ಆಯುಷ್
azadi ka amrit mahotsav

ಜೈವಿಕ ರಸಾಯನಶಾಸ್ತ್ರ ಮತ್ತು ಹೆಮಟಾಲಜಿಯಲ್ಲಿ 'ಐಎಸ್ಒ 15189:2022’ ಮಾನ್ಯತೆಯನ್ನು ಸಾಧಿಸಿದ ಮೊದಲ 'ಸಿಸಿಆರ್ಎಎಸ್' ಸಂಸ್ಥೆಯಾಗಿ ಬೆಂಗಳೂರಿನ 'ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ’(ಸಿಎಆರ್‌ಐ) ಹೊರಹೊಮ್ಮಿದೆ


ವಾರ್ಷಿಕವಾಗಿ 1.5 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುವ ಮೂಲಕ 50 ನಿಯತಾಂಕಗಳಿಗೆ 'ಎನ್ಎಬಿಎಲ್' ಮಾನ್ಯತೆ ಪಡೆದ ಸಿಎಆರ್‌ಐ

ಜಾಗತಿಕ ಮಾನ್ಯತೆಯು ನಿಖರವಾದ ರೋಗನಿರ್ಣಯವನ್ನು ಖಾತ್ರಿಪಡಿಸುತ್ತದೆ ಜೊತೆಗೆ ಗುಣಮಟ್ಟದ ಆರೈಕೆಗೆ 'ಆಯುಷ್' ಅನ್ನು ಮಾನದಂಡವಾಗಿ ಇರಿಸುತ್ತದೆ: ಶ್ರೀ ಪ್ರತಾಪರಾವ್ ಜಾಧವ್

'ಐಎಸ್ಒ 15189:2022’ ಮಾನ್ಯತೆಯು ಆಯುಷ್‌ನಲ್ಲಿ ಸಾಕ್ಷ್ಯಾಧಾರಿತ ಅಭ್ಯಾಸ ಮತ್ತು ಸಂಶೋಧನೆಯನ್ನು ಬಲಪಡಿಸುತ್ತದೆ: ವೈದ್ಯ ರಾಜೇಶ್ ಕೊಟೆಚಾ

ಪ್ರಕಟಣಾ ದಿನಾಂಕ: 11 APR 2026 11:01AM by PIB Bengaluru

ಬೆಂಗಳೂರಿನ ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಯ (ಸಿಎಆರ್‌ಐ) ವೈದ್ಯಕೀಯ ಪ್ರಯೋಗಾಲಯಕ್ಕೆ ಜೀವರಸಾಯನಶಾಸ್ತ್ರ ಮತ್ತು 'ಹೆಮಟಾಲಜಿ’(ರಕ್ತ ಮತ್ತು ಮೂಳೆಮಜ್ಜೆ ಸಂಬಂಧಿತ ಶಾಸ್ತ್ರ) ಎರಡಕ್ಕೂ 'ಐಎಸ್ಒ 15189:2022’ ಮಾನ್ಯತೆಯನ್ನು ನೀಡಲಾಗಿದೆ. ಇದು ಆಯುಷ್ ಸಚಿವಾಲಯದ ಅಡಿಯಲ್ಲಿ ಗುಣಮಟ್ಟದ ಭರವಸೆಯ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಮಹತ್ವದ ಮೈಲುಗಲ್ಲಾಗಿದೆ.

