ಕೃಷಿ ಸಚಿವಾಲಯ
ಏಪ್ರಿಲ್ 11ರಿಂದ13 ರವರೆಗೆ ರಾಯಸೇನ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ‘ಸುಧಾರಿತ ಕೃಷಿ ಮೇಳ’ಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ
ಮೇಳದ ಮೂಲಕ ಆಹಾರ ಭದ್ರತೆ, ರೈತರ ಆದಾಯ ಹೆಚ್ಚಳ ಮತ್ತು ಪೌಷ್ಟಿಕಾಂಶ ಭದ್ರತೆಯತ್ತ ಗಮನ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ಹೆಚ್ಚುವರಿ ಗೋಧಿ ಮತ್ತು ಅಕ್ಕಿ ದಾಸ್ತಾನು ಹೊಂದಿದೆ; ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳಲ್ಲಿ ಸ್ವಾವಲಂಬನೆ ಸಾಧಿಸುವ ಧ್ಯೇಯ ಹೊಂದಲಾಗಿದೆ: ಶ್ರೀ ಶಿವರಾಜ್ ಸಿಂಗ್
ಸಮಗ್ರ ಕೃಷಿ ಮಾದರಿಯು ಸಣ್ಣ ಭೂ ಹಿಡುವಳಿದಾರರ ಸವಾಲಿಗೆ ಪರಿಹಾರವನ್ನು ನೀಡುತ್ತದೆ: ಶ್ರೀ ಚೌಹಾಣ್
ಪ್ರಾದೇಶಿಕ ಸಮ್ಮೇಳನಗಳ ಮೂಲಕ ಮತ್ತು ಪ್ರಯೋಗಾಲಯದಿಂದ ಭೂಮಿಗೆ ವಿಧಾನದ ಮೂಲಕ ಸಂಶೋಧನೆಯು ಹೊಲಗಳಿಗೆ ತಲುಪಲಿದೆ: ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್
ರಾಷ್ಟ್ರೀಯ ಕೃಷಿ ಮೇಳದಲ್ಲಿ 20 ತಾಂತ್ರಿಕ ಅಧಿವೇಶನಗಳು ಮತ್ತು ನೇರ ಪ್ರದರ್ಶನಗಳು/ಪ್ರಾತ್ಯಕ್ಷಿಕೆಗಳು ನಡೆಯಲಿವೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ರಸಗೊಬ್ಬರ ಸಬ್ಸಿಡಿ, ರೈತ ಐಡಿ, ಬೆಳೆ ವಿಮೆ ಮತ್ತು ಹವಾಮಾನ ಸಂಬಂಧಿತ ಪರಿಹಾರ ಕ್ರಮಗಳನ್ನು ಪ್ರಮುಖವಾಗಿ ವಿವರಿಸಲಾಗುತ್ತದೆ: ಶ್ರೀ ಚೌಹಾಣ್
ಪ್ರಕಟಣಾ ದಿನಾಂಕ:
10 APR 2026 5:37PM by PIB Bengaluru
ದೇಶದ ಆಹಾರ ಭದ್ರತೆಯನ್ನು ಖಚಿತಪಡಿಸುವುದು, 1.4 ಶತಕೋಟಿಗೂ ಹೆಚ್ಚು ಜನಸಂಖ್ಯೆಯ ಪ್ರತಿಯೊಬ್ಬ ನಾಗರಿಕರಿಗೂ ಪೌಷ್ಟಿಕ ಆಹಾರವನ್ನು ಒದಗಿಸುವುದು ಮತ್ತು ಕೃಷಿಯ ಮೇಲೆ ಅವಲಂಬಿತವಾಗಿರುವ ಜನಸಂಖ್ಯೆಯ ಶೇಕಡಾ 46 ರಷ್ಟು ಜನರ ಆದಾಯವನ್ನು ನಿರಂತರವಾಗಿ ಹೆಚ್ಚಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ. ಈ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ, ಏಪ್ರಿಲ್ 11 ರಿಂದ 13 ರವರೆಗೆ ಮಧ್ಯಪ್ರದೇಶದ ರಾಯಸೇನ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ 'ಸುಧಾರಿತ ಕೃಷಿ ಮೇಳ'ವನ್ನು ಭಾರತದಲ್ಲಿ ಕೃಷಿಯ ಮುಖವನ್ನು ಪರಿವರ್ತಿಸುವ ಪ್ರಮುಖ ಹೆಜ್ಜೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಬಣ್ಣಿಸಿದ್ದಾರೆ.

ಭೋಪಾಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಆಹಾರ ಭದ್ರತೆಯನ್ನು ಖಚಿತಪಡಿಸುವುದು, ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಜನಸಂಖ್ಯೆಗೆ ಸಮತೋಲಿತ ಪೋಷಣೆಯನ್ನು ಒದಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಭಾರತದ 1.4 ಶತಕೋಟಿಗೂ ಹೆಚ್ಚಿನ ಜನಸಂಖ್ಯೆಯಲ್ಲಿ, ಸುಮಾರು 46% ಜನರು ಇನ್ನೂ ನೇರವಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಆದ್ದರಿಂದ, ರೈತರ ಜೀವನೋಪಾಯವನ್ನು ಸುರಕ್ಷಿತಗೊಳಿಸುವುದು ಮತ್ತು ಅವರ ಆದಾಯವನ್ನು ಹೆಚ್ಚಿಸುವುದು ಸರ್ಕಾರದ ಪ್ರಮುಖ ಕಾಳಜಿಯಾಗಿ ಉಳಿದಿದೆ.
ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಷ್ಟೇ ಗುರಿ ಸೀಮಿತವಾಗಿಲ್ಲ ಎಂದೂ ಶ್ರೀ ಶಿವರಾಜ್ ಚೌಹಾಣ್ ಸ್ಪಷ್ಟಪಡಿಸಿದರು. ಬದಲಾಗಿ, ಧಾನ್ಯಗಳ ಜೊತೆಗೆ ಹಣ್ಣುಗಳು, ತರಕಾರಿಗಳು, ಹಾಲು, ಒರಟು ಧಾನ್ಯಗಳು/ಸಿರಿ ಧಾನ್ಯಗಳು (ಶ್ರೀ ಅನ್ನಾ) ಮತ್ತು ದ್ವಿದಳ ಧಾನ್ಯಗಳ ಸಮರ್ಪಕ ಮತ್ತು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಲಾಗಿದೆ, ಇದರಿಂದ ಸರಿಯಾದ ಪೋಷಣೆಯನ್ನು ಖಚಿತಪಡಿಸಿಕೊಳ್ಳಬಹುದು. ಉತ್ಪಾದನೆಯನ್ನು ಹೆಚ್ಚಿಸುವುದು, ವೆಚ್ಚವನ್ನು ಕಡಿಮೆ ಮಾಡುವುದು, ರೈತರ ಆದಾಯವನ್ನು ಹೆಚ್ಚಿಸುವುದು, ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸುವುದು, ನೈಸರ್ಗಿಕ ಕೃಷಿಯನ್ನು ವಿಸ್ತರಿಸುವುದು ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸುವತ್ತ ಸರ್ಕಾರ ಏಕಕಾಲದಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಸಾಕಷ್ಟು ಪ್ರಮಾಣದಲ್ಲಿ ಗೋಧಿ ಮತ್ತು ಅಕ್ಕಿಯ ದಾಸ್ತಾನು; ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳಲ್ಲಿ ಸ್ವಾವಲಂಬನೆಯತ್ತ ಗಮನ
ಭಾರತವು ಪ್ರಸ್ತುತ ಸಾಕಷ್ಟು ಗೋಧಿ ಮತ್ತು ಅಕ್ಕಿಯ ದಾಸ್ತಾನು ಹೊಂದಿದೆ ಎಂದು ಕೇಂದ್ರ ಸಚಿವರು ಹೇಳಿದರು. ಆದಾಗ್ಯೂ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ವಿಷಯದಲ್ಲಿ, ದೇಶವು ಇನ್ನೂ ಆಮದಿನ ಮೇಲೆ ಅವಲಂಬಿತವಾಗಿದೆ. ದ್ವಿದಳ ಧಾನ್ಯಗಳ ಅತಿದೊಡ್ಡ ಉತ್ಪಾದಕ ಮತ್ತು ಬಳಕೆದಾರನಾಗಿದ್ದರೂ, ಭಾರತವು ಈ ವಲಯದಲ್ಲಿ ಇನ್ನೂ ಸಂಪೂರ್ಣ ಸ್ವಾವಲಂಬನೆಯನ್ನು ಸಾಧಿಸಿಲ್ಲ ಎಂಬುದರತ್ತ ಅವರು ಗಮನಸೆಳೆದರು. ಆದ್ದರಿಂದ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಕೃಷಿ ಪ್ರದೇಶ ವಿಸ್ತೀರ್ಣ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವತ್ತ ಈಗ ನೀತಿಯು ಗಮನ ಹರಿಸಿದೆ, ಇದರಿಂದಾಗಿ ಭಾರತವು ಈ ಬೆಳೆಗಳಲ್ಲಿಯೂ ಸ್ವಾವಲಂಬಿಯಾಗಬಹುದು ಎಂದವರು ಹೇಳಿದರು.
ಸಣ್ಣ ಹಿಡುವಳಿದಾರರ ಸವಾಲು; ಪರಿಹಾರವಾಗಿ ಸಮಗ್ರ ಕೃಷಿ
ಭಾರತದಲ್ಲಿ ಕೃಷಿ ಭೂ ಹಿಡುವಳಿಯ ಸರಾಸರಿ ಗಾತ್ರವು ಸುಮಾರು 0.96 ಹೆಕ್ಟೇರ್‌ಗಳಿಗೆ ಇಳಿದಿದೆ ಎಂಬುದನ್ನು ಶ್ರೀ ಚೌಹಾಣ್ ಉಲ್ಲೇಖಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ಆಸ್ಟ್ರೇಲಿಯಾ, ಕೆನಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರೆಜಿಲ್‌ನಂತಹ ದೇಶಗಳು 10,000 ರಿಂದ 15,000 ಹೆಕ್ಟೇರ್‌ಗಳವರೆಗಿನ ಕೃಷಿ ಗಾತ್ರಗಳನ್ನು ಹೊಂದಿವೆ. ಕೃಷಿಯನ್ನು ಲಾಭದಾಯಕವಾಗಿಸುವುದು ಮತ್ತು ಅಂತಹ ಸಣ್ಣ ಹಿಡುವಳಿಗಳಲ್ಲಿ ಆದಾಯವನ್ನು ಹೆಚ್ಚಿಸುವುದು ಒಂದು ಪ್ರಮುಖ ಸವಾಲಾಗಿದೆ ಎಂದೂ ಅವರು ಹೇಳಿದರು.

ಹಿಂದೆ ಸಹಕಾರಿ ಕೃಷಿ ಪ್ರಯೋಗಗಳು ನಿರೀಕ್ಷಿತ/ಅಪೇಕ್ಷಿತ ಯಶಸ್ಸನ್ನು ನೀಡಲಿಲ್ಲ ಎಂಬುದನ್ನು ನೆನಪಿಸಿಕೊಂಡ ಅವರು, ಸಚಿವಾಲಯವು ಈಗ ಸಮಗ್ರ ಕೃಷಿ ವ್ಯವಸ್ಥೆಗಳತ್ತ ಗಮನ ಹರಿಸುತ್ತಿದೆ ಎಂದು ಹೇಳಿದರು. ಒಂದು ಹೆಕ್ಟೇರ್ ಕೃಷಿ ಕ್ಷೇತ್ರ/ಜಮೀನುಗಳಿಗೆ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ, ಅಲ್ಲಿ ರೈತರು ಒಂದೇ ಭೂಮಿಯಲ್ಲಿ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಸುವುದು, ಜಾನುವಾರು ಸಾಕಣೆ, ಜೇನು ಸಾಕಣೆ, ಮೀನುಗಾರಿಕೆ ಮತ್ತು ಕೃಷಿ ಅರಣ್ಯೀಕರಣ ಸೇರಿದಂತೆ ಬಹು ಚಟುವಟಿಕೆಗಳನ್ನು ಕೈಗೊಳ್ಳಬಹುದು ಎಂದು ಅವರು ವಿವರಿಸಿದರು.
ಧಾನ್ಯ ಉತ್ಪಾದನೆಯ ಮೇಲೆ ಮಾತ್ರ ಅವಲಂಬಿತವಾಗುವುದರಿಂದ ಆದಾಯದ ಸಾಮರ್ಥ್ಯ ಸೀಮಿತವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಆದ್ದರಿಂದ, ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ಹೆಚ್ಚಿಸಲು ಬಹು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಸಂಯೋಜಿಸುವುದು ಪ್ರಮುಖವಾಗಿದೆ.
ಪ್ರಾದೇಶಿಕ ಸಮ್ಮೇಳನಗಳು ಮತ್ತು 'ಪ್ರಯೋಗಾಲಯದಿಂದ ಕೃಷಿ ಭೂಮಿಗೆ' ವಿಧಾನ
ಈ ಹಿಂದಿನ, ಒಂದು ಅಥವಾ ಎರಡು ರಾಷ್ಟ್ರೀಯ ಮಟ್ಟದ ಸಭೆಗಳು ವೈವಿಧ್ಯಮಯ ಕೃಷಿ ಸವಾಲುಗಳನ್ನು ಪರಿಹರಿಸಲು ಸಮರ್ಥವಾಗಲಿಲ್ಲ ಎಂಬುದರತ್ತ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಗಮನ ಸೆಳೆದರು. ಆದ್ದರಿಂದ, ದೇಶವನ್ನು ಈಗ ಐದು ವಲಯಗಳಾಗಿ ವಿಂಗಡಿಸಲಾಗಿದೆ ಮತ್ತು ವಲಯ/ಪ್ರಾದೇಶಿಕ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ. ಮೊದಲ ಪ್ರಾದೇಶಿಕ ಸಮ್ಮೇಳನವನ್ನು ಈಗಾಗಲೇ ಜೈಪುರದಲ್ಲಿ ನಡೆಸಲಾಗಿದ್ದು, ಎರಡನೆಯದು 24 ರಂದು ಲಕ್ನೋದಲ್ಲಿ ನಡೆಯಲಿದೆ. ಈಶಾನ್ಯ ಮತ್ತು ಬೆಟ್ಟದ ರಾಜ್ಯಗಳಿಗೂ ಪ್ರತ್ಯೇಕ ಸಮ್ಮೇಳನಗಳನ್ನು ಯೋಜಿಸಲಾಗಿದೆ.
