ ಯಂತ್ರೋಪಕರಣಗಳ ಲಭ್ಯತೆಯು ಒಂದು ಪ್ರಮುಖ ಸವಾಲಾಗಿದೆ ಎಂದು ಕೇಂದ್ರ ಸಚಿವರು ಎತ್ತಿ ತೋರಿಸಿದರು. ಪ್ರತಿಯೊಬ್ಬ ರೈತರು ದುಬಾರಿ ಯಂತ್ರಗಳನ್ನು ಖರೀದಿಸಲು ಆರ್ಥಿಕವಾಗಿ ಸಮರ್ಥರಲ್ಲ, ಇದು ಸಾಮಾನ್ಯವಾಗಿ ಸಕಾಲಿಕ ಕೃಷಿ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದವರು ಅಭಿಪ್ರಾಯಪಟ್ಟರು.
ಈ ಸಮಸ್ಯೆಯನ್ನು ಪರಿಹರಿಸಲು, ಅವರು 'ಯಂತ್ರ ಬ್ಯಾಂಕ್‌ಗಳು' ಮತ್ತು “ಕೃಷಿ ಸಲಕರಣೆಗಳನ್ನು ಬಾಡಿಗೆಗೆ ನೀಡುವ ಕೇಂದ್ರ'ಗಳ ಮಾದರಿಯನ್ನು ಉತ್ತೇಜಿಸಲು ಪ್ರಸ್ತಾಪಿಸಿದರು. ಪಂಜಾಬ್‌ನ ಉದಾಹರಣೆಯನ್ನು ಅವರು ಉಲ್ಲೇಖಿಸಿದರು, ಅಲ್ಲಿ ಪಂಚಾಯತ್ ಮಟ್ಟದಲ್ಲಿ ಯಂತ್ರ ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿದೆ, ಇದು ರೈತರಿಗೆ ಕೈಗೆಟುಕುವ ದರದಲ್ಲಿ ಉಪಕರಣಗಳನ್ನು ಬಾಡಿಗೆಗೆ ಪಡೆಯಲು ಅನುವು ಮಾಡಿಕೊಡುತ್ತದೆ.
ಮಧ್ಯಪ್ರದೇಶದಲ್ಲಿಯೂ ಪಂಚಾಯತ್ ಮಟ್ಟದಲ್ಲಿ ಯಂತ್ರ ಬ್ಯಾಂಕ್‌ಗಳನ್ನು ಸ್ಥಾಪಿಸಲು ಮತ್ತು ಪ್ರತಿ ಬ್ಲಾಕ್‌ನಲ್ಲಿ ಕನಿಷ್ಠ ಐದು ಕೃಷಿ ಸಲಕರಣೆಗಳನ್ನು ಬಾಡಿಗೆಗೆ ನೀಡುವ ಕೇಂದ್ರ' ಗಳನ್ನು ಸ್ಥಾಪಿಸಲು ಇದೇ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ಈ ದಿಕ್ಕಿನಲ್ಲಿ ಉಪಕ್ರಮವನ್ನು ಕೈಗೊಳ್ಳುವಂತೆ ಅವರು ಸರಪಂಚರುಗಳಿಗೆ ಮನವಿ ಮಾಡಿದರು ಮತ್ತು ಯಂತ್ರ ಬ್ಯಾಂಕ್‌ಗಳನ್ನು ಸ್ಥಾಪಿಸುವಲ್ಲಿ ಹಾಗು ರೈತರಿಗೆ ಯಂತ್ರೋಪಕರಣಗಳು ಕೈಗೆಟುಕುವ ದರದಲ್ಲಿ ಮತ್ತು ಸಕಾಲಿಕ ವಾಗಿ ಲಭಿಸುವಂತೆ ಖಚಿತಪಡಿಸಿಕೊಳ್ಳುವಲ್ಲಿ ಪಂಚಾಯತ್ ಸಂಸ್ಥೆಗಳು ನಿರ್ಣಾಯಕ ಪಾತ್ರ ವಹಿಸಬಹುದು ಎಂದೂ ಅವರು ಹೇಳಿದರು.
ಕೃಷಿ ಸಂಸ್ಥೆಗಳ ನಡುವಿನ ಸಮನ್ವಯದ ಮೂಲಕ ವ್ಯವಸ್ಥೆಗಳನ್ನು ಬಲಪಡಿಸುವುದು.