ಈ ಮಾನ್ಯತೆಯು, ಜಾಗತಿಕವಾಗಿ ಅಂಗೀಕರಿಸಲಾದ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ  ಪ್ರಯೋಗಾಲಯವು ನಿಖರವಾದ, ವಿಶ್ವಾಸಾರ್ಹ ಮತ್ತು ಸುರಕ್ಷಿತ ರೋಗನಿರ್ಣಯದ ಫಲಿತಾಂಶಗಳನ್ನು ನೀಡುವುದನ್ನು ರೋಗಿಗಳಿಗೆ ಖಾತರಿಪಡಿಸುತ್ತದೆ. ಈ ಸಾಧನೆಯು ಈ ಪ್ರಯೋಗಾಲಯವನ್ನುಆರಂಭಿಕ ಮಟ್ಟದ 'ಎನ್ಎಬಿಎಲ್-ಪ್ರಮಾಣೀಕೃತ ಸೌಲಭ್ಯ'ದ ಹಂತದಿಂದ  ಸಂಪೂರ್ಣವಾಗಿ ಸುಸಜ್ಜಿ, ಮಾನ್ಯತೆ ಪಡೆದ ಉತ್ಕೃಷ್ಟತೆಯ ಕೇಂದ್ರವಾಗಿ ಬದಲಾಯಿಸಿದೆ.

ಆಯುಷ್ ಸಚಿವಾಲಯದ ಗೌರವಾನ್ವಿತ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಪ್ರತಾಪರಾವ್ ಜಾಧವ್ ಮಾತನಾಡಿ ಅವರು ಈ ಬಗ್ಗೆ ಮಾತನಾಡಿ, "ಐಎಸ್ಒ 15189:2022 ನಂತಹ ಅಂತರರಾಷ್ಟ್ರೀಯ ಮಾನದಂಡಗಳ ಮಾನ್ಯತೆಯು ರೋಗಿಗಳು ವಿಶ್ವಾಸಾರ್ಹ ಮತ್ತು ನಿಖರವಾದ ರೋಗನಿರ್ಣಯ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಇದು ಪರಿಣಾಮಕಾರಿ ಚಿಕಿತ್ಸೆ ಮತ್ತು ಸುಧಾರಿತ ಆರೋಗ್ಯ ಫಲಿತಾಂಶಗಳಿಗೆ ಅವಶ್ಯಕವಾಗಿದೆ. ಬೆಂಗಳೂರಿನ 'ಸಿಎಆರ್‌ಐ'ನ ಈ ಸಾಧನೆಯು ಸಚಿವಾಲಯವು ಆಯುಷ್ ಮೂಲಸೌಕರ್ಯವನ್ನು ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಮಾನದಂಡವಾಗಿ ಹೇಗೆ ಸ್ಥಿರವಾಗಿ ಪರಿವರ್ತಿಸುತ್ತಿದೆ ಎಂಬುದನ್ನು ತೋರಿಸುತ್ತದೆ.

ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಮಾತನಾಡಿ, "ಜೀವರಸಾಯನಶಾಸ್ತ್ರ ಮತ್ತು 'ಹೆಮಟಾಲಜಿ' ಎರಡರಲ್ಲೂ 'ಐಎಸ್ಒ 15189:2022’ ಮಾನ್ಯತೆಯನ್ನು ಹೊಂದಿರುವ ಮೊದಲ 'ಸಿಸಿಆರ್‌ಎಎಸ್' ಸಂಸ್ಥೆಯಾಗಿ ಬೆಂಗಳೂರಿನ 'ಸಿಎಆರ್‌ಐ'ಗೆ ಮಾನ್ಯತೆ ನೀಡಿರುವುದು ಉತ್ತಮ ಗುಣಮಟ್ಟದ ರೋಗನಿರ್ಣಯವನ್ನು ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳೊಂದಿಗೆ ಸಂಯೋಜಿಸುವಲ್ಲಿ ಒಂದು ಹೆಗ್ಗುರುತಿನ ಹೆಜ್ಜೆಯಾಗಿದೆ. ಇದು ಸಾಕ್ಷ್ಯಾಧಾರಿತ ಅಭ್ಯಾಸ, ಸಂಶೋಧನೆ ಮತ್ತು ರೋಗಿ-ಕೇಂದ್ರಿತ ಆರೈಕೆಯ ಮೇಲೆ ನಮ್ಮ ಗಮನವನ್ನು ಬಲಪಡಿಸುತ್ತದೆ,’’ ಎಂದು ಹೇಳಿದರು.