ಪ್ರತಿಯೊಂದು ಪ್ರದೇಶವು ವಿಭಿನ್ನ ಕೃಷಿ-ಹವಾಮಾನ ಪರಿಸ್ಥಿತಿಗಳನ್ನು ಹೊಂದಿದ್ದು, ಅದಕ್ಕೆ ಅನುಗುಣವಾಗಿ ಬೆಳೆಗಳು, ಪ್ರಭೇದಗಳು ಮತ್ತು ಕೃಷಿ ವಿಧಾನಗಳನ್ನು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ರೂಪಿಸಿಕೊಳ್ಳಬೇಕು ಎಂದು ಅವರು ವಿವರಿಸಿದರು.
ಭಾರತವು ಸಾವಿರಾರು ಕೃಷಿ ವಿಜ್ಞಾನಿಗಳನ್ನು ಹೊಂದಿದ್ದು, ಅವರ ಸಂಶೋಧನೆಯು ಉತ್ಪಾದನೆಯನ್ನು ಹೆಚ್ಚಿಸಲು ಕೊಡುಗೆ ನೀಡಿದೆ, ಆದರೆ ಈ ಸಂಶೋಧನೆಯು ಹೆಚ್ಚಾಗಿ ಪ್ರಯೋಗಾಲಯಗಳಿಗೆ ಸೀಮಿತವಾಗಿರುತ್ತದೆ ಮತ್ತು ರೈತರನ್ನು ತಲುಪುವುದಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು. ಆದ್ದರಿಂದ, ಸರ್ಕಾರವು ಸಂಶೋಧನೆಯನ್ನು 'ಪ್ರಯೋಗಾಲಯದಿಂದ ಕೃಷಿ ಭೂಮಿಗೆ' ಕೊಂಡೊಯ್ಯುವ ನೀತಿಯನ್ನು ಅಳವಡಿಸಿಕೊಂಡಿದೆ, ಇದರಿಂದಾಗಿ ಕೃಷಿ ಕ್ಷೇತ್ರ ಮಟ್ಟದಲ್ಲಿ ನಾವೀನ್ಯತೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ ಎಂದವರು ಹೇಳಿದರು.
ಈ ವಿಧಾನಕ್ಕೆ ಅನುಗುಣವಾಗಿ, ಕಳೆದ ವರ್ಷ ಪ್ರಾರಂಭಿಸಲಾದ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ವನ್ನು ಈಗ ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಹವಾಮಾನ ಪರಿಸ್ಥಿತಿಗಳು ಮತ್ತು ಬೆಳೆ ಚಕ್ರಗಳ ಆಧಾರದ ಮೇಲೆ ಸೂಕ್ತ ಸಮಯದಲ್ಲಿ ನಡೆಸಲಾಗುವುದು. ಈ ಉಪಕ್ರಮದಡಿಯಲ್ಲಿ, ವಿಜ್ಞಾನಿಗಳು ಮತ್ತು ಕೃಷಿ ತಜ್ಞರ ತಂಡಗಳು ರೈತರನ್ನು ಭೇಟಿ ಮಾಡಿ ಪ್ರಾಯೋಗಿಕ ತರಬೇತಿಯನ್ನು ನೀಡುತ್ತವೆ.
ಏಪ್ರಿಲ್ 11ರಿಂದ 13ರವರೆಗೆ ರಾಯ್ ಸೇನಾದಲ್ಲಿ ರಾಷ್ಟ್ರೀಯ 'ಸುಧಾರಿತ ಕೃಷಿ ಉತ್ಸವ'
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಏಪ್ರಿಲ್ 11, 12 ಮತ್ತು 13 ರಂದು ಮಧ್ಯಪ್ರದೇಶದ ರಾಯ ಸೇನಾದಲ್ಲಿ ರಾಷ್ಟ್ರೀಯ ಮಟ್ಟದ 'ಸುಧಾರಿತ ಕೃಷಿ ಉತ್ಸವ - ಕಿಸಾನ್ ಮೇಳ'ವನ್ನು ಆಯೋಜಿಸಲಿದೆ ಎಂದು ಶ್ರೀ ಚೌಹಾಣ್ ಮಾಹಿತಿ ನೀಡಿದರು. ಇದು ಕೇವಲ ಒಂದು ಜಾತ್ರೆ/ಉತ್ಸವವಲ್ಲ, ಆಧುನಿಕ ಕೃಷಿ ಪದ್ಧತಿಗಳನ್ನು ಕಲಿಸುವ ಗುರಿಯನ್ನು ಹೊಂದಿರುವ ತರಬೇತಿ ಶಿಬಿರ ಎಂದು ಅವರು ಒತ್ತಿ ಹೇಳಿದರು. ಈ ಕಾರ್ಯಕ್ರಮವನ್ನು ವಿಧ್ಯುಕ್ತ ಚಟುವಟಿಕೆಗಿಂತ ಗಂಭೀರ ಉಪಕ್ರಮವಾಗಿ ಆಯೋಜಿಸಲಾಗುತ್ತಿದೆ ಎಂದೂ ಅವರು ಹೇಳಿದರು.

ಈ ಮೇಳವನ್ನು ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಉದ್ಘಾಟಿಸಲಿದ್ದು, ಏಪ್ರಿಲ್ 13 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಮಹಾನಿರ್ದೇಶಕರು, ಕಾರ್ಯದರ್ಶಿ ಸೇರಿದಂತೆ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ದೇಶಾದ್ಯಂತದ ಪ್ರಮುಖ ಕೃಷಿ ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
20 ತಾಂತ್ರಿಕ ಅಧಿವೇಶನಗಳು, ನಾಲ್ಕು ಸಭಾಂಗಣಗಳು ಮತ್ತು ನೇರ ಪ್ರದರ್ಶನಗಳು
ಮೇಳದ ಸಮಯದಲ್ಲಿ ನಾಲ್ಕು ಸೆಮಿನಾರ್ ಸಭಾಂಗಣಗಳಲ್ಲಿ ಒಟ್ಟು 20 ವಿಷಯಾಧಾರಿತ ತಾಂತ್ರಿಕ ಅಧಿವೇಶನಗಳನ್ನು ಆಯೋಜಿಸಲಾಗುವುದು. ಈ ಅವಧಿಗಳು ಸುಗ್ಗಿಯ/ಕೊಯಿಲಿನ ನಂತರದ ನಿರ್ವಹಣೆ, ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನಗಳ ಬಳಕೆ, ಯಾಂತ್ರೀಕರಣದ ಮೂಲಕ ಆದಾಯ ವರ್ಧನೆ, ದ್ವಿದಳ ಧಾನ್ಯಗಳ ಅಡಿಯಲ್ಲಿ ಉತ್ಪಾದಕತೆ ಮತ್ತು ವಿಸ್ತೀರ್ಣವನ್ನು ಹೆಚ್ಚಿಸುವುದು, ತೋಟಗಾರಿಕೆ ಮತ್ತು ಹೆಚ್ಚಿನ ಮೌಲ್ಯದ ಬೆಳೆಗಳಲ್ಲಿನ ಅವಕಾಶಗಳು, ಸಮಗ್ರ ಕೃಷಿ ವ್ಯವಸ್ಥೆಗಳು ಮತ್ತು ನೈಸರ್ಗಿಕ ಹಾಗು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಸಂಯೋಜಿಸುವ/ ಒಮ್ಮುಖಗೊಳಿಸುವ ಪ್ರಮುಖ ವಿಷಯಗಳನ್ನು ಒಳಗೊಂಡಿರುತ್ತವೆ.