ಹಣ್ಣುಗಳು ಮತ್ತು ತರಕಾರಿಗಳ ಕೊಯ್ಲು ನಂತರದ ನಷ್ಟವನ್ನು ಕಡಿಮೆ ಮಾಡಲು ಕೋಲ್ಡ್ ಚೈನ್ ಮೂಲಸೌಕರ್ಯ ಮತ್ತು ಪ್ಯಾಕ್ ಹೌಸ್‌ಗಳನ್ನು ವಿಸ್ತರಿಸುವ ಅಗತ್ಯವನ್ನು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಒತ್ತಿ ಹೇಳಿದರು. ಬೇಗ ಹಾಳಾಗುವ/ ಕೊಳೆಯುವ ಉತ್ಪನ್ನಗಳು ಹೆಚ್ಚಾಗಿ ರೈತರಿಗೆ ನ್ಯಾಯಯುತ ಬೆಲೆಗಳನ್ನು ತರುವುದಿಲ್ಲ, ಇದು ಗಮನಾರ್ಹ ನಷ್ಟಗಳಿಗೆ ಕಾರಣವಾಗುತ್ತದೆ ಎಂಬುದರತ್ತ ಅವರು ಗಮನಸೆಳೆದರು.
ಈ ಸಮಸ್ಯೆಯನ್ನು ಪರಿಹರಿಸಲು, ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಕೇಂದ್ರ ಸರ್ಕಾರದ ಕೃಷಿ ಮೂಲಸೌಕರ್ಯ ಯೋಜನೆಗಳನ್ನು ಬಳಸಿಕೊಂಡು ಮಧ್ಯಪ್ರದೇಶದಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು, ಪ್ಯಾಕ್ ಹೌಸ್‌ಗಳು ಮತ್ತು ಕೋಲ್ಡ್ ಚೈನ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು. ಈ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.
ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‌ಪಿಒ) ಮಿಷನ್ ಮೋಡ್‌ನಲ್ಲಿ ಬಲಪಡಿಸಬೇಕು ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ವೈಯಕ್ತಿಕ ಕೃಷಿ ಹೆಚ್ಚಾಗಿ ಸವಾಲುಗಳನ್ನು ಸೃಷ್ಟಿಸುತ್ತದೆ, ಆದರೆ ಸಾಮೂಹಿಕ ಪ್ರಯತ್ನಗಳು ಉತ್ತಮ ಬೆಲೆಗಳು ಮತ್ತು ಸಂಪನ್ಮೂಲಗಳು ಮತ್ತು ಸೌಲಭ್ಯಗಳಿಗೆ ಸುಧಾರಿತ ಪ್ರವೇಶಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು.
ಮಾರುಕಟ್ಟೆ ಬೆಲೆಗಳು ಕುಸಿದಾಗ ರೈತರು ಆಗಾಗ್ಗೆ ನಷ್ಟವನ್ನು ಅನುಭವಿಸುತ್ತಾರೆ, ಆದರೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ಅಂತಹ ನಷ್ಟವನ್ನು ಕಡಿಮೆ ಮಾಡಬಹುದು ಎಂಬುದರತ್ತಲೂ ಅವರು ಗಮನಸೆಳೆದರು. ಐಸಿಎಆರ್ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳು ಟೊಮೆಟೊ ಸಾಸ್, ಪ್ಯೂರಿ ಮತ್ತು ಟೊಮೆಟೊ ಪುಡಿಯಂತಹ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಯನ್ನು ಸಕ್ರಿಯಗೊಳಿಸಬಹುದು, ಇದರಿಂದಾಗಿ ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳು ಸೃಷ್ಟಿಯಾಗುತ್ತವೆ.
ಭೋಪಾಲ್ ಮತ್ತು ಸುತ್ತಮುತ್ತಲಿನ ಐಸಿಎಆರ್ ಸಂಸ್ಥೆಗಳನ್ನು ಕೃಷಿ ಕಾಲೇಜುಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳೊಂದಿಗೆ (ಕೆವಿಕೆ) ಸಂಪರ್ಕಿಸುವ ಮೂಲಕ ಬಲವಾದ ಸಾಂಸ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು. ಇದು ವಿಜ್ಞಾನಿಗಳು ರೈತರೊಂದಿಗೆ ನೇರವಾಗಿ ಕೆಲಸ ಮಾಡುವುದನ್ನು ಮತ್ತು ನಿರಂತರ ಮಾರ್ಗದರ್ಶನವನ್ನು ಒದಗಿಸುವುದನ್ನು ಖಚಿತಪಡಿಸುತ್ತದೆ, ಆಧುನಿಕ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದವರು ಅಭಿಪ್ರಾಯಪಟ್ಟರು.
*****
(ಪ್ರಕಟಣೆ ಐ.ಡಿ.: 2251488)
ವಿಸಿಟರ್ ಕೌಂಟರ್ : 15