'ಸಿಸಿಆರ್‌ಎಎಸ್‌' ಮಹಾನಿರ್ದೇಶಕ ಪ್ರೊ. ರಬಿನಾರಾಯಣ ಆಚಾರ್ಯ ಮಾತನಾಡಿ, "ಬೆಂಗಳೂರಿನ 'ಸಿಎಆರ್‌ಐ'  ಈ ಮುನ್ನ ​​'ಎನ್ಎಬಿಎಚ್' ಮತ್ತು 'ಎನ್ಎಬಿಎಲ್ ಆರಂಭಿಕ ಮಟ್ಟದ'  ಪ್ರಮಾಣೀಕರಣಗಳನ್ನು ಹೊಂದಿತ್ತು. ಇವುಗಳ ಆಧಾರದ ಮೇಲೆ ಇತ್ತೀಚೆಗೆ 'ಎನ್ಎಬಿಎಲ್' ಮಾನ್ಯತೆ ಪಡೆದಿದೆ. ಜೊತೆಗೆ 'ಬಿಐಎಸ್‌ಐಎಸ್/ಐಎಸ್ಒ 9001:2015’ ಪ್ರಮಾಣಿಕರಣದ ನಿಟ್ಟಿನಲ್ಲಿ ಪ್ರಗತಿ ಸಾಧಿಸಿದೆ. ಇದು ಆಯುಷ್ ಸಚಿವಾಲಯದ ಅಡಿಯಲ್ಲಿ ಆಯುರ್ವೇದ ವಿಜ್ಞಾನ ಸಂಶೋಧನಾ ಕೇಂದ್ರವಾಗಿ ಸಂಸ್ಥೆಯ ಪಾತ್ರದ ಜೊತೆಗೆ, ಗುಣಮಟ್ಟದ ಮಾನದಂಡಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಆಯುರ್ವೇದ ಸಂಶೋಧನೆ ಮತ್ತು ನಾವೀನ್ಯತೆಯನ್ನು ವೈಜ್ಞಾನಿಕ  ಮತ್ತು ಉತ್ಕೃಷ್ಟ ಮಟ್ಟದಲ್ಲಿ ಇರಿಸುತ್ತದೆ.

ಬೆಂಗಳೂರಿನ 'ಸಿಎಆರ್‌ಐ'ನ ಮುಖ್ಯಸ್ಥ ಡಾ. ಸುಲೋಚನಾ ಭಟ್ ಮಾತನಾಡಿ, "ಐಎಸ್ಒ 15189:2022 ಮಾನ್ಯತೆಯನ್ನು ಸಾಧಿಸುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಮೈಲುಗಲ್ಲಾಗಿದೆ. ಇದು ಉತ್ತಮ-ಗುಣಮಟ್ಟದ, ವಿಶ್ವಾಸಾರ್ಹ ಮತ್ತು ರೋಗಿ-ಕೇಂದ್ರಿತ ರೋಗನಿರ್ಣಯ ಸೇವೆಗಳನ್ನು ತಲುಪಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಸಾಧನೆಯು ನಮ್ಮ ಚಿಕಿತ್ಸಾತ್ಮಕ ಸಾಮರ್ಥ್ಯಗಳನ್ನು ಬಲಪಡಿಸುವುದಲ್ಲದೆ, 'ಸಿಸಿಆರ್‌ಎಎಸ್‌' ಅಡಿಯಲ್ಲಿ ಪ್ರಮುಖ ಸಂಸ್ಥೆಯಾಗಿ ನಮ್ಮ ಪಾತ್ರವನ್ನು ಬಲಪಡಿಸುತ್ತದೆ. ಡಾ. ವಿದ್ಯಾಶ್ರೀ ಅಂಚನ್ (ಸಂಶೋಧನಾ ಅಧಿಕಾರಿ, ರೋಗಶಾಸ್ತ್ರ) ಮತ್ತು 'ಸಿಎಆರ್‌ಐ' ತಂಡದ ಪ್ರಾಮಾಣಿಕ ಪ್ರಯತ್ನದಿಂದಾಗಿ ಇದನ್ನು ಸಾಧಿಸಲು ಸಾಧ್ಯವಾಯಿತು,’’ ಎಂದು ಹೇಳಿದರು.