ಪ್ರತಿ ಅಧಿವೇಶನದಲ್ಲಿ ಕೃಷಿ ವಿಜ್ಞಾನಿಗಳು, ತಜ್ಞರು, ಪ್ರಗತಿಪರ ರೈತರು ಮತ್ತು ಅಧಿಕಾರಿಗಳು ಸೇರಿದಂತೆ ನಾಲ್ವರು ತಜ್ಞರು ಭಾಗವಹಿಸಲಿದ್ದಾರೆ. ಅವರು ಪ್ರಸ್ತುತಿಗಳನ್ನು ಮಂಡಿಸುತ್ತಾರೆ, ನಂತರ ರೈತರು ಪ್ರಶ್ನೆಗಳನ್ನು ಕೇಳಬಹುದಾದ ಸಂವಾದಾತ್ಮಕ ಚರ್ಚೆಗಳು ನಡೆಯುತ್ತವೆ.
ಈ ಅಧಿವೇಶನಗಳು ಏಕಮುಖ ಉಪನ್ಯಾಸಗಳಲ್ಲ, ಬದಲಾಗಿ ರೈತರು ಸೂಕ್ಷ್ಮ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ತಮ್ಮ ಕ್ಷೇತ್ರಗಳಲ್ಲಿ ಕಾರ್ಯಗತಗೊಳಿಸಲು ಅನುವು ಮಾಡಿಕೊಡುವ ಗುರಿಯನ್ನು ಹೊಂದಿರುವ ಸಂವಾದಾತ್ಮಕ ತರಬೇತಿ ಕಾರ್ಯಕ್ರಮಗಳಾಗಿವೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಒತ್ತಿ ಹೇಳಿದರು.
ಸೈದ್ಧಾಂತಿಕ ಕಲಿಕೆಗೆ ಪೂರಕವಾಗಿ, ವಿವಿಧ ತಂತ್ರಜ್ಞಾನಗಳು ಮತ್ತು ಅಭ್ಯಾಸ/ಪದ್ಧತಿಗಳ ಕುರಿತು ನೇರ ಪ್ರದರ್ಶನಗಳನ್ನು ನಡೆಸಲಾಗುವುದು. ರೀಪರ್‌ಗಳು, ಪವರ್ ವೀಡರ್‌ಗಳು, ಸ್ಪ್ರೇಯರ್‌ಗಳು, ಸೀಡರ್‌ಗಳು, ಬೇಲರ್‌ಗಳು, ರೋಟವೇಟರ್‌ಗಳು ಮತ್ತು ಕೃಷಿ ಡ್ರೋನ್‌ಗಳಂತಹ ಕೃಷಿ ಯಂತ್ರೋಪಕರಣಗಳನ್ನು ಪ್ರದರ್ಶಿಸಲಾಗುವುದು. ಫರ್ಟಿಗೇಷನ್ (ಗೊಬ್ಬರ ನೀಡಿಕೆ), ಆಟೊಮೇಷನ್, ಸೌರ ಪಂಪಿಂಗ್ ಮತ್ತು ಸಂಯೋಜಿತ ನೀರಾವರಿ ವ್ಯವಸ್ಥೆಗಳು ಸೇರಿದಂತೆ ಸೂಕ್ಷ್ಮ ನೀರಾವರಿ ಮತ್ತು ನಿಖರ ಕೃಷಿಯ ಕುರಿತು ಪ್ರದರ್ಶನಗಳನ್ನು ಸಹ ನಡೆಸಲಾಗುತ್ತದೆ.
ತೋಟಗಾರಿಕೆಯಲ್ಲಿ, ಪ್ರಾಯೋಗಿಕ ಪ್ರದರ್ಶನಗಳಲ್ಲಿ ಪಾಲಿಹೌಸ್‌ಗಳು, ಹಸಿರುಮನೆಗಳು, ಮೊಬೈಲ್ ಕೋಲ್ಡ್ ಸ್ಟೋರೇಜ್ ಘಟಕಗಳು, ನರ್ಸರಿಗಳು, ಜೇನುಸಾಕಣೆ ಮತ್ತು ಕಸಿ ತಂತ್ರಗಳು ಸೇರಿವೆ. ಒಂದು ಹೆಕ್ಟೇರ್ ಭೂಮಿಯಲ್ಲಿ ಸಮಗ್ರ ಕೃಷಿಯ ಸಾಧ್ಯತೆಗಳನ್ನು ಪ್ರದರ್ಶಿಸಲು ಜಾನುವಾರು ಮತ್ತು ಮೀನುಗಾರಿಕೆಗಾಗಿ ನೇರ ಮಾದರಿಗಳನ್ನು ಸಹ ಪ್ರಸ್ತುತಪಡಿಸಲಾಗುತ್ತದೆ.
ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಪ್ರಕ್ರಿಯೆಗಳಾದ ಬೀಜ ಸಂಸ್ಕರಣೆ ಮತ್ತು ಜೀವಾಮೃತ ಹಾಗು ಬೀಜಾಮೃತದಂತಹ ಸಾವಯವ ಸೂತ್ರೀಕರಣಗಳನ್ನು ಸಹ ನೇರ ಪ್ರದರ್ಶನ ಮಾಡಲಾಗುತ್ತದೆ.
ಮಧ್ಯಪ್ರದೇಶದಲ್ಲಿ 'ರೈತ ಕಲ್ಯಾಣ ವರ್ಷ' ಮತ್ತು ಜಿಲ್ಲಾ ಮಟ್ಟದ ಕೃಷಿ ಮಾರ್ಗಸೂಚಿಗಳು
ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ಪ್ರಸಕ್ತ ವರ್ಷವನ್ನು 'ರೈತ ಕಲ್ಯಾಣ ವರ್ಷ' ಎಂದು ಘೋಷಿಸಿದ್ದಾರೆ ಎಂದು ಶ್ರೀ ಚೌಹಾಣ್ ಹೇಳಿದರು. ಮೇಳದ/ಉತ್ಸವದ ಸಮಯದಲ್ಲಿ, ರಾಜ್ಯದ ಸಚಿವರು ಮತ್ತು ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮಾಹಿತಿಯನ್ನು ಒದಗಿಸಲು ವಿವಿಧ ಅಧಿವೇಶನಗಳಲ್ಲಿ ಭಾಗವಹಿಸುತ್ತಾರೆ, ಇದರಿಂದಾಗಿ ರೈತರು ಅವುಗಳಿಂದ ಹೇಗೆ ಪ್ರಯೋಜನ ಪಡೆಯಬೇಕೆಂದು ಅರ್ಥಮಾಡಿಕೊಳ್ಳುತ್ತಾರೆ.
ಕೃಷಿಯು ರಾಜ್ಯ ವಿಷಯವಾಗಿದ್ದು, ಕೇಂದ್ರ ಸರ್ಕಾರವು ಬೆಂಬಲ ನೀಡುವ ಪಾತ್ರವನ್ನು ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಪ್ರತಿ ರಾಜ್ಯದ ಹವಾಮಾನ, ಮಣ್ಣು ಮತ್ತು ಸಂಪನ್ಮೂಲಗಳಿಗೆ ಅನುಗುಣವಾಗಿ ಕೃಷಿ ಮಾರ್ಗಸೂಚಿಗಳನ್ನು ತಯಾರಿಸಲು ಕೇಂದ್ರವು ನಿರ್ಧರಿಸಿದೆ. ಒಂದು ರಾಜ್ಯದೊಳಗೆ ಕೂಡಾ ಪರಿಸ್ಥಿತಿಗಳು ಬದಲಾಗುತ್ತಿರುತ್ತವೆ ಮತ್ತು ಆದ್ದರಿಂದ, ಕೃಷಿ-ಹವಾಮಾನ ಬೆಟ್ಟು ಮಾಡಿದರು. .
ರಾಯ್ ಸೇನ್ ಮೇಳದ ಸಮಯದಲ್ಲಿ, ಸೆಹೋರ್, ವಿದಿಶಾ, ರಾಯ್ ಸೇನ್ ಮತ್ತು ದೇವಾಸ್ ಜಿಲ್ಲೆಗಳಿಗೆ ವಿಜ್ಞಾನಿಗಳು ಸಿದ್ಧಪಡಿಸಿದ ವಿಶೇಷ ಕೃಷಿ ಮಾರ್ಗಸೂಚಿಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಇವು ಮಣ್ಣಿನ ಪ್ರಕಾರ, ತಾಪಮಾನ, ಮಳೆ ಮತ್ತು ನೀರಿನ ಲಭ್ಯತೆಯಂತಹ ಅಂಶಗಳ ಆಧಾರದ ಮೇಲೆ ಸೂಕ್ತವಾದ ಬೆಳೆಗಳು, ಪ್ರಭೇದಗಳು ಮತ್ತು ತೋಟಗಾರಿಕಾ ಆಯ್ಕೆಗಳನ್ನು ಸೂಚಿಸುತ್ತವೆ.
ಸಂಜೆ ವೇಳೆ, ಸಾಂಪ್ರದಾಯಿಕ ಪ್ರದರ್ಶನಗಳು ಮತ್ತು ಬೀದಿ ನಾಟಕಗಳಂತಹ ಜಾನಪದ ಮಾಧ್ಯಮಗಳ ಮೂಲಕ ರೈತರಿಗೆ ತರಬೇತಿ ನೀಡಲಾಗುವುದು.
ನೈಸರ್ಗಿಕ ಕೃಷಿಯ ವಿಸ್ತರಣೆ: ಗುರಿಗಳು ಮತ್ತು ಪ್ರಗತಿ
ನೈಸರ್ಗಿಕ ಕೃಷಿಯ ಕುರಿತು, ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಈ ವರ್ಷ ಒಂದು ಕೋಟಿ ರೈತರನ್ನು ಸಂವೇದನಾಶೀಲರನ್ನಾಗಿ ಮಾಡುವ ಮತ್ತು ಕನಿಷ್ಠ 18 ಲಕ್ಷ ರೈತರನ್ನು ನೈಸರ್ಗಿಕ ಕೃಷಿಯಡಿಗೆ ತರುವ ಗುರಿಯನ್ನು ಸಚಿವಾಲಯ ಹೊಂದಿದೆ ಎಂದು ಹೇಳಿದರು. ಈಗಾಗಲೇ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ, ಸುಮಾರು 8 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಸುಮಾರು 18 ಲಕ್ಷ ರೈತರು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ ಎಂಬುದರತ್ತ ಅವರು ಬೆಟ್ಟು ಮಾಡಿದರು.
ನೈಸರ್ಗಿಕ ಕೃಷಿ ವಿಧಾನಗಳನ್ನು ಸರಿಯಾಗಿ ಜಾರಿಗೆ ತಂದರೆ, ಉತ್ಪಾದನೆಗೆ ಧಕ್ಕೆಯಾಗದಂತೆ ಒಳಸುರಿ (ಇನ್ಪುಟ್) ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ವೈಜ್ಞಾನಿಕ ಅಧ್ಯಯನಗಳು ಸೂಚಿಸುತ್ತವೆ ಎಂದು ಅವರು ಹೇಳಿದರು. ಇದು ರಸಗೊಬ್ಬರ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದರು.
ರಸಗೊಬ್ಬರ ಸಬ್ಸಿಡಿ ಮತ್ತು ರೈತ ಗುರುತಿನ ಚೀಟಿ ವ್ಯವಸ್ಥೆ
ರಸಗೊಬ್ಬರ ಲಭ್ಯತೆಯ ಬಗ್ಗೆ ಮಾತನಾಡಿದ ಶ್ರೀ ಚೌಹಾಣ್, ಜಾಗತಿಕವಾಗಿ ಕಚ್ಚಾ ವಸ್ತುಗಳ ಬೆಲೆಗಳು ಏರುತ್ತಿದ್ದರೂ, ಸರ್ಕಾರವು ಯೂರಿಯಾದ ಬೆಲೆಯನ್ನು ಪ್ರತಿ ಚೀಲಕ್ಕೆ ₹266 ಮತ್ತು ರೈತರಿಗೆ ಡಿ.ಎ.ಪಿ.(DAP -ಡೈಅಮೋನಿಯಂ ಫಾಸ್ಫೇಟ್) ಅನ್ನು ಪ್ರತಿ ಚೀಲಕ್ಕೆ ₹1,350 ರ ಮಟ್ಟದಲ್ಲಿ ಇರಿಸಲು ನಿರ್ಧರಿಸಿದೆ ಎಂದು ಹೇಳಿದರು. ಇದನ್ನು ಬೆಂಬಲಿಸಲು, ಹೆಚ್ಚಿನ ವೆಚ್ಚದ ಹೊರೆಯನ್ನು ಸರ್ಕಾರವು ಭರಿಸುತ್ತದೆ ಮತ್ತು ರೈತರಿಗೆ ವರ್ಗಾಯಿಸಬಾರದೆಂದು ಇತ್ತೀಚೆಗೆ ಸಚಿವ ಸಂಪುಟವು ₹41,000 ಕೋಟಿ ಹೆಚ್ಚುವರಿ ಹಂಚಿಕೆಯನ್ನು ಅನುಮೋದಿಸಿದೆ ಎಂದವರು ಹೇಳಿದರು.