ಪ್ರಯೋಗಾಲಯವು ಪ್ರಸ್ತುತ ಜೀವರಸಾಯನಶಾಸ್ತ್ರ ಮತ್ತು ಹೆಮಟಾಲಜಿಯಲ್ಲಿ 50 ಪರೀಕ್ಷಾ ಮಾನದಂಡಗಳಿಗೆ 'ಎನ್ಎಬಿಎಲ್' ಮಾನ್ಯತೆಯನ್ನು ಹೊಂದಿದೆ. ಇದು ರಕ್ತದ ಗ್ಲೂಕೋಸ್, 'ಎಚ್‌ಬಿಎ1ಸಿ’, ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯನಿರ್ವಹಣೆ ಪರೀಕ್ಷೆಗಳು, ಲಿಪಿಡ್ ಮತ್ತು ಥೈರಾಯ್ಡ್ ಪ್ರೊಫೈಲ್‌ಗಳು, ಎಲೆಕ್ಟ್ರೋಲೈಟ್‌ಗಳು ಮತ್ತು ಸಂಪೂರ್ಣ ರಕ್ತ ಎಣಿಕೆಗಳು ಸೇರಿದಂತೆ ಸಮಗ್ರ ಶ್ರೇಣಿಯ ರೋಗನಿರ್ಣಯ ಸೇವೆಗಳನ್ನು ಒದಗಿಸುತ್ತದೆ - ಚಯಾಪಚಯ ಕ್ರಿಯೆ, ಹಾರ್ಮೋನುಗಳು ಮತ್ತು ರಕ್ತ ಸಂಬಂಧಿತ ಪರಿಸ್ಥಿತಿಗಳ ನಿಖರವಾದ ಮೌಲ್ಯಮಾಪನವನ್ನು ಸಾಧ್ಯವಾಗಿಸುತ್ತದೆ.

2025-26ರ ಅವಧಿಯಲ್ಲಿ, ಪ್ರಯೋಗಾಲಯವು 1.52 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದ್ದು, 9,300 ಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸಿದೆ. ಇದು ಹೆಚ್ಚುತ್ತಿರುವ ಸಂಸ್ಥೆಯ ಸಾಮರ್ಥ್ಯ ಮತ್ತು ಗುಣಮಟ್ಟದ ರೋಗನಿರ್ಣಯಕ್ಕೆ ಅದರ ಬದ್ಧತೆಯನ್ನು ಸೂಚಿಸುತ್ತದೆ. ಸುಧಾರಿತ ವ್ಯವಸ್ಥೆಗಳು ಮತ್ತು ಡಿಜಿಟಲ್ ವರದಿ ಪರಿಕರಗಳ ಮೂಲಕ ಶೀಘ್ರ ಫಲಿತಾಂಶ ನೀಡುವಿಕೆ, ಸುಧಾರಿತ ನಿಖರತೆ ಮತ್ತು 'ಎಸ್‌ಎಂಎಸ್’, ಇ-ಮೇಲ್ ಮತ್ತು ವಾಟ್ಸಾಪ್ ಮೂಲಕ ವರದಿಗಳನ್ನು ಪಡೆಯುವ ಅನುಕೂಲವನ್ನು ರೋಗಿಗಳು ಹೊಂದಿದ್ದಾರೆ.

ಕ್ಲಿನಿಕಲ್, ಸಂಶೋಧನೆ ಮತ್ತು ರೋಗನಿರ್ಣಯ ಸೇವೆಗಳಲ್ಲಿ ಸಂಸ್ಥೆಯ ಸ್ಥಿರ ಬೆಳವಣಿಗೆಯು ಈ ಸಾಧನೆಯನ್ನು ಮತ್ತಷ್ಟು ಒತ್ತಿಹೇಳುತ್ತದೆ. 2021ರಲ್ಲಿ 18,918 ಇದ್ದ 'ಒಪಿಡಿ' ರೋಗಿಗಳ ಸಂಖ್ಯೆಯು 2026 ರಲ್ಲಿ 51,300ಕ್ಕೆ ದ್ವಿಗುಣಗೊಂಡಿದೆ. ಇದು ಹೆಚ್ಚುತ್ತಿರುವ ಸಾರ್ವಜನಿಕ ನಂಬಿಕೆ ಮತ್ತು ವ್ಯಾಪ್ತಿಯನ್ನು ಸೂಚಿಸುತ್ತದೆ. ಪ್ರಯೋಗಾಲಯ ತನಿಖೆಗಳು ಗಮನಾರ್ಹ ಏರಿಕೆಗೆ ಸಾಕ್ಷಿಯಾಗಿವೆ - 2021ರಲ್ಲಿ ಕೇವಲ 2,770 ಪರೀಕ್ಷೆಗಳಿಂದ 2026 ರಲ್ಲಿ 1.55 ಲಕ್ಷಕ್ಕೆ ಏರಿಕೆಯಾಗಿದ್ದು, ವರ್ಧಿತ ರೋಗನಿರ್ಣಯ ಸಾಮರ್ಥ್ಯವನ್ನು ಉಲ್ಲೇಖಿಸುತ್ತದೆ. ಅಂತೆಯೇ, ಪಂಚಕರ್ಮ ಮತ್ತು ಅರೆ-ಶಸ್ತ್ರಚಿಕಿತ್ಸಾ ವಿಧಾನಗಳು ಈ ಅವಧಿಯಲ್ಲಿ ಸುಮಾರು ಇಪ್ಪತ್ತು ಪಟ್ಟು ವಿಸ್ತರಿಸಿವೆ. ಜೊತೆಗೆ ಸಂಸ್ಥೆಯ ಸಂಶೋಧನಾ ಚಟುವಟಿಕೆಗಳು ವಾರ್ಷಿಕವಾಗಿ ಸುಮಾರು 20-25 ಯೋಜನೆಗಳೊಂದಿಗೆ ಸ್ಥಿರವಾಗಿ ಮುಂದುವರಿದಿವೆ. ಜುಲೈ 2024ರಲ್ಲಿ ಒಳರೋಗಿ ಸೇವೆಗಳನ್ನು ಪರಿಚಯಿಸಿದಾಗಿನಿಂದ, ರೋಗಿಗಳ ದಾಖಲಾತಿಉ ಬಹುತೇಕ ಪೂರ್ಣ ಸಾಮರ್ಥ್ಯವನ್ನು ತಲುಪಿದೆ. ಇದು ಸಮಗ್ರ ಆರೈಕೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ತೋರಿಸುತ್ತದೆ. ಸಂಸ್ಥೆಯು ಔಷಧೀಯ ಸಸ್ಯಗಳ ಮೌಲ್ಯೀಕರಣದಲ್ಲಿ ತನ್ನ ಪಾತ್ರವನ್ನು ಬಲಪಡಿಸಿದೆ, ವರ್ಷಗಳಲ್ಲಿ ದೃಢೀಕರಣ ಪ್ರಯತ್ನಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ.