ಸಬ್ಸಿಡಿ ರಸಗೊಬ್ಬರಗಳನ್ನು ಕೆಲವೊಮ್ಮೆ ಕೃಷಿಯೇತರ ಬಳಕೆಗಳಿಗೆ ತಿರುಗಿಸಲಾಗುತ್ತದೆ ಎಂಬುದನ್ನು ಅವರು ಒಪ್ಪಿಕೊಂಡರು. ಈ ಸಮಸ್ಯೆಯನ್ನು ಪರಿಹರಿಸಲು, ರೈತ ಗುರುತಿನ ಚೀಟಿ ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಇದು ಪ್ರತಿಯೊಬ್ಬ ರೈತನ ಭೂಮಿ, ಬೆಳೆಗಳು ಮತ್ತು ಕುಟುಂಬದ ಡೇಟಾವನ್ನು ಏಕೀಕೃತ ಗುರುತಿನ ವ್ಯವಸ್ಥೆಗೆ ಸಂಪರ್ಕಿಸುತ್ತದೆ. ಇದರ ಆಧಾರದ ಮೇಲೆ, ಪ್ರತಿ ರೈತನಿಗೆ ಅಗತ್ಯವಿರುವ ಪ್ರಮಾಣದ ರಸಗೊಬ್ಬರವನ್ನು ನಿರ್ಧರಿಸಲಾಗುತ್ತದೆ, ಸಂಗ್ರಹಣೆ, ಬೇರೆಡೆಗೆ ರವಾನೆ, ಮತ್ತು ಕಾಳ ಸಂತೆ ಮಾರುಕಟ್ಟೆಯನ್ನು ತಡೆದು ಸಾಕಷ್ಟು ಪೂರೈಕೆಯನ್ನು ಖಚಿತಪಡಿಸುತ್ತದೆ ಎಂದೂ ಸಚಿವರು ಹೇಳಿದರು.
9.29 ಕೋಟಿಗೂ ಹೆಚ್ಚು ರೈತ ಗುರುತಿನ ಚೀಟಿಗಳನ್ನು ಈಗಾಗಲೇ ರಚಿಸಲಾಗಿದ್ದು, ಇದನ್ನು ಸುಮಾರು 13 ಕೋಟಿ ರೈತರಿಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ ಎಂದವರು ತಿಳಿಸಿದರು. ಪಾಲು ಬೆಳೆ ಪದ್ಧತಿ ಪ್ರಚಲಿತದಲ್ಲಿರುವ ರಾಜ್ಯಗಳಲ್ಲಿ, ಮಧ್ಯಪ್ರದೇಶ ಮತ್ತು ಹರಿಯಾಣದಲ್ಲಿ ಜಾರಿಗೆ ತರಲಾದ ಮಾದರಿಗಳು ಭೂಮಾಲೀಕರ ಲಿಖಿತ ಒಪ್ಪಿಗೆಯ ಆಧಾರದ ಮೇಲೆ ಬಾಡಿಗೆದಾರರು ರಸಗೊಬ್ಬರಗಳನ್ನು ಪಡೆಯಲು ಅವಕಾಶ ಮಾಡಿಕೊಡುತ್ತವೆ. ರಾಷ್ಟ್ರವ್ಯಾಪಿ ಅನುಷ್ಠಾನಕ್ಕಾಗಿ ಈ ಮಾದರಿಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದರು.
ಹವಾಮಾನ ಸಂಬಂಧಿತ ಬೆಳೆ ಹಾನಿ ಮತ್ತು ಪಾರದರ್ಶಕ ಸಮೀಕ್ಷೆಗಳು
ಅಕಾಲಿಕ ಹವಾಮಾನ ವೈಪರೀತ್ಯ ಮತ್ತು ಆಲಿಕಲ್ಲು ಮಳೆಯಿಂದ ಉಂಟಾಗುವ ಬೆಳೆ ಹಾನಿಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶ್ರೀ ಚೌಹಾಣ್, ಎಲ್ಲಾ ರಾಜ್ಯ ಸರ್ಕಾರಗಳು ನಷ್ಟವನ್ನು ತ್ವರಿತವಾಗಿ ನಿರ್ಣಯಿಸಲು ನಿರ್ದೇಶಿಸಲಾಗಿದೆ ಎಂದು ಹೇಳಿದರು. ಬೆಳೆ ಕಟಾವನ್ನು ವೈಜ್ಞಾನಿಕವಾಗಿ ಮತ್ತು ಸಮಯಕ್ಕೆ ಸರಿಯಾಗಿ ನಡೆಸಬೇಕು ಮತ್ತು ಕಂದಾಯ, ಕೃಷಿ ಹಾಗು ಗ್ರಾಮೀಣಾಭಿವೃದ್ಧಿ ಇಲಾಖೆಗಳಿಂದ ಜಂಟಿ ಸಮೀಕ್ಷೆಗಳನ್ನು ನಡೆಸಬೇಕು ಎಂದು ಅವರು ಸೂಚನೆ ನೀಡಿದರು.
ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರೈತರು ಆಕ್ಷೇಪಣೆಗಳನ್ನು ಎತ್ತಲು ಅಥವಾ ತಿದ್ದುಪಡಿಗಳನ್ನು ಮಾಡಲು ಅವಕಾಶ ನೀಡಲು ಬಾಧಿತ ರೈತರ ಪಟ್ಟಿಯನ್ನು ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಪ್ರದರ್ಶಿಸಲಾಗುವುದು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ, ಆದರೆ ಹವಾಮಾನ ವೈಪರೀತ್ಯಗಳ ವಿಕಸನದ ಸ್ವರೂಪದಿಂದಾಗಿ, ಅಂತಿಮ ನಷ್ಟದ ಅಂದಾಜುಗಳನ್ನು ಇನ್ನೂ ಸಂಗ್ರಹಿಸಲಾಗುತ್ತಿದೆ ಎಂಬುದರತ್ತ ಅವರು ಗಮನ ಸೆಳೆದರು. ರೈತರಿಗೆ ಸಾಧ್ಯವಿರುವ ಎಲ್ಲಾ ಪರಿಹಾರ ಪಡೆಯುತ್ತಾರೆ ಮತ್ತು ಅವರು ವಿಮಾ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಅವರು ಭರವಸೆ ನೀಡಿದರು.
ಜಾಗತಿಕ ಪರಿಸ್ಥಿತಿ, ರಫ್ತು ಮತ್ತು ರೈತರ ರಕ್ಷಣೆ
ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳು ಸೇರಿದಂತೆ ಜಾಗತಿಕ ಬಿಕ್ಕಟ್ಟುಗಳು ಕೃಷಿ ರಫ್ತು ಮತ್ತು ರಸಗೊಬ್ಬರ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿರುವ ಕುರಿತು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಿಯಮಿತವಾಗಿ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಅಂತಾರಾಷ್ಟ್ರೀಯ ಪರಿಸ್ಥಿತಿಗಳು ರಫ್ತಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಒಪ್ಪಿಕೊಂಡರೂ, ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಗಳನ್ನು ಖಚಿತಪಡಿಸುವುದು, ರಸಗೊಬ್ಬರ ಲಭ್ಯತೆಯನ್ನು ಕಾಯ್ದುಕೊಳ್ಳುವುದು ಮತ್ತು ರೈತರ ಮೇಲಿನ ಜಾಗತಿಕ ಅಡೆತಡೆಗಳ ಹೊರೆಯನ್ನು ಕಡಿಮೆ ಮಾಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಪುನರುಚ್ಚರಿಸಿದರು.
‘ಲಖ್ಪತಿ ದೀದಿ’ ಉಪಕ್ರಮ ಮತ್ತು ಮಹಿಳಾ ಸಬಲೀಕರಣ
ಸುಮಾರು 3 ಕೋಟಿ ಮಹಿಳೆಯರು ಈಗಾಗಲೇ ‘ಲಖ್ಪತಿ ದೀದಿ’ಗಳಾಗಿದ್ದಾರೆ ಎಂದು ಶ್ರೀ ಚೌಹಾಣ್ ಹೇಳಿದರು. ಈ ಸಂಖ್ಯೆಯನ್ನು 6 ಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದವರು ತಿಳಿಸಿದರು. ಈ ಸ್ಥಿತಿಯು ಒಂದು ಬಾರಿಯ ಆದಾಯ ಹೆಚ್ಚಳಕ್ಕೆ ಸೀಮಿತವಾಗಿಲ್ಲ, ಬದಲು ಕನಿಷ್ಠ ಆರು ತಿಂಗಳ ಕಾಲ ನಿರಂತರ ಹೆಚ್ಚಿನ ಆದಾಯ ಮಟ್ಟವನ್ನು ಹೊಂದಿರಬೇಕು, ಅದನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.
ಮಹಿಳಾ ಮೀಸಲಾತಿಯ ಕುರಿತು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆ/ಶಾಸಕಾಂಗ ಸಭೆಗಳಲ್ಲಿ 33% ಮೀಸಲಾತಿ ಒದಗಿಸಲು ನಾರಿ ಶಕ್ತಿ ವಂದನ ಕಾಯ್ದೆಯಡಿಯಲ್ಲಿ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. 2029 ರ ಚುನಾವಣೆಯ ವೇಳೆಗೆ ಈ ನಿಬಂಧನೆಯನ್ನು ಅಗತ್ಯ ಶಾಸಕಾಂಗ ಪ್ರಕ್ರಿಯೆಗಳ ಮೂಲಕ ಜಾರಿಗೆ ತರುವುದು ಗುರಿಯಾಗಿದೆ ಎಂದೂ ಅವರು ಹೇಳಿದರು.

ವಿರೋಧಕ್ಕೆ ಪ್ರತಿಕ್ರಿಯೆ ಮತ್ತು ರೈತರಿಗೆ ಮನವಿ
ವಿರೋಧ ಪಕ್ಷದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಶ್ರೀ ಚೌಹಾಣ್, ರೈತರ ಕಲ್ಯಾಣಕ್ಕಾಗಿ ಸಕಾರಾತ್ಮಕವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಸ್ವಾಗತಾರ್ಹ ಎಂದು ಹೇಳಿದರು. ಆದಾಗ್ಯೂ, ಗಂಭೀರ ಕೃಷಿ ವಿಷಯಗಳ ಕುರಿತು ರಾಜಕೀಯ ಉದ್ದೇಶಗಳಿಗಾಗಿ ಅನಗತ್ಯ ಅಡಚಣೆಗಳನ್ನು ಸೃಷ್ಟಿಸುವುದರ ವಿರುದ್ಧ ಅವರು ಎಚ್ಚರಿಕೆ ನೀಡಿದರು. ಪ್ರತಿಭಟನೆ ಮಾಡುವ ಪ್ರಜಾಸತ್ತಾತ್ಮಕ ಹಕ್ಕನ್ನು ಒಪ್ಪಿಕೊಂಡರೂ, ಪೂರ್ವ ಸೂಚನೆ ಇಲ್ಲದೆ ಹಠಾತ್ ಪ್ರತಿಭಟನಾ ಪ್ರದರ್ಶನಗಳು, ವಿಶೇಷವಾಗಿ ಟ್ರ್ಯಾಕ್ಟರ್ ಮೆರವಣಿಗೆಗಳು ಆರೋಗ್ಯಕರ ಅಭ್ಯಾಸವಲ್ಲ ಎಂದು ಅವರು ಹೇಳಿದರು. ಸರ್ಕಾರವು ಸಂವಾದದಲ್ಲಿ ನಂಬಿಕೆ ಇಡುತ್ತದೆ ಮತ್ತು ರೈತರ ಹಿತದೃಷ್ಟಿಯಿಂದ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಿದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
'ಸುಧಾರಿತ ಕೃಷಿ ಮೇಳ/ಉತ್ಸವ'ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು, ತಜ್ಞರೊಂದಿಗೆ ಸಂವಹನ ನಡೆಸಲು, ಹೊಸ ತಂತ್ರಗಳನ್ನು ಕಲಿಯಲು ಮತ್ತು ತಮ್ಮ ಕೃಷಿ ಕ್ಷೇತ್ರಗಳಲ್ಲಿ ಸಮಗ್ರ ಕೃಷಿ ಮತ್ತು ನೈಸರ್ಗಿಕ ಕೃಷಿಯಂತಹ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಕೇಂದ್ರ ಸಚಿವರು ಮನವಿ ಮಾಡಿದರು. ಕೃಷಿಯಲ್ಲಿ ಅರ್ಥಪೂರ್ಣ ಪರಿವರ್ತನೆ ತರುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು ಮತ್ತು ಈ ಉತ್ಸವವನ್ನು ಆ ದಿಕ್ಕಿನಲ್ಲಿ ಗಂಭೀರ ಮತ್ತು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದರು.
ಉತ್ಸವದಲ್ಲಿ ಪ್ರದರ್ಶನ ಮತ್ತು ತರಬೇತಿ ಅವಧಿಗಳ ವಿವರವಾದ ವೇಳಾಪಟ್ಟಿ
ಏಪ್ರಿಲ್ 11 1ನೇ ದಿನ):
ಮಧ್ಯಾಹ್ನ 2:00 ರಿಂದ 3:30 ರವರೆಗೆ, ವಿವಿಧ ಸಭಾಂಗಣಗಳಲ್ಲಿ ಸಮಾನಾಂತರ ತಾಂತ್ರಿಕ ಅವಧಿಗಳು ನಡೆಯಲಿವೆ. ಸಭಾಂಗಣ 1 “ಆಧುನಿಕ ಕೃಷಿ -ಕೃಷಿ ಮೂಲಸೌಕರ್ಯ ನಿಧಿಯ ಬಳಕೆಯ ಮೂಲಕ ಕೊಯಿಲು/ಸುಗ್ಗಿಯ ನಂತರದ ನಿರ್ವಹಣೆ “ ಕುರಿತು ಅಧಿವೇಶನವನ್ನು ಆಯೋಜಿಸುತ್ತದೆ. ಸಭಾಂಗಣ 2 "ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳು" ಕುರಿತು ಚರ್ಚಿಸುತ್ತದೆ. ಸಭಾಂಗಣ 3 "ಜೇನು ಸಾಕಣೆಯ ಮೂಲಕ ಕೃಷಿ ಆದಾಯವನ್ನು ಹೆಚ್ಚಿಸುವುದು" ಕುರಿತು ಕೇಂದ್ರೀಕರಿಸುತ್ತದೆ, ಮುಖ್ಯ ಸಭಾಂಗಣವು "ಯಾಂತ್ರೀಕರಣದ ಮೂಲಕ ಕೃಷಿಯಲ್ಲಿ ಪ್ರಗತಿ" ಕುರಿತು ಅಧಿವೇಶನವನ್ನು ಆಯೋಜಿಸುತ್ತದೆ.
ಮಧ್ಯಾಹ್ನ 3:45 ರಿಂದ ಸಂಜೆ 5:15 ರವರೆಗೆ, ಅಧಿವೇಶನಗಳು "ಉತ್ಪಾದಕತೆ ಮತ್ತು ದ್ವಿದಳ ಧಾನ್ಯಗಳ ವಿಸ್ತೀರ್ಣವನ್ನು ಹೆಚ್ಚಿಸುವುದು" (ಸಭಾಂಗಣ 1), "ನೈಸರ್ಗಿಕ ಕೃಷಿ" (ಸಭಾಂಗಣ 2), "ಎಣ್ಣೆಬೀಜಗಳ ಉತ್ಪಾದಕತೆ ಮತ್ತು ವಿಸ್ತೀರ್ಣವನ್ನು ಹೆಚ್ಚಿಸುವುದು" (ಸಭಾಂಗಣ 3), ಮತ್ತು "ತ್ಯಾಜ್ಯ/ಕೊಳೆ ನಿರ್ವಹಣೆ: ತ್ಯಾಜ್ಯದಿಂದ ಸಂಪತ್ತಿಗೆ" (ಮುಖ್ಯ ಸಭಾಂಗಣ) ಬೀದಿ ನಾಟಕದ ಮೂಲಕ ಜಾಗೃತಿಯನ್ನು ಒಳಗೊಂಡಿರುತ್ತವೆ.
ಏಪ್ರಿಲ್ 12 (2ನೇ ದಿನ ):
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:30 ರವರೆಗೆ, ಅಧಿವೇಶನಗಳಲ್ಲಿ “ಎಫ್.ಪಿ.ಒ. ಸಭೆ” (ಸಭಾಂಗಣ 1), “ಹಸಿರು ಮತ್ತು ಸುರಕ್ಷಿತ ಕೃಷಿಗಾಗಿ ಮಣ್ಣಿನ ಆರೋಗ್ಯ” (ಸಭಾಂಗಣ 2), “ತೋಟಗಾರಿಕಾ ಬೆಳೆಗಳ ಸಂರಕ್ಷಿತ ಕೃಷಿ” (ಸಭಾಂಗಣ 3), ಮತ್ತು “ಬೆಳೆ ವಿಮಾ ಜಾಗೃತಿ ಕಾರ್ಯಾಗಾರ” (ಮುಖ್ಯ ಸಭಾಂಗಣ) ಸೇರಿವೆ.
ಮಧ್ಯಾಹ್ನ 1:00 ರಿಂದ ಮಧ್ಯಾಹ್ನ 2:00 ರವರೆಗೆ, ಕೃಷಿ ಮಾರ್ಗಸೂಚಿಯ ಕುರಿತು ವಿಶೇಷ ಕಾರ್ಯಕ್ರಮವನ್ನು ಕೇಂದ್ರ ಮತ್ತು ರಾಜ್ಯ ಸಚಿವರ ಸಮ್ಮುಖದಲ್ಲಿ ಮುಖ್ಯ ಸಭಾಂಗಣದಲ್ಲಿ ನಡೆಸಲಾಗುವುದು.
ಮಧ್ಯಾಹ್ನ 2:30 ರಿಂದ ಸಂಜೆ 4:00 ರವರೆಗೆ, ಅಧಿವೇಶನಗಳಲ್ಲಿ “ಸಮಗ್ರ ಕೃಷಿ ವ್ಯವಸ್ಥೆಗಳು” (ಸಭಾಂಗಣ 1), “ಸಮಗ್ರ ಪೋಷಕಾಂಶ ನಿರ್ವಹಣೆ” (ಸಭಾಂಗಣ 2), “ಹೂವು ಕೃಷಿ ಮತ್ತು ತರಕಾರಿ ಕೃಷಿ” (ಸಭಾಂಗಣ 3), ಮತ್ತು “ಸಮಗ್ರ ಕೀಟ ನಿರ್ವಹಣೆ ಹಾಗು ಜೈವಿಕ-ಕೀಟನಾಶಕಗಳ ಬಳಕೆ” (ಮುಖ್ಯ ಸಭಾಂಗಣ) ಸೇರಿವೆ.
ಸಂಜೆ 4:15 ರಿಂದ 5:45 ರವರೆಗೆ, ಅಧಿವೇಶನಗಳಲ್ಲಿ "ನರ್ಸರಿ ನಿರ್ವಹಣೆ ಮತ್ತು ಕಸಿ ತಂತ್ರಗಳು" (ಸಭಾಂಗಣ 1), "ಸೂಕ್ಷ್ಮ ನೀರಾವರಿ ಮತ್ತು ಗೊಬ್ಬರ" (ಸಭಾಂಗಣ 2), "ಹೈಡ್ರೋಪೋನಿಕ್ಸ್, ನಿಖರತೆ ಮತ್ತು ಲಂಬ ಕೃಷಿ" (ಸಭಾಂಗಣ 3), ಹಾಗು "ಕೀಟನಾಶಕಗಳ ಗುಣಮಟ್ಟ ಮತ್ತು ಸುರಕ್ಷಿತ ಬಳಕೆ" (ಮುಖ್ಯ ಸಭಾಂಗಣ) ಸೇರಿದಂತೆ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್ 13 ( 3ನೇ ದಿನ):
ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ, "ಕೆವಿಕೆ ಸಭೆ" (ಸಭಾಂಗಣ 1), "ಭತ್ತದಲ್ಲಿ ಸ್ವಾವಲಂಬನೆಗಾಗಿ ಬೀಜ ವ್ಯವಸ್ಥೆಗಳು" (ಸಭಾಂಗಣ 2), "ಮೀನುಗಾರಿಕೆ ಮತ್ತು ಮುತ್ತು ಸಾಕಣೆ" (ಸಭಾಂಗಣ 3), ಹಾಗು "ಕೃಷಿ ಸಾಲ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್" (ಮುಖ್ಯ ಸಭಾಂಗಣ) ಅಧಿವೇಶನಗಳು ನಡೆಯಲಿವೆ.
ಮಧ್ಯಾಹ್ನ 12:15 ರಿಂದ ಮಧ್ಯಾಹ್ನ 1:45 ರವರೆಗೆ, "ಹೈನುಗಾರಿಕೆ ಅಭಿವೃದ್ಧಿ ಮತ್ತು ಪಶುಸಂಗೋಪನೆ" (ಸಭಾಂಗಣ 1), "ಭತ್ತದ ನೇರ ಬಿತ್ತನೆ" (ಸಭಾಂಗಣ 2), "ಆದಾಯ ವರ್ಧನೆಗಾಗಿ ಕೋಳಿ ಮತ್ತು ಮೇಕೆ ಸಾಕಣೆ" (ಸಭಾಂಗಣ 3), ಮತ್ತು ಮುಖ್ಯ ಸಭಾಂಗಣದಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಲಿವೆ.
ಮಧ್ಯಾಹ್ನ 3:00 ರಿಂದ ಸಂಜೆ 5:00 ರವರೆಗೆ, ಸಮಾರೋಪ ಅಧಿವೇಶನವು ಮುಖ್ಯ ಸಭಾಂಗಣದಲ್ಲಿ ನಡೆಯಲಿದೆ, ಇಡೀ ಮೇಳ/ಉತ್ಸವದ ಅವಲೋಕನ, ಪ್ರಮುಖ ಫಲಿತಾಂಶಗಳನ್ನು ಪ್ರಸ್ತುತಪಡಿಸುವುದು ಮತ್ತು ಭವಿಷ್ಯದ ಕ್ರಮವನ್ನು ಚರ್ಚಿಸುವುದು.
*****
(ಪ್ರಕಟಣೆ ಐ.ಡಿ.: 2251020)
ವಿಸಿಟರ್ ಕೌಂಟರ್ : 8