ಈ ಸಾಧನೆಯ ಪ್ರಯಾಣವು ನಿರಂತರ ಪ್ರಯತ್ನ ಮತ್ತು ಸಾಂಸ್ಥಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಒಂದೇ ಅರೆ-ಸ್ವಯಂಚಾಲಿತ ಜೈವಿಕ ರಸಾಯನಶಾಸ್ತ್ರ ವಿಶ್ಲೇಷಕದಿಂದ ಪ್ರಾರಂಭವಾದ ಪ್ರಯೋಗಾಲಯವನ್ನು ಆಯುಷ್ ಸಚಿವಾಲಯದ ಉತ್ಕೃಷ್ಟತಾ ಕೇಂದ್ರದ ಯೋಜನೆಯಡಿಯಲ್ಲಿ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಗಳೊಂದಿಗೆ ಹಂತಹಂತವಾಗಿ ನವೀಕರಿಸಲಾಗಿದೆ. ನವೆಂಬರ್ 2022ರಲ್ಲಿ ಅದರ ‘ಎನ್‌ಎಬಿಎಲ್‌’  ಪ್ರವೇಶ ಮಟ್ಟದ ಪ್ರಮಾಣೀಕರಣದ ನಂತರ, ಪ್ರಯೋಗಾಲಯವು ಕಠಿಣ ಗುಣಮಟ್ಟದ ಅನುಷ್ಠಾನ, ದಾಖಲಾತಿ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳ ಮೂಲಕ ಹೆಚ್ಚು ಕಠಿಣವಾದ ISO 15189:2022 ಮಾನದಂಡಗಳನ್ನು ಪೂರೈಸುತ್ತಿದೆ.

ಚಿಕಿತ್ಸಾತ್ಮಕ  ನಿರ್ಧಾರ ತೆಗೆದುಕೊಳ್ಳಲು, ರೋಗಿಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂಶೋಧನಾ ಫಲಿತಾಂಶಗಳನ್ನು ಬಲಪಡಿಸಲು ವಿಶ್ವಾಸಾರ್ಹ ರೋಗನಿರ್ಣಯ ದತ್ತಾಂಶವನ್ನು ಒದಗಿಸುತ್ತದೆ. ಆ ಮೂಲಕ  ಆಯುರ್ವೇದ ಮತ್ತು ಆಯುಷ್ ಆಧಾರಿತ ಚಿಕಿತ್ಸೆಗಳನ್ನು ಬೆಂಬಲಿಸುವಲ್ಲಿ ಪ್ರಯೋಗಾಲಯವು ನಿರ್ಣಾಯಕ ಪಾತ್ರ ವಹಿಸುತ್ತದೆ.

ಗಮನಾರ್ಹ ವಿಷಯವೆಂದರೆ, ಬೆಂಗಳೂರಿನ 'ಸಿಎಆರ್‌ಐ' ಈ ಹಿಂದೆ 2021-22ರ ಅವಧಿಯಲ್ಲಿ 'ಎನ್ಎಬಿಎಚ್' ಮತ್ತು 'ಎನ್ಎಬಿಎಲ್ ಪ್ರವೇಶ ಮಟ್ಟದ' ಪ್ರಮಾಣೀಕರಣಗಳನ್ನು ಪಡೆದ ಮೊದಲ 'ಸಿಸಿಆರ್‌ಎಎಸ್' ಸಂಸ್ಥೆಯಾಗಿದೆ. ಅಲ್ಲದೆ, 'ಬಿಐಎಸ್ ಐಎಸ್/ಐಎಸ್ಒ 9001:2015’ ಪ್ರಮಾಣೀಕರಣದತ್ತ ಪ್ರಗತಿ ಸಾಧಿಸುತ್ತಿದೆ. ಇದು ಗುಣಮಟ್ಟ, ನಿಖರತೆ ಮತ್ತು ಉತ್ಕೃಷ್ಟತೆಗೆ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಮುಂದೆ ನೋಡುವುದಾದರೆ, ಸಂಸ್ಥೆಯು ತನ್ನ ಮಾನ್ಯತೆ ಪಡೆದ ಪರೀಕ್ಷೆಗಳ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಸಾರ್ವಜನಿಕರಿಗೆ ಹೆಚ್ಚು ಸಮಗ್ರ, ಸುಲಭಲಭ್ಯ ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳನ್ನು ಒದಗಿಸಲು ರೋಗನಿರ್ಣಯ ಸಾಮರ್ಥ್ಯಗಳನ್ನು ಹೆಚ್ಚಿಸಲು ಯೋಜಿಸಿದೆ.

 

*****


(ಪ್ರಕಟಣೆ ಐ.ಡಿ.: 2251100) